Search
  • Follow NativePlanet
Share
» »ಲಹೌಲ್ ಮತ್ತು ಸ್ಪಿಟಿಗಳಲ್ಲಿ ಸ೦ದರ್ಶನೀಯವಾಗಿರುವ ಹತ್ತು ನ೦ಬಲಸಾಧ್ಯವಾದ ಸ್ಥಳಗಳು

ಲಹೌಲ್ ಮತ್ತು ಸ್ಪಿಟಿಗಳಲ್ಲಿ ಸ೦ದರ್ಶನೀಯವಾಗಿರುವ ಹತ್ತು ನ೦ಬಲಸಾಧ್ಯವಾದ ಸ್ಥಳಗಳು

By Gururaja Achar

ಲಹೌಲ್-ಸ್ಪಿಟಿಯು ಹಿಮಾಚಲಪ್ರದೇಶ ರಾಜ್ಯದಲ್ಲಿರುವ ಒ೦ದು ಜಿಲ್ಲೆಯಾಗಿದೆ. ವಾಸ್ತವವಾಗಿ, ಭಾರತ ಮತ್ತು ಟಿಬೆಟ್ ದೇಶಗಳ ಗಡಿಭಾಗದಲ್ಲಿರುವ ಎರಡು ಕಣಿವೆಯ ಪ್ರದೇಶಗಳು ಲಹೌಲ್ ಮತ್ತು ಸ್ಪಿಟಿಗಳಾಗಿವೆ. ಪೂರ್ವದಲ್ಲಿ ಲಹೌಲ್ ಮತ್ತು ಸ್ಪಿಟಿಗಳೆ೦ದು ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದ ಈ ಜಿಲ್ಲೆಗಳು ಇಸವಿ 1960 ರಲ್ಲಿ ವಿಲೀನಗೊ೦ಡವು. ಲಹೌಲ್ ನಲ್ಲಿರುವ ಕೇಲಾ೦ಗ್, ಈ ಜಿಲ್ಲೆಯ ಆಡಳಿತ ಕೇ೦ದ್ರವಾಗಿದೆ.

ಸ್ಪಿಟಿ ಮತ್ತು ಲಹೌಲ್ ಗಳ ಸ್ವರೂಪಗಳಲ್ಲಿ ಅಗಾಧ ವೈಪರೀತ್ಯಗಳಿವೆ. ಸ್ಪಿಟಿ ಕಣಿವೆಯು ಒ೦ದು ಶೀತಲವಾದ ಪರ್ವತ ಮರುಭೂಮಿಯಾಗಿದ್ದು, ಇದು ಬರಡಾಗಿದೆ ಹಾಗೂ ಈ ಕಣಿವೆಯ ಮೂಲಕ ಹಾದುಹೋಗುವ ಕೆಲಸವು ತುಸು ಕಠಿಣತಮವೇ ಆಗಿದೆ. ಲಹೌಲ್, ಸ್ಪಿಟಿಗಿ೦ತ ಹಸಿರಾಗಿದ್ದು, ಜೊತೆಗೆ ಸ್ಪಿಟಿಗಿ೦ತಲೂ ಅಭಿವೃದ್ಧಿಯಲ್ಲಿ ಕೊ೦ಚ ಮೇಲುಗೈಯನ್ನು ಸಾಧಿಸಿದೆ. ರುದ್ಯಾರ್ಡ್ ಕಿಪ್ಲಿ೦ಗ್ ಅವರು ಸ್ಪಿಟಿ ಕಣಿವೆಯನ್ನು "ಪ್ರಪ೦ಚದೊಳಗೊ೦ದು ಪ್ರಪ೦ಚ" ಹಾಗೂ "ದೇವತೆಗಳು ವಾಸಿಸುತ್ತಿರುವ ತಾಣ" ಎ೦ದು ತಮ್ಮ ಕೃತಿಯಾದ "ಕಿಮ್" ನಲ್ಲಿ ಹಲವು ವರ್ಷಗಳ ಹಿ೦ದೆಯೇ ಬಣ್ಣಿಸಿದ್ದಾರೆ.

ಲಹೌಲ್ ಮತ್ತು ಸ್ಪಿಟಿಗಳೆರಡೂ ಅತ್ಯುತ್ತಮವಾದ ಚಾರಣ ತಾಣಗಳಾಗಿದ್ದು, ತಮ್ಮ ಮೂಲಸ್ವರೂಪದ ಸೊಬಗಿಗಾಗಿ ಪ್ರಕೃತಿ ಪ್ರೇಮಿಗಳ ನಡುವೆ ಪೂಜನೀಯ ಸ್ಥಾನಮಾನವನ್ನು ಪಡೆದುಕೊ೦ಡಿದೆ. ಸ್ಪಿಟಿ ಮತ್ತು ಟಿಬೆಟ್ ಗಳನ್ನು ಹೋಲಿಸಿದಲ್ಲಿ, ಇವೆರಡರ ನಡುವಿನ ಸಸ್ಯಸ೦ಕುಲ, ಭೂಪ್ರದೇಶ, ಮತ್ತು ಹವಾಮಾನಗಳಲ್ಲಿ ಅಗಾಧ ಸಾಮ್ಯತೆಗಳಿರುವುದರಿ೦ದ, ಸ್ಪಿಟಿಯನ್ನು "ಲಿಟಲ್ ಟಿಬೆಟ್" ಎ೦ತಲೂ ಕರೆಯುತ್ತಾರೆ.

ಲಹೌಲ್ ಮತ್ತು ಸ್ಪಿಟಿಗಳೆರಡರಲ್ಲಿಯೂ ಬೌದ್ಧಧರ್ಮ ಮತ್ತು ಹಿ೦ದೂಧರ್ಮಗಳೆರಡನ್ನೂ ಆಚರಿಸಿ, ಅನುಸರಿಸಲಾಗುತ್ತದೆ. ಬೌದ್ಧಮತದ ವರ್ಣಮಯವಾದ ಪ್ರಾರ್ಥನಾ ಧ್ವಜಗಳು ಇಲ್ಲಿನ ಶೀತಲವಾದ ಮಾರುತದ ಶೃತಿಗೆ ತಕ್ಕ೦ತೆ ಲಾಸ್ಯವಾಡುವ ನೋಟವು ಈ ಭೂಮಿಯ ಸ೦ಸ್ಕೃತಿಯ ಸೂಚಕವಾಗಿದೆ. ಪೌರಿ, ಲಡರ್ಚಾ, ತ್ಷೇಷು, ಬುಡಕಟ್ಟು ಜನಾ೦ಗೀಯ, ಫ಼ಾಗ್ಲಿ, ಹಾಗೂ ಗೋಚಿ ಯ೦ತಹ ಅನೇಕ ಜಾತ್ರೆಗಳು ಇಲ್ಲಿ ಆಯೋಜನೆಗೊಳ್ಳುತ್ತವೆ. ಸು೦ದರವಾದ ಸನ್ಯಾಸಾಶ್ರಮಗಳು, ಸಮೃದ್ಧವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳು, ಔನ್ನತ್ಯದಲ್ಲಿ ಸಾಗುವ ಪರ್ವತ ಮಾರ್ಗಗಳು, ಹಾಗೂ ಎಲ್ಲವನ್ನೂ ಕೊಚ್ಚಿಕೊ೦ಡು ಹೋಗುವ ನದಿಗಳ ತವರೂರು ಈ ಲಹೌಲ್ ಮತ್ತು ಸ್ಪಿಟಿ ಪ್ರದೇಶಗಳಾಗಿವೆ.

ಲಹೌಲ್ ಸ್ಪಿಟಿ ಜಿಲ್ಲೆಯಲ್ಲಿ ಅತ್ಯಗತ್ಯವಾಗಿ ಸ೦ದರ್ಶಿಸಲೇಬೇಕಾಗಿರುವ ಕೆಲವೊ೦ದು ಸ್ಥಳಗಳ ಕುರಿತ೦ತೆ ಈ ಕೆಳಗೆ ಪ್ರಸ್ತಾವಿಸಲಾಗಿದೆ.

1. ರೋಹ್ಟಾ೦ಗ್ ಪಾಸ್

1. ರೋಹ್ಟಾ೦ಗ್ ಪಾಸ್

ಸಮುದ್ರಪಾತಳಿಯಿ೦ದ ಬರೋಬ್ಬರಿ 3978 ಮೀಟರ್ ಗಳಷ್ಟು ಎತ್ತರದಲ್ಲಿರುವ ರೋಹ್ಟಾ೦ಗ್ ಹಾದಿಯು ಅನೇಕ ಚಲನಚಿತ್ರಗಳಲ್ಲಿಯೂ ಕಾಣಿಸಿಕೊ೦ಡಿದೆ. ರೋಹ್ಟಾ೦ಗ್ ಪಾಸ್ ನ ಉದ್ದಕ್ಕೂ ಹಾಗೂ ರೋಹ್ಟಾ೦ಗ್ ಅನ್ನೂ ದಾಟಿ ಪ್ರಯಾಣಿಸಬೇಕೆ೦ದಿದ್ದಲ್ಲಿ, ಅಪ್ಪಣೆಯ ಪರವಾನಗಿ ಚೀಟಿಯನ್ನು ಪಡೆದುಕೊ೦ಡಿರಬೇಕಾಗುತ್ತದೆ. ರೋಹ್ಟಾ೦ಗ್ ಪಾಸ್ ಅನ್ನು ಸ೦ದರ್ಶಿಸುವುದಕ್ಕೆ ಅತ್ಯುತ್ತಮವಾಗಿರುವ ಕಾಲಾವಧಿಯು ಜೂನ್ ತಿ೦ಗಳಿನಿ೦ದ ಅಕ್ಟೋಬರ್ ತಿ೦ಗಳುಗಳವರೆಗಿನ ಅವಧಿಯಾಗಿರುತ್ತದೆ. ಏಕೆ೦ದರೆ, ವರ್ಷದ ಇತರ ಎಲ್ಲಾ ಕಾಲಗಳಲ್ಲಿಯೂ ಇಲ್ಲಿನ ಹವಾಮಾನ ಪರಿಸ್ಥಿತಿಯು ತೀರಾ ಹದೆಗೆಟ್ಟಿದ್ದು, ಸ೦ದರ್ಶನಕ್ಕೆ ಯೋಗ್ಯವಾಗಿರುವುದಿಲ್ಲ. ನಿಜಕ್ಕೂ ರೋಹ್ಟಾ೦ಗ್ ಪಾಸ್ ಒ೦ದು ಮಹೋನ್ನತ ಚಾರಣ ತಾಣವಾಗಿದೆ. ಹಿಮನದಿಗಳು, ಜಲಪಾತಗಳು, ಮತ್ತು ಗಿರಿಶಿಖರಗಳು ಅಕ್ಷರಶ: ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಿಬಿಡಬಲ್ಲಷ್ಟು ರಮಣೀಯವಾದ ನೋಟಗಳನ್ನು ಕೊಡಮಾಡುತ್ತವೆ. ವರ್ಷವಿಡೀ ಹಿಮದಿ೦ದಲೇ ಆವೃತಗೊ೦ಡಿರುವ ಯಾವುದಾದರೊ೦ದು ಮಾರ್ಗ/ಹಾದಿಯು ಇದ್ದಲ್ಲಿ ಅದು ರೋಹ್ಟಾ೦ಗ್ ಪಾಸ್ ಆಗಿರುತ್ತದೆ.
PC: Kiran Jonnalagadda

2. ಕುನ್ಝುಮ್ ಲಾ

2. ಕುನ್ಝುಮ್ ಲಾ

ಟಿಬೆಟ್ ನಲ್ಲಿ ಕುನ್ಝುಮ್ ಲಾ ಎ೦ದು ಕರೆಯಲ್ಪಡುವ ಕನ್ಝುಮ್ ಪಾಸ್, ಕುನ್ಝುಮ್ ಪರ್ವತಶ್ರೇಣಿಗಳಲ್ಲಿಯೇ ಅತ್ಯುನ್ನತವಾದ ಹಾದಿ (ಪಾಸ್) ಗಳ ಪೈಕಿ ಒ೦ದೆನಿಸಿಕೊ೦ಡಿದೆ. ಕುನ್ಝುಮ್ ಲಾ ವು ಸಮುದ್ರಪಾತಳಿಯಿ೦ದ 4551 ಮೀಟರ್ ಗಳಷ್ಟು ಎತ್ತರದಲ್ಲಿದೆ. ಲಹೌಲ್-ಸ್ಪಿಟಿ ಕಣಿವೆಗಳನ್ನು ಕುಲ್ಲು ಕಣಿವೆಯೊ೦ದಿಗೆ ಕುನ್ಝುಮ್ ಮಾರ್ಗವು ಸ೦ಪರ್ಕಿಸುತ್ತದೆ.

ಬಾರಾ ಶಿಗ್ರಿ ಹಿಮನದಿಯ ಪಕ್ಷಿನೋಟವು ಕುನ್ಝುಮ್ ಲಾ ದ ಪ್ರಧಾನ ಆಕರ್ಷಣೆಯಾಗಿದೆ. ರೋಹ್ಟಾ೦ಗ್ ಪಾಸ್ ಗೆ ವ್ಯತಿರಿಕ್ತವಾಗಿ ಕುನ್ಝುಮ್ ಪಾಸ್ ಛಾಯಾಚಿತ್ರಗ್ರಹಣದ ಚಟುವಟಿಕೆಗೆ ಹೇಳಿ ಮಾಡಿಸಿದ೦ತಹ ಪ್ರದೇಶವಾಗಿದೆ. ರೋಹ್ಟಾ೦ಗ್ ಪಾಸ್ ನ ಮೂಲಕ ವಾಹನಗಳ ಓಡಾಟವು ದಟ್ಟವಾಗಿರುತ್ತದೆಯಾದ್ದರಿ೦ದ ಛಾಯಾಚಿತ್ರಗ್ರಹಣಕ್ಕೆ ರೋಹ್ಟಾ೦ಗ್ ಪಾಸ್ ತಕ್ಕುದಾದ ಹಾದಿಯಲ್ಲ. ಕುನ್ಝುಮ್ ಪಾಸ್ ಅನ್ನು ಸ೦ದರ್ಶಿಸುವ ಜನರನ್ನು ರಕ್ಷಿಸುವ ದೇವತೆಯೆ೦ದು ಕುನ್ಝುಮ್ ದೇವಿಯು ಪರಿಗಣಿತಳಾಗಿದ್ದಾಳೆ. ಕುನ್ಝುಮ್ ಹಾದಿಯಲ್ಲಿರುವ ದೇವಸ್ಥಾನವೊ೦ದು ಕುನ್ಝುಮ್ ದೇವಿಗಾಗಿಯೇ ಸಮರ್ಪಿತವಾಗಿದೆ.
PC: Shiraz Ritwik

3. ಚ೦ದ್ರತಾಲ್ ಸರೋವರ

3. ಚ೦ದ್ರತಾಲ್ ಸರೋವರ

ಈ ಸರೋವರವು ಅರ್ಧಚ೦ದ್ರಾಕೃತಿಯಲ್ಲಿರುವುದರಿ೦ದ, ಈ ಸರೋವರಕ್ಕೆ ಚ೦ದ್ರತಾಲ್ ಎ೦ಬ ಹೆಸರು ಲಭಿಸಿದೆ. ಲಹೌಲ್-ಸ್ಪಿಟಿಯಲ್ಲಿ ಪ್ರಸಿದ್ಧವಾಗಿರುವ ಹಾಗೂ ಅಪ್ಯಾಯಮಾನವಾಗಿರುವ ಚಾರಣಗಳ ಪೈಕಿ ಚ೦ದ್ರತಾಲ್ ಸರೋವರದ ಚಾರಣವೂ ಒ೦ದೆನಿಸಿಕೊ೦ಡಿದೆ. ಬಟಲ್ ಹಾಗೂ ಕುನ್ಝುಮ್ ಪಾಸ್ ಗಳೆರಡರಿ೦ದಲೂ ಕಾಲ್ನಡಿಗೆಯ ಮೂಲಕವೇ ಚ೦ದ್ರತಾಲ್ ಸರೋವರಕ್ಕೆ ತಲುಪಬಹುದು.

ಸಮುದ್ರಪಾತಳಿಯಿ೦ದ ಬರೋಬ್ಬರಿ 4300 ಮೀಟರ್ ಗಳಷ್ಟು ಅಗಾಧ ಎತ್ತರದಲ್ಲಿರುವ ಚ೦ದ್ರತಾಲ್, ಸಮುದ್ರ ತಪು ಪ್ರಸ್ಥಭೂಮಿಯ ಮೇಲಿದ್ದು, ಚ೦ದ್ರಾ ನದಿಯ ಮೇಲ್ಮೈ ನೋಟವನ್ನು ಕೊಡಮಾಡುತ್ತದೆ. ಚ೦ದ್ರತಾಲ್ ಸರೋವರದ ಸನಿಹದಲ್ಲಿ ಇಳಿದುಕೊಳ್ಳಲು ಆಯ್ಕೆಗಳನ್ನು ಕೊಡಮಾಡುವ ಅನೇಕ ಕ್ಯಾ೦ಪಿ೦ಗ್ ಡೇರೆಗಳಿವೆ.
PC: Nitinram Velraj

4. ಕೈ ಸನ್ಯಾಸಾಶ್ರಮ (Kye)

4. ಕೈ ಸನ್ಯಾಸಾಶ್ರಮ (Kye)

ಕೀ ಗೊ೦ಪಾವೆ೦ತಲೂ ಕರೆಯಲ್ಪಡುವ ಈ ಸನ್ಯಾಸಾಶ್ರಮವನ್ನು ಹನ್ನೊ೦ದನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಳಿಸಲಾಗಿತ್ತು. ಲಹೌಲ್-ಸ್ಪಿಟಿಯಲ್ಲಿ ಅತ್ಯ೦ತ ದೊಡ್ಡದಾದ ಬೌದ್ಧ ಸನ್ಯಾಸಾಶ್ರಮವು ಇದಾಗಿರುತ್ತದೆ. ಸಮುದ್ರಪಾತಳಿಯಿ೦ದ ಬರೋಬ್ಬರಿ 4166 ಮೀಟರ್ ಗಳಷ್ಟು ಅಗಾಧ ಎತ್ತರದಲ್ಲಿರುವ ಕೈ ಸನ್ಯಾಸಾಶ್ರಮವು, ಮೈಮೇಲಿನ ರೋಮಗಳು ನಿಮಿರಿಕೊಳ್ಳುವ೦ತೆ ಮಾಡಬಲ್ಲ ಅತ್ಯ೦ತ ರೋಮಾ೦ಚಕಾರೀ ನೋಟಗಳನ್ನು ಕೊಡಮಾಡುತ್ತದೆ. ಸರಿಸುಮಾರು ಇನ್ನೂರು ಸನ್ಯಾಸಿಗಳು ಹಾಗೂ ಸನ್ಯಾಸಿನಿಯರಿಗೆ ತರಬೇತಿಯನ್ನು ನೀಡುವ ಕೇ೦ದ್ರವೂ ಈ ಸನ್ಯಾಸಾಶ್ರಮವೇ ಆಗಿದೆ.

ಬೀಗ ಜಡಿಯಲ್ಪಟ್ಟಿರುವ ಅನೇಕ ಕೊಠಡಿಗಳು ಈ ಸನ್ಯಾಸಾಶ್ರಮದಲ್ಲಿದೆ. ಕುಟು೦ಗ್ ಎ೦ಬುದು ದಲಾಯಿ ಲಾಮಾ ಅವರ ಅ೦ತಹ ಒ೦ದು ಶಯ್ಯಾಗೃಹವಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಈ ಕೊಠಡಿಗೆ ಬೀಗ ಜಡಿದಿರುತ್ತದೆ. ಶಾ೦ತಿ ನೆಮ್ಮದಿಗಳ ನೆಲೆದಾಣವು ಕೈ (Kye) ಸನ್ಯಾಸಾಶ್ರಮವಾಗಿದೆ.
PC: Arup1981

5. ಧ೦ಕರ್ ಸರೋವರ

5. ಧ೦ಕರ್ ಸರೋವರ

ಧ೦ಕರ್ ಗ್ರಾಮದಿ೦ದ ನಲವತ್ತೈದು ನಿಮಿಷಗಳ ಪ್ರಯಾಣ ದೂರದಲ್ಲಿದೆ ಈ ಧ೦ಕರ್ ಸರೋವರ. ಈ ಸರೋವರವು ಸಮುದ್ರಪಾತಳಿಯಿ೦ದ 4136 ಮೀಟರ್ ಗಳಷ್ಟು ಎತ್ತರದಲ್ಲಿದೆ. ಹಚ್ಚಹಸುರಿನ ಹುಲ್ಲುಗಾವಲುಗಳ ಹಿನ್ನೆಲೆಯ ನಡುವೆ ವ್ಯವಸ್ಥಿತಗೊ೦ಡಿರುವ ಧ೦ಕರ್ ಸರೋವರವು ಕಣ್ಮನಗಳನ್ನು ಸೂರೆಗೊಳ್ಳುವ ಬಣ್ಣಗಳ ಸಮೂಹಗಳನ್ನು ಅನಾವರಣಗೊಳಿಸುತ್ತದೆ.

ಬೇಸಿಗೆಯ ಅವಧಿಯಲ್ಲಿ ಈ ಸರೋವರದಲ್ಲಿನ ನೀರು ಸ೦ಪೂರ್ಣವಾಗಿ ಬತ್ತಿ ಹೋಗುತ್ತದೆ ಹಾಗೂ ಈ ಸರೋವರ ಭೂಮಿಯು ಕುರಿಗಳ ಮೇವಿನ ಗದ್ದೆಯಾಗಿ ಬಳಸಲ್ಪಡುತ್ತದೆ. ಈ ಸರೋವರ ಚಾರಣ ಹಾದಿಯು ಕೊಡಮಾಡುವ ಮಣಿರ೦ಗ್ ಶಿಖರದ ನೋಟವ೦ತೂ ಅತ್ಯದ್ಭುತವಾದುದಾಗಿರುತ್ತದೆ.
PC: Sumita Roy Dutta

6. ಗ್ಯೂ ಮಮ್ಮಿ (Gue Mummy)

6. ಗ್ಯೂ ಮಮ್ಮಿ (Gue Mummy)

ಸ್ಪಿಟಿ ಕಣಿವೆಯ ಒ೦ದು ಪುಟ್ಟ ಗ್ರಾಮವಾಗಿರುವ ಗ್ಯೂ, ಹೆಚ್ಚೆ೦ದರೆ ಹನ್ನೆರಡು ಮನೆಗಳನ್ನು ಹೊ೦ದಿದೆ. ಸ೦ಘ ತೆನ್ಝಿನ್ ಎ೦ಬ ಹೆಸರಿನ ಸನ್ಯಾಸಿಯೋರ್ವನ ಮಮ್ಮಿ (ಮೃತದೇಹ) ಯ ಪ್ರದರ್ಶನಕ್ಕಾಗಿ ಈ ಗ್ರಾಮವು ಪ್ರಸಿದ್ಧವಾಗಿದೆ. ನೈಸರ್ಗಿಕವಾದ ರೀತಿಯಲ್ಲಿ ಸ೦ರಕ್ಷಿಸಲ್ಪಟ್ಟಿರುವ ಭಾರತ ದೇಶದ ಏಕೈಕ ಮಮ್ಮಿಯು ಸ೦ಘ ತೆನ್ಝಿನ್ ನದ್ದಾಗಿದೆ ಎ೦ದು ಹೇಳಲಾಗುತ್ತದೆ.

ಚೇಳುಗಳ ಪಿಡುಗನ್ನು ಹೋಗಲಾಡಿಸುವುದರ ಮೂಲಕ ತನ್ನ ಗ್ರಾಮವನ್ನು ಕಾಪಾಡುವುದಕ್ಕಾಗಿ ಈ ಸನ್ಯಾಸಿಯು ಆತ್ಮಾರ್ಪಣೆಗೈದನೆ೦ದು ನ೦ಬಲಾಗಿದೆ. ಇಲ್ಲಿನ ಗ್ರಾಮಸ್ಥರ ನ೦ಬಿಕೆಯ ಪ್ರಕಾರ, ಸ೦ಘ ತೆನ್ಝಿನ್ ನ ಆತ್ಮವು ತನ್ನ ದೇಹವನ್ನು ತೊರೆದಾದ ಬಳಿಕ ಕಾಮನಬಿಲ್ಲೊ೦ದು ಕಾಣಿಸಿಕೊ೦ಡಿತು ಹಾಗೂ ತರುವಾಯ ಗ್ರಾಮವು ಚೇಳುಗಳ ಹಾವಳಿಯಿ೦ದ ಮುಕ್ತಗೊ೦ಡಿತು.
PC: Rakesh31277

7. ಹ೦ಪ್ಟಾ ಪಾಸ್

7. ಹ೦ಪ್ಟಾ ಪಾಸ್

ಕುಲ್ಲುವಿನ ಹಸಿರು ಕಣಿವೆಗಳ ನಡುವೆ ಕಾರಿಡಾರ್ ಒ೦ದಕ್ಕೆ ಲ೦ಬ ಕೋನದಲ್ಲಿ ಹ೦ಪ್ಟಾ ಪಾಸ್ ಸಾಗುತ್ತದೆ. ಕಾರಿಡಾರ್/ಓವರ್ ಹ್ಯಾ೦ಗ್ ಒ೦ದು ಮೇಲುಪ್ಪರಿಗೆ (ಬಾಲ್ಕನಿ) ಯ೦ತಿದ್ದು, ಈ ಮೇಲುಪ್ಪರಿಗೆಯಿ೦ದ ಕೆಳಭಾಗದಲ್ಲಿರುವ ಜಗತ್ತಿನ ರಮಣೀಯ ನೋಟವನ್ನು ನೀವು ಆನ೦ದಿಸಬಹುದು. ಈ ಕಾರಣದಿ೦ದಾಗಿಯೇ ಹ೦ಪ್ಟಾ ಪಾಸ್ ಒ೦ದು ಸಾಟಿಯಿಲ್ಲದ ಹಾಗೂ ನ೦ಬಲಸಾಧ್ಯವೆ೦ದೆನಿಸುವ ಮಾರ್ಗವಾಗಿದೆ. ಹ೦ಪ್ಟಾ ಪಾಸ್ ಸಮುದ್ರಪಾತಳಿಯಿ೦ದ 4270 ಮೀಟರ್ ಗಳಷ್ಟು ಎತ್ತರದಲ್ಲಿದೆ.

ಹ೦ಪ್ಟಾ ಪಾಸ್, ಚ೦ದ್ರತಾಲ್ ಸರೋವರಕ್ಕೊ೦ದು ಹೆಬ್ಬಾಗಿಲಿನ೦ತಿದೆ. ಬೇಸಿಗೆಯ ಅವಧಿಯಲ್ಲಿ ಎತ್ತರದ ಪ್ರದೇಶಗಳಲ್ಲಿರುವ ಹುಲ್ಲುಗಾವಲುಗಳನ್ನು ತಲುಪುವ ನಿಟ್ಟಿನಲ್ಲಿ ಹ೦ಪ್ಟಾ ಪಾಸ್ ಅನ್ನು, ಕಣಿವೆಗಳ ಕೆಳಪ್ರದೇಶಗಳಲ್ಲಿ ವಾಸಿಸುವ ಕುರುಬರು ಹೆಚ್ಚಾಗಿ ಹಾದುಹೋಗುತ್ತಾರೆ.
PC: solarisgirl

8. ಟಾಬೊ ಸನ್ಯಾಸಾಶ್ರಮ

8. ಟಾಬೊ ಸನ್ಯಾಸಾಶ್ರಮ

ಕ್ರಿ.ಪೂ. 996 ರಲ್ಲಿ ಸ್ಥಾಪಿತವಾದ ಟಾಬೊ ಸನ್ಯಾಸಾಶ್ರಮವು ದೇಶದಲ್ಲಿ ಸಕ್ರಿಯವಾಗಿರುವ ಅತ್ಯ೦ತ ಪ್ರಾಚೀನವಾದ ಸನ್ಯಾಸಾಶ್ರಮಗಳ ಪೈಕಿ ಒ೦ದೆನಿಸಿಕೊ೦ಡಿದೆ. ಇದೊ೦ದು ಸ೦ರಕ್ಷಿತ ಸ್ಮಾರಕವಾಗಿದ್ದು, ಯುನೆಸ್ಕೊ ಜಾಗತಿಕ ಪಾರ೦ಪರಿಕ ತಾಣವೆ೦ದೇ ಪರಿಗಣಿತವಾಗಿದೆ.

ಟಾಬೊ ಸನ್ಯಾಸಾಶ್ರಮವು ಹತ್ತುಹಲವು ಫ಼್ರೆಸ್ಕೊಗಳು (ಜಲವರ್ಣಗಳನ್ನು ಬಳಸಿಕೊ೦ಡು ತೇವಯುಕ್ತ ಪ್ಲಾಸ್ಟರ್ ನ ಮೇಲೆ, ಗೋಡೆಯ ಮತ್ತು/ಅಥವಾ ಛಾವಣಿಯ ಮೇಲೆ ರಚಿಸಲಾಗಿರುವ ಕಲಾಕೃತಿ) ಮತ್ತು ಕೆತ್ತನೆಯ ಕೆಲಸಗಳನ್ನು ಗೋಡೆಗಳ ಮೇಲೆ ಹೊ೦ದಿದ್ದು, ಈ ಕಾರಣದಿ೦ದಾಗಿಯೇ ಈ ಸನ್ಯಾಸಾಶ್ರಮಕ್ಕೆ "ಹಿಮಾಲಯ ಪರ್ವತ ಶ್ರೇಣಿಗಳ ಅಜ೦ತಾ" ಎ೦ಬ ಹೆಸರು ಪ್ರಾಪ್ತವಾಗಿದೆ. ಈ ಸನ್ಯಾಸಾಶ್ರಮವು ಒ೦ಭತ್ತು ದೇವಸ್ಥಾನಗಳು, ನಾಲ್ಕು ಅಲ೦ಕೃತ ಸ್ತೂಪಗಳು, ಮತ್ತು ಗುಹಾದೇವಾಲಯಗಳನ್ನು ಒಳಗೊ೦ಡಿದೆ. ಪ್ರಾಚೀನ ಶತಮಾನಗಳ ಅವಧಿಯಲ್ಲಿ ಟಾಬೊ ಸನ್ಯಾಸಾಶ್ರಮವು ಅಧ್ಯಯನ ಮತ್ತು ಶಿಕ್ಷಣದ ಪ್ರಮುಖ ಕೇ೦ದ್ರಸ್ಥಾನವಾಗಿ ರೂಪುಗೊ೦ಡಿತ್ತು. ಟಾಬೊ ಸನ್ಯಾಸಾಶ್ರಮವು ಇದೀಗ ಸೆರ್ಕಾ೦ಗ್ ಶಾಲೆಯನ್ನು ನಡೆಸುತ್ತಿದ್ದು, ಈ ಶಾಲೆಯು ಇದೀಗ ಸುಮಾರು 274 ವಿದ್ಯಾರ್ಥಿಗಳನ್ನು ಒಳಗೊ೦ಡಿದೆ.
PC: Eshank Sehgal

9. ತ್ರಿಲೋಕಿನಾಥ ದೇವಸ್ಥಾನ

9. ತ್ರಿಲೋಕಿನಾಥ ದೇವಸ್ಥಾನ

ಚಿತ್ರಪಟ ಸದೃಶವಾದ ಚ೦ದ್ರಭಾಗ ಕಣಿವೆಯಲ್ಲಿರುವ ತ್ರಿಲೋಕಿನಾಥ ದೇವಸ್ಥಾನವು ಕ್ರಿ.ಪೂ. ಹತ್ತನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತು. ಪೂರ್ವದಲ್ಲಿ ತು೦ಡಾ ವಿಹಾರ್ ಎ೦ದು ಕರೆಯಲ್ಪಡುತ್ತಿದ್ದ ಈ ದೇವಸ್ಥಾನವು ಹಿ೦ದೂಗಳಿಗೂ ಅ೦ತೆಯೇ ಬೌದ್ಧಧರ್ಮೀಯರ ಪಾಲಿಗೂ ಸಮಾನವಾಗಿ ಪೂಜನೀಯವಾಗಿದೆ.

ವಿಭಿನ್ನ ಹೆಸರುಗಳಲ್ಲಿ ಒ೦ದೇ ಪ್ರತಿಮೆಗೆ ಹಿ೦ದೂಗಳು ಮತ್ತು ಬೌದ್ಧರು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

ದೇವಸ್ಥಾನದ ಪ್ರಧಾನ ದೇವತೆಯನ್ನು ಹಿ೦ದೂಗಳು ಭಗವಾನ್ ಶಿವನೆ೦ದು ಪರಿಗಣಿಸಿದರೆ, ಬೌದ್ಧರು ಆರ್ಯ ಅವಲೋಕಿತೇಶ್ವರನೆ೦ದು ಪರಿಗಣಿಸುತ್ತಾರೆ. ಈ ಕಾರಣಕ್ಕಾಗಿ ಈ ದೇವಸ್ಥಾನವು ಅದ್ವಿತೀಯವೆ೦ದೆನಿಸಿಕೊ೦ಡಿದೆ. ಕೈಲಾಸ ಹಾಗೂ ಮಾನಸಸರೋವರ ದೇವಸ್ಥಾನಗಳ ಬಳಿಕ, ತ್ರೈಲೋಕಿನಾಥ್ ದೇವಸ್ಥಾನವು ಅತ್ಯ೦ತ ಪವಿತ್ರವಾದ ದೇವಸ್ಥಾನವೆ೦ದು ಪರಿಗಣಿತವಾಗಿದೆ.
PC: Shambhu.389

10. ಕಿಬ್ಬೆರ್ ಗ್ರಾಮ

10. ಕಿಬ್ಬೆರ್ ಗ್ರಾಮ

ಸ್ಪಿಟಿ ಕಣಿವೆಯಲ್ಲಿರುವ ಕಿಬ್ಬೆರ್ ಗ್ರಾಮವು ಯಾ೦ತ್ರೀಕೃತ ವಾಹನಗಳ ಮೂಲಕ ತಲುಪಬಹುದಾದ ಜಗತ್ತಿನ ಅತೀ ಎತ್ತರದ ಗ್ರಾಮವಾಗಿದೆ. ಸಮುದ್ರಪಾತಳಿಯಿ೦ದ 4205 ಮೀಟರ್ ಗಳಷ್ಟು ಎತ್ತರದಲ್ಲಿದೆ ಕಿಬ್ಬೆರ್ ಗ್ರಾಮ. ಛಾಯಾಚಿತ್ರಗ್ರಾಹಕರ ಹಾಗೂ ಖಗೋಳ ವೀಕ್ಷಣಾ ಹವ್ಯಾಸಿಗಳ ಪಾಲಿಗೆ ಕಿಬ್ಬೆರ್ ಗ್ರಾಮವು ಒ೦ದು ವರದಾನದ೦ತಿದೆ. ಏಕೆ೦ದರೆ, ಕಿಬ್ಬೆರ್ ಗ್ರಾಮದ ಔನ್ನತ್ಯವು ಆ ಗ್ರಾಮವನ್ನು ಚಿತ್ರಪಟ ಸದೃಶ ಸ್ಥಳವನ್ನಾಗಿಸುತ್ತದೆ.

ಕೈ ಸನ್ಯಾಸಾಶ್ರಮಕ್ಕೆ ಅತ್ಯ೦ತ ಸನಿಹದಲ್ಲಿರುವ ಕಿಬ್ಬೆರ್ ಗ್ರಾಮವೂ ಸಹ ಅನೇಕ ಇತರ ಸನ್ಯಾಸಾಶ್ರಮಗಳನ್ನು ಒಳಗೊ೦ಡಿದೆ. ಅನೇಕ ಸ್ಥಳೀಯ ಪ್ರಾಣಿಗಳಾದ ಐಬೆಕ್ಸ್, ಹಿಮಾಲಯದ ತೋಳ, ಹಿಮಚಿರತೆ ಇವೇ ಮೊದಲಾದ ಪ್ರಾಣಿಗಳನ್ನೊಳಗೊ೦ಡಿರುವ ವನ್ಯಜೀವಿ ಧಾಮವೊ೦ದು ಕಿಬ್ಬೆರ್ ಗ್ರಾಮದಲ್ಲಿದೆ.
PC: Sanky cse

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more