Search
  • Follow NativePlanet
Share
» »ಯಾವ ಹೂವಿನ ಕಣಿವೆ, ನೆದರ್ ಲ್ಯಾಂಡ್ ಗೂ ಕಮ್ಮೀ ಇಲ್ಲ ‘ಗುಂಡ್ಲುಪೇಟೆ’

ಯಾವ ಹೂವಿನ ಕಣಿವೆ, ನೆದರ್ ಲ್ಯಾಂಡ್ ಗೂ ಕಮ್ಮೀ ಇಲ್ಲ ‘ಗುಂಡ್ಲುಪೇಟೆ’

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಪಟ್ಟಣವಾಗಿದ್ದು, ಬೆಂಗಳೂರಿನಿಂದ ಸುಮಾರು 200 ಕಿಮೀ ದೂರದಲ್ಲಿದೆ. ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಗುಂಡ್ಲುಪೇಟೆಯಿಂದ ಸುಮಾರು 17 ಕಿಮೀ ದೂರದಲ್ಲಿದೆ. ಹಿಂದೆ 'ವಿಜಯಪುರ' ಎಂದು ಕರೆಯಲ್ಪಡುತ್ತಿದ್ದ ಗುಂಡ್ಲುಪೇಟೆಯು ವಿಜಯನಾರಾಯಣ ಅಭಯಾರಣ್ಯಕ್ಕೆ ಸಮೀಪದಲ್ಲಿರುವುದರಿಂದ ಈ ಹೆಸರನ್ನು ಪಡೆದುಕೊಂಡಿತು ಎನ್ನಲಾಗಿದೆ. ಹಲವಾರು ಕಾರಣಗಳಿಗೆ ಜನಪ್ರಿಯತೆ ಗಳಿಸಿರುವ ಗುಂಡ್ಲುಪೇಟೆ ಹೂವುಗಳ ಕೃಷಿಗೂ ಖ್ಯಾತಿ ಪಡೆದಿದೆ.

ಕರ್ನಾಟಕದ ಫ್ಲವರ್ ಪಾಟ್ ಎಂದು ಕರೆಯಲ್ಪಡುವ ಗುಂಡ್ಲುಪೇಟೆಯಲ್ಲಿ ಸಾಕಷ್ಟು ಫೋಟೋಶೂಟ್'ಗಳು ನಡೆಯುತ್ತಲೇ ಇರುತ್ತವೆ. ಈ ಸ್ಥಳದ ಸೌಂದರ್ಯ ಸವಿಯಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇಲ್ಲಿಗೆ ಸೇರುತ್ತಾರೆ. ಗುಂಡ್ಲುಪೇಟೆ ನೋಡಿದರೆ ನೀವು ವ್ಯಾಲಿ ಆಫ್ ಫ್ಲವರ್ಸ್ ನೋಡಬೇಕಾದ ಅಗತ್ಯವಿಲ್ಲ ಅಥವಾ ಫೋಟೋಗ್ರಫಿಗೆಂದು ನೆದರ್‌ಲ್ಯಾಂಡ್ಸ್‌ನ ಟುಲಿಪ್ ಕ್ಷೇತ್ರಗಳಿಗೆ ಪ್ರವಾಸ ತೆರಳಿ ನಿಮ್ಮ ಹಣವನ್ನು ಕಳೆದುಕೊಳ್ಳಬೇಕಿಲ್ಲ. ಆದರೆ ಹೆಚ್ಚಿನ ಪ್ರವಾಸಿಗರಿಗೆ ಈ ಬಗ್ಗೆ ಚೆನ್ನಾಗಿ ತಿಳಿದಿಲ್ಲ. ಆದರೆ ಗೋಪಾಲಸ್ವಾಮಿ ಬೆಟ್ಟಗಳ ಪಕ್ಕದಲ್ಲಿಯೇ ನೆಲೆಗೊಂಡಿರುವ ಗುಂಡ್ಲುಪೇಟೆಯ ಸೂರ್ಯಕಾಂತಿ ಜಮೀನುಗಳು ಪ್ರಯಾಣಿಕರನ್ನು ಕೈ ಬೀಸಿ ಕರೆಯುತ್ತವೆ.

ಸೊಂಪಾದ ಸೂರ್ಯಕಾಂತಿ ತೋಟಗಳು

ಸೊಂಪಾದ ಸೂರ್ಯಕಾಂತಿ ತೋಟಗಳು

ಈ ಮೊದಲೇ ಹೇಳಿದ ಹಾಗೆ ಗುಂಡ್ಲುಪೇಟೆಯಲ್ಲಿ ಹೂವಿನ ಬೆಳೆ ಜಾಸ್ತಿ. ಗುಂಡ್ಲುಪೇಟೆ ಬಹಳ ದೊಡ್ಡ ಸೂರ್ಯಕಾಂತಿ ಕ್ಷೇತ್ರವಾಗಿದ್ದು, ಸಂತೋಷದ ಕಂಪನ್ನು ಹೊರಹಾಕುತ್ತದೆ. ಇದು ಸೂರ್ಯಕಾಂತಿ ಮತ್ತು ಚೆಂಡು ಹೂಗಳಿಂದ ತುಂಬಿ ಹೋಗಿದೆ. ಇದು ವಾರಾಂತ್ಯದ ಪ್ರವಾಸಕ್ಕೆ ಪರ್ ಫೆಕ್ಟ್ ಪ್ಲೇಸ್ ಆಗಿದೆ. ಈ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ಪ್ರವಾಸ ಹೊರಟರೆ ಇನ್ನು ಮಜವಾಗಿರುತ್ತದೆ.

ಇಲ್ಲಿ ಸೊಂಪಾದ ಸೂರ್ಯಕಾಂತಿ ತೋಟಗಳ ಹೂವಿನ ಸೌಂದರ್ಯವನ್ನು ಸರಿಯಾಗಿ ಆಸ್ವಾದಿಸಲು ಬಯಸಿದರೆ, ಗೋಪಾಲಸ್ವಾಮಿ ಬೆಟ್ಟವನ್ನು ಏರಿ ಹೂವಿನ ನೋಟವನ್ನು ಕಣ್ತುಂಬಿಕೊಳ್ಳಬಹುದು. ಆದ್ದರಿಂದ ನೀವು ಬೆಂಗಳೂರಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿದ್ದರೆ, ನೀವು ಗುಂಡ್ಲುಪೇಟೆಯಲ್ಲಿ ನಿಮ್ಮ ವಾಹನ ನಿಲ್ಲಿಸುವುದನ್ನು ಮರೆಯಬೇಡಿ.

ಹಳದಿ ಸಮುದ್ರದಂತೆಯೇ ಭಾಸ

ಹಳದಿ ಸಮುದ್ರದಂತೆಯೇ ಭಾಸ

ಗುಂಡ್ಲುಪೇಟೆ ರಸ್ತೆಯ ಎರಡೂ ಬದಿಯಲ್ಲಿ ಸೂರ್ಯಕಾಂತಿ ಹೂಗಳನ್ನು ನೋಡಬಹುದು. ಇದೊಂದು ರೀತಿ ನಿಮಗೆ ಹಳದಿ ಸಮುದ್ರದಂತೆ ಭಾಸವಾಗುತ್ತದೆ. ಇದರ ಹಿಂದೆ ಕಾಣುವ ಹಸಿರು ಬೆಟ್ಟಗಳು ಕೂಡ ಫೋಟೋಗ್ರಫಿಗೆ ಇದು ಸೂಕ್ತ ತಾಣ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತದೆ.

ಇದೊಂದು ರೀತಿ ವರ್ಣಚಿತ್ರದಂತೆ ಕಾಣುವುದರಿಂದ ರಾಜ್ಯದಾದ್ಯಂತ ಛಾಯಾಗ್ರಾಹಕರು ಹಳದಿ ವರ್ಣಗಳ ಸ್ನ್ಯಾಪ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಬರುತ್ತಾರೆ. ನೀಲಿ ಆಕಾಶ, ಹಳದಿ ಹೂವುಗಳು, ಸಂಜೆಯ ತಂಗಾಳಿ...ಆಹಾ ಸ್ವರ್ಗಕ್ಕೆ ಮೂರೇ ಗೇಣು!

ಈ ಸಮಯದಲ್ಲಿ ಭೇಟಿ ಕೊಟ್ಟರೆ ಚೆನ್ನ

ಈ ಸಮಯದಲ್ಲಿ ಭೇಟಿ ಕೊಟ್ಟರೆ ಚೆನ್ನ

ಪ್ರತಿ ವಸಂತಕಾಲದಲ್ಲಿ ಅರಳುವ ಡಚ್ ಟುಲಿಪ್ ಫೀಲ್ಡ್'ಗಳ ಫೋಟೋಗಳನ್ನು ನೋಡಲು ಬಯಸುವವರು ಗುಂಡ್ಲುಪೇಟೆಯನ್ನೂ ಒಮ್ಮೆ ನೋಡಲೇಬೇಕು. ರಾಜ್ಯದ ಅತ್ಯಂತ ಸುಂದರವಾದ ಹೂವಿನ ತೋಟಗಳಿಗೆ ನೆಲೆಯಾಗಿರುವ ಇದು ಪ್ರವಾಸಿಗರಿಂದ ಛಾಯಾಗ್ರಾಹಕರವರೆಗೆ ಎಲ್ಲರನ್ನೂ ಸೆಳೆಯುತ್ತದೆ. ಜೂನ್ ಮತ್ತು ಸೆಪ್ಟೆಂಬರ್ ನಡುವೆ ಭೇಟಿ ನೀಡಿದರೆ ಉತ್ತಮ. ಈ ಸಮಯದಲ್ಲಿ ಸೂರ್ಯಕಾಂತಿ ಹೂಗಳು ಮತ್ತು ಚೆಂಡು ಹೂಗಳು ಅರಳಿ ನಿಂತಿರುವುದರಿಂದ ಹಳದಿ ಮತ್ತು ಕಿತ್ತಳೆ ಶೇಡ್'ಗಳಲ್ಲಿ ಇಲ್ಲಿನ ಜಮೀನುಗಳು ಬೆಳಗುತ್ತವೆ.

ಫೋಟೋಶೂಟ್‌'ಗೆ ಮತ್ತು ಸೆಲ್ಫಿ ತೆಗೆದುಕೊಳ್ಳಲು ಸೂಕ್ತವಾಗಿರುತ್ತದೆ. ಫೋಟೋ ತೆಗೆದುಕೊಳ್ಳಲು ರೈತರು ನಿಮಗೆ ಅತ್ಯಲ್ಪ ಮೊತ್ತವನ್ನು ಕೇಳಬಹುದು. ಆದರೆ ಜಲಪಾತಗಳನ್ನು ನೋಡಲು ಇಷ್ಟಪಡುವವರಿಗೆ ಮಳೆಗಾಲ ಕೂಡ ಸೂಕ್ತವಾಗಿದೆ. ಚಳಿಗಾಲದ ತಿಂಗಳುಗಳು ಸಹ ಪ್ರವಾಸವನ್ನು ಯೋಜಿಸಲು ಸೂಕ್ತ ಸಮಯವಾಗಿದೆ.

ಸಮಯವಿದ್ದರೆ ಇಲ್ಲೆಲ್ಲಾ ಸುತ್ತಬಹುದು

ಸಮಯವಿದ್ದರೆ ಇಲ್ಲೆಲ್ಲಾ ಸುತ್ತಬಹುದು

ನಿಮಗೆ ಹೆಚ್ಚು ಸಮಯವಿದ್ದರೆ ಆಟೋ ರಿಕ್ಷಾದಲ್ಲಿ ಊರು ಸುತ್ತಿ. ಮಾರಿಯಮ್ಮ ದೇವಾಲಯ, ಗೋಪಾಲಸ್ವಾಮಿ ಬೆಟ್ಟಗಳು, ಕೊಡಸೋಗೆ ಶಿವ ದೇವಾಲಯ, ಮಂಚಳ್ಳಿ ಗುಹೆ ದೇವಾಲಯ, ನರಸಮಂಗಲ ಶಿವ ದೇವಾಲಯ, ಪಾರ್ವತಿ ಬೆಟ್ಟಗಳು ಮತ್ತು ತೆರಕನಬಿ ಮತ್ತು ತ್ರಿಯಂಬಕಪುರ ದೇವಾಲಯಗಳು ಇಲ್ಲಿ ನೋಡಲೇಬೇಕಾದ ಇತರ ಪ್ರಮುಖ ಆಕರ್ಷಣೆಗಳಾಗಿವೆ.

ಮೀನು ಕರಿ ಮತ್ತು ಅನ್ನ ಸವಿಯುತ್ತಾ ಮಂಗಳೂರು ಶೈಲಿಯ ಊಟದೊಂದಿಗೆ ನಿಮ್ಮ ಪ್ರವಾಸವನ್ನು ಪೂರ್ಣಗೊಳಿಸಲು ಗುಂಡ್ಲುಪೇಟೆ ಅತ್ಯುತ್ತಮ ತಾಣವಾಗಿದೆ. ಮೈಸೂರು, ಕೂರ್ಗ್, ಊಟಿಯಂತಹ ಜನಪ್ರಿಯ ಸ್ಥಳಗಳು ಸಹ ಪಟ್ಟಣಕ್ಕೆ ಹತ್ತಿರದಲ್ಲಿದೆ.

ರೋಡ್ ಟ್ರಿಪ್ ಎಂಜಾಯ್ ಮಾಡಿ

ರೋಡ್ ಟ್ರಿಪ್ ಎಂಜಾಯ್ ಮಾಡಿ

ನೀವು ಕರ್ನಾಟಕದಲ್ಲಿಯೇ ವಾಸಿಸುತ್ತಿದ್ದು, ರೋಡ್ ಟ್ರಿಪ್ ತೆರಳಲು ಸ್ಥಳಗಳನ್ನು ಹುಡುಕುತ್ತಿದ್ದರೆ, ಗುಂಡ್ಲುಪೇಟೆಯು ಸರಿಯಾದ ತಾಣವಾಗಿದೆ. ನೀವು ಪ್ರಕೃತಿ ಪ್ರಿಯರಾಗಿದ್ದರೆ, ಜನಜಂಗುಳಿಯಿಂದ ಹೆಚ್ಚು ದೂರವಿರಲು ಬಯಸಿದ್ದರೆ, ಗುಂಡ್ಲುಪೇಟೆಯ ಸೂರ್ಯಕಾಂತಿ ಫೀಲ್ಡ್'ಗೆ ಹೊರಡಲು ತಯಾರಿ ಮಾಡಿಕೊಳ್ಳಿ.

ಹಂಪಿ, ಬೆಂಗಳೂರು ಮತ್ತು ಗೋಕರ್ಣದಂತಹ ಜನಪ್ರಿಯ ಪ್ರವಾಸಿ ತಾಣಗಳಿಂದ ಸಾಕಷ್ಟು ದೂರದಲ್ಲಿರುವ ಗುಂಡ್ಲುಪೇಟೆಯು ಮರೆಯಲಾಗದ ರೋಡ್ ಟ್ರಿಪ್ ಹೊಸ ಅನುಭವ ಕೊಡುತ್ತದೆ. ಇದಿಷ್ಟೇ ಅಲ್ಲ, ಅದ್ಭುತವಾದ ಗ್ರಾಮೀಣ ಪರಿಸರ ಮತ್ತು ಮಾರ್ಗ ಮಧ್ಯದಲ್ಲಿ ಕೆಲವು ಗುಪ್ತ ಜಲಪಾತಗಳನ್ನು ಸಹ ಕಂಡುಹಿಡಿಯಬಹುದು.

ಪ್ರದರ್ಶನಕ್ಕೆ ಬೆಳೆಯುವುದಿಲ್ಲ

ಪ್ರದರ್ಶನಕ್ಕೆ ಬೆಳೆಯುವುದಿಲ್ಲ

ಅಂದಹಾಗೆ ಗುಂಡ್ಲುಪೇಟೆಯಲ್ಲಿ ಸೂರ್ಯಕಾಂತಿ ಹೂಗಳನ್ನು ಕೇವಲ ಪ್ರದರ್ಶನಕ್ಕಾಗಿ ಬೆಳೆಯುವುದಿಲ್ಲ. ಇದರಿಂದ ಅಡುಗೆ ಎಣ್ಣೆ ತೆಗೆಯಲು ಮೈಸೂರಿಗೆ ಕೊಂಡೊಯ್ಯಲಾಗುತ್ತದೆ. ಇನ್ನು ಚೆಂಡು ಹೂಗಳನ್ನು ದಕ್ಷಿಣ ಭಾರತದಾದ್ಯಂತ ದೇವಾಲಯಗಳು ಮತ್ತು ಇತರ ಧಾರ್ಮಿಕ ಉದ್ದೇಶಗಳಿಗಾಗಿ ಕಳುಹಿಸಲಾಗುತ್ತದೆ.

ಈ ಹೂವುಗಳನ್ನು ಓಣಂ ಮುಂತಾದ ಹಬ್ಬಗಳ ಆಚರಣೆಗಳಿಗೂ ಬಳಸಲಾಗುತ್ತದೆ. ಹೂಗಳು ಸಂಪೂರ್ಣವಾಗಿ ಅರಳಿದಾಗ, ನಿಮ್ಮ ಪ್ರೀತಿಪಾತ್ರರೊಂದಿಗೆ ಡಿಡಿಎಲ್'ಜೆ ಕ್ಷಣವನ್ನು ಮರುಸೃಷ್ಟಿಸಲು ಇದು ಪರಿಪೂರ್ಣ ಸ್ಥಳವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X