ಹಾಗೆ ನೋಡಿದರೆ ಪ್ರತಿ ದೇಶಗಳ, ಪ್ರತಿ ರಾಜ್ಯಗಳ, ಪ್ರತಿ ಪಟ್ಟಣಗಳು ಭೇಟಿ ನೀಡಬಹುದಾದ ಅಥವಾ ಪ್ರವಾಸಯೋಗ್ಯವಾದ ಸ್ಥಳಗಳೆ ಆಗಿವೆ. ಏಕೆಂದರೆ ಸೂಕ್ಷ್ಮ ದೃಷ್ಟಿಯುಳ್ಳ, ಪ್ರಬುದ್ಧ ಪ್ರವಾಸಿಗನಿಗೆ ಯಾವ ಸ್ಥಳವೆ ಇರಲಿ ಅಲ್ಲಡಗಿರುವ ಪ್ರಕೃತಿಯ ಒಂದಾದರೊಂದು ವಿಶೇಷತೆಯು ಕಣ್ಣಿಗೆ ಬರದೆ ಇರಲಾರದು.
ಆದರೂ ಹೀಗೆಂದ ಮಾತ್ರಕ್ಕೆ ಎಲ್ಲ ಸ್ಥಳಗಳನ್ನು ಎಲ್ಲರೂ ನಿರಾಯಾಸವಾಗಿ ಭೇಟಿ ನೀಡಬಹುದೆಂದು ಹೇಳಲಾಗುವುದಿಲ್ಲ. ಉದಾಹರಣೆಗೆ ಹಿಮಾಲಯದಂತಹ ಪರ್ವತ ಪ್ರದೇಶಗಳಲ್ಲಿ ಸಾಕಷ್ಟು ಬಗೆಯ ಸಾಹಸಮಯ ಟ್ರೆಕ್ಕಿಂಗ್ ಪ್ರವಾಸಿ ಮಾರ್ಗಗಳಿವೆ. ಇಂತಹ ಟ್ರೆಕ್ಕಿಂಗ್ ಗಳಿಗೆ ಕುಟುಂಬ ಸಮೇತರಾಗಿ ಹೊರಡಲಾಗುವುದಿಲ್ಲ.
ವಿಶೇಷ ಲೇಖನ : ಉತ್ತರ ಕರ್ನಾಟಕದ ಅಮೋಘ ಪ್ರವಾಸ
ಇದರಂತೆ ಏರುವ ಅಥವಾ ಬಹುವಾಗಿ ಇಳಿಯುವ ಯಾವ ಸ್ಥಳಗಳೆ ಇರಲಿ ಅಲ್ಲಿಗೆ ವಯಸ್ಸಾದವರೊಂದಿಗೋ ಅಥವಾ ಮಕ್ಕಳೊಂದಿಗೊ ಹೊರಡುವುದು ಬಲು ಕಷ್ಟ ಅಥವಾ ಅದು ಉತ್ತಮವಲ್ಲ ಎಂದೆ ಹೇಳಬಹುದು. ಅಲ್ಲದೆ ಕುಟುಂಬ ಸಮೇತರಾಗಿ ಪ್ರವಾಸ ಮಾಡುವಾಗ ಆಯಾ ಸ್ಥಳಗಳಲ್ಲಿ ಮೂಲ ಸೌಕರ್ಯಗಳು, ವಸತ್ರಿಗೃಹಗಳು, ಸಂಚಾರಿ ಮಾಧ್ಯಮಗಳು ಲಭಿಸುತ್ತವೆಂಬುದರ ಕುರಿತೂ ಸಹ ಸಾಕಷ್ಟು ಗಮನ ಹರಿಸಬೇಕಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ಪ್ರಸ್ತುತ ಲೇಖನವು ಕರ್ನಾಟಕದಲ್ಲಿ ಕುಟುಂಬ ಸಮೇತರಾಗಿ ಹಾಯಾಗಿ ಪ್ರವಾಸ ಮಾಡಬಹುದಾದ ಕೆಲ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ನೀಡುತ್ತದೆ. ಈ ಬಾರಿ ಅಥವಾ ಮುಂದಿನ ಬಾರಿ ನೀವು ನಿಮ್ಮ ಕುಟುಂಬದೊಡನೆ ಪ್ರವಾಸ ಮಾಡಲು ಬಯಸ್ಸಿದ್ದಲ್ಲಿ ಈ ಲೇಖನವನ್ನು ಓದಿ ನಿಮಗೆ ಬೇಕಾದ ಸ್ಥಳಕ್ಕೆ ಹಾಯಾಗಿ ತೆರಳಿ.

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಲೇಖನದಲ್ಲಿ ಕೇವಲ ಆಯ್ದ ಹಾಗೂ ಕುಟುಂಬದೊಡನೆ ಭೇಟಿ ನೀಡಲು ಯೋಗ್ಯ ಎನ್ನಬಹುದಾದ ಸ್ಥಳಗಳ/ಆಕರ್ಷಣೆಗಳ ಕುರಿತು ಮಾತ್ರವೆ ತಿಳಿಸಲಾಗಿದೆ.
ಚಿತ್ರಕೃಪೆ: Swaroop C H

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ವಿಜಯಪುರ:ಉತ್ತರ ಕರ್ನಾಟಕದ ಸೊಗಡನ್ನು ಪಸರಿಸುವ, ಜೋಳದ ರೊಟ್ಟಿ ಖಾರದ ಚಟ್ನಿಗಳಿಗೆ ಪ್ರಸಿದ್ಧವಾಗಿರುವ, ವಿಶ್ವ ವಿಖ್ಯಾತ ಗೋಲ ಗುಂಬಜ (ಗುಮ್ಮಟ) ಕ್ಕೆ ಹೆಸರುವಾಸಿಯಾಗಿರುವ ವಿಜಯಪುರ (ಹಿಂದಿನ ಬಿಜಾಪುರ) ಕುಟುಂಬದೊಡನೆ ಪ್ರವಾಸ ಮಾಡ ಯೋಗ್ಯ ಸ್ಥಳಗಳ ಪೈಕಿ ಒಂದಾಗಿದೆ. ನಗರದಲ್ಲಿ ಸಾಕಷ್ಟು ಸುವ್ಯವಸ್ಥಿತ ವಸತಿಗೃಹ ಅಥವಾ ಹೋಟೆಲ್ ಗಳಿದ್ದು ಅಲ್ಲಿ ನಿರಾಯಾಸವಾಗಿ ತಂಗಿ ಪಟ್ಟಣದ ಅದ್ಭುತ ಐತಿಹಾಸಿಕ ಪ್ರವಾಸಿ ಆಕರ್ಷಣೆಗಳನ್ನು ಸವಿಯಬಹುದು. ಬೇಸಿಗೆಯಲ್ಲಿ ಹೆಚ್ಚು ಬಿಸಿ ಇರುವುದರಿಂದ ಚಳಿಗಾಲ ಇಲ್ಲವೆ ಮಳೆಗಾಲದ ಸಂದರ್ಭದಲ್ಲೂ ಸಹ ಇಲ್ಲಿ ಪ್ರವಾಸ ಮಾಡಬಹುದು.
ಚಿತ್ರಕೃಪೆ: HPNadig

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಗೋಲ ಗುಮ್ಮಟ/ಗುಂಬಜ ಬಿಜಾಪುರಿನ ವಿಶ್ವ ಪ್ರಖ್ಯಾತ ಹೆಗ್ಗುರುತಾಗಿದೆ ಈ ಭವ್ಯ ಬೃಹತ್ ಸ್ಮಾರಕ. 1659 ರಲ್ಲಿ ಮೊಹಮ್ಮದ್ ಆದಿಲ್ ಶಾಹ್ ಹಾಗು ಕುಟುಂಬದವರಿಂದ ನಿರ್ಮಿಸಲ್ಪಟ್ಟ ಈ ಅದ್ಭುತ ರಚನೆಯು ಅರ್ಧ ಗೋಲಾಕಾರದ ಬೃಹತ್ ಗುಮ್ಮಟವನ್ನು ಹೊಂದಿದ್ದು, ಜಗತ್ತಿನಲ್ಲೆ ಎರಡನೇಯ ದೊಡ್ಡ ಖಂಬಗಳ ಆಧಾರವಿಲ್ಲದ ಗುಮ್ಮಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲನೆಯದು ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀಟರ್ಸ್. ಈ ರಚನೆಯು ಎಷ್ಟೊಂದು ಅದ್ಭುತವಾಗಿದೆಯೆಂದರೆ ಸುಮಾರು 38 ಮೀ ಗಳಷ್ಟು ದೂರದಲ್ಲೂ ಕೂಡ ಒಂದು ಸೂಜಿಯು ಬಿದ್ದ ಸಪ್ಪಳವನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ ಇಲ್ಲಿನ ವ್ಹಿಸ್ಪರಿಂಗ್ ಗ್ಯಾಲರಿಯಲ್ಲಿ. ಅಲ್ಲದೆ ಒಮ್ಮೆ ಚಪ್ಪಾಳೆಯನ್ನು ಹೊಡೆದರೆ ಹತ್ತು ಬಾರಿ ಅದು ಪ್ರತಿಧನಿಸುತ್ತದೆ. ವಿಶಾಲವಾದ ಹೊರಾಂಗಣ ಹಾಗು ಸುಂದರವಾದ ಉದ್ಯಾನವನ್ನು ಹೊಂದಿರುವ ಈ ಗುಮ್ಮಟವನ್ನು ಬಿಜಾಪುರಿನ ಬಸ್ ನಿಲ್ದಾಣ ಹಾಗು ರೈಲು ನಿಲ್ದಾಣಗಳಿಂದ ರಿಕ್ಷಾ ಹಾಗು ಟಾಂಗಾ(ಕುದುರೆ ಗಾಡಿ)ಗಳ ಮೂಲಕ ಸುಲಭವಾಗಿ ತಲುಪಬಹುದು. ಶುಕ್ರವಾರವೊಂದನ್ನು ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಘಂಟೆಯವರೆಗೆ ತೆರೆದಿರುವ ಈ ಸ್ಮಾರಕಕ್ಕೆ ಪ್ರವೇಶಿಸಲು ಪ್ರತಿ ತಲೆಗೆ ರೂ. 2 ಶುಲ್ಕವನ್ನು ಕೊಡಬೇಕಾಗುತ್ತದೆ (15 ವರ್ಷ ಮೇಲ್ಪಟ್ಟವರಿಗೆ ಮಾತ್ರ).
ಚಿತ್ರಕೃಪೆ: Amith

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಬಸಂತ ವನ: ಬಿಜಾಪುರ ನಗರದಿಂದ 3 ಕಿ.ಮೀ ದೂರದಲ್ಲಿ ಉಕ್ಕಲಿ ರಸ್ತೆಯಲ್ಲಿರುವ ರಂಬಾಪುರ ಹಳ್ಳಿಯಲ್ಲಿ ಕಾಣಬಹುದಾಗಿದೆ 85 ಅಡಿಗಳಷ್ಟು ಎತ್ತರದ ಸಿಮೆಂಟ್ ಹಾಗು ಉಕ್ಕಿನಿಂದ ಮಾಡಲಾದ ಈ ಬೃಹತ್ ಶಿವ ಪ್ರತಿಮೆಯನ್ನು. ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಈ ಶಿವ ಪ್ರತಿಮೆಯ ಕೆಳಬದಿಯಲ್ಲಿ ಪುಟ್ಟ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದ್ದು ಸುತ್ತಲಿರುವ ಗೋಡೆಗಳ ಮೇಲೆ ಶಿವ ಚರಿತೆಯನ್ನು ಕನ್ನಡದಲ್ಲಿ ಕೆತ್ತಲಾಗಿದೆ.
ಚಿತ್ರಕೃಪೆ: Sissssou2

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಆಲಮಟ್ಟಿ ಡ್ಯಾಮ್: ಬಿಜಾಪುರಿನ ಜನರಲ್ಲಿ ಇದೊಂದು ಪ್ರಖ್ಯಾತವಾದ ಪಿಕ್ನಿಕ್ ಸ್ಪಾಟ್. ಈ ಆಣೆಕಟ್ಟು ಸುಂದರವಾದಂತಹ ಉದ್ಯಾನವನವನ್ನೂ ಸಹ ಹೊಂದಿದ್ದು ವಾರಾಂತ್ಯದ ರಜಾ ದಿನಗಳಲ್ಲಿ ಕುಟುಂಬ ಸಮೇತ ದಿನ ಕಳೆಯ ಬಯಸುವವರಿಗೆ ಇದು ಒಂದು ಆದರ್ಶಮಯ ಸ್ಥಳವಾಗಿದೆ. ಬಿಜಾಪುರಿನ ಆಗ್ನೇಯ ಭಾಗಕ್ಕೆ ಸುಮಾರು 65 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣವನ್ನು ಸರ್ಕಾರಿ ಬಸ್ ಅಥವಾ ಖಾಸಗಿ ಟ್ಯಾಕ್ಸಿಗಳನ್ನು ಬಿಜಾಪುರಿನಿಂದ ಬಾಡಿಗೆಗೆ ಪಡೆದು ಸುಲಭವಾಗಿ ತಲುಪಬಹುದು. ಇದಲ್ಲದೆ ಜಲಾಶಯದ ಪಕ್ಕದಲ್ಲಿ ವಿಶಾಲವಾದ ಉದ್ಯಾನವಿದ್ದು ಅಲ್ಲಿ ವಿವಿಧ ಹೂಗಿಡ ಬಳ್ಳಿಗಳನ್ನೂ, ಪ್ರಾಣಿ-ಪಕ್ಷಿಗಳ ಮಾದರಿ ಪ್ರತಿಮೆಗಳನ್ನೂ ಸಹ ಕಾಣಬಹುದಾಗಿದೆ.
ಚಿತ್ರಕೃಪೆ: Murughendra

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಬೀದರ್: ಬೀದರ್, ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆಯಾಗಿದೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಪ್ರಮುಖ ಸ್ಥಳಗಳ ಪೈಕಿ ಒಂದಾಗಿದ್ದು, ಇಲ್ಲಿ ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Santosh3397

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಬಹಮನಿ ಸುಲ್ತಾನರ ಸಾಮ್ರಾಜ್ಯವು ಸ್ಥಾಪಿತವಾದ ನಂತರ ಆ ಸಮಯದಲ್ಲಿ ಅಂದರೆ 14 ನೇಯ ಶತಮಾನದಲ್ಲಿ ಈ ಭಾಗಗಳಲ್ಲಿ ನಿರ್ಮಿತವಾದ ರಚನೆಗಳಲ್ಲಿ ಪರ್ಷಿಯನ್ ಸಂಸ್ಕೃತಿಯ ಪ್ರಭಾವವಿರುವುದನ್ನು ಗಮನಾರ್ಹವಾಗಿ ಕಾಣಬಹುದು. ಅಂತೆಯೆ ಬೀದರ್ ಕೋಟೆಯಲ್ಲೂ ಸಹ ಪರ್ಷಿಯನ್ ಛಾಯೆಯನ್ನು ಅಲ್ಲಲ್ಲಿ ಕಾಣಬಹುದಾಗಿದೆ. ಪ್ರಸ್ಥ ಭೂಮಿಯ ಒಂದು ಕೊನೆಯಲ್ಲಿ ನಿರ್ಮಾಣಗೊಂಡ ಬೀದರ್ ಕೋಟೆಯು ಸ್ಪಷ್ಟವಾಗಿರದ ಚತುರ್ಭುಜಾಕೃತಿಯಲ್ಲಿದೆ.
ಚಿತ್ರಕೃಪೆ: Varun Wudayagiri

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಕೋಟೆ ಸಂಕೀರ್ಣವು 1.20 ಕಿ.ಮೀ ಉದ್ದ ಹೊಂದಿದ್ದರೆ ಅಗಲವು ಸುಮಾರು 0.80 ಕಿ.ಮೀ ಗಳಷ್ಟಿದೆ. ಇದೊಂದು ನಗರದ ಪ್ರಮುಖ ಪಿಕ್ನಿಕ್ ತಾಣವಾಗಿದ್ದು ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Santosh3397

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಅಲ್ಲದೆ ಬೀದರ್ ನಗರದಲ್ಲಿ ಸಿಖ್ಖರ ಪವಿತ್ರ ಆಲಯವಾದ ಗುರುದ್ವಾರವೂ ಸಹ ಇದ್ದು, ಇದು ಗುರುದ್ವಾರಾ ನಾನಕ ಜೀರಾ ಎಂದೆ ಪ್ರಸಿದ್ಧವಾಗಿದೆ. ಯಾವುದೆ ಧರ್ಮದವರೂ ಸಹ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.
ಚಿತ್ರಕೃಪೆ: Hari Singh

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಬೀದರ್ ಪಟ್ಟಣದ ಬಲು ಪ್ರಮುಖ ಆಕರ್ಷಣೆ ಎಂದರೆ ಝರಣಿ ನರಸಿಂಹ ಸ್ವಾಮಿ ದೇವಸ್ಥಾನ. ಇದೊಂದು ಭೂಗತ ಗುಹಾಂತರ ದೇವಾಲಯವಾಗಿದ್ದು ವಿಷ್ಣುವಿನ ಅವತಾರ ನರಸಿಂಹ ಸ್ವಾಮಿಗೆ ಮುಡಿಪಾದ ದೇವಾಲಯವಾಗಿದೆ. ಮನಿಚೂಲ್ ಎಂಬ ಬೆಟ್ಟದ ಕೆಳ ಬದಿಯಲ್ಲಿ ಕೊರೆಯಲಾದ ಸುರಂಗ ಮಾರ್ಗದಲ್ಲಿ ಈ ದೇವಸ್ಥಾನವಿದೆ.
ಚಿತ್ರಕೃಪೆ: Jaideep Rao

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಮೂಲ ವಿಗ್ರಹದ ದರುಶನ ಪಡೆಯಬೇಕೆಂದರೆ ಭಕ್ತರು ಸುರಂಗ ಮಾರ್ಗದಲ್ಲಿ ನೀರಿನ ಮುಖಾಂತರ ಸಾಗುತ್ತ ಮುಂದೆ ಚಲಿಸಬೇಕು. ನೀರಿನ ಆಳವು ಮೂರರಿಂದ ಐದು ಅಡಿಗಳವರೆಗಿದೆ. ಸುತ್ತಲ ಗೋಡೆಗಳಲ್ಲಿ ಸಾಕಷ್ಟು ಬಾವಲಿಗಳು ನೇತಾಡುವುದನ್ನು ಕಂಡಾಗ ಮೈ ಜುಮ್ ಅನ್ನದೆ ಇರದು. ಆದರೆ ಈವರೆಗೂ ಯಾರೋಬ್ಬರಿಗೂ ಯಾವುದೆ ತೊಂದರೆ ಇಲ್ಲಾಗಿಲ್ಲ. ಸಾಗುವಾಗ ಭಕ್ತರು "ಗೋವಿಂದಾ ಗೋವಿಂದಾ..." "ನರಸಿಂಹ ಹರಿ ಹರಿ" ಎಂಬ ವಾಕ್ ಘೋಷಗಳೊಂದಿಗೆ ತೆರಳುತ್ತಾರೆ.
ಚಿತ್ರಕೃಪೆ: Mark Wilkinson

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಬಾದಾಮಿ: ಬದಾಮಿ ಎಂದ ತಕ್ಷಣ ನೆನಪಾಗುವುದು ಬನಶಂಕರಿ ಅಮ್ಮನವರ ದೇವಸ್ಥಾನ. ಈ ದೇವಸ್ಥಾನವು ತಿಲಕಾರಣ್ಯ ಕಾಡಿನ ಭಾಗದಲ್ಲಿ ನೆಲೆಸಿರುವುದರಿಂದ ದೇವಿಯನ್ನು ವನಶಂಕರಿ ಎಂತಲೂ ಕೂಡ ಕರೆಯಲಾಗುತ್ತದೆ. ಶಾಖಾಂಬರಿ ಅವತಾರವಾದ ಈ ದೇವಿಯ ದೇವಾಲಯವಿರುವುದು ಬದಾಮಿಯಲ್ಲಿರುವ ಚೊಳಚಗುಡ್ಡದಲ್ಲಿ. ಹಲವು ಮನೆತನಗಳ ಕುಲದೇವತೆಯಾಗಿರುವ ಈ ಬನಶಂಕರಿ ದೇವಿಯ ಜಾತ್ರೆಯನ್ನು ಪ್ರತಿ ವರ್ಷ ಜನವರಿಯಲ್ಲಿ ಅತ್ಯಂತ ಅದ್ದೂರಿಯಿಂದ ಆಚರಿಸಲಾಗುತ್ತದೆ. ಕುಟುಂಬ ಸಮೇತವಾಗಿ ಭೇಟಿ ನೀಡಲು ಯೋಗ್ಯವಾದ ತೀರ್ಥ ಸ್ಥಳ ಇದಾಗಿದೆ.
ಚಿತ್ರಕೃಪೆ: Nvvchar

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಬನಶಂಕರಿ ದೇವಸ್ಥಾನವಲ್ಲದೆ ಬಾದಾಮಿಯಲ್ಲಿ ನೋಡಲು ಪ್ರಮುಖವಾಗಿರುವ ಇತರೆ ಆಕರ್ಷಣೆಗಳೆಂದರೆ ಭೂತನಾಥ ದೇವಾಲಯ ಸಂಕೀರ್ಣ ಹಾಗೂ ಗುಹಾಂತರ ದೇವಾಲಯಗಳು. 5 ನೇಯ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಾಣವಾದ ಭೂತನಾಥ ದೇವಾಲಯ ಸಂಕೀರ್ಣದಲ್ಲಿ ಎರಡು ದೇವಾಲಯಗಳಿದ್ದು ಕೆರೆಗೆ ಎದುರಾಭಿಮುಖವಾಗಿ ನಿಂತಿರುವ ಈ ದೇವಾಲಯದ ಆರಾಧ್ಯ ದೈವ ಭೂತನಾಥನ ರೂಪದಲ್ಲಿ ಪೂಜಿಸಲ್ಪಡುವ ಶಿವ.
ಚಿತ್ರಕೃಪೆ: Dineshkannambadi

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಇನ್ನೂ ಇಲ್ಲಿರುವ ಗುಹಾಂತರ ದೇವಾಲಯಗಳಂತೂ ಹಿಂದಿನ ಕಾಲದ ಬಂಡೆ ಕೆತ್ತನೆಯ ವಾಸ್ತು ಶೈಲಿಗೆ ಉತ್ತಮ ಉದಾಹರಣೆಯಾಗಿದೆ. ಹಿಂದೂ ಹಾಗೂ ಜೈನ ಧರ್ಮಕ್ಕೆ ಸಂಬಂಧಿಸಿದ ಪ್ರತಿಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಶೈಕ್ಷಣಿಕ ಪ್ರವಾಸವಲಯದಲ್ಲಿಯೂ ಸಹ ಇದು ಹೆಸರುವಾಸಿಯಾಗಿದೆ.
ಚಿತ್ರಕೃಪೆ: amara

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಗೋಕಾಕ್: ಬೆಳಗಾವಿ ನಗರದ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿ ನೆಲೆಸಿದೆ ಗೋಕಾಕ ಪಟ್ಟಣ. ಈ ಪಟ್ಟಣ ಪ್ರಖ್ಯಾತವಾಗಿರುವುದು ತನ್ನಲ್ಲಿರುವ ಮೈ ಝುಮ್ಮೆನಿಸುವ ರುದ್ರ ಭಯಂಕರ ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆಯೊಂದಿದ್ದು ಅದರ ಮೇಲೆ ಸಾಗುತ್ತಿರುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಇಲ್ಲಿಗೆ ತೆರಳಿದಾಗ ಇಲ್ಲಿನ ಮತ್ತೊಂದು ಜನಪ್ರಿಯ ಸಿಹಿ ಖಾದ್ಯವಾದ 'ಗೋಕಾಕ್ ಕರದಂಟ್' ಅನ್ನು ತಿನ್ನಲು ಮರೇಯಬೇಡಿ. ಬೆಳಗಾವಿ ಬಸ್ ಹಾಗು ರೈಲು ನಿಲ್ದಾಣಗಳಿಂದ ಗೋಕಾಕಿಗೆ ತೆರಳಲು ಬಸ್ ಹಾಗು ರೈಲುಗಳು ಲಭ್ಯವಿರುತ್ತದೆ.

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಕಾರವಾರ: ಭಾರತ ಪಶ್ಚಿಮ ಭಾಗದಲ್ಲಿರುವ ಕಾರವಾರವು ಗೋವಾದಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ 520 ಕಿ.ಮೀ ದೂರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿರುವ ಕಾರವಾರವು 15 ನೇ ಶತಮಾನದಲ್ಲೆ ವ್ಯಾಪಾರ ಕ್ಷೇತ್ರದ ಮುಖ್ಯ ಗುರುತಾಗಿ ಗುರುತಿಸಿಕೊಂಡಿದ್ದು, ಐತಿಹಾಸಿಕ ಮಹತ್ವವುಳ್ಳ ಪಟ್ಟಣವೂ ಆಗಿದೆ. ಇಲ್ಲಿನ ಪ್ರಶಾಂತ ಕಡಲ ತೀರಗಳು ಕುಟುಂಬ ಸಮೇತ ಭೇಟಿ ನೀಡಬಹುದಾದ ಪ್ರವಾಸಿ ಯೋಗ್ಯ ತಾಣಗಳಾಗಿವೆ.
ಚಿತ್ರಕೃಪೆ: Ayan Mukherjee

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಬಸವರಾಜದುರ್ಗ ದ್ವೀಪ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಈ ಗಮ್ಯ ಪ್ರವಾಸಿ ತಾಣವನ್ನು ನೋಡಬಹುದು. ಅರೇಬಿಯನ್ ಸಮುದ್ರದ ಮಧ್ಯದಲ್ಲಿ ರೂಪಗೊಂಡ ದ್ವೀಪ ಇದಾಗಿದೆ. ಈ ದ್ವೀಪದಲ್ಲಿ ಕೋಟೆಯೊಂದನ್ನು ಸಹ ನೋಡಬಹುದು. ಅಲ್ಲದೆ 16 ನೇಯ ಶ್ತಮಾನದಲ್ಲಿ ನಿರ್ಮಾಣವಾದ ದೇವಾಲಯವೊಂದು ಸಹ ಇಲ್ಲಿದ್ದು ಪ್ರತಿ ವರ್ಷ ಜನವರಿ 14 ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗ್ರಾಮದ ಬೆಸ್ತರು ಕುಟುಂಬ ಸಮೇತ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಕೃತಿಯು ವಿಕೋಪಗೊಳ್ಳದೆ ತಮ್ಮನ್ನು ಕಾಪಾಡುವಂತೆ ಪ್ರಾರ್ಥಿಸುತ್ತಾರೆ.
ಚಿತ್ರಕೃಪೆ: Kumarcnaik

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಶಿರಸಿ: ಸಹಸ್ರಲಿಂಗ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸಹಸ್ರಲಿಂಗವು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರವಾಗಿದ್ದು ಕುಟುಂಬ ಸಮೇಟ ಭೇಟಿ ನೀಡ ಯೋಗ್ಯ ಪ್ರವಾಸಿ ಸ್ಥಳವಾಗಿದೆ. ಶಲ್ಮಲಾ ನದಿ ತಟದಲ್ಲಿ ಕಲ್ಲುಗಳ ಮೇಲೆ ಅಸಂಖ್ಯಾತ ಶಿವಲಿಂಗಗಳನ್ನು ಕೆತ್ತಲಾಗಿದ್ದು ನೋಡುಗರಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ. ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Unique.creator

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಮುರುಡೇಶ್ವರ: ರೋಚಕವಾದ ಚರಿತ್ರೆಯ ಜೊತೆಗೆ ಜಗತ್ತಿನಲ್ಲಿಯೆ ಎರಡನೇಯ ಅತಿದೊಡ್ಡ ಶಿವನ ಪ್ರತಿಮೆಯಿರುವ ಸ್ಥಳ ಮುರುಡೇಶ್ವರ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಸ್ಥಳವು ರಾಮಾಯಣದ ನಂಟನ್ನೂ ಸಹ ಹೊಂದಿದ್ದು, ಸಮುದ್ರದ ಹಿನ್ನಿಲೆಯಿರುವ ಶಿವನ ಬೃಹತ್ ಪ್ರತಿಮೆಗೆ ಪ್ರಸಿದ್ಧವಾಗಿದೆ. ಕುಟುಂಬ ಸಮೇತ ತೆರಳಬಹುದಾದ ಆಕರ್ಷಕ ಪ್ರವಾಸಿ ಕೇಂದ್ರವಾಗಿ ಮುರುಡೇಶ್ವರ ಕರ್ನಾಟಕದಲ್ಲೆ ಪ್ರಖ್ಯಾತವಾಗಿದೆ.
ಚಿತ್ರಕೃಪೆ: Sam valadi

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಈ ಪ್ರತಿಮೆಯೂ 123 ಅಡಿಗಳ ಉದ್ದಳತೆಯನ್ನು ಹೊಂದಿದ್ದು ಜಗತ್ತಿನಲ್ಲಿ ಅತಿ ದೊಡ್ಡ ಪ್ರತಿಮೆಗಳ ಪಟ್ಟಿಯಲ್ಲಿದೆ.ಈ ಪ್ರತಿಮೆಯನ್ನು ಪೂರ್ಣಗೊಳಿಸಲು ಎರಡು ವರ್ಷಗಳು ತೆಗೆದುಕೊಂಡಿದ್ದು ಇದಕ್ಕೆ ಸಂಪೂರ್ಣವಾದ ಧನಸಹಾಯ ಮಾಡಿದವರು ಓರ್ವ ವ್ಯವಹಾರಿ ಮತ್ತು ಲೋಕೋಪಕಾರಿಯೂ ಆದ ಆರ್.ಎನ್ ಶೆಟ್ಟಿ ರವರು ಹಾಗೂ ಇದನ್ನು ನಿರ್ಮಿಸಿದವರು ಶಿವಮೊಗ್ಗದ ಕಾಶೀನಾಥ್ ಮತ್ತು ಅವರ ಪುತ್ರ ರಾದ ಶ್ರೀಧರ್.
ಚಿತ್ರಕೃಪೆ: varun suresh

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಪ್ರತಿಮೆಯಲ್ಲದೆ, ಇಲ್ಲಿರುವ ಶಿವ ಮಂದಿರವೂ ಸಹ ಅತ್ಯಂತ ಎತ್ತರದ ಗೋಪುರ ಹೊಂದಿದ್ದು ನೋಡಲು ಆಕರ್ಷಕವಾಗಿದೆ. ಈ ಆಕರ್ಷಣೆಗಳ ಹೊರತಾಗಿ ಇಲ್ಲಿನ ಕಡಲ ತೀರವೂ ಸಹ ಭೇಟಿ ನೀಡುವ ಪ್ರವಾಸಿಗರಿಗೆ ಅಹ್ಲಾದಕರ ಅನುಭವವನ್ನುಂಟು ಮಾಡುತ್ತದೆ.
ಚಿತ್ರಕೃಪೆ: Jim McDougall

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಗೋಕರ್ಣ: ಮುರುಡೇಶ್ವರದ ಉತ್ತರ ದಿಕ್ಕಿಗೆ 78 ಕಿ.ಮೀ ಗಳಷ್ಟು ದೂರದಲ್ಲಿರುವ ಗೋಕರ್ಣವೂ ಸಹ ಒಂದು ಪುಣ್ಯ ಕ್ಷೇತ್ರವಾಗಿದ್ದು ಕುಟುಂಬ ಸಮೇತ ಪ್ರವಾಸ ಹೊರಡಲು ಯೋಗ್ಯವಾದ ಸ್ಥಳವಾಗಿದೆ. ಈ ಸ್ಥಳವು ಎರಡು ನದಿಗಳಾದ ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ. ಮುಖ್ಯವಾಗಿ ಗೋಕರ್ಣ ಕಡಲ ತೀರಕ್ಕೆ ಇದು ಹೆಸರುವಾಸಿ.
ಚಿತ್ರಕೃಪೆ: Florian Recklebe

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಗೋಕರ್ಣದಲ್ಲಿರುವ ಕೋಟಿ ತೀರ್ಥವೂ ಸಹ ಧಾರ್ಮಿಕ ಆಕರ್ಷಣೆಯುಳ್ಳ ತಾಣವಾಗಿದೆ. ಮೂರ್ತಿ ವಿಸರ್ಜನೆ, ಪವಿತ್ರ ಸ್ನಾನ ಮುಂತಾದ ಕಾರ್ಯಗಳಿಗೆ ಈ ಮಾನವ ನಿರ್ಮಿತ ಕಲ್ಯಾಣಿಯನ್ನು ಬಳಸಿಕೊಳ್ಳಲಾಗುತ್ತದೆ. ಕಲ್ಯಾಣಿಯ ಸುತ್ತಮುತ್ತ ಹಲವು ದೇವಾಲಯಗಳನ್ನು ಕಾಣಬಹುದು.
ಚಿತ್ರಕೃಪೆ: Niamh Burke

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಗೋಕರ್ಣದಲ್ಲಿ ಭೇಟಿ ನೀಡಬೇಕಾದ ಮತ್ತೊಂದು ಪ್ರಮುಖ ತಾಣವೆಂದರೆ ಮಹಾಬಲೇಶ್ವರ ದೇವಸ್ಥಾನ. ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದು ಕರೆಯಲ್ಪಡುವ ಇಲ್ಲಿನ ಶಿವಲಿಂಗವು ಭಕ್ತರಲ್ಲಿ ಜನಪ್ರೀಯವಾಗಿದೆ. ಈ ಧಾರ್ಮಿಕ ಕ್ಷೇತ್ರವು ಕಾಶಿ ಅಥವಾ ವಾರಣಾಸಿಯಷ್ಟೇ ಪವಿತ್ರವಾದುದು ಎಂದು ಪರಿಗಣಿಸಲಾಗಿದ್ದು, ಪ್ರಸ್ತುತ ಏಳು ಮುಕ್ತಿಕ್ಷೇತ್ರಗಳಲ್ಲಿ ಇದು ಕೂಡಾ ಒಂದಾಗಿದೆ.
ಚಿತ್ರಕೃಪೆ: Nvvchar

ಕುಟುಂಬಸ್ನೇಹಿ ಪ್ರವಾಸಿ ಕೇಂದ್ರಗಳು:
ಪ್ರವಾಸಿಗರು ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಉತ್ಸುಕರಾಗಿ ಖುಷಿಯನ್ನು ಅನುಭವಿಸುವ ಗೋಕರ್ಣ ಪ್ರದೇಶದ ಅತ್ಯಂತ ಜನಪ್ರಿಯ ತಾಣ ಓಂ ಕಡಲ ತೀರ. ಆಧ್ಯಾತ್ಮಿಕ ಹಿಂದೂ ಚಿಹ್ನೆ 'ಓಂ' ನಿಂದ ತನ್ನ ಹೆಸರು ಪಡೆದಿರುವ ಈ ಸ್ಥಳವು ಆ ಚಿಹ್ನೆಯ ಆಕಾರವನ್ನು ಹೋಲುತ್ತದೆ. ಈ ರೀತಿಯಾಗಿ ಹೆಸರು ಪಡೆದಿರುವ ಏಕೈಕ ಕಡಲ ತೀರ ಇದಾಗಿದೆ
ಚಿತ್ರಕೃಪೆ: Abhijit Shylanath

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಸಾಗರ: ಸಾಗರ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರ, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ತಾಲೂಕು ಪ್ರದೇಶ. ಸಾಕಷ್ಟು ಸುಂದರವಾದ, ಮನಸ್ಸಿಗೆ ಮುದ ನೀಡುವ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಸಾಗರವು ಕುಟುಂಬ ಸಮೇತ ಮಾಡಬಹುದಾದ ಪ್ರವಾಸ ಯೋಗ್ಯ ಸ್ಥಳವಾಗಿದೆ. ಸಾಗರದಲ್ಲಿ ತಂಗಲು ಸಾಕಷ್ಟು ವಸತಿಗೃಹ ಹಾಗೂ ಹೋಟೆಲ್ ಗಳಿದ್ದು ನಗರದ ಸುತ್ತಮುತ್ತಲಿನ ಪ್ರದೇಶಗಳಿಗೆ ನಿರಾಯಾಸವಾಗಿ ಭೇಟಿ ನೀಡಿ ಆನಂದ ಪಡೆಯಬಹುದು. ಇನ್ನೂ ವಿಶ್ವ ವಿಖ್ಯಾತ ಜೋಗ ಜಲಪಾತವಂತೂ ಸಾಗರದಿಂದ ಕೇವಲ 30 ಕಿ.ಮೀ ಮಾತ್ರ ದೂರ.
ಚಿತ್ರಕೃಪೆ: Vmjmalali

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಮರವಂತೆ: ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳಿಯಿರುವ ಮರವಂತೆ ಎಂಬ ಹಳ್ಳಿಯು ತನ್ನ ಅತಿ ಮಧುರವಾದ ಹಾಗೂ ಅಷ್ಟೆ ಸುಂದರವಾದ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ. ಈ ಕಡಲ ತೀರ ಎಷ್ಟೊಂದು ಸುಂದರವಾಗಿದೆ ಎಂದರೆ ಔಟ್ ಲುಕ್ ಎಂಬ ಪ್ರವಾಸಿ ನಿಯತಕಾಲಿಕೆಯು ಇದನ್ನು ಕರ್ನಾಟಕದಲ್ಲಿರುವ ಅತಿ ಸುಂದರ ಕಡಲ ತೀರಗಳ ಪಟ್ಟಿಯಲ್ಲಿ ಒಂದೆಂದು ಹೆಸರಿಸಿದೆ. ಆದ್ದರಿಂದ ಕುಟುಂಬ ಸಮೇತರಾಗಿ ಈ ಕಡಲ ಕಿನಾರೆಗೆ ಭೇಟಿ ಭೇಟಿ ನೀಡಬಹುದಾಗಿದೆ.
ಚಿತ್ರಕೃಪೆ: Riju K

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಕೊಲ್ಲೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರು ಒಂದು ಪುಣ್ಯ ಕ್ಷೇತ್ರವಾಗಿದ್ದು, ಕುಟುಂಬ ಸಮೇತವಾಗಿ ಭೇಟಿ ನೀಡಲು ಯೋಗ್ಯ ಸ್ಥಳವಾಗಿದೆ. ಕೊಲ್ಲೂರು ಮುಖ್ಯವಾಗಿ ತನ್ನಲ್ಲಿರುವ ಮೂಕಾಂಬಿಕೆ ದೇವಿಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಕೇರಳದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ಸುಂದರ ಒಡಲಿನಲ್ಲಿ ನೆಲೆಸಿರುವ ಕೊಲ್ಲೂರು ನಿಸರ್ಗ ಸೌಂದರ್ಯದಿಂದ ಸಂಪದ್ಭರಿತವಾಗಿದೆ. ಬೆಂಗಳೂರು, ಮಂಗಳೂರು, ಉಡುಪಿ ಮುಂತಾದ ಪಟ್ಟಣಗಳಿಂದ ಕೊಲ್ಲೂರಿಗೆ ತೆರಳಲು ಬಸ್ಸುಗಳ ಸೌಕರ್ಯವಿದೆ.
ಚಿತ್ರಕೃಪೆ: Ashok Prabhakaran

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ತೀರ್ಥಹಳ್ಳಿ: ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆಯ ಈ ಒಂದು ಪುಟ್ಟ ಪಟ್ಟಣವು ಪ್ರಾಕೃತಿಕ ದೃಷ್ಟಿಯಿಂದ ಮಾತ್ರವಲ್ಲದೆ ಧಾರ್ಮಿಕವಾಗಿಯೂ ವಿಶೇಷ ಮಹತ್ವಪಡೆದ ಸ್ಥಳವಾಗಿದೆ. ರಾಜಧಾನಿ ಬೆಂಗಳೂರು ಮಹಾನಗರದಿಂದ ಸುಮಾರು 340 ಕಿ.ಮೀ ದೂರವಿರುವ ಈ ಪಟ್ಟಣವು ಶಿವಮೊಗ್ಗ ನಗರದಿಂದ ಕೇವಲ 62 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ. ಶಿವಮೊಗ್ಗ ನಗರ ಹಾಗೂ ಬೆಂಗಳೂರು ನಗರಗಳಿಂದ ತೀರ್ಥಹಳ್ಳಿಗೆ ತೆರಳಲು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳೆರಡೂ ದೊರೆಯುತ್ತವೆ. ಮಲೆನಾಡಿನ ಮೈಸಿರಿಯಲ್ಲಿ ಆವರಿಸಿರುವ ತೀರ್ಥಹಳ್ಳಿಯು ಭೇಟಿಯಿತ್ತ ಜನರಿಗೆ ಹಲವಾರು ಆಕರ್ಷಣೆಗಳನ್ನು ಸವಿಯಲು ಅವಕಾಶವನ್ನು ಕೊಡುತ್ತದೆ.
ಚಿತ್ರಕೃಪೆ: Pradeep Kumbhashi

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ತೀರ್ಥಹಳ್ಳಿಯ ಪ್ರಮುಖ ಗುರುತರವಾದ ದೇವಾಲಯ ರಾಮೇಶ್ವರ ದೇವಾಲಯ. ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ರಾವಣನ ಸಂಬಂಧಿ ಮಾರೀಚ ಎಂಬ ಅಸುರ ರಾವಣನ ಆದೇಶದಂತೆ ಸೀತೆಯನ್ನು ಸಮ್ಮೋಹನಗೊಳಿಸಲು ಸುಂದರವಾದ ಜಿಂಕೆಯರೂಪದಲ್ಲಿ ಬರಲಾಗಿ ಅದನ್ನು ಕಂಡು ಸೀತೆಯು ಆ ಜಿಂಕೆಯು ತನಗೆ ಬೇಕೆಂಬ ಆಸೆಯನ್ನು ಪತಿ ಶ್ರೀರಾಮನಿಗೆ ವ್ಯಕ್ತಪಡಿಸಿದಳು.
ಚಿತ್ರಕೃಪೆ: Manjeshpv

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಕುಕ್ಕೆ ಸುಬ್ರಹ್ಮಣ್ಯ: ಸರ್ಪ ದೋಷ ನಿವಾರಣೆಗೆ ಅತಿ ಪ್ರಮುಖ ಸ್ಥಳವಾಗಿ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಸಿರುವ ಕುಕ್ಕೆಯು ದೇಶದಲ್ಲೆ ಅತಿ ಜನಪ್ರಿಯ ಹಾಗೂ ಹೆಸರುವಾಸಿಯಾದಂತಹ ಸರ್ಪದೋಷ ನಿವಾರಣಾ ಕ್ಷೇತ್ರವಾಗಿದೆ. ಸಾಕ್ಷಾತ್ ಸುಬ್ರಹ್ಮಣ್ಯನೆ ಇಲ್ಲಿ ನೆಲೆಸಿರುವುದರಿಂದ ಈ ಸ್ಥಳವನ್ನು ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ.
ಚಿತ್ರಕೃಪೆ: karthick siva

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಧರ್ಮಸ್ಥಳ: ಕುಟುಂಬ ಸಮೇತರಾಗಿ ಪ್ರವಾಸ ಹೊರಡಬಹುದಾದ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದು ಸುಂದರ ಧಾರ್ಮಿಕ ತಾಣ ಧರ್ಮಸ್ಥಳ. ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ ಎತ್ತರದ ಬಾಹುಬಲಿಯ ಪ್ರತಿಮೆಯೂ ಕೂಡ ಧರ್ಮಸ್ಥಳದಲ್ಲಿದೆ.
ಚಿತ್ರಕೃಪೆ: Naveenbm

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಮಂಗಳೂರು: ಕರ್ನಾಟಕದ ಹೆಬ್ಬಾಗಿಲು ಎಂದು ಸಂಭೋದಿಸಲಾದ ಬಂದರು ನಗರಿಯಾದ ಮಂಗಳೂರು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ ಒಂದು ಸುಂದರ ಕರಾವಳಿ ನಗರ ಪ್ರದೇಶವಾಗಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ತಟದಲ್ಲಿ ನೆಲೆಸಿದ್ದು ರಾಜ್ಯದ ಗುರುತರವಾದ ಪ್ರವಾಸಿ ಕೇಂದ್ರಗಳ ಪೈಕಿಯೂ ಸಹ ಒಂದಾಗಿದೆ. ಮಂಗಳೂರು ನಗರ ತನ್ನೊಳಗೆ ಹಾಗು ಹತ್ತಿರದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ನಿಸರ್ಗ ಸಿರಿಯ ಸೊಬಗನ್ನು ಹೊತ್ತಿರುವ ತಾಣದಿಂದ ಹಿಡಿದು ಸುಂದರ ಕಡಲ ತೀರಗಳವರೆಗೆ ಹಲವು ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.
ಚಿತ್ರಕೃಪೆ: Nithin Bolar k

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಪಿಲಿಕುಳ ನಿಸರ್ಗಧಾಮ : ಮಂಗಳೂರು ಬಳಿಯಿರುವ ವಮಂಜೂರು ಎಂಬಲ್ಲಿದೆ ಪ್ರಾಕೃತಿಕ ಸಿರಿಯಿಂದ ಸಂಪದ್ಭರಿತವಾದ ಈ ನಿಸರ್ಗಧಾಮ. ತುಳು ಭಾಷೆಯಲ್ಲಿ ಪಿಲಿ ಎಂದರೆ ಹುಲಿ ಹಾಗು ಕುಳ ಎಂದರೆ ಕೆರೆ ಎಂದಾಗುತ್ತದೆ. ಒಂದೊಮ್ಮೆ ಹುಲಿಗಳು ಇಲ್ಲಿ ನೀರನ್ನು ಕುಡಿಯಲು ಬರುತ್ತಿದ್ದುದರಿಂದ ಇದಕ್ಕೆ ಪಿಲಿಕುಳ ಎಂದು ಕರೆಯಲಾಗಿದೆ. ಮಂಗಳೂರು ನಗರ ಸಭೆಯು ಈ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿರುವುದರಿಂದ ಪ್ರಸ್ತುತ ನಗರವಾಸಿಗಳಿಗೆ ಇದೊಂದು ಅನನ್ಯ ವರದಾನವಾಗಿ ಲಭಿಸಿದೆ. ಪಿಕ್ನಿಕ್ ಗಳಿಗಂತೂ ಇದು ಹೇಳಿ ಮಾಡಿಸಿದ ತಾಣವಾಗಿದೆ.
ಚಿತ್ರಕೃಪೆ: kamath_ln

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಉಡುಪಿ: ಕರ್ನಾಟಕದ ಗುರುತರವಾದ ಪ್ರವಾಸಿ ಕೇಂದ್ರಗಳ ಪೈಕಿ ಒಂದಾಗಿರುವ ಉಡುಪಿ ಜಿಲ್ಲೆಯು ಕುಟುಂಬ ಸಮೇತರಾಗಿ ಪ್ರವಾಸ ಮಾಡಬಹುದಾದ ಸುಂದರ ಸ್ಥಳವಾಗಿದೆ.ಧಾರ್ಮಿಕ ಮಹತ್ವದ ಹಾಗೂ ಸಂತಸ ಕರುಣಿಸುವ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ಉಡುಪಿಯ ಶ್ರೀ ಕೃಷ್ಣ ಮಠವು ಧಾರ್ಮಿಕ ಪ್ರವಾಸಿ ವಿಶೇಷ ಸ್ಥಳವಾಗಿದೆ. ಸಹಸ್ರಾರು ಜನರು ದೇಶದೆಲ್ಲೇಡೆಯಿಂದ ಈ ಮಠಕ್ಕೆ ಭೇಟಿ ನೀಡಲು ಬರುತ್ತಾರೆ. ಅಲ್ಲದೆ ಉಡುಪಿಯ ವ್ಯಂಜನವು ವಿಶೀಷ್ಟವಾಗಿದ್ದು ನಾಡಿನಲ್ಲೆ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Magiceye

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಸೇಂಟ್ ಮೇರಿಯ ದ್ವೀಪ: ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಈ ರಚನೆಗಳು ಮಡಗಾಸ್ಕರ್ ದೇಶವು ಭಾರತ ಉಪಖಂಡದೊಂದಿಗೆ ಹೊಂದಿಕೊಂಡಿದ್ದಾಗ ಉಂಟಾದವುಗಳು ಎಂದಿ ತಜ್ಞರು ವಿಶ್ಲೇಷಿಸುತ್ತಾರೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Arun Prabhu

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಮಲ್ಪೆ ಕಡಲ ತೀರ: ಉಡುಪಿಯಿಂದ ಪಶ್ಚಿಮಕ್ಕೆ ಆರು ಕಿ.ಮೀ ದೂರದಲ್ಲಿದೆ ಮಲ್ಪೆ ಕಡಲ ತೀರ. ಮಲ್ಪೆ ಎಂಬುದು ಒಂದು ಬಂದರು ಪ್ರದೇಶದ ಹೆಸರಾಗಿದ್ದು ಇಲ್ಲಿ ಸಾಕಷ್ಟು ಇತರೆ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಉಡುಪಿ ನಗರದಿಂದ ಮಲ್ಪೆಗೆ ತೆರಳಲು ಬಸ್ಸುಗಳು ಹಾಗೂ ರಿಕ್ಷಾಗಳು ನಿರಾಯಾಸವಾಗಿ ದೊರೆಯುತ್ತವೆ.
ಚಿತ್ರಕೃಪೆ: Balaji.B

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಕೊಡಗು: ಕರ್ನಾಟಕದ ಬಹು ಪ್ರಖ್ಯಾತ ಪ್ರವಾಸಿ ಕೇಂದ್ರ ಕೊಡಗು ನಾಡು. ಬೇಸಿಗೆಯಾಗಲಿ, ಮಳೆಯಾಗಲಿ ಇಲ್ಲವೆ ಚಳಿಗಾಲವಿರಲಿ ಬಹುತೇಕ ಎಲ್ಲ ಸಮಯದಲ್ಲೂ ಭೇಟಿ ನೀಡಬಹುದಾದ ಸುಂದರ ತಾಣ ಕೊಡಗು. ಅಲ್ಲದೆ ಇದೊಂದು ಗಿರಿಧಾಮ ಪ್ರದೇಶವೂ ಆಗಿದ್ದು ಗಮ್ಯ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಅದ್ಭುತವಾದ ರಿಸಾರ್ಟ್ ಗಳು, ಹೋಟೆಲ್ ಗಳು, ಚಹ, ಕಾಫಿ ತೋಟಗಳು, ದಟ್ಟ ಹಸಿರಿನಿಂದ ಕೂಡಿದ ಪ್ರಕೃತಿ, ಹಿತಕರವಾದ ವಾತಾವರಣ ಇವೆಲ್ಲವೂ ಸೇರಿ ಕೊಡಗನ್ನು ಒಂದು ಸುಂದರ ಪ್ರವಾಸಿ ಕೇಂದ್ರವನ್ನಾಗಿಸಿವೆ. ಮಧುಚಂದ್ರಕ್ಕೆ ಭೇಟಿ ನೀಡಬಹುದಾದ ಸ್ಥಳಗಳಲ್ಲಿಯೂ ಪ್ರಸಿದ್ಧವಾಗಿರುವ ಕೊಡಗು ಕುಟುಂಬ ಸಮೇತ ಪ್ರವಾಸಕ್ಕೂ ಸಹ ಆದರ್ಶಮಯವಾಗಿದೆ. ಕೊಡಗಿನ ಸುಂದರ ಆಕರ್ಷಣೆಗಳು.
ಚಿತ್ರಕೃಪೆ: Haseeb P

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಬಿಂಬಿತವಾಗಿರುವ ಮೈಸೂರು ಪ್ರವಾಸಿ ದೃಷ್ಟಿಯಿಂದ ಗಮನಿಸಿದಾಗ ಕರ್ನಾಟಕದ ಗುರುತರ ತಾಣಗಳಲ್ಲಿ ಒಂದಾಗಿ ಮೆರೆಯುತ್ತದೆ. ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಮೈಸೂರನ್ನು ನೋಡಲು ಬರುತ್ತಾರೆ. ಇದಕ್ಕೆ ಮತ್ತೊಂದು ಕಾರಣವೆಂದರೆ ಮೈಸೂರಿನ ಸುತ್ತಮುತ್ತಲೂ ಸಹ ಆಕರ್ಷಕ ಪ್ರವಾಸಿ ತಾಣಗಳಿರುವುದು. ಇನ್ನೂ ಸೆಪ್ಟಂಬರ್ ಅಕ್ಟೋಬರ್ ಸಮಯದಲ್ಲಿ ಜರುಗುವ ಮೈಸೂರು ದಸರಾ ಅಂತೂ ವಿಶ್ವ ವಿಖ್ಯಾತವಾಗಿದೆ. ಕುಟುಂಬದವರೊಡನೆ, ನೆಂಟರೊಡನೆ ಪ್ರವಾಸ ಮಾಡಲು ಮೈಸೂರು ಬಲು ಸೂಕ್ತ ಪ್ರವಾಸಿ ಪಟ್ಟಣವಾಗಿದೆ. ಮೈಸೂರಿನ ವಿಶೇಷತೆಗಳು.
ಚಿತ್ರಕೃಪೆ: Aviva West

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಶ್ರೀರಂಗಪಟ್ಟಣ: ಐತಿಹಾಸಿಕ ಸ್ಥಳಗಳಿಂದ ಕೂಡಿದ ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವುದು ನಿಜಕ್ಕೂ ಒಂದು ಮೌಲ್ಯಯುತವಾದ ಪ್ರವಾಸವಾಗುತ್ತದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಊರಾಗಿದೆ. ಈ ದ್ವೀಪವು 13 ಚ.ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದೆ. ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಊರು ಇಲ್ಲಿ 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ.
ಚಿತ್ರಕೃಪೆ: Gopal Venkatesan

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ನಂಜನಗೂಡು: ಮೈಸೂರು ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಪವಿತ್ರ ಕ್ಷೇತ್ರ ನಂಜನಗೂಡು. ತನ್ನ ಶ್ರೀಮಂತ ಪರಂಪರೆಯಿಂದಾಗಿ ಸಹಾ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಪಟ್ಟಣವು ಇಲ್ಲಿ ನೆಲೆಗೊಂಡಿರುವ ದೈವವಾದ ನಂಜುಂಡೇಶ್ವರನಿಂದ ನಂಜನಗೂಡು ಎಂದು ಹೆಸರು ಪಡೆಯಿತು. ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 30 ಕಿ.ಮೀ ದೂರದಲ್ಲಿ ಇರುವ ನಂಜನಗೂಡಿಗೆ ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು.
ಚಿತ್ರಕೃಪೆ: Dineshkannambadi

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ನಾಗರಹೊಳೆ ಅಭಯಾರಣ್ಯ: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂತಲು ಕರೆಯಲ್ಪಡುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಹಾಗೂ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಮೈಸೂರು ಜಿಲ್ಲೆಗಳಲ್ಲಿ ಹರಡಿದೆ. 1999 ರಲ್ಲಿ ಭಾರತದ 37 ನೇಯ ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲ್ಪಟ್ಟ ಈ ಉದ್ಯಾನ ನೀಲ್ಗಿರಿ ಜೈವಿಕ ಮಂಡಲದ ಭಾಗವಾಗಿದೆ. ನಾಗರಹೊಳೆ ಉದ್ಯಾನವು ಸಾಕಷ್ಟು ದಟ್ಟವಾದ ಗಿಡ ಮರ, ಹಳ್ಳ ಕೊಳ್ಳ, ಜಲಪಾತ ಹಾಗೂ ವೈವಿಧಮಯ ಜೀವರಾಶಿಯಿಂದ ಕೂಡಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಮೈಸೂರಿನಿಂದ ನಾಗರಹೊಳೆ 54 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Sankara Subramanian

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಮೇಲುಕೋಟೆ: ಮಂಡ್ಯ ಜಿಲ್ಲೆಯಲ್ಲಿರುವ ಮತ್ತೊಂದು ಪ್ರವಾಸಿ ತಾಣವೆಂದರೆ ಮೇಲುಕೋಟೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿರುವ ಜಯಲಲಿತ ಅವರು ಹುಟ್ಟಿದ್ದು ಈ ಸ್ಥಳದಲ್ಲಿಯೆ. ಇದೊಂದು ಧಾರ್ಮಿಕ ಕೇಂದ್ರವಾಗಿದ್ದು, ಚೆಲುವರಾಯಸ್ವಾಮಿ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. ಮೇಲುಕೋಟೆಯು ಮೈಸೂರಿನಿಂದ 78 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Pradeep Kumbhashi

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಮಲೆಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಹೊರಟರೆ ಅಲ್ಲಿನ ಸುಂದರ ಮಹದೇಶ್ವರನ ದೇವಾಲಯವನ್ನು ಪ್ರಮುಖವಾಗಿ ನೋಡಬೇಕು. ಆದರು ಆ ದೇಗುಲದ ಸುತ್ತ- ಮುತ್ತಲಿನ ಪ್ರದೇಶವನ್ನು ಪ್ರಕೃತಿ ಪ್ರೇಮಿಗಳಾದವರು ನೋಡಲೇಬೇಕು. ಮಲೆ ಮಹದೇಶ್ವರನ ಭವ್ಯ ಮಂದಿರವು ದಟ್ಟ ಕಾಡಿನ ಸಮೀಪದಲ್ಲಿ ಇದೆ. ಇಲ್ಲಿಗೆ ನೀವು ಪ್ರವಾಸ ಹೊರಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸಿಗೆ ನವಚೇತನವನ್ನು ಒದಗಿಸಬಹುದು. ಮಲೆಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯಲ್ಲಿದ್ದು, ಮೈಸೂರು ನಗರದಿಂದ 140 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಬೆಟ್ಟಗಳು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿವೆ.
ಚಿತ್ರಕೃಪೆ: Tumkurameen

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ದೇವರಾಯನದುರ್ಗ: ತುಮಕೂರು ಜಿಲ್ಲೆಯಲ್ಲಿರುವ ದೇವರಾಯನ ದುರ್ಗವು ಒಂದು ಚಿಕ್ಕ ಗಿರಿಧಾಮ ಪ್ರದೇಶವಾಗಿದ್ದು ತನ್ನಲ್ಲಿರುವ ಯೋಗ ಹಾಗೂ ಭೋಗ ನರಸಿಂಹನ ದೇವಸ್ಥಾನಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ವಾರ್ಷಿಕವಾಗಿ ಇಲ್ಲಿ ಅತಿ ಸಡಗರದಿಂದ ಹಬ್ಬಗ್ಳನ್ನೂ ಸಹ ಆಯೋಜಿಸಲಾಗುತ್ತದೆ. ಸುತ್ತಮುತ್ತಲಿನ ಸ್ಥಳಗಳು ಹಾಗೂ ಬೆಂಗಳೂರಿನಿಂದ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ. ಕುಟುಂಬ ಸಮೇತವಾಗಿ ಒಂದು ದಿನದ ಪ್ರವಾಸ ಮಾಡಿ ಬರಲು ದೇವರಾಯನದುರ್ಗ ಒಂದು ಉತ್ತಮ ಸ್ಥಳವಾಗಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವುದರಿಂದ ವಾರಾಂತ್ಯದ ರಜೆ ದಿನಗಳಲ್ಲಿ ಸದ್ದು ಗದ್ದಲಿನ ವಾತಾವರಣದಿಂದ ಸ್ವಲ್ಪ ಕಾಲ ಶಾಂತವಾಗಿ ಕಳೆಯಲು ದೇವರಾಯನದುರ್ಗ ಒಂದು ಒಳ್ಳೆಯ ಆಯ್ಕೆಯೂ ಹೌದು.
ಚಿತ್ರಕೃಪೆ: Srinivasa83

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಭೀಮೇಶ್ವರಿ: ಭೀಮೇಶ್ವರಿ ನಿಜವಾಗಿಯೂ ಆನಂದ ಕರುಣಿಸುವ ಒಂದು ಅದ್ಭುತ ಪ್ರದೇಶ. ಕಾವೇರಿ ನದಿಯು ಸುಶ್ರಾವ್ಯವಾಗಿ ಹಾಡುತ್ತ ಹರಿದಿರುವ, ಸುತ್ತ ಮುತ್ತಲಿನಲ್ಲಿ ದಟ್ಟವಾದ ಹಸಿರು ಹೊತ್ತ, ಬೆರುಗುಗೊಳಿಸುವ ಬೆಟ್ಟ ಗುಡ್ಡಗಳ ಮಧ್ಯೆ ನೆಲೆಸಿರುವ ಭೀಮೇಶ್ವರಿ ಅವಿಶ್ರಾಂತ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ವಿಶ್ರಾಂತಮಯ ತಾಣವಾಗಿದೆ. ಕಾವೇರಿ ಅರಣ್ಯಧಾಮ ಎಂತಲೂ ಕರೆಯಲ್ಪಡುವ ಭೀಮೇಶ್ವರಿ ರಕ್ಷಿತ ಅರಣ್ಯವು ಮಂಡ್ಯ, ಚಾಮರಾಜನಗರ ಹಾಗೂ ರಾಮನಗರ ಹೀಗೆ ಮುರೂ ಜಿಲ್ಲೆಗಳಲ್ಲಿ ತನ್ನ ತೆಕ್ಕೆಯನ್ನು ಚಾಚಿದೆ. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಮಂಡ್ಯ (60 ಕಿ.ಮೀ) ಹಾಗೂ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ. ಆಗಸ್ಟ್ ನಿಂದ ಫೆಬ್ರುವರಿ ಮಧ್ಯದವರೆಗಿನ ಸಮಯವು ಭೀಮೇಶ್ವರಿಗೆ ಭೇಟಿ ನೀಡಲು ಆದರ್ಶಮಯವಾಗಿದೆ. ಅಂದ ಹಾಗೆ ಇಲ್ಲಿ ಸಾಕಷ್ಟು ರಿಸಾರ್ಟುಗಳಿದ್ದು ಮುಂಚಿತವಾಗಿಯೆ ಬುಕ್ ಮಾಡಿ ಕಾವೇರಿಯ ಸುಂದರ ತಟ ಹಾಗೂ ಪರಿಸರದಲ್ಲಿ ಕುಟುಂಬದವರೊಡನೆ ಬೆರೆತು ಹಾಯಾಗಿ ಸಮಯ ಕಳೆಯಬಹುದು.
ಚಿತ್ರಕೃಪೆ: Ashwin Kumar

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಬೆಂಗಳೂರು: ಕರ್ನಾಟಕದ ರಾಜಧಾನಿ, ದೇಶದ ಆಧುನಿಕ ಮುಖ, ಭಾರತದ ಸಿಲಿಕಾನ್ ಕಣಿವೆ ಎಂಬೆಲ್ಲ ಹೆಗ್ಗಳಿಕೆಗಳನ್ನು ಹೊಂದಿರುವ ಬೆಂಗಳೂರು ಮಹಾನಗರವು ಕುಟುಂಬದವರೊಡನೆ ಜೊತೆಯಾಗಿ ಪ್ರವಾಸ ಮಾಡಬಹುದಾದ ಅದ್ಭುತ ಸ್ಥಳವಾಗಿದೆ. ನಗರದ ಒಳಗೆ ಹಾಗೂ ಹೊರಗೆ ನೋಡಬಹುದಾದ ಸಾಕಷ್ಟು ಪ್ರವಾಸಿ ಆಕರ್ಷಣೆಗಳು ಬೆಂಗಳೂರಿನಲ್ಲಿವೆ. ಅಲ್ಲದೆ ಬೆಂಗಳೂರಿನಿಂದ ಸುಮಾರು 200 ಕಿ.ಮೀ ಒಳಗಿನ ವ್ಯಾಪ್ತಿ ಪ್ರದೇಶದಲ್ಲಿ ಇನ್ನೂ ಹಲವಾರಿ ಅದ್ಭುತ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದಾಗಿದೆ. ಗಮನಸೆಳೆವ ಬೆಂಗಳೂರಿನ ಆಕರ್ಷಣೆಗಳು.
ಚಿತ್ರಕೃಪೆ: Kailash

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಬೇಲೂರು-ಹಳೆಬೀಡು: ಹಾಸನ ಜಿಲ್ಲೆಯ ಬೇಲೂರು-ಹಳೆಬೀಡು ಪಟ್ಟಣಗಳು ಹೊಯ್ಸಳ ಶಿಲ್ಪ ಕಲೆಗಳಿಗೆ ಅದ್ಭುತ ಉದಾಹರಣೆಯಾಗಿದೆ. ಕುಟುಂಬ ಸಮೇತವಾಗಿ ಈ ಪಟ್ಟಣಗಳಿಗೆ ಭೇಟಿಯಿತ್ತು ಹೊಯ್ಸಳ ಕಾಲದ ಅದ್ಭುತ ಶಿಲ್ಪಕಲೆಯ ಉದಾಹರಣೆಗಳನ್ನು ನೋಡಬಹುದಾಗಿದೆ. ಈ ಶಿಲ್ಪ ಕಲೆಗಳು ಸೂಕ್ಷ್ಮ ಕೆತ್ತನೆಗಳಿಗೆ ಹೆಸರುವಾಸಿಯಾಗಿದ್ದು, ಚೆನ್ನಕೇಶವ ದೇವಸ್ಥಾನ, ದರ್ಪಣ ಸುಂದರಿ ಮುಂತಾದ ಜನಪ್ರೀಯವಾದ ರಚನೆಗಳ ವೈಭವವನ್ನು ಕಣ್ಣಾರೆ ನೋಡಿ ಆನಂದಿಸಬಹುದು. ಬೇಲೂರಿನ ಚೆನ್ನಕೇಶವ ದೇವಸ್ಥಾನ.
ಚಿತ್ರಕೃಪೆ: Jean-Pierre Dalbéra

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಹಂಪಿ: ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಎತ್ತಿ ಎತ್ತಿ ಸಾರುವ, ವಿಶ್ವ ವಿಖ್ಯಾತ ಹಂಪಿಯು ಒಂದು ಪ್ರಮುಖ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಕುಟುಂಬ ಸಮೇತ ಪ್ರವಾಸ ಮಾಡಲು ಯೋಗ್ಯವಾದ ತಾಣವಾಗಿದೆ. ಕೃಷ್ಣದೇವರಾಯನ ಕಾಲದ ವೈಭವ, ಶ್ರೀಮಂತಿಕೆ, ಶಿಲ್ಪಕಲೆ, ವಿವಿಧ ದೇಗುಲಗಳು, ರಚನೆಗಳು ಹೀಗೆ ವೈವಿಧ್ಯಮಯ ಆಕರ್ಷಣೆಗಳ ಬೀಡಾಗಿದೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ. ಕೊಂಪೆ ಕೊಂಪೆಯಲ್ಲೂ ಅಡಗಿದೆ ಹಂಪಿಯ ವೈಭವ.
ಚಿತ್ರಕೃಪೆ: Harish Aluru

ಕುಟುಂಬ ಸಮೇತ ಪ್ರವಾಸ ಮಾಡಬಹುದಾದ ಸ್ಥಳಗಳು:
ಐಹೊಳೆ-ಪಟ್ಟದಕಲ್ಲು: ಕೇವಲ ಹತ್ತು ಕಿ.ಮೀ ಗಳ ಅಂತರದಲ್ಲಿರುವ ಐಹೊಳೆ ಹಾಗೂ ಪಟ್ಟದಕಲ್ಲು ತಾಣಗಳು ಕರ್ನಾಟಕದ ಭವ್ಯ ಇತಿಹಾಸ ಸಾರುವ, ಚಾಲುಕ್ಯ ವಾಸ್ತುಶೈಲಿಗೆ ಹೆಸರುವಾಸಿಯಾಗಿರುವ ಪ್ರಖ್ಯಾತ ಪ್ರವಾಸಿ ಕೇಂದ್ರಗಳ ಪೈಕಿ ಒಂದಾಗಿವೆ. ಐಹೊಳೆ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆಯುವ ಸಾಮರ್ಥವುಳ್ಳದ್ದಾಗಿದ್ದರೆ, ಪಟ್ಟದಕಲ್ಲು ಈಗಾಗಲೆ ಉನೆಸ್ಕೊದಿಂದ ಆ ಮನ್ಯತೆ ಪಡೆದಿದೆ. ಕಲಿನಲ್ಲಿ ಕೆತ್ತಲಾದ ನೂರಾರು ಸುಂದರ ದೇವಸ್ಥಾನಗಳು ಅವೂ ಕೂಡ ಐದನೇಯ ಶತಮಾನದಲ್ಲಿ ನಿರ್ಮಾಣವಾದವುಗಳನ್ನು ಈ ಎರಡೂ ತಾಣಗಳಲ್ಲಿ ಕಾಣಬಹುದು. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಅದ್ಭುತ ಪ್ರವಾಸಿ ಕೇಂದ್ರಗಳು ಕುಟುಂಬ ಸಮೇತ ಮಾಡಬಹುದಾದ ಪ್ರವಾಸಕ್ಕೆ ಯೋಗ್ಯ ಸ್ಥಳಗಳಾಗಿದ್ದು ಬಾದಾಮಿಯಿಂದ 25 ಕಿ.ಮೀ ಹಾಗೂ ಬೆಂಗಳೂರಿನಿಂದ 515 ಕಿ.ಮೀ ಗಳಷ್ಟು ದೂರದಲ್ಲಿವೆ.
ಚಿತ್ರಕೃಪೆ: Vaasusreeni


Click it and Unblock the Notifications



















