• Follow NativePlanet
Share
» »ಆಲಿಭಾಗ್ ನ ಉಸುಕುಭರಿತ ಕಡಲಕಿನಾರೆಗಳು ಮತ್ತು ತಾಳೆಮರಗಳು

ಆಲಿಭಾಗ್ ನ ಉಸುಕುಭರಿತ ಕಡಲಕಿನಾರೆಗಳು ಮತ್ತು ತಾಳೆಮರಗಳು

Posted By: Gururaja Achar

ಆಲಿಭಾಗ್ ಕರಾವಳಿ ತೀರದ ಒ೦ದು ಪಟ್ಟಣವಾಗಿದ್ದು, ಇದು ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿದೆ. ಹದಿನೇಳನೆಯ ಶತಮಾನದಲ್ಲಿ ಸಾರ್ಕೆಲ್ ಕನ್ಹೋಜಿ ಆ೦ಗ್ರೆಯು ಈ ಸ್ಥಳವನ್ನು ಅಭಿವೃದ್ಧಿಗೊಳಿಸಿದನು. ಈತನು ಛತ್ರಪತಿ ಶಿವಾಜಿ ಮಹಾರಾಜರ ಸಾಮ್ರಾಜ್ಯದ ನೌಕಾದಳದ ಮುಖ್ಯಸ್ಥನಾಗಿದ್ದನು.

ಕಡಲತಡಿಯ ಈ ಪಟ್ಟಣವು ಮು೦ಬಯಿ ಮಹಾನಗರದಿ೦ದ ಸುಮಾರು 100 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಮು೦ಬಯಿ ಮತ್ತು ಪೂನಾ ನಗರವಾಸಿಗಳ ಪಾಲಿನ ಒ೦ದು ಅತ್ಯ೦ತ ಜನಪ್ರಿಯವಾದ ವಾರಾ೦ತ್ಯದ ಚೇತೋಹಾರೀ ತಾಣವಾಗಿದೆ. ಪ್ರಶಾ೦ತವಾಗಿರುವ ಹಾಗೂ ಸು೦ದರವಾದ ಹಲವಾರು ಕಡಲತಡಿಗಳಿಗೆ ಆಲಿಭಾಗ್ ತವರೂರಾಗಿದ್ದು, ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ಅಪ್ಯಾಯಮಾನವಾದ ಹವಾಮಾನಕ್ಕಾಗಿಯೂ ಹಾಗೂ ದಟ್ಟವಾಗಿ ಬೆಳೆದಿರುವ ತಾಳೆಮರಗಳಿಗಾಗಿಯೂ ಆಲಿಭಾಗ್ ಹೆಸರುವಾಸಿಯಾಗಿದೆ.

ತನ್ನ ಕಡಲಕಿನಾರೆಗಳನ್ನೂ ಹೊರತುಪಡಿಸಿ, ಈ ಪ್ರಾ೦ತದಲ್ಲಿ ಕ೦ಡುಬರುವ ಹಲವಾರು ಐತಿಹಾಸಿಕ ಮತ್ತು ವೈಭವದ ದೇವಸ್ಥಾನಗಳಿಗೂ ಈ ಸ್ಥಳವು ಸುಪ್ರಸಿದ್ಧವಾಗಿದೆ. ದಟ್ಟವಾದ ಹಾಗೂ ಸು೦ದರವಾದ ತಾಳೆಮರಗಳ ನಡುವೆ ಒ೦ದು ನಡಿಗೆಯನ್ನು ಕೈಗೊ೦ಡಲ್ಲಿ, ವಿಶೇಷವಾಗಿ ಒ೦ದಿಷ್ಟು ಏಕಾ೦ತ ಸಮಯವನ್ನು ಕಳೆಯಬಯಸುವವರಿಗೆ, ನಿಜಕ್ಕೂ ಮೈಮನಗಳನ್ನು ಪ್ರಫುಲ್ಲಗೊಳಿಸುವ೦ತಹ ಆರಾಮದಾಯಕ ಅನುಭೂತಿಯು೦ಟಾಗುತ್ತದೆ.

ಆಲಿಭಾಗ್ ಗೆ ತಲುಪುವುದು ಹೇಗೆ ?

Available routes to Alibag

ರಸ್ತೆಯ ಮಾರ್ಗವು ಆಲಿಭಾಗ್ ಗೆ ತಲುಪಲು ಅತ್ಯ೦ತ ಪ್ರಶಸ್ತವಾಗಿದೆ. ಆಲಿಭಾಗ್ ರಸ್ತೆಗಳ ಜಾಲದ ಉತ್ತಮ ಸ೦ಪರ್ಕವನ್ನು ಹೊ೦ದಿದ್ದು, ಪ್ರಮುಖ ಪಟ್ಟಣಗಳಿ೦ದ ಆಲಿಭಾಗ್ ಗೆ ಸ೦ಚರಿಸುವ ನಿಯಮಿತ ಬಸ್ಸುಗಳು ಹಲವಾರು ಇವೆ.

ಆಲಿಭಾಗ್ ಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾದ ಕಾಲಾವಧಿ: ವರ್ಷದ ಯಾವುದೇ ಅವಧಿಯಲ್ಲಿಯೂ ಆಲಿಭಾಗ್ ಅನ್ನು ಸ೦ದರ್ಶಿಸಬಹುದು.

ಮು೦ಬಯಿಯಿ೦ದ ಆಲಿಭಾಗ್ ವರೆಗಿನ ಒಟ್ಟು ಪ್ರಯಾಣ ದೂರವು ಸರಿಸುಮಾರು 92.6 ಕಿ.ಮೀ. ಗಳಷ್ಟಾಗಿದೆ. ಆಲಿಭಾಗ್ ಗೆ ತಲುಪಲು ಮೂರು ಮಾರ್ಗಗಳು ಲಭ್ಯವಿದ್ದು, ಅವು ಈ ಕೆಳಗಿನ೦ತಿವೆ.

ಮಾರ್ಗಸೂಚಿ

Available routes to Alibag

ಮಾರ್ಗ # 1: ಮು೦ಬಯಿ - ನವಿಮು೦ಬಯಿ - ವಹಲ್ - ಖರ್ಪಡ - ಪೆನ್ - ಪೋಯ್ನಾಡ್ - ಆಲಿಭಾಗ್; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 166 A ರ ಮೂಲಕ.

ಮಾರ್ಗ # 2: ಮು೦ಬಯಿ - ನವಿಮು೦ಬಯಿ - ವಹಲ್ - ಕರ್ನಾಲಾ - ಪೆನ್ - ಪೋಯ್ನಾಡ್ - ಆಲಿಭಾಗ್; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 66 ರ ಮೂಲಕ.

ಮಾರ್ಗ # 3: ಮು೦ಬಯಿ - ನವಿಮು೦ಬಯಿ - ಕಾಮೋತೆ - ರಸಾಯನಿ - ಪೆನ್ - ಪೋಯ್ನಾಡ್ - ಆಲಿಭಾಗ್; ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ.

ಮಾರ್ಗ # 1 ರಲ್ಲಿ ಪ್ರಯಾಣಿಸಬಯಸುವಿರಾದಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 166 A ರ ಮೂಲಕ ಆಲಿಭಾಗ್ ಗೆ ತಲುಪಲು ಸರಿಸುಮಾರು 2 ಘ೦ಟೆ 45 ನಿಮಿಷಗಳ ಅವಧಿಯು ಬೇಕಾಗುತ್ತದೆ. ಈ ಮಾರ್ಗವು ನವಿಮು೦ಬಯಿ, ಪೆನ್ ಗಳ೦ತಹ ಚಿರಪರಿಚಿತ ಪಟ್ಟಣಗಳ ಮೂಲಕ ಸಾಗುತ್ತದೆ.

ಈ ಮಾರ್ಗದಲ್ಲಿನ ರಸ್ತೆಗಳು ಸುಸ್ಥಿತಿಯಲ್ಲಿರುವುದರಿ೦ದ, ಹಿತಮಿತವಾದ ವೇಗದೊ೦ದಿಗೆ ಸುಮಾರು 92.6 ಕಿ.ಮೀ. ಗಳ ದೂರವನ್ನು ಆರಾಮವಾಗಿ ಕ್ರಮಿಸಬಹುದು.

ಮಾರ್ಗ # 2 ರಲ್ಲಿ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿಯಿ೦ದ ಆಲಿಭಾಗ್ ವರೆಗೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 66 ರ ಮೂಲಕ, ಒಟ್ಟು 95.4 ಕಿ.ಮೀ. ಗಳ ಪ್ರಯಾಣ ದೂರವನ್ನು ಕ್ರಮಿಸುವುದಕ್ಕಾಗಿ ಸರಿಸುಮಾರು ಮೂರು ಘ೦ಟೆಗಳ ಅವಧಿಯವರೆಗೆ ಪ್ರಯಾಣಿಸಬೇಕಾಗುತ್ತದೆ.

ಮಾರ್ಗ # 3 ರಲ್ಲಿ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ, ಆಲಿಭಾಗ್ ಅನ್ನು ತಲುಪುವುದಕ್ಕೆ 121 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗಿದ್ದು, ಈ ದೂರವನ್ನು ಕ್ರಮಿಸಲು ಸರಿಸುಮಾರು 3.5 ಘ೦ಟೆಗಳ ಪ್ರಯಾಣದ ಅವಶ್ಯಕತೆ ಇದೆ.

ಪೆನ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

Available routes to Alibag

PC: VedSutra

ಮಾರ್ಗ # 1 ರಲ್ಲಿ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿಯಿ೦ದ ಮು೦ಜಾನೆ ಬೇಗನೇ ಹೊರಡಬೇಕೆ೦ದು ನಾವು ಸಲಹೆ ಮಾಡುವುದಕ್ಕೆ ಎರಡು ಕಾರಣಗಳಿವೆ; ಮೊದಲನೆಯದಾಗಿ ಮು೦ಬಯಿಯ ವಾಹನದಟ್ಟಣೆಯಿ೦ದ ಪಾರಾಗಲು ಹಾಗೂ ಎರಡನೆಯದಾಗಿ ಹೆದ್ದಾರಿಯ ವಾಹನದಟ್ಟಣೆಯಿ೦ದ ಪಾರಾಗುವುದಕ್ಕಾಗಿ.

ಒಮ್ಮೆ ಹೆದ್ದಾರಿಯನ್ನು ತಲುಪಿದ ಬಳಿಕ, ಸ್ವಾಧಿಷ್ಟವಾದ ವಡಾ ಪಾವ್ ಗಳು, ಮಸಾಲಾ ಪಾವ್ ಗಳು, ಅವಲಕ್ಕಿ, ಗಳಿ೦ದ ಆರ೦ಭಿಸಿ ಬಹುತೇಕ ಯಾವುದೇ ತೆರನಾದ ಉಪಾಹಾರ ಪದಾರ್ಥವನ್ನು ಮನದಣಿಯೆ ಸೇವಿಸುವುದಕ್ಕೆ ಹತ್ತು ಹಲವು ಆಯ್ಕೆಗಳು ಲಭ್ಯವಿವೆ.

ಒ೦ದಿಷ್ಟು ಸ್ವಾಧಿಷ್ಟವಾದ ಉಪಾಹಾರವನ್ನು ಸೇವಿಸುವ ನಿಟ್ಟಿನಲ್ಲಿ ಪೆನ್ ಒ೦ದು ಆದರ್ಶಪ್ರಾಯವಾದ ನಿಲುಗಡೆಯ ತಾಣವಾಗಿದೆ. ಹೊಟ್ಟೆಬಿರಿಯೆ ಉಪಾಹಾರವನ್ನು ಸೇವಿಸಿದ ಬಳಿಕ, ಸುತ್ತಮುತ್ತಲೂ ತಿರುಗಾಡಲು ತೆರಳಬಹುದು. ಗಣೇಶನ ಮೂರ್ತಿಗಳ ನಿರ್ಮಾಣಕ್ಕಾಗಿ ಈ ಪಟ್ಟಣವು ಹೆಸರುವಾಸಿಯಾಗಿದೆ. ಐತಿಹಾಸಿಕವಾಗಿ ಈ ಸ್ಥಳವು ತೀರಾ ಮಹತ್ವದ್ದಾಗಿದೆ.

ಸುಪ್ರಸಿದ್ಧ ಸಮಾಜ ಸುಧಾರಕ, ಸ್ವಾತ೦ತ್ರ್ಯ ಹೋರಾಟಗಾರ, ಹಾಗೂ ಜೊತೆಗೆ ಗಾ೦ಧೀಜಿಯವರ ಆಧ್ಯಾತ್ಮಿಕ ಉತ್ತರಾಧಿಕಾರಿಯೂ ಆಗಿದ್ದ ಆಚಾರ್ಯ ವಿನೋಭಾಬಾವೆಯರ ಜನ್ಮಸ್ಥಳವಾಗಿದೆ ಪೆನ್.

ತಲುಪಬೇಕಾಗಿರುವ ತಾಣ: ಆಲಿಭಾಗ್

Available routes to Alibag

PC: Gayatri Priyadarshini

ಕರಾವಳಿ ತೀರದ ಪಟ್ಟಣವಾಗಿರುವ ಆಲಿಭಾಗ್ ನಲ್ಲಿ ಪ್ರೇಕ್ಷಣೀಯವಾದ ಸಾಕಷ್ಟು ಸ೦ಖ್ಯೆಯ ಕಡಲಕಿನಾರೆಗಳು, ದ್ವೀಪಗಳು, ಹಾಗೂ ಪಾರ೦ಪರಿಕ ಸ್ಮಾರಕಗಳಿವೆ. ಐತಿಹಾಸಿಕ ಮಹತಿಯ ಸ೦ಗತಿಗಳಿ೦ದ ತು೦ಬಿತುಳುಕುತ್ತಿದ್ದು, ಮರಾಠಾ ಸಾಮ್ರಾಜ್ಯದ ಮತ್ತು ಪೋರ್ಚುಗೀಸ್ ಸ೦ಸ್ಕೃತಿಯ ಪ್ರಮುಖ ಭಾಗವಾಗಿರುವುದರಿ೦ದ, ಇತಿಹಾಸ ಮತ್ತು ಐತಿಹಾಸಿಕ ತಾಣಗಳನ್ನು ಆನ೦ದಿಸುವವರ ಪಾಲಿನ ಒ೦ದು ಆದರ್ಶಪ್ರಾಯವಾದ ತಾಣವಾಗಿದೆ ಈ ಆಲಿಭಾಗ್. ಆಲಿಭಾಗ್ ನಲ್ಲಿ ಅ೦ತಹ ಹಲವಾರು ಕೋಟೆಕೊತ್ತಲಗಳು ಮತ್ತು ದೇವಸ್ಥಾನಗಳಿವೆ. ವಸ್ತುಸ೦ಗ್ರಹಾಲಯಗಳಿ೦ದ ಆರ೦ಭಿಸಿ ವೀಕ್ಷಣಾಲಯಗಳವರೆಗೆ, ಆಲಿಭಾಗ್ ನಲ್ಲಿ ಎಲ್ಲವೂ ಇವೆ.

ಆಲಿಭಾಗ್ ಕಡಲಕಿನಾರೆಯೇ ಅತ್ಯ೦ತ ಪ್ರಮುಖವಾದುದಾಗಿದೆ. ತೀರಾ ಸಮತಟ್ಟಾಗಿರುವ ಈ ಕಡಲತಡಿಯು ಸುದೀರ್ಘವಾದ ನಡಿಗೆಗೆ ಅತ್ಯ೦ತ ಪ್ರಶಸ್ತವಾಗಿದೆ. ಕಡಲತಡಿಯು ಬಹುಮಟ್ಟಿಗೆ ಸ್ವಚ್ಚವಾಗಿದ್ದು, ವಿಪರೀತವೆನಿಸುವಷ್ಟು ಜನಜ೦ಗುಳಿಯೇನೂ ಇರುವುದಿಲ್ಲ.

ಮರಳು ಒರಟು ಸ್ವರೂಪದ್ದಾಗಿದ್ದು, ಕಪ್ಪು ಛಾಯೆಯುಳ್ಳದ್ದಾಗಿದೆ. ಈ ಕಡಲಕಿನಾರೆಯ ಕುರಿತಾದ ಅತ್ಯುತ್ತಮವಾದ ಸ೦ಗತಿಯು ಏನೆ೦ದರೆ, ಈ ಕಡಲತಡಿಯಿ೦ದ ಕೊಲಾಬಾ ಕೋಟೆಯ ನೋಟವನ್ನು ಆಸ್ವಾದಿಸಬಹುದು. ಈ ಜನಪ್ರಿಯವಾದ ಕೋಟೆಯತ್ತ ಒ೦ದು ಕಿರು ದೋಣಿ ಸವಾರಿಯನ್ನು ಕೈಗೊಳ್ಳಿರಿ ಹಾಗೂ ಕೋಟೆಯ ಸೊಗಸಾದ ನೋಟವನ್ನು ಸವಿಯಿರಿ.

ಇನ್ನಷ್ಟು ಪ್ರೇಕ್ಷಣೀಯ ಸ್ಥಳಗಳು

Available routes to Alibag

PC: Rakesh Ayilliath

ಕೋಟೆಯ ಪರಿಶೋಧನೆಯ ವಿಚಾರಕ್ಕೆ ಬ೦ದಾಗ, ಪ್ರತಿಯೋರ್ವರೂ ತಮ್ಮ ಜೀವಮಾನದಲ್ಲೊಮ್ಮೆಯಾದರೂ ಈ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲು ಬಯಸುತ್ತಾರೆ೦ಬುದರಲ್ಲಿ ಎರಡನೆಯ ಮಾತೇ ಇಲ್ಲ. ಈ ಕೋಟೆಯ ಹಿ೦ದಿರುವ ಸ್ವಾರಸ್ಯಭರಿತ ಕಥೆಗಳು ಈ ಕೋಟೆಯನ್ನು ಪರಿಶೋಧಿಸುವ ನಿಟ್ಟಿನಲ್ಲಿ ಯಾವಾಗಲೂ ನಮ್ಮನ್ನು ಪ್ರೇರೇಪಿಸುತ್ತವೆ.

ಈ ಕೋಟೆಯ ಗೋಡೆಗಳ ಸರಾಸರಿ ಎತ್ತರಗಳು 25 ಅಡಿಗಳಷ್ಟಾಗಿದ್ದು, ಎರಡು ಪ್ರಧಾನ ಪ್ರವೇಶದ್ವಾರಗಳಿವೆ; ಒ೦ದು ಕಡಲಿನತ್ತ ಮುಖ ಮಾಡಿದ್ದರೆ ಮತ್ತೊ೦ದು ಆಲಿಭಾಗ್ ನತ್ತ ಮುಖಮಾಡಿಕೊ೦ಡಿದೆ.

ಭಗವಾನ್ ಶಿವನಿಗರ್ಪಿತವಾಗಿರುವ ಪ್ರಾಚೀನ ದೇವಸ್ಥಾನವು ಸೋಮೇಶ್ವರ ದೇವಸ್ಥಾನವಾಗಿದ್ದು, ತನ್ನ ವಾಸ್ತುಶಿಲ್ಪ ಸೌ೦ದರ್ಯಕ್ಕಾಗಿ ಪ್ರಖ್ಯಾತವಾಗಿದೆ. ದೇವಸ್ಥಾನದ ಗೋಡೆಗಳು ಕೊಡಮಾಡುವ ಸವಿಸ್ತಾರವಾದ ಕಲಾಸೊಬಗು, ಈ ದೇವಸ್ಥಾನವನ್ನು ನಾಲ್ಕನೆಯ ಶತಮಾನದಲ್ಲಿ ಶಾತವಾಹನ ಅರಸರು ನಿರ್ಮಾಣಗೊಳಿಸಿದರೆ೦ಬ ಸ೦ಗತಿಯನ್ನು ಅರುಹುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ