Search
  • Follow NativePlanet
Share
» »ಜಲಧಾರೆಯಲ್ಲೇ ಜಾರುವುದು ಮನದ ದಣಿವು

ಜಲಧಾರೆಯಲ್ಲೇ ಜಾರುವುದು ಮನದ ದಣಿವು

ಬೆಂಗಳೂರಿಗೆ ಹತ್ತಿರವಾಗಿ ಅನೇಕ ಫಾಲ್ಸ್‌ಗಳಿದ್ದು ಒಮ್ಮೆ ಇವುಗಳಿಗೆ ಭೇಟಿ ನೀಡಿದರೆ ಅಲ್ಲಿ ಹರಿಯುವ ನೀರಿನ ಹಾಗೆ ಮನಸ್ಸಿನ ದಣಿವು ಹರಿದು ಹೋಗುತ್ತದೆ

By Divya

ಹರಿಯುವ ನೀರು ಸದಾ ಮುನ್ನುಗ್ಗುತ್ತ ಹರಿಯುತ್ತಲೆ ಇರುತ್ತದೆ. ಏನಾಗಲಿ....ಮುಂದೆ ಸಾಗು ನೀ ಎಂಬ ಜಪವನ್ನು ಚಾಚು ತಪ್ಪದೆ ಮಾಡುತ್ತಲೆ ಇರುತ್ತದೆ. ಹೀಗೆ ಹರಿಯುತ್ತ ನೀರು ಬೆಟ್ಟ-ಗುಡ್ಡಗಳ ಮಧ್ಯೆ ಸಾಗುತ್ತ ಮುನ್ನುಗ್ಗುವಾಗ ಎತ್ತರದಿಂದ ಭೂಮಿಗೆ ಧುಮುಕುವ ಅವಕಾಶ ಬಂದರೂ ಸರಿ ನಿಲ್ಲಲೊಪ್ಪಲ್ಲ. ಧುಮುಕಿಯೆ ಬಿಡುತ್ತದೆ. ಹೀಗೆ ಎತ್ತರದಿಂದ ಧುಮುಕುವ ಈ ಜಲಧಾರೆಯೆ ಜಲಪಾತವಾಗಿ ಸುಂದರವಾಗಿ ಕಾಣುತ್ತದೆ.

ಈ ಜಲಪಾತಗಳು ಎಂದಿಗೂ ಪ್ರವಾಸಿ ಆಕರ್ಷಣೆಗಳೆಯೆ. ಬೆಂಗಳೂರಿಗೆ ಹತ್ತಿರವಾಗಿ ಅನೇಕ ಫಾಲ್ಸ್‌ಗಳಿವೆ . ಒಮ್ಮೆ ಇವುಗಳಿಗೆ ಭೇಟಿ ನೀಡಿದರೆ ಅಲ್ಲಿ ಹರಿಯುವ ನೀರಿನ ಹಾಗೆ ಮನಸ್ಸಿನ ದಣಿವು ಹರಿದು ಹೋಗುತ್ತದೆ. ಹತ್ತಿರದಲ್ಲಿರುವ ಈ ಜಲಪಾತಗಳ ಸಂಕ್ಷಿಪ್ತ ವಿವರಗಳನ್ನು ನೋಡೋಣ ಬನ್ನಿ...

ಕೃಷ್ಣರಾಜನಗರ

ಕೃಷ್ಣರಾಜನಗರ

ಚುಂಚನ ಕಟ್ಟೆ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿರುವ ಒಂದು ಪ್ರವಾಸಿ ತಾಣ. ರಾಜ್ಯದ ಜೀವ ನದಿ ಕಾವೇರಿ ಸುಮಾರು 65 ಅಡಿ ಎತ್ತರದಿಂದ ದುಮ್ಮಿಕ್ಕುತ್ತದೆ. ಶ್ರೀರಾಮ ತನ್ನ ವನವಾಸದ ಕಾಲದಲ್ಲಿ ತನ್ನ ಪತ್ನಿ ಸೀತಾ ದೇವಿಯೊಡನೆ ಇಲ್ಲಿಗೆ ಬಂದಿದ್ದ ಎನ್ನುವ ಕುರುಹು ಇದೆ. ಇಲ್ಲಿರುವ ದೇವಾಲಯದ ಒಂದು ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹ ಇರುವುದು. ಹಸಿರು ಸಿರಿಯ ನಡುವೆ ಹರಿದು ಬರುವ ಈ ಜಲಪಾತ ಬೆಂಗಳೂರಿನಿಂದ 190 ಕಿ.ಮೀ. ದೂರದಲ್ಲಿದೆ.

ಚಿತ್ರಕೃಪೆ: wikipedia

ಮಂಡ್ಯ

ಮಂಡ್ಯ

ಶಿವನ ಸಮುದ್ರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಸಣ್ಣ ಊರು. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ಕವಲುಗಳಾಗಿ ಗಗನಚುಕ್ಕಿ, ಬರಚುಕ್ಕಿ ಎಂದು ಎರಡು ಜಲಪಾತವನ್ನು ಸೃಷ್ಟಿಸುತ್ತದೆ. ಇಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಏಷ್ಯಾದಲ್ಲಿಯೇ ಮೊದಲು ನಿರ್ಮಾಣಗೊಂಡ ವಿದ್ಯುತ್ ಉತ್ಪಾದನಾ ಕೇಂದ್ರ ಎಂಬ ಹೆಗ್ಗಳಿಕೆ ಇದರದ್ದು. ಬೆಂಗಳೂರಿನಿಂದ 120 ಕಿ.ಮೀ. ದೂರದಲ್ಲಿರುವ ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ.

ಚಿತ್ರಕೃಪೆ: wikipedia

ಕೊಡಗು

ಕೊಡಗು

ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗಿನ ಜಲಪಾತದಲ್ಲಿ ಇರ್ಪು ಜಲಪಾತವೂ ಒಂದು. ರಾಮಾಯಣದ ಕಾಲದಲ್ಲಿ ಅಣ್ಣನಿಗಾಗಿ ಲಕ್ಷ್ಮಣ ನೀರನ್ನು ಅರಸುತ್ತಾ ಹೋದಾಗ ಎಲ್ಲೂ ನೀರು ಸಿಗದಂತಾಯಿತು. ಆ ಸಂದರ್ಭದಲ್ಲಿ ತನ್ನ ಬಾಣ ಪ್ರಯೋಗದಿಂದ ಈ ಜಲಪಾತವನ್ನು ಸೃಷ್ಟಿಸಿದ್ದ ಎನ್ನಲಾಗುತ್ತದೆ. ಈ ಜಲಪಾತದ ಕೆಳಭಾಗದಲ್ಲಿ ರಾಮೇಶ್ವರ ದೇವಸ್ಥಾನವಿದೆ. ಈ ದೇಗುಲದಲ್ಲಿರುವ ಶಿವಲಿಂಗವನ್ನು ಸ್ವಯಂ ಶ್ರೀರಾಮನೇ ಸ್ಥಾಪಿಸಿದ್ದನು ಎನ್ನುವ ಪ್ರತೀತಿ ಇದೆ. ಈ ಜಲಪಾತ ಬೆಂಗಳೂರಿನಿಂದ 247 ಕಿ.ಮೀ. ದೂರದಲ್ಲಿದೆ.

ಚಿತ್ರಕೃಪೆ: wikipedia

ಆನೇಕಲ್

ಆನೇಕಲ್

ಮುತ್ಯಾಲ ಮಡುವಿನ ಹೆಸರು ತೆಲಗು ಭಾಷೆಯಿಂದ ಬಂದಿದೆ. ಮುತ್ಯಾಲ ಎಂದರೆ ಮುತ್ತುಗಳು ಎಂದರ್ಥ. ಇಲ್ಲಿಯ ಜಲಪಾತದಲ್ಲಿ ನೀರಿನ ಹನಿಗಳು ಮುತ್ತಿನಂತೆ ಜಿನುಗುತ್ತವೆ. ಅದಕ್ಕಾಗಿಯೇ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿರುವ ಮುತ್ಯಾಲ ಮಡುವು ಬೆಂಗಳೂರಿನಿಂದ 43 ಕಿ.ಮೀ. ದೂರದಲ್ಲಿದೆ.

ಚಿತ್ರಕೃಪೆ: wikipedia

ಕಾವೇರಿ ನದಿ

ಕಾವೇರಿ ನದಿ

ಹೊಗೆನಕಲ್ ಜಲಪಾತ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು 180 ಕಿ.ಮೀ. ದೂರದಲ್ಲಿದೆ. ಬಂಡೆಯ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ ಹಾಗಾಗಿ ಇದನ್ನು ಹೊಗೆನಕಲ್ ಜಲಪಾತ ಎಂದು ಕರೆಯುತ್ತಾರೆ. ಇದು ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ಇದೆ.

ಚಿತ್ರಕೃಪೆ: wikipedia

ಸೊಗಸಾಗಿದೆ

ಸೊಗಸಾಗಿದೆ

ಬೆಂಗಳೂರಿನಿಂದ 93 ಕಿ.ಮೀ. ದೂರದಲ್ಲಿರುವ ಮೇಕೆದಾಟು. ಕಾವೇರಿ ನದಿ ಆಳವಾದ ಕಂದಕಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರುವಷ್ಟು ಎತ್ತರ. ಅದಕ್ಕಾಗಿಯೇ ಮೇಕೆದಾಟು ಎಂದು ಕರೆಯುತ್ತಾರೆ. ಕಾವೇರಿ ಮತ್ತು ಅರ್ಕಾವತಿ ನದಿಯ ಸಂಗಮದ ವರೆಗೆ ಮಾತ್ರ ವಾಹನದಲ್ಲಿ ಚಲಿಸಬಹುದು. ನಂತರ ನದಿಯನ್ನು ತೆಪ್ಪದಲ್ಲಿ ದಾಟಬೇಕು.

ಚಿತ್ರಕೃಪೆ: wikipedia

ನೂರು ಕಿ.ಮೀ

ನೂರು ಕಿ.ಮೀ

ಈ ಜಲಪಾತ ಬೆಂಗಳೂರಿನಿಂದ 100 ಕಿ.ಮೀ. ದೂರದಲ್ಲಿದೆ. ಅರ್ಕಾವತಿ ನದಿಯಿಂದ ಉಂಟಾಗುವ ಈ ಜಲಪಾತ ಬೇಸಿಗೆ ಕಾಲದಲ್ಲಿ ಅಷ್ಟಾಗಿ ತುಂಬಿ ಹರಿಯುವುದಿಲ್ಲ.

ಚಿತ್ರಕೃಪೆ: Pushkarv

ಕೆ.ಆರ್.ಎಸ್

ಕೆ.ಆರ್.ಎಸ್

ಈ ಜಲಪಾತ ಮಾನವ ನಿರ್ಮಿತ ಜಲಪಾತ. ಇದರ ನೀರು ಕೆ.ಆರ್.ಎಸ್. ಆಣೆಕಟ್ಟಿಗೆ ಹೋಗುತ್ತದೆ. ಎಡಮುರಿ ಜಲಪಾತ ಬಲಮುರಿ ಜಲಪಾತಕ್ಕಿಂತ 1.ಕಿ.ಮೀ. ದೂರದಲ್ಲಿದೆ. ಇಲ್ಲಿ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ಮಾಡಲಾಗಿದೆ.

ಚಿತ್ರಕೃಪೆ: Ashwin Kumar

107 ಅಡಿ ಎತ್ತರ

107 ಅಡಿ ಎತ್ತರ

ಕೊಡಗು ಜಿಲ್ಲೆಯಲ್ಲಿ ಬರುವ ಅಬ್ಬಿ ಜಲಪಾತ 500 ಮೀ.ನಷ್ಟು ದೂರ ಕಾಫಿ ತೋಟದ ಮಧ್ಯೆ ಹರಿದುಕೊಂಡು ಹೋಗುತ್ತದೆ. 107 ಅಡಿ ಎತ್ತರದಿಂದ ಧುಮುಕುವ ಜಲಪಾತವನ್ನು ನೋಡಿ ಸವಿಯುವುದೇ ಒಂದು ಚೆಂದ. ಬೆಂಗಳೂರಿನಿಂದ 270 ಕಿ.ಮೀ. ದೂರದಲ್ಲಿದೆ.

ಚಿತ್ರಕೃಪೆ: wikipedia

ಎರಡನೇ ಅತಿ ಎತ್ತರದ ಜಲಪಾತ

ಎರಡನೇ ಅತಿ ಎತ್ತರದ ಜಲಪಾತ

ಭಾರತದ ಎರಡನೇ ಅತಿ ಎತ್ತರದ ಜಲಪಾತ ಜೋಗ ಜಲಪಾತ. ಸುಮಾರು 292 ಮೀ. ಎತ್ತರದಿಂದ ಭೋರ್ಗರೆವ ಈ ಶರಾವತಿ ನದಿ ನಾಲ್ಕು ಸೀಳಾಗಿ ಧುಮುಕುತ್ತದೆ. ಅದನ್ನು ರಾಜ, ರಾಣಿ, ರೋರರ್, ರಾಕೆಟ್ ಎಂದು ಕರೆಯುತ್ತಾರೆ. ಇದು ಬೆಂಗಳೂರಿನಿಂದ 375 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: wikipedia

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X