Search
  • Follow NativePlanet
Share
» »ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

By Vijay

ಗೋವಾ ಎಂದರೆ ಬೀಚುಗಳು, ಬೀಚುಗಳೆಂದರೆ ಗೋವಾ ಅನ್ನುವಷ್ಟರ ಮಟ್ಟಿಗೆ ಗೋವಾ ದೇಶದಾದ್ಯಂತ ಪ್ರಖ್ಯಾತಿಗಳಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಾಲು ಸಾಲಾಗಿ ರಜೆಗಳು ಬಂದರೆ ಇಲ್ಲವೆ ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಲ್ಲರೂ ಅದರಲ್ಲೂ ವಿಶೇಷವಾಗಿ ಹದಿಹರೆಯದವರು ಗೋವಾಗೆ ತೆರಳಲು ಬಯಸುತ್ತಾರೆ.

ಪಾರ್ಟಿ, ಔತಣಕೂಟಗಳು, ಶೋಕಿಯ ಜೀವನ, ಸ್ಪಾಗಳು, ಮಸಾಜ್ ಪಾರ್ಲರ್ ಗಳು, ಜಲಕ್ರೀಡೆಗಳು ಹೀಗೆ ಒಂದಾದರ ಮೇಲೊಂದಂತೆ ಮೋಜುಗಳನ್ನು ಸವಿಯಲು ಗೋವಾ ಹೆಸರುವಾಸಿಯಾಗಿದೆ. ಪ್ರತಿಯೊಬ್ಬರಿಗೂ ಗೋವಾ ಎಂದರೆ ಸಾಕು ಸಮುದ್ರ ತೀರಗಳಲ್ಲಿ ಕುಣಿದು ಕುಪ್ಪಳಿಸುವ ಕಲ್ಪನೆಗಳು ಮನದಲ್ಲಿ ಅವ್ಯಾಹತವಾಗಿ ಹರಿದಾಡಲು ಪ್ರಾರಂಭಿಸುತ್ತವೆ.

ವಿಶೇಷ ಲೇಖನ : ಬೆಂಗಳೂರಿನ ಇನ್ನೊವೆಟಿವ್ ಫಿಲ್ಮ್ ಸಿಟಿ

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ಅಂದರೆ ಗೋವಾ ಕೇವಲ ಇಂತಹ ಚಟುವಟಿಕೆಗಳಿಗೆ ಮಾತ್ರ ಸೀಮಿತವೆ? ಇದರ ಹೊರತಾಗಿ ನೋಡಲು ಆನಂದಿಸಲು ಏನೂ ಇಲ್ಲವೆ? ಎಂಬಿತ್ಯಾದಿ ವಿಚಾರಗಳು ಬಹುತೇಕರ ಮನದಲ್ಲಿ ಬಂದಿರಲೂಬಹುದು. ಆದರೆ ಖಂಡಿತವಾಗಿಯೂ ಹಾಗಿಲ್ಲ. ಗೋವಾದ ಇನ್ನೊಂದು ಮುಖದ ಪ್ರವಾಸ ಮಾಡಿದಾಗ ಅದರ ಅಂದ ಚೆಂದಗಳು ನಿಮ್ಮನ್ನು ಆಶ್ಚರ್ಯಚಕಿತ ಗೊಳಿಸುತ್ತವೆ.

ಗೋವಾದ ಸುಂದರ ಚಿತ್ರಗಳನ್ನು ನೋಡಬೇಕೇ ?

ಪ್ರಸ್ತುತ ಲೇಖನವು ಗೋವಾದಲ್ಲಿ ಕಡಲ ತೀರಗಳ ಹೊರತಾಗಿ ಕುಟುಂಬ ಸಮೇತ ಯಾವೆಲ್ಲ ಚಟುವಟಿಕೆಗಳನ್ನು ಸಕ್ರೀಯವಾಗಿ ಆನಂದಿಸಬಹುದಾಗಿದೆ ಎಂಬುದರ ಕುರಿತು ಸಂಕ್ಷೀಪ್ತವಾಗಿ ತಿಳಿಸುತ್ತದೆ. ನೀವು ಸಕುಟುಂಬ ಪರಿವಾರ ಸಮೇತ ಗೋವಾಗೆ ತೆರಳಲು ಬಯಸಿದ್ದರೆ ಆದರೆ ಅಲ್ಲಿನ "ಮುಂದುವರಿದ" ಜೀವನ ಶೈಲಿಯ ನೋಟಗಳು ನಿಮ್ಮ ಮಕ್ಕಳಿಗೆ ಅಡಚಣೆ ಉಂಟುಮಾಡಬಾರದೆಂದಿದ್ದರೆ ಈ ರೀತಿಯಾಗಿಯೂ ಗೋವಾ ಪ್ರವಾಸ ಮಾಡಿ.

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ಗೋವಾದಲ್ಲಿ ಕಾಯಾಕಿಂಗ್
ಚಿತ್ರಕೃಪೆ: Gayatri Krishnamoorthy

ಪ್ರಕೃತಿಯೊಡನೆ ವಿಹಾರ : ಅಮಿಗೋಸ್ ಎಂಬ ಸಂಸ್ಥೆಯು ಕೆಲ ಪ್ರಾಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಗುಡ್ಡದ ಮೇಲೆ ಸೈಕ್ಲಿಂಗ್ ಮಾಡುವುದು, ಕಾಯಾಕಿಂಗ್, ಪಶ್ಚಿಮ ಘಟ್ಟಗಳ ಸುಂದರ ಕಾಡುಗಳಲ್ಲಿ ದೋಣಿ ವಿಹಾರ ಹೀಗೆ ಹಲವು ಆನಂದಮಯ ಚಟುವಟಿಕೆಗಳನ್ನು ಇಲ್ಲಿ ಆಸ್ವಾದಿಅಸಬಹುದು. ಇವೆಲ್ಲವೂ ಇಲ್ಲಿರುವ ನೇರುಲ್ ಸೇತುವೆಯಿಂದ ಪ್ರಾರಂಭಗೊಳ್ಳುತ್ತವೆ. ನೇರುಲ್ ಸೇತುವೆಯು ಗೋವಾದ ಪ್ರಸಿದ್ಧ ಕ್ಯಾಂಡೋಲಿಮ್ ಕಡಲ ತೀರದಿಂದ ಕಾಲ್ನಡಿಗೆಯಷ್ಟು ದೂರದಲ್ಲಿದೆ. ಸಾಂದರ್ಭಿಕ ಚಿತ್ರ. ಈ ಚಟುವಟಿಕೆಗೆ ಕನಿಷ್ಠ ಇಬ್ಬರಾದರೂ ಪಾಲ್ಗೊಳ್ಳಲೇಬೇಕು. ನಿಗದಿತ ಶುಲ್ಕ ಪಾವತಿಸಿದಾಗ ನುರಿತ ಮಾರ್ಗದರ್ಶಿ, ಕಾಅಯಾಕ್, ಬೈಕು ಮುಂತಾದ ಉಪಕರಣಗಳನ್ನು ನೀಡಲಾಗುತ್ತದೆ. ಸಾಂದರ್ಭಿಕ ಚಿತ್ರ.

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ಗೋವಾದಲ್ಲಿರುವ ಸ್ಪೈಸ್ ಪ್ಲ್ಯಾಂಟೇಷನ್
ಚಿತ್ರಕೃಪೆ: bcawston

ಸಾಂಬಾರು ಪದಾರ್ಥಗಳ ತೋಟಗಳಲ್ಲಿ ಸುತ್ತು : ಪಣಜಿಯಿಂದ 25 ಕಿ.ಮೀ ಹಾಗೂ ಪೊಂಡಾದಿಂದ 15 ಕಿ.ಮೀ ಗಳಷ್ಟು ದೂರದಲ್ಲಿರುವ ಸವೋಯ್ ಪೊಂಡಾ ಎಂಬಲ್ಲಿ ಈ ತೋಟವನ್ನು ನೋಡಬಹುದಾಗಿದೆ. ಇದು ಹಳೆಯದಾದ ಸಾಂಬಾರು ಪದಾರ್ಥಗಳ ತೋಟಗಳ ಪೈಕಿ ಒಂದಾಗಿದೆ. ಕೇವಲ ಸಾಂಬಾರು ಬೆಳೆಗಳಲ್ಲದೆ ಪೈನಾಪಲ್, ತೆಂಗು ಮುಂತಾದ ಅನೇಕ ರೀತಿಯ ಬೆಳೆಗಳನ್ನು ಕಾಣಬಹುದು. ಗೋವಾದ ಹಿಂದೂ ಸಂಸ್ಕೃತಿಯಂತೆ ನೀಡಲಾಗುವ ಸ್ಥಳೀಯ ಗೋವಾ ವ್ಯಂಜನದ ರುಚಿಯನ್ನು ಮಣ್ಣಿನ ಕುಡಿಕೆ ಹಾಗೂ ಬಾಳೆ ಎಲೆಗಳಲ್ಲಿ ಇಲ್ಲಿ ಸವಿಯಬಹುದು. ಸಂಜೆ ಐದು ಘಂಟೆಯವರೆಗೆ ಮಾತ್ರ ಇದು ತೆರೆದಿರುತ್ತದೆ. ಸಾಂದರ್ಭಿಕ ಚಿತ್ರ.

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ಆನ್ಸೆಸ್ಟ್ರಲ್ ಗೋವಾದಲ್ಲಿರುವ ಒಂದು ಕಲಾಕೃತಿ
ಚಿತ್ರಕೃಪೆ: Basheer Olakara

ಆನ್ಸೆಸ್ಟ್ರಲ್ ಗೋವಾ : ಗೋವಾ ಪ್ರದೇಶದ ಪೂರ್ವಿಕರ ಜೀವನ ಶೈಲಿಯನ್ನು ಅನಾವರಣಗೊಳಿಸುವ ಒಂದು ವಿಭಿನ್ನ ಸಂಗ್ರಹಾಲಯವಾಗಿದೆ ಆನ್ಸೆಸ್ಟ್ರಲ್ ಗೋವಾ. ಈ ಸಂಗ್ರಹಾಲಯವು ಲೌಟೋಲಿಮ್ ಎಂಬ ಹಳ್ಳಿಯಲ್ಲಿದೆ. ಇದು ಗೋವಾದ ಮಡಗಾಂವ್ ನಿಂದ 10 ಕಿ.ಮೀ ಹಾಗೂ ರಾಜಧಾನಿ ಪಣಜಿಯಿಂದ 25 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಸಂಗ್ರಹಾಲಯವು ಖಾಸಗಿಯಾಗಿ ಗೋವಾದ ಕಲಾವಿದರಾದ ಮೈಂದ್ರಾ ಜೋಸಿಲಿನೊ ಅರೌಜೊ ಅಲ್ವಾರೆಸ್ ಎಂಬುವವರಿಂದ ನಡೆಸಲ್ಪಡುತ್ತದೆ. ಇದನ್ನು ಬಿಗ್ ಫುಟ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಸಾಯಂಕಾಲ ಐದು ಘಂಟೆಯವರೆಗೆ ಮಾತ್ರ ಈ ಮ್ಯೂಸಿಯಂ ತೆರೆದಿರುತ್ತದೆ.

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ಬೊಂಡ್ಲಾ ಅಭಯಾರಣ್ಯದ ಚೆಕ್ ಪೋಸ್ಟ್
ಚಿತ್ರಕೃಪೆ: ptwo

ಬೊಂಡ್ಲಾ ಅಭಯಾರಣ್ಯ : ಪಣಜಿಯಿಂದ 52 ಕಿ.ಮೀ ಹಾಗೂ ಮಡಗಾಂವ್ ನಿಂದ 36 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಬೊಂಡ್ಲಾ ರಕ್ಷಿತಾರಣ್ಯವು ಪ್ರಕೃತಿ ಪ್ರಿಯ ಪ್ರವಾಸಿಗರಿಗೆ ಹಾಗೂ ಮಕ್ಕಳಿಗೆ ಗೋವಾ ಕಡಲ ಪಟ್ಟಣದಲ್ಲಿ ಕಂಡುಬರುವ ಅನನ್ಯ ಪ್ರವಾಸಿ ಆಕರ್ಷಣೆಯಾಗಿದೆ. ಇದರೊಳಗಿರುವ ಪ್ರಾಣಿ ಸಂಗ್ರಹಾಲಯ, ನಡಿಗೆ ಮಾರ್ಗಗಳು, ಜಿಂಕೆ ಉದ್ಯಾನ, ಬಗೆ ಬಗೆಯ ಪಕ್ಷಿ ವೀಕ್ಷಣೆ, ಸಸ್ಯ ಶಾಸ್ತ್ರೀಯ ಉದ್ಯಾನ, ಪ್ರಾಕೃತಿಕ ಶಿಕ್ಷಣೆ ಕೇಂದ್ರ ಮುಂತಾದವುಗಳು ವರ್ಷಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಲೆ ಇವೆ. ಐದು ಘಂಟೆಯವೆರೆಗೆ ಮಾತ್ರ ಇದು ತೆರೆದಿರುತ್ತದೆ.

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ಅಂಜುನಾ ಬುಧವಾರದ ಸಂತೆ
ಚಿತ್ರಕೃಪೆ: Bernard Oh

ಅಂಜುನಾ ಮಾರುಕಟ್ಟೆ : ಪ್ರತಿ ಬುಧವಾರ ಬೆಳಿಗ್ಗೆ ಹತ್ತು ಘಂಟೆಯಿಂದ ಸಾಯಂಕಾಲ ಐದು ಘಂಟೆಯವರೆಗೆ ಈ ಮಾರುಕಟ್ಟೆ ಆಯೋಜಿಸಲ್ಪಡುತ್ತದೆ. ಇದೊಂದು ಸಂತೆ ಇದ್ದ ಹಾಗೆ, ಕಡಿಮೆ ಬೆಲೆಗಳಿಗೆ ವಿಭಿನ್ನ ವಸ್ತುಗಳನ್ನು ಇಲ್ಲಿ ಖರೀದಿಸಬಹುದು. ಗೋವಾದ ಅಂಜುನಾ ಕಡಲ ತೀರದ ದಕ್ಷಿಣಕ್ಕೆ ಕಡಲ ತೀರದಿಂದ ತುಸು ದೂರದಲ್ಲಿ ಈ ಮಾರುಕಟ್ಟೆಯನ್ನು ಕಾಣಬಹುದು. ಬಟ್ಟೆ ಬರೆಗಳಿಂದ ಹಿಡಿದು ಅಲಂಕಾರಿಕ ವಸ್ತುಅಗಳವರೆಗೆ ಎಲ್ಲ ಬಗೆಯ ವಿವಿಧ ವಸ್ತುಗಳನ್ನು ಈ ಮಾರುಕಟ್ಟೆಯಲ್ಲಿ ಕಾಣಬಹುದು ಇಲ್ಲವೆ ಚೌಕಾಸಿ ಮಾಡಿ ಕೈಗೆಟುಕುವ ದರದಲ್ಲಿ ಕೊಳ್ಳಲೂ ಬಹುದು.

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ಸಮುದ್ರದಲ್ಲಿ ಆನಂದಿಸುತ್ತ ವಿಹರಿಸುತ್ತಿರುವ ಡಾಲ್ಫಿನ್ (ಸಾಂದರ್ಭಿಕ ಚಿತ್ರ)
ಚಿತ್ರಕೃಪೆ: Visit St. Pete/Clearwater

ಡಾಲ್ಫಿನ್ ಟ್ರಿಪ್ : ಗೋವಾದ ಕೆಲವು ಕ್ಲಬ್ಬುಗಳು ಹಾಗೂ ರಿಸಾರ್ಟುಗಳು ಈ ರೀತಿಯ ಪ್ರವಾಸಗಳನ್ನು ಆಯೋಜಿಸುತ್ತಿರುತ್ತವೆ. ಡಾಲ್ಫಿನ್ ಗಳು ಬೆಳ್ಳಂಬೆಳಿಗ್ಗೆಗಳಲ್ಲಿ ತೀರದ ಹತ್ತಿರವಿದ್ದು ಸೂರ್ಯ ಕಿರಣಗಳು ಪ್ರಖರವಾಗುತ್ತಿದ್ದಂತೆ ಸಮುದ್ರ ಮಧ್ಯದಲ್ಲಿ ಸಾಗುತ್ತವೆ. ಈ ರೀತಿಯ ಪ್ರವಾಸದಲ್ಲಿ ಸಾಮಾನ್ಯವಾಗಿ ಡಾಲ್ಫಿನ್ ಗಳು ಕಂಡುಬರುವ ಸ್ಥಳಗಳಿಗೆ ಫೆರ್‍ರಿಯ ಮೂಲಕ ಕರೆದೊಯ್ಯಲಾಗುತ್ತದೆ. ಆ ಸ್ಥಳಗಳಲ್ಲಿ ಡಾಲ್ಫಿನ್ ಮೀನುಗಳು ತಮ್ಮ ಸಹಜ ಸ್ಥಿತಿಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವುದನ್ನು ನೋಡಿ ಆನಂದಿಸಬಹುದು.

ತೀರಗಳ ಪಟ್ಟಣ ಗೋವಾದ ಅಗೋಚರ ಮುಖ

ವಿನೂತನ ವಸ್ತುಗಳು (ಸಾಂದರ್ಭಿಕ ಚಿತ್ರ)
ಚಿತ್ರಕೃಪೆ: Nagarjun Kandukuru

ಡಿಲೈಟ್ಸ್ : ನೀವು ಗೋವಾದಲ್ಲಿದ್ದಾಗ ಮಾಪುಸಾದಲ್ಲಿರುವ ಡಿಲೈಟ್ಸ್ ಅಂಗಡಿ ಮಳಿಗೆಗೆ ಭೇಟಿ ನೀಡಲು ಮರೆಯದಿರಿ. ಇಲ್ಲಿ ವಿನೂತನವಾದ ಪಾರ್ಟಿ ಸಂಬಂಧಿ ವಸ್ತುಗಳನ್ನು ಉತ್ತಮ ಬೆಲೆಗೆ ಕೊಂಡುಕೊಳ್ಳಬಹುದು. ಬಣ್ಣದ ಬಲ್ಬುಗಳುಳ್ಳ ಟೋಪಿಗಳು, ಕನ್ನಡಕಗಳು, ಬಲೂನುಗಳು, ಚೀನಾ ಕಂದೀಲುಗಳು, ಮಾಸ್ಕುಗಳು ಹಾಗೂ ಇತರೆ ಆಧುನಿಕ ಆಡಂಬರವಿರುವ ವಿಭಿನ್ನ ವಸ್ತುಗಳನ್ನು ಕೊಳ್ಳಬಹುದು. ಸಾಮಾನ್ಯವಾಗಿ ಈ ರೀತಿಯ ವಸ್ತುಗಳು ಬೇರೆಡೆ ಸಿಗುವುದು ಕಷ್ಟಕರವಾಗಿರುವುದರಿಂದ ಇಲ್ಲಿ ಖರೀದಿಸಿದಂತಹ ವಸ್ತುಗಳು ನಿಮ್ಮ ಮನೆಯಲ್ಲಿ ಪಾರ್ಟಿ ಮಾಡಿದಾಗ ಉಪಯೋಗಿಸಿ ಎಲ್ಲರ ಚಿತ್ತವನ್ನು ಸೆಳೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X