Search
  • Follow NativePlanet
Share
» »ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುವ ಸ್ಥಳಗಳು!

ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುವ ಸ್ಥಳಗಳು!

By Vijay

ಭಾರತದಲ್ಲಿ ಇಂದು ಸಾಕಷ್ಟು ನಗರಗಳು ಶರವೇಗದಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಈ ಭವ್ಯ ನಗರಗಳ ಪೈಕಿ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಸಹ ಒಂದೆಂದರೆ ತಪ್ಪಾಗಲಾರದು. ಇಂದು ಬೆಂಗಳೂರು ಕಾಸ್ಮೊಪಾಲಿಟನ್ ನಗರವಾಗಿ ಬಹಳ ಜನರ ಗಮನ ಸೆಳೆಯುತ್ತಿದೆ.

ಗಗನಚುಂಬಿ ಕಟ್ಟಡಗಳು, ಆಧುನಿಕ ಸೌಲಭ್ಯಗಳುಳ್ಳ ಮಾಲುಗಳು, ಹಸಿರಿನಿಂದ ಕಂಗೊಳಿಸುವ ಉದ್ಯಾನಗಳು, ಮಲ್ಟಿಪ್ಲೆಕ್ಸುಗಳು ಬೆಂಗಳೂರನ್ನು ಸಿಂಗರಿಸಿವೆ. ಅದರಂತೆ ಬಹಳಷ್ಟು ಚಿತ್ರ ನಿರ್ಮಾಪಕರ ಹಾಗೂ ನಿರ್ದೇಶಕರ ನೆಚ್ಚಿನ ತಾಣವಾಗಿಯೂ ಬೆಂಗಳೂರು ಗಮನ ಸೆಳೆದಿರುವುದರಲ್ಲಿ ಆಶ್ಚರ್ಯವಿಲ್ಲ.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳು

ಕೇವಲ ಕನ್ನಡ ಚಿತ್ರಗಳಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹೀಗೆ ಅನೇಕ ಭಷೆಗಳ ಅದೆಷ್ಟೊ ಚಿತ್ರಗಳು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿವೆ ಹಾಗೂ ಗೊಳ್ಳುತ್ತಲೂ ಇವೆ. ಕೆಲವು ಪ್ರಸಿದ್ಧ ನಿರ್ದೇಶಕರ ಪ್ರಕಾರ ಕಡಿಮೆ ಬಂಡವಾಳದ ಚಿತ್ರಗಳಲ್ಲಿ ವಿದೇಶಿ ತಾಣಗಳ ಪ್ರಭಾವವಿರುವಂತೆ ಚಿತ್ರೀಕರಿಸಬೇಕಾದರೆ ಅವರು ಆಯ್ದುಕೊಳ್ಳುವುದು ಬೆಂಗಳೂರನ್ನೆ!

ಹಾಗಾಗಿ ಬೆಂಗಳೂರು ಇಂದು ಚಿತ್ರೀಕರಣಕ್ಕೂ ಸಹ ಪ್ರಸಿದ್ಧಿ ಪಡೆದಿರುವ ನಗರ. ಹಾಗಾದರೆ ಬೆಂಗಳೂರಿನ ಯಾವೆಲ್ಲ ಸ್ಥಳಗಳು ಚಿತ್ರೀಕರಣಕ್ಕೆ ಯೋಗ್ಯವಾಗಿವೆ ಹಾಗೂ ಆಯ್ದುಕೊಳ್ಳಲ್ಪಡುತ್ತವೆ ಎಂದು ತಿಳಿಯಬೇಕೆ? ಹಾಗಾದರೆ ಈ ಲೇಖನ ಓದಿ. ಬೆಂಗಳೂರಿನ ಈ ಸ್ಥಳಗಳು ಇಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿಯೂ ಪ್ರವಾಸಿಗರ ಗಮನ ಸೆಳೆಯುತ್ತಿರುವುದರಲ್ಲಿ ಸಂಶಯವಿಲ್ಲ.

ಹೈಕೋರ್ಟ್!

ಹೈಕೋರ್ಟ್!

19 ನೇಯ ಶತಮಾನದ ಬೆಂಗಳೂರಿನ ಸಂಸ್ಕೃತಿ-ಸಂಪ್ರದಾಯಗಳ ಶ್ರೀಮಂತಿಕೆಯನ್ನು ಇಂದಿಗೂ ಎತ್ತಿ ತೋರಿಸುತ್ತಿರುವ ಸುಂದರ ಕೆಂಬಣ್ಣದ ಕಟ್ಟಡ ಇದಾಗಿದೆ. ನಿಜ ಹೇಳಬೇಕೆಂದರೆ ಪ್ರಸ್ತುತ ಬೆಂಗಳೂರಿನ ಹೈಕೋರ್ಟ್ ಕಟ್ಟಡವೆ ಹಿಂದಿನ ಅಟ್ಟಾರಾ ಕಚೇರಿಯಾಗಿದೆ. ಒಂದೆಡೆ ವಿಧಾನ ಸೌಧ ಹಾಗೂ ಇನ್ನೊಂದು ಬದಿಯಲ್ಲಿ ದಟ್ಟ ಹಸಿರಿನ ಕಬ್ಬನ್ ಉದ್ಯಾನದ ಮಧ್ಯದಲ್ಲಿ ಸ್ಥಿತವಿರುವ ಈ ಕಟ್ಟಡದ ಆಸು ಪಾಸಿನಲ್ಲಿ ಹಿಂದೆ ಅನೇಕ ಚಿತ್ರಗಳ ಚಿತ್ರೀಕರಣಗಳನ್ನು ಮಾಡಲಾಗಿದೆ.

ಚಿತ್ರಕೃಪೆ: Muhammad Mahdi Karim

ಎಷ್ಟು ವೆಚ್ಚ?

ಎಷ್ಟು ವೆಚ್ಚ?

ರಾವ್ ಬಹದ್ದೂರ್ ಅರ್ಕೋಟ್ ನಾರಾಯಣಸ್ವಾಮಿ ಮೂದಲಿಯಾರ್ ಅವರ ನಿಗ್ರಾಣಿಯಲ್ಲಿ, 1868 ರಲ್ಲಿ, ಒಟ್ಟಾರೆ ಮೌಲ್ಯ 4.5 ಲಕ್ಷ ರುಪಾಯಿಗಳಲ್ಲಿ ಈ ಕಟ್ಟಡದ ನಿರ್ಮಾಣವಾಗಿದೆ. ಇಂದು ಸಾಮಾನ್ಯವಾಗಿ ಬೆಂಗಳೂರು ನೋಡಲು ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆಗಳ ಪೈಕಿ ಇದೂ ಸಹ ಒಂದು.

ಚಿತ್ರಕೃಪೆ: Nagesh Kamath

ಇಲ್ಲಿದೆ ಕಥೆ!

ಇಲ್ಲಿದೆ ಕಥೆ!

ಮೊದಲಿಗೆ ಈ ಕಟ್ಟಡ ನಿರ್ಮಾಣವಾದಾಗ ಇದನ್ನು ಹಳೆಯ ಕಚೇರಿಗಳ ಕಟ್ಟಡ ಎಂದು ಕರೆಯಲಾಗುತ್ತಿತ್ತು. ನಂತರದ ಕಾಲಮಾನದಲ್ಲಿ ಅಂದು ಪ್ರಚಲಿತದಲ್ಲಿದ್ದ ಮೈಸೂರು ಸರ್ಕಾರದ ಜನರಲ್ ಮತ್ತು ರೆವೆನ್ಯೂ ಸೆಕ್ರೆಟ್ರಿಯಾಟ್ ನ 18 ವಿವಿಧ ಇಲಾಖೆಗಳು ಇಲ್ಲಿ ಸ್ಥಳಾಂತರಗೊಂಡ ನಂತರ ಇದಕ್ಕೆ ಅಟ್ಟಾರಾ (ಅಂದರೆ ಹದಿನೆಂಟು) ಕಚೇರಿ ಎಂಬ ಹೆಸರು ಬಂದಿತು. ಕ್ರಮೇಣ ಇದು ಕರ್ನಾಟಕದ ಹೈಕೋರ್ಟ್ ಆಗಿ ಪರಿವರ್ತಿತವಾಯಿತು.

ಚಿತ್ರಕೃಪೆ: Sniperz11

ಕೃಷ್ಣ ಮಂದಿರ

ಕೃಷ್ಣ ಮಂದಿರ

ಜಗದ್ವಿಖ್ಯಾತ ಇಸ್ಕಾನ್ ಸಂಸ್ಥೆಯಿಂದ ಪ್ರಪಂಚದ ವಿವಿಧ ದೇಶಗಳಲ್ಲಿ ಈಗಾಗಲೆ ಕೃಷ್ಣ ದೇವಾಲಯಗಳು ನಿರ್ಮಾಣಗೊಂಡಿದ್ದು ಅವು ಜನಪ್ರೀಯವಾಗಿ ಇಸ್ಕಾನ್ ದೇವಾಲಯಗಳೆಂದೆ ಕರೆಯಲ್ಪಡುತ್ತವೆ. ಅದೆ ರೀತಿಯಾಗಿ ಬೆಂಗಳೂರಿನ ಮಹಾಲಕ್ಷ್ಮಿ ಎಂಟ್ರನ್ಸ್ ರಸ್ತೆಯ ಬಳಿ ಇಸ್ಕಾನ್ ಮಂದಿರವಿದ್ದು ಈ ತಾಣವು ಸಾಕಷ್ಟು ಚಲನಚಿತ್ರಗಳಿಗೆ ಹಿನ್ನೆಲೆಯಾಗಿ ವಿಜೃಂಭಿಸಿದೆ.

ಚಿತ್ರಕೃಪೆ: Pulkit Sinha

ಪ್ರವಾಸಿ ಆಕರ್ಷಣೆ

ಪ್ರವಾಸಿ ಆಕರ್ಷಣೆ

ಬೆಂಗಳೂರಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳ ಪೈಕಿಯೂ ಒಂದಾಗಿರುವ ಇಸ್ಕಾನ್ ಮಂದಿರ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಂಗಳೂರಿನ ಕೆಂಪೇಗೌಡ ಬಸ್ಸು ನಿಲ್ದಾಣ (ಮೆಜೆಸ್ಟಿಕ್) ದಿಂದ ಈ ದೇವಾಲಯಕ್ಕೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Svpdasa

ಪ್ಯಾಲೆಸ್

ಪ್ಯಾಲೆಸ್

ಮೈಸೂರು ರಾಜ ವಂಶಸ್ಥರ ಒಡೆತನದಲ್ಲಿರುವ ಬೆಂಗಳೂರು ಅರಮನೆಯು ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯೂ ಆಗಿರುವುದಲ್ಲದೆ ಚಲನಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಸುಂದರ ಅರಮನೆಯಾಗಿದೆ. ಅರಮನೆಯ ಪ್ರಸಂಗವುಳ್ಳ ಅನೇಕ ಪೌರಾಣಿಕ ಚಿತ್ರಗಳ ಚಿತ್ರೀಕರಣಗಳು ಈ ಅರಮನೆಯಲ್ಲಿ ನಡೆದಿವೆ.

ಚಿತ್ರಕೃಪೆ: Richard August

ಹೃದಯ ಭಾಗದಲ್ಲಿ

ಹೃದಯ ಭಾಗದಲ್ಲಿ

ಇನ್ನೂ ಈ ಅರಮನೆಯು ಬೆಂಗಳೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು ತೆರಳಲು ಅನುಕೂಲಕರವಾಗಿದೆ. 400 ಕ್ಕೂ ಅಧಿಕ ಎಕರೆಗಳಷ್ಟು ವಿಶಾಲವಾದ ಆವರಣ ಹೊಂದಿರುವ ಈ ಅರಮನೆಯು 45,000 ಚ.ಅಡಿಗಳಷ್ಟು ವಿಸ್ತಾರದಲ್ಲಿ ನಿರ್ಮಾಣಗೊಂಡಿದ್ದು ಸುತ್ತಲೂ ಹಸಿರಿನಿಂದ ಕಂಗೊಳಿಸುವ ಸುಂದರ ಉದ್ಯಾನವನ್ನು ಒಳಗೊಂಡಿದೆ.

ಚಿತ್ರಕೃಪೆ: Masaru Kamikura

ಕಟ್ಟಿಗೆಯ ಕೆಲಸ

ಕಟ್ಟಿಗೆಯ ಕೆಲಸ

ಹಲವು ಅಂತಸ್ತುಗಳ ಈ ಅರಮನೆಯಲ್ಲಿ ಹೇಳುವುದಾದರೆ, ಕಟ್ಟಿಗೆಯಲ್ಲಿ ಅದ್ಭುತವಾದ ಕೆತ್ತನೆಗಳುಳ್ಳ ಅನೇಕ ಕಾಮಗಾರಿ ಕೆಲಸವಿದೆ. ಸುಂದರ ವಾಸ್ತುಶೈಲಿಯ ವಿನ್ಯಾಸವಿದೆ. ಅದ್ಭುತವಾಗಿ ಕಂಗೊಳಿಸುವ ಐಷಾರಾಮಿ ಅರಮನೆ ಇದಾಗಿದ್ದು ಭೇಟಿ ನೀಡದ ಕ್ಷಣದಲ್ಲೆ ಹೃದಯವನ್ನು ಕದ್ದು ಬಿಡುತ್ತದೆ.

ಚಿತ್ರಕೃಪೆ: John Hoey

ಇಂಗ್ಲೆಂಡ್

ಇಂಗ್ಲೆಂಡ್

ಇಂಗ್ಲೆಂಡಿನ ಪ್ರಸಿದ್ಧ ವಿಂಡ್ಸರ್ ಕ್ಯಾಸಲ್ ಅರಮನೆಯ ಚಿಕ್ಕ ರೂಪದ ಪ್ರತಿಕೃತಿ ಇದಾಗಿದ್ದು ಸೆಂಟರಲ್ ಹೈಸ್ಕೂಲ್ ಬೆಂಗಳೂರಿನ ಅಂದಿನ ಪ್ರಾಂಶುಪಾಲರಾಗಿದ್ದ ರೆವ್.ಗಾರೆಟ್ ಎಂಬುವವರು ಇದರ ನಿರ್ಮಾತೃ. ನಂತರ ಮೈಸೂರು ಸಂಸ್ಥಾನದ ರಾಜರಾಗಿದ್ದ ಚಾಮರಾಜ ವಡೇಯರ್ ಅವರು ಈ ಅರಮನೆಯನ್ನು ಕೊಂಡುಕೊಂಡರು.

ಚಿತ್ರಕೃಪೆ: Brian Evans

ಬುಲ್ ಟೆಂಪಲ್

ಬುಲ್ ಟೆಂಪಲ್

ಬೆಂಗಳೂರಿನ ಬಸವನಗುಡಿ ಬಡಾವಣೆಯು ಸಾಕಷ್ಟು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಪ್ರದೇಶವಾಗಿದ್ದು ತನ್ನಲ್ಲಿರುವ ಚಿಕ್ಕ ಗುಡ್ಡದ ಮೇಲಿನ ಬಸವನ ಗುಡಿ ಹಾಗೂ ಕೇಲ ಭಾಗದಲ್ಲಿರುವ ದೊಡ್ಡ ಗಣಪತಿ ದೇವಸ್ಥಾನ ಮತ್ತು ಪಕ್ಕದಲ್ಲಿರುವ ಬ್ಯೂಗಲ್ ರಾಕ್ ಉದ್ಯಾನದಿಂದ ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತದೆ.

ಚಿತ್ರಕೃಪೆ: Visdaviva

ಮುಹೂರ್ತ ಸಮಾರಂಭ

ಮುಹೂರ್ತ ಸಮಾರಂಭ

ಇಲ್ಲಿಯೂ ಸಹ ಸಾಕಷ್ಟು ಚಿತ್ರಗಳು ಚಿತ್ರೀಕರಣಗೊಂಡಿವೆ. ಅದರಲ್ಲೂ ವಿಶೇಷವಾಗಿ ದೊಡ್ಡ ಗಣಪತಿಯ ದೇವಸ್ಥಾನವು ಚಿತ್ರಗಳ ಮುಹೂರ್ತದಂತಹ ಸಮಾರಂಭಗಳಿಗಾಗಿ ಬಲು ಪ್ರಸಿದ್ಧಿಗಳಿಸಿದೆ. ಹಾಗೆ ನೀವು ಸುತ್ತಾಡಲು ಹೋದಾಗ ಇಲ್ಲಿ ನಿಮಗಿಷ್ಟವಾದ ಚಿತ್ರ ತಾರೆಗಳು ಕಂಡುಬಂದರೆ ಅಚ್ಚರಿ ಪಡಬೇಕಾಗಿಲ್ಲ.

ಅಮೋಘ

ಅಮೋಘ

ಬೆಂಗಳೂರಿನ ಆಡಳಿತಶಾಹಿ ನೆನಪನ್ನು ಮರುಕಳಿಸುವ ಕೇಂದ್ರವಾಗಿ ಇಂದು ಫ್ರೀಡಂ ಪಾರ್ಕ್ ಅಥವಾ ಸ್ವಾತಂತ್ರ್ಯ ಉದ್ಯಾನವನವು ಗಮನ ಸೆಳೆಯುತ್ತದೆ. ಸಾಕಷ್ಟು ಸಭೆ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಇದು ಆಶ್ರಯ ತಾಣವಾಗಿದ್ದು ಅದ್ಭುತ ಸಾಂಸ್ಕೃತಿಕ ಅನುಭವನ್ನು ನೀಡುತ್ತದೆ.

ಚಿತ್ರಕೃಪೆ: nanuseena

ಹಿಂದೆ ಜೈಲಾಗಿತ್ತು!

ಹಿಂದೆ ಜೈಲಾಗಿತ್ತು!

ಚಿತ್ರೀಕರಣದ ತಾಣವಾಗಿಯೂ ಹೆಸರುವಾಸಿಯಾಗಿರುವ ಈ ಸ್ವಾತಂತ್ರ್ಯ ಉದ್ಯಾನವು ಹಿಂದೆ ಬೆಂಗಳೂರು ಕೇಂದ್ರ ಕಾರಾಗೃಹವಾಗಿತ್ತು. ನಂತರ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಸಾರ್ವಜನಿಕರಿಗೆ ಮುಕ್ತವಾದ ಪ್ರದೇಶವಾಗಿದೆ. ನಗರದ ಪ್ರಖ್ಯಾತ ಕೆ.ಆರ್ ವೃತ್ತದ ಬಳಿ ಈ ಉದ್ಯಾನವಿದೆ.

ಚಿತ್ರಕೃಪೆ: Nishanth Jois

ಸಂಗ್ರಹಾಲಯ

ಸಂಗ್ರಹಾಲಯ

ಭಾರತದ ಮೊದಲ ಅಂತರಿಕ್ಷ ಸಂಗ್ರಹಾಲಯ ಎಂಬ ಖ್ಯಾತಿಗೆ ಪಾತ್ರವಾಗಿರುವ ಹಿಂದಿಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಸಂಗ್ರಹಾಲಯವು ಬೆಂಗಳೂರಿನಲ್ಲಿದ್ದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ಜನಮನ್ನಣೆಗಳಿಸಿದೆ.

ಚಿತ್ರಕೃಪೆ: Arunram

ತಾಣಗಳು

ತಾಣಗಳು

ಹಿಂದೆ ಕೆಲವಾರು ಚಿತ್ರಗಳ ಚಿತ್ರೀಕರಣಗಳು ಇಲ್ಲಿ ನಡೆದಿದ್ದು, ವಿಶೇಷವಾಗಿ ವಾಯು ನೆಲೆಯ, ನಿಲ್ದಾಣದ ಸನ್ನಿವೇಶಗಳನೊಳಗೊಂಡ ಭಾಗದ ಚಿತ್ರೀಕರಣಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Rameshng

ಶಿವಪ್ರತಿಮೆ

ಶಿವಪ್ರತಿಮೆ

ಬೆಂಗಳೂರಿನ ಮುರುಗೇಶಪಾಳ್ಯದಲ್ಲಿರುವ ಕೆಂಪ್ ಫೋರ್ಟ್ ಶಿವ ದೇವಾಲಯ ಚಿತ್ರೀಕರಣಕ್ಕೆ ಪ್ರಸಿದ್ಧಿ ಪಡೆದ ತಾಣ. ಇದೊಂದು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾದ ಶಿವನ ಸನ್ನಿಧಿಯಾಗಿದ್ದು 65 ಅಡಿಗಳಷ್ಟು ಎತ್ತರದ ಶ್ವೇತವರ್ಣದ ಧ್ಯಾನ ಮುದ್ರೆಯಲ್ಲಿರುವ ಶಿವನ ಪ್ರತಿಮೆ ಇದರ ಅತಿ ಪ್ರಮುಖ ಆಕರ್ಷಣೆ. ಹಿಮಾಲಯ ಪರ್ವತಗಳ ಹಿನ್ನಿಲೆಯಲ್ಲಿ ಜಟದಲ್ಲಿ ಗಂಗಾಧಾರಿಯಾಗಿ ಪ್ರತಿಷ್ಠಾಪಿಸಲಾಗಿರುವ ಈ ಪ್ರತಿಮೆ ನಯನ ಮನೋಹರವಾಗಿದೆ.

ಚಿತ್ರಕೃಪೆ: Indianhilbilly

ಲಾಲ್ ಬಾಗ್

ಲಾಲ್ ಬಾಗ್

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬೆಂಗಳೂರ ಸರಹದ್ದನ್ನು ಗುರುತಿಸುವ ನಾಲ್ಕು ದಿಕ್ಕುಗಳಲ್ಲಿ ಗೋಪುರಗಳನ್ನು ನಿರ್ಮಿಸಿದ್ದರು. ಇವನ್ನೆ ಕೆಂಪೇಗೌಡ ಟವರ್ ಅಥವಾ ಗೋಪುರ ಎಂದು ಕರೆಯಲಾಗುತ್ತದೆ. ಈ ಗೋಪುರಗಳು ಮೇಕ್ರಿ ವೃತ್ತ, ಹಲಸೂರು/ಅಲಸೂರು ಕೆರೆ, ಕೆಂಪಾಂಬುದಿ ಕೆರೆ ಹಾಗೂ ಲಾಲ್ ಬಾಗ್ ನಲ್ಲಿವೆ. ಲಾಲ್ ಬಾಗ್ ನಲ್ಲಿರುವ ಗೋಪುರವು ಸಾಕಷ್ಟು ಆಕರ್ಷಕ ಸ್ಥಳದಲ್ಲಿ ಸ್ಥಿತವಿದ್ದು ಚಿತ್ರೀಕರಣಕ್ಕೆ ಯೋಗ್ಯವಾದ ತಾಣವಾಗಿ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Swaminathan

ಸಸ್ಯಕಾಶಿ!

ಸಸ್ಯಕಾಶಿ!

ಬೆಂಗಳೂರಿನಲ್ಲಿ ದಿನೆ ದಿನೆ ಏರುತ್ತಿರುವ ನಗರದ ವಾಯು ಮಾಲಿನ್ಯಕ್ಕೆ ಸೆಡ್ಡು ಹೊಡೆದು ನಿಂತಿರುವ ಲಾಲ್ ಬಾಗ್ ಉದ್ಯಾನ ತನ್ನಲ್ಲಿರುವ ಬೃಹತ್ ಪ್ರಮಾಣದ ಹಸಿರು ಸಂಪತ್ತಿನಿಂದ ತನ್ನಲ್ಲಿ ಭೇಟಿ ನೀಡುವ ಯಾವೊಬ್ಬ ಜೀವಿಗೂ ಮೇಲು ಕೀಳು ಎನ್ನಲಾರದೆ ತಾಜಾ ಆಮ್ಲಜನಕವನ್ನು ಯಥೇಚ್ಚವಾಗಿ ಕರುಣಿಸುತ್ತದೆ.

ಚಿತ್ರಕೃಪೆ: Rishabh Mathur

ಸಂಪದ್ಭರಿತ

ಸಂಪದ್ಭರಿತ

ಈ ಬಟಾನಿಕಲ್ ಉದ್ಯಾನವು ಗಾಜಿನ ಮನೆ, ಅಪರೂಪದ ಸಸ್ಯ ಹಾಗೂ ವಿವಿಧ ಬಗೆಯ ಹೂವುಗಳು, ಹಸಿರು ಹಾಸಿನ ಉದ್ಯಾನಗಳು, ದೊಡ್ಡ ದೊಡ್ಡ ಗಿಡಮರಳು, ವಿಶಾಲವಾದ ಕೊಳ ಹೀಗೆ ಹಲವು ಪ್ರಾಕೃತಿಕ ಸಂಪತ್ತುಗಳಿಂದ ಸಮ್ಪದ್ಭರಿತವಾಗಿದೆ. ಅಲ್ಲದೆ ಚಲನಚಿತ್ರ ನಿರ್ಮಾಪಕ-ನಿರ್ದೇಶಕರ ಬಲು ನೆಚ್ಚಿನ ತಾಣವಾಗಿಯೂ ಗಮನ ಸೆಳೆಯುತ್ತದೆ. ಸಾಕಷ್ಟು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Riju K

ಐತಿಹಾಸಿಕ

ಐತಿಹಾಸಿಕ

ಐತಿಹಾಸಿಕ ಹೆಗ್ಗುರುತಾದ ಮಯೋ ಹಾಲ್ ಕಚೇರಿ ಸನ್ನಿವೇಶಗಳನ್ನು ಚಿತ್ರೀಕರಿಸಲು ಯೋಗ್ಯವಾದ ತಾಣವಾಗಿದೆ. ಬೆಂಗಳೂರಿನ ಎಂಜಿ ರಸ್ತೆ ಬಳಿಯಿರುವ ಈ ಹಾಲ್ ಕಲ್ಲುಗಳಿಂದ ನಿರ್ಮಿತವಾಗಿದ್ದು ಭಾರತದ ನಾಲ್ಕನೇಯ ವೈಸ್ ರಾಯ್ ಅವರ ಗೌರವಾರ್ಥವಾಗಿ ನಿರ್ಮಾಣವಾಗಿದೆ. ಇದರ ಮೊದಲ ಮಹಡಿಯಲ್ಲಿ ಕೆಂಪೇಗೌಡ ವಸ್ತು ಸಂಗ್ರಹಾಲಯವಿದೆ.

ಚಿತ್ರಕೃಪೆ: Charles Haynes

ಅದ್ಭುತ

ಅದ್ಭುತ

ಮಲ್ಲೇಶ್ವರಂನ ಹದಿನೆಂಟನೇಯ ಕ್ರಾಸ್ ಬಳಿ ಸ್ಥಿತವಿರುವ ಸ್ಯಾಂಕಿ ಕೆರೆ ವಾಯು ವಿಹಾರಕ್ಕೆ ಆದರ್ಶಮಯವಾದ ಸ್ಥಳವಾಗಿದೆ. ಕೊಳದ ಸುತ್ತಲೂ ಅಗಲವಾದ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದ್ದು ಉತ್ತಮ ಅನುಭವ ನೀಡುವಂತಿದೆ. ಕೆಲ ನಿರ್ದಿಷ್ಟ ಪ್ರವೇಶ ದ್ವಾರದಲ್ಲಿ ಚಿಕ್ಕದಾದ ಕೊಳ ಹಾಗೂ ಉದ್ಯಾನವಿದ್ದು ಪರ್ವಾಳಗಳ ಕಲರವ ಸದಾ ಅಲ್ಲಿ ಕಳೆಗಟ್ಟಿರುತ್ತದೆ. ಇನ್ನೂ ಕೆರೆಯಲ್ಲಿ ವೈವಿಧ್ಯಮಯ ಬಾತುಗಳೊದ್ದು ಸುಂದರ ಅನುಭವ ನೀಡುತ್ತದೆ. ಹಾಡಿನ ಚಿತ್ರೀಕರಣದ ದೃಶ್ಯಗಳಿಗೆ ವಿಶೇಷವಾದ ತಾಣವಾಗಿದೆ ಎಂದೆ ಹೇಳಬಹುದು.

ಚಿತ್ರಕೃಪೆ: Nvvchar

ಬೇಸಿಗೆ ಅರಮನೆ

ಬೇಸಿಗೆ ಅರಮನೆ

ಬೆಂಗಳೂರಿನ ಕೃಷ್ಣರಾಜ ಮಾರುಅಕಟ್ಟೆ ಬಳಿಯಿರುವ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆಯು ಒಂದು ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿದೆ. ಪಕ್ಕದಲ್ಲೆ ಕೋಟೆ ವೆಂಕಟರಮಣಸ್ವಾಮಿಯ ದೇವಾಲಯವಿರುವ ಈ ಅರಮನೆ ಭಾಗವು ಚಿತ್ರೀಕರಣಕ್ಕೆ ಯೋಗ್ಯವಾದ ಸ್ಥಳವಾಗಿದೆ. ಅಂತೆಯೆ ಕೆಲವು ಚಿತ್ರಗಳ ಸನ್ನಿವೇಷಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: tomislav medak

ಹೆಗ್ಗುರುತು

ಹೆಗ್ಗುರುತು

ರಾಜ್ಯದ ಹಾಗೂ ಬೆಂಗಳೂರಿನ ಪ್ರಮುಖ ಹೆಗ್ಗುರುತಾದ ವಿಧಾನ ಸಭೆ ನಡೆಯುವ ವಿಧಾನ ಸೌಧ ಪ್ರಾಂಗಣವು ಚಿತ್ರ ನಿರ್ದೇಶಕರ ಬಲು ನೆಚ್ಚಿನ ತಾಣವಾಗಿದೆ. ಕೇವಲ ಕನ್ನಡವಲ್ಲದೆ ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ ಚಿತ್ರಗಳ ಹಲವಾರು ಸನ್ನಿವೇಶಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: AjayTorvi

ಎಂ ಜಿ ರಸ್ತೆ ಪೂರ್ವ

ಎಂ ಜಿ ರಸ್ತೆ ಪೂರ್ವ

ಎಂ ಜಿ ರಸ್ತೆಯ ಪೂರ್ವದ ಟರ್ಮಿನಸ್ ನಿಂದ ಪ್ರಾರಂಭವಾಗುವ ಹಲಸೂರು ಬೆಂಗಳೂರಿನ ಅತಿ ಪುರಾತನ ನೆರೆ ಹೊರೆಯ ಪ್ರದೇಶಗಳ ಪೈಕಿ ಒಂದಾಗಿದ್ದು ಇಂದು ಬೆಂಗಳೂರು ನಗರ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತದೆ. ತನ್ನಲ್ಲಿರುವ ಸುಂದರವಾದ ಕೆರೆಯಿಂದಾಗಿ ಹಲಸೂರು ಪ್ರಸಿದ್ಧಿ ಪಡೆದಿದ್ದು ಚಿತ್ರೀಕರಣಕ್ಕೂ ಸಹ ಹೇಳಿ ಮಾಡಿಸಿದಂತಹ ತಾಣವಾಗಿದೆ.

ಚಿತ್ರಕೃಪೆ: Akhil Mekkatt

ಮೆಜೆಸ್ಟಿಕ್

ಮೆಜೆಸ್ಟಿಕ್

ಬಸ್ಸಿನಿಂದಾಗಲಿ ಅಥವಾ ರೈಲಿನಿಂದಾಗಲಿ ಯಾರೆ ಆದರೂ ಬೆಂಗಳೂರು ಪ್ರವೇಶಿಸಿದರೆ ಅವರಿಗೆ ಮೊದಲು ಸ್ವಾಗತ ಕೋರುವುದೆ ಮೆಜೆಸ್ಟಿಕ್ ಪ್ರದೇಶ. ಕೆಂದ್ರ ಬಸ್ಸು ನಿಲ್ದಾಣ ಹಾಗೂ ನಗರ ಬಸ್ಸು ನಿಲ್ದಾಣ ಒಳಗೊಂಡ ಮೆಜೆಸ್ಟಿಕ್ ಅತ್ಯಂತ ಗೌಜು ಗದ್ದಲಗಳಿಂದ ಕೂಡಿರುವ ಪ್ರದೇಶವಾಗಿದ್ದು ಹಲವಾರು ಕನ್ನಡ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Hayathkhan.h

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more