ಇದನ್ನು ಗಿರ್ ಉದ್ಯಾನವನದ ಮುಂದುವರಿದ ಭಾಗ ಎಂದು ಹೇಳಬಹುದು. ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಸಿಂಹಗಳು ಮತ್ತು ಚಿರತೆಗಳು ಹಾಗೇ ಸುತ್ತಾಡಿಕೊಂಡು ಬರಲು ಇಲ್ಲಿಗೆ ಬರುತ್ತವೆ. ಪನಿಯ ಅಭಯಾರಣ್ಯಕ್ಕೆ ಬೇಟಿ ನೀಡುವ ಪ್ರಾಣಿಪ್ರಿಯರಿಗೆ ನಿರ್ಭಯವಾಗಿ ಸುತ್ತಾಡುವ ಈ ಮೃಗಗಳನ್ನು ನೋಡಿ ಒಂದು ರೀತಿಯ ಸಮಾಧಾನವಾಗುವದಂತೂ ಖಚಿತ. 1989 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಅಭಯಾರಣ್ಯವನ್ನು ಛಂಛೈ-ಪನಿಯ ಎಂದೂ ಕರೆಯುವರು.ಇಲ್ಲಿಯೂ ಸಹ ಅಳಿವಿನ ಅಂಚಿನಲ್ಲಿರುವ ಅನೇಕ ಪ್ರಾಣಿ ಪ್ರಬೇಧಗಳನ್ನು ರಕ್ಷಿಸಲಾಗುತ್ತಿದೆ. ಪನಿಯದ ಬೇಟಿಯಲ್ಲಿ ನೀವು ಎಲ್ಲ ಪ್ರಾಣಿಗಳೂ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ಅಮೋಘ ದೃಶ್ಯವನ್ನು ಕಾಣಬಹುದು.