Search
  • Follow NativePlanet
Share
» »ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ

ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ

By Vijay

ಮೂಡುಬಿದಿರೆ ಅಥವಾ ಮೂಡಬಿದ್ರಿ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಮುಖ್ಯ ಪಟ್ಟಣ. ಇದು ಮಂಗಳೂರಿನಿಂದ ಪೂರ್ವಕ್ಕೆ ಸುಮಾರು 36 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ತೆರಳಲು ಸಾಕಷ್ಟು ಬಸುಗಳು ಮಂಗಳೂರಿನಿಂದ ದೊರೆಯುತ್ತವೆ. ಕಾರ್ಕಳ-ಮಂಗಳೂರು, ಕಾರ್ಕಳ-ಬಂಟ್ವಾಳ ಮತ್ತು ಧರ್ಮಸ್ಥಳ-ಮಂಗಳೂರು ರಸ್ತೆಗಳ ಮೂಲಕವಾಗಿಯೂ ಮೂಡಬಿದಿರೆಯನ್ನು ತಲುಪಬಹುದಾಗಿದೆ.

"ಜೈನಕಾಶಿ" ಎಂದೆ ಪ್ರಸಿದ್ಧವಾಗಿರುವ ಮೂಡುಬಿದಿರೆಯಲ್ಲಿ ಒಟ್ಟು 18 ದೇವಾಲಯಗಳು, 18 ಜೈನ ಬಸದಿಗಳು ಹಾಗೂ 18 ಕೆರೆಗಳಿರುವುದು ಬಲು ವಿಶೇಷವೆನಿಸಿದೆ. ಇಲ್ಲಿನ ಬಸದಿಗಳಲ್ಲಿ ಸಾವಿರ ಕಂಭಗಳ ಬಸದಿಯು ಅತ್ಯಂತ ಪ್ರಸಿದ್ಧಿಪಡೆದಿದೆ. ಗುರು ಬಸದಿಯು ಜೈನರ ಪವಿತ್ರ ಗ್ರಂಥಗಳಾದ ಶ್ರೀಧವಳ ಮತ್ತು ಮಹಾಧವಳಗಳ ಹಸ್ತಪ್ರತಿಗಳು ಇಲ್ಲಿದ್ದು ಆ ಕಾರಣದಿಂದಾಗಿಯೆ ಇದನ್ನು ಸಿದ್ಧಾಂತ ಬಸದಿ ಎಂತಲೂ ಸಹ ಕರೆಯುತ್ತಾರೆ.

ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ

ಚಿತ್ರಕೃಪೆ: Vaikoovery

ಅವಿಭಜಿತ ದಕ್ಷಿಣ ಕನ್ನಡವನ್ನು ವಿಭಾಗಿಸುವ ಮುನ್ನ ಕಾರ್ಕಳ ತಾಲೂಕಿಗೆ ಸೇರಿದ್ದ ಮೂಡುಬಿದಿರೆಯು ವಿಭಜನೆಯ ನಂತರ ಈಗ ಮಂಗಳೂರು ತಾಲೂಕಿನ ಭಾಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಮೂಡುಬಿದಿರೆಯು ಶ್ರೀಮಂತವಾದ ಇತಿಹಾಸವನ್ನು ಹೊಂದಿದೆ.

ಇತಿಹಾಸ ಕೆದಕಿದಾಗ ತಿಳಿಯುವ ವಿಚಾರವೆಂದರೆ ಹಿಂದೆ ಮೂಡುಬಿದಿರೆಯು ಚೌಟ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿರುವ ಪುರಾತನ ಅರಮನೆಯಲ್ಲಿ ಇಂದಿಗೂ ಅರಸ ವಂಶಸ್ಥರು ವಾಸವಾಗಿದ್ದಾರೆ. ಜೈನ ವ್ಯಾಪಾರಿಗಳೂ ಸಹ ಮೂಡುಬಿದಿರೆಯಲ್ಲಿ ಸಾಕಷ್ಟಿದ್ದು, ದೇಶ ವಿದೇಶಗಳಲ್ಲಿ ವ್ಯಾಪಾರೀ ಸಂಬಂಧವನ್ನು ಹೊಂದಿದ್ದರು. ಇಲ್ಲಿನ ಜೈನ ವ್ಯಾಪಾರಿಗಳು ಸೇರಿ ಕಟ್ಟಿದ ಸಾವಿರ ಕಂಬದ ಬಸದಿಯು ಅತ್ಯಾಕರ್ಷಕ ವಾಸ್ತು ಕೃತಿ.

ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ

ಚಿತ್ರಕೃಪೆ: Vaikoovery

ಮೂಡುಬಿದಿರೆಯು ಹಲವು ನೂರು ವರ್ಷಗಳ ಹಿಂದೆ ಬಿದಿರು ಬೆಳೆಗೆ ಪ್ರಸಿದ್ಧವಾಗಿತ್ತೆಂದು ತಿಳಿದುಬರುತ್ತದೆ. ಪೂರ್ವ ದಿಕ್ಕಿನಲ್ಲಿ ಬಿದಿರು ಬೆಳೆಯುವ ಪಟ್ಟಣವಾದ್ದರಿಂದ ಮೂಡುಬಿದಿರೆ ಎಂಬ ಹೆಸರು ಬಂದಿತೆನ್ನಲಾಗಿದೆ. ಮೂಡು ಎಂದರೆ ಪೂರ್ವ ಎಂದು ಅರ್ಥೈಸಿಕೊಳ್ಳಬಹುದು. ಈ ಹೆಸರಿಗೂ ಮುನ್ನ ಈ ಪಟ್ಟಣವನ್ನು ವೇಣುಪುರ ಎಂದು ಕರೆಯುತ್ತಿದ್ದರು.

ಇನ್ನೂ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಶ್ರೀಮಂತ ಇತಿಹಾಸ ಹೊಂದಿದೆ. ಅದರಲ್ಲೂ ವಿಶೇಷವಾಗಿ ಮಹಾಕವಿ ರತ್ನಾಕರವರ್ಣಿಯ ಹೆಸರು. ನಡುಗನ್ನಡದ ಪ್ರಖ್ಯಾತ ಕಾವ್ಯಗಳಲ್ಲೊಂದಾದ ಭರತೇಶ ವೈಭವ ಈತ ರಚಿಸಿದ ಪ್ರಮುಖ ಕೃತಿ. ಇದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಆಧುನಿಕರಲ್ಲಿ ಶಿಶುಪಾಲ ಪಾರ್ಶ್ವನಾಥ ಶಾಸ್ತ್ರಿ, ವಿದ್ವಾನ್ ಕಾಂತ ರೈ, ಸಿದ್ದಕಟ್ಟೆ ಚಂದ್ರಯ್ಯ ಶೆಟ್ಟಿ ಅಂತಹ ಕೆಲವು ಸಾಹಿತಿಗಳು ಮೂಡಬಿದಿರೆಯವರು.

ಜೈನಕಾಶಿ ಮೂಡುಬಿದಿರೆಗೊಂದು ಪ್ರವಾಸ

ಚಿತ್ರಕೃಪೆ: Gnanapiti

ಸಾಂಸ್ಕೃತಿಕವಾಗಿಯೂ ಸಹ ಮೂಡುಬಿದಿರೆ ಸಾಕಷ್ಟು ಶ್ರೀಮಂತವಾಗಿದೆ ಎಂತಲೆ ಹೇಳಬಹುದು. ಕರಾವಳಿಯ ವಿಶಿಷ್ಟ ಉತ್ಸವಗಳಾದ ನಾಗಾರಾಧನೆ, ಭೂತದ ಕೋಲಗಳಂತಹ ಆಚರಣೆಗಳನ್ನೂ ಯಕ್ಷಗಾನ ಬಯಲಾಟಗಳನ್ನೂ, ನಾಟಕಗಳನ್ನೂ, ಸಂಗೀತ, ನೃತ್ಯ ಕಲೆಗಳನ್ನೂ ಇಲ್ಲಿ ಆಯೋಜಿಸಲಾಗುತ್ತಿರುತ್ತದೆ. ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಜನರನ್ನು ಇವು ಸೆಳೆಯುತ್ತವೆ.

ಆಕರ್ಷಕ ಕಾರ್ಕಳ ಪಟ್ಟಣಕ್ಕೊಂದು ಪವಿತ್ರ ಯಾತ್ರೆ

ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ, ಮಹಾಕಾಳಿ ಮಾರಿಗುಡಿ ಜಾತ್ರೆಗಳನ್ನೂ, ಜೈನರಲ್ಲಿ ಸಾವಿರ ಖಂಬದ ಬಸದಿಯ ವಾರ್ಷಿಕೋತ್ಸವ, ಪದ್ಮಾವತಿ ಅಮ್ಮನವರ ಬಸದಿಯ ನವರಾತ್ರಿ ಉತ್ಸವಗಳನ್ನೂ ಅಲ್ಲದೆ ಮುಸ್ಲಿಮರ ಉರೂಸ್ ಕಾರ್ಯಕ್ರಮಗಳನ್ನೂ ಹಾಗೂ ಕ್ರೈಸ್ತರ ಸಂತ ಮೇರಿ ಉತ್ಸವ, ಕ್ರಿಸ್‍ಮಸ್‍ಗಳನ್ನೂ ಇಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more