Search
  • Follow NativePlanet
Share
» » ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ನಿಮಗಿದ್ಯಾ

ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ನಿಮಗಿದ್ಯಾ

ನಾವು ಎಲ್ಲೇ ಹೊರಗಡೆ ಹೋದರೂ ಒಬ್ಬ ಪ್ರಯಾಣಿಕನಾಗಿ ಹೋಗುವ ಬದಲು ಒಬ್ಬ ಪ್ರವಾಸಿಗನಾಗಿ ಹೋದರೆ ನಮ್ಮ ಪ್ರಯಾಣವನ್ನು ಸವಿಯುವುದರ ಜೊತೆಗೆ ನಮ್ಮ ಜ್ಞಾನವೂ ಅಭಿವೃದ್ಧಿಯಾಗುತ್ತದೆ.

ಮನುಷ್ಯ ಎಂದ ಮೇಲೆ ಆತನಿಗೆ ನೆಮ್ಮದಿ ಅತ್ಯವಶ್ಯಕ. ಅದನ್ನರಸಿ ಕೆಲವರು ಹತ್ತಿರದ ದೇವಸ್ಥಾನಗಳಿಗೆ ಹೋಗುತ್ತಾರೆ . ಕೆಲವರು ಸುತ್ತಮುತ್ತ ಇರುವ ಪಾರ್ಕ್ ಗಳಿಗೆ ಹೋಗುತ್ತಾರೆ . ಇನ್ನೂ ಕೆಲವರೂ ತಮ್ಮ ಬಳಿ ವಾಹನವಿದ್ದರೆ ಅದರಲ್ಲಿ ದೂರ ಪ್ರಯಾಣ ಮಾಡಲು ಬಯಸುತ್ತಾರೆ. ಒಮ್ಮೆ ಈ ರೀತಿ ಹೊರಗಡೆ ಹೋದರೆ ಸಾಕು , ಮತ್ತೆ ಮತ್ತೆ ಹೋಗಬೇಕೆಂದೆನಿಸುತ್ತದೆ. ಆದರೆ ನಾವು ಎಲ್ಲೇ ಹೋದರೂ ನಮ್ಮ ಪ್ರಯಾಣವನ್ನು ಆಸ್ವಾದಿಸುತ್ತೇವೆಯೇ ಹೊರತು ನಾವು ತೆರಳುವ ಜಾಗದ ಮತ್ತು ತೆರಳುತ್ತಿರುವ ದಾರಿಯ ಬಗ್ಗೆ ಯಾವುದೇ ಮಾಹಿತಿ ತಿಳಿದುಕೊಳ್ಳದೆ ಮುಂದೆ ಸಾಗುತ್ತಿರುತ್ತೇವೆ.

ಹೆದ್ದಾರಿಗಳ ಮಾಹಿತಿ

ನಾವು ಎಲ್ಲೇ ಹೊರಗಡೆ ಹೋದರೂ ಒಬ್ಬ ಪ್ರಯಾಣಿಕನಾಗಿ ಹೋಗುವ ಬದಲು ಒಬ್ಬ ಪ್ರವಾಸಿಗನಾಗಿ ಹೋದರೆ ನಮ್ಮ ಪ್ರಯಾಣವನ್ನು ಸವಿಯುವುದರ ಜೊತೆಗೆ ನಮ್ಮ ಜ್ಞಾನವೂ ಅಭಿವೃದ್ಧಿಯಾಗುತ್ತದೆ. ಅದರಲ್ಲೂ ನಮ್ಮ ಹೆಮ್ಮೆಯ ಭಾರತ ದೇಶದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ನಮಗೆ ಮಾಹಿತಿ ಇಲ್ಲವೆಂದರೆ ಹೇಗೆ ? ಆದ್ದರಿಂದ ಇಲ್ಲಿ ನಾವು ಕೆಲವೊಂದು ನಿಮಗೆ ಉಪಯುಕ್ತವಾಗುವಂತಹ ಮಾಹಿತಿಗಳನ್ನು ತಿಳಿಸಿರುತ್ತೇವೆ. ನಿಮ್ಮ ಜ್ಞಾನಾರ್ಜನೆಗೆ ಸಹಾಯಕವಾಗಬಹುದು.

ನಮ್ಮ ಭಾರತದ ರಸ್ತೆಗಳ ಒಟ್ಟು ಉದ್ದ

ನಮ್ಮ ದೇಶದಲ್ಲಿ ಗ್ರಾಮೀಣ ರಸ್ತೆಗಳು, ಪಟ್ಟಣ ಪ್ರದೇಶದ ರಸ್ತೆಗಳು , ರಾಷ್ಟ್ರೀಯ ಹೆದ್ದಾರಿಗಳು ಹಾಗು ಎಕ್ಸ್ಪ್ರೆಸ್ ವೇಗಳು ಬಹಳಷ್ಟಿವೆ. ಇವೆಲ್ಲದರ ಅಂದಾಜಿನ ಒಟ್ಟು ಉದ್ದ 33 ಲಕ್ಷ ಕಿಲೋಮೀಟರ್‌ಗಳು . ಜೂನ್ 2017ರ ಪ್ರಕಾರ ಒಂದು ದಿನಕ್ಕೆ ಸರಾಸರಿ 23 ಕಿಲೋಮೀಟರಿನಷ್ಟು ರಸ್ತೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ನಮ್ಮ ಭಾರತದಲ್ಲಿ ಒಟ್ಟು 200 ರಾಷ್ಟ್ರೀಯ ಹೆದ್ದಾರಿಗಳಿವೆ. ಅವುಗಳ ಒಟ್ಟು ಉದ್ದ 1,01,011 ಕಿಲೋಮೀಟರ್‌ನಷ್ಟಿದೆ. ಅದೇ ರಾಜ್ಯ ಹೆದ್ದಾರಿಗಳನ್ನು ಗಣನೆಗೆ ತೆಗೆದುಕೊಂಡರೆ ಅವುಗಳ ಒಟ್ಟು ಉದ್ದ 1,31,899 ಕಿಲೋಮೀಟರ್‌ನಷ್ಟಿದೆ.

ರಾಷ್ಟ್ರೀಯ ಹೆದ್ದಾರಿಗಳು

ಭಾರತದಲ್ಲಿನ ಎಲ್ಲಾ ರಸ್ತೆಗಳಿಗೆ ಹೋಲಿಸಿದರೆ ರಾಷ್ಟ್ರೀಯ ಹೆದ್ದಾರಿಗಳ ಶೇಕಡಾವಾರು ಲೆಕ್ಕ ತೆಗೆದುಕೊಂಡರೆ ಹೆದ್ದಾರಿಗಳ ಪಾಲು ಕೇವಲ ೧.೮% ರಷ್ಟಿದೆ. ಆದರೆ ಸಂತೋಷದ ವಿಷಯ ಎಂದರೆ ರಾಷ್ಟ್ರೀಯ ಹೆದ್ದಾರಿಗಳು ನಮ್ಮ ದೇಶದ ಶೇಕಡಾ 40 ರಷ್ಟು ಇತರೆ ರಸ್ತೆಗಳ ಸಂಚಾರ ನಿಯಂತ್ರಿಸುತ್ತವೆ. ಬಹುತೇಕ ನಮ್ಮ ದೇಶದ ರಾಷ್ಟ್ರೀಯ ಹೆದ್ದಾರಿಗಳು ಎರಡು ಪಥಗಳನ್ನು ಹೊಂದಿರುವವು. ಆದರೆ 22,990 ಕಿಲೋಮೀಟರ್‌ನಷ್ಟು ರಸ್ತೆಗಳು 4 ರಿಂದ 6 ಪಥಗಳನ್ನು ಹೊಂದಿರುವವು .

ಹೆದ್ದಾರಿಗಳ ಸಂಖ್ಯೆ

ನಮ್ಮ ದೇಶದಲ್ಲಿ ಬರುವ ಮುಖ್ಯ ಹೆದ್ದಾರಿಗಳು ಗುರುತಿಸಲು 2 ಸಂಖ್ಯೆಯ ಅಂಕಿಗಳನ್ನು ಹೊಂದಿದ್ದು, ಮಿಕ್ಕೆಲ್ಲಾ ಹೆದ್ದಾರಿಗಳು ಮುಖ್ಯ ಹೆದ್ದಾರಿಗಳಿಗೆ ಕವಲು ಹೊಡೆದ ಹೆದ್ದಾರಿಗಳಂತೆ ಸೇರ್ಪಡೆಗೊಂಡು 3 ಅಂಕಿಗಳ ಸಂಖ್ಯೆಯನ್ನು ಹೊಂದಿರುತ್ತವೆ.ಯಾವ ಹೆದ್ದಾರಿಗಳು ಯಾವ ಮುಖ್ಯ ಹೆದ್ದಾರಿಗಳಿಗೆ ಸೇರುತ್ತವೆ ಎಂದು ಸುಲಭವಾಗಿ ಕಂಡುಹಿಡಿಯುವಂತೆಯೇ ಅವನ್ನು ಸಂಖ್ಯೆಯ
ನಾಮಕರಣ ಮಾಡಿ ಅದೇ ವಿಧಾನದಲ್ಲಿ ವರ್ಗೀಕರಿಸಲಾಗಿದೆ. ಉದಾಹರಣೆಗೆ:144 ಸಂಖ್ಯೆಯ ಹೆದ್ದಾರಿ 44 ನೇ ಸಂಖ್ಯೆಯ ಹೆದ್ದಾರಿಗೆ ಕವಲೊಡೆದ ಹೆದ್ದಾರಿಯಾಗಿರುತ್ತದೆ. ಅಂತೆಯೇ 144A ಮತ್ತು 244A ಇತ್ಯಾದಿ ಸಂಖ್ಯೆಯ ರಸ್ತೆಗಳು 144 ಸಂಖ್ಯೆಯ ಹೆದ್ದಾರಿಗೆ ಕವಲು ಹೆದ್ದಾರಿಗಳು.

2010ರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆಯ ವ್ಯವಸ್ಥೆಗೆ ಹೊಸ ತಿರುವು

ನಮ್ಮ ದೇಶದಲ್ಲಿ ಹೆದ್ದಾರಿಗಳು ಎಲ್ಲ ದಿಕ್ಕಿನಲ್ಲೂ ಸಂಚರಿಸುತ್ತವೆ. ನಮ್ಮ ಘನ ಸರ್ಕಾರಕ್ಕೆ ಯಾವ ರಸ್ತೆಗಳು ಯಾವ ದಿಕ್ಕಿಗೆ ಹೋಗುತ್ತವೆ ಮತ್ತು ಇವನ್ನು ಕಂಡುಹಿಡಿಯುವುದು ಹೇಗೆ ಎಂಬುದೇ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಅದಕ್ಕೆ 2010ನೇ ಇಸವಿಯಲ್ಲಿ ನಮ್ಮ ಸರ್ಕಾರ ಈ ಸಂಖ್ಯಾ ವ್ಯವಸ್ಥೆಗೆ ಹೊಸ ರೂಪ ಕೊಟ್ಟಿತು. ಏನೆಂದರೆ ನಮ್ಮ ದೇಶದ ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ಹಾದುಹೋಗುವ ರಸ್ತೆಗಳನ್ನು ಸಮಸಂಖ್ಯೆಗಳಿಂದ ನಾಮಕರಣ ಮಾಡಲಾಯಿತು. ಅಂತೆಯೇ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಹಾದು ಹೋಗುವ ರಸ್ತೆಗಳಿಗೆ ಬೆಸ ಸಂಖ್ಯೆಗಳಿಂದ ನಾಮಕರಣ ಮಾಡಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಹತ್ವದ ಜವಾಬ್ದಾರಿ

ಭಾರತ ಸರ್ಕಾರದಿಂದ ನೇಮಿಸಲ್ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಡೀ ನಮ್ಮ ದೇಶದಲ್ಲಿನ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಈ ಸಂಸ್ಥೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಮತ್ತು ಇದನ್ನು ನಮ್ಮ ಆಗಿನ ಪ್ರಧಾನ ಮಂತ್ರಿಯವರಾದ ಅಟಲ್ ಬಿಹಾರಿ ವಾಜಪೇಯಿರವರು ಶುರು ಮಾಡಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟ ಬಹು ದೊಡ್ಡ ಹೆದ್ದಾರಿ ಅಭಿವೃದ್ಧಿ ಯೋಜನೆಯಾಗಿದೆ. ಇದನ್ನೂ ಸಹ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಪ್ರಾರಂಭಿಸಲಾಯಿತು. ಹಾಲಿ ಇರುವ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಪ್ರಮುಖ ಹೆದ್ದಾರಿಗಳ ಅಗಲೀಕರಣ ಈ ಯೋಜನೆಯ ಮುಖ್ಯ ಉದ್ದೇಶ.

ರಸ್ತೆಯ ಪಕ್ಕದ ಮೈಲಿಗಲ್ಲುಗಳ ಗಮನಾರ್ಹ ಪಾತ್ರ

ನಮಗೆಲ್ಲಾ ತಿಳಿದಿರುವ ಹಾಗೆ ರಸ್ತೆಯ ಪಕ್ಕದಲ್ಲಿ ಅಂಕಿ ಅಂಶಗಳನ್ನೊಳಗೊಂಡ ಮೈಲಿಗಲ್ಲುಗಳನ್ನು ನೆಟ್ಟಿರುತ್ತಾರೆ. ಅವುಗಳು ನಮಗೆ ರಾಷ್ಟ್ರೀಯ ಹೆದ್ದಾರಿ , ರಾಜ್ಯ ಹೆದ್ದಾರಿ ಮತ್ತು ನಗರದಲ್ಲಿ ಹಾದುಹೋಗುವ ಹೆದ್ದಾರಿಗಳನ್ನು ಪ್ರತ್ಯೇಕಿಸಲು ಸಹಾಯಕವಾಗುತ್ತವೆ. ಇವುಗಳಲ್ಲಿ ಹಳದಿ ಮತ್ತು ಬಿಳಿಯ ಬಣ್ಣದ ಕಲ್ಲುಗಳನ್ನು ನೆಟ್ಟಿರುವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲ್ಪಡುತ್ತವೆ.

ರಾಷ್ಟ್ರೀಯ ಹೆದ್ದಾರಿ 44

ರಾಷ್ಟ್ರೀಯ ಹೆದ್ದಾರಿ 44 ಎಲ್ಲಾ ಹೆದ್ದಾರಿಗಳಿಗಿಂತಲೂ ಅತಿ ಉದ್ದನೆಯ ಹೆದ್ದಾರಿಯಾಗಿರುತ್ತದೆ ಮತ್ತು ಅದರ ಉದ್ದ 3745 ಕಿಲೋಮೀಟರು ಆಗಿರುತ್ತದೆ. ಇದು ದೇಶದುದ್ದಕ್ಕೂ ಅಂದರೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೂ ನಿರ್ಮಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 118 ಮತ್ತು ರಾಷ್ಟ್ರೀಯ ಹೆದ್ದಾರಿ 548 ಅತಿ ಕಡಿಮೆ ಉದ್ದ ಹೊಂದಿರುವ ಹೆದ್ದಾರಿಗಳಾಗಿವೆ. ರಾಷ್ಟ್ರೀಯ ಹೆದ್ದಾರಿ 118 ಅಸಾಂಬನಿಯಿಂದ ಝಾರ್ಖಂಡ್ ರಾಜ್ಯದ ಜೇಮ್‌ಶೆಡ್‌ಪುರದವರೆಗೂ ಇರುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿ 548 ಮಹಾರಾಷ್ಟ್ರದ ಕಲಂಬೊಯ್ ವರೆಗೂ ಇರುತ್ತದೆ.

ಕತಿಪಾರಾ ಜಂಕ್ಷನ್


ಕತಿಪಾರಾ ಜಂಕ್ಷನ್ ಅಥವಾ ಕತಿಪಾರಾ ಕ್ಲೋವರ್ಲೀಫ್ ಎಂಬುದು ಏಷ್ಯಾ ಖಂಡದ ಅತಿ ದೊಡ್ಡದಾದ ಫ್ಲೈಓವರ್ ಎಂದು ಗುರುತಿಸಲಾಗಿದೆ. ಇದು ತಮಿಳು ನಾಡಿನ ಚೆನ್ನೈ ನ ಮುಖ್ಯ ಜಂಕ್ಷನ್ ಆಗಿದೆ. ವಿಶ್ವದ 2 ನೇ ಅತಿ ಎತ್ತರದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಲೇಹ್-ಮನಾಲಿ ಹೆದ್ದಾರಿ ಪಾತ್ರವಾಗಿದೆ.ಈ ಹೆದ್ದಾರಿ ಜಮ್ಮು ಮತ್ತು ಕಾಶ್ಮೀರದ ಲೇಹ್ ನಿಂದ ಹಿಮಾಚಲ ಪ್ರದೇಶದ ಶಿಮ್ಲಾದವರೆಗೂ ಇದೆ. ನಮ್ಮ ದೇಶದ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಯಾವುದೇ ರೀತಿಯ ಮದ್ಯದ ಅಂಗಡಿಗಳನ್ನಾಗಲೀ ಅಥವಾ ಬಾರ್ ಗಳನ್ನಾಗಲೀ ನಡೆಸಲು ಭಾರತ ಸರ್ಕಾರದಿಂದ ಅನುಮತಿ ಇರುವುದಿಲ್ಲ. ಏಕೆಂದರೆ ಕುಡಿದು ಚಾಲನೆ ಮಾಡಿ ಅಪಘಾತ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತದೆ.ಅದಕ್ಕೆ ರಸ್ತೆಯ ಪಕ್ಕದಲ್ಲಿ ವೇಗದ ಮಿತಿಯನ್ನೂ ಕೂಡ ನಾಮಫಲಕದಲ್ಲಿ ಸ್ಪಷ್ಟವಾಗಿ ಸೂಚಿಸಿರುತ್ತಾರೆ. ಏನೇ ಆದರೂ ಪ್ರಯಾಣಿಕರ ರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆ ಅಲ್ಲವೇ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X