ಹೊರನಾಡು – ನಿಸರ್ಗ ಸಿರಿಯಲ್ಲಿ ಸುಂದರ ತಾಣ  

 

ದೇವತೆ ಅನ್ನಪೂರ್ಣೇಶ್ವರಿಯ ನಿಬ್ಬೆರಗಾಗಿಸುವ ದೇವಾಲಯವು ಹೊರನಾಡಿಗೆ ಸುಪ್ರಸಿದ್ಧ ಖ್ಯಾತಿಯನ್ನು ತಂದುಕೊಟ್ಟಿದೆ. ಜತೆಗೆ ನಿಸರ್ಗದ ವೈವಿಧ್ಯಮಯ ಅಚ್ಚರಿಯನ್ನು ನೋಡಬಯಸುವವರಿಗೆ ಹೊರನಾಡು ಸಾಕೆನ್ನುವಷ್ಟು ಆನಂದವನ್ನು ನೀಡುತ್ತದೆ. ಈ ಹಚ್ಚ ಹಸಿರಿನ ನಗರವು ಚಿಕ್ಕಮಗಳೂರಿನ ದಕ್ಷಿಣಕ್ಕೆ 100 ಕಿ.ಮೀ. ನಷ್ಟು ದೂರದ ರಮಣೀಯ ಮಲೆನಾಡಿನಲ್ಲಿದೆ. ಈ ಪ್ರದೇಶವು ದಟ್ಟವಾದ ಕಾಡಿನಿಂದ ಸುತ್ತುವರೆದಿರುವ ಪರಿಣಾಮ ಹೊರನಾಡಿನ ಸೌಂದರ್ಯಕ್ಕೆ ಪುಷ್ಟಿ ನೀಡಿದೆ.   

 

ದೇವಾಲಯದ ಹಿಂದಿನ ದಂತಕಥೆ

ನೈಸರ್ಗಿಕ ಸೌಂದರ್ಯವನ್ನು ಸವಿಯುವುದರೊಂದಿಗೆ ಇಲ್ಲಿನ ಪುರಾತನ ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಪ್ರವಾಸಿಗರು ಬರುತ್ತಾರೆ. ದೇವಾಲಯದ ಸಲುವಾಗಿ ಅನ್ನಪೂರ್ಣೇಶ್ವರಿ ಮೂಲ ವಿಗ್ರಹವನ್ನು ಬಂಗಾರದಿಂದ ನಿರ್ಮಿಸಲಾಗಿದೆ. ಇಲ್ಲಿಗೆ ಭೇಟಿ ಕೊಡುವ ಭಕ್ತರು ಅನ್ನದ ಕೊರತೆಯನ್ನು ಯಾವುದೇ ರೀತಿಯಲ್ಲಿ ಕಾಣುವುದಿಲ್ಲವೆಂಬ ನಂಬಿಕೆಯಿದೆ. ಪುರಾತನ ಮೂಲಗಳ ಪ್ರಕಾರ ಒಮ್ಮೆ ಶಿವನು ಶಾಪಕ್ಕೊಳಗಾಗಿದ್ದಾಗ ಅನ್ನಪೂರ್ಣೇಶ್ವರಿ ದೇವಿಯ ಆಶೀರ್ವಾದದಿಂದ ಆ ಶಾಪವಿಮೋಚನೆಯಾಯಿತು ಎಂಬ ನಂಬಿಕೆ ಇಲ್ಲಿದೆ. ಈ ದೇವಾಲಯಕ್ಕೆ ಬರುವ ಎಲ್ಲ ಭಕ್ತಾದಿಗಳಿಗೂ ಅನ್ನಪ್ರಸಾದ ಮತ್ತು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ.

ಹೊರನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಗೆಯೇ ಅಕಪಕ್ಕದ ದೇವಾಲಯಗಳಿಗೂ ಹೋಗಬಹುದು. ಶೃಂಗೇರಿಯು ಅಲ್ಲಿಂದ 75 ಕಿ.ಮೀ. ನಷ್ಟು ದೂರದಲ್ಲಿದೆ. ಹೊರನಾಡಿಗೆ ಹೋಗುವ ಹಾದಿಯಲ್ಲಿ ಸಿಗುವ ಇತರೆ ಪ್ರಸಿದ್ಧ ಸ್ಥಳಗಳೆಂದರೆ ಧರ್ಮಸ್ಥಳ ಶ್ರೀ ಮಂಜುನಾಥ ಮತ್ತು ಉಡುಪಿ ಶ್ರೀ ಕೃಷ್ಣ ದೇವಾಲಯಗಳು.  

ಬೆಂಗಳೂರಿನಿಂದ 330 ಕಿ.ಮೀ.ಗಳಷ್ಟು  ದೂರದಲ್ಲಿರುವ ಹೊರನಾಡಿಗೆ ಹತ್ತಿರವಿರುವ ರೈಲ್ವೆ ನಿಲ್ದಾಣ ಶಿವಮೊಗ್ಗ. ಅಲ್ಲದೇ ರಾಜ್ಯ ಮತ್ತು ಸ್ಥಳೀಯ ಬಸ್ಸು ಸೇವೆಗಳು ಇಲ್ಲಿಗೆ ಬರುವಂತೆ ಸಮರ್ಪಕ ರಸ್ತೆ ಸಂಪರ್ಕ ಹೊಂದಿದೆ. ಮಂಗಳೂರು ನಗರ ವಿಮಾನ ನಿಲ್ದಾಣವು ಹೊರನಾಡಿಗೆ ಸಮೀಪವಿರುವುದು ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಿದೆ.

Please Wait while comments are loading...