Search
  • Follow NativePlanet
Share
» »ಏನಿದು ಗೋಲ್ಡನ್ ಟ್ರಯಂಗಲ್ ಪ್ರವಾಸ?

ಏನಿದು ಗೋಲ್ಡನ್ ಟ್ರಯಂಗಲ್ ಪ್ರವಾಸ?

By Vijay

ಪ್ರವಾಸ ಒಂದು ರೀತಿಯ ಅನನ್ಯ ಅನುಭವ ನೀಡುವ, ಮನಸ್ಸಿಗೆ ಸಂತಸ ನೀಡುವ, ಜ್ಞಾನ ಹೆಚ್ಚಿಸುವ ಚಟುವಟಿಕೆಯಾಗಿದೆ. ಕೆಲವರು ಸ್ಥಳಗಳ ಕುರಿತು ತಿಳಿಯ ಬಯಸಿ ಪಯಣಿಸಿದರೆ, ಹಲವರು ಬಂಧುಗಳೊಡನೆಯೊ, ಸ್ನೇಹಿತರೊಂದಿಗೊ ಸಮಯ ಕಳೆಯಲು ಪ್ರವಾಸ ಹೊರಡುತ್ತಾರೆ. ಉದ್ದೇಶಗಳು ಏನೇ ಇರಲಿ ಅತಿ ಮುಖ್ಯ ಪಾತ್ರ ವಹಿಸುವುದು ಪ್ರವಾಸ ಎಂಬ ಚಟುವಟಿಕೆ ಮಾತ್ರ.

ಇನ್ನು, ಪ್ರವಾಸದಲ್ಲೂ ಹಲವಾರು ವಿಧಗಳಿವೆ. ಕೆಲವರಿಗೆ ಟ್ರೆಕ್ ಅಥವಾ ಚಾರಣದ ಪ್ರವಾಸ ಇಷ್ಟವಾದರೆ, ಇನ್ನೂ ಕೆಲವರು ಪ್ರಖ್ಯಾತವಾದ ಸ್ಥಳಗಳನ್ನು ತಾವೆ ಖುದ್ದಾಗಿ ನೋಡಬೇಕೆಂದು ಬಯಸಿ ಪ್ರವಾಸ ಹೊರಡುವುದು ಸಾಮಾನ್ಯ. ಅದರಂತೆ ಕೆಲ ಸ್ಥಳಗಳು ಭೌತಿಕವಾಗಿ ಒಂದು ಅನನ್ಯ ಸಂಕೇತ ಕೊಡುವುದರಿಂದಲೊ ಏನೊ ವಿಶೇಷವಾದ ಹೆಸರನ್ನು ಪಡೆದು ಬಿಡುತ್ತವೆ.

ಉದಾಹರಣೆಗೆ ಹಸಿರುಪಥ. ರೈಲಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಾಗುವಾಗ ಸಕಲೇಶಪುರದ ನಂತರದಿಂದ ಪ್ರಾರಂಭವಾಗುವ ಹಸಿರುಪಥ ಎಂಬ ಹೆಸರಿನ ಪ್ರವಾಸ ಅಥವಾ ಟ್ರೆಕ್ಕಿಂಗ್ ಬಹು ಹೆಸರುವಾಸಿ. ಅಲ್ಲದೆ ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್ ಕೂಡ ರಾಷ್ಟ್ರೀಯ ಹೆದ್ದಾರಿಗಳ ಒಂದು ಅಂತರ್ಜಾಲವಾಗಿದೆ.

ಇದೆ ರೀತಿಯಾಗಿ ಗೋಲ್ಡನ್ ಟ್ರಯಂಗಲ್ (ಸುವರ್ಣ ತ್ರಿಭುಜ) ಎಂಬ ಪ್ರವಾಸ ಚಟುವಟಿಕೆಯು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ. ಏನೀದು ಗೋಲ್ಡನ್ ಟ್ರಯಂಗಲ್? ಎಂದು ತಲೆ ಕೆಡಿಸಿಕೊಳ್ಳಬೇಡಿ. ಮೂಲತಃ ಇದೊಂದು ದೇಶದ ಮೂರು ಪ್ರಮುಖ ನಗರಗಳನ್ನು ಒಂದಕ್ಕೊಂದು ಬೆಸೆಯುವ ರಸ್ತೆ ಜಾಲ. ಈ ರಸ್ತೆ ಜಾಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ತ್ರಿಭುಜದ ಆಕಾರದಲ್ಲಿರುವುದು ಕಂಡುಬರುತ್ತದೆ.

ಅಲ್ಲದೆ, ಈ ತ್ರಿಕೋನ ರಸ್ತೆ ಜಾಲವು ಪ್ರವಾಸಿ ಪ್ರಖ್ಯಾತಿಯ ತಾಣಗಳನ್ನು ಬೆಸೆಯುವುದರಿಂದ "ಸುವರ್ಣ" ರಸ್ತೆ ಜಾಲದ ಹೆಸರನ್ನು ಪಡೆದಿದೆ. ಈ ರಸ್ತೆ ಜಾಲದಲ್ಲಿ ಒಳಪಡುವ ಮೂರು ಮುಖ್ಯ ನಗರಗಳೆಂದರೆ ದೇಶದ ರಾಜಧಾನಿ ನಗರ ನವ ದೆಹಲಿ, ಉತ್ತರ ಪ್ರದೇಶದ ಪ್ರಖ್ಯಾತ ಆಗ್ರಾ ಹಾಗೂ ಕೊನೆಯದಾಗಿ ರಾಜಸ್ಥಾನದ ಜೈಪುರ ನಗರ.

ದೆಹಲಿ:

ರಾಜಧಾನಿ ನಗರ ದೆಹಲಿಯು ಪ್ರವಾಸದ ಪ್ರಾರಂಭಿಕ ನಗರವಾಗಿದ್ದು ಸಾಕಷ್ಟು ಜನ ವಿದೇಶಿಯರು ಈ ಸುವರ್ಣ ಪ್ರವಾಸವನ್ನು ಮೊದಲು ದೆಹಲಿಯಿಂದಲೆ ಆರಂಭಿಸುತ್ತಾರೆ. ದೆಹಲಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣವು ಜಗತ್ತಿನ ಹಲವು ದೇಶಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ದೆಹಲಿಗೆ ಬರುವ ಎಲ್ಲ ವಿದೇಶಿ ಪ್ರವಾಸಿಗರಲ್ಲಿ ಈ ಪ್ರವಾಸ ಒಂದು ಅಮೋಘ ಅನುಭವವನ್ನು ಕರುಣಿಸುತ್ತದೆ. ಚಿತ್ರದಲ್ಲಿರುವುದು ದೆಹಲಿಯ ಪ್ರಖ್ಯಾತ ಬಹಾಯ್ ಅಥವಾ ಲೋಟಸ್ ಟೆಂಪಲ್.

ಚಿತ್ರಕೃಪೆ: Arian Zwegers

ದೆಹಲಿ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ದೆಹಲಿಯಲ್ಲಿರುವ ಅಕ್ಷರಧಾಮ ಅಥವಾ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ಭಾರತೀಯ ಸಂಸ್ಕೃತಿ, ಕಲೆ ಹಾಗೂ ಧಾರ್ಮಿಕತ್ವದ ಪ್ರತೀಕವಾಗಿದೆ. ಬೋಚಾಸನವಾಸಿ ಶ್ರೀ ಅಕ್ಷರಾ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಯ ಧಾರ್ಮಿಕ ನಾಯಕರಾದ ಪ್ರಮುಖ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸುಮಾರು 5 ವರ್ಷಗಳ ಅವಧಿಯಲ್ಲಿ ಈ ದೇವಾಲಯದ ನಿರ್ಮಾಣ ಮಾಡಲಾಗಿದೆ.[ದೆಹಲಿಯ ಸಮಗ್ರ ಆಕರ್ಷಣೆಗಳು]

ಚಿತ್ರಕೃಪೆ: Russ Bowling

ಆಗ್ರಾ:

ಆಗ್ರಾ ಎಂದರೆ ಸಾಕು ಎಲ್ಲರ ತಲೆ/ಮನದಲ್ಲಿ ಮೊದಲು ಬರುವುದು ತಾಜ್ ಮಹಲ್ ಎಂಬ ಮನಮೋಹಕ, ಅತ್ಯಾಕರ್ಷಕ ಸ್ಮಾರಕದ ಕಟ್ಟಡ. ತಾಜ್ ಮಹಲ್ ಹಿಂದಿರುವ ಹಿನ್ನಿಲೆ ಏನೆ ಇರಲಿ, ಆದರೆ ಈ ರಚನೆಯು ಮಾತ್ರ ನಮ್ಮ ದೇಶದ ಹೆಮ್ಮೆ ಎಂತಲೆ ಹೇಳಬಹುದು. ದೆಹಲಿಯಿಂದ ಆಗ್ರಾ ಪಟ್ಟಣವು 210 ಕಿ.ಮೀ ಗಳಷ್ಟು ದೂರವಿದ್ದು, ಬಸ್ಸು ಹಾಗೂ ರೈಲುಗಳೆರಡೂ ಇಲ್ಲಿಗೆ ತೆರಳಲು ಸುಲಭವಾಗಿ ದೊರೆಯುತ್ತವೆ. ಅಲ್ಲದೆ ಈ ಸುವರ್ಣ ತ್ರಿಭುಜ ಪ್ರವಾಸವನ್ನು ಆಯೋಜಿಸುವ ಸಾಕಷ್ಟು ಖಾಸಗಿ ಬಸ್ಸು ಸೇವೆಗಳೂ ಸಹ ದೊರೆಯುತ್ತವೆ.

ಚಿತ್ರಕೃಪೆ: Maliboy

ತಾಜ್ ಮಹಲ್ ಹೊರತಾಗಿ ಆಗ್ರಾದಲ್ಲಿರುವ ಕೋಟೆಯೂ ಸಹ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಈ ಕೋಟೆಯನ್ನು ಒಮ್ಮೊಮ್ಮೆ ಕೆಂಪು ಕೋಟೆ ಎಂದೂ ಸಹ ಕರೆಯುತ್ತಾರೆ. ಇದು ದೆಹಲಿಯಲ್ಲಿನ ಕೆಂಪು ಕೋಟೆಗೆ ಪೂರ್ವಗಾಮಿಯಾಗಿ ನಿರ್ಮಾಣಗೊಂಡ ಕೋಟೆಯಾಗಿದೆ. ಚಿತ್ರದಲ್ಲಿರುವುದು ಆಗ್ರಾ ಕೋಟೆ. [ಆಗ್ರಾ ಆಕರ್ಷಣೆಗಳು]

ಚಿತ್ರಕೃಪೆ: Travis

ಸುವರ್ಣ ತ್ರಿಭುಜದ ಎರಡನೇಯ ತಾಣವಾದ ಆಗ್ರಾ ಭೇಟಿಯ ನಂತರ ಮುಂದೆ ಈ ಪ್ರವಾಸವು ರಾಜಸ್ಥಾನ ರಾಜ್ಯದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾದ ಜೈಪುರದತ್ತ ಧಾವಿಸುತ್ತದೆ. ರಾಜಸ್ಥಾನ ರಾಜ್ಯವು ತನ್ನ ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ರಾಜ್ಯದ ರಾಜಧಾನಿ ನಗರವಾದ ಜೈಪುರದಲ್ಲಿ ಈ ಸಂಸ್ಕೃತಿಯನ್ನು ಕಣ ಕಣದಲ್ಲೂ ಆಸ್ವಾದಿಸಬಹುದು. ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಜೈಪುರವನ್ನು ಭಾರತದ "ಪಿಂಕ್ ಸಿಟಿ" ಅಂದರೆ "ಗುಲಾಬಿ ನಗರ" ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Russ Bowling

ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಜೈಪುರವು ಆಗ್ರಾದಿಂದ ಸುಮಾರು 235 ಕಿ.ಮೀ ಗಳಷ್ಟು ಅಂತರದಲ್ಲಿದೆ. ಎತ್ತರದ ಗೋಡೆಯುಳ್ಳ ಕಟ್ಟಡಕ್ಕೆ ಚಿಕ್ಕ ಚಿಕ್ಕ ಕಿಟಕಿಗಳನ್ನು ನಿರ್ಮಿಸಲಾಗಿರುವ, ನೋಡಲು ಅನನ್ಯವಾಗಿ ಗೋಚರಿಸುವ ಪ್ರಸಿದ್ಧ ಹವಾ ಮಹಲ್ ಕೂಡ ಜೈಪುರ ನಗರದಲ್ಲಿದ್ದು, ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಏನಿದು ಗೋಲ್ಡನ್ ಟ್ರಯಂಗಲ್ ಪ್ರವಾಸ?

ಚಿತ್ರಕೃಪೆ: Arian Zwegers

ಜೈಪುರದ ಸಮಗ್ರ ಆಕರ್ಷಣೆಗಳು

ಸುವರ್ಣ ತ್ರಿಭುಜದ ಈ ಪ್ರವಾಸವು ಜೈಪುರದಿಂದ ಹೊರಟು ಮತ್ತೆ ದೆಹಲಿ ತಲುಪಿದಾಗ ಸಂಪೂರ್ಣಗೊಳ್ಳುತ್ತದೆ. ಹೀಗೆ ದೆಹಲಿಯಿಂದ ಪ್ರಾರಂಭವಾದ ಈ ಪ್ರವಾಸವು ಆಗ್ರಾ ತಲುಪಿ ಅಲ್ಲಿಂದ ಜೈಪುರಕ್ಕೆ ತೆರಳಿ, ಮರಳಿ ದೆಹಲಿಗೆ ಬರುವುದನ್ನು ಭೌಗೋಳಿಕವಾಗಿ ಗಮನಿಸಿದಾಗ, ಒಂದು ತ್ರಿಭುಜದ ಆಕಾರದಲ್ಲಿ ರಸ್ತೆ ಜಾಲವಿರುವುದು ಗಮನಕ್ಕೆ ಬರುತ್ತದೆ. ಜೈಪುರದಿಂದ ದೆಹಲಿಯು ಸುಮಾರು 265 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X