Search
  • Follow NativePlanet
Share
» »ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

By vijay

ಈ ಶಕ್ತಿ ಸ್ವರೂಪಿಣಿ ನೆಲೆಸಿರುವ ಸ್ಥಳ ಒಂದು ಅದ್ಭುತ ಶಕ್ತಿಪೀಠ. ಇದು ಇತರೆ ಶಕ್ತಿ ದೇವಿಗೆ ಮಾತ್ರ ಸೀಮಿತವಾಗಿರುವ ಪೀಠಗಳಂತಲ್ಲ. ಬದಲಾಗಿ ಶಿವನೂ ಸಹ ಶಕ್ತಿಯಲ್ಲಿ ಸಂಯೋಜನೆಗೊಂಡು ಶಿವಶಕ್ತಿಯ ಪ್ರಭಾವವಿರುವ ಶಕ್ತಿಪೀಠ. ಕಾಮಾಕ್ಷಿ ಎನ್ನುವುದು ಮೂರು ಪದಗಳ ಸಂಯೋಜನೆಯಾಗಿದೆ ಅಂದರೆ ಕಾ ಮಾ ಅಕ್ಷಿ.

ಮದುರೈ ಮೀನಾಕ್ಷಿ ಏನಿದೆ ದಂತಕಥೆ?

ಇಲ್ಲಿ ಕಾ ಪದವು ಸರಸ್ವತಿ ದೇವಿಯನ್ನು, ಮಾ ಪದವು ಲಕ್ಷ್ಮಿಯನ್ನು ಹಾಗೂ ಅಕ್ಷಿ ಕಣ್ಣುಗಳನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಹೀಗಾಗಿ ಕಾಮಾಕ್ಷಿ ದೇವಿಯು ಸರಸ್ವತಿ ಹಾಗೂ ಲಕ್ಷ್ಮಿಯು ಆಕೆಯ ಎರಡು ಕಣ್ಣುಗಳಾಗಿ ನೆಲೆಸಿರುವ ದೇವಿಯಾಗಿದ್ದಾಳೆ. ಕಾಮಾಕ್ಷಿಯ ಇನ್ನೊಂದು ಭಾವಾರ್ಥ ಕಾಮ + ಅಕ್ಷಿ ಅಂದರೆ ಪ್ರೀತಿ + ಕಣ್ಣುಗಳು.

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಕಾಮಾಕ್ಷಿಯ ಸಾಂದರ್ಭಿಕ ಚಿತ್ರ

ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರೀತಿಯಿಂದ ಕೂಡಿದ ಕಣ್ಣುಗಳುಳ್ಳ, ಭಕ್ತರನ್ನು ಹರಸುವ, ಸರಸ್ವತಿಯ ಪ್ರಭಾವದಿಂದ ವಿದ್ಯೆ,ಬುದ್ಧಿ ಕರುಣಿಸುವ, ಲಕ್ಷ್ಮಿಯ ಪ್ರಭಾವದಿಂದ ಅಷ್ಟೈಶ್ವರ್ಯ ಹಾಗೂ ಸಂಪತ್ತುಗಳನ್ನು ನೀಡುವ, ಶಿವನ ಪ್ರಭಾವದಿಂದ ಕಷ್ಟಗಳನ್ನು ಹೋಗಲಾಡಿಸುವ ದೇವಿಯಾಗಿ ಕಾಮಾಕ್ಷಿಯನ್ನು ಆರಾಧಿಸಲಾಗುತ್ತದೆ.

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಕಾಮಾಕ್ಷಿ ದೇವಿ ಹಾಗೂ ಶ್ರೀಚಕ್ರ, ಸಾಂದರ್ಭಿಕ, ಚಿತ್ರಕೃಪೆ: Harish Aluru

ಈ ಕಾಮಾಕ್ಷಿಯು ನೆಲೆಸಿರುವ ಪುಣ್ಯ ಕ್ಷೇತ್ರವೆ ಕಾಂಚೀಪುರಂ/ಕಂಚೀಪುರಂ. ಕಂಚಿ ಕಾಮಾಕ್ಷಿ ಎಂತಲೂ ಕಂಚಿಯಲ್ಲಿರುವ ಕಾಂಚೀಪುರಂನಲ್ಲಿರುವ ಕಾಮಾಕ್ಷಿ ಅಮ್ಮನವರ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದ ತೀರ್ಥ ಕ್ಷೇತ್ರವಾಗಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಕಾಂಚೀಪುರಂ ನಗರದ ಹೃದಯ ಭಾಗದಲ್ಲೆ ಕಾಮಾಕ್ಷಿಯ ದೇವಾಲಯವಿದೆ.

ಕಂಚಿ ಕಾಮಾಕ್ಷಿಯು ತಮಿಳುನಾಡಿನಲ್ಲಿ ಆರಾಧಿಸಲಾಗುವ ಮೂರು ಪ್ರಮುಖ ಶಕ್ತಿ ದೇವತೆಗಳ ಪೈಕಿ ಒಬ್ಬಳಾಗಿದ್ದಾಳೆ. ಇನ್ನುಳಿದ ಇಬ್ಬರು ಶಕ್ತಿ ದೇವತೆಯರೆಂದರೆ ಮದುರೈ ಮೀನಾಕ್ಷಿ ಹಾಗೂ ತಿರುವನೈಕಾವಲ್ ಅಖಿಲಾಂಡೇಶ್ವರಿ. ಕಾಮಾಕ್ಷಿಯ ಈ ಪುರಾತನ ದೇವಾಲಯವು ಪಲ್ಲವರಿಂದ ನಿರ್ಮಿತವಾದ ರಚನೆಯೆಂದು ತಿಳಿಯಲಾಗಿದೆ. ಏಕೆಂದರೆ ಕಾಂಚೀಪುರಂ ಹಿಂದೆ ಪಲ್ಲವರ ರಾಜಧಾನಿ ಪಟ್ಟಣವಾಗಿತ್ತು.

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಕಂಚಿ ಕಾಮಕ್ಷಿಯ ದೇವಾಲಯ, ಚಿತ್ರಕೃಪೆ: SINHA

ವಿಶೇಷವೆಂದರೆ ಕಾಮಾಕ್ಷಿಯು ಇಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕುಳಿತಿದ್ದು ನೋಡಲು ಸಾಕಷ್ಟು ಆಕರ್ಷಕವಾಗಿ ಕಂಡುಬರುತ್ತಾಳೆ. ದೇವಾಲಯ ಸಂಕೀರ್ಣದ ಮಧ್ಯ ಭಾಗದಲ್ಲಿರುವ ಗರ್ಭಗುಡಿಯಲ್ಲಿ ಕುಳಿತಿರುವ ಕಾಮಾಕ್ಷಿ ತನ್ನ ನಾಲ್ಕು ಕೈಗಳಲ್ಲಿ ಕಬ್ಬಿನಗಳದ ಬಿಲ್ಲನ್ನು, ಕಮಲದ ಹೂವನ್ನು, ಗಿಳಿಯನ್ನು ಹಾಗೂ ಪಾಶ ಮತ್ತು ಅಂಗುಶ ಎಂಬ ಚಕ್ರಗಳನ್ನು ಹಿಡಿದಿದ್ದಾಳೆ.

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಕಾಮಾಕ್ಷಿ ದೇವಾಲಯ ಪುಷ್ಕರಣಿ, ಚಿತ್ರಕೃಪೆ: SINHA

ಎಂಟನೇಯ ಶತಮಾನದಲ್ಲಿ ಜೀವಿಸಿದ್ದ ಆದಿ ಗುರುಗಳಾದ, ಅದ್ವೈತದ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರು ಕಾಮಾಕ್ಷಿಯ ಈ ಸನ್ನಿಧಿಯಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿ ಇದನ್ನು ಮತ್ತಷ್ಟು ಪ್ರಭಾವಿ ಸ್ಥಳವನ್ನಾಗಿ ಮಾಡಿದರು. ಅಂದಿನಿಂದ ಈ ಕ್ಷೇತ್ರವು ಕಂಚಿ ಕಾಮಕೋಟಿ ಪೀಠ ಎಂದೆ ಪ್ರಸಿದ್ಧವಾಯಿತು.

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಚಿತ್ರಕೃಪೆ: G41rn8

ದಂತಕಥೆಯಂತೆ ಕಾಮಾಕ್ಷಿಯು ಶಿವನನ್ನು ಇಚ್ಛಿಸಿ ಮದುವೆಯಾಗ ಬಯಸಿದ್ದಳು. ಅದರಂತೆ ಮರಳಿನಿಂದ ಶಿವಲಿಂಗವನ್ನು ನಿರ್ಮಿಸಿ ಮಾವಿನ ಮರದ ಕೆಳಗೆ ಅದನ್ನು ಪ್ರತಿಷ್ಠಾಪಿಸಿ ಅತಿ ಭಕ್ತಿ-ಶೃದ್ಧೆಗಳಿಂದ ಅದನ್ನು ಪೂಜಿಸಿದಳು. ಇದರಿಂದ ಪ್ರಸನ್ನನಾದ ಶಿವನು ಅವಳಿಗೆ ದರ್ಶನ ನೀಡಿ ಅವಳ ಕೋರಿಕೆಯಂತೆ ಅವಳನ್ನು ಮದುವೆಯಾಗಿ ಅವಳೊಡನೆ ಇಲ್ಲಿಯೆ ಒಂದಾಗಿ ನೆಲೆಸಿದನು.

ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ

ಪ್ರಖ್ಯಾತ ಕಾಂಚೀವರಂ ಸೀರೆಗಳು, ಚಿತ್ರಕೃಪೆ: Kamal Venkit

ಕಾಮಾಕ್ಷಿಯು ಪಾರ್ವತಿಯ ದೈವಿಕ ಪ್ರತಿರೂಪವಾಗಿದ್ದಾಳೆ. ಇದೂ ಸಹ ಪ್ರಖ್ಯಾತ 51 ಶಕ್ತಿಪೀಠಗಳಲ್ಲಿ ಒಂದಾಗಿದ್ದು ಇಲ್ಲಿ ಸತಿ ದೇವಿಯ ನಾಭಿಯ ಭಾಗ ಬಿದ್ದಿತ್ತೆನ್ನಲಾಗಿದೆ. ಕಾಮಾಕ್ಷಿಯ ದೇವಾಲಯದಲ್ಲಿ ಮುಖ್ಯ ದೇವಿ ಕಾಮಾಕ್ಷಿಯನ್ನು ಹೊರತುಪಡಿಸಿ ಇತರೆ ದೇವ-ದೇವತೆಯರ, ಉಪಾಸಕರ ಪವಿತ್ರ ಸನ್ನಿಧಿಗಳೂ ಸಹ ಇರುವುದನ್ನು ಕಾಣಬಹುದು.

ನಿಮಗೆ ಗೊತ್ತಿರಬೇಕಾದ 18 ಮಹಾಶಕ್ತಿಪೀಠಗಳು

ಕಾಂಚೀಪುರಂ ತಮಿಳುನಾಡಿನ ಪ್ರಮುಖ ನಗರಗಳ ಪೈಕಿ ಒಂದಾಗಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಚೆನ್ನೈ ಮಹಾನಗರದಿಂದ ಕೇವಲ 72 ಕಿ.ಮೀ ಗಳಷ್ಟು ದೂರದಲ್ಲಿರುವ ಕಂಚಿಗೆ ತೆರಳಲು ಚೆನ್ನೈ ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ಸಾಕಷ್ಟು ಬಸ್ಸುಗಳು ದೊರೆಯುತ್ತವೆ ಹಾಗೂ ಚೆನ್ನೈ ನಗರವನ್ನು ದೇಶದ ಎಲ್ಲ ಪ್ರಮುಖ ನಗರಗಳಿಂದ ತಲುಪಬಹುದು. ಇನ್ನೊಂದು ವಿಷಯವೆಂದರೆ ಕಂಚಿಯಲ್ಲಿ ದೊರೆಯುವ ರೇಷ್ಮೆ ಸೀರೆಗಳು ವಿಶ್ವವಿಖ್ಯಾತವಾಗಿವೆ. ಒಂದೊಮ್ಮೆ ಇಲ್ಲಿಗೆ ತೆರಳಿದರೆ ಈ ಕಾಂಚೀವರಂ ಸೀರೆಗಳನ್ನು ಖರೀದಿಸಲು ಮರೆಯದಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X