ಗಿರ್ ರಾಷ್ಟ್ರೀಯ ಉದ್ಯಾನ, ಎಂದ ತಕ್ಷಣ ಮನಸ್ಸು ಶಾಲಾದಿನಗಳಿಗೆ ಹೋಗುತ್ತದೆ ಅಲ್ಲವೇ ? ಭಾರತದಲ್ಲೇ ಏಷಿಯನ್ ಸಿಂಹಗಳು ಕಂಡುಬರುವ ಅರಣ್ಯ- ಗಿರ್ ಅರಣ್ಯ ಎಂದು ಕಂಠಪಾಠ ಮಾಡುತ್ತಿದ್ದೆವು. ಆದರೆ ನಿಜ ಸಂಗತಿ ಏನೆಂದರೆ, ಈ ಗಿರ್ ಅರಣ್ಯವು ಒಂದು ರಕ್ಷಿತ ಅರಣ್ಯಪ್ರದೇಶ. ತನ್ನಲ್ಲಿರುವ ಅಪರೂಪದ ಪ್ರಾಣಿಸಂಕುಲಗಳಿಂದಾಗಿ ಏಷ್ಯಾದಲ್ಲೇ ಪ್ರಮುಖ ರಕ್ಷಿತ ಅರಣ್ಯಗಳ ಸಾಲಿಗೆ ಸೇರುತ್ತದೆ. ಇದು ವನ್ಯಜೀವಿಗಳ ಅಭಯಾರಣ್ಯವೂ ಹೌದು.
ಏಷಿಯಾ-ಸಿಂಹಗಳು, ಕಾಡು ಬೆಕ್ಕುಗಳು, ಸ್ಲಾಥ್ ಕರಡಿಗಳು, ಮೈ ಮೇಲೆ ಪಟ್ಟಿಗಳುಳ್ಳ ಕತ್ತೆಕಿರುಬಗಳು, ರಾಟಲ್ಸ್, ನಾಗರಹಾವು, ಸ್ವರ್ಣ ವರ್ಣದ ನರಿಗಳು, ಭಾರತೀಯ ಪಾಂ ಸಿವೆತ್, ಭಾರತೀಯ ಮುಂಗುಸಿಗಳು ಹಾಗು ಬೆಕ್ಕಿನ ಜಾತಿಯ ಪ್ರಾಣಿಗಳಾದ ಮರಳುಗಾಡಿನ ಬೆಕ್ಕು, ತುಕ್ಕಿನಂತಹ ಚಿಕ್ಕೆಗಳುಳ್ಳ ಬೆಕ್ಕುಗಳು ಈ ಅಭಯಾರಣ್ಯದಲ್ಲಿ ಕಂಡುಬರುತ್ತವೆ. ಇವಲ್ಲದೆ ಅಳಿವಿನ ಅಂಚಿನಲ್ಲಿರುವ ಸರಿಸೃಪಗಳಾದ ಮೊನಿಟರ್ ಹಲ್ಲಿಗಳು, ಮಾರ್ಶ್ ಮೊಸಳೆಗಳು ಹಾಗು ಭಾರತದ ವಿಶಿಷ್ಟ ನಕ್ಷತ್ರ ಆಮೆಗಳೂ ಸಹ ಇಲ್ಲಿ ರಕ್ಷಣೆ ಪಡೆದಿವೆ. ಏಷಿಯನ್ ಸಿಂಹಗಳ ಸಂತಾನೋತ್ಪತ್ತಿ ಮತ್ತು ಅವುಗಳ ಪೋಷಣೆಗಾಗಿ ವಿಶೇಷವಾದ ಗಮನ ನೀಡಲಾಗುತ್ತದೆ. ಹಾಗು ಅವುಗಳ ಪುನರ್ವಸತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತದೆ.
ನೀವು ಗಿರ್ನಾರ ಬೆಟ್ಟಗಳ ವೀಕ್ಷಣೆಗೆ ಹೋದಾಗ ಈ ಗಿರ್ ರಾಷ್ಟ್ರೀಯ ಉದ್ಯಾನವನ್ನೂ ನೋಡಿಬರಬಹುದು. ಏಕೆಂದರೆ ಇದು ಗಿರ್ನಾರ್ ಅರಣ್ಯದ ಸಮೀಪದಲ್ಲೇ ಇದೆ. ಇಲ್ಲಿನ ಪರಿಸರ ಸ್ವಲ್ಪ ವಿಭಿನ್ನವಾಗಿದೆ. ಎಂದೂ ಬತ್ತದ ನದಿಗಳಾದ ಹಿರನ್, ಶೆತ್ರುನ್ಜಿ, ದತರ್ದಿ, ಶಿಂಗೊಡಾ, ಮಚ್ಚುಂದ್ರಿ,ಗೋದಾವರಿ ಮತ್ತು ರಾವಲ್ ಗಳು ಇಲ್ಲಿನ ಪರಿಸರವನ್ನು ಸಮೃದ್ಧಗೊಳಿಸಿವೆ.
ಭೇಟಿಗೆ ಉತ್ತಮ ಸಮಯ
ಗಿರ್ ನಲ್ಲಿ ಚಳಿಗಾಲವು ನವೆಂಬರ್ನಿಂದ ಫೆಬ್ರವರಿ ವರೆಗೆ. ಈ ಕಾಲದಲ್ಲಿ ತಾಪಮಾನ 15 ಡಿ.ಸೆ ಮತ್ತು 7 ಡಿ.ಸೆ ಗಳ ವ್ಯಾಪ್ತಿಯಲ್ಲಿರುತ್ತದೆ. ಇದನ್ನು ಗಿರ್ ರಾಷ್ಟ್ರೀಯ ಉದ್ಯಾನವನದ ಭೇಟಿಗೆ ಉತ್ತಮ ಸಮಯ ಎಂದು ಪರಿಗಣಿಸಲಾಗುತ್ತದೆ.