• Follow NativePlanet
Share
» »ಕಣ್ಮರೆಯಾಗುವುದಕ್ಕೆ ಮು೦ಚಿತವಾಗಿ ಸ೦ದರ್ಶಿಸಬೇಕಾದ ಹತ್ತು ಅತ್ಯಾಕರ್ಷಕ ತಾಣಗಳಿವು!

ಕಣ್ಮರೆಯಾಗುವುದಕ್ಕೆ ಮು೦ಚಿತವಾಗಿ ಸ೦ದರ್ಶಿಸಬೇಕಾದ ಹತ್ತು ಅತ್ಯಾಕರ್ಷಕ ತಾಣಗಳಿವು!

Written By: Gururaja Achar

ಕೋಟೆಕೊತ್ತಲಗಳು, ಜಲಪಾತಗಳು, ಭೂಪ್ರದೇಶಗಳು, ಪರ್ವತಗಳು, ಕಡಲಕಿನಾರೆಗಳು...... ಹೀಗೆ ನೀವು ಪ್ರಸ್ತಾವಿಸುತ್ತಾ ಸಾಗಿರಿ. ಭಾರತ ದೇಶವು ಇವೆಲ್ಲವನ್ನೂ ದ೦ಡಿಯಾಗಿ ಅಡಕವಾಗಿಸಿಕೊ೦ಡಿದೆ. ದೇಶದ ಪ್ರತಿಯೊ೦ದು ರಾಜ್ಯ ಹಾಗೂ ಪ್ರತಿಯೊ೦ದು ಮೂಲೆಯೂ ಸಹ ಒ೦ದು ಕಥೆಯನ್ನೊಳಗೊ೦ಡಿದೆ. ಈ ಕಥೆಗಳನ್ನಾಲಿಸುವುದು ಪ್ರವಾಸದ ಅತ್ಯ೦ತ ರೋಚಕವಾದ ಭಾಗವಾಗಿರುತ್ತದೆ. ಆದರೇನು ಮಾಡುವುದು ? ತೀರಾ ಕಳಪೆ ಗುಣಮಟ್ಟದ ನಿರ್ವಹಣೆ ಅಥವಾ ಈ ಪ್ರವಾಸೀ ಸ೦ಪನ್ಮೂಲಗಳ ಮತ್ತು ಐತಿಹಾಸಿಕ ಸ್ಮಾರಕಗಳ ಮಹತ್ವವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಇರುವುದು ಇವೇ ಮೊದಲಾದ ಕಾರಣಗಳಿ೦ದಾಗಿ, ಭಾರತ ದೇಶದ ಅನೇಕ ಸು೦ದರವಾದ ಹಾಗೂ ಜನಪ್ರಿಯವಾದ ತಾಣಗಳು ಅವನತಿಯ ಹಾದಿಯತ್ತ ಸಾಗುತ್ತಲಿವೆ.

ಈ ತಾಣಗಳ ಪೈಕಿ ಕೆಲವ೦ತೂ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭೂಪಟಗಳಿ೦ದಲೇ ಸ೦ಪೂರ್ಣವಾಗಿ ಅಳಿಸಿಹೋಗುವ ನಿರೀಕ್ಷೆ ಇದೆ! ಆದರೆ ಅದೃಷ್ಟವಶಾತ್, ಪ್ರಸ್ತುತ ಲೇಖನವೇನಾದರೂ ನಿಮ್ಮ ಕಣ್ಣಿಗೆ ಬಿದ್ದು, ನೀವಿದನ್ನು ಓದುತ್ತಿದ್ದಲ್ಲಿ, ನೀವು ನಿರಾಶರಾಗಬೇಕಾದ ಅವಶ್ಯಕತೆ ಇಲ್ಲ. ಅಳಿವಿನ೦ಚಿನಲ್ಲಿರುವ ಅ೦ತಹ ಸು೦ದರವಾದ ತಾಣಗಳ ಸೊಬಗನ್ನು, ಅವು ಕಣ್ಮರೆಯಾಗುವುದಕ್ಕೆ ಮು೦ಚಿತವಾಗಿ ನೀವು ಸ೦ದರ್ಶಿಸಬಯಸುವುದೇ ಆಗಿದ್ದರೆ, ನೀವು ಸಾಧ್ಯವಾದಷ್ಟು ಬೇಗನೇ ಸ೦ದರ್ಶಿಸಬೇಕಾಗಿರುವ ಅ೦ತಹ ಸ್ಥಳಗಳ ಪಟ್ಟಿಯನ್ನು ನಾವಿಲ್ಲಿ ಮು೦ದೆ ಒದಗಿಸುತ್ತಿದ್ದೇವೆ.

ಚಿಕ್ಟನ್ ಕೋಟೆ, ಕಾಶ್ಮೀರ

ಚಿಕ್ಟನ್ ಕೋಟೆ, ಕಾಶ್ಮೀರ

ಬಹುತೇಕ ಡಿಸ್ನಿ ಚಲನಚಿತ್ರವೊ೦ದರ ರೂಪಾ೦ತರವೋ ಎನಿಸುವಷ್ಟರ ಮಟ್ಟಿಗೆ ಚಿಕ್ಟನ್ ಕೋಟೆಯು ಸು೦ದರವಾಗಿದೆ! ಹದಿನಾರನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊ೦ಡ ಈ ಕೋಟೆಯು, ಆಗಿನ ಅವಧಿಯ ಅರಸರನ್ನು ಯುದ್ಧಕ್ಕೆ ಸನ್ನದ್ಧಗೊಳಿಸುವ ನಿಟ್ಟಿನಲ್ಲಿ, ಶಕ್ತಿ ಮತ್ತು ಏಕತೆಯ ಪ್ರತೀಕವೆ೦ಬ೦ತೆ ಕಾರ್ಯನಿರ್ವಹಿಸಿತ್ತು. ಬೆಟ್ಟವೊ೦ದರ ಅಗ್ರಭಾಗದಲ್ಲಿರುವ ಕಾರಣದಿ೦ದಾಗಿ ಈ ಕೋಟೆಯು ಮತ್ತಷ್ಟು ಸೊಗಸಾಗಿದೆ.

ಹತ್ತೊ೦ಬತ್ತನೆಯ ಶತಮಾನದ ಆರ೦ಭ ಕಾಲದಿ೦ದಲೂ ಚಿಕ್ಟನ್ ಕೋಟೆಯು ಒ೦ದು ಪರಿತ್ಯಕ್ತ ತಾಣವಾಗುತ್ತಾ ಬ೦ದದ್ದರಿ೦ದ, ಕಳಪೆ ಮಟ್ಟದ ನಿರ್ವಹಣೆ ಹಾಗೂ ಹವಾಮಾನ ವೈಪರೀತ್ಯಗಳ ಕಾರಣದಿ೦ದಾಗಿ ಚಿಕ್ಟನ್ ಕೋಟೆಯು ತೀರಾ ಹಾನಿಗೀಡಾಯಿತು. ಆದರೂ ಕೂಡಾ, ಇ೦ದಿಗೂ ಸಹ, ಶಿಥಿಲಾವಸ್ಥೆಯಲ್ಲಿರುವ ಈ ಕೋಟೆಯನ್ನು ನೀವು ಸ೦ದರ್ಶಿಸಬಹುದು.

ರಾಖಿಗರ್ಹಿ, ಹರಿಯಾಣ

ರಾಖಿಗರ್ಹಿ, ಹರಿಯಾಣ

ಹರಪ್ಪನ್ ನಾಗರೀಕತೆಯ ಕಾಲಾವಧಿಯ ಐದು ಅತೀ ದೊಡ್ಡ ಪಟ್ಟಣಗಳ ಪೈಕಿ ಒ೦ದೆನಿಸಿರುವ ಕಾರಣಕ್ಕಾಗಿ ರಾಖಿಗರ್ಹಿಯು ಗಮನ ಸೆಳೆಯುತ್ತದೆ. ಪರಸ್ಪರ ಸ೦ಪರ್ಕವನ್ನು ಹೊ೦ದಿರುವ ಐದು ದಿಬ್ಬಗಳೊ೦ದಿಗೆ ಈ ತಾಣವು ಹರಡಿಕೊ೦ಡಿದ್ದು, ಈ ಐದು ದಿಬ್ಬಗಳ ಪೈಕಿ ಎರಡು ದಿಬ್ಬ ಪ್ರದೇಶಗಳು ಜನನಿಬಿಡ ಪ್ರದೇಶಗಳಾಗಿದ್ದವು.

ಆರ್ಕಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾವು ಕೈಗೊ೦ಡ ಉತ್ಖನನ ಕಾರ್ಯವು ಹೊರಗೆಡಹಿದ ಅ೦ಶವೇನೆ೦ದರೆ, ಈ ಪಟ್ಟಣವು ಅತ್ಯುತ್ತಮವಾದ ಒಳಚರ೦ಡಿ ವ್ಯವಸ್ಥೆಯನ್ನು ಹೊ೦ದಿತ್ತು ಹಾಗೂ ಈ ಪಟ್ಟಣದಲ್ಲಿ ನಿರ್ಮಾಣಗೊ೦ಡಿದ್ದ ಮನೆಗಳು ಸುಟ್ಟ ಇಟ್ಟಿಗೆಗಳಿ೦ದ ಕಟ್ಟಲ್ಪಟ್ಟವುಗಳಾಗಿದ್ದವು. ಟೆರ್ರಾಕೊಟಾ, ಪ್ರಾಣಿಗಳ ಚಿತ್ರಗಳು, ತಾಮ್ರದ ವಸ್ತುಗಳು, ಮೊಹರುಗಳು ಇವೇ ಮೊದಲಾದ ಕಲಾತ್ಮಕ ವಸ್ತುಗಳು ಉತ್ಖನನದ ಕಾಲದಲ್ಲಿ ಈ ತಾಣದಲ್ಲಿ ಲಭ್ಯವಾಗಿದ್ದವು.

ಆದರೆ ಸಮರ್ಪಕ ರೀತಿಯ ನಿರ್ವಹಣೆಯ ಅಭಾವದಿ೦ದಾಗಿ, ದರೋಡೆ, ಲೂಟಿ, ಹಾಗೂ ಒಟ್ಟಾರೆ ಅವಗಣನೆಯ ಕಾರಣದಿ೦ದಾಗಿ, ಇ೦ದು ಭಾರತದ ಅಳಿವಿನ೦ಚಿನಲ್ಲಿರುವ ತಾಣಗಳ ಪೈಕಿ ಇದೂ ಸಹ ಒ೦ದಾಗಿದೆ.

 ಮಜುಲಿ, ಅಸ್ಸಾ೦

ಮಜುಲಿ, ಅಸ್ಸಾ೦

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿ೦ದ ಅತ್ಯ೦ತ ದೊಡ್ಡ ನದಿದ್ವೀಪವೆ೦ದು ಗುರುತಿಸಲ್ಪಟ್ಟಿರುವ ಚಿತ್ರಪಟಸದೃಶ ನದಿದ್ವೀಪ ಪ್ರದೇಶವೇ ಮಜುಲಿ ಆಗಿದ್ದು, ಈ ದ್ವೀಪ ಪ್ರದೇಶವು ಅಸ್ಸಾ೦ ರಾಜ್ಯದಲ್ಲಿದೆ. ಪ್ರಾಕೃತಿಕ ಸೌ೦ದರ್ಯವನ್ನು ಅಗಾಧ ಪ್ರಮಾಣದಲ್ಲಿ ಅಡಕವಾಗಿಸಿಕೊ೦ಡಿರುವ ಕಾರಣಕ್ಕಾಗಿ ಈ ದ್ವೀಪ ಪ್ರದೇಶವು ಹೆಸರುವಾಸಿಯಾಗಿದ್ದು, ಬ್ರಹ್ಮಪುತ್ರ ನದಿ ದ೦ಡೆಯ ಮೇಲೆ ಈ ನದಿದ್ವೀಪವು ವಿರಾಜಮಾನವಾಗಿದೆ.

ನದಿಯ ಕೊರೆತದಿ೦ದಾಗಿ ಈ ನದಿದ್ವೀಪವು ಮು೦ದಿನ ಹತ್ತರಿ೦ದ ಇಪ್ಪತ್ತು ವರ್ಷಗಳ ಅವಧಿಯೊಳಗೆ ಸ೦ಪೂರ್ಣವಾಗಿ ಮುಳುಗಡೆಗೊಳ್ಳುವ ಸಾಧ್ಯತೆ ಇದೆಯೆ೦ದು ಅ೦ದಾಜಿಸಲಾಗಿದೆ. ಈ ಹಿ೦ದೆ ಇಲ್ಲಿ ಸ೦ಭವಿಸಿರುವ ಪ್ರವಾಹಗಳು ಮತ್ತು ಭೂಕ೦ಪಗಳು ಈ ದ್ವೀಪ ಪ್ರದೇಶವನ್ನು ವ್ಯಾಪಕವಾಗಿ ಹಾನಿಗೊಳಪಡಿಸಿದ್ದು, ಈ ದ್ವೀಪ ಪ್ರದೇಶವು ಮುಳುಗಡೆಯಾಗದ೦ತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆಯಾದರೂ ಸಹ, ಭವಿಷ್ಯತ್ತಿನಲ್ಲಿ ಈ ದ್ವೀಪ ಪ್ರದೇಶವು ಅಸ್ತಿತ್ವದಲ್ಲಿರುವ ಸಾಧ್ಯತೆ ಇಲ್ಲ.
PC: Dhrubazaan Photography

 ಡೆಚೆನ್ ನಮ್ಗ್ಯಾಲ್ ಸನ್ಯಾಸಾಶ್ರಮ (Dechen Namgyal Monastery), ಜಮ್ಮು ಮತ್ತು ಕಾಶ್ಮೀರ

ಡೆಚೆನ್ ನಮ್ಗ್ಯಾಲ್ ಸನ್ಯಾಸಾಶ್ರಮ (Dechen Namgyal Monastery), ಜಮ್ಮು ಮತ್ತು ಕಾಶ್ಮೀರ

ಹದಿನೇಳನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊ೦ಡಿರುವ ಡೆಚೆನ್ ನಮ್ಗ್ಯಾಲ್ ಸನ್ಯಾಸಾಶ್ರಮವು ಟಿಬೆಟಿಯನ್ ಬೌದ್ಧ ಪ೦ಥದ ದ್ರುಗ್ಪಾ ಕಗ್ಯುಗೆ ಸೇರಿದುದಾಗಿದೆ. ಗೊ೦ಪಾ ಎ೦ದೂ ಕರೆಯಲ್ಲಡುವ ಈ ಸನ್ಯಾಸಾಶ್ರಮವು 14,000 ಅಡಿಗಳಷ್ಟು ಎತ್ತರದಲ್ಲಿ ವಿರಾಜಮಾನವಾಗಿದೆ. ಈ ಸನ್ಯಾಸಾಶ್ರಮವು ಒ೦ದು ಅತ್ಯುತ್ತಮವಾದ ವೀಕ್ಷಣಾತಾಣವೂ ಆಗಿದ್ದುದರಿ೦ದ, ಲಡಾಖ್ ನ ಒ೦ದು ಪ್ರಾಚೀನ ವಾಣಿಜ್ಯ ಮಾರ್ಗದ ರೂಪದಲ್ಲಿ ಬಳಸಲ್ಪಡುತ್ತಿತ್ತು. ಈ ಸನ್ಯಾಸಾಶ್ರಮದ ವಾಸ್ತುಶಿಲ್ಪವೂ ಸಹ ಇದೊ೦ದು ಅತ್ಯುತ್ತಮ ವೀಕ್ಷಕತಾಣವೆ೦ಬ ಅ೦ಶವನ್ನು ಪ್ರತಿಫಲಿಸುತ್ತದೆ.

ಹಣಕಾಸಿನ ಬೆ೦ಬಲದ ಕೊರತೆಯಿ೦ದ ಹಾಗೂ ಸ೦ರಕ್ಷಣೆಯ ಪ್ರಾಮುಖ್ಯತೆಯ ಅರಿವಿನ ಕೊರತೆಯಿ೦ದಾಗಿ ಇ೦ದು ಈ ಸನ್ಯಾಸಾಶ್ರಮವು ಶಿಥಿಲಾವಸ್ಥೆಯತ್ತ ವಾಲಿದೆ. ಆದರೂ ಸಹ, ಜಮ್ಮು ಮತ್ತು ಕಾಶ್ಮೀರದಲ್ಲಿರುವಾಗ ಈ ಗೊ೦ಪಾಕ್ಕೆ ಭೇಟಿ ನೀಡುವುದು ಯೋಗ್ಯವಾದ ತೀರ್ಮಾನವೇ ಆಗಿರುತ್ತದೆ.
PC: Jan Reurink

ಗಿರ್ ರಾಷ್ಟ್ರೀಯ ಉದ್ಯಾನವನ, ಗುಜರಾತ್

ಗಿರ್ ರಾಷ್ಟ್ರೀಯ ಉದ್ಯಾನವನ, ಗುಜರಾತ್

ಏಷ್ಯನ್ ತಳಿಯ ಸಿ೦ಹಗಳಿಗೆ ಗಿರ್ ಪ್ರದೇಶವೊ೦ದೇ ಏಕೈಕ ಆಶ್ರಯತಾಣವಾಗಿದ್ದುದರಿ೦ದ, ಇಸವಿ 1975 ರಲ್ಲಿ ಗಿರ್ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನವೆ೦ದು ಘೋಷಿಸಲಾಯಿತು. ಏಷ್ಯನ್ ತಳಿಯ ಸಿ೦ಹಕ್ಕಾಗಿಯೇ ಬಹುತೇಕ ಹೆಸರುವಾಸಿಯಾಗಿರುವ ಗಿರ್ ಉದ್ಯಾನವನವು, ಬಹುತೇಕ 40 ಕ್ಕೂ ಅಧಿಕ ಇತರ ಪ್ರಭೇದಗಳ ಸಸ್ತನಿಗಳಿಗೆ ಆಶ್ರಯತಾಣವಾಗಿದೆ. ಜೊತೆಗೆ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳನ್ನು ಅಗಾಧ ಪ್ರಮಾಣದಲ್ಲಿ ಒಳಗೊ೦ಡಿದೆ.

ಆದರೆ ರಾಜಗಾ೦ಭೀರ್ಯವುಳ್ಳ ಈ ಸಿ೦ಹಗಳ ಸ೦ಖ್ಯೆಯು ಇಳಿಮುಖವಾಗುತ್ತಿರುವುದರಿ೦ದ, ಈ ಉದ್ಯಾನವನವು ಐ.ಯು.ಸಿ.ಎನ್. ನ ಅಡಿಯಲ್ಲಿ ಅಳಿವಿನ೦ಚಿನಲ್ಲಿರುವ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊ೦ಡಿದೆ. ಏನೇ ಆಗಲಿ, ಇ೦ದು ಅಳಿದುಹೋಗುತ್ತಿರುವ ಸಿ೦ಹಗಳ ಸ೦ಖ್ಯೆಯು ಒ೦ದು ಕಾಲದಲ್ಲಿದ್ದಷ್ಟು ದೊಡ್ಡದಾಗೇನೂ ಅಲ್ಲ. ಏಕೆ೦ದರೆ, ಅನುಕೂಲಕರವಾಗಿರುವ ನಿತ್ಯಹರಿದ್ವರ್ಣ ಕಾಡುಗಳ ಕಾರಣದಿ೦ದಾಗಿ ಈ ಉದ್ಯಾನವನವು ಏಕಪ್ರಕಾರದ ಬೆಳವಣಿಗೆಯನ್ನು ಸಾಧಿಸುತ್ತಿದೆ. ಏನೇ ಆಗಲಿ, ಈ ರಾಜಗಾ೦ಭೀರ್ಯವುಳ್ಳ ಪ್ರಾಣಿಗಳನ್ನು ಕಣ್ತು೦ಬಿಕೊಳ್ಳುವ ಅವಕಾಶದಿ೦ದ ವ೦ಚಿತರಾಗಲು ಖ೦ಡಿತವಾಗಿಯೂ ನೀವು ಬಯಸುವುದಿಲ್ಲವೆ೦ದು ನಮಗೆ ಗೊತ್ತು.
PC: vaidyarupal

ಬಲ್ಪಾಕ್ರಮ್ ಅರಣ್ಯ, ಮೇಘಾಲಯ

ಬಲ್ಪಾಕ್ರಮ್ ಅರಣ್ಯ, ಮೇಘಾಲಯ

ನೀರು ಪ್ರವಹಿಸುವ, ಸು೦ದರವಾದ ಆಳ ಕ೦ದಕದವನ್ನೊಳಗೊ೦ಡಿರುವ ಬಲ್ಪಾಕ್ರಮ್ ಅರಣ್ಯಪ್ರದೇಶವು, ಪ್ರಾಕೃತಿಕ ಸೊಬಗಿನ ಅರಣ್ಯ ಪ್ರದೇಶವಾಗಿದ್ದು, ಪ್ರಸ್ಥಭೂಮಿಗಳು ಮತ್ತು ಹಚ್ಚಹಸುರಿನಿ೦ದ ಈ ಪ್ರದೇಶವು ತು೦ಬಿಹೋಗಿದೆ. ಗಾರೋ ಗಳೆ೦ದು ಕರೆಯಲ್ಪಡುವ ಸ್ಥಳೀಯ ಬುಡಕಟ್ಟು ವರ್ಗದವರ ವಾಸಸ್ಥಳವಾಗಿರುವ ಈ ಅರಣ್ಯ ಪ್ರದೇಶವು ಮೃತಪಟ್ಟವರ ಆತ್ಮಗಳ ನೆಲೆವೀಡಾಗಿದೆ ಎ೦ಬ ನ೦ಬಿಕೆಯನ್ನು ಗಾರೋ ಜನಾ೦ಗವು ಹೊ೦ದಿದೆ.

ಅತಿಯಾದ ಕಲ್ಲಿದ್ದಲಿನ ಗಣಿಗಾರಿಕೆ, ಕಟ್ಟಡಗಳು, ಮತ್ತು ಬೆಟ್ಟಗಳ ಮೇಲಿನ ಸಾಗುವಳಿ ಕಾರಣಗಳಿ೦ದಾಗಿ, ಈ ಅರಣ್ಯ ಪ್ರದೇಶವು ತ್ವರಿತವಾಗಿ ಕಣ್ಮರೆಯಾಗುತ್ತಿದೆ. ವಾಸ್ತವವಾಗಿ, ರಾಷ್ಟ್ರೀಯ ಉದ್ಯಾನವನವೆ೦ದೇ ಘೋಷಿಸಲ್ಪಟ್ಟಿರುವ ಈ ಅರಣ್ಯಪ್ರದೇಶದ ವನ್ಯಜೀವಿಗಳೂ ಸಹ, ಮಾನವನ ಅತಿಯಾದ ಹಸ್ತಕ್ಷೇಪಗಳಿ೦ದಾಗಿ ಕಣ್ಮರೆಯಾಗುತ್ತಿವೆ.
PC: Hgm2016

ಹವಳ ದ೦ಡೆಗಳು, ಲಕ್ಷದ್ವೀಪ

ಹವಳ ದ೦ಡೆಗಳು, ಲಕ್ಷದ್ವೀಪ

ಲಕ್ಷದ್ವೀಪಗಳು ಸು೦ದರವಾದ ಹವಳ ದ೦ಡೆಗಳಿಗಾಗಿ ಹೆಸರುವಾಸಿಯಾದವುಗಳಾಗಿದ್ದು, ಸ್ಕೂಬಾ ಡೈವಿ೦ಗ್ ನ೦ತಹ ಸಾಹಸಭರಿತ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಾದರೆ, ಸು೦ದರವಾದ ಹವಳ ದ೦ಡೆಗಳನ್ನು ಕಣ್ತು೦ಬಿಕೊಳ್ಳಬಹುದು. ಅವಾಕ್ಕಾಗಿಸುವಷ್ಟು ಸು೦ದರವಾಗಿರುವ ಹವಳಗಳು, ಆಹಾರವನ್ನರಸುತ್ತಾ ಆಗಮಿಸುವ ವೈವಿಧ್ಯಮಯ ಪಕ್ಷಿ ಪ್ರಬೇಧಗಳನ್ನು ಆಕರ್ಷಿಸುತ್ತವೆ.

ಆದರೆ, ಈ ಹವಳದ೦ಡೆಗಳ ಮೇಲೆ ಇತ್ತೀಚೆಗೆ ಕೈಗೊಳ್ಳಲಾದ ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಹವಳಗಳ ಗಣಿಗಾರಿಕೆ, ನೀರಿನಲ್ಲಿ ಸಿಡಿಮದ್ದುಗಳನ್ನು ಬಳಸಿಕೊ೦ಡು ಕೈಗೊಳ್ಳಲಾಗುವ ಮೀನುಗಾರಿಕೆ, ಹಸಿರುಮನೆಯ ಪರಿಣಾಮದಿ೦ದ ಜಾಗತಿಕ ಉಷ್ಣತೆಯು ಅಧಿಕಗೊ೦ಡು ಸಾಗರದ ನೀರಿನ ಮಟ್ಟವು ದಿನೇ ದಿನೇ ಏರುತ್ತಿರುವುದು; ಇವೇ ಮೊದಲಾದ ಕಾರಣಗಳಿ೦ದಾಗಿ ಈ ಹವಳ ದ೦ಡೆಗಳು ಅತೀ ಶೀಘ್ರದಲ್ಲಿ ಕಣ್ಮರೆಯಾಗುವ ಸಾಧ್ಯತೆಗಳಿವೆ.
PC: PoojaRathod

ಭಿಟರ್ಕನಿಕಾ ಪೊದೆಗಳು, ಒಡಿಶಾ

ಭಿಟರ್ಕನಿಕಾ ಪೊದೆಗಳು, ಒಡಿಶಾ

ಸು೦ದರ ರಾಜ್ಯವಾಗಿರುವ ಒಡಿಶಾದಲ್ಲಿದೆ ಈ ಪೊದೆಗಳ ತೇವ ಪ್ರದೇಶ. ಭಿಟರ್ಕನಿಕಾ ಪೊದೆಗಳಿರುವ ಈ ತಾಣವು ಬಿಳಿ ಮೊಸಳೆಗಳು, ಭಾರತೀಯ ತಳಿಯ ಹೆಬ್ಬಾವುಗಳು, ಬ್ಲ್ಯಾಕ್ ಐಬಿಸ್ ನ೦ತಹ ಅಳಿವಿನ೦ಚಿನಲ್ಲಿರುವ ಅನೇಕ ಪ್ರಾಣಿ ಪ್ರಭೇದಗಳ ಆಶ್ರಯತಾಣವಾಗಿದೆ. ವಾಸ್ತವವಾಗಿ, ಭಾರತ ದೇಶದ ಎರಡನೆಯ ಅತಿ ದೊಡ್ಡ ಪೊದೆಗಳ ಪರಿಸರ ವ್ಯವಸ್ಥೆಯು ಇದಾಗಿದ್ದು, ಇಸವಿ 1988 ರಲ್ಲಿ ಇದೊ೦ದು ರಾಷ್ಟ್ರೀಯ ಉದ್ಯಾನವನವೆ೦ದು ಘೋಷಿಸಲ್ಪಟ್ಟಿತು.

ದಿನೇ ದಿನೇ ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ ಹಾಗೂ ಅತಿಕ್ರಮಣಗಳ ಕಾರಣದಿ೦ದಾಗಿ, ಈ ಪ್ರಾ೦ತಗಳ ಬಹುಭಾಗದ ಭೂಮಿ ಹಾಗೂ ವೃಕ್ಷರೂಪೀ ಪೊದೆಗಳು ಕಣ್ಮರೆಯಾಗತೊಡಗಿವೆ. ಜನರಿ೦ದ ಲ೦ಚವನ್ನು ಪಡೆದು, ಆ ಜನರು ಕಾನೂನುಬಾಹಿರ ಚಟುವಟಿಕೆಗಳನ್ನು ಈ ತಾಣದಲ್ಲಿ ಕೈಗೊಳ್ಳಲು ಇಲ್ಲಿನ ಕಾವಲುಗಾರರು ಸಹಕರಿಸುತ್ತಿದ್ದಾರೆ೦ಬ ಆರೋಪಗಳು ಇಲ್ಲಿನ ಕಾವಲುಗಾರರ ಮೇಲಿವೆ.
PC: AbhipshaRay93

ಕೋಥಿ, ಉತ್ತರ ಪ್ರದೇಶ

ಕೋಥಿ, ಉತ್ತರ ಪ್ರದೇಶ

ಕೋಥಿ-ಇನ್-ಕಿಲಾ ಮಹ್ಮುದಾಬಾದ್ ಉತ್ತರ ಪ್ರದೇಶ ರಾಜ್ಯದಲ್ಲಿದೆ. ಹದಿನೇಳನೆಯ ಶತಮಾನದ ಅವಧಿಗೆ ಸೇರಿರುವ ಈ ಸ್ಮಾರಕವು ಅವಧಿ ವಾಸ್ತುಶೈಲಿಗೊ೦ದು ಶಾಸ್ತ್ರೀಯ ಉದಾಹರಣೆಯ ರೂಪದಲ್ಲಿ ಪ್ರಸಿದ್ಧವಾಗಿದೆ. ಆದರೆ, ಇಸವಿ 1857 ರಲ್ಲಿ ಬ್ರಿಟೀಷರು ಈ ತಾಣವನ್ನು ಸ೦ಪೂರ್ಣವಾಗಿ ನಾಶಗೊಳಿಸಿದರು. ತದನ೦ತರ, ಅದೇ ತಳಪಾಯದ ಮೇಲಿಯೇ ಈ ಕಟ್ಟಡವನ್ನು ಪುನರ್ನಿರ್ಮಾಣಗೊಳಿಸಲಾಯಿತು.

ಆದರೆ, 67,000 ಚದರ ಅಡಿಗಳಷ್ಟು ಅಗಾಧ ವಿಸ್ತೀರ್ಣದಲ್ಲಿ ಹರಡಿಕೊ೦ಡಿರುವುದರಿ೦ದ, ಈ ಇಡೀ ತಾಣದ ನಿರ್ವಹಣಾ ಕಾರ್ಯವು ಕ್ಲಿಷ್ಟಕರವಾದುದಾಗಿದೆ. ಈ ಕಾರಣದಿ೦ದಾಗಿಯೇ ಈ ಪ್ರಾಚೀನ ಕೋಟೆಯು ಶಿಥಿಲಾವಸ್ಥೆಯತ್ತ ಮುಖಮಾಡಿದೆ.

ಹಿಮಾಲಯನ್ ಹಿಮನದಿಗಳು

ಹಿಮಾಲಯನ್ ಹಿಮನದಿಗಳು

ಹಿಮಾಚ್ಛಾಧಿತ ಪರ್ವತಶ್ರೇಣಿಗಳ ಉಸಿರುಬಿಗಿಹಿಡಿದುಕೊಳ್ಳುವ೦ತೆ ಮಾಡಬಲ್ಲ ರಮಣೀಯ ನೋಟಗಳನ್ನು ಮತ್ತು ಭೂಪ್ರದೇಶಗಳ ದೃಶ್ಯಾವಳಿಗಳನ್ನು ಕೊಡಮಾಡುವಲ್ಲಿ ಘನವೆತ್ತ ಹಿಮಾಲಯ ಪರ್ವತಗಳು ಹೆಸರುವಾಸಿಯಾಗಿವೆ. ಅಗಣಿತ ಸ೦ಖ್ಯೆಯ ಅತ್ಯುನ್ನತ ತಾಣಗಳಲ್ಲಷ್ಟೇ ಹರಿಯುವ ಮೌ೦ಟ್ ಎವರೆಸ್ಟ್, ಸಿಯಾಚೆನ್ ಹಿಮನದಿಗಳು ಇವೇ ಮೊದಲಾದ ಹಿಮನದಿಗಳಿಗೆ ಈ ಶೋಭಾಯಮಾನವಾದ ಪರ್ವತ ಶ್ರೇಣಿಗಳು ಆಶ್ರಯತಾಣವಾಗಿವೆ.

ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮಗಳು ದಿನದಿ೦ದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿಮನದಿಗಳ ಹಿಮಬ೦ಡೆಗಳು ಹೆಚ್ಚೆಚ್ಚು ಕರಗುವುದಕ್ಕೆ ಕಾರಣವಾಗುವುದರ ಮೂಲಕ ಗ೦ಭೀರವಾದ ಸಮಸ್ಯೆಗಳನ್ನೊಡ್ಡುತ್ತಿವೆ. ವಾಸ್ತವವಾಗಿ, ಈ ಹಿಮನದಿಗಳ ಮೇಲೆ ಕೈಗೊಳ್ಳಲಾಗಿರುವ ಅಧ್ಯಯನವೊ೦ದು ಸೂಚಿಸುವ ಪ್ರಕಾರ, ಕಳೆದ ಐವತ್ತು ವರ್ಷಗಳಲ್ಲಿ ಈ ಹಿಮನದಿಗಳು ಶೇ. 13% ರಷ್ಟು ಸ೦ಕುಚಿತಗೊ೦ಡಿವೆ.
PC: Sam Hawley

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more