
ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಬರೆದ ಒಂದು ಹಾಡು "ಜಯ ಭಾರತ ಜನೈಯ ತನುಜಾತೆ, ಜಯ ಹೆ ಕರ್ನಾಟಕ ಮಾತೆ" ಎಂಬುದು ಎಲ್ಲರಿಗೂ ಗೊತ್ತೆ ಇದೆ. ಇಲ್ಲಿ ಅವರು ಕರ್ನಾಟಕದ ಅಂದ ಚೆಂದಗಳನ್ನು, ನಯ-ವಿನಯತೆಯನ್ನು, ಮಣ್ಣಿನ ಗುಣವನ್ನು ಹಾಡಿ ಹೊಗಳಿದ್ದಾರೆ.
ಅಂದರೆ ನಮಗೆಲ್ಲ ಗೊತ್ತಿರುವ ಹಾಗೆ ಕರ್ನಾಟಕ ಮೊದಲಿನಿಂದಲೂ ಸೌಜನ್ಯಭರಿತ, ವಿನಯಭರಿತ ರಾಜ್ಯವಾಗಿದೆ. ಅಂತೆಯೆ ಕನ್ನಡಿಗರೂ ಸಾಕಷ್ಟು ವಿನಯಶೀಲರು, ವಿಶಾಲ ಹೃದಯದವರು ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಹೀಗಾಗಿ ಇಲ್ಲಿರುವ ಪ್ರೇಕ್ಷಣೀಯ ಸ್ಥಳಗಳೂ ಸಹ ಅಷ್ಟೆ ಅತ್ಯಂತ ಖುಶಿ ನೀಡುವ, ಒತ್ತಡ ಕಡಿಮೆ ಮಾಡುವಂತಹ ಆಕರ್ಷಣೆಗಳಾಗಿ ಗಮನಸೆಳೆಯುತ್ತವೆ.
ದಕ್ಷಿಣ ಭಾರತದ ಕೆಲವು ಅದ್ಭುತ ಕೆರೆಗಳು
ಅದರಂತೆ ಕರ್ನಾಟಕದಲ್ಲಿ ಹರಿದಿರುವ ನದಿಗಳೂ ಸಹ ಅಷ್ಟೆ. ತಮ್ಮ ಕಣ್ಮನ ಸೆಳೆಯುವಂತಹ ನೋಟಗಳಿಂದಾಗಿ, ತಾನು ಹರಿಯುವ ಪಥಗಳಲ್ಲಿ ಎದುರಾಗುವ ಜನವಾಸಿ ಸ್ಥಳಗಳಿಗೆ ಜೀವಧಾರೆಯಾಗಿ, ಪ್ರಕೃತಿಯನ್ನು ಪ್ರೇಮಿಸುವ ಪ್ರವಾಸಿಗರಿಗೆ ಹುರುಪು ತುಂಬುವ ಆಕರ್ಷಣೆಗಳಾಗಿ ಸಾಕಷ್ಟು ಗಮನ ಸೆಳೆಯುತ್ತವೆ.
ಹಾಗಾದರೆ ಪ್ರಸ್ತುತ ಲೇಖನದಲ್ಲಿ ಕರ್ನಾಟಕದಲ್ಲಿ ಹರಿದಿರುವ, ತಮ್ಮ ಅಂದ ಚೆಂದಗಳಿಂದ ಪ್ರವಾಸಿಗರನ್ನು ಆಕರ್ಷಿಸುವ, ಅಲ್ಲದೆ ನಿಮ್ಮಲ್ಲಿ ಅನೇಕರು ಹೆಸರೂ ಕೇಳಿರದ ಕೆಲವು ಆಯ್ದ ಸುಂದರವಾದ ನದಿಗಳ ಕುರಿತು ತಿಳಿಯಿರಿ.

ಕರ್ನಾಟಕದ ಸುಂದರ ನದಿಗಳು:
ಚಂದ್ರಗಿರಿ ನದಿ : ಕರ್ನಾಟಕದ ಕೊಡಗು ಜಿಲ್ಲೆಯ ಕೊಯಿನಾಡು ಎಂಬ ಗ್ರಾಮದ ಪ್ರದೇಶದಲ್ಲಿ ಉಗಮಗೊಳ್ಳುವ ಈ ನದಿಯು ಪಾಯಸ್ವಿನಿ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತದೆ. ಕರ್ನಾಟಕದಲ್ಲಿ ಹುಟ್ಟಿ ಕೇರಳದ ಮೂಲಕ ಅರಬ್ಬಿ ಸಮುದ್ರದೊಳಗೆ ಸೇರುವ ಈ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರಮುಖ ನೀರಿನ ಮೂಲವಾಗಿದೆ. ತುಳುನಾಡು ಹಾಗೂ ಕೇರಳದ ಸಾಂಪ್ರದಾಯಿಕ ಗಡಿಯಾಗಿ ಈ ಸುಂದರ ನದಿ ಕಾರ್ಯನಿರ್ವಹಿಸುತ್ತದೆ.
ಚಿತ್ರಕೃಪೆ: Anikatipalla

ಕರ್ನಾಟಕದ ಸುಂದರ ನದಿಗಳು:
ಬ್ರಹ್ಮಗಿರಿ ನದಿ : ಇದು ಪಶ್ಚಿಮಘಟ್ಟಗಳ ದಟ್ಟ ಹಸಿರಿನಲ್ಲಿ ಸ್ಥಿತವಿರುವ ಬ್ರಹ್ಮಗಿರಿ ವನ್ಯಜೀವಿಧಾಮದಲ್ಲಿ ಹರಿಯುವ ಸುಂದರ ನದಿಯಾಗಿದೆ. ದಟ್ಟಾರಣ್ಯಗಳ ಮಧ್ಯದಲ್ಲಿ ಜುಳು ಜುಳು ಎಮ್ದು ಸುಂದರವಾಗಿ ಹರಿಯುವ ಈ ನದಿ ನೋಡುಗರಿಗೆ ಆನಂದ ನೀಡುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ವನ್ಯಜೀವಿಧಾಮವು ಕೇರಳದ ವಯನಾಡ್ ಜಿಲ್ಲೆಯ ಗಡಿಯೊಂದಿಗೆ ಹೊಂದಿಕೊಂಡು ಚಾಚಿದೆ. ಮಡಿಕೇರಿಯಿಂದ 60 ಕಿ.ಮೀ ಗಳಷ್ಟು ದೂರದಲ್ಲಿದೆ ಈ ಧಾಮ.
ಚಿತ್ರಕೃಪೆ: Join2manish

ಕರ್ನಾಟಕದ ಸುಂದರ ನದಿಗಳು:
ಮಾಲತಿ ನದಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹರಿಯುವ ಮಾಲತಿ ನದಿಯು ಭೀಮನಕಟ್ಟೆ ಎಂಬಲ್ಲಿ ತುಂಗೆಯೊಂದಿಗೆ ವಿಲೀನವಾಗಿ ಹರಿಯುತ್ತದೆ.
ಚಿತ್ರಕೃಪೆ: Chidambara

ಕರ್ನಾಟಕದ ಸುಂದರ ನದಿಗಳು:
ಹಿರಣ್ಯಕೇಶಿ ನದಿ : ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು ಮಹಾರಾಷ್ಟ್ರದ ಕೊಲ್ಹಾಪುರದ ಮೂಲಕ ಕರ್ನಾಟಕ ಪ್ರವೇಶಿಸಿ ಬೆಳಗಾವಿ ಜಿಲ್ಲೆಯಲ್ಲಿ ಹರಿದು ಸಂಕೇಶ್ವರದ ಮುಂದೆ ಘಟಪ್ರಭಾ ನದಿಯೊಂದಿಗೆ ಸೇರುತ್ತದೆ. ರಾಮತೀರ್ಥ ಎಂಬಲ್ಲಿ ಇದು 15-20 ಅಡಿಗಳಷ್ಟು ಎತ್ತರದಿಂದ ಧುಮುಕುತ್ತ ರಾಮತೀರ್ಥ ಜಲಪಾತ ತಾಣವಾಗಿ ಪ್ರಸಿದ್ಧವಾಗಿದೆ. ದಂತಕಥೆಯಂತೆ ಇಲ್ಲಿ ರಾಮನು ತಪಸ್ಸನ್ನಾಚರಿಸಿದ್ದ.
ಚಿತ್ರಕೃಪೆ: Drpansarerahul

ಕರ್ನಾಟಕದ ಸುಂದರ ನದಿಗಳು:
ಕುಮಾರಧಾರಾ ನದಿ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಹರಿದಿರುವ ಪ್ರಮುಖ ಎರಡು ನದಿಗಳ ಪೈಕಿ ಒಂದಾಗಿದೆ ಕುಮಾರಧಾರಾ. ಉಪ್ಪಿನಂಗಡಿಯ ಬಳಿ ಈ ನದಿಯು ನೇತ್ರಾವತಿ ನದಿಯೊಂದಿಗೆ ಸಂಗಮ ಹೊಂದುತ್ತದೆ ಹಾಗೂ ಈ ಸ್ಥಳವು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಧಾರ್ಮಿಕ ಮಹತ್ವವಿರುವ ತಾಣವಾಗಿದೆ. ಪ್ರತೀತಿಯಂತೆ ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆ ತೆರಳುವವರು ಮೊದಲು ಕುಮಾರಧಾರಾದಲ್ಲಿ ಮಿಂದು ನಂತರ ಸುಬ್ರಹ್ಮಣ್ಯನ ದರ್ಶನ ಪಡೆಯುತ್ತಾರೆ.
ಚಿತ್ರಕೃಪೆ: PP Yoonus

ಕರ್ನಾಟಕದ ಸುಂದರ ನದಿಗಳು:
ಯಗಚಿ ನದಿ : ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಉಗಮಗೊಳ್ಳುವ ಈ ನದಿಯು ಹಾಸನ ಜಿಲ್ಲೆಯಲ್ಲಿ ಹರಿದು ಕೊನೆಗೆ ಗೋರೂರು ಬಳಿ ಹೇಮಾವತಿ ನದಿಯಲ್ಲಿ ವಿಲೀನಗೊಳ್ಳುತ್ತದೆ. ಇದಕ್ಕೆ ಯಗಚಿ ಜಲಾಶಯ ನಿರ್ಮಿಸಲಾಗಿದ್ದು ಇದರ ಹಿನ್ನೀರು ತಾಣವು ಪ್ರವಾಸಿ ಕೇಂದ್ರವಾಗಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Harijibhv

ಕರ್ನಾಟಕದ ಸುಂದರ ನದಿಗಳು:
ಪಾಲಾರ್ ನದಿ : ನಂದಿ ಬೆಟ್ಟದ ಪ್ರದೇಶಗಳಲ್ಲಿ ಹುಟ್ಟಿ 90 ಕಿ.ಮೀ ಗಳಷ್ಟು ಕರ್ನಾಟಕದಲ್ಲಿ, 30 ಕಿ.ಮೀ ಗಳಷ್ಟು ಆಂಧ್ರದಲ್ಲಿ ಹಾಗೂ 200 ಕ್ಕೂ ಧಿಕ ಕಿ.ಮೀ ಗಳಷ್ಟು ತಮಿಳುನಾಡಿನಲ್ಲಿ ಹರಿಯುತ್ತದೆ.
ಚಿತ್ರಕೃಪೆ: Sankar.s

ಕರ್ನಾಟಕದ ಸುಂದರ ನದಿಗಳು:
ಪೆನ್ನಾ ನದಿ : ಇದೂ ಸಹ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಹುಟ್ಟಿ ಹರಿದು ಆಂಧ್ರ ಪ್ರವೇಶಿಸಿ ಕೊನೆಗೆ ಬಂಗಾಳ ಕೊಲ್ಲಿಯಲ್ಲಿ ಸಮಾಗಮವಾಗುವ ನದಿಯಾಗಿದೆ. ತನ್ನ ಪಥದಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಈ ನದಿ ಹೊಂದಿದೆ. "ಗ್ರ್ಯಾಂಡ್ ಕ್ಯಾನಿಯನ್ ಆಫ್ ಇಂಡಿಯಾ" ಎಂದು ಕರೆಯಲ್ಪಡುವ ಆಂಧ್ರ ಗಂಡಿಕೋಟಾ ಎಂಬಲ್ಲಿ ಹರಿದಿರುವ ಪೆನ್ನಾ ನದಿ.
ಚಿತ್ರಕೃಪೆ: Janani.manthena

ಕರ್ನಾಟಕದ ಸುಂದರ ನದಿಗಳು:
ಅಘನಾಶಿನಿ ನದಿ : ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಈ ನದಿ ಉಗಮವಾಗುತ್ತದೆ. ಇದು ಉಗಮಗೊಳ್ಳುವ ಸ್ಥಳವನ್ನು ಶಂಕರ ಹೊಂಡ ಎಂದು ಕರೆಯಲಾಗಿದ್ದು, ಇದು ಶಿರಸಿ ಪಟ್ಟಣದಲ್ಲಿದೆ. ನಂತರ ಪಶ್ಚಿಮಾಅಭಿಮುಖವಾಗಿ ಹರಿಯುವ ಈ ಚಿಕ್ಕ ನದಿ ಅಘನಾಶಿನಿ ಎಂಬ ಗ್ರಾಮದ ಬಳಿಯಿರುವ ಅರಬ್ಬಿ ಸಮುದ್ರದಲ್ಲಿ ಸೇರುತ್ತದೆ.
ಚಿತ್ರಕೃಪೆ: Hegdesudarshan

ಕರ್ನಾಟಕದ ಸುಂದರ ನದಿಗಳು:
ಅರ್ಕಾವತಿ ನದಿ : ಚಿಕ್ಕಬಳ್ಳಾಪುರದ ನಂದಿ ಬೆಟ್ಟಗಳಲ್ಲಿ ಹುಟ್ಟುವ ಈ ನದಿಯು ಕಾವೇರಿಯ ಉಪನದಿಯಾಗಿದೆ. ಕನಕಪುರದ ದಕ್ಷಿಣಕ್ಕೆ ಸುಮಾರು 35 ಕಿ.ಮೀ ದೂರದಲ್ಲಿ ಸಂಗಮ ಎಂಬಲ್ಲಿ ಇದು ಕಾವೇರಿಯೊಂದಿಗೆ ಸಮಾಗಮಗೊಳ್ಳುತ್ತದೆ. ಸಂಗಮವು ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಬೆಂಗಳೂರಿನಿಂದ ಸುಮಾರು 100 ಕಿ.ಮೀ ಗಳಷ್ಟು ದೂರದಲ್ಲಿದೆ. ನಂದಿ ಬಟ್ಟದಲ್ಲಿರುವ ಅರ್ಕಾವತಿಯ ಮೂಲ.
ಚಿತ್ರಕೃಪೆ: Tinucherian

ಕರ್ನಾಟಕದ ಸುಂದರ ನದಿಗಳು:
ಮಾರ್ಖಂಡೇಯ ನದಿ : ಘಟಪ್ರಭಾ ನದಿಗಿರುವ ಎರಡು ಉಪನದಿಗಳ ಪೈಕಿ ಮಾರ್ಖಂಡೇಯ ನದಿಯೂ ಸಹ ಒಂದು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಈ ನದಿಯಿಂದ ರುಪಿತವಾದ ಗೊಡಚಿನಮಲ್ಕಿ ಜಲಪಾತವು ನೋಡಲು ಬಲು ಆಕರ್ಷಕವಾಗಿದೆ. ಗೋಕಾಕ್ ನಿಂದ 15 ಕಿ.ಮೀ ಹಾಗೂ ಬೆಳಗಾವಿಯಿಂದ 45 ಕಿ.ಮೀ ಗಳಷ್ಟು ದೂರದಲ್ಲಿದೆ. ಮೊದಲಿಗೆ ಗೊಡಚಿನಮಲ್ಕಿ ಗ್ರಾಮಕ್ಕೆ ತಲುಪಿ ಅಲ್ಲಿಂದ ಎದುರಾಗುವ ಕಾಡು ಪ್ರದೇಶದಲ್ಲಿ ಸುಮಾರು ನಾಲ್ಕು ಕಿ.ಮೀ ನಡೆಯುತ್ತ ಈ ಜಲಪಾತ ತಾಣವನ್ನು ತಲುಪಬೇಕು.
ಚಿತ್ರಕೃಪೆ: Shil.4349

ಕರ್ನಾಟಕದ ಸುಂದರ ನದಿಗಳು:
ಮಹಾದಾಯಿ ನದಿ : ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿರುವ ಭೀಮ್ಗಡ್ ಎಂಬಲ್ಲಿರುವ ಜಾಂಬೋಟಿ ಬಳಿಯ ಬೆಟ್ಟಗುಡ್ಡಗಳಲ್ಲಿ ಹೊರ ಚಿಮ್ಮು ಹಲವಾರು ನೀರಿನ ತೊರೆಗಳಿಂದ ರೂಪಗೊಂಡಿರುವ ಈ ನದಿಯು ಕೇವಲ 77 ಕಿ.ಮೀ ಉದ್ದ ಹೊಂದಿದ್ದು ಹರಿಯುತ್ತ ಉತ್ತರ ಕನ್ನಡ ಹಾಗೂ ಕೊನೆಯದಾಗಿ ಗೋವಾ ಪ್ರವೇಶಿಸುತ್ತದೆ. ಗೋವಾದ ಎರಡು ಜೀವ ನದಿಗಳ ಪೈಕಿ ಒಂದಾದ ಮಹಾದಾಯಿಯನ್ನು ಮಾಂಡೋವಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಅಲ್ಲದೆ ಕೆಲವು ಸ್ಥಳಗಳಲ್ಲಿ ಇದನ್ನು ಗೋಮತಿ ನದಿ ಎಂದೂ ಸಹ ಕರೆಯಲಾಗಿದೆ. ಪ್ರಖ್ಯಾತ ದೂಧ್ ಸಾಗರ್ ಹಾಗೂ ವರಾಪೋಹ ಜಲಪಾತಗಳು ಈ ನದಿಯಿಂದ ರೂಪಗೊಂಡಿವೆ.
ಚಿತ್ರಕೃಪೆ: Milindpk

ಕರ್ನಾಟಕದ ಸುಂದರ ನದಿಗಳು:
ಹೇಮಾವತಿ ನದಿ : ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಬಲ್ಲಾಳ ರಾಯನ ದುರ್ಗದ ಬಳಿ ಉಗಮಗೊಳ್ಳುವ ಈ ನದಿಯು ಹಾಸನ, ತುಮಕೂರುಗಳ ಮೂಲಕ ಹರಿದು ಕೊನೆಯದಾಗಿ ಕೃಷ್ಣರಾಜ ಸಾಗರವನ್ನು ಸೇರುತ್ತದೆ.
ಚಿತ್ರಕೃಪೆ: Abushahin

ಕರ್ನಾಟಕದ ಸುಂದರ ನದಿಗಳು:
ಹಾಸನ ಜಿಲ್ಲೆಯ ಗೋರೂರು ಬಳಿ ಈ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ನಿರ್ಮಿಸಲಾಗಿದ್ದು ಮಳೆಗಾಲದ ಸಮಯದಲ್ಲಿ ಇದು ಸಾಕಷ್ಟು ಜನ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Technofreak

ಕರ್ನಾಟಕದ ಸುಂದರ ನದಿಗಳು:
ನೇತ್ರಾವತಿ ನದಿ : ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ಎಳೆನೀರು ಘಾಟ್ ಎಂಬಲ್ಲಿ ಉಗಮಗೊಂಡು ಹರಿಯುವ ಈ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ. ಧರ್ಮಸ್ಥಳದ ಮೂಲಕವು ಹರಿಯುತ್ತ ಉಪ್ಪಿನಂಗಡಿಯ ಬಳಿ ಕುಮಾರಧಾರಾ ನದಿಯೊಂದಿಗೆ ಸೇರುತ್ತದೆ. ಹಾಗಾಗಿ ಇದನ್ನು ಪವಿತ್ರ ನದಿ ಎಂದು ಪರಿಗಣಿಸಲಾಗಿದೆ. ಮಂಗಳೂರಿನಲ್ಲಿರುವ ನೇತ್ರಾವತಿ ಸೇತುವೆ.
ಚಿತ್ರಕೃಪೆ: Roshan381

ಕರ್ನಾಟಕದ ಸುಂದರ ನದಿಗಳು:
ಕೃಷ್ಣಾ ನದಿ : ಮಹಾರಾಷ್ಟ್ರದ ಪ್ರಖ್ಯಾತ ಮಹಾಬಳೇಶ್ವರದಲ್ಲಿ ಜನಿಸುವ ಈ ನದಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಹರಿದು ಕೊನೆಯದಾಗಿ ಬಂಗಾಳ ಕೊಲ್ಲಿಗೆ ಸೇರುತ್ತದೆ. ತೆಲಂಗಾಣ-ಆಂಧ್ರ ಗಡಿಗಲಲ್ಲಿರುವ ಶ್ರೀಶೈಲಂ ಆಣೆಕಟ್ಟು ಈ ನದಿಗೆ ಅಡ್ಡಲಾಗಿ ಕಟ್ಟಲಾದ ಅದ್ಭುತ ಸೇತುವೆಯಾಗಿದ್ದು ಪ್ರೇಕ್ಷಣೀಯ ಸ್ಥಳವಾಗಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Raj srikanth800

ಕರ್ನಾಟಕದ ಸುಂದರ ನದಿಗಳು:
ತುಂಗಾ ನದಿ : ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟಗಳಲ್ಲಿರುವ ಗಂಗಾಮೂಲ ಎಂಬಲ್ಲಿರುವ ವರಾಹ ಪರ್ವತದಲ್ಲಿ ಈ ನದಿಯು ಉಗಮಗೊಂಡು ಹರಿಯುತ್ತದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳೆರಡರಲ್ಲೂ 147 ಕಿ.ಮೀ ಉದ್ದದ ಈ ನದಿಯು ಹರಿಯುತ್ತದೆ ನಂತರ ಶಿವಮೊಗ್ಗ ಬಳಿಯ ಕೂಡ್ಲಿ ಎಂಬಲ್ಲಿ ಭದ್ರಾ ನದಿಯೊಂದಿಗೆ ಸೇರಿ ನಂತರ ತುಂಗಭದ್ರಾ ನದಿಯಾಗಿ ಮುನ್ನುಗ್ಗುತ್ತದೆ.
ಚಿತ್ರಕೃಪೆ: Shashidhara halady

ಕರ್ನಾಟಕದ ಸುಂದರ ನದಿಗಳು:
ಭದ್ರಾ ನದಿ : ತುಂಗೆಯ ಹಾಗೆ ಚಿಕ್ಕಮಗಳೂರು ಜಿಲ್ಲೆಯ ಗಂಗಾಮೂಲದ ಪರ್ವತ ಶ್ರೇಣಿಯಲ್ಲಿ ಜನಿಸುವ ಈ ನದಿಯು ಪೂರ್ವಾಭಿಮುಖವಾಗಿ ಕಳಸ, ಹೊರನಾಡು, ಬಾಳೆಹೊನ್ನೂರು, ನರಸಿಂಹರಾಜಪುರ, ಭದ್ರಾವತಿ ಮುಲಕ ಹರಿಯುತ್ತ ಕೊನೆಗೆ ಕೂಡ್ಲಿಯಲ್ಲಿ ತುಂಗೆಯೊಂದಿಗೆ ವಿಲೀನಗೊಂಡು ಮುಂದೆ ಹರಿಯುತ್ತದೆ. ಲಕ್ಕವಳ್ಳಿ ಬಳಿ ಇದಕ್ಕೆ ಜಲಾಶಯ ನಿರ್ಮಿಸಲಾಗಿದ್ದು ಅದು ಭದ್ರಾ ಜಲಾಶಯವಾಗಿ ಪ್ರಸಿದ್ಧವಾಗಿದೆ.
ಚಿತ್ರಕೃಪೆ: wikipedia

ಕರ್ನಾಟಕದ ಸುಂದರ ನದಿಗಳು:
ಮಲಪ್ರಭಾ ನದಿ : ಬೆಳಗಾವಿ ಜಿಲ್ಲೆಯ ಪಶ್ಚಿಮಘಟ್ಟಗಳಲ್ಲಿ ಉಗಮಗೊಳ್ಳುವ ಈ ನದಿಯು ಕೃಷ್ಣಾದ ಉಪನದಿಯಾಗಿದ್ದು ಕರ್ನಾಟಕ್ದಲ್ಲಿ ಹರಿದು ಕೂಡಲ ಸಂಗಮ ಕ್ಷೇತ್ರದಲ್ಲಿ ಕೃಷ್ಣೆಯೊಂದಿಗೆ ಸಂಗಮಗೊಳ್ಳುತ್ತದೆ. ಈ ಕ್ಷೇತ್ರ ಲಿಂಗಾಯಿತ ಸಮುದಾಯದವರ ಪವಿತ್ರ ತೀರ್ಥಕ್ಷೇತ್ರವಾಗಿದ್ದು ಇಲ್ಲಿಯ ಭಕ್ತಿ ಭಂಡಾರಿ ಬಸವಣ್ಣನವರು ಐಕ್ಯಗೊಂಡಿದ್ದಾರೆ. ಬೆಳಗಾವಿಯ ನವೀಲುತೀರ್ಥ ಜಲಾಶಯ ಮಲಪ್ರಭಾ ನದಿಗೆ ಕಟ್ಟಲಾದ ಆಣೆಕಟ್ಟಾಗಿದ್ದು ಇದು ರೇಣುಕಾ ಸಾಗರವಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.
ಚಿತ್ರಕೃಪೆ: Manjunath Doddamani Gajendragad

ಕರ್ನಾಟಕದ ಸುಂದರ ನದಿಗಳು:
ಘಟಪ್ರಭಾ ನದಿ : ಕೃಷ್ಣಾ ನದಿಯ ಉಪನದಿಯಾದ ಘಟಪ್ರಭಾ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪಶ್ಚಿಮಘಟ್ಟಗಳಲ್ಲಿ ಉಗಮಗೊಂಡು ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಜಲಪಾತ ಘಟಪ್ರಭಾ ನದಿಯಿಂದ ರೂಪಗೊಂಡಿರುವ ಅದ್ಭುತ ಪ್ರವಾಸಿ ತಾಣವಾಗಿದೆ.
ಚಿತ್ರಕೃಪೆ: Shishirmk

ಕರ್ನಾಟಕದ ಸುಂದರ ನದಿಗಳು:
ಶರಾವತಿ ನದಿ : ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯೆ ಹರಿದು ಕೊನೆಯದಾಗಿ ತನ್ನ ಅಂತಿಮ ಸ್ಥಳವಾದ ಅರಬ್ಬಿ ಸಮುದ್ರದಲ್ಲಿ ಸಂಗಮ ಹೊಂದುವ ಸುಂದರ ನದಿ ಶರಾವತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್ನುವಂತೆ ಈ ಸುಂದರ ನದಿಯು ಕೇವಲ 120 ಕಿ.ಮೀ ಉದ್ದದ ಹರಿಯುವ ಪಥವನ್ನು ಹೊಂದಿದ್ದರೂ, ವಿಶ್ವವೆ ನಿಬ್ಬೆರಗಾಗಿ ನೋಡುವಂತೆ ಮಾಡುವ ಜೋಗ ಜಲಪಾತದ ನಿರ್ಮಾತೃ.
ಚಿತ್ರಕೃಪೆ: Prakashmatada

ಕರ್ನಾಟಕದ ಸುಂದರ ನದಿಗಳು:
ಕಬಿನಿ ನದಿ : ಕಬಿನಿಯು ಒಂದು ನದಿಯಾಗಿದ್ದು ಕೇರಳದ ವಯನಾಡ್ ನಲ್ಲಿ ಉಗಮಗೊಳ್ಳುತ್ತದೆ. ಕಪಿಲಾ ಎಂತಲೂ ಕರೆಯಲ್ಪಡುವ ಕಬಿನಿಯು ಕರ್ನಾಟಕದ ನಾಗರಹೊಳೆ ಅಭಯಾರಣ್ಯದ ಮೂಲಕ ಸಾಗುತ್ತ ಮುಂದುವರೆಯುತ್ತದೆ. ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಗರಿ ಗೇದರಿದ ಶ್ರೀಮಂತಮಯ ವನ್ಯಜೀವನವು ಹಲವು ವೈವಿಧ್ಯತೆಗಳಿಂದ ಕೂಡಿದ್ದು ಪ್ರವಾಸಿಗರನ್ನು ಅಪಾರವಾಗಿ ಸೆಳೆಯುತ್ತದೆ.
ಚಿತ್ರಕೃಪೆ: Manoj Vasanth

ಕರ್ನಾಟಕದ ಸುಂದರ ನದಿಗಳು:
ಕಾಳಿ ನದಿ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕುಶಾವಳಿ ಎಂಬ ಗ್ರಾಮದಲ್ಲಿ ಉಗಮ ಸ್ಥಾನ ಹೊಂದಿರುವ ಈ ನದಿಯು ಉತ್ತರ ಕನ್ನಡ ಜಿಲ್ಲೆಯ ಜೀವನದಿಯಾಗಿದೆ.
ಚಿತ್ರಕೃಪೆ: solarisgirl

ಕರ್ನಾಟಕದ ಸುಂದರ ನದಿಗಳು:
ಕಾವೇರಿ ನದಿ : ಕಾವೇರಿಯು ಕರ್ನಾಟಕ ಭಾಗದ ಗಂಗೆಯಂತೆ ಪಾವಿತ್ರ್ಯತೆ ಹೊಂದಿರುವ ನದಿಯಾಗಿದೆ. ಕರ್ನಾಟಕದ ಜೀವ ನದಿ ಎಂತಲೂ ಸಹ ಕರೆಯಲ್ಪಡುವ ಕಾವೇರಿಯು ಭಾರತದ ಏಳು ಪವಿತ್ರ ನದಿಗಳ ಪೈಕಿ ಒಂದಾಗಿದೆ. ಒಟ್ಟಾರೆ 745 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿರುವ ಕಾವೇರಿಯು ಕರ್ನಾಟಕ ರಾಜ್ಯದ ಕೊಡಗಿನ ತಲಕಾವೇರಿಯಲ್ಲಿ ಉಗಮಗೊಂಡು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಜನರ ಬಾಯಾರಿಕೆ, ಆಸೆ - ಆಕಾಂಕ್ಷೆಗಳನ್ನು ನಿಸ್ವಾರ್ಥತೆಯಿಂದ ತಿರಿಸುತ್ತ ತನ್ನ ಹರಿಯುವ ಸೇವೆಯನ್ನು ಮುಂದುವರೆಸಿ ಕೊನೆಗೆ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಸಮಾಗಮಗೊಳ್ಳುತ್ತಾಳೆ.
ಚಿತ್ರಕೃಪೆ: Ashwin Kumar