Search
  • Follow NativePlanet
Share
» »ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

By Vijay

ಇಂದು ಹಿಂದು ಸಂಸ್ಕೃತಿಯಲ್ಲಿ ಪರಮ ಪವಿತ್ರ ಸ್ಥಾನ ಪಡೆದಿದೆ ಭಗವದ್ಗೀತೆ. ಪರಮಾತ್ಮನ ಅಂಶವಾದ ಆತ್ಮವು ಮಾನವ ಶರೀರ ಪಡೆದು ಭೂಮಿಯ ಮೇಲೆ ಬಂದ ಕ್ಷಣದಿಂದಲೆ ಅದರ ಜೀವನ ಚಕ್ರ ಪ್ರಾರಂಭವಾಗುತ್ತದೆ. ಹೀಗೆ ಮಾನವ ಜನ್ಮ ಪಡೆದ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಯಾವ ರಿತಿಯಾಗಿ ನಡೆ ನುಡಿಗಳನ್ನು ಆಚರಿಸುತ್ತ, ಧರ್ಮದಿಂದ ಜೀವನ ನಡೆಸಿ ಮೃತ್ಯು-ಜನನ ಚಕ್ರಗಳಿಂದ ಮುಕ್ತಿ ಪಡೆದು ಮತ್ತೆ ಪರಮಾತ್ಮನಲ್ಲಿ ಲೀನವಾಗಬಹುದು ಎಂಬುದನ್ನು ಬಲು ಸೂಕ್ಷ್ಮವಾಗಿ ವಿವರಿಸುತ್ತದೆ ಭಗವದ್ಗೀತೆ.

ಮಹಾಭಾರತ ಕಾಲದಿಂದಲೂ ಪ್ರಚಲಿತದಲ್ಲಿರುವ ಇಂದಿನ ಸ್ಥಳಗಳು

ಇಂತಹ ಪವಿತ್ರವಾದ ಗ್ರಂಥ ಭಗವದ್ಗೀತೆ ಮೊದಲ ಬಾರಿಗೆ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಶ್ರೀಕೃಷ್ಣನಿಂದ ಅರ್ಜುನನಿಗೆ ಬೋಧಿಸಲ್ಪಟ್ಟಿತು. ಅದೂ ಕೂಡ ಯಾವ ಸಂದರ್ಭದಲ್ಲಿ ಗೊತ್ತೆ? ಪಾಂಡವರ ಹಾಗೂ ಕೌರವರ ಮಧ್ಯೆ ಘನಘೋರವಾದ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ! ಹೀಗೆ ಕೃಷ್ಣನು ಭಗವದ್ಗೀತೆ ಬೋಧಿಸಿದ ಆ ಮಹಾ ಸ್ಥಳವನ್ನೆ ಇಂದು ಕುರುಕ್ಷೇತ್ರ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಹಾಗೂ ಈ ಕ್ಷೇತ್ರವು ಪ್ರಸ್ತುತ ಭಾರತದ ಹರ್ಯಾಣ ರಾಜ್ಯದಲ್ಲಿದೆ.

ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಚಿತ್ರಕೃಪೆ:Arnab Dutta

ಹರ್ಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯಲ್ಲಿರುವ ಕುರುಕ್ಷೇತ್ರ ಪಟ್ಟಣವು ಸಾಕಷ್ಟು ಮಹತ್ವ ಪಡೆದ ಸ್ಥಳವಾಗಿದ್ದು ಇದಕ್ಕೆ ಕುರುಕ್ಷೇತ್ರ ಎಂಬ ಹೆಸರು ಕೌರವ-ಪಾಂಡವರ ಪೂರ್ವಿಕನಾದ ಕುರು ರಾಜನಿಂದ ಬಂದಿದೆ ಎನ್ನಲಾಗಿದೆ. ಬಹು ಹಿಂದೆ ಕುರು ಈ ಕ್ಷೇತ್ರಕ್ಕೆ ಹೇಗೆ ಬಂದ ಮತ್ತು ಇದನ್ನೆ ಏಕೆ ತನ್ನ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡ ಎಂಬುದರ ಕುರಿತು ವಾಮನ ಪುರಾಣದಲ್ಲಿ ಉಲ್ಲೇಖಗಳು ದೊರೆಯುತ್ತವೆ. ಆದಾಗ್ಯೂ ಮಹಾಭಾರತ ನಡೆದ ಸ್ಥಳವಾಗಿಯೂ ಕುರುಕ್ಷೇತ್ರ ಧಾರ್ಮಿಕ ಮಹತ್ವವನ್ನು ಪಡೆದಿದೆ.

ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಚಿತ್ರಕೃಪೆ: Shekhartagra

ಇಲ್ಲಿ ಕೆಲವು ಪ್ರಮುಖ ಧಾರ್ಮಿಕ ಆಕರ್ಷಣೆಗಳನ್ನು ಕಾಣಬಹುದು. ಬ್ರಹ್ಮ ಸರೋವರ ಕುರುಕ್ಷೇತ್ರದಲ್ಲಿರುವ ಒಂದು ಪವಿತ್ರ ಕೊಳವಾಗಿದೆ. ಪ್ರತಿ ಸೋಮವತಿ ಅಮವಾಸ್ಯೆಯಂದು ಹಾಗೂ ಸೂರ್ಯ ಗ್ರಹಣದ ಸಂದರ್ಭದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಈ ಕೊಳಕ್ಕೆ ಭೇಟಿ ನೀಡಿ ಸ್ನಾನ ಮಾಡುತ್ತಾರೆ. ಇದರಿಂದ ಎಲ್ಲ ಪಾಗಳು ನಶಿಸಿ ಮುಕ್ತಿ ದೊರೆಯುವುದೆಂಬ ನಂಬಿಕೆಯಿದೆ. ಇದೊಂದು ದೊಡ್ಡ ಕೃತಕ ಕೊಳವಾಗಿದ್ದು ಮಧ್ಯದಲ್ಲಿ ಪುರುಷೋತ್ತಮ ಉದ್ಯಾನವನ್ನು ಹೊಂದಿದೆ. ಅಲ್ಲಿ ರಥದಲ್ಲಿರುವ ಕೃಷ್ಣಾರ್ಜುನರ ಆಕರ್ಷಕ ಕಂಚಿನ ವಿಗ್ರಹವಿದೆ.

ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಬ್ರಹ್ಮ ಸರೋವರ, ಚಿತ್ರಕೃಪೆ: Ratnadeep Chaskar

ಸನ್ನಿಹಿತ ಸರೋವರ ಕುರುಕ್ಷೇತ್ರದ ಮತ್ತೊಂದು ಧಾರ್ಮಿಕ ಆಕರ್ಷಣೆಯಾಗಿದೆ. ಏಳು ಪವಿತ್ರ ಸರಸ್ವತಿಯರು ಸೇರುವ ಸ್ಥಳ ಇದಾಗಿದೆಯಂತೆ! ಇಲ್ಲಿನ ನೀರು ಸಾಕಷ್ಟು ಪವಿತ್ರವಾಗಿದ್ದು ಇಲ್ಲಿ ಸ್ನಾನ ಮಾಡಿದರೆ ಪಾಪಗಳು ನಶಿಸುವುದಲ್ಲದೆ ಅಶ್ವಮೇಧ ಯಾಗದಿಂದ ದೊರಕುವ ಪುಣ್ಯಕ್ಕೆ ಸಮನಾದ ಪುಣ್ಯ ದೊರಕುತ್ತದೆಂದು ನಂಬಲಾಗುತ್ತದೆ. ಹೀಗಾಗಿ ಗ್ರಹಣದ ಸಂದರ್ಭದಲ್ಲಿ ಈ ಕೊಳಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ.

ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಜ್ಯೋತಿಸಾರ, ಚಿತ್ರಕೃಪೆ: Ravinder M A

ಜ್ಯೋತಿಸಾರ ಕುರುಕ್ಷೇತ್ರದಲ್ಲಿ ಕುತೂಹಲ ಕೆರಳಿಸುವ ಮತ್ತೊಂದು ತಾಣ. ಸ್ಥಳ ಪುರಾಣದಂತೆ ಇಲ್ಲೊಂದು ಅತ್ಯಂತ ಪುರಾತನವಾದ ವಟ ವೃಕ್ಷವಿದೆ. ನಂಬಿಕೆಯಂತೆ ಇದು ನಶಿಸಲಾರದ ವೃಕ್ಷವಾಗಿದ್ದು ಕೃಷ್ಣನು ಇದೆ ಸ್ಥಳದಲ್ಲಿ ಅರ್ಜುನನಿಗೆ ಗೀತೆ ಬೋಧಿಸಿದನೆಂದೂ ಅದಕ್ಕೆ ಸಾಕ್ಷಿಯಾಗಿ ಈ ಮರವಿತ್ತೆಂದು ಹೇಳಲಾಗುತ್ತದೆ. ಭೀಷ್ಮಕುಂಡ ಕುರುಕ್ಷೇತ್ರದ ಮತ್ತೊಂದು ಆಕರ್ಷಣೆಯಾಗಿದ್ದು ಭೀಷ್ಮನು ಬಾಣಗಳ ಹಾಸಿಗೆಯ ಮೇಲಿದ್ದಾಗ ಅವನ ಬಾಯಾರಿಕೆಯನ್ನು ತಣಿಸಲೆಂದು ಅರ್ಜುನನು ಬಾಣಗಳನ್ನು ಬಿಟ್ಟು ನಿರ್ಮಿಸದ ಕೊಳ ಇದಾಗಿದೆಯಂತೆ.

ಕೃಷ್ಣನಿಂದ ಗೀತೆ ಬೋಧಿಸಲ್ಪಟ್ಟ ಪುಣ್ಯಕ್ಷೇತ್ರವಿದು!

ಭೀಷ್ಮಕುಂಡ, ಚಿತ್ರಕೃಪೆ: Giridharmamidi

ಧಾರ್ಮಿಕ ತಾಣಗಳನ್ನು ಹೊರತುಪಡಿಸಿ ಕುರುಕ್ಷೇತ್ರದಲ್ಲಿ ಕುರುಕ್ಷೇತ್ರ ವಿಜ್ಞಾನ ಕೇಂದ್ರ, ಜ್ಯೋತಿಸಾರ ಶಬ್ದ ಮತ್ತು ಪ್ರಕಾಶ ಪ್ರದರ್ಶನ ಕೇಂದ್ರ, ಧರೋಹರ್ ಸಂಗ್ರಹಾಲಯ ಮುಂತಾದ ಪ್ರವಾಸಿ ಆಕರ್ಷಣೆಗಳನ್ನೂ ಸಹ ಕಾಣಬಹುದಾಗಿದೆ. ಕುರುಕ್ಷೇತ್ರ ಹರ್ಯಾಣದ ಪ್ರಮುಖ ನಗರಗಳ ಪೈಕಿ ಒಂದಾಗಿದ್ದು ರಾಷ್ಟ್ರೀಯ ಹೆದ್ದಾರಿ ಒಂದರ ಮೂಲಕ ಸಂಪರ್ಕ ಹೊಂದಿದೆ. ರಾಜ್ಯದ ಸರ್ಕಾರಿ ಬಸ್ಸುಗಳು ಎಲ್ಲ ಪ್ರಮುಖ ನಗರಗಳಿಂದ ಕುರುಕ್ಷೇತ್ರಕ್ಕೆ ದೊರೆಯುತ್ತವೆ. ಅಲ್ಲದೆ ದೆಹಲಿ, ಚಂಡೀಗಡ್, ಅಮೃತಸರ್ ಮತ್ತು ಶಿಮ್ಲಾದಿಂದಲೂ ಸಹ ಕುರುಕ್ಷೇತ್ರಕ್ಕೆ ಬಸ್ಸುಗಳಿವೆ. ಕುರುಕ್ಷೇತ್ರದಲ್ಲಿ ತಂಗಲು ಸಾಕಷ್ಟು ಹೋಟೆಲುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X