ತಮ್ಮ ಸಂಗಾತಿಯೊಂದಿಗೆ ಅಥವಾ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನೀವೇನಾದರೂ ಟೂರ್ ಪ್ಲಾನ್ ಮಾಡುತ್ತಿದ್ದರೆ ಕರ್ನಾಟಕದಲ್ಲಿ ಒಂದು ಸುಂದರವಾದ ಸ್ಥಳವಿದೆ. ವಿಶೇಷವಾಗಿ ಮಳೆಗಾಲದಲ್ಲಿ ನಿಮ್ಮಾಕೆಯನ್ನು ಅಲ್ಲಿ ಕರೆದೊಯ್ದರೆ ದಿಲ್ ಖುಷ್. ಹೌದು, ನೀವು ಈ ಸ್ಥಳದಲ್ಲಿ ಹಚ್ಚ ಹಸಿರು ಗುಡ್ಡಗಳ ನಡುವೆ ತಮ್ಮ ಸಂಗಾತಿಯೊಂದಿಗೆ ಕೈಕೈ ಹಿಡಿದು ತಿರುಗಾಡಬಹುದು. ಅದರಲ್ಲೂ ಸಣ್ಣ ಮಳೆ ಬಂತೆಂದರೆ ಆಹಾ...ಖುಷಿ ಹೇಳತೀರದು. ನೀವೂ ನಿಮ್ಮ ಸಂಗಾತಿಯೊಂದಿಗೆ ಇಂತಹ ಸುಂದರ ಹಚ್ಚ ಹಸಿರು ಕಾನನ, ಕಾಫಿ ತೋಟದ ನಡುವೆ ಸುತ್ತಾಡಲು ಬಯಸಿದರೆ, ಕರ್ನಾಟಕದಲ್ಲಿರುವ ಈ ಸುಂದರವಾದ ಗಿರಿಧಾಮಕ್ಕೆ ಖಂಡಿತ ಭೇಟಿ ನೀಡಿ. ಆ ಗಿರಿಧಾಮ ಯಾವುದೆಂದು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ...
ಸಾಮಾನ್ಯವಾಗಿ ಬೇಸಿಗೆಯಿಂದ ಮುಕ್ತಿ ಪಡೆಯಲು ಎಲ್ಲರೂ ಮಲೆನಾಡಿನತ್ತ ದಾಪುಗಾಲಿಡುತ್ತಾರೆ ಅಲ್ಲವೇ. ಆದರೆ ಕರ್ನಾಟಕದ ಈ ಗಿರಿಧಾಮಕ್ಕೆ ಜನರು ಹೆಚ್ಚಾಗಿ ಭೇಟಿ ನೀಡುವುದು ಮಳೆಗಾಲದಲ್ಲಿ ಮಾತ್ರ. ಹೌದು ಈಗ ನಿಮ್ಮ ಮನಸ್ಸಿನಲ್ಲಿ ಆ ಸ್ಥಳ ನೆನಪಾಗುತ್ತಿದೆಯಾ...ಯೆಸ್ ಅದೇ ಚಿಕ್ಕಮಗಳೂರು. ಈ ಗಿರಿಧಾಮದ ಬಗ್ಗೆ ಹೇಳುವುದಾದರೆ ಇದು ತುಂಬಾ ಸುಂದರವಾದ ಸ್ಥಳವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಾವಿರಾರು ಜೋಡಿಗಳು ಇಲ್ಲಿಗೆ ಬರುತ್ತಾರೆ. ಇದು ಕರ್ನಾಟಕದ ಅತ್ಯಂತ ಸುಂದರವಾದ ಗಿರಿಧಾಮವಾಗಿದೆ. ಇಲ್ಲಿನ ಶಾಂತಿಯುತ ಪರಿಸರ, ಹರಿಯುವ ನದಿಗಳು ಮತ್ತು ಸುತ್ತಲೂ ಹಸಿರು ಜೀವನದಲ್ಲಿ ಒಮ್ಮೆ ನೋಡಲೇಬೇಕು. ಅಂದಹಾಗೆ ಈ ಸ್ಥಳದ ಬಗ್ಗೆ ನಿಮಗೆ ಕ್ರೇಜ್ ಹುಟ್ಟಿಸುವ ಬಹಳಷ್ಟು ಸಂಗತಿಗಳು ಇಲ್ಲಿವೆ.
ನಗರದ ಸೌಂದರ್ಯ ಹೆಚ್ಚಿಸಿರುವ...
ಚಿಕ್ಕಮಗಳೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಸಣ್ಣ ನಗರ. ಈ ನಗರದ ಸೌಂದರ್ಯ ಹೆಚ್ಚಿಸಿರುವುದು ಇಲ್ಲಿನ ಗಿರಿ ಶಿಖರಗಳು, ಜಲಪಾತಗಳು, ದೇವಾಲಯಗಳು ಮತ್ತು ಕಾಫಿ ತೋಟಗಳು. ಚಿಕ್ಕಮಗಳೂರನ್ನು ಕಾಫಿ ಲ್ಯಾಂಡ್ ಎಂದೂ ಕರೆಯುತ್ತಾರೆ. ಏಕೆಂದರೆ ಇದು ಹೆಚ್ಚಿನ ಸಂಖ್ಯೆಯ ಚಹಾ ಮತ್ತು ಕಾಫಿ ತೋಟಗಳನ್ನು ಹೊಂದಿದೆ. ಈ ತೋಟಗಳಲ್ಲಿ ಬೆಳೆಯುವ ಚಹಾ ಮತ್ತು ಕಾಫಿಯ ಗುಣಮಟ್ಟವು ದೇಶದಾದ್ಯಂತ ಪ್ರಸಿದ್ಧವಾಗಿದೆ. ಚಿಕ್ಕಮಗಳೂರಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದನೆಯಾಗುತ್ತದೆ. ಈ ಸ್ಥಳವನ್ನು ನೋಡಿದ ನಂತರ ಈ ಸ್ಥಳವು ಏಕೆ ವಿಶೇಷವಾಗಿದೆ ಎಂದು ನಿಮಗೆ ತಿಳಿಯುತ್ತದೆ.

ಅತಿ ಎತ್ತರದ ಪರ್ವತ ಶಿಖರ
ಸಾಹಸವನ್ನು ಇಷ್ಟಪಡುವ ಜನರು ಇಲ್ಲಿನ ಮುಳ್ಳಯ್ಯನಗಿರಿ ಬೆಟ್ಟಕ್ಕೆ ತೆರಳಿ ಟ್ರೆಕ್ಕಿಂಗ್, ಕ್ಯಾಂಪಿಂಗ್, ಮೌಂಟೇನ್ ಬೈಕಿಂಗ್ನಂತ ಸಾಹಸಿ ಕ್ರೀಡೆಗಳನ್ನು ಆನಂದಿಸಬಹುದು. ಈ ಬೆಟ್ಟವು ಕರ್ನಾಟಕದ ಅತಿ ಎತ್ತರದ ಪರ್ವತ ಶಿಖರವಾಗಿದೆ. ಚಿಕ್ಕಮಗಳೂರಿಗೆ ತೆರಳಿದಾಗ ಭೇಟಿ ನೀಡಬೇಕಾದ ಅದ್ಭುತ ಸ್ಥಳಗಳಲ್ಲಿಯೂ ಒಂದು.
ದೂರದೂರುಗಳಿಂದ ಬರುತ್ತಾರೆ
ಚಿಕ್ಕಮಗಳೂರಿನಲ್ಲಿ ಅನೇಕ ಪ್ರಸಿದ್ಧ ಸ್ಥಳಗಳಿವೆ. ಉದಾಹರಣೆಗೆ, ಇಲ್ಲಿರುವ ಮಹಾತ್ಮ ಗಾಂಧಿ ಉದ್ಯಾನವು ತುಂಬಾ ಸುಂದರವಾಗಿದೆ. ಈ ಉದ್ಯಾನವನ್ನು ನೋಡಲು ಪ್ರವಾಸಿಗರು ದೂರದೂರುಗಳಿಂದ ಬರುತ್ತಾರೆ. ಇಲ್ಲಿರುವ ಕುದುರೆಮುಖ ಪರ್ವತ ಶ್ರೇಣಿಯು ಅತ್ಯಂತ ಸುಂದರವಾದ ಪರ್ವತ ಶ್ರೇಣಿಯಾಗಿದೆ. ಇಲ್ಲಿರುವ ಗುಲಾಬಿ ಉದ್ಯಾನ ಮತ್ತು ಸುಂದರವಾದ ಜಲಪಾತವು ಈ ಸ್ಥಳದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಮುಖ ಪ್ರವಾಸಿ ತಾಣ
ಬಾಬಾ ಬುಡನ್ ಬೆಟ್ಟಗಳಿಂದ ಆವೃತವಾಗಿರುವ ಚಿಕ್ಕಮಗಳೂರು ಕರ್ನಾಟಕದ ಪ್ರಮುಖ ಪ್ರವಾಸಿ ತಾಣ. ನೋ ಡೌಟ್. ಇನ್ನು ಇಲ್ಲಿನ ಬಾಬಾ ಬುಡನ್ ಗಿರಿ ವಿಶೇಷತೆ ಎಂದರೆ ಇದು ಮೂರು ಧರ್ಮಗಳ ನಂಬಿಕೆಯ ಕೇಂದ್ರ. ಬಾಬಾ ಬುಡನ್ ಗಿರಿ ಪರ್ವತದ ಮೇಲೆ ದರ್ಗಾ ಇದೆ. ಈ ಸ್ಥಳಕ್ಕೆ ಮುಸ್ಲಿಂ ಸಂತ ಬಾಬಾ ಬುಡನ್ ಹೆಸರಿಡಲಾಗಿದೆ. ಇಲ್ಲಿನ ಪರಿಸರ ಎಷ್ಟು ಸುಂದರವಾಗಿದೆಯೆಂದರೆ ಅದನ್ನು ನೋಡಿದ ನಂತರ ನೀವು ಮಂತ್ರಮುಗ್ಧರಾಗುತ್ತೀರಿ. ಚಿಕ್ಕಮಗಳೂರಿಗೆ ಬರುವವರು ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು.

ಹೆಬ್ಬೆ ಜಲಪಾತ
ಕೆಮ್ಮಣ್ಣುಗುಂಡಿ ಬೆಟ್ಟದ ಮೇಲಿರುವ ಈ ಜಲಪಾತದ ನೀರು ಔಷಧೀಯ ಗುಣಗಳಿಂದ ಕೂಡಿದೆ. ಆದರೆ 168 ಮೀಟರ್ ಎತ್ತರದ ಬೆಟ್ಟದಿಂದ ಬೀಳುವ ಈ ಜಲಪಾತದ ತುದಿಗೆ ಹತ್ತುವುದು ತುಂಬಾ ಕಷ್ಟದ ಕೆಲಸ. ಬಿಳಿ ಅಮೃತಶಿಲೆಯ ರೂಪವನ್ನು ಹೊಂದಿರುವ ಈ ಜಲಪಾತ ನೋಡಲು ಬಹಳ ಅದ್ಭುತವಾಗಿದೆ.
ತೆರಳುವುದು ಹೇಗೆ?
ಬೆಂಗಳೂರಿನಿಂದ ಚಿಕ್ಕಮಗಳೂರಿಗೆ NH75 ರಸ್ತೆಯ ಮೂಲಕ ತೆರಳುವುದಾದರೆ 240 ಕೀ.ಮೀ. ದೂರವಿದ್ದು, ಪ್ರಯಾಣದ ಸಮಯದಲ್ಲಿ ಯಾವುದೇ ಟ್ರಾಫಿಕ್ ಇಲ್ಲವೆಂದಾದರೆ 4 ಗಂಟೆಗಳ ಒಳಗೆ ತೆರಳಬಹುದು. ಮಾರ್ಗ ಬೆಂಗಳೂರು-ಯಡಿಯೂರು- ಚನ್ನರಾಯಪಟ್ಟಣ- ಹಾಸನ-ಬೇಲೂರು-ಚಿಕ್ಕಮಗಳೂರು. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ರಸ್ತೆಯ ಅಂತರವು ಸುಮಾರು 243 ಕಿ.ಮೀ. ಇರುವುದರಿಂದ ಪ್ರಯಾಣಿಸಲು ಹೆಚ್ಚು ಆದ್ಯತೆಯ ಮಾರ್ಗವೆಂದರೆ ರಸ್ತೆ. ಅಂದರೆ ಕಾರು ಅಥವಾ ಬಸ್ ಮೂಲಕ. ನೀವು ರೈಲಿನಲ್ಲಿಯೂ ಇಲ್ಲಿಗೆ ತೆರಳಬಹುದು.


Click it and Unblock the Notifications

















