Search
  • Follow NativePlanet
Share
» »ಲಕ್ಷ ಲಕ್ಷ ದೀಪಗಳ ಫಳ ಫಳ ಧರ್ಮಸ್ಥಳದ ದೀಪೋತ್ಸವ

ಲಕ್ಷ ಲಕ್ಷ ದೀಪಗಳ ಫಳ ಫಳ ಧರ್ಮಸ್ಥಳದ ದೀಪೋತ್ಸವ

By Vijay

ಕರ್ನಾಟಕದ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳವು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ಪಶ್ಚಿಮಕ್ಕೆ ಸುಮಾರು 300 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಈ ಕ್ಷೇತ್ರಕ್ಕೆ ತೆರಳಲು ಸಾಕಷ್ಟು ಬಸ್ಸುಗಳು ಹಾಗು ರೈಲಿನ ಅನುಕೂಲವೂ ಇದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಆಸ್ಥಿಕರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಜೈನ ಆಡಳಿತ ಮಂಡಳಿಯ ಕಾರ್ಯ ನಿರ್ವಹಣೆಯಿರುವ ಈ ದೇವಸ್ಥಾನದಲ್ಲಿ ಶೈವ ಸಮುದಾಯದ ಶಿವನು ಮಂಜುನಾಥನಾಗಿ ಸಕಲ ವಿಧಿವತ್ತಾದ ಸಂಪ್ರದಾಯಗಳಿಂದ ಪೂಜಿಸಲ್ಪಡುತ್ತಾನೆ. ಈ ಕ್ಷೇತ್ರದ ಮಹಾತ್ಮೆ ಎಷ್ಟಿದೆ ಎಂದರೆ ಸತ್ಯ ನುಡಿಯಲು ಈ ಕ್ಷೇತ್ರದ ಮಂಜುನಾಥನನ್ನು ಆಧಾರವಾಗಿಟ್ಟುಕೊಂಡು ಪ್ರಮಾಣ, ಆಣೆಗಳನ್ನು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಯಾರು ಸುಳ್ಳು ಹೇಳುತ್ತಾರೊ ಅವರಿಗೆ ಕೆಡುಕಾಗುವುದು ಎಂದು ನಂಬಲಾಗಿದೆ.

ಲಕ್ಷ ಲಕ್ಷ ದೀಪಗಳ ಫಳ ಫಳ ಧರ್ಮಸ್ಥಳದ ದೀಪೋತ್ಸವ

ವರ್ಷದಲ್ಲಿ ಬರುವ ಹಿಂದು ಧರ್ಮದ ಪ್ರತಿಯೊಂದು ಹಬ್ಬಗಳನ್ನು ಇಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಹೀಗೆ ಅದ್ದೂರಿಯಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಕಾರ್ತಿಕ ಮಾಸದಲ್ಲಿ ವಾರ್ಷಿಕವಾಗಿ ಜರುಗುವ ಲಕ್ಷ ದೀಪೋತ್ಸವವು ಕೂಡ ಪ್ರಮುಖವಾದುದು. ದೀಪಗಳ ಉತ್ಸವವಾದ ದೀಪಾವಳಿಯ ಸಂದರ್ಭದಲ್ಲೆ ಇದು ಜರುಗುವುದು ಇನ್ನೂ ವಿಶೇಷ. ಐದು ದಿನಗಳ ಕಾಲ ಸತತವಾಗಿ ನಡೆಯುವ ಈ ಲಕ್ಷ ದೀಪಗಳ ಉತ್ಸವವನ್ನು ಕಣ್ತುಂಬಿಸಿಕೊಳಲು ರಾಜ್ಯಾದ್ಯಂತ ಸಹಸ್ರಾರು ಜನರು ದಕ್ಷಿಣ ಕನ್ನಡ ಜಿಲ್ಲೆಯ ಈ ಕ್ಷೇತ್ರಕ್ಕೆ ಧಾವಿಸಿ ಬರುತ್ತಾರೆ.

ಸಾಮಾನ್ಯವಾಗಿ ದೀಪಾವಳಿಯು ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿ ಮಾನವ ಕುಲವನ್ನು ಉದ್ಧರಿಸಿದುದರ ಸಂಕೇತವಾಗಿ ಆಚರಿಸಲ್ಪಡುವ ಒಂದು ವಿಜಯೋತ್ಸವದ ಹಬ್ಬ. ದೀಪಗಳು ಹೇಗೆ ಅಂಧಕಾರವನ್ನು ತೊಲಗಿಸಿ ಬೆಳಕನ್ನು ಕರುಣಿಸುತ್ತದೊ ಅದೇ ರೀತಿಯಾಗಿ ನಾವೂ ಕೂಡ ಪ್ರೀತಿ, ಕರುಣೆ, ಜ್ಞಾನವೆಂಬ ದೀಪಗಳನ್ನು ಮನಗಳಲ್ಲಿ ಬೆಳಗಿಸಿಕೊಂಡು ಅಜ್ಞಾನವೆಂಬ ಕತ್ತಲೆಯಿಂದ ಬೆಳಕಿನೆಡೆ ಸಾಗಬೇಕೆಂಬುದು ಈ ಹಬ್ಬದ ಮತ್ತೊಂದು ಗೂಡಾರ್ಥವೂ ಆಗಿದೆ ಎಂದರೆ ತಪ್ಪಾಗಲಾರದು.

ಲಕ್ಷ ಲಕ್ಷ ದೀಪಗಳ ಫಳ ಫಳ ಧರ್ಮಸ್ಥಳದ ದೀಪೋತ್ಸವ

ಇನ್ನೂ ಧರ್ಮದಿಂದ ಕೂಡಿದ ಸ್ಥಳ ಎಂಬ ಅರ್ಥ ಕೊಡುವ ಧರ್ಮಸ್ಥಳದಲ್ಲಿ ಇದರ ಆಚರಣೆ ಹೇಗಿರುತ್ತದೆ ಎಂದರೆ ನೀವೆ ಊಹಿಸಬಹುದು. ಈ ಸಂದರ್ಭದಲ್ಲಿ ಧರ್ಮಸ್ಥಳವು ಸಾಲಾಂಕೃತ ಕನ್ಯೆಯಂತೆ ಸಿಂಗರಿಸಿಕೊಂಡು ನೋಡಿದವರ ಮನದಲ್ಲಿ ಭಕ್ತಿ, ಆನಂದಗಳ ಉನ್ಮಾದವನ್ನು ತುಂಬುತ್ತಾ ಪ್ರಶಾಂತ ಹಾಗು ಅಷ್ಟೆ ಸುಂದರವಾಗಿ ಗೋಚರಿಸುತ್ತದೆ. ಲಕ್ಷ ಸಂಖ್ಯೆಯಲ್ಲಿ ಬೆಳುಗುವ ಹಣತೆಗಳು ಆಕಾಶದಲ್ಲಿ ನಳ ನಳಿಸುತ್ತಿರುವ ನಕ್ಷತ್ರಗಳಿಗೆ ಸೆಡ್ಡು ಹೊಡೆದು ನಿಂತಿವೆಯೇನೊ ಎಂಬ ರೋಮಾಂಚನದ ಆಭಾಸವನ್ನು ಮೂಡಿಸುತ್ತವೆ. ಈ ಹಣತೆಗಳನ್ನು ದೇಗುಲದ ಆವರಣದ ಸುತ್ತಲೂ ಆಕರ್ಷಕವಾಗಿ ಜೋಡಿಸಿ ಬೆಳಗಿಸಲಾಗಿರುತ್ತದೆ.

ಪ್ರತಿನಿತ್ಯ ಸಹಸ್ರಾರು ಜನರಿಗೆ ಅನ್ನ ದಾನದಡಿಯಲ್ಲಿ ಉಚಿತ ಭೋಜನವನ್ನು ಒದಗಿಸುವ ಈ ಶ್ರೀ ಕ್ಷೇತ್ರವು ಇತರೆ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಮಣ್ಯ, ಉಡುಪಿ, ಕಟಿಲು, ಹೊರನಾಡು, ಮಂಗಳೂರು ಹಾಗು ಗೋಕರ್ಣಗಳಿಗೆ ಹತ್ತಿರವಾಗಿದೆ. ಇವುಗಳಲ್ಲಿ ಸರ್ಪ ದೋಷದ ನಿವಾರಣಾರ್ಥ ಇರುವ ದೇಶದಲ್ಲೆ ಪ್ರಸಿದ್ದಿ ಹೊಂದುತ್ತಿರುವ ಕುಕ್ಕೆಯು ಕೇವಲ 60 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಇಲ್ಲಿ ನಡೆದುಕೊಂಡು ಬಂದಿರುವ ಒಂದು ಪ್ರತೀತಿಯೆಂದರೆ ನೀವು ಈ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಬೇಕೆಂದಿದ್ದರೆ ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಿ ನಂತರ ಕುಕ್ಕೆಗೆ ಭೇಟಿ ನೀಡಬೇಕು.

ಲಕ್ಷ ಲಕ್ಷ ದೀಪಗಳ ಫಳ ಫಳ ಧರ್ಮಸ್ಥಳದ ದೀಪೋತ್ಸವ

ನಿತ್ಯವೂ ಸಹಸ್ರಾರು ಸಂಖ್ಯೆಯಲ್ಲಿ ಜನ ಧರ್ಮಸ್ಥಳಕ್ಕೆ ಭೇಟಿ ನೀಡುವುದರಿಂದ ಇಲ್ಲಿ ತಂಗಲು ಮೊದಲೆ ವ್ಯವಸ್ಥೆ ಮಾಡಿಕೊಂಡು ಬರುವುದು ಉತ್ತಮ. ಕೆಲವು ಹೋಟೆಲ್ ಹಾಗು ಲಾಡ್ಜ್ ಗಳನ್ನು ಹೊರತುಪಡಿಸಿದರೆ ತಂಗಲು ಅಷ್ಟೊಂದು ಸೌಕರ್ಯ ಇಲ್ಲಿರುವುದಿಲ್ಲ. ಹಬ್ಬಗಳ ಸಂದರ್ಭದಲ್ಲಂತೂ ಜನಸಾಗರವೆ ಇಲ್ಲಿ ಹರಿದು ಬಂದಿರುವುದರಿಂದ ಮತ್ತಷ್ಟು ಕಷ್ಟವಾಗಬಹುದು. ಕಾರಣ ನಿಮ್ಮ ಧರ್ಮಸ್ಥಳದ ಪ್ರವಾಸದ ಯೋಜನೆಯನ್ನು ಮೊದಲೆ ಸಿದ್ಧಪಡಿಸಿಕೊಂಡು ಇಲ್ಲಿಗೆ ಭೇಟಿ ನೀಡಿ ಆ ಲಕ್ಷ ದೀಪೋತ್ಸವದ ಆನಂದವನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ.

ತೆರಳುವ ಬಗೆ (ಬೆಂಗಳೂರಿನಿಂದ):

ಬೆಂಗಳೂರು - ಮಂಗಳೂರು ಹೆದ್ದಾರಿ ಮೂಲಕ ಬೆಂಗಳೂರು - ನೆಲಮಂಗಲ - ಕುಣಿಗಲ್ - ಹಾಸನ - ಸಕಲೇಶಪುರ - ನಂತರ ಮಂಗಳೂರಿನತ್ತ ಸಾಗುವಾಗ ಬಲಬದಿಗೆ ಧರ್ಮಸ್ಥಳಕ್ಕೆ ತಿರುವು ಕಾಣಿಸುತ್ತದೆ. ರೈಲಿನ ಮೂಲಕ ಹೇಗೆ ತಲುಪಬಹುದೆಂದು ತಿಳಿಯಲು ಈ ಕೊಂಡಿಯನ್ನು ಉಪಯೋಗಿಸಿ.

Read more about: festivals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X