ಕೊಲ್ಲೂರು – ದೇವಿ ಮೂಕಾಂಬಿಕೆಯ ದಿವ್ಯ ಹಸ್ತದಡಿಯಲ್ಲಿ.

ದೇಶದ ಎಲ್ಲೆಡೆಯಿಂದ ಯಾತ್ರಾರ್ಥಿಗಳನ್ನು ತನ್ನತ್ತ ವಿಶೇಷವಾಗಿ ಆಕರ್ಷಿಸುತ್ತಿರುವ ಕೊಲ್ಲೂರು ಕರ್ನಾಟಕದಲ್ಲಿನ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವಾಗಿದೆ.

 

ಕೊಲ್ಲೂರು ನಿರಂತರವಾಗಿ ಹರಿಯುತ್ತಿರುವ ಸೌಪರ್ಣಿಕ ನದಿಯ ದಂಡೆಯಲ್ಲಿ ಪಶ್ಚಿಮ ಘಟ್ಟಗಳ ನಯನ ಮನೋಹರವಾದ ಪ್ರಾಕೃತಿಕ ಹಿನ್ನೆಲೆಯ ನಡುವೆ ನೆಲೆಸಿದೆ. ಈ ಪ್ರಾಕೃತಿಕ ಐಸಿರಿಯು ಇಲ್ಲಿನ ಪ್ರಸಿದ್ಧ ಕ್ಷೇತ್ರದ ಸುತ್ತಲ ಪರಿಸರದ ಸೊಬಗನ್ನು ಹೆಚ್ಚಿಸಿದೆ. ಈ ಕ್ಷೇತ್ರ ಪರಶುರಾಮನಿಂದ ನಿರ್ಮಿತವಾದುದೆಂದು ನಂಬಲಾದ ಮೂಕಾಂಬಿಕ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ.

ಕೊಲ್ಲೂರಿನ ಇತಿಹಾಸದ ಕುರಿತಾಗಿ ಕೆಲವು ಅಂಶಗಳು.

ಮೂಕಾಂಬಿಕಾ ದೇವಾಲಯವು ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅತಿ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಪಾರ್ವತಿ ದೇವಿಯು ಮೂಕಾಸುರನೆಂಬ ರಾಕ್ಷಸನನ್ನು ಕೊಂದ ಕಾರಣವಾಗಿ ಮೂಕಾಂಬಿಕಾ ಎಂದು ಹೆಸರು ಪಡೆದಳು. ದೇವಾಲಯದ ಗರ್ಭಗುಡಿಯು ಮೂಲತಃ ಒಂದು ಜ್ಯೋತಿರ್ಲಿಂಗವನ್ನು ಮಾತ್ರ ಹೊಂದಿತ್ತು. ಈ ಜ್ಯೋತಿರ್ಲಿಂಗವು ಸ್ವರ್ಣ ರೇಖೆ ಎಂದರೆ ಬಂಗಾರದ ರೇಖೆಯನ್ನು ಹೊಂದಿದ್ದು, ಲಿಂಗವನ್ನು ಸಮವಿಲ್ಲದ ಎರಡು ಭಾಗವಾಗುವಂತೆ ಬೇರ್ಪಡಿಸುತ್ತದೆ. ಇದರಲ್ಲಿನ ಸಣ್ಣ ಭಾಗವು ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸಿದರೆ, ಇನ್ನೊಂದು ಭಾಗವು ಸೃಷ್ಟಿಯ ಮೂರು ಸ್ತ್ರೀಶಕ್ತಿಗಳಾದ ಸರಸ್ವತಿ, ಪಾರ್ವತಿ ಮತ್ತು ಲಕ್ಷ್ಮಿಯರನ್ನು ಪ್ರತಿನಿಧಿಸುತ್ತದೆ.

ಈ ಜ್ಯೋತಿರ್ಲಿಂಗದ ಹಿಂಭಾಗದಲ್ಲಿ ಶ್ರೀ ಆದಿ ಶಂಕರರಿಂದ ಸ್ಥಾಪಿತವಾದ ಮೂಕಾಂಬಿಕಾ ದೇವಿಯ ಲೋಹದ ಮೂರ್ತಿಯಿದೆ. ಇಲ್ಲಿನ ದಂತಕಥೆಯ ಪ್ರಕಾರ ಶ್ರೀ ಆದಿ ಶಂಕರರು ದೇವಿಯನ್ನು ನಿತ್ಯ ಪೂಜಿಸುವ ಸಲುವಾಗಿ ಆಕೆಯನ್ನು ತನ್ನೊಂದಿಗೆ ಕೇರಳಕ್ಕೆ ಕರೆದೊಯ್ಯಲು ವಿನಂತಿಸಿದಾಗ ದೇವಿ ಶಂಕರರ ಮುಂದೆ ಪ್ರತ್ಯಕ್ಷಳಾದಳಂತೆ. ಆಗ ದೇವಿಯು ಶಂಕರರ ಜೊತೆ ಕೇರಳಕ್ಕೆ ಹೋಗಲು ಸಮ್ಮತಿಸಿ ಒಂದು ನಿಬಂಧನೆಯನ್ನು ತಿಳಿಸಿದಳಂತೆ. ಅದೇನೆಂದರೆ ದೇವಿಯು ಶಂಕರರ ಹಿಂದೆ ಹೋಗುವಾಗ ಆತ ದೇವಿ ತನ್ನ ಹಿಂದೆ ಬರುತ್ತಿದ್ದಾಳೊ? ಇಲ್ಲವೊ? ಎಂದು ಹಿಂದೆ ತಿರುಗಿ ನೋಡಬಾರದು ಎಂಬುದಾಗಿತ್ತು.

ಶಂಕರರು ಹಾಗೆ ಸಾಗುತ್ತಿರುವಾಗ  ಈ ಸ್ಥಳದಲ್ಲಿ ದೇವಿಯ ಕಾಲುಗೆಜ್ಜೆಗಳ ಸದ್ದು ಕೇಳದಾಯಿತು. ಆಗ ಶಂಕರರು ಹಿಂದೆ ತಿರುಗಿ ನೋಡಿದರು. ಆಗ ದೇವಿಯು ನಿಬಂಧನೆ ಪ್ರಕಾರ ಶಂಕರರ ಜೊತೆ ಮುಂದೆ ಹೋಗಲು ನಿರಾಕರಿಸಿದಳು. ಆಗ ಶಂಕರರು ಪ್ರಸ್ತುತ ಕೊಲ್ಲೂರಿನ ಜ್ಯೋತಿರ್ಲಿಂಗದ ಹಿಂದೆ ಇರುವ ದೇವಿಯ ಲೋಹದ ಮೂರ್ತಿಯನ್ನು ಪಡೆದು ಇಲ್ಲಿ ಸ್ಥಾಪಿಸಿದರು.

ಅದಷ್ಟೆ ಅಲ್ಲ

ಇಲ್ಲಿನ ಪ್ರಸಿದ್ಧ ಪ್ರವಾಸಿ ಸ್ಥಳದ ಬಳಿಯಲ್ಲಿನ ದಟ್ಟ ಕಾಡಿನಲ್ಲಿ ಅರಿಷಿಣ ಗುಂಡಿ ಜಲಪಾತವು ಇದೆ. ಈ ಜಲಪಾತದಿಂದ ಧುಮ್ಮಿಕ್ಕುವ ಜಲದ ಕವಲಿನ ಮೇಲೆ ಸೂರ್ಯನ ಬೆಳಕು ಬಿದ್ದಾಗ, ಆ ನೀರು ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣುವುದರಿಮ್ದ ಇದಕ್ಕೆ ಅರಿಷಿಣ ಜಲಪಾತವೆಂಬ ಹೆಸರು ಬಂದಿದೆ.

ಶ್ರೀ ಆದಿ ಶಂಕರರು ದೇವಿಯ ದರ್ಶನವನ್ನು ಪ್ರಥಮ ಬಾರಿಗೆ ಪಡೆದ ಸ್ಥಳವಾದ ಕೊಡಚಾದ್ರಿ ಪರ್ವತಶ್ರೇಣಿಯು ಇಲ್ಲಿನ ಮತ್ತೊಂದು ಯಾತ್ರಾ ಸ್ಥಳವಾಗಿದೆ.  ಉತ್ಸಾಹಿಗಳು ಇಲ್ಲಿಗೆ ಚಾರಣದ ಮೂಲಕ ತಲುಪಬಹುದು. ಇಲ್ಲಿಗೆ ಭೇಟಿಕೊಡಲು ವಿಶೇಷ ಸಮಯವೆಂದರೆ ಅದು ನವರಾತ್ರಿ ಅಥವಾ ದಸರಾ. ನವರಾತ್ರಿ ಸಮಯದಲ್ಲಿ ಇಲ್ಲಿ ಸೃಷ್ಟಿಯ ಮೂರು ಸ್ತ್ರೀ ಶಕ್ತಿಗಳನ್ನು ಒಂಬತ್ತು ದಿನ ವಿಜೃಂಭಣೆಯಿಂದ ಆರಾಧಿಸಲಾಗುತ್ತದೆ.

ಕೊಲ್ಲೂರು ಮೂಕಾಂಬಿಕಾ ವನ್ಯಜೀವಿ ಧಾಮದ ಒಂದು ಭಾಗವಾಗಿದ್ದು, ಅಷ್ಟೇನು ಜನಪ್ರಿಯತೆ ಗಳಿಸಿಲ್ಲ. ಇದು ವಿಶ್ವ ವನ್ಯಜೀವಿ ನಿಧಿ(WWF)ಯಿಂದ ಅನುದಾನವನ್ನು ಪಡೆಯುತ್ತಿದೆ. ಕೊಲ್ಲೂರು ನಿಸರ್ಗ ರಮಣೀಯ ತಾಣವಾಗಿದ್ದು ತನ್ನಲ್ಲಿರುವ ಕಣಿವೆಗಳಿಂದ ಮತ್ತು ಜಲಾಪಾತಗಳಿಂದಾಗಿ ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಇಲ್ಲಿನ ದೇವಾಲಯ ಮತ್ತು ಸುತ್ತಲ ಪರಿಸರ ನಿಮ್ಮ ಕೊಲ್ಲೂರು ಭೇಟಿಯನ್ನು ಮರೆಯಲಾಗದ ಅನುಭವವಾಗುವಂತೆ ಮಾಡುತ್ತವೆ.

Please Wait while comments are loading...