ಹುಲಿಗೆಮ್ಮ ದೇವಿ ಎಂತಲೂ ಕರೆಯಲ್ಪಡುವ ಇವಳು ಗ್ರಾಮ ದೇವತೆ. ನೋಡಲು ಭಯಂಕರ ರೂಪವುಳ್ಳವಳು. ಇವಳಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರ. ಭಕ್ತಿಯಿಂದ ಬೇಡಿದರೆ, ಪೂಜಿಸಿದರೆ ಸಕಲ ಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ಅಚಲವಾದ ನಂಬಿಕೆಯಿದೆ ಈ ದೇವಿಯ ಮೇಲೆ. ಉಘೆ ಉಘೆ ಎಂದು ಭಕ್ತರು ದೇವಿಯ ಕುರಿತು ಪ್ರಾರ್ಥಿಸುವುದನ್ನು ಇಲ್ಲಿ ಸಾಮಾನ್ಯವಾಗಿ ಕಾಣಬಹುದು.

ಚಿತ್ರಕೃಪೆ: Satyanarayana Bhat
ಪ್ರಸ್ತುತ ಲೇಖನವು ಹುಲಗಿಯಮ್ಮನ ಶಕ್ತಿಶಾಲಿ ದೇವಾಲಯದ ಕುರಿತು ತಿಳಿಸುತ್ತದೆ. ಕೊಪ್ಪಳ ಜಿಲ್ಲೆಯ ಹುಲಗಿ ಎಂಬ ಗ್ರಾಮದಲ್ಲಿ ಈ ದೇವಿಯ ದೇವಾಲಯವಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣ ಹಂಪಿಯಿಂದ ಕೇವಲ 22 ಕಿ.ಮೀ ಗಳಷ್ಟು ದೂರವಿದೆ ಹುಲಗಿ ಗ್ರಾಮ. ಅಲ್ಲದೆ ಹಂಪಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹಲವರು ಈ ದೇವಿಯ ದರ್ಶನಕ್ಕಾಗಿ ಹುಲಗಿಗೂ ತೆರಳುತ್ತಾರೆ.
ಹಂಪಿಯಿಂದ ಹುಲಗಿಗೆ ತಲುಪಲು ಬಾಡಿಗೆ ರಿಕ್ಷಾಗಳು, ಜೀಪುಗಳು ದೊರೆಯುತ್ತವೆ. ಇನ್ನೂ ಈ ದೇವಿಯ ಕುರಿತು ಹೇಳಬೇಕೆಂದರೆ ಈಕೆಯನ್ನು ವ್ಯಾಘ್ರಪುರಾಧೀಶ್ವರಿ ಎಂದು ಕರೆಯುತ್ತಾರೆ. ಸ್ಥಳ ಪುರಾಣದಂತೆ, ಹಿಂದೆ ಈ ಸ್ಥಳದಲ್ಲಿ ವ್ಯಾಘ್ರ ಅಂದರೆ ಹುಲಿಗಳಿರುವ ದಟ್ಟವಾದ ಅರಣ್ಯವಿತ್ತಂತೆ. ಇಲ್ಲಿ ನಾಗ ಜೋಗಿ ಹಾಗೂ ಬಸವ ಜೋಗಿ ಎಂಬಿಬ್ಬರು ದೇವಿಯ ಪರಮಭಕ್ತರಿದ್ದರು. ಅವರು ದೇವಿಯ ದರ್ಶನಕ್ಕಾಗಿ ಪ್ರಾರ್ಥಿಸುತ್ತಿದ್ದರು.

ಚಿತ್ರಕೃಪೆ: Brunda Nagaraj
ಅವರ ಭಕ್ತಿಗೆ ಮೆಚ್ಚಿದ ದೇವಿಯು ವ್ಯಾಘ್ರ ರೂಪದ ಮುಖದಲ್ಲಿ ಅವರಿಗೆ ದರ್ಶನ ನೀಡಿದಳು. ಹೀಗಾಗಿ ಈ ಸ್ಥಳಕ್ಕೆ ವ್ಯಾಘ್ರಪುರವೆಂದೂ, ದೇವಿಗೆ ವ್ಯಾಘ್ರಪುರಾಧೀಶ್ವರಿ ಎಂಬ ಹೆಸರೂ ಬಂದಿತೆನ್ನಲಾಗಿದೆ. ದ್ವೈತ ಪಂಥದ ಶ್ರೀ ವ್ಯಾಸ ಮುನಿಗಳೂ ಸಹ ಈ ದೇವಿಯ ಭಕ್ತರಾಗಿದ್ದರೆಂದು ಇಲ್ಲಿನ ಪ್ರತೀತಿ ಹೇಳುತ್ತದೆ.
ಇನ್ನೊಂದು ವಿಷಯವೆಂದರೆ ದೇವಿಯ ವಿಗ್ರಹವು ಸ್ವಯಂಭೂ ಆಗಿದ್ದು ಕೇವಲ ತಲೆ ಭಾಗ ಮಾತ್ರ ಶಿಲೆಯಲ್ಲಿ ಒಡಮೂಡಿದೆ. ನರಸಿಂಹ ಸಾಲಿಗ್ರಾಮಗಳಿಂದ ಕಣ್ಣುಗಳು ರೂಪಗೊಂಡಿರುವುದನ್ನು ಕಾಣಬಹುದು. ಹೀಗಾಗಿ ಈ ವಿಗ್ರಹವು ಒಂದು ರೀತಿಯಲ್ಲಿ ವಿಚಿತ್ರವಾಗಿಯೂ ಅಷ್ಟೆ ಸುಂದರವಾಗಿಯೂ ಕಂಡುಬರುತ್ತದೆ ಎಂದು ಹೇಳಬಹುದು.

ಚಿತ್ರಕೃಪೆ: Brunda Nagaraj
ಈ ದೇವಿಯ ಮುಖದಲ್ಲಿ ಮತ್ತೊಂದು ವಿಶೇಷವಿದೆ. ಅದೆಂದರೆ ಮೀಸೆಗಳಿರುವುದು. ವ್ಯಾಘ್ರದ ರೂಪದಲ್ಲಿ ದೇವಿಯ ತನ್ನ ಮುಖದ ದರ್ಶನ ಕೊಟ್ಟ ಕಾರಣ ಮೀಸೆಗಳಿವೆ ಎನ್ನಲಾಗಿದ್ದು ದೇವಿಯು ಸದಾ ಇಳಕಲ್ ಸೀರೆಯಿಂದ ಅಲಂಕರಿಸಲ್ಪಟ್ಟಿರುತ್ತಾಳೆ. ಹೀಗಾಗಿ ಈ ದೇವಿಯು ಶಕ್ತಿಶಾಲಿಯಾಗಿದ್ದಾಳೆಂದು ಗ್ರಾಮಸ್ಥರು ನಂಬುತ್ತಾರೆ ಹಾಗೂ ದೇವಿಯ ಗೌರವ ಸೂಚಕವಾಗಿ ಪ್ರತಿ ವರ್ಷ ಇಲ್ಲಿ ರಥಯಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Brunda Nagaraj
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಒಳಪಟ್ಟ ಈ ದೇವಾಲಯದಲ್ಲಿ ದೇವಿಗೆ ಉತ್ಸವವು ವೈಶಾಖ ಶುದ್ಧ ಬಹುಳ ಮಾಸದಂದು ಎಂಟನೆಯ ದಿನದಿಂದ ಹಿಡಿದು ಹನ್ನೊಂದನೆಯ ದಿನದವರೆಗೆ ನಾಲ್ಕು ದಿನಗಳ ಕಾಲ ನಡೆಸಲಾಗುತ್ತದೆ ಹಾಗೂ ಸರ್ಕಾರದಿಂದ ನಿಯಮಿಸಲ್ಪಟ್ಟ ಅರ್ಚಕ ಉತ್ಸವದ ವಿಧಿ ವಿಧಾನಗಳನ್ನು ಪೂರೈಸುತ್ತಾನೆ. ಇಲ್ಲಿ ಯವುದೆ ಪ್ರಾಣಿ ವಧೆ/ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಬಂದರೂ ಮಂಗಳವಾರ ಹಾಗೂ ಶುಕ್ರವಾರಗಳಂದು ಭಕ್ತರಿಂದ ದೇವಾಲಯ ತುಂಬಿರುತ್ತದೆ. ಅಲ್ಲದೆ ಇಲ್ಲಿ ಪರಶುರಾಮ ಹಾಗೂ ಮಾತಂಗಿ ದೇವಾಲಯಗಳೂ ಇವೆ.

ಚಿತ್ರಕೃಪೆ: Brunda Nagaraj
ಹಂಪಿ/ಹೊಸಪೇಟೆಯಿಂದ ಇಲ್ಲಿಗೆ ತೆರಳಲು
* ಸ್ಥಳೀಯವಾಗಿ ಬಸ್ಸುಗಳು/ಬಾಡಿಗೆ ರಿಕ್ಷಾಗಳು ಲಭ್ಯವಿದೆ
* ತುರ್ತು ಪರಿಸ್ಥಿತಿಯಲ್ಲಿ ಹಣ ಬೇಕೆಂದಾಗ ಎಟಿಎಂ ಕೇಂದ್ರ ಲಭ್ಯವಿದೆ
* ಉಪಹಾರಗೃಹ, ಹೂಹಣ್ಣುಗಳ ಅಂಗಡಿಗಳು ಲಭ್ಯವಿದೆ
* ನಿಮ್ಮ ಸ್ವಂತ ವಾಹನವಿದ್ದಲ್ಲಿ ನಿಲುಗಡೆ ಸ್ಥಳವೂ ಲಭ್ಯ
ಹಂಪಿಗೆ ತೆರಳಲು ಲಭ್ಯವಿರುವ ರೈಲುಗಳ ವೇಳಾಪಟ್ಟಿ


Click it and Unblock the Notifications















