» »ಕರ್ನಾಟಕದ ಈ ಜಲಪಾತಗಳು ನಿಮಗೆ ಗೊತ್ತಾ?

ಕರ್ನಾಟಕದ ಈ ಜಲಪಾತಗಳು ನಿಮಗೆ ಗೊತ್ತಾ?

Written By:

ಮಳೆಗಾಲದ ಮುಖ್ಯ ಆಕರ್ಷಣೆಗಳು ಜಲಪಾತಗಳು. ಇನ್ನು ನಮ್ಮ ನಾಡಿನಲ್ಲಿ ಜಲಪಾತ ತಾಣಗಳಿಗೇನೂ ಕಮ್ಮಿ ಇಲ್ಲ. ನಮ್ಮಲ್ಲಿನ ಕೆಲ ಜಲಪಾತಗಳು ದೇಶದಲ್ಲೆ ಪ್ರಸಿದ್ಧಿ ಪಡೆದಿವೆ. ನಮ್ಮ ನಾಡಿನ ಕೆಲ ಸುಪ್ರಸಿದ್ಧ ಜಲಪಾತಗಳ ಕುರಿತು ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ.

ಆದರೆ ಪ್ರಸಿದ್ಧಿ ಪಡೆದ ಜಲಪಾತಗಳ ಹೊರತಾಗಿ ಇನ್ನೂ ಕೆಲ ಜಲಪಾತಗಳು ನಮ್ಮಲ್ಲಿವೆ. ಬಹುಶಃ ಈ ಜಲಪಾತಗಳು ಇನ್ನುಳಿದ ಜಲಪಾತಗಳಂತೆ ಹೆಸರುವಾಸಿಯಾಗಿಲ್ಲ. ಆದ್ದರಿಂದ ಇವುಗಳ ಕುರಿತು ಅನೇಕರಿಗೆ ತಿಳಿದಿಲ್ಲ. ಇಂತಹ ಕೆಲ ಕರ್ನಾಟಕದ ಕೆಲ ವಿಶಿಷ್ಟ ಜಲಪಾತಗಳ ಕುರಿತು ಈ ಲೇಖನ ತಿಳಿಯಪಡಿಸುತ್ತದೆ.

ಹೇಗೂ ಮಳೆಗಾಲ ಬಂದಾಗಿದೆ. ಈ ಜಲಪಾತಗಳು ಗರಿಗೆದರಲು ಪ್ರಾರಂಭಿಸಿವೆ. ಏಕೆ ತಡ ಸಮಯ ಸಿಕ್ಕಾಗ ಈ ತಾಣಗಳಿಗೆ ಹೊರಡಿ ಹಾಗೂ ಈ ಸುಂದರ ಅಷ್ಟೊಂದಾಗಿ ಹೆಸರು ಕೆಳಲ್ಪಡದ ಜಲಪಾತ ತಾಣಗಳಿಗೆ ಭೇಟಿ ನೀಡಿ. ಈ ಲೇಖನದಲ್ಲಿ ಹೆಚ್ಚಾಗಿ ಗುರುತರವಲ್ಲದ ಜಲಪಾತಗಳ ಕುರಿತು ಮಾತ್ರವೆ ತಿಳಿಸಲ್ಪಟ್ಟಿದೆ.

ಗೊಡಚಿನಮಲ್ಕಿ:

ಗೊಡಚಿನಮಲ್ಕಿ:

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಳಿಯಲ್ಲಿದೆ ಈ ಸುಂದರ ಹಾಗೂ ಮನಮೋಹಕ ಜಲಪಾತ. ಮಳೆಗಾಲದ ಸಂದರ್ಭದಲ್ಲಂತೂ ಸೊಗಸಾಗಿ ಸಿಂಗರಿಸಲ್ಪಟ್ಟು ಮೆಟ್ಟಿಲುಗಳ ಆಕಾರದಲ್ಲಿ ಹರಿಯುತ್ತ ಕೊನೆಯದಾಗಿ ರಭಸದಿಂದ ಭೂಮಿಗೆ ಧುಮುಕುವ ದೃಶ್ಯ ಎಂಥವರನ್ನೂ ಆಶರ್ಯಚಕಿತರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: Shil.4349

ಸೊಗಲ್:

ಸೊಗಲ್:

ಸೊಗಲ್ ಬೆಳಗಾವಿ ಜಿಲ್ಲೆಯಲ್ಲಿರುವ ಒಂದು ಯಾತ್ರಾ ಸ್ಥಳವಾಗಿದೆ. ಸುಗೊಳ ಮುನಿ ಎಂಬುವವರು ಹಿಂದೆ ಇಲ್ಲಿ ನೆಲೆಸಿದ್ದರಿಂದ ಇದಕ್ಕೆ ಸೊಗಲ್ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಅಲ್ಲದೆ ಮತ್ತೊಂದು ದಂತ ಕಥೆಯ ಪ್ರಕಾರ, ಇದು ಶಿವ-ಪಾರ್ವತಿಯರು ವಿವಾಹವಾದ ಸ್ಥಳ. ಇಲ್ಲಿಯೂ ಕೂಡ ಒಂದು ಜಲಪಾತವನ್ನು ಕಾಣಬಹುದಾಗಿದೆ.

ಸಾತೋಡಿ:

ಸಾತೋಡಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಕಲ್ಲರಮನೆ ಘಾಟ್ ಹತ್ತಿರ ಈ ಸುಂದರವಾದ ಜಲಪಾತವನ್ನು ಕಾಣಬಹುದು. ಸುಮಾರು 50 ಅಡಿಗಳಷ್ಟು ಎತ್ತರದಿಂದ ಧುಮುಕುವ ಇದರ ನೀರು ಹಲವು ಅಜ್ಞಾತ ನೀರಿನ ಮೂಲಗಳಿಂದ ರೂಪಗೊಂಡಿದೆ.

ಚಿತ್ರಕೃಪೆ: Adnan Alibaksh

ಮಲ್ಲಳ್ಳಿ:

ಮಲ್ಲಳ್ಳಿ:

ಮಲ್ಲಳ್ಳಿ ಜಲಪಾತ, ಕೊಡಗು ಜಿಲ್ಲೆಯಲ್ಲಿರುವ ಒಂದು ಸುಂದರ ಜಲಪಾತ. ಪುಷ್ಪಗಿರಿ ಬೆಟ್ಟಗಳ ಕಾಲ್ತುದಿಯಲ್ಲಿ ಈ ಜಲಪಾತ ತಾಣವಿದ್ದು ಸೋಮವಾರಪೇಟೆಯಿಂದ ಸುಮಾರು 25 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: Premnath Thirumalaisamy

ಚುಂಚಿ:

ಚುಂಚಿ:

ಬೆಂಗಳೂರು ನಗರ ಪ್ರದೇಶದಿಂದ ಸುಮಾರು 85 ಕಿ.ಮೀ ಗಳಷ್ಟು ದೂರದಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುಂಚಿ ಎಂಬ ಹಳ್ಳಿಯಲ್ಲಿ ಈ ಜಲಪಾತವಿದೆ. ಕನಕಪುರ ರಸ್ತೆಯ ಮೇಲೆ ಮಾರ್ಗ ಫಲಕಗಳನ್ನು ಗಮನಿಸುತ್ತ ಮೇಕೆದಾಟುವಿಗೆ ತೆರಳಿ ನಂತರ ಅಲ್ಲಿಂದ ಆರು ಕಿ.ಮೀ ದೂರದಲ್ಲಿರುವ ಈ ಚುಂಚಿ ಜಲಪಾತಕ್ಕೆ ತೆರಳಬಹುದು. ನಿಮ್ಮ್ಮದೆ ಆದ ಸ್ವಂತ ವಾಹನವಿದ್ದಲ್ಲಿ ಉತ್ತಮ. ಅಲ್ಲದೆ ಈ ಜಲಪಾತ ತಾಣಕ್ಕೆ ತೆರಳಲು ಟ್ರೆಕ್ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಮುಂದೆ ಇದೆ ನದಿಯು (ಅರ್ಕಾವತಿ) ಕಾವೇರಿಯೊಂದಿಗೆ ಸೇರಿ ಸಂಗಮವಾಗುತ್ತದೆ.

ಚಿತ್ರಕೃಪೆ: lohit v

ಮುತ್ಯಾಲಮಡುವು:

ಮುತ್ಯಾಲಮಡುವು:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮುತ್ಯಾಲಮಡುವು ಒಂದು ಆಕರ್ಷಕ ಪ್ರವಾಸಿ ಕೇಂದ್ರವಾಗಿದೆ. ಇದೆ ಹೆಸರಿನ ಜಲಪಾತ ಇಲ್ಲಿ ಕಾಣಬಹುದು.

ಚಿತ್ರಕೃಪೆ: Natesh Ramasamy

ಚೆಲಾವರ:

ಚೆಲಾವರ:

ಕೊಡಗಿನ ವಿರಾಜಪೇಟೆಯಿಂದ 16 ಕಿ.ಮೀ ದೂರದಲ್ಲಿದೆ ಚೆಲಾವರ ಜಲಪಾತ. ಸ್ಥಳೀಯರಿಂದ ಎಂಬೆಪಾರೆ ಅಂದರೆ ಆಮೆ ಬಂಡೆ ಎಮ್ದು ಕರೆಯಲ್ಪಡುವ ಈ ಜಲಪಾತ ನೋಡಲು ಮನಮೋಹಕವಾಗಿದ್ದು ಸುತ್ತಮುತ್ತಲಿನ ಪರಿಸರ ಹಚ್ಚ ಹಸಿರಿನ ವಾತಾವರಣದಿಂದ ಕೂಡಿದೆ.

ಚಿತ್ರಕೃಪೆ: V.v

ಒನಕೆ ಅಬ್ಬಿ:

ಒನಕೆ ಅಬ್ಬಿ:

ಒನಕೆ ಅಬ್ಬಿ ಜಲಪಾತವು 400 ಅಡಿಗಳಷ್ಟು ಎತ್ತರವಿದ್ದು, ಪಶ್ಚಿಮ ಘಟ್ಟದ ಆಗುಂಬೆಯ ಬಳಿಯಲ್ಲಿದೆ. ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಸುಮಾರು ಐದು ಕಿ.ಮೀ ಗಳಷ್ಟು ಟ್ರೆಕ್ ಮಾಡಿ ಈ ಜಲಪಾತ ತಾಣವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Mylittlefinger

ಬರ್ಕಣ:

ಬರ್ಕಣ:

ಪಶ್ಚಿಮ ಘಟ್ಟದ ಆಗುಂಬೆ ಬಳಿಯಲ್ಲೆ ಮತ್ತೊಂದು ನಯನ ಮನೋಹರವಾದ ಜಲಪಾತವನ್ನು ಕಾಣಬಹುದಾಗಿದೆ. ಅದೆ ಬರ್ಕಣ ಜಲಪಾತ. ಸುಮಾರು 850 ಅಡಿಗಳಷ್ಟು ಎತ್ತರವನ್ನು ಈ ಜಲಪಾತ ಹೊಂದಿದೆ. ದೂರದಿಂದಲೂ ಕೂಡ ಭವ್ಯವಾದ ನೋಟವನ್ನು ನೋಡುಗರಿಗೆ ಕರುಣಿಸುತ್ತದೆ.

ಚಿತ್ರಕೃಪೆ: Lakshmipathi23

ಕೂಡ್ಲು ತೀರ್ಥ:

ಕೂಡ್ಲು ತೀರ್ಥ:

ಕೂಡ್ಲು ತೀರ್ಥ ಜಲಪಾತವು ಹೆಬ್ರಿಯಿ೦ದ 20 ಕಿ.ಮೀ. ದೂರದಲ್ಲಿದೆ. ಆಗುಂಬೆಯ ದಟ್ಟ ಕಾಡಿನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಅತಿ ರಮಣೀಯ ಪ್ರವಾಸಿ ತಾಣವೇ ಈ ಕೂಡ್ಲು ತೀರ್ಥ. ರಸ್ತೆ ಸ೦ಪರ್ಕದಿ೦ದ 4 ಕಿ.ಮೀ. ದೂರದಲ್ಲಿದ್ದು, ಚಾರಣದ ಈ ಜಲಪಾತ ತಾಣಕ್ಕೆ ತಲುಪಬಹುದು.

ಚಿತ್ರಕೃಪೆ: Balajirakonda

ಅಣಶಿ:

ಅಣಶಿ:

ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುತ್ತದೆ. ಈ ಜಲಪಾತವು ಸುಮಾರು 150 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ. ಇದು ಕಾರವಾರ-ದಾಂಡೇಲಿ ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು 32 ಕಿ.ಮೀ ದೂರದಲ್ಲಿ ರಸ್ತೆಯ ಒಂದು ಬದಿಯಲ್ಲಿ ರೂಪಗೊಂಡಿದೆ. ವಿಶೇಷವೆಂದರೆ ಇದು ಮಳೆಗಾಲದ ಜಲಪಾತ. ಪ್ರತಿ ಮಳೆಗಾಲದ ಸಂದರ್ಭದಲ್ಲಿಈ ಜಲಪಾತ ನೋಡಲು ಸಿಗುತ್ತದೆ. ಇದು ಕದ್ರಾ ಆಣೆಕಟ್ಟೆಯಿಂದ ಸುಮಾರು 8 ಕಿ.ಮೀ. ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Lakshmipathi23

ಮಾಣಿಕ್ಯಧಾರಾ:

ಮಾಣಿಕ್ಯಧಾರಾ:

ಮಾಣಿಕ್ಯಧಾರಾ ಜಲಪಾತ ದತ್ತಾತ್ರೇಯ ಪೀಠವಿರುವ ಬಾಬಾಬುಡನ್‌ಗಿರಿಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ ರೂಪಗೊಂಡಿದೆ. ಬಾಬಾ ಬುಡನ್‍ಗಿರಿ ಪ್ರದೇಶದ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಒಂದು ಸಣ್ಣ ನೀರಿನ ತೊರೆಯು ಸುಮಾರು 100 ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸಿದೆ. ಈ ಜಲಪಾತದ ನೀರು ಮಾಣಿಕ್ಯದ ಮಣಿಗಳಂತೆ ಭುವಿಗೆ ಧುಮುಕುವುದರಿಂದ ಇದಕ್ಕೆ ಮಾಣಿಕ್ಯಧಾರಾ ಎಂಬ ಹೆಸರು ಬಂದಿದೆ. ಇದು ಚಿಕ್ಕಮಗಳೂರು ನಗರದಿಂದ ಸುಮಾರು 40 ಕಿಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Lakshmipathi23

ಕೋಸಳ್ಳಿ:

ಕೋಸಳ್ಳಿ:

ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಚಲಿಸುತ್ತ ಸುಮಾರು 8 ಕಿ.ಮೀ ಗಳಷ್ಟು ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು 3 ಕಿ.ಮೀ ಕಾಡುಮಾರ್ಗದಲ್ಲಿ ನಡೆದರೆ ಕೋಸಳ್ಳಿ ಜಲಪಾತ ಕಾಣಸಿಗುತ್ತದೆ. ಕೋಸಳ್ಳಿ ಜಲಪಾತವು 3 ರಿಂದ 5 ಹಂತಗಳಲ್ಲಿ ಧುಮುಕುತ್ತದೆ.

ಚಿತ್ರಕೃಪೆ: Vishuachar

ಉಂಚಳ್ಳಿ:

ಉಂಚಳ್ಳಿ:

ಲುಷಿಂಗ್ಟನ್ ಜಲಪಾತ ಎಂತಲೂ ಕರೆಯಲ್ಪಡುವ ಉಂಚಳ್ಳಿ ಜಲಪಾತ ಅಘನನಾಶಿನಿ ನದಿಯಿಂದ ರೂಪಗೊಂಡಿರುವ ಜಲಪಾತವಾಗಿದೆ. ಇದರ ಎತ್ತರ ಸುಮಾರು 116 ಮೀಟರ್. ಈ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Sukruth

ಬೆಣ್ಣೆ ಹೊಳೆ:

ಬೆಣ್ಣೆ ಹೊಳೆ:

ಬೆಳ್ಳನೆಯ ಬೆಣ್ಣೆಯ ಮುದ್ದೆಯಂತೆ ಧಬ ಧಬ ಧುಮುಕುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಳಿಯಿರುವ ಈ ಜಲಪಾತದ ಹೆಸರೆ ಬೆಣ್ಣೆ ಹೊಳೆ ಜಲಪಾತ. ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತದ ಎತ್ತರ ಸುಮಾರು 200 ಅಡಿಗಳು.

ಚಿತ್ರಕೃಪೆ: Palachandra

ಕಲ್ಹತ್ತಿಗಿರಿ:

ಕಲ್ಹತ್ತಿಗಿರಿ:

ಕಲ್ಹತ್ತಿಗಿರಿ ಜಲಪಾತವು ಬೀರೂರು ಹತ್ತಿರವಿರುವ ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿಗೆ ಹೋಗುವ ಮಾರ್ಗದಲ್ಲಿ ಕೆಮ್ಮಣ್ಣುಗುಂಡಿ ತಲುಪುವ ಸುಮಾರು 10 ಕಿ.ಮೀ ಮೊದಲು ಸಿಗುತ್ತದೆ. ಕೆಮ್ಮಣ್ಣುಗುಂಡಿ ಮುಖ್ಯರಸ್ತೆಯಿಂದ 1 ಕಿ.ಮೀ ಒಳಗಡೆ ಚಲಿಸಿದರೆ ಜಲಪಾತವನ್ನು ತಲುಪಬಹುದು. ಜಲಪಾತವು ಸುಮಾರು 300 ಅಡಿ ಎತ್ತರದಿಂದ ಹಂತಹಂತವಾಗಿ ಧರೆಗೆ ಧುಮುಕುತ್ತದೆ.

ಚಿತ್ರಕೃಪೆ: Suhph

ವಿಭೂತಿ:

ವಿಭೂತಿ:

ಉತ್ತರ ಕನ್ನಡ ಜಿಲ್ಲೆಯ ಯಾಣ ಎಂಬ ಹಳ್ಳಿಯು ತನ್ನಲ್ಲಿರುವ ವಿಶಿಷ್ಟ ಬಗೆಯ ಶಿಲೆಯ ಬೆಟ್ಟಕ್ಕಾಗಿ ಹೆಸರುವಾಸಿಯಾಗಿದೆ. ಈ ಹಳ್ಳಿಯಲ್ಲಿ ಕಂಡುಬರುವ ಉಲ್ಕಾ ಶಿಲೆಯ ಬೆಟ್ಟವಲ್ಲದೆ ವಿಭೂತಿ ಜಲಪಾತವೂ ಕೂಡ ಖ್ಯಾತಿ ಪಡೆದಿದೆ. ವಿಭೂತಿ ಅಥವಾ ಭಸ್ಮದಂತೆ ಈ ಜಲಪಾತದ ನೀರು ಕಂಡುಬರುವುದರಿಂದ ಇದಕ್ಕೆ ವಿಭೂತಿ ಜಲಪಾತ ಎಂದು ಕರೆಯಲಾಗಿದೆ. ಅಲ್ಲದೆ ಇದರ ಸುತ್ತ ಮುತ್ತಲು ಸುಣ್ಣದ ಕಲ್ಲುಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Shash89

ದೇವರಗುಂಡಿ:

ದೇವರಗುಂಡಿ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಎಂಬ ಹಳ್ಳಿಯ ಸುತ್ತಲಿನ ಸುಂದರವಾದ ಪಶ್ಚಿಮ ಘಟ್ಟದ ಮೈಸಿರಿಯಲ್ಲಿ ಈ ಜಲಪಾತವನ್ನು ಕಾಣಬಹುದಾಗಿದೆ. ಮನುಷ್ಯನ ಚಲನವಲನ ಪ್ರದೇಶದಿಂದ ಅತ್ಯಂತ ದೂರವಿರುವುದರಿಂದ ಇದು ಪಾವಿತ್ರ್ಯತೆ ಹಾಗೂ ಶುದ್ಧ ಪರಿಸರವನ್ನು ಕಾದುಕೊಂಡಿದೆ. ಇದನ್ನು ತಲುಪಲು ತೊಡಿಕಾನದ ಮಲ್ಲಿಕಾರ್ಜುನ ದೇವಸ್ಥಾನದಿಂದ ಪಟ್ಟಿ ಬೆಟ್ಟದೆಡೆ ಸುಮಾರು 1.5 ಕಿ.ಮೀ ಚಲಿಸಿ ಅಡಿಕೆ ತೋಟದ ಮೂಲಕ ಸಾಗಿ ನೋಡಬಹುದು. ಈ ಜಲಪಾತದ ನೀರಿನ ಆಳ ತಿಳಿಯದೆ ಇರುವುದರಿಂದ ಇದರಲ್ಲಿಳಿಯುವುದು ಅಪಾಯಕಾರಿ.

ಸಿರಿಮನೆ:

ಸಿರಿಮನೆ:

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶೃಂಗೇರಿ ಬಳಿಯಲ್ಲಿ ಕಿಗ್ಗ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮದಿಂದ ಐದು ಕಿ.ಮೀ ದೂರಕ್ಕೆ ಸಾಗಿದರೆ ಸಿಗುವುದೇ ಸಿರಿಮನೆ ಜಲಪಾತ. ಆದರೆ ಇಲ್ಲಿಗೆ ಸಾಗುವಾಗ ಸಾಕಷ್ಟು ಜಿಗಣೆಗಳಿರುವುದರಿಂದ ಎಚ್ಚರಿಕೆ ವಹಿಸುವುದು ಉತ್ತಮ.

ಚಿತ್ರಕೃಪೆ: Vaikoovery

ಬಲಮುರಿ ಮತ್ತು ಎಡಮುರಿ:

ಬಲಮುರಿ ಮತ್ತು ಎಡಮುರಿ:

ಬಲಮುರಿ ಮತ್ತು ಎಡಮುರಿ ಎರಡು ಸುಂದರ ಜಲಪಾತಗಳಾಗಿದ್ದು ಮೈಸೂರಿನಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹೋಗುವ ಮುಖ್ಯ ದಾರಿಯಿಂದ ಸುಮಾರು ಮೂರು ಕಿ.ಮೀ ದೂರದಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Mahesh Telkar

ಹಿಡ್ಲುಮನೆ:

ಹಿಡ್ಲುಮನೆ:

ಕರ್ನಾಟಕದ ಸುಂದರ ಟ್ರೆಕ್ಕಿಂಗ್ ಶಿಖರವಾದ ಕೊಡಚಾದ್ರಿಯಿಂದ ಐದು ಕಿ.ಮೀ ದೂರದಲ್ಲಿ ಹಿಡ್ಲುಮನೆ ಜಲಪಾತವಿದೆ. ಕೊಡಚಾದ್ರಿಯಿಂದ ಅಮೋಘವಾದ ಚಾರಣದ ಮೂಲಕ ಈ ಜಲಪಾತ ತಣವನ್ನು ತಲುಪಬಹುದು.

ಚಿತ್ರಕೃಪೆ: Shrikanth n

ಕಡಾಂಬಿ:

ಕಡಾಂಬಿ:

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪ್ರದೇಶದಲ್ಲಿ ಈ ಸುಂದರ ಕಡಾಂಬಿ ಜಲಪಾತವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Karunakar Rayker

Please Wait while comments are loading...