• Follow NativePlanet
Share
Menu
» »ನಾಗ ಪಂಚಮಿಯಂದು ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ ಭಾಗ್ಯ ಪಡೆಯಿರಿ...

ನಾಗ ಪಂಚಮಿಯಂದು ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ ಭಾಗ್ಯ ಪಡೆಯಿರಿ...

Written By:

ಇಂದು ನಾಗಪಂಚಮಿ ನಾಗನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುವ ದಿನ. ನಾಗ ದೇವತೆಗಳು ಕೂಡ ನಮ್ಮ ಜೀವನದಲ್ಲಿ ರಾಹು ಹಾಗೂ ಕೇತುಗಳಾಗಿ ಕೆಲವು ದೋಷಗಳನ್ನು ನೀಡುತ್ತಾರೆ. ಈ ದೋಷಗಳೆಲ್ಲವೂ ನಮ್ಮ ಕಳೆದ ಜನ್ಮದ ಪಾಪ, ಪುಣ್ಯಗಳ ಲೆಕ್ಕಚಾರ ಎಂದು ಹೇಳುತ್ತಾರೆ ಕೆಲವರು.

ಸಾವಿರಾರು ದೇವತೆಗಳಲ್ಲಿ ನಾಗ ದೇವತೆಗಳಿಗೆ ಅವರದೇ ಆದ ಮಹತ್ವವಿದೆ. ಸರ್ಪ ದೋಷ ನಿವಾರಣೆಗೆ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ, ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ, ಶ್ರೀ ಕಾಳಹಸ್ತಿಗೆ ಭಕ್ತರು ಭೇಟಿ ನೀಡುತ್ತಾರೆ.

ದಿನನಿತ್ಯ ನೂರಾರು ಭಕ್ತರು ಸರ್ಪ ಸಂಸ್ಕಾರ, ರಾಹು ಪೂಜೆ, ಕೇತು ಪೂಜೆ. ಹೋಮ ಹವನ, ಹಲವಾರು ವಿಧ ವಿಧದ ಪೂಜೆಗಳನ್ನು ಮಾಡುತ್ತಾರೆ. ಇದರಿಂದ ಪುತ್ರ ಸಂತಾನ, ತಮ್ಮ ಹಲವಾರು ದೋಷ, ವಿವಾಹ, ಕಷ್ಟ ಮೊದಲಾದ ದೋಷಗಳಿಂದ ಮುಕ್ತಿ ಹೊಂದಬಹುದು ಎಂಬುದು ಭಕ್ತರ ನಂಬಿಕೆಯಾಗಿದೆ.

ಸಾಮಾನ್ಯವಾಗಿ ನಿಮಗೆ ತಿಳಿದಿರುವ ಹಾಗೆ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ಬೆಂಗಳೂರಿಗೆ ಅತ್ಯಂತ ಸಮೀಪವಾದ ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಇಂದು ನಾಗಪಂಚಮಿಯಾದ್ದರಿಂದ ಲೇಖನದ ಮೂಲಕ ಒಮ್ಮೆ ಘಾಟಿ ಸುಬ್ರಮಣ್ಯ ಸ್ವಾಮಿಯ ದರ್ಶನ ಮಾಡಿ ಬನ್ನಿ....

ಎಲ್ಲಿದೆ?

ಎಲ್ಲಿದೆ?

ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯವು ಬೆಂಗಳೂರಿನಿಂದ ಸುಮಾರು 52.6 ಕಿ,ಮೀ ದೂರದಲ್ಲಿದೆ. ಘಾಟಿಗೆ ತೆರಳಲು ಬೆಂಗಳೂರಿನಿಂದ ನೇರವಾದ ಬಸ್ ಸೌಕರ್ಯವಿಲ್ಲ ಬದಲಾಗಿ ಘಾಟಿಗೆ ಸಮೀಪವಿರುವ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರಕ್ಕೆ ತೆರಳಿಯೇ ಘಾಟಿಗೆ ತೆರಳಬೇಕು. ದೊಡ್ಡಬಳ್ಳಾಪುರದಿಂದ ಹಲವಾರು ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಸೌಕರ್ಯವಿದ್ದು 20 ನಿಮಿಷದಲ್ಲಿ ಘಾಟಿ ಕ್ಷೇತ್ರಕ್ಕೆ ತಲುಪಬಹುದಾಗಿದೆ.

ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯ

ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯ

ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿದೆ. ಇಲ್ಲಿನ ವಿಶೇಷವೆನೆಂದರೆ ಸುಬ್ರಮಣ್ಯ ಸ್ವಾಮಿ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ. ಈ ಪವಿತ್ರವಾದ ಕ್ಷೇತ್ರಕ್ಕೆ ಮಂಗಳವಾರ ಹಾಗೂ ಭಾನುವಾರದ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ಸ್ಥಳ ಪುರಾಣ

ಸ್ಥಳ ಪುರಾಣ

ಈ ಕ್ಷೇತ್ರದ ಸ್ಥಳ ಪುರಾಣವೆಂದರೆ ವಿಳ್ಳೇದೆಲೆ ವ್ಯಾಪಾರಿಯೊಬ್ಬ ವ್ಯಾಪಾರ ಮಾಡಿ ಈ ಸ್ಥಳದಲ್ಲಿ ತಂಗುತ್ತಿದ್ದನಂತೆ. ಆ ವ್ಯಾಪಾರಿಯ ಪಕ್ಕದಲ್ಲಿಯೇ ಇದ್ದ ಕುಮಾರತೀರ್ಥದ ಬಳಿ ಊಟ ಮಾಡಿ, ನೀರು ಕುಡಿದು ಈಗ ಮೂಲ ಸ್ವಾಮಿ ಇರುವ ಬಲಭಾಗದಲ್ಲಿಯೇ ಮಲಗುತ್ತಿದ್ದನಂತೆ.

ಅಗೋಚರ

ಅಗೋಚರ

ಒಮ್ಮೆ ವ್ಯಾಪಾರಿ ಮಲಗಿದ್ದಾಗ ಮೂಲ ಶಿಲೆಯು ನನ್ನ ಮೇಲೆ ಭಾರವಾಗಿ ಏಕೆ ಮಲಗಿರುವೆ? ಏಳು ಏಳು ಎಂಬ ಮಾತು ಕೇಳಿತಂತೆ. ಆಗ ಆತ ಯಾವುದೋ ದುಷ್ಟಶಕ್ತಿ ಇರಬೇಕು ಎಂದುಕೊಂಡು ಸುಮ್ಮನಾದನು.

ಕನಸ್ಸು

ಕನಸ್ಸು

ಒಂದು ಹಬ್ಬದ ದಿನ ವ್ಯಾಪಾರಿಯು ಮರದಡಿ ಅದೇ ಸ್ಥಳದಲ್ಲಿ ಮಲಗಿದ್ದಾಗ ಸ್ವಾಮಿಯು ವ್ಯಾಪಾರಿಯ ಕನಸ್ಸಿನಲ್ಲಿ ನಿಜ ರೂಪ ದರ್ಶನವನ್ನು ನೀಡಿ, ತಾನು ಈ ಶಿಲೆಯಿಂದ 20 ಗಜಾಂತರ ದೂರದಲ್ಲಿ ಇರುವುದಾಗಿ ತಿಳಿಸಿದನು.

ಬ್ರಾಹ್ಮಣ

ಬ್ರಾಹ್ಮಣ

ವ್ಯಾಪಾರಿಯು ತನ್ನ ಸ್ವಪ್ನದ ಬಗ್ಗೆ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಬ್ರಾಹ್ಮಣನಿಗೆ ತಿಳಿಸಿದನು. ಬ್ರಾಹ್ಮಣ ಆ ಶಿಲೆಯ ಬಳಿ ಸಮೀಪಿಸಿದಾಗ ಸ್ವಾಮಿಯು ಕ್ಷಣ ಮಾತ್ರ ಸರ್ಪ ರೂಪದಲ್ಲಿ ಬ್ರಾಹ್ಮಣನಿಗೆ ದರ್ಶನ ನೀಡಿ ಅದೃಶ್ಯನಾದನಂತೆ.

ಸಂಡೂರಿನ ಮಹಾರಾಜ

ಸಂಡೂರಿನ ಮಹಾರಾಜ

ಈ ವಿಷಯವನ್ನು ಬಳ್ಳಾರಿ ಜಿಲ್ಲೆಯ ಸಂಡೂರಿನ ಮಹಾರಾಜನಿಗೆ ತನ್ನ ಕನಸಿನ ವಿಷಯವನ್ನು ತಿಳಿಸಿದನು. ಆದರೆ ರಾಜನು ಅಗತ್ಯವಿದ್ದರೆ ಧನಕನಕ ಸಹಾಯ ಮಾಡುವುದಾಗಿಯೂ, ತಕ್ಷಣ ಅಲ್ಲಿಗೆ ಬರುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾನೆ.

ಸ್ವಾಮಿ

ಸ್ವಾಮಿ

ರಾಜನ ಈ ಮಾತಿಗೆ ಕೋಪಗೊಂಡ ಸ್ವಾಮಿಯು ರಾಜನ ಕನಸ್ಸಿನಲ್ಲಿ ಉಗ್ರವಾದ ಸ್ವರೂಪದಿಂದ ತನ್ನ ಆಜ್ಞೆಯನ್ನು ಧಿಕ್ಕರಿಸಿದ್ದಕ್ಕೆ ನಿನಗೆ ಮಕ್ಕಳು ಇಲ್ಲವಾಗಿ, ಧನವು ಬರಿದಾಗಿ ಹೋಗಲಿ ಎಂದು ಶಾಪವಿಟ್ಟನಂತೆ.

ದೇವಾಲಯ

ದೇವಾಲಯ

ಇದರಿಂದ ಭಯಭೀತನಾದ ರಾಜನು ಕೋಡಲೇ ಬ್ರಾಹ್ಮಣ ಹಾಗೂ ವ್ಯಾಪಾರಿಯ ಜೊತೆಗೆ ಘಾಟಿಗೆ ತೆರಳಿ ಅಲ್ಲಿ ಗುಡಿ, ಗೋಪುರದ ನಿರ್ಮಾಣ ಮಾಡಿದನಂತೆ. ಈ ಸ್ಥಳದಲ್ಲಿ ಮಹಾರಾಜನಿಗೆ ಹುತ್ತದಲ್ಲಿ ದೊರೆತ ಲಕ್ಷ್ಮೀನರಸಿಂಹ ಸ್ವಾಮಿಯು ನೆಲೆಸಿದ್ದಾನೆ.

ದೇವತೆಗಳು

ದೇವತೆಗಳು

ಪೂರ್ವಾಭಿಮುಖನಾದ ಏಳು ಹೆಡೆಗಳ ಸುಬ್ರಹ್ಮಣ್ಯ ಸ್ವಾಮಿಯ ಎದುರು, ಪಶ್ಚಿಮಾಭಿಮುಖವಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿಯಿದೆ. ಈ ಮೂರ್ತಿಯನ್ನು ದೊಡ್ಡ ಕನ್ನಡಿಯ ಮೂಲಕ ದರ್ಶನ ಮಾಡಬಹುದಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್

ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ಸಂಡೂರಿನ ರಾಜ 1600ರಲ್ಲಿ ಸ್ವಾಮಿಗೆ ದೇವಾಲಯವನ್ನು ನಿರ್ಮಿಸಿದನು. ನಂತರ ಸ್ವಾಮಿಗೆ ಮೈಸೂರು ಸಂಸ್ತಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1900ರಲ್ಲಿ ದೇವಾಲಯದ ಮುಂಭಾಗದ ಮುಖದ್ವಾರವನ್ನು ನಿರ್ಮಿಸಿಕೊಟ್ಟರಂತೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ