» »ಹೊಸ ಹಕ್ಕಿಗಳ ಕಲರವ ಕೇಳುವಿರಾ?

ಹೊಸ ಹಕ್ಕಿಗಳ ಕಲರವ ಕೇಳುವಿರಾ?

Posted By: Divya

ಮುಗ್ಧ ಪಕ್ಷಿಗಳ ಪ್ರಪಂಚವೇ ಹಾಗೆ, ಸ್ವಚ್ಛಂದವಾಗಿ ಹಾರಾಡುತ್ತವೆ, ನೋಡುಗರಿ ಹರುಷ ನೀಡುತ್ತಾ, ತಮ್ಮ ಲೋಕದಲ್ಲಿ ತೇಲಾಡುತ್ತಿರುತ್ತವೆ. ನಮಗೆ ಇವುಗಳನ್ನು ನೋಡುವುದೇ ಒಂದು ಚೆಂದ. ಹಕ್ಕಿಗಳ ಬಣ್ಣ, ಹಾರಾಟ ಹಾಗೂ ಕೂಗು ಎಲ್ಲವೂ ಮನಸ್ಸಿಗೆ ನಿರಾಳವಾದ ಅನುಭವ ನೀಡುತ್ತವೆ. ವನ್ಯ ಸಿರಿಯಲ್ಲಿ ಒಂದಾದ ಪಕ್ಷಿ ಸಂಕುಲಗಳ ರಕ್ಷಣೆಗಾಗಿ ಅನೇಕ ಪಕ್ಷಿಧಾಮಗಳು ನಮ್ಮಲ್ಲಿವೆ. ಅವುಗಳಲ್ಲಿ ಅತ್ತಿವೇರಿ ಪಕ್ಷಿಧಾಮವೂ ಒಂದು. ಮಕ್ಕಳಿಗೆ ಇದೊಂದು ಆಕರ್ಷಣೀಯ ತಾಣವಾಗಬಲ್ಲದು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿದೆ. ಬೆಂಗಳೂರಿನಿಂದ 400 ಕಿ.ಮೀ. ಹುಬ್ಬಳ್ಳಿಯಿಂದ 50 ಕಿ.ಮೀ. ಹಾಗೂ ಮುಂಡಗೋಡದಿಂದ 15 ಕಿ.ಮೀ ದೂರದಲ್ಲಿದೆ. ಸುತ್ತಲು ಅರಣ್ಯ ಸಂಪತ್ತು, ನಡುವೆ ಅತ್ತಿವೇರಿ ಜಲಾಶಯ ಇಲ್ಲಿಯ ಸೊಬಗನ್ನು ಹೆಚ್ಚಿಸುತ್ತವೆ. ಸದಾ ಪ್ರಶಾಂತವಾಗಿ ಕುಳಿತುಕೊಳ್ಳುವ ಈ ತಾಣದಲ್ಲಿ ಹಕ್ಕಿಗಳ ಕಲರವ ಕೇಳುವುದೇ ಒಂದು ಸಂಭ್ರಮ.

Attiveri Bird Sanctuary in Mundgod

PC: wikipedia.org

ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ಪಕ್ಷಿ ಸಂಕುಲಗಳು, ಜಲಾಶಯದಲ್ಲಿರುವ ಮೀನು ಹಾಗೂ ವಿಶಾಲವಾದ ಉದ್ಯಾನವನ ಪ್ರವಾಸಿಗನ ಮನ ತಣಿಸುತ್ತವೆ. 875 ಎಕರೆ ಸುತ್ತಳತೆ ಹೊಂದಿರುವ ಈ ಜಲಾಶಯ ತನ್ನ ಸುತ್ತಲ ಪ್ರದೇಶದ ವ್ಯವಸಾಯಕ್ಕೆ ನೀರುಣಿಸುತ್ತದೆ. ಅಲ್ಲದೆ ಪಕ್ಷಿ ಸಂಕುಲ ಹೆಚ್ಚಿಸಲು ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸಲಾಗಿದೆ.

ಸೂಜಿ ಬಾಲದ ಬಾತುಕೋಳಿ, ಜಾಗು ಸೆವಳ, ಮತ್ಸ್ಯ ಭಕ್ಷಕ ಗಿಡುಗ, ಚಕೋರ, ಉಂಗುರದ ಕೆಸರ ಗೊರವ, ಕೆಂಟಿಷ ಗೊರವ, ಬೀಸಣಿಕೆ ಬಾಲದ ಸ್ನೆಪ್, ಕರಿ ಅದಿರು ಬಾಲ, ಚಾತಕ ಪಕ್ಷಿ, ಗುಲಾಬಿ ಮೈನಾ, ಬೂದು ಉಲಿಯಕ್ಕಿ, ಹಸಿರು ಮರಳು ಪೀಪಿ ಸೇರಿದಂತೆ ನೂರಾರು ವಿಭಿನ್ನ ಜಾತಿಯ ಪಕ್ಷಿಗಳು ಇಲ್ಲಿವೆ. ಅಲ್ಲದೇ ವಿವಿಧೆಡೆಯಿಂದ ವಲಸೆ ಬಂದ ಪಕ್ಷಿಗಳನ್ನು ಇಲ್ಲಿ ಕಾಣಬಹುದು.

Attiveri Bird Sanctuary in Mundgod

PC: flickr.com

ಮಳೆಗಾಲದಲ್ಲಿ ಕಡಿಮೆ ಮಳೆಯಾದರೆ, ಬೇಸಿಗೆ ಎನ್ನುವಷ್ಟರಲ್ಲಿ ಪಕ್ಷಿಗಳ ಸಂಖ್ಯೆಯೂ ಕಡಿಮೆಯಾಗುತ್ತವೆ ಎನ್ನುತ್ತಾರೆ. ಇಲ್ಲಿಯ ಅಭಿವೃದ್ಧಿಯ ದೃಷ್ಟಿಯಿಂದ ಪ್ರವೇಶ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ವಾಹನ ವ್ಯವಸ್ಥೆ ಅಷ್ಟಾಗಿ ಇರದ ಕಾರಣ ಸ್ವಂತ ವಾಹನದಲ್ಲಿ ಬರುವುದು ಸೂಕ್ತ.

Read more about: uttara kannada