Search
  • Follow NativePlanet
Share
» »ಸರ್ವ ವಿಘ್ನಗಳನ್ನು ನಿವಾರಿಸುವ ನಿಮಿಷಾಂಬಾ!

ಸರ್ವ ವಿಘ್ನಗಳನ್ನು ನಿವಾರಿಸುವ ನಿಮಿಷಾಂಬಾ!

ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿರುವ ಗಂಜಾಂ ಕ್ಷೇತ್ರದಲ್ಲಿ ಕಾವೇರಿ ನದಿಯ ತಟದಲ್ಲಿ ನೆಲೆಸಿರುವ ನಿಮಿಷಾಂಬ ದೇವಾಲಯವು ಸಾಕಷ್ಟು ಪ್ರಸಿದ್ಧಿಪಡೆದಿದೆ

By Vijay

ಮೈಸೂರಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅದರಲ್ಲೂ ವಿಶೇಷವಾಗಿ ಕೌಟುಂಬಿಕವಾಗಿ ಕೈಗೊಳ್ಳಬಹುದಾದ ಹಲವಾರು ಧಾರ್ಮಿಕ ಕ್ಷೇತ್ರಗಳು ಮೈಸೂರಿನ ಆಸು ಪಾಸಿನಲ್ಲೆ ಇರುವುದರಿಂದ ಮೈಸೂರಿಗೆ ಭೇಟಿ ನೀಡುವವರು ಒಂದು ಅದ್ಭುತವಾದ ಪ್ರವಾಸವನ್ನೆ ಮಾಡಬಲ್ಲರು.

ಪ್ರಸ್ತುತ ಲೇಖನದಲ್ಲಿ ಮೈಸೂರಿಗೆ ಬಲು ಹತ್ತಿರದಲ್ಲಿರುವ ಒಂದು ಜಗನ್ಮಾತೆಯ ಪರಮ ಪಾವನ ಕ್ಷೇತ್ರದ ಕುರಿತು ತಿಳಿಸಲಾಗಿದೆ. ಶಕ್ತಿ ದೇವಿ ಎಂದೆ ಕರೆಯಲಾಗುವ ಪಾರ್ವತಿ ದೇವಿಯ ಸಾಕ್ಷಾತ್ ಅವತಾರವೆ ಈ ಕ್ಷೇತ್ರದಲ್ಲಿ ನೆಲೆಸಿರುವ ದೇವಿ. ಅಷ್ಟೆ ಅಲ್ಲ, ಈ ದೇವಿ ಬಲು ಜಾಗೃತ ಹಾಗೂ ಶಕ್ತಿಶಾಲಿ ಎಂದೂ ಸಹ ಭಕ್ತರಿಂದ ಕೊಂಡಾಡಲಾಗುತ್ತದೆ.

ಕೆಲವರು ಹೇಳುವ ಪ್ರಕಾರ, ಯಾರು ಈ ದೇವಿಯ ನೆಲೆಯಲ್ಲಿ ನಿಂತು ದೇವಿಯನ್ನು ಮನದಲ್ಲಿ ಅತಿ ಶೃದ್ಧೆ ಹಾಗೂ ಭಕ್ತಿಗಳಿಂದ ಪ್ರಾರ್ಥಿಸುತ್ತಾರೊ ಅವರಿಗೆ ನಿಮಿಷ ಮಾತ್ರದಲ್ಲೆ ಅಲೌಕಿಕ ಆನಂದ ಉಂಟಾಗುತ್ತದೆಯಂತೆ. ಹಾಗಾಗಿ ಈಕೆಯನ್ನು ನಿಮಿಷಾಂಬಿಕೆ ಅಥವಾ ನಿಮಿಷಾಂಬಾ ಎಂದೂ ಸಹ ಕರೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಸ್ಥಳ ಪುರಾಣ ಹೇಳುವ ಕಥೆಯೆ ಇನ್ನೊಂದು!

ಸ್ಥಳ ಪುರಾಣ

ಸ್ಥಳ ಪುರಾಣ

ಸ್ಥಳ ಪುರಾಣದ ಪ್ರಕಾರ, ಮಾತೆ ಅಂಬಿಕೆಗೆ ನಿಮಿಷಾಂಬಾ ಎಂಬ ಹೆಸರು ಬರಲು ಕಾರಣವೆ ಬೇರೆಯಾಗಿದ್ದು ಅದು ಏನು ಎಂಬುದನ್ನು ಹಾಗೂ ಈ ಕ್ಷೇತ್ರದ ಕುರಿತು ಮಾಹಿತಿಯನ್ನು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ. ಸಾಧ್ಯವಾದಲ್ಲಿ ದೇವಿಯ ದರ್ಶನ ಪಡೆದು ಪುನೀತರಾಗಿ.

ಚಿತ್ರಕೃಪೆ: wikimedia

ಶ್ರೀರಂಗಪಟ್ಟಣ ಕ್ಷೇತ್ರ

ಶ್ರೀರಂಗಪಟ್ಟಣ ಕ್ಷೇತ್ರ

ಸುಶ್ರಾವ್ಯವಾಗಿ ಹರಿಯುವ ಕಾವೇರಿ ನದಿ ತಟದಲ್ಲಿ ನೆಲೆಸಿರುವ ಒಂದು ಪರಮ ಪುಣ್ಯ ಕ್ಷೇತ್ರವೆ ವಿಷ್ಣು, ಶ್ರೀರಂಗನಾಥ ಸ್ವಾಮಿಯಾಗಿ ನೆಲೆಸಿರುವ ಶ್ರೀರಂಗಪಟ್ಟಣ. ಮಂಡ್ಯ ಜಿಲ್ಲೆಗೆ ಒಳಪಡುವ ಶ್ರೀರಂಗಪಟ್ಟಣವು ಮೈಸೂರು ನಗರಕ್ಕೆ ಬಲು ಹತ್ತಿರದಲ್ಲಿದೆ. ಅದರಲ್ಲೂ ಬೆಂಗಳೂರಿನಿಂದ ಮೈಸೂರಿಗೆ ಹೊರಡುವಾಗ ಮೊದಲು ಸಿಗುವುದೆ ಶ್ರೀರಂಗಪಟ್ಟಣ.

ಚಿತ್ರಕೃಪೆ: Kiran Jonnalagadda

ಪ್ರಸಿದ್ಧ ದೇವಾಲಯ

ಪ್ರಸಿದ್ಧ ದೇವಾಲಯ

ಶ್ರೀರಂಗಪಟ್ಟಣವು ಪ್ರಮುಖವಾಗಿ ತನ್ನಲ್ಲಿರುವ ಶ್ರೀ ರಂಗನಾಥ ಸ್ವಾಮಿಯ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಚಾಲ್ತಿಯಲ್ಲಿರುವ ತ್ರಿರಂಗ ಸ್ಥಳಗಳ ಪೈಕಿ ಮೊದಲನೇಯ ಅಂದರೆ ಆದಿರಂಗ ಕ್ಷೇತ್ರವಾಗಿ ಶ್ರೀರಂಗಪಟ್ಟಣ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Adam63

ಗಂಜಾಂ

ಗಂಜಾಂ

ಶ್ರೀರಂಗ ಪಟ್ಟಣದಿಂದ ಕೇವಲ ಮೂರು ಕಿ.ಮೀ ಗಳಷ್ಟು ದೂರದಲ್ಲಿ ಗಂಜಾಂ ಎಂಬ ಗ್ರಾಮವಿದ್ದು ಕಾವೇರಿ ನದಿಯ ತಟದ ಮೇಲೆ ಪ್ರಶಾಂತವಾಗಿ ನೆಲೆಸಿದೆ. ಈ ಗಂಜಾಂ ಕ್ಷೇತ್ರವು ಜಗನ್ಮಾತೆಯು ನೆಲೆಸಿರುವ ಶ್ರೀಕ್ಷೇತ್ರವಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ನಿತ್ಯವೂ ಆಕರ್ಷಿಸುತ್ತದೆ.

ಚಿತ್ರಕೃಪೆ: Wendy North

ಈ ದೇವಿ

ಈ ದೇವಿ

ಹೌದು, ಗಂಜಾಂ ಕ್ಷೇತ್ರದಲ್ಲಿ ನೆಲೆಸಿರುವ ದೇವಿಯೆ ಜಗನ್ಮಾತೆಯಾದ ಶ್ರೀ ನಿಮಿಷಾಂಬಾ ದೇವಿ ಅಥವಾ ನಿಮಿಷಾಂಬಿಕೆ ದೇವಿ. ಸಾಕ್ಷಾತ್ ಪಾರ್ವತಿಯ ಅವತಾರವೆ ಆಗಿರುವ, ಮಹಿಮೆಯುಳ್ಳ ಪ್ರಭಾವಶಾಲಿ ಶಕ್ತಿ ದೇವಿ. ನಿಮಿಷಾಂಬಾಗೆ ಮುಡಿಪಾದ ಸುಂದರ ದೇವಾಲಯ ಇಲ್ಲಿದೆ.

ಚಿತ್ರಕೃಪೆ: nimishambhatemple.kar.nic.in

ಶಿವಪಂಚಾಯತನ

ಶಿವಪಂಚಾಯತನ

ಈ ದೇವಾಲಯವು ಆಗಮೋಕ್ತ ರೀತ್ಯಾ ನಿರ್ಮಾಣವಾಗಿದೆ ಹಾಗೂ ಶಿವಪಂಚಾಯತನ ಕ್ರಮದಲ್ಲಿ ದೇವಾಲಯದಲ್ಲಿರುವ ವಿಗ್ರಹಗಲನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಸೂರ್ಯದೇವ, ಗಣಪತಿ, ಶ್ರೀಚಕ್ರಸಹಿತ ಶ್ರೀ ನಿಮಿಷಾಂಬಾ ದೇವಿ, ಶ್ರೀ ಮೌಕ್ತಿಕೇಶ್ವರಸ್ವಾಮಿ ಮತ್ತು ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವರುಗಳ ಸನ್ನಿಧಿಗಳಿವೆ.

ಚಿತ್ರಕೃಪೆ: nimishambhatemple.kar.nic.in

ಪ್ರಭಾವಿ

ಪ್ರಭಾವಿ

ಇಲ್ಲಿರುವ ಶ್ರೀ ನಿಮಿಷಾಂಬಾ ದೇವಿಯು ಶ್ರೀಚಕ್ರಸಹಿತವಾಗಿದ್ದು ಇದೊಂದು ವಿಶೇಷ ವಿಗ್ರಹವೆಂದೆ ಜನಮನ್ನಣೆಗಳಿಸಿದೆ. ಹಾಗಾಗಿ ಸಾಕಷ್ಟು ಜಾಗೃತ ಸ್ಥಳ ಇದಾಗಿದೆ ಎಂದು ಹೇಳಲಾಗಿದ್ದು ಈ ದೇವಿಯನ್ನು ಅತ್ಯಂತ ಭಕ್ತಿ ಹಾಗೂ ಶೃದ್ಧೆಗಳಿಂದ ನೆನೆದರೆ ಶೀಘ್ರದಲ್ಲೆ ವರದಾನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: nimishambhatemple.kar.nic.in

ಪ್ರತಿಷ್ಠಾಪಿಸಿದರು

ಪ್ರತಿಷ್ಠಾಪಿಸಿದರು

ಕರ್ನಾಟಕ ಚಿತ್ರಕಲಾ ಪರಿಷತ್ ಪ್ರಕಟಿಸಿರುವ ಶ್ರೀ ಎಸ್.ಆರ್.ರಾವ್ ಮತ್ತು ಬಿ.ವಿ.ಕೆ.ಶಾಸ್ತ್ರಿರವರು ಬರೆದ ಟ್ರಡಿಷನಲ್ ಪೇಂಟಿಂಗ್ ಆಫ್ ಕರ್ನಾಟಕ ಎಂಬ ಪುಸ್ತಕದಲ್ಲಿ ಈ ದೇವಾಲಯವು ಮೈಸೂರಿನ ರಾಜ ಒಡೆಯರ್ ನಿಮಿಷಾಂಬಾ ದೇವಿಯನ್ನು ಪ್ರತಿಷ್ಠಾಪಿಸಿ ದೇವಾಲಯ ಕಟ್ಟಿಸಿದರು ಎಂದು ಉಲ್ಲೇಖಿಸಲಾಗಿದೆ.

ಚಿತ್ರಕೃಪೆ: nimishambhatemple.kar.nic.in

1578 ರಿಂದ 1617 ರ ಮಧ್ಯದಲ್ಲಿ

1578 ರಿಂದ 1617 ರ ಮಧ್ಯದಲ್ಲಿ

ಈ ದೇವಾಲಯವು ನಿರ್ಮಾಣವಾಗಿರುವ ಸಮಯ ಕ್ರಿ.ಶ.1578 ರಿಂದ 1617 ರ ಮಧ್ಯದಲ್ಲಿ. ಈ ಸಂದರ್ಭದಲ್ಲಿ ಮೈಸೂರು ಸಂಸ್ಥಾನಕ್ಕೆ ಶ್ರೀರಂಗಪಟ್ಟಣವು ರಾಜಧಾನಿ ನಗರವಾಗಿತ್ತು. ಪ್ರಸ್ತುತ ಈ ದೇವಾಲಯದಲ್ಲಿ ಪ್ರತಿ ವರ್ಷ ವೈಶಾಖ ಶುದ್ದ ದಶಮಿ ದಿವಸ ಶ್ರೀ ನಿಮಿಷಾಂಬಾ ಅಮ್ಮನವರ ವರ್ಧಂತಿ ಮಹೋತ್ಸವ ಜರುಗುವುದಲ್ಲದೆ ದುರ್ಗಾ ಹೋಮ ಹಾಗೂ ನವರಾತ್ರಿ ಉತ್ಸವಗಳನ್ನೂ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಚಿತ್ರಕೃಪೆ: nimishambhatemple.kar.nic.in

ಪೌಂಡರೀಕ ಯಾಗ

ಪೌಂಡರೀಕ ಯಾಗ

ಇನ್ನೂ ದೇವಾಲಯ ದೇವಿಯ ಉದ್ಭವದ ಹಿನ್ನೆಲೆಯು ರೋಚಕವಾಗಿದೆ. ಬಹು ಕಾಲದ ಹಿಂದೆ ಸುಮನಸ್ಕ ಎಂಬಾತನು ಲೋಕ ಕಲ್ಯಾಣಾರ್ಥವಾಗಿ ಶಿವನ ಆಜ್ಞೆಯಂತೆ ಪೌಂಡರೀಕ ಎಂಬ ಯಾಗವನ್ನು ಮಾಡಲು ನಿರ್ಧರಿಸಿದನು. ಅಸುರರ ಹಾವಳಿ ಬಹುವಾಗಿದ್ದ ಆ ಸಮಯದಲ್ಲಿ ಯಾಗ ನಿರ್ವಿಘ್ನತೆಯಿಂದ ನಡೆಯಲೆಂದು ರುದ್ರರೂಪಿಯಾದ ಮುಕ್ತಕಋಷಿಗೆ ಆ ಯಾಗ ಸಂರಕಷಣೆಯ ಸಂಪೂರ್ಣ ಜವಾಬ್ದಾರಿವಹಿಸಿದನು.

ಚಿತ್ರಕೃಪೆ: nimishambhatemple.kar.nic.in

ತಿಳಿಸಿದರು

ತಿಳಿಸಿದರು

ದೇವ ಋಷಿ ನಾರದರಿಂದ ಹೀಗೆ ಯಾಗ ನಡೆಸಲಾಗುತ್ತಿರುವ ವಿಚಾರವು ಜಾನು ಮತ್ತು ಸುಮಂಡಲ ಎಂಬ ರಕ್ಕಸರಿಬ್ಬರಿಗೆ ತಿಳಿದುಹೋಯಿತು. ಹೇಗಾದರೂ ಮಾಡಿ ಈ ಯಾಗವನ್ನು ಕೆಡಿಸಲೇಬೇಕೆಂದು ಅವರು ತಮ್ಮ ಗುರುಗಳಾದ ಶುಕ್ರಾಚಾರ್ಯರ ಬಳಿ ಬಂದು ಸಮಾಲೋಚನೆ ನಡೆಸಿದರು.

ಚಿತ್ರಕೃಪೆ: nimishambhatemple.kar.nic.in

ನಾಶಪಡಿಸಲೆಂದು

ನಾಶಪಡಿಸಲೆಂದು

ಗುರುಗಳೊಡನೆ ಸಮಾಲೋಚಿಸಿದ ನಂತರ ಜಾನು ಮತ್ತು ಸುಮಂಡಲರು ತಮ್ಮ ಮಂತ್ರಿಗಳಾದ ಶೂರಬಾಹು ಮತ್ತು ಘಟೋದರರನ್ನು ಕರೆದು ಸೈನ್ಯ ಕಟ್ಟಿಕೊಂಡು ಯಾಗ ನಡೆಯುವ ಸ್ಥಳಕ್ಕೆ ತೆರಳಿ ಆ ಯಾಗವನ್ನು ಸಂಪೂರ್ಣವಾಗಿ ನಾಶಪಡಿಸಲು ಆದೇಶಿಸಿದರು.

ಚಿತ್ರಕೃಪೆ: nimishambhatemple.kar.nic.in

ಆದರೆ ಸೋತರು

ಆದರೆ ಸೋತರು

ಅದರ ಪ್ರಕಾರವಾಗಿ ಮಂತ್ರಿಗಳಿಬ್ಬರು ದೊಡ್ಡ ಸೈನ್ಯವನ್ನು ಕಟ್ಟಿಕೊಂಡು ಸುಮನಸ್ಕನು ನಡೆಸುತ್ತಿದ್ದ ಯಾಗದ ಸ್ಥಳಕ್ಕೆ ಬಂದರು. ಆದರೆ ಯಾಗದ ಸಂರಕ್ಷಣೆ ಹೊತ್ತಿದ್ದ ಮುಕ್ತಕ ಋಷಿಯು ಬಹು ಪರಾಕ್ರಮಿಯಾಗಿದ್ದನು ಹಾಗೂ ಕ್ಷಣಮಾತ್ರದಲ್ಲೆ ಶತ್ರುಗಳನ್ನು ಸಂಹರಿಸಿದರು.

ಚಿತ್ರಕೃಪೆ: nimishambhatemple.kar.nic.in

ತಾವೆ ಬಂದರು

ತಾವೆ ಬಂದರು

ಈ ಸುದ್ದಿ ತಿಳಿಯುತ್ತಲೆ ಜಾನು ಹಾಗೂ ಸುಮಂಡಲರು ಅತ್ಯಂತ ಕೋಪಗೊಂಡರು. ತಾವೆ ಸ್ವತಃ ಯುದ್ಧಕ್ಕೆ ಹೋಗಿ ಮುಕ್ತಕ ಋಷಿಯನ್ನು ಸಂಹರಿಸುವ ನಿರ್ಧಾರ ಕೈಗೊಂಡರು. ಅದರಂತೆ ಯುದ್ಧ ಭೂಮಿಗೆ ಪ್ರವೇಶಿಸಿ ಮುಕ್ತಕರೊಂದಿಗೆ ಯುದ್ಧ ಮಾಡಲು ಪ್ರಾರಂಭಿಸಿದರು.

ಚಿತ್ರಕೃಪೆ: nimishambhatemple.kar.nic.in

ಯಾವುದೆ ಆಯುಧ!

ಯಾವುದೆ ಆಯುಧ!

ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಅದೆನೆಂದರೆ ಜಾನು ಹಾಗೂ ಸುಮಂಡಲರಿಗೆ ಬ್ರಹ್ಮನಿಂದ ವರದಾನವೊಂದು ಪ್ರಾಪ್ತಿಯಾಗಿತ್ತು. ಅದರ ಅನ್ವಯ ಇಬ್ಬರು ಸಹೋದರರನ್ನು ಯಾವುದೆ ರೀತಿಯ ಆಯುಧಗಳಿಂದ ಕೊಲ್ಲುವುದು ಅಸಾಧ್ಯವಾಗಿತ್ತು.

ಚಿತ್ರಕೃಪೆ: nimishambhatemple.kar.nic.in

ಹೋರಾಟ ನಿರರ್ಥ!

ಹೋರಾಟ ನಿರರ್ಥ!

ಇದನ್ನರಿಯದ ಮುಕ್ತಕ ಋಷಿಯು ತನ್ನಲ್ಲಿರುವ ಎಲ್ಲ ವಿವಿಧ ರೀತಿಯ ಆಯುಧಗಳನ್ನು ಆ ರಕ್ಕಸರ ಮೇಲೆ ಪ್ರಯೋಗಿಸಿದನಾದರೂ ಏನೂ ಪ್ರಯೋಜನವಾಗಲಿಲ್ಲ. ಹೀಗೆ ಮ್ಕ್ತಕನ ಎಲ್ಲೆ ಆಯುಧಗಳು ನಿಷ್ಕ್ರೀಯಗೊಂಡು ಸೋಲನುಭವಿಸ ಬೇಕಾಯಿತು.

ಚಿತ್ರಕೃಪೆ: nimishambhatemple.kar.nic.in

ಪಾರ್ವತಿ ಪ್ರತ್ಯಕ್ಷ

ಪಾರ್ವತಿ ಪ್ರತ್ಯಕ್ಷ

ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಯಾಗಕ್ಕೆ ಮಾತ್ರ ಧಕ್ಕೆ ಬರಬಾರದೆಂಬ ಉದ್ದೇಶದಿಂದ ದೇವಿ ಪಾರ್ವತಿಯನ್ನು ಮನಸಿನಲ್ಲಿ ಅತ್ಯಂತ ತೀವ್ರವಾಗಿ ಆರಾಧಿಸಿ ಪ್ರಾರ್ಥಿಸಿದನು. ಇದರಿಂದ ಪ್ರಸನ್ನಳಾದ ಪಾರ್ವತಿ ದೇವಿಯು ಯಾಗ ನಡೆಯುತ್ತಿದ್ದ ಅಗ್ನಿ ಕುಂಡದಿಂದಲೆ ಪ್ರತ್ಯಕ್ಷಳಾದಳು.

ಚಿತ್ರಕೃಪೆ: nimishambhatemple.kar.nic.in

ದಿಟ್ಟಿಸಿದಳು

ದಿಟ್ಟಿಸಿದಳು

ಪಾರ್ವತಿ ದೇವಿಗೆ ರಕ್ಕಸರಿಬ್ಬರು ಯಾವುದೆ ಆಯುಧಗಳಿಂದ ಹತರಾಗದವರು ಎನ್ನುವ ವಿಚಾರ ತಿಳಿದಿದ್ದರಿಂದ ತನ್ನ ತೇಜೋಮಯವಾದ ದೃಷ್ಟಿಯಿಂದ ಆ ರಕ್ಕಸರಿಬ್ಬರನ್ನು ದಿಟ್ಟಿಸಿ ನೋಡತೊಡಗಿದಳು.

ಚಿತ್ರಕೃಪೆ: nimishambhatemple.kar.nic.in

ಹತರಾದರು

ಹತರಾದರು

ದೇವಿಯ ಆ ಕಣ್ಣೋಟದ ತೇಜಸ್ಸು ಎಷ್ಟೊಂದು ಭಯಂಕರವಾಗಿತ್ತೆಂದರೆ ನಿಮಿಷ ಮಾತ್ರದಲ್ಲೆ ಅದರ ಪ್ರಭಾವದಿಂದ ರಕ್ಕಸ ಸೋದರರಿಬ್ಬರೂ ನಾಶಗೊಂಡು ಭಸ್ಮವಾದರು. ಹೀಗೆ ನಿಮಿಷ ಮಾತ್ರದಲ್ಲೆ ರಕ್ಕಸರನ್ನು ಸಂಹರಿಸಿದುದರಿಂದ ಪಾರ್ವತಿಗೆ ನಿಮಿಷಾಂಬ ಅಥವಾ ನಿಮಿಷಾಂಬಿಕೆ ಎಂಬ ಹೆಸರು ಬಂದಿತು.

ಚಿತ್ರಕೃಪೆ: nimishambhatemple.kar.nic.in

ಸುಲಭವಾಗಿ

ಸುಲಭವಾಗಿ

ಮೈಸೂರು ಹಾಗೂ ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಸಾಕಷ್ಟು ಬಸ್ಸುಗಳಿದ್ದು ಅಲ್ಲಿಂದ ಬಾಡಿಗೆ ಕಾರು ಅಥವಾ ರಿಕ್ಷಾಗಳ ಮೂಲಕ ನಿಮಿಷಾಂಬ ದೇವಾಲಯಕ್ಕೆ ತೆರಳಬಹುದು. ಇಲ್ಲವಾದಲ್ಲಿ ಶ್ರೀರಂಗಪಟ್ಟಣದಿಂದ ಸುಮಾರು ನಾಲ್ಕು ಕಿ.ಮೀ ನಡೆಯುತ್ತಲೂ ನಿಮಿಷಾಂಬ ದೇವಾಲಯವನ್ನು ತಲುಪಬಹುದು.

ಚಿತ್ರಕೃಪೆ: nimishambhatemple.kar.nic.in

ಈಡೇರಿಸುವ ಮಾತೆ!

ಈಡೇರಿಸುವ ಮಾತೆ!

ಶ್ರೀಚಕ್ರಸಹಿತವಿರುವ ನಿಮಿಷಾಂಬ ದೇವಿಯು ಬಲು ಪ್ರಭಾವಿ ದೇವಿ ಎಂದು ನಂಬಲಾಗಿದ್ದು ಈಕೆಯನ್ನು ಅನನ್ಯ ಪ್ರೀತಿ, ಭಕ್ತಿಗಳಿಂದ ಪ್ರಾರ್ಥಿಸಿದರೆ ಭಕ್ತರ ಇಷ್ಟಾರ್ಥ ಈಡೇರುವುದಲ್ಲದೆ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ. ಶ್ರೀನಿಮಿಷಾಂಬಾ ದೇವಿಯಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡಿಕೊಳ್ಳವುದರಿಂದ ಮದುವೆಯಾಗದವರಿಗೆ ಕಲ್ಯಾಣಭಾಗ್ಯವು, ಮಕ್ಕಳಾಗದವರಿಗೆ ಸಂತಾನ ಭಾಗ್ಯವೂ, ಆರ್ಥಿಕ ತೊಂದರೆಯಲ್ಲಿರುವವರಿಗೆ ಧನಧಾನ್ಯ, ಅನಾರೋಗ್ಯದಿಂದ ಕೂಡಿರುವವರಿಗೆ ಆರೋಗ್ಯ ಭಾಗ್ಯ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಭಾಗ್ಯವೂ ಪ್ರಾಪ್ತಿಯಾಗುತ್ತದೆ.

ಚಿತ್ರಕೃಪೆ: nimishambhatemple.kar.nic.in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X