Search
  • Follow NativePlanet
Share
» »ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!

ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!

By Vijay

ಇದೊಂದು ಪ್ರಕೃತಿಸಹಜವಾದ ಬಿಸಿ ನೀರಿನ ಚಿಲುಮೆಯಾಗಿದೆ. ಇದರಲ್ಲಿ ಚಿಮ್ಮುವ ಬಿಸಿ ನೀರು, ಸಾಮಾನ್ಯ ನೀರಿಗಿಂತಲೂ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಕೆಲವು ಚರ್ಮ ಸಂಬಂಧಿತ ರೋಗಗಳಿಗೆ ರಾಮಬಾಣವೆನ್ನಲಾಗುತ್ತದೆ. ಅಲ್ಲದೆ ಧಾರ್ಮಿಕವಾಗಿಯೂ ಈ ತೀರ್ಥ ಮಹತ್ವ ಪಡೆದಿದ್ದು ಸ್ಥಳೀಯವಾಗಿ ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತದೆ.

ಈ ಆಕರ್ಷಕ ನೈಸರ್ಗಿಕ ಬಿಸಿ ನೀರಿನ ಚಿಲುಮೆಗಳು ಗೊತ್ತೆ?

ಸಾಮಾನ್ಯವಾಗಿ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ಹಿಮಾಲಯ ಪರ್ವತಗಳಿಗೆ ಸನ್ನಿಹಿತವಾದ ಪ್ರದೇಶಗಳಲ್ಲಿ ಗಂಧಕಾಂಶವಿರುವ ಹಾಗೂ ಕೊತ ಕೊತನೆ ಕುದಿಯುವ ಬಿಸಿ ನೀರಿನ ಚಿಲುಮೆಗಳನ್ನು ಅಥವಾ ಬುಗ್ಗೆಗಳನ್ನು ಕಾಣಬಹುದು. ಆದರೆ ಈ ರೀತಿಯ ವಿಸ್ಮಯಗಳು ದಕ್ಷಿಣ ಭಾರತದಲ್ಲಿ ಬಲು ಅಪರೂಪ ಹಾಗೂ ಬಹು ವಿರಳವೆಂದೆ ಹೇಳಬಹುದು.

ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!

ಚಿತ್ರಕೃಪೆ: BHARATHESHA ALASANDEMAJALU

ಆದಾಗ್ಯೂ ಈ ಬಿಸಿ ನೀರಿನ ಚಿಲುಮೆ ಅಥವಾ ತೀರ್ಥವು ದಕ್ಷಿಣ ಭಾರತದ ಒಂದು ವಿಸ್ಮಯವೆಂದೆ ಹೇಳಬಹುದು. ಇನ್ನೊಂದು ಸಂತಸದ ಸಮ್ಗತಿಯೆಂದರೆ ಈ ತೀರ್ಥವಿರುವುದು ಕರ್ನಾಟಕದಲ್ಲಿ. ಇದರ ಕುರಿತು ಅಧ್ಯಯನ ನಡೆಸಿರುವ ಭಾರತೀಯ ಪುರಾತತ್ವ ಸಂಸ್ಥೆಯು ಇದನ್ನು ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂದು ಪಟ್ಟಿ ಮಾಡಿದೆ.

ಹೌದು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಈ ತೀರ್ಥವು ಬೆಂದ್ರು ತೀರ್ಥ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಸ್ಥಳೀಯವಾಗಿ ತುಳು ಭಾಷೆಯಲ್ಲಿ ಬೆಂದ್ರ್ ಅಥವಾ ಕೆಲವೊಮ್ಮೆ ಬೆಂದ್ರೆ ತೀರ್ಥ ಎಂಬ ಹೆಸರುಗಳಿಂದಲೂ ಇದನ್ನು ಕರೆಯಲಾಗುತ್ತದೆ. ಪುತ್ತೂರು ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿ ದಟ್ಟವಾದ ಹಾಗೂ ನಯನ ಮನೋಹರ ಪ್ರಕೃತಿಯ ಮಧ್ಯೆ ಈ ತೀರ್ಥ ನೆಲೆಸಿದೆ.

ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!

ಚಿತ್ರಕೃಪೆ: BHARATHESHA ALASANDEMAJALU

ಅದ್ಭುತ ಪಿಕ್ನಿಕ್ ತಾಣವಾಗಿಯೂ ಇದು ಜನರನ್ನು ಆಕರ್ಷಿಸುತ್ತದೆ. ಇನ್ನೊಂದು ವಿಶೇಷವೆಂದರೆ ತ್ರಿವೇಣಿ ಸಂಗಮ ಕ್ಷೇತ್ರದ ಹತ್ತಿರದಲ್ಲಿ ನೆಲೆಸಿರುವುದರಿಂದ ಈ ತೀರ್ಥ ಸಾಕಷ್ಟು ಧಾರ್ಮಿಕ ಮಹತ್ವವನ್ನೂ ಪಡೆದಿದೆ. ಚೆಲ್ಯಡ್ಕ, ಬೈಲಾಡಿ ಹಾಗೂ ಬೆಟ್ಟಂಪಾಡಿ ಹೊಳೆಗಳು ಈ ತೀರ್ಥದ ಬಳಿಯಲ್ಲೆ ಸಂಗಮ ಹೊಂದುತ್ತವೆ. ದಂತಕಥೆಯಂತೆ ಹಿಂದೆ ಕಣ್ವ ಮುನಿಗಳ ಶಿಷ್ಯರು ಈ ಕ್ಷೇತ್ರವನ್ನು ಗೋಪಾಲಕ್ಷೇತ್ರ ಎಂದು ಕರೆದಿದ್ದರು.

ಹೌದು, ಬಹು ಸಮಯದ ಹಿಂದೆ ಇಲ್ಲಿ ಕಣ್ವ ಮುನಿಗಳ ಶಿಷ್ಯರು ಸಂಚರಿಸುತ್ತಿರುವಾಗ ಇದೊಂದು ಭಯಂಕರವಾದ ಕಾಡು ಪ್ರದೇಶವಾಗಿತ್ತು. ಆದರೂ ಇಲ್ಲಿರುವ ಹುಲಿಗಳು ಇತರೆ ಪ್ರಾಣಿಗಳೊಂದಿಗೆ ಸಾಮರಸ್ಯದಿಂದ ಬದುಕುತ್ತಿರುವುದನ್ನು ನೋಡಿ ಅವರಿಗೆ ಅಚ್ಚರಿಯಾಯಿತು. ಅಲ್ಲದೆ ಈ ಕ್ಷೇತ್ರದಲ್ಲಿ ಹೆಚ್ಚಾಗಿ ಆಕಳುಗಳು ಕಂಡುಬರುತ್ತಿದ್ದವು ಮತ್ತು ಈ ಬಿಸಿ ನೀರಿನ ಬುಗ್ಗೆ ಪ್ರದೇಶಕ್ಕೆ ವಿಶಿಷ್ಟ ಕಳೆ ತಂದಿತ್ತು.

ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ತೀರ್ಥ!

ತೀರ್ಥದ ಬದಿಯಲ್ಲಿರುವ ಅರಳಿ ಮರ ಹಾಗೂ ದೇವಾಲಯ ಸನ್ನಿಧಿ, ಚಿತ್ರಕೃಪೆ: BHARATHESHA ALASANDEMAJALU

ಹೀಗಾಗಿ ಆ ಶಿಷ್ಯರು ಈ ಪ್ರದೇಶ ಸಾಕಷ್ಟು ವಿಶೇಷವಾಗಿದೆ ಎಂದರಿತು ಇದನ್ನು ಗೋಪಾಲ ಕ್ಷೇತ್ರ ಎಂದು ಕರೆದರು ಹಾಗೂ ಇಲ್ಲಿ ವಿಷ್ಣುಮೂರ್ತಿಯ ದೇವಾಲಯವನ್ನು ನಿರ್ಮಿಸಿ ಪೂಜಿಸತೊಡಗಿದರು. ಕ್ರಮೇಣ ಕಾಲ ಕಳೆದಂತೆ ಈ ಗೋಪಾಲ ಕ್ಷೇತ್ರವೆ ಇಂದು ಕರೆಯಲಾಗುವ ಬೆಂದ್ರು ತೀರ್ಥವಾಗಿ ಹೆಸರುವಾಸಿಯಾಯಿತು.

ಈ ತೀರ್ಥದ ನೀರು ನೀವು ಕಲ್ಪಿಸಿಕೊಳ್ಳುತ್ತಿರುವ ಹಾಗೆ ಅತಿಯಾಗಿ ಬಿಸಿ ಇರುವುದಿಲ್ಲ. ಬೆಚ್ಚನೆಯ ಅನುಭವ ನೀಡುವಂತಿದೆ. ವಿಸ್ಮಯವೆಂದರೆ ಇದರ ಆಳದಲ್ಲಿ ಯಾವ ಅಗ್ನಿಶಿಲೆಗಳು ಇಲ್ಲವಾದರೂ ನೀರು ಬಿಸಿಯಾಗಿರುವುದು. ಈ ತೀರ್ಥಕ್ಕೆ ಯಾವ ಸಮಯದಲ್ಲಾಗಲಿ ಭೇಟಿ ನೀಡಬಹುದಾಗಿದ್ದರೂ ಬೇಸಿಗೆಯಲ್ಲಿ ಪೂರ್ವವಾಗಿ ಮಾಹಿತಿ ಪಡೆದು ಹೋಗುವುದು ಉತ್ತಮ. ಏಕೆಂದರೆ ಕಡು ಬೇಸಿಗೆಯ ಸಂದರ್ಭದಲ್ಲಿ ಈ ತೀರ್ಥದ ನೀರು ಒಮ್ಮೊಮ್ಮೆ ಬತ್ತಿ ಹೋಗುವುದುಂಟು. ಆದರೆ ಮಳೆಗಾಲದಾಗಮನವಾಗುತ್ತಿದ್ದಂತೆ ಇಲ್ಲಿ ಮತ್ತೆ ನೀರು ಜಿನುಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X