Search
  • Follow NativePlanet
Share
» »ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು

ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು

By Arshad Hussain

ಈ ವಿಶ್ವದಲ್ಲಿ ನಮ್ಮ ಭೂಮಿಯಷ್ಟು ಅನನ್ಯ, ಜೀವಂತ ಗ್ರಹ ಇನ್ನೊಂದಿಲ್ಲ. ರಾತ್ರಿಯಾಗುತ್ತಿದ್ದಂತೆಯೇ ಆಗಸದಲ್ಲಿ ಮಿನುಗುವ ನಕ್ಷತ್ರಗಳು, ಗ್ರಹಗಳು ಮತ್ತು ಮುಖ್ಯವಾಗಿ ನಮ್ಮದೇ ಗ್ರಹದ ಉಪಗ್ರಹವಾಗಿರುವ ಚಂದ್ರ ಖಗೋಳವಿಜ್ಞಾನದ ಬಗ್ಗೆ ಕುತೂಹಲ ಉಂಟುಮಾಡುತ್ತವೆ. ಚಂದ್ರನಿಲ್ಲದ ಕತ್ತಲ ರಾತ್ರಿಯಲ್ಲಿ ಕಂಡಷ್ಟು ನಕ್ಷತ್ರಗಳು ಹುಣ್ಣಿಮೆಯ ದಿನ ಕಾಣಿಸುವುದಿಲ್ಲ. ಇದಕ್ಕೆ ಕಾರಣ ಸ್ಪಷ್ಟ ಚಂದ್ರ ಪ್ರತಿಫಲಿಸುವ ಕಾರಣ ಪ್ರಖರವಾಗಿರುವ ನಕ್ಷತ್ರಗಳು ಮಾತ್ರವೇ ಕಾಣಿಸುತ್ತವೆ. ಉಳಿದಂತೆ ಕೊಂಚ ಮಂಕಾಗಿ ಕಾಣಿಸುವ ನಕ್ಷತ್ರಗಳು ಕೊಂಚ ಬೆಳಕಿದ್ದರೂ ಕಾಣಿಸುವುದೇ ಇಲ್ಲ. ನಮ್ಮ ಸುಂದರ ಭೂಮಿಯನ್ನು ಸೃಷ್ಟಿಸಿರುವ ನಿಸರ್ಗವೇ ಈ ಗ್ರಹ, ನಕ್ಷತ್ರಗಳನ್ನೂ ನಿರ್ಮಿಸಿವೆ. ಆದರೆ ಇವುಗಳನ್ನು ಅರಿಯಲು ನಮಗಿರುವ ಅತಿ ದೊಡ್ಡ ತೊಂದರೆ ಎಂದರೆ ಇವುಗಳಿರುವ ಅಪರಿಮಿತ ದೂರ! ಕೇವಲ ಜ್ಯೋತಿರ್ವಷಗಳಲ್ಲಿ ಮಾತ್ರವೇ ಲೆಕ್ಕಹಾಕಬಹುದಾದ ದೂರಗಳಲ್ಲಿರುವ ಈ ನಕ್ಷತ್ರ ಮತ್ತು ಇತರ ಖಗೋಳವಸ್ತುಗಳನ್ನು ನೋಡಲು ನಮಗಿರುವ ಮೊದಲ ಅಡ್ಡಿ ಎಂದರೆ ನಮ್ಮ ಸೂರ್ಯನಿಂದ ಹೊರಟ ಪ್ರಖರ ಕಿರಣಗಳು. ಹಾಗಾಗಿ ಖಗೋಳವೀಕ್ಷಣೆಯನ್ನು ರಾತ್ರಿಯ ಸಮಯದಲ್ಲಿ ಮಾತ್ರವೇ ಮಾಡಲು ಸಾಧ್ಯ. ಆದರೆ ಇದು ಸಹಾ ಎಲ್ಲಾ ಸ್ಥಳಗಳಲ್ಲಿ ಸಾಧ್ಯವಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ತುಂಬಾ ಕಷ್ಟ. ಏಕೆಂದರೆ ಬೆಳಕಿನ ಪ್ರದೂಷಣೆ ಅಥವಾ light pollution! ನಮ್ಮ ನಗರಗಳನ್ನು ಬೆಳಗುವ ದೀಪಗಳೇ ಈ ಕಾರ್ಯಕ್ಕೆ ಅಡ್ಡಿಯುಂಟುಮಾಡುತ್ತವೆ. ಇದೇ ಕಾರಣಕ್ಕೆ ಪ್ರಮುಖ ಖಗೋಳವೀಕ್ಷಣಾ ಕೇಂದ್ರಗಳು ಜನವಸತಿಯಿಂದ ದೂರವೇ ಇರುತ್ತವೆ ಹಾಗೂ ಇವುಗಳ ಸರಹದ್ದಿನಲ್ಲಿ ಒಂದು ಕಾರು ಸಹಾ ಹೆಡ್ ಲೈಟ್ ಉರಿಸಲಿಕ್ಕೆ ಅವಕಾಶ ಇರುವುದಿಲ್ಲ.

ಒಂದು ವೇಳೆ ನೀವು ಖಗೋಳದ ಚಿತ್ರಗಳನ್ನು ಸೆರೆಹಿಡಿಯುವ ಹವ್ಯಾಸಿಯಾಗಿದ್ದು ಈ ಪರಿಯ ಕತ್ತಲು ಇರುವ ಸ್ಥಳಗಳು ನಿಮಗೆ ಸಿಗದೇ ಇದ್ದರೆ ನಿಮಗೆ ಪರಿಪೂರ್ಣವಾದ ಖಗೋಳವೀಕ್ಷಣೆ ಸಾಧ್ಯವಾಗುವುದಿಲ್ಲ, ಆದರೆ ಇದನ್ನು ಸಾಧ್ಯವಾಗಿಸುವ ಕೆಲವು ಸ್ಥಳಗಳು ಈ ವ್ಯಕ್ತಿಗಳಿಗೆ ಸೂಕ್ತವಾಗಿದ್ದು ಇವುಗಳಲ್ಲಿ ಕೆಲವು ನಮ್ಮ ಭಾರತದಲ್ಲಿಯೂ ಇವೆ. ನಿಮ್ಮ ಖಗೋಳ ಜ್ಞಾನವನ್ನು ಒರೆಹಚ್ಚಲು ಇತರ ಸ್ಥಳಕ್ಕಿಂತಲೂ ಹೆಚ್ಚೇ ನೆರವಾಗುವ ಈ ಸ್ಥಳಗಳು ಯಾವುವು ನೋಡೋಣ

1) ಸೋನ್‍ಮಾರ್ಗ್:

1) ಸೋನ್‍ಮಾರ್ಗ್:

ಸೋನಾ ಎಂದರೆ ಚಿನ್ನ, ಮಾರ್ಗ ಎಂದರೆ ದಾರಿ. ಚಿನ್ನದ ದಾರಿ ಎಂಬ ಅರ್ಥವನ್ನು ನೀಡುವ ಈ ಸ್ಥಳ ನಮ್ಮ ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯ ರಮಣೀಯ ಸ್ಥಳದಲ್ಲಿರುವ ಒಂದು ಪುಟ್ಟ ಹಳ್ಳಿಯಾಗಿದೆ. ಈ ಹಳ್ಳಿಯಲ್ಲಿ ರಾತ್ರಿ ಕತ್ತಲಾದರೆ ಸಾಕು, ಎಲ್ಲಾ ದಿಕ್ಕುಗಳ ದಿಗಂತಗಳಿಂದಲೂ ಯಾವುದೇ ಬೆಳಕು ಬೀರದೇ ಇಡಿಯ ಆಕಾಶ ಅಪ್ಪಟ ಸ್ಪಟಿಕದಷ್ಟು ಸ್ಪಷ್ಟವಾಗಿ ತನ್ನಲ್ಲಿರುವ ಗ್ರಹತಾರೆಯರನ್ನು ವೀಕ್ಷಿಸಲು ಅನುವು ಮಾಡುತ್ತದೆ. ಇದಕ್ಕೆ ಕಾರಣ ಇದು ಇದುವ ಸ್ಥಳ ತಗ್ಗಿನದ್ದಾಗಿದ್ದು ಸುತ್ತಲೂ ಹಿಮಾಚ್ಛಾದಿತ ಪರ್ವತಗಳು ಅದರಾಚೆಗಿನ ನಗರಗಳಿಂದ ಬರಲಿದ್ದ ಅಲ್ಪ ಬೆಳಕನ್ನೂ ತಡೆಯುತ್ತವೆ. ಹಾಗಾಗಿ, ಈ ಹಳ್ಳಿಯಿಂದ ತೆಗೆಯುವ ನಿಮ್ಮ ಚಿತ್ರಗಳು ಅತ್ಯದ್ಭುತವಾಗಿರುತ್ತವೆ.

2) ಪ್ಯಾನ್ಗಾಂಗ್:

2) ಪ್ಯಾನ್ಗಾಂಗ್:

ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಇರುವ ಇನ್ನೊಂದು ಭಾಗದಲ್ಲಿರುವ ಪ್ಯಾನ್ಗಾಂಗ್ ಕೆರೆಯಿಂದಾಗಿಯೇ ಈ ಹೆಸರು ಪಡೆದ ಸ್ಥಳ ಹವ್ಯಾಸಿ ಖಗೋಳಶಾಸ್ತ್ರಜ್ಞರಿಗಿಂತಲೂ ಬೈಕು ಓಡಿಸುವವರಿಗೂ ಹೆಚ್ಚು ಪರಿಚಿತವಾಗಿದೆ. ವಿಶೇಷವಾಗಿ ಚಾರಣದ ಮೂಲಕ ಹಾದಿ ಕ್ರಮಿಸುವ ಯುವಜನತೆಗೂ ಈ ಸ್ಥಳ ತುಂಬಾ ಇಷ್ಟವಾಗುತ್ತದೆ. ಹಚ್ಚ ಹಸಿರಿನ ನೆಲ ಮತ್ತು ಅತ್ಯಂತ ಸುಂದರ ಪರಿಸರ, ದೂರದ ಹಿಮಾಚ್ಛಾದಿತ ಬೆಟ್ಟಗಳು, ಈ ಸುಂದರ ನಿಸರ್ಗವನ್ನು ಸವಿಯಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿ ಆಗಮಿಸುತ್ತಾರೆ. ಆದರೆ ಈ ಸ್ಥಳವೂ ಸುತ್ತಲ ಬೆಟ್ಟಗಳಿಂದಾಗಿ ಹೊರಗಿನ ಬೆಳಕನ್ನು ತಡೆದು ಅಪ್ಪಟ ಸ್ಪಷ್ಟ ಆಕಾಶವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಒಂದು ವೇಳೆ ನೀವು ಇದುವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸ ಹೋಗಿಲ್ಲದಿದ್ದರೆ ಲಡಾಖ್ ನಗರಕ್ಕೆ ಪ್ರವಾಸ ಹೊರಡುವುದು ಉತ್ತಮ. ಇಲ್ಲಿಂದ ಪ್ಯಾನ್ಗಾಂಗ್ ಗೆ ಸೂಕ್ತ ಸೌಲಭ್ಯಗಳಿದ್ದು ನಿಮ್ಮ ಖಗೋಳಜ್ಞಾನವನ್ನು ಒರೆಹಚ್ಚಲು ಸೂಕ್ತ ವೇದಿಕೆಯನ್ನು ಒದಗಿಸಿಕೊಡುತ್ತದೆ.

3) ಲೋನಾರ್ ಕ್ರೇಟರ್

3) ಲೋನಾರ್ ಕ್ರೇಟರ್

ಉಲ್ಕಾಕುಳಿ ಎಂದು ಕನ್ನಡದಲ್ಲಿ ಕರೆಯಬಹುದಾದ ಕ್ರೇಟರ್ (Crater) ಸಾಮಾನ್ಯವಾಗಿ ನಮ್ಮ ಭೂಮಿಯ ಕಕ್ಷೆಯನ್ನು ನಿತ್ಯವೂ ನೂರಾರು ಬಾಹ್ಯಾಕಾಶದ ವಸ್ತುಗಳು ಪ್ರವೇಶಿಸುತ್ತವೆ. ಭೂಮಿಯ ಗುರುತ್ವ ಇವನ್ನು ತನ್ನೆಡೆಗೆ ಸೆಳೆಯುತ್ತಿದ್ದಂತೆಯೇ ಇವು ವಾತಾವರಣದ ಘರ್ಷಣೆಯಿಂದ ಉಂಟಾಗುವ ಬಿಸಿಗೆ ಉರಿದು ಭಸ್ಮವಾಗುತ್ತವೆ. ಇದೇ ಉಲ್ಕೆ. ಒಂದು ವೇಳೆ ದೊಡ್ಡ ಗಾತ್ರದ ಉಲ್ಕೆಯೊಂದು ಅತಿವೇಗದಿಂದ ಧಾವಿಸಿ ಪೂರ್ಣವಾಗಿ ಭಸ್ಮವಾಗುವ ಮೊದಲೇ ಭೂಮಿಗೆ ಅಪ್ಪಳಿಸಿದರೆ ಉಂಟಾಗುವ ವೃತ್ತಾಕಾರದ ಗುಂಡಿಯಾಗಿದೆ. ಒಂದು ವೇಳೆ ಹೀಗೆ ಅಪ್ಪಳಿಸಿದ ಉಲ್ಕೆಯೇನಾದರೂ ಚಿಕ್ಕ ಕಲ್ಲಿನ ರೂಪದಲ್ಲಿ ಬಿದ್ದಿದ್ದು ಖಚಿತವಾದರೆ ಈ ಕಲ್ಲಿಗೆ ವಜ್ರಕ್ಕೂ ಹೆಚ್ಚಿನ ಬೆಲೆಯಿದೆ! ಇಂತಹ ಒಂದು ಸ್ಪಷ್ಟವಾದ ಗುಂಡಿ ಮಹಾರಾಷ್ಟ್ರದ ಪುಣೆಯಿಂದ 370 ಕಿ.ಮೀ ದೂರದ ಬುಲ್ಧಾನಾ ಜಿಲ್ಲೆಯಲ್ಲಿದೆ. ಈ ಸ್ಥಳ ನೈಸರ್ಗಿಕ ವಿಸ್ಮದ ಸ್ಥಳವಾಗಿರುವ ಜೊತೆಗೇ ಸುತ್ತಮುತ್ತಲ ನೂರಾರು ಕಿ.ಮೀಯಲ್ಲಿ ಯಾವುದೇ ಪಟ್ಟಣವನ್ನು ಹೊಂದಿರದ ಕಾರಣ ರಾತ್ರಿಯಾಗುತ್ತಲೇ ಅಪ್ಪಟ ಆಕಾಶವನ್ನು ಪ್ರಕಟಿಸುತ್ತದೆ. ಈ ಸ್ಥಳದಲ್ಲಿ ಕೆಲವಾರು ಪುರಾತನ ದೇಗುಲಗಳಿವೆ ಹಾಗೂ ಐತಿಹಾಸಿಕ ಸ್ಮಾರಕಗಳೂ ಇವೆ. ಹಾಗಾಗಿ ಈ ಸ್ಥಳದಲ್ಲಿ ರಾತ್ರಿ ಸಮಯ ನಿಮ್ಮ ಖಗೋಳಜ್ಞಾನ ಬಳಕೆಗೆ ಬಂದರೆ ದಿನದ ಹೊತ್ತಿನಲ್ಲಿ ಈ ಸ್ಥಳಗಳು ಐತಿಹಾಸಿಕ ರಹಸ್ಯಗಳನ್ನು ಪ್ರಕಟಿಸುತ್ತವೆ.

4) ಥಾರ್ ಮರುಭೂಮಿ:

4) ಥಾರ್ ಮರುಭೂಮಿ:

ಗ್ರೇಟ್ ಇಂಡಿಯನ್ ಡೆಸರ್ಟ್ ಎಂದೂ ಕರೆಯಲಾಗುವ ಈ ಮರುಭೂಮಿ ಭಾರತದ ರಾಜಸ್ಥಾನ ರಾಜ್ಯವನ್ನು ಬಹುತೇಕ ಆವರಿಸಿದೆ. ಉಳಿದಂತೆ ಪಂಜಾಬ್, ಹರ್ಯಾನಾ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ವಿಸ್ತರಿಸಿದೆ. ಮರುಭೂಮಿಯಾಗಿರುವ ಕಾರಣ ಜನವಸತಿ ಮತ್ತು ನಗರಗಳೂ ಎಲ್ಲಾ ಕಡೆ ಇಲ್ಲದಿರುವುದೇ ಖಗೋಳಶಾಸ್ತ್ರಜ್ಞರಿಗೆ ವರದಾನವಾಗಿದೆ. ಹಾಗಾಗಿ, ಮುಖ್ಯ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರ, ಅಂದರೆ ದಿಗಂತದಲ್ಲಿ ಬೆಳಕು ಕಣ್ಮರೆಯಾಗುವವರೆಗೆ ದಾಟಿದರೆ ಸಾಕು, ಉಳಿದಂತೆ ನಿಮಗೆ ಸ್ಪಷ್ಟ ಆಗಸದ ವೀಕ್ಷಣೆ ಸಾಧ್ಯವಾಗುತ್ತದೆ. ಈ ಮರುಭೂಮಿಯ ಯಾವುದೇ ಭಾಗವನ್ನು ನೀವು ಆಯ್ದುಕೊಂಡರೂ ನಿಮ್ಮ ಕಾರ್ಯ ನೆರವೇರುವುದು ಖಂಡಿತಾ. ಆದರೆ ಗುಜರಾತ್ ನ ಪ್ರಮುಖ ಕೊಲ್ಲಿಯಾದ ಕಛ್ (Great Rann of Kutch) ಭಾಗದ ಮರುಭೂಮಿಯನ್ನು ಆಯ್ದುಕೊಂಡರೆ ಇಲ್ಲಿನ ಉಪ್ಪುಮಿಶ್ರಿತ ಮರಳಿನ ಕೆರೆ ನಿಮಗೆ ಹೆಚ್ಚಿನ ಸೊಬಗನ್ನು ನೀಡುತ್ತದೆ.

5) ಯೆರ್ಕಾಡ್

5) ಯೆರ್ಕಾಡ್

ಊಟಿ ಎಂದರೆ ಎಲ್ಲರಿಗೂ ಗೊತ್ತು. ಆದರೆ ಇದರ ಅಕ್ಕ ಪಕ್ಕ ಇರುವ ಕೆಲವು ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಯೆರ್ಕಾಡ್ ಸುಂದರ ತಾಣವಾಗಿದ್ದು ಊಟಿಯಷ್ಟು ಸೌಲಭ್ಯಗಳನ್ನು ಪಡೆದಿದ್ದರೆ ಅದಕ್ಕೂ ಹೆಚ್ಚು ಜನಪ್ರಿಯ ತಾಣವಾಗುವುದು ಖಚಿತ. ಈ ಕೊರತೆಯ ಕಾರಣದಿಂದಲೇ ಯೆರ್ಕಾಡ್ ಬಡವರ ಊಟಿ (as poor man's Ooty) ಎಂಬ ಅನ್ವರ್ಥನಾಮವನ್ನು ಪಡೆದಿದೆ. ಇಲ್ಲಿರುವ ಕೆಲವು ಆಕರ್ಷಣೆಗಳು ಊಟಿಯಲ್ಲಿಯೂ ಸಿಗಲಾರವು. ಇದರಲ್ಲಿ ಪ್ರಥಮವಾಗಿ ಉಲ್ಲೇಖಿಸಬಹುದಾದ ಪ್ರಯೋಜನ ಎಂದರೆ ಮಧ್ಯರಾತ್ರಿಯ ಸೌಂದರ್ಯ. ಎತ್ತರದ ತಾಣವಾಗಿದ್ದರೂ ಸುತ್ತಮುತ್ತ ಯಾವುದೇ ಪ್ರಖರ ಬೆಳಕಿನ ಪ್ರದೂಷಣೆ ಇಲ್ಲದೇ ಇರುವ ಕಾರಣ ಇಲ್ಲಿ ರಾತ್ರಿಯ ಆಗಸ ಸ್ಪಷ್ಟವಾಗಿದ್ದು ಲಕ್ಷಾಂತರ ಮಿನುಗುತಾರೆಗಳನ್ನು ಪ್ರಕಟಿಸುತ್ತದೆ. ಹಾಗಾಗಿ, ವಿಶೇಷವಾಗಿ ದಕ್ಷಿಣ ಭಾರತದ ಹವ್ಯಾಸಿ ಖಗೋಳಶಾಸ್ತ್ರಜ್ಞರಿಗೆ ಈ ಸ್ಥಳ ಹತ್ತಿರ ಮತ್ತು ಅತ್ಯಂತ ಅನುಕೂಲಕರವಾಗಿದೆ.

6) ನೀಲ್ ಐಲ್ಯಾಂಡ್

6) ನೀಲ್ ಐಲ್ಯಾಂಡ್

ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ ನೂರಾರು ದ್ವೀಪಸಮೂಹಗಳಲ್ಲಿ ಒಂದಾಗಿರುವ ನೀಲ್ ದ್ವೀಪವೂ ಈ ಕಾರ್ಯಕ್ಕೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ದೊರಕುವ, ಉಳಿದೆಡೆ ಇಲ್ಲದೇ ಇರುವ ಸೌಲಭ್ಯವೆಂದರೆ ಸಮುದ್ರ. ಈ ದ್ವೀಪದಲ್ಲಿ ಸುಂದರ ತೀರಗಳೂ, ಹವಳಖಚಿತ ಆಳವಿಲ್ಲದ ತೀರಗಳೂ ತೆಂಗಿನ ಮರಗಳು ಅದ್ಭುತ ನಿಸರ್ಗ ಸೌಂದರ್ಯವನ್ನು ಆಸ್ವಾದಿಸಲು ನೆರವು ನೀಡುತ್ತವೆ. ಆದರೆ ಉಳಿದ ದ್ವೀಪಕ್ಕಿಂತಲೂ ಈ ದ್ವೀಪಕ್ಕೆ ಖಗೋಳವೀಕ್ಷಣೆಗೆ ಮಹತ್ವ ಸಿಗಲು ಕಾರಣ ದ್ವೀಪ ಹೆಚ್ಚೂ ಕಡಿಮೆ ಚಪ್ಪಟೆಯಾಗಿದ್ದು ನಡುವೆ ಇರುವ ನಿಪ್ಪಲ್ ಹಿಲ್ ಎಂಬ ಸ್ಥಳ ಕೇವಲ ನೂರು ಮೀಟರ್ ಎತ್ತರವಿರುವುದು. ಈ ಸ್ಥಳದಿಂದ ಮುನ್ನೂರಾ ಅರವತ್ತು ಡಿಗ್ರಿಗಳಲ್ಲಿಯೂ ಆಗಸವನ್ನು ಯಾವುದೇ ಅಡೆ ತಡೆಯಿಲ್ಲದೇ ವೀಕ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೇ ಇಲ್ಲಿ ಬೆಳಕಿನ ಪ್ರದೂಷಣೆಯೂ ಅತ್ಯಂತ ಕನಿಷ್ಟವಿದ್ದು ಖಗೋಳ ಛಾಯಾಗ್ರಹಣಕ್ಕೆ ಅತ್ಯುತ್ತಮ ಅವಕಾಶ ಒದಗಿಸುತ್ತದೆ.

Read more about: photography
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X