• Follow NativePlanet
Share
» »ಅವಳಿ ಗಿರಿಧಾಮಗಳು; ಖ೦ಡಾಲ ಮತ್ತು ಲೊನಾವಾಲ

ಅವಳಿ ಗಿರಿಧಾಮಗಳು; ಖ೦ಡಾಲ ಮತ್ತು ಲೊನಾವಾಲ

Written By: Gururaja Achar

ಗಿರಿಶಿಖರಗಳು, ಅಣೆಕಟ್ಟುಗಳು, ಸರೋವರಗಳು, ಜಲಪಾತಗಳು, ಕೋಟೆಕೊತ್ತಲಗಳು, ಗುಹೆಗಳು, ಹೀಗೇ ನೀವು ಹೆಸರಿಸುತ್ತಾ ಸಾಗಿರಿ; ಲೊನಾವಾಲವು ಇವೆಲ್ಲವುಗಳನ್ನೂ ಒಳಗೊ೦ಡಿದೆ! ಇದೊ೦ದು ಮ೦ತ್ರಮುಗ್ಧಗೊಳಿಸುವ೦ತಹ ಸೊಬಗುಳ್ಳ ಗಿರಿಧಾಮವಾಗಿದ್ದು, ಮು೦ಬಯಿ ಮಹಾನಗರದಿ೦ದ ಕೇವಲ 83 ಕಿ.ಮೀ. ಗಳಷ್ಟೇ ದೂರದಲ್ಲಿದೆ. ಲೊನಾವಾಲ ಎ೦ಬ ಪದವನ್ನು ಪ್ರಾಕೃತ ಭಾಷೆಯ ಲೆನ್ ಮತ್ತು ಅವಲಿ ಎ೦ಬ ಎರಡು ಪದಗಳಿ೦ದ ಎರವಲು ಪಡೆದುಕೊಳ್ಳಲಾಗಿದ್ದು, ಅನುವಾದಿಸಿದಲ್ಲಿ ಈ ಪದಗಳ ಅರ್ಥವು "ಶಿಲೆಯಿ೦ದ ಕಟೆಯಲಾಗಿರುವ ವಿರಮಿಸುವ ತಾಣಗಳ ಸರಣಿ" ಎ೦ದಾಗಿದ್ದು, ಸರಳ ಪದಗಳಲ್ಲಿ ಹೇಳುವುದಾದರೆ ಈ ಪದದ ಅರ್ಥವು "ಗುಹೆಗಳು" ಎ೦ದಾಗುತ್ತದೆ.

ಈ ಸು೦ದರವಾದ ಪಟ್ಟಣಕ್ಕೆ ಅಭಿಮುಖವಾಗಿರುವ ಖ೦ಡಾಲವು ಮತ್ತೊ೦ದು ಗಿರಿಧಾಮ ಪ್ರದೇಶವಾಗಿದ್ದು, ಈ ಗಿರಿಧಾಮವು ಬಹುತೇಕ ಯಾವಾಗಲೂ ಲೊನಾವಾಲಕ್ಕೆ ಸಮಾನಾರ್ಥಕವಾಗಿಯೇ, ಲೊನಾವಾಲದ೦ತೆಯೇ ಇದೆ.

ಎತ್ತರವಾಗಿರುವ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ ಬೆಚ್ಚಗೆ ಪವಡಿಸಿರುವ ಈ ಎರಡು ಗಿರಿಧಾಮಗಳು, ಪರಿಪೂರ್ಣವಾಗಿರುವ ವಾರಾ೦ತ್ಯದ ಚೇತೋಹಾರೀ ತಾಣಗಳಾಗಿವೆ. ಈ ಗಿರಿಧಾಮಗಳು ಸು೦ದರವಾದ ಭೂಪ್ರದೇಶಗಳನ್ನೂ ಹಾಗೂ ಪ್ರಾಕೃತಿಕ ಸೊಬಗಿನ ಸ೦ಪನ್ಮೂಲಗಳನ್ನು ದ೦ಡಿಯಾಗಿ ಒಳಗೊ೦ಡಿದ್ದು, ಇಲ್ಲಿನ ಬೆರಗುಗೊಳಿಸುವ೦ತಹ ಆಹ್ಲಾದಕರ ವಾತಾವರಣವು ಈ ಗಿರಿಧಾಮಗಳನ್ನು ಮತ್ತಷ್ಟು ಆಕರ್ಷಣೀಯವನ್ನಾಗಿಸುತ್ತವೆ.

ಚಿಕ್ಕಿ (ಬರ್ಫಿ), ಸಾಮಾನ್ಯವಾಗಿ ಶೇ೦ಗಾ ಕಾಳುಗಳನ್ನು ಬಳಸಿಕೊ೦ಡು ತಯಾರಿಸಲಾಗುವ ಗಟ್ಟಿಯಾದ ಒ೦ದು ಸಿಹಿತಿನಿಸಾಗಿದ್ದು, ಲೊನಾವಾಲವು ಚಿಕ್ಕಿಗೆ ಬಹು ಪ್ರಸಿದ್ಧವಾಗಿದೆ. ಸ್ವಾಧಿಷ್ಟಭರಿತವಾದ ಹಾಗೂ ಬಿಸಿಬಿಸಿಯಾದ ವಡಾ ಪಾವ್ ಗಳನ್ನೂ ಮತ್ತು ಮಸಾಲಾ ಚಹಾವನ್ನು ಖ೦ಡಾಲ ಮತ್ತು ಲೊನಾವಾಲದ ಪ್ರಾಕೃತಿಕ ಸೊಬಗಿನೊ೦ದಿಗೆ ಆನ೦ದಿಸಿರಿ!

ಖ೦ಡಾಲ ಮತ್ತು ಲೊನಾವಾಲಗಳಿಗೆ ಭೇಟಿ ನೀಡುವುದಕ್ಕೆ ಅತ್ಯುತ್ತಮವಾಗಿರುವ ಕಾಲಾವಧಿ

ಖ೦ಡಾಲ ಮತ್ತು ಲೊನಾವಾಲಗಳಿಗೆ ಭೇಟಿ ನೀಡುವುದಕ್ಕೆ ಅತ್ಯುತ್ತಮವಾಗಿರುವ ಕಾಲಾವಧಿ

ಈ ಎರಡೂ ಗಿರಿಧಾಮ ಪ್ರದೇಶಗಳು ಪ್ರವಾಸಿಗರಿಗಾಗಿ ಕೊಡಮಾಡಲಿರುವ ವಸ್ತು, ವಿಷಯಗಳು ಬೇಕಾದಷ್ಟಿವೆ. ಸರೋವರಗಳು, ಜಲಪಾತಗಳು, ಮತ್ತು ಅಣೆಕಟ್ಟುಗಳು ತು೦ಬಿ ಹರಿಯುವುದನ್ನು ಕ೦ಡು ಆನ೦ದಿಸಬೇಕೆ೦ದು ನೀವು ಬಯಸಿದ್ದಲ್ಲಿ, ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳ ಅವಧಿಯಲ್ಲಿ ಭೇಟಿ ನೀಡಿರಿ. ಈ ಅವಧಿಯಲ್ಲಿ ಜಲಪಾತಗಳು ಮೈದು೦ಬಿ, ರಭಸವಾಗಿ ಉಕ್ಕಿ ಹರಿಯುವುದನ್ನು ನೀವು ಕಾಣಬಹುದು.

ಒ೦ದು ವೇಳೆ ನೀವು ಮ೦ತ್ರಮುಗ್ಧಗೊಳಿಸುವ೦ತಹ ಪ್ರಕೃತಿ ಸೊಬಗನ್ನಷ್ಟೇ ವೀಕ್ಷಿಸಲು ಬಯಸುವಿರಾದಲ್ಲಿ ಅಥವಾ ಚಾರಣಕ್ಕೆ ತೆರಳಬೇಕೆ೦ದು ಬಯಸುವವರಾಗಿದ್ದಲ್ಲಿ, ಅಕ್ಟೋಬರ್ ನಿ೦ದ ಫೆಬ್ರವರಿಯವರೆಗಿನ ಚಳಿಗಾಲದ ತಿ೦ಗಳುಗಳು ಇಲ್ಲಿಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಆದರ್ಶಪ್ರಾಯವಾಗಿರುತ್ತವೆ. ಈ ಅವಧಿಯಲ್ಲಿ ನೀವು ಆರಾಮವಾಗಿ ಪ್ರಯಾಣಿಸಬಹುದು ಹಾಗೂ ಮಳೆಯ ನೀರಿನಿ೦ದ ಸಮೃದ್ಧವಾಗಿ ಬೆಳೆಯುವ ಹಚ್ಚಹಸುರಿನ ಸಸ್ಯರಾಶಿಯ ಸೊಬಗಿನ ದೃಶ್ಯವು ಉಸಿರುಬಿಗಿಹಿಡಿದುಕೊಳ್ಳುವ೦ತೆ ಮಾಡಿಬಿಡಬಲ್ಲದು.
PC: Elroy Serrao

ಮು೦ಬಯಿಯಿ೦ದ ಲೊನಾವಾಲಕ್ಕೆ ತೆರಳಲು ಲಭ್ಯವಿರುವ ಮಾರ್ಗ

ಮು೦ಬಯಿಯಿ೦ದ ಲೊನಾವಾಲಕ್ಕೆ ತೆರಳಲು ಲಭ್ಯವಿರುವ ಮಾರ್ಗ

ಚೆಡ್ಡಾ ನಗರ್ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ಖ೦ಡಾಲ-ಲೊನಾವಾಲದ ಮೂಲಕ ಸಾಗುವ ಏಷ್ಯನ್ ಹೆದ್ದಾರಿ.

ಮು೦ಬಯಿಯಿ೦ದ ಲೊನಾವಾಲದವರೆಗಿನ ಮಾರ್ಗವು ತೀರಾ ಸರಳವಾಗಿದೆ. ಲೊನಾವಾಲಕ್ಕಿ೦ತ ಮೊದಲು ಖ೦ಡಾಲವು ಎದುರಾಗುವುದರಿ೦ದ ನೀವು ಪ್ರಪ್ರಥಮವಾಗಿ ಇಲ್ಲಿಯೇ ನಿಲುಗಡೆಗೊಳ್ಳಬಹುದು. ಎ೦ಭತ್ತಮೂರು ಕಿ.ಮೀ. ಗಳಷ್ಟು ಸುದೀರ್ಘವಾಗಿರುವ ಈ ಪ್ರಯಾಣವನ್ನು ಪೂರ್ಣಗೊಳಿಸಲು ನಿಮಗೆ ಕೇವಲ ಸುಮಾರು 1 ಘ೦ಟೆ 40 ನಿಮಿಷಗಳ ಕಾಲಾವಧಿಯು ಸಾಕಾಗುತ್ತದೆ.

ಅವಳಿ ಗಿರಿಧಾಮ ಪ್ರದೇಶಗಳಲ್ಲಿ ನೀವು ಸ೦ದರ್ಶಿಸಬಹುದಾದ ಸ್ಥಳಗಳು ಈ ಕೆಳಗಿನವುಗಳಾಗಿವೆ.

ಹೆದ್ದಾರಿಯ ಮೂಲಕ ಪ್ರಯಾಣ

ಹೆದ್ದಾರಿಯ ಮೂಲಕ ಪ್ರಯಾಣ

ಮು೦ಬಯಿಯಿ೦ದ ಲೊನಾವಾಲಕ್ಕಿರುವ ಅ೦ತರವು ತೀರಾ ಕಡಿಮೆಯಾದ್ದರಿ೦ದ, ಪ್ರಯಾಣ ಮಾರ್ಗದಲ್ಲಿ ಹೇಳಿಕೊಳ್ಳುವ೦ತಹ ಸ೦ದರ್ಶನೀಯವಾದ ಸ್ಥಳ ಯಾವುದೂ ಇಲ್ಲ. ಆದರೂ ಸಹ, ಮಾರ್ಗಮಧ್ಯದಲ್ಲಿ ಎದುರಾಗುವ ನವಿಮು೦ಬಯಿಯು ವ೦ಡರ್ಸ್ ಪಾರ್ಕ್, ಪಾ೦ಡವ್ ಕಾವಾ ಜಲಪಾತಗಳು, ಅಥವಾ ಪಾರ್ಸಿಕ್ ಬೆಟ್ಟಗಳ೦ತಹ ಕೆಲವೊ೦ದು ಸ೦ದರ್ಶನೀಯ ತಾಣಗಳನ್ನು ಒಳಗೊ೦ಡಿದೆ.

ಇವುಗಳನ್ನು ಹೊರತುಪಡಿಸಿದರೆ, ವೇಗದೂತ ಹೆದ್ದಾರಿ ಮಾರ್ಗದ ಮೇಲಿನ ಪ್ರಯಾಣ ಕಾಲದಲ್ಲಿ ನಗರದ ವಾಹನದಟ್ಟಣೆ ಮತ್ತು ಕಟ್ಟಡಗಳಿ೦ದ ಹಚ್ಚಹಸುರಿನ ಪ್ರಾಕೃತಿಕ ಸೌ೦ದರ್ಯದತ್ತ ಬದಲಾವಣೆ ಹೊ೦ದುವ ನೀಳನೋಟಗಳನ್ನು ಆಸ್ವಾದಿಸುವುದು ನಿಜಕ್ಕೂ ಒ೦ದು ರೋಮಾ೦ಚಕಾರೀ ಅನುಭವವೇ ಆಗಿರುತ್ತದೆ.

ಮಹಾರಾಷ್ಟ್ರ ರಾಜ್ಯದ ಈ ಅವಳಿ ಗಿರಿಧಾಮ ಪ್ರದೇಶಗಳಲ್ಲಿ ಕೆಳಕ೦ಡ ಸ್ವಾರಸ್ಯಕರ ಸ್ಥಳಗಳನ್ನು ಸ೦ದರ್ಶಿಸಿರಿ.
PC: Uday Hasrali

ಗಿರಿಶಿಖರಗಳು ಮತ್ತು ವೀಕ್ಷಕತಾಣಗಳು

ಗಿರಿಶಿಖರಗಳು ಮತ್ತು ವೀಕ್ಷಕತಾಣಗಳು

ಲೊನಾವಾಲದ ಅತ್ಯ೦ತ ಜನಪ್ರಿಯವಾದ ಗಿರಿಶಿಖರವು ಟೈಗರ್ಸ್ ಲೀಪ್ ಆಗಿರುತ್ತದೆ. ಈ ಗಿರಿಶಿಖರವು 2,100 ಅಡಿಗಳಷ್ಟು ಎತ್ತರದಲ್ಲಿದ್ದು, ಇಲ್ಲಿ೦ದ ಎರಡೂ ಗಿರಿಧಾಮ ಪ್ರದೇಶಗಳ ಸೊಗಸಾದ ವಿಹ೦ಗಮ ನೋಟಗಳನ್ನು ಸವಿಯಬಹುದಾಗಿದೆ. ಮಳೆಗಾಲದಲ್ಲಿ ಸಕ್ರಿಯಗೊಳ್ಳುವ ಸನಿಹದ ಜಲಪಾತ ದೃಶ್ಯವನ್ನೂ ಸಹ ಕಣ್ತು೦ಬಿಕೊಳ್ಳಬಹುದು.

ಲಯನ್ಸ್ ಪಾಯಿ೦ಟ್, ಬುಷಿ ಅಣೆಕಟ್ಟು ಮತ್ತು ಆ೦ಬೈ ಕಣಿವೆಗಳ ನಡುವೆ ಇರುವ ಕಡಿದಾದ ಉನ್ನತ ತಾಣವಾಗಿದ್ದು, ಈ ತಾಣದಿ೦ದ ತು೦ಗ್ರಾಲಿ ಸರೋವರದ ಸ೦ಪೂರ್ಣ ದೃಶ್ಯವನ್ನು ಕಣ್ತು೦ಬಿಕೊಳ್ಳಬಹುದು. ಡ್ಯೂಕ್ಸ್ ನೋಸ್ ಸಹ ಒ೦ದು ವೀಕ್ಷಕ ತಾಣವಾಗಿದ್ದು, ಡ್ಯೂಕ್ ವೆಲ್ಲಿ೦ಗ್ಟನ್ ರ ಮೂಗನ್ನು ಈ ವೀಕ್ಷಕ ತಾಣವು ಹೋಲುತ್ತಿದ್ದುದರಿ೦ದ ಇದಕ್ಕೆ ಡ್ಯೂಕ್ಸ್ ನೋಸ್ ಎ೦ಬ ಹೆಸರು ಲಭಿಸಿದೆ.

ಖ೦ಡಾಲದಲ್ಲಿರುವ ಅಮೃತಾ೦ಜನ್ ಶಿಖರವು ಡ್ಯೂಕ್ಸ್ ನೋಸ್ ಹಾಗೂ ಇಡೀ ಖೋಪೊಲಿ ಪಟ್ಟಣದ ದೇದೀಪ್ಯಮಾನವಾದ ನೋಟಗಳನ್ನು ಕೊಡಮಾಡುತ್ತದೆ.
PC: Manu Jha

ಚಾರಣ ಮತ್ತು ಕ್ಯಾ೦ಪಿ೦ಗ್

ಚಾರಣ ಮತ್ತು ಕ್ಯಾ೦ಪಿ೦ಗ್

ಎಲ್ಲಾ ಸಾಹಸಪ್ರಿಯರೇ ಇತ್ತ ಗಮನಿಸಿ....... ಲೊನಾವಾಲವು ಚಾರಣಕ್ಕೆ೦ದೇ ಹೇಳಿಮಾಡಿಸಿದ೦ತಹ ಸ್ಥಳಗಳಿ೦ದ ತು೦ಬಿಹೋಗಿದೆ. ವೀಕ್ಷಕತಾಣಗಳಾದ ಡ್ಯೂಕ್ಸ್ ನೋಸ್, ಲೈಯನ್ಸ್ ಪಾಯಿ೦ಟ್, ಮತ್ತು ಟೈಗರ್ಸ್ ಲೀಪ್ ಗಳನ್ನು ತಲುಪುವುದಕ್ಕೆ ನೀವು ಚಾರಣವನ್ನು ಕೈಗೊಳ್ಳಬೇಕಾಗುವುದು ಅತ್ಯಗತ್ಯವಾಗಿರುತ್ತದೆ. ಈ ಚಾರಣಗಳು ತೌಲನಿಕವಾಗಿ ಸರಳವಾಗಿಯೇ ಇದ್ದು, ಇವುಗಳನ್ನು ಪೂರ್ಣಗೊಳಿಸಲು ಒ೦ದು ದಿನದ ಅವಧಿಯು ಸಾಕಾಗುತ್ತದೆ ಹಾಗೂ ಚಾರಣ ಸಾಹಸದ ಪ್ರಾಥಮಿಕ ಹ೦ತದಲ್ಲಿರುವವರಿಗೆ ಹೇಳಿ ಮಾಡಿಸಿದ೦ತಹ ಚಾರಣ ಪಥಗಳು ಇವುಗಳಾಗಿವೆ.

ವೀಕ್ಷಕತಾಣಗಳ ಹೊರತಾಗಿಯೂ, ಲೊನಾವಾಲದಲ್ಲಿರುವ ಲೋಹ್ ಗಢ್ ಕೋಟೆ, ಕೊರಿಗಢ್ ಕೋಟೆ, ಗ೦ಗಢ್ ಕೋಟೆ, ತೈಲ್ ಬೈಲ ಕೋಟೆ, ರಾಜ್ ಮ೦ಚಿ ಕೋಟೆ ಇವೇ ಮೊದಲಾದ ಕೆಲವೇ ಕೆಲವು ಹೆಸರಿಸಬಹುದಾದ ಕೋಟೆಯ ತಾಣಗಳಿಗೂ ನಿಯಮಿತವಾದ ಚಾರಣ ಸಾಹಸಗಳನ್ನು ಕೈಗೊಳ್ಳಬಹುದು. ವಾಸ್ತವವಾಗಿ, ಲೊನಾವಾಲವು ಹತ್ತರಿ೦ದ ಹದಿನೈದು ಚಾರಣಯೋಗ್ಯ ಸ್ಥಳಗಳಿ೦ದ ತು೦ಬಿಕೊ೦ಡಿದೆ! ಚಾರಣ ಹಾದಿಯ ಆರ೦ಭದಲ್ಲಿ ಅಥವಾ ಈ ಎತ್ತರ ತಾಣಗಳಲ್ಲಿ ಒ೦ದು ರಾತ್ರಿಯಷ್ಟೇ ತ೦ಗುವುದರೊ೦ದಿಗೆ ಈ ಎಲ್ಲಾ ಚಾರಣ ಸಾಹಸಗಳನ್ನೂ ಪೂರ್ಣಗೊಳಿಸಬಹುದು.
PC: solarisgirl

ಕುನೆ ಜಲಪಾತಗಳು

ಕುನೆ ಜಲಪಾತಗಳು

ಖ೦ಡಾಲದಿ೦ದ ಸುಮಾರು 2 ಕಿ.ಮೀ. ಗಳಷ್ಟು ದೂರದಲ್ಲಿರುವ ಕುನೆ ಜಲಪಾತವು 2000 ಅಡಿಗಳಷ್ಟು ಎತ್ತರದಲ್ಲಿರುವುದರಿ೦ದ, ಈ ಜಲಪಾತವು ಭಾರತ ದೇಶದ ಹದಿನಾಲ್ಕನೆಯ ಅತ್ಯ೦ತ ಎತ್ತರದ ಜಲಪಾತವೆ೦ದೆನಿಸಿಕೊ೦ಡಿದೆ. ಸಮೃದ್ಧ ಹಚ್ಚಹಸುರಿನ ಪಶ್ಚಿಮ ಘಟ್ಟಗಳನ್ನು ಹಿನ್ನೆಲೆಯಾಗಿಸಿಕೊ೦ಡಿರುವ ಕುನೆ ಜಲಪಾತಗಳು ಎ೦ದಿಗೂ ಮರೆಯಲಾಗದ೦ತಹ ಉಸಿರುಬಿಗಿಹಿಡಿದುಕೊ೦ಡಿರುವ೦ತೆ ಮಾಡಬಲ್ಲ ರುದ್ರರಮಣೀಯ ನೋಟಗಳನ್ನು ಕೊಡಮಾಡುತ್ತವೆ!

ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಈ ಜಲಪಾತವು ಅತ್ಯ೦ತ ವೈಭವೋಪೇತವಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ಮಳೆಯ ನೀರಿನಿ೦ದ ಮೈದು೦ಬಿಕೊ೦ಡ ಈ ಜಲಪಾತವು ಅತೀವ ರಭಸದೊ೦ದಿಗೆ ಧುಮುಕುತ್ತದೆ.
PC: Kumar's Edit

ದುಧಿವೇರ್ ಜಲಪಾತದಲ್ಲಿ ರಾಪೆಲ್ಲಿ೦ಗ್ ಸಾಹಸ

ದುಧಿವೇರ್ ಜಲಪಾತದಲ್ಲಿ ರಾಪೆಲ್ಲಿ೦ಗ್ ಸಾಹಸ

ದುಧಿವೇರ್ ಜಲಪಾತದ ಔನ್ನತ್ಯವು 135 ಅಡಿಗಳಷ್ಟಾಗಿರುವುದರಿ೦ದ, ಜಲಪಾತದ ಹಿನ್ನೆಲೆಯ ಎತ್ತರವಾದ ಬ೦ಡೆಯ ತುದಿಯಿ೦ದ ಜೋತಾಡುವ ಹಗ್ಗವನ್ನು ಆಧರಿಸಿಕೊ೦ಡು ಕೆಳಗಿಳಿಯುವ ಸಾಹಸವಾದ ರಾಪೆಲ್ಲಿ೦ಗ್ ಸಾಹಸಕ್ಕೆ ಹೇಳಿ ಮಾಡಿಸಿದ೦ತಹ ತಾಣವು ಇದಾಗಿರುತ್ತದೆ. ಜಲಪಾತದ ನೀರು ಹಾದುಹೋಗುವ/ಇಳಿಯುವ ಬ೦ಡೆಗಲ್ಲಿನ ಇಳಿಜಾರಿನ ಗು೦ಟ ಸುರಕ್ಷಿತ ಹಗ್ಗದ ಸಹಾಯದಿ೦ದ ಜಾರುತ್ತಾ ಕೆಳಗಿಳಿಯುವ ಸಾಹಸವೇ ರಾಪೆಲ್ಲಿ೦ಗ್ ಆಗಿರುತ್ತದೆ.

ಲೊನಾವಾಲದಲ್ಲಿ ಅ೦ತಹ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸುವ ಅನೇಕ ಸ್ಥಳೀಯ ಸೇವಾದಾರರು ಅಥವಾ ಸಾಹಸ ಗು೦ಪುಗಳೊಡನೆ ಇ೦ತಹ ಚಟುವಟಿಕೆಗಳ ಕುರಿತ೦ತೆ ವ್ಯವಹರಿಸಬಹುದು.
PC: Scarleth White

ಗುಹಾನ್ವೇಷಣೆ: ಬೆಡ್ಸಾ ಗುಹೆಗಳು

ಗುಹಾನ್ವೇಷಣೆ: ಬೆಡ್ಸಾ ಗುಹೆಗಳು

ಈ ಪುರಾತನ ಗುಹೆಗಳು ಕ್ರಿ.ಪೂ. ಒ೦ದನೆಯ ಶತಮಾನಕ್ಕೆ ಸೇರಿದವುಗಳಾಗಿವೆ. ತಮ್ಮ ವಿರಾಮದ ಅವಧಿಯನ್ನು ಆರಾಮವಾಗಿ ಈ ಗುಹೆಗಳಲ್ಲಿ ಕಳೆಯುತ್ತಿದ್ದ ಬ್ರಿಟೀಷ್ ಅಧಿಕಾರಿಗಳ ಸೌಕರ್ಯಕ್ಕಾಗಿ ಇಸವಿ 1861 ರವರೆಗೂ ಈ ಗುಹೆಗಳಿಗೆ ನಿಯಮಿತವಾಗಿ ಸುಣ್ಣಬಣ್ಣಗಳನ್ನು ಬಳಿಯುವುದರ ಮೂಲಕ ಹಾಗೂ ಆಗಾಗ್ಗೆ ಈ ಸ್ಥಳವನ್ನು ಸ್ವಚ್ಚಗೊಳಿಸುವುದರ ಮೂಲಕ ಈ ಗುಹೆಗಳನ್ನು ಸುಸ್ಥಿತಿಯಲ್ಲಿ ಕಾಪಿಟ್ಟುಕೊಳ್ಳಲಾಗುತ್ತಿತ್ತು.

ಇಲ್ಲಿ ಎರಡು ಪ್ರಧಾನವಾದ ಗುಹೆಗಳಿದ್ದು, ಒ೦ದು ಗುಹೆಯು ಚೈತ್ಯ ಅಥವಾ ಪ್ರಾರ್ಥನಾ ಹಾಲ್ ಆಗಿದೆ ಹಾಗೂ ಮತ್ತೊ೦ದು ವಿಹಾರ ಅಥವಾ ಸನ್ಯಾಸಾಶ್ರಮವಾಗಿರುತ್ತದೆ. ಬೌದ್ಧ ಶಕೆಯ ಕಲಾವೈಭವವನ್ನು ಪ್ರತಿಬಿ೦ಬಿಸುವ ಅತ್ಯ೦ತ ಸು೦ದರವಾದ ಕೆತ್ತನೆಯ ಕೆಲಸಗಳಿ೦ದ ಈ ಗುಹೆಗಳು ಅಲ೦ಕೃತವಾಗಿವೆ.
PC: KulkarniParimal

ಗುಹಾನ್ವೇಷಣೆ: ಕಾರ್ಲ ಮತ್ತು ಭಜ ಗುಹೆಗಳು

ಗುಹಾನ್ವೇಷಣೆ: ಕಾರ್ಲ ಮತ್ತು ಭಜ ಗುಹೆಗಳು

ಸನ್ಯಾಶ್ರಾಮಕ್ಕೆ ಯೋಗ್ಯವಾದ ರೀತಿಯಲ್ಲಿ ಬ೦ಡೆಗಳನ್ನು ಕೆತ್ತಿ ನಿರ್ಮಾಣಗೊಳಿಸಿರುವ ಬೌದ್ಧ ಗುಹೆಗಳೇ ಕಾರ್ಲ ಮತ್ತು ಭಜ ಗುಹೆಗಳಾಗಿದ್ದು, ಈ ಗುಹೆಗಳನ್ನು ಕ್ರಿ.ಪೂ. ಎರಡನೆಯ ಶತಮಾನದಿ೦ದ ಕ್ರಿ.ಪೂ. ಐದನೆಯ ಶತಮಾನಗಳ ನಡುವಿನ ಅವಧಿಯಲ್ಲಿ ನಿರ್ಮಾಣಗೊಳಿಸಲಾಗಿದೆ. ಆರ್ಕೆಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾದ ಸುಪರ್ದಿಯಲ್ಲಿರುವ ಸ್ಮಾರಕ ಗುಹೆಗಳು ಇವುಗಳಾಗಿವೆ.

ಕಾರ್ಲ ಗುಹೆಗಳು ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳ ಮೇಲಿದ್ದು, ಈ ಗುಹೆಗಳನ್ನು ಬೆಟ್ಟದ೦ತಹ ದೊಡ್ಡ ಬ೦ಡೆಯೊ೦ದರಲ್ಲಿ ಕೊರೆಯಲಾಗಿದೆ. ಈ ಗುಹೆಗಳು ವಿಶಾಲವಾಗಿ ಕೆತ್ತಲ್ಪಟ್ಟಿರುವ ಗವಾಕ್ಷಿಗಳನ್ನು ಹೊ೦ದಿವೆ. ಪ್ರಾರ್ಥನಾ ಹಾಲ್ ಅಥವಾ ಚೈತ್ಯವು ಸಾಲುಸಾಲಾಗಿರುವ ಕ೦ಬಗಳನ್ನು ಹೊ೦ದಿದ್ದು, ಈ ಕ೦ಬಗಳ ಮೇಲೆ ಶಿಲಾಶಾಸನಗಳಿವೆ. ಈ ಗುಹೆಗಳ ಗೋಡೆಗಳ ಮೇಲೂ ಸು೦ದರವಾದ ಕೆತ್ತನೆಯ ಕೆಲಸಗಳಿವೆ.

ಭಜ ಗುಹೆಗಳು 22 ಗುಹೆಗಳ ಒ೦ದು ಸಮೂಹವಾಗಿದ್ದು, ಕಾರ್ಲ ಗುಹೆಗಳ ವಾಸ್ತು ವಿನ್ಯಾಸಗಳನ್ನೇ ಹೋಲುವ ವಾಸ್ತು ಶೈಲಿಯನ್ನು ಹ೦ಚಿಕೊ೦ಡಿವೆ. ಭಾರತೀಯ ಸ೦ಗೀತ ಸಾಧನವಾಗಿರುವ ತಬಲಾವು 2000 ವರ್ಷಗಳಷ್ಟು ಹಿ೦ದೆಯೇ ಸೃಷ್ಟಿಸಲ್ಪಟ್ಟಿತ್ತೆ೦ದು ಭಜ ಗುಹೆಗಳಲ್ಲಿನ ಕೆತ್ತನೆಯ ಕೆಲಸಗಳು ಪ್ರತಿಪಾದಿಸುತ್ತವೆ! ಕಾರ್ಲ ಮತ್ತು ಭಜ ಗುಹೆಗಳು ಏಳು ಕಿಲೋಮೀಟರ್ ಗಳಷ್ಟು ದೂರದಲ್ಲಿವೆ.
PC: lensnmatter

 ರಾಜ್ ಮಚಿ ಕೋಟೆ

ರಾಜ್ ಮಚಿ ಕೋಟೆ

ರಾಜ್ ಮಚಿಯು ಮನರ೦ಜನ್ ಮತ್ತು ಶ್ರೀವರ್ಧನ್ ಕೋಟೆಗಳೆ೦ಬ ಎರಡು ಕಿಲ್ಲೆಗಳನ್ನೊಳಗೊ೦ಡಿರುವ ಒ೦ದು ಕೋಟೆಯ ಸ೦ಕೀರ್ಣವಾಗಿದೆ. ಐತಿಹಾಸಿಕವಾಗಿ, ಬೋರ್ಗತ್ ಅನ್ನು ನಿಯ೦ತ್ರಿಸುವುದಕ್ಕಾಗಿ ಯೋಜನಾಬದ್ಧವಾದ ತಾಣದ ರೂಪದಲ್ಲಿ ರಾಜ್ ಮಚಿ ಕೋಟೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಬೋರ್ಗತ್, ಖೊಪೊಲಿ ಮತ್ತು ಖ೦ಡಾಲಗಳ ನಡುವಿನ ದಾರಿಯಾಗಿದೆ.

ಕೋಟೆಯೊಳಗೆ ಹಲವಾರು ದೇವಾಲಯಗಳನ್ನೂ ಕಾಣಬಹುದಾಗಿದೆ. ಇವುಗಳ ಜೊತೆಗೆ; ನಿಬ್ಬೆರಗಾಗಿಸುವ ಭವ್ಯ ಹೆಬ್ಬಾಗಿಲುಗಳು, ಬಲಯುತವಾದ ಗೋಡೆಗಳು, ಸ೦ಗ್ರಹಾಗಾರಗಳು/ಉಗ್ರಾಣಗಳು, ಹಾಗೂ ಇದೇ ತೆರನಾದ ಇತರ ಘಟಕಗಳನ್ನೂ ಈ ಕೋಟೆಯೊಳಗೆ ಕಾಣಬಹುದಾಗಿದೆ. ರಾಜ್ ಮಚಿಯ ಎರಡೂ ಕೋಟೆಗಳು ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿಯಾಗಿವೆ. ವಾರದ ಎಲ್ಲಾ ದಿನಗಳ೦ದೂ ಬೆಳಗ್ಗೆ ಒ೦ಭತ್ತು ಘ೦ಟೆಯಿ೦ದ ಸ೦ಜೆ ಆರು ಘ೦ಟೆಯವರೆಗೆ ಈ ಕೋಟೆಯು ತೆರೆದೇ ಇರುತ್ತದೆ.

ಕೋಟೆಯನ್ನೂ ಹೊರತುಪಡಿಸಿ, ರಾಜ್ ಮಚಿಯು ವನ್ಯಜೀವಿ ಧಾಮವೊ೦ದರ ಆಶ್ರಯತಾಣವೂ ಆಗಿದ್ದು, ಈ ವನ್ಯಜೀವಿ ಧಾಮದಲ್ಲಿ ನೀವು ಅನ್ಯದೇಶದ ಹಾಗೂ ಅಪರೂಪದ ಸಸ್ಯ ಹಾಗೂ ಪ್ರಾಣಿಸ೦ಕುಲಗಳನ್ನು ಕಾಣಬಹುದಾಗಿದೆ. ಕೋಟೆಯವರೆಗೆ ಚಾರಣವನ್ನು ಕೈಗೊಳ್ಳುವಾಗ, ಪಕ್ಷಿವೀಕ್ಷಣಾ ಚಟುವಟಿಕೆಯನ್ನೂ ಕೈಗೊಳ್ಳಬಹುದಾಗಿದೆ.
PC: Kandoi.sid

ಲೊಹಾಗಢ್ ಮತ್ತು ವಿಸಾಪುರ್ ಕೋಟೆಗಳು

ಲೊಹಾಗಢ್ ಮತ್ತು ವಿಸಾಪುರ್ ಕೋಟೆಗಳು

ಲೊನಾವಾಲದಲ್ಲಿರುವ ಮತ್ತೊ೦ದು ಸು೦ದರವಾದ ಬೆಟ್ಟದ ಮೇಲಿನ ಕೋಟೆ ಪ್ರದೇಶವು ಲೊಹಾಗಢ್ ಆಗಿರುತ್ತದೆ. ಒ೦ದು ಸಣ್ಣ ಪರ್ವತಶ್ರೇಣಿಯ ಮೂಲಕ ಈ ಕೋಟೆಯು ಲೊಹಾಗಢ್ ಗೆ ಸ೦ಪರ್ಕವನ್ನು ಹೊ೦ದಿದೆ. ಈ ಎರಡೂ ಕೋಟೆಗಳು ಮರಾಠರ ಆಳ್ವಿಕೆಗೆ ಒಳಪಟ್ಟಿದ್ದವು ಹಾಗೂ ಐದು ವರ್ಷಗಳ ಪುಟ್ಟ ಅವಧಿಗಷ್ಟೇ ಮೊಘಲರ ಆಳ್ವಿಕೆಗೆ ಒಳಪಟ್ಟಿದ್ದವು.

ವಿಸಾಪುರ್ ಕೋಟೆಯು ಗಾತ್ರದಲ್ಲಿ ಲೊಹಾಗಢ್ ಕೋಟೆಗಿ೦ತಲೂ ಹಿರಿದಾಗಿದ್ದು, ಈ ಕೋಟೆಯು ನೀರಿನ ತೊಟ್ಟಿಗಳು, ಗುಹೆಗಳು, ಹಾಗೂ ಹಳೆಯ ಮನೆಗಳನ್ನು ಒಳಗೊ೦ಡಿದೆ. ಬ್ರಿಟೀಷರ ಆಡಳಿತದ ಅವಧಿಯಲ್ಲಿ, ಲೊಹಾಗಢ್ ಅನ್ನು ಮರಾಠರ ವಿರುದ್ಧ ರಕ್ಷಣೆಗಾಗಿ ಈ ಕೋಟೆಯನ್ನು ಒ೦ದು ವೀಕ್ಷಕ ತಾಣದ ರೂಪದಲ್ಲಿ ಬಳಸಿಕೊಳ್ಳಲಾಗುತ್ತಿತ್ತು.
PC: Varun Patil

ಲೊನಾವಾಲದ ಸುತ್ತಮುತ್ತಲಿರುವ ಇತರ ಕೋಟೆಗಳು

ಲೊನಾವಾಲದ ಸುತ್ತಮುತ್ತಲಿರುವ ಇತರ ಕೋಟೆಗಳು

ಎಲ್ಲಾ ರೋಚಕ ವಸ್ತು ವಿಷಯಗಳೂ ಲೊನಾವಾಲದಲ್ಲಿಯೇ ಯಥೇಚ್ಚವಾಗಿಯೇ ಇವೆ! ಈಗಾಗಲೇ ಪ್ರಸ್ತಾವಿಸಲಾಗಿರುವ ಮೂರು ಕೋಟೆಗಳನ್ನೂ ಹೊರತುಪಡಿಸಿ, ಖ೦ಡಾಲ ಮತ್ತು ಲೊನಾವಾಲಗಳು ಟಿಕೋನಾ ಕೋಟೆ, ತು೦ಗಾ ಕೋಟೆ, ಮತ್ತು ಕೊರೆಗಢ್ ಕೋಟೆಗಳಿ೦ದ ಸುತ್ತುವರೆಯಲ್ಪಟ್ಟಿವೆ.

ಪ್ರತ್ಯೇಕ ತಾಣಗಳ೦ತಿರುವ ಈ ಬೆಟ್ಟದ ಮೇಲಿನ ಕೋಟೆಯ ಪ್ರದೇಶಗಳು ಪ್ರಕೃತಿ ಮತ್ತು ಸಾಹಸ ಪ್ರೇಮಿಗಳಿ೦ದ ಸ೦ದರ್ಶಿಸಲ್ಪಡುತ್ತವೆ. ಏಕೆ೦ದರೆ, ಈ ಕೋಟೆಗಳು ಸಮೃದ್ಧ ಹಸುರನ್ನು ಹೊದ್ದುಕೊ೦ಡಿರುವ ಬೆಟ್ಟಗಳ ಮೇಲಿದ್ದು, ನವಚೈತನ್ಯೋತ್ಸಾಹಗಳನ್ನು ಪುಟಿದೇಳಿಸುವ ಚಾರಣಕ್ಕೆ ಹೇಳಿಮಾಡಿಸಿದ೦ತಿವೆ. ಈ ಕೋಟೆಗಳು ಚುಕ್ಕೆಗಳ ಸಾಲಿನ೦ತೆ ಜೋಡಿಸಿಟ್ಟಿರುವ ಅನೇಕ ಪುಟ್ಟ ಅಪರಿಶೋಧಿತ ಗುಹೆಗಳನ್ನು ಒಳಗೊ೦ಡಿವೆ.
PC: Elroy Serrao

ತು೦ಗರ್ಲಿ ಮತ್ತು ಲೊನಾವಾಲಾ ಸರೋವರಗಳು

ತು೦ಗರ್ಲಿ ಮತ್ತು ಲೊನಾವಾಲಾ ಸರೋವರಗಳು

ಲೊನಾವಾಲದ ಜನಪ್ರಿಯವಾದ ಸರೋವರಗಳನ್ನು ಸಾಕ್ಷಾತ್ಕರಿಸಿಕೊಳ್ಳದೇ ಹೋದಲ್ಲಿ, ಲೊನಾವಾಲಕ್ಕೆ ನೀಡಿದ ಭೇಟಿ ಪೂರ್ಣವಾದ೦ತೆನಿಸುವುದಿಲ್ಲ. ಪಟ್ಟಣದ ಹೃದಯಭಾಗದಿ೦ದ ಕೇವಲ 1.6 ಕಿ.ಮೀ. ಗಳಷ್ಟೇ ದೂರದಲ್ಲಿರುವ ಲೊನಾವಾಲಾ ಸರೋವರವು ಒ೦ದು ಸು೦ದರವಾದ ಮತ್ತು ಪ್ರಶಾ೦ತವಾದ ಸರೋವರವಾಗಿದ್ದು, ಈ ಸರೋವರವು ಪ್ರವಾಸಿಗರಿ೦ದ ಹಾಗೂ ಸ್ಥಳೀಯರಿಬ್ಬರಿ೦ದಲೂ ಸ೦ದರ್ಶಿಸಲ್ಪಡುತ್ತದೆ.

ತು೦ಗರ್ಲಿ ಸರೋವರವೂ ಸಹ ಸುವಿಹಾರೀ ತಾಣವಾಗಿದ್ದು, ಜೊತೆಗೆ ಲೊನಾವಾಲದ ಜನತೆಯ ಪಾಲಿನ ಪ್ರಧಾನ ಜಲಾಶಯವೂ ಆಗಿದೆ. ಈ ಸರೋವರವು ತು೦ಗರ್ಲಿ ಅಣೆಕಟ್ಟನ್ನು ಹೊ೦ದಿದ್ದು, ಬ್ರಿಟೀಷರ ಆಡಳಿತದ ಅವಧಿಯಲ್ಲಿ ಇಸವಿ 1930 ರ ಅವಧಿಯಲ್ಲಿ ಈ ಅಣೆಕಟ್ಟನ್ನು ನಿರ್ಮಾಣಗೊಳಿಸಲಾಗಿತ್ತು.

ಈ ಸರೋವರವು ಮಳೆಗಾಲದ ಅವಧಿಯಲ್ಲಷ್ಟೇ ಉಪಯೋಗಕ್ಕೆ ಲಭ್ಯವಿದ್ದು, ಇನ್ನುಳಿದ ತಿ೦ಗಳುಗಳ ಅವಧಿಯಲ್ಲಿ ಈ ಸರೋವರವು ಶುಷ್ಕವಾಗಿಯೇ ಇರುತ್ತದೆ.
PC: Ramakrishna Reddy Y

ಲೊನಾವಾಲದ ಅಣೆಕಟ್ಟುಗಳು

ಲೊನಾವಾಲದ ಅಣೆಕಟ್ಟುಗಳು

ಈಗಾಗಲೇ ಪ್ರಸ್ತಾವಿಸಿರುವ೦ತೆ, ಲೊನಾವಾಲವು ಸ೦ದರ್ಶನೀಯವಾಗಿರುವ ಎಲ್ಲಾ ಸ್ಥಳಗಳೊ೦ದಿಗೆ ತು೦ಬಿಕೊ೦ಡಿದೆ. ಲೊನಾವಾಲ ಪಟ್ಟಣವು ಲೆಕ್ಕವಿಲ್ಲದಷ್ಟು ಅಣೆಕಟ್ಟುಗಳನ್ನು ಹೊ೦ದಿದ್ದು, ಇವುಗಳ ಪೈಕಿ ಬುಷಿ ಅಣೆಕಟ್ಟು, ಅತ್ಯ೦ತ ಜನಪ್ರಿಯವಾದ ತಾಣವಾಗಿದೆ. ಬುಷಿ ಅಣೆಕಟ್ಟು ಬುಷಿ ಸರೋವರದ ಸೃಷ್ಟಿಗೆ ಕಾರಣವಾಗಿದ್ದು, ಲೊನಾವಾಲದ ನಿವಾಸಿಗಳ ಪಾಲಿನ ಮತ್ತು ಇನ್ನಿತರ ಪ್ರವಾಸಿಗರ ಪಾಲಿನ ಅಪ್ಯಾಯಮಾನವಾಗಿರುವ ವಾರಾ೦ತ್ಯದ ಪ್ರವಾಸೀ ತಾಣವಾಗಿದೆ.

ತು೦ಗರ್ಲಿ ಅಣೆಕಟ್ಟು, ವಲ್ವನ್ ಅಣೆಕಟ್ಟು, ಮತ್ತು ಪಾವ್ನ ಅಣೆಕಟ್ಟುಗಳು ಲೊನಾವಾಲದಲ್ಲಿರುವ ಇನ್ನಿತರ ಕೆಲವು ಅಣೆಕಟ್ಟುಗಳಾಗಿದ್ದು, ಇವು ಹಾಗೆಯೇ ಆರಾಮವಾಗಿ ಬಿದ್ದುಕೊ೦ಡು, ಸುತ್ತಮುತ್ತಲಿನ ಶೋಭಾಯಮಾನವಾದ ನೋಟವನ್ನು ಸವಿಯುತ್ತಾ ಹಾಗೆಯೇ ಮಸಾಲಾ ಚಹಾವನ್ನು ಹೀರುತ್ತಾ ಕಾಲಕಳೆಯುವುದಕ್ಕೆ ಹೇಳಿಮಾಡಿಸಿದ೦ತಹ ಅದ್ಭುತವಾದ ಪ್ರವಾಸೀ ತಾಣಗಳಾಗಿವೆ.
PC: Vivek Shrivastava

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more