ಭದ್ರಾ ವನ್ಯಜೀವಿ ಅಭಯಾರಣ್ಯ

ಸುಂದರ ಹಸಿರು ಪರಿಸರದಲ್ಲಿ ಮೈ ಚಾಚಿಕೊಂಡಿರುವ ಭದ್ರಾ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಭದ್ರಾ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿದೆ. ಈ ಅಭಯಾರಣ್ಯವನ್ನು ಇಲ್ಲಿರುವ ಕಾಡುಪ್ರಾಣಿಗಳ ರಕ್ಷಣೆ ಮತ್ತು ಹುಲಿಗಳ ಸಂರಕ್ಷಣೆಗೆಂದು ಸರಕಾರ ರಕ್ಷಿತಾರಣ್ಯವೆಂದು ಘೋಷಿಸಿ ವಿಶೇಷ ಯೋಜನೆಯ ವ್ಯಾಪ್ತಿಯಲ್ಲಿ ಈ ಅರಣ್ಯವನ್ನು ಸೂಚಿಸಿದೆ.

 

ಪಶ್ಚಿಮಘಟ್ಟದ ಸಾಲಿನಲ್ಲಿ ಹೊಂದಿಕೊಂಡಿರುವ ಈ ಭದ್ರಾ ವನ್ಯಜೀವಿ ಸಂರಕ್ಷಿತ ಅಭಯಾರಣ್ಯ ಹಲವಾರು ಕಣಿವೆಗಳಿಂದ ಕೂಡಿದೆ. ಈ ಅಭಯಾರಣ್ಯವನ್ನು 1958 ರಲ್ಲಿ ಸಂರಕ್ಷಿತವೆಂದು ಘೋಷಿಸಲಾಯಿತು. ನಂತರ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಹೆಸರಿಸಿ 492 ಚ.ಕಿ.ಮೀ.ವರೆಗಿನ ಪ್ರದೇಶವನ್ನು ಸಂರಕ್ಷಿತವೆಂದು ಘೋಷಿಸಲಾಗಿದೆ. ಚಿಕ್ಕಮಗಳೂರು ಪಟ್ಟಣದಿಂದ 38 ಕಿ.ಮೀ.ಗಳಷ್ಟು ಅಂತರದಲ್ಲಿರುವ ಈ ಅಭಯಾರಣ್ಯ ಬೆಂಗಳೂರಿನಿಂದ 282 ಕಿ.ಮೀ.ಗಳಷ್ಟು ದೂರದಲ್ಲಿದೆ.

ಕಾಡಿನ ಜೊತೆ ಹೊಂದಾಣಿಕೆ

ಕಣ್ಮನ ಸೆಳೆಯುವ ಕಾಡಿನ ನೋಟ, ಅಲ್ಲಿರುವ ಕಣಿವೆಗಳು, ವಿವಿಧ ಬಗೆಯ ಗಿಡ,ಮರಗಳು ಹಾಗೂ ಪ್ರಾಣಿಗಳ ಓಡಾಟ ಇಲ್ಲಿನ ಸೌಂದರ್ಯ ಹೆಚ್ಚಿಸಿದೆ. 120 ಕ್ಕೂ ಹೆಚ್ಚು ವಿವಿಧ ತಳಿಯ ಗಿಡ,ಮರಗಳು ಇಲ್ಲಿವೆ. ಇಲ್ಲಿರುವ ತೇಗು, ರೋಸವುಡ್ , ಬಿದಿರು ಸೇರಿದಂತೆ ಹಲವಾರು ಅಪರೂಪದ ಮರಗಳು ಕಾಡಿನಾದ್ಯಂತ ಇವೆ.

ಈ ಅಭಯಾರಣ್ಯದಲ್ಲಿ ವಿವಿಧ ಜಾತಿಯ ಜಿಂಕೆ, ಸಾಂಬಾರ, ಲಂಗೂರ್, ಅಳಿಲು, ಕಾಡಾನೆ ಸೇರಿದಂತೆ ಹಲವಾರು ಪ್ರಾಣಿಗಳು ಇಲ್ಲಿ ನೆಲೆಸಿವೆ. ಕಾಡುಪ್ರಾಣಿಗಳೊಂದಿಗೆ ಇಲ್ಲಿ ಸಾಕುಪ್ರಾಣಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಜೀವಿಸುತ್ತಿವೆ. ಇಲ್ಲಿರುವ ಪ್ರಾಣಿಗಳ ವೈಯಕ್ತಿಕ ಸಂರಕ್ಷಣೆಗೆ ನೀವೂ ಕೂಡ ಸೇವೆ ಸಲ್ಲಿಸಬಹುದು.

ಇಲ್ಲಿರುವ ಹುಲಿ, ಚಿರತೆ ಮತ್ತಿತರ ಅಳಿವಿನಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗೆಂದೇ 1998 ರಲ್ಲಿ ಹುಲಿ ಸಂರಕ್ಷಣಾ ವಲಯವೆಂದು ಈ ಪ್ರದೇಶವನ್ನು ಗುರುತಿಸಲಾಯಿತು. 250 ಕ್ಕೂ ಹೆಚ್ಚು ಪಕ್ಷಿಗಳ ತಳಿಗಳಿರುವ ಇಲ್ಲಿ ಪಕ್ಷಿಗಳ ಕಲರವ ಕೇಳುವುದು ಸಂಗೀತದ ಸುಧೆಯಂತಿರುತ್ತದೆ. ಕೋಗಿಲೆ, ಗಿಳಿ,ನವಿಲು, ಕಾಡುಕೋಳಿ, ಪಾರಿವಾಳ, ಕವುಜಗ, ಬಾತಕೋಳಿ, ಮೈನಾ ಸೇರಿದಂತೆ ಹಲವಾರು ಜಾತಿಯ ವಿವಿಧ ಪಕ್ಷಿ ಸಂಕುಲವೇ ಇಲ್ಲಿದೆ.

ಇನ್ನೂ ನಿಮಗೆ ರಸ್ತೆ ಪಕ್ಕದಲ್ಲೇ ಬಗೆ ಬಗೆಯ ಹಾವುಗಳು ಕಂಡರೆ ಭಯ ಬೀಳಬೇಡಿ, ಏಕೆಂದರೆ ಇಲ್ಲಿ ಮೊಸಳೆ ಮತ್ತು ಹಲವಾರು ಬಗೆಯ ಹಾವುಗಳ ಸಂತತಿ ಕೂಡ ಸಾಕಷ್ಟಿದೆ. ಹೆಬ್ಬಾವು, ನಾಗರಹಾವು, ಕಿಂಗ್ ಕೋಬ್ರಾ ಸೇರಿದಂತೆ ವಿವಿಧ ಬಗೆಯ ಮತ್ತು ವಿವಿಧ ಬಣ್ಣದ ಹಾವುಗಳನ್ನು ನೀವು ಇಲ್ಲಿ ಕಾಣಬಹುದು. ಈ ಸಂರಕ್ಷಿತ ಭದ್ರಾ ಅರಣ್ಯದಲ್ಲಿ ಬೇರೆಲ್ಲಿಯೂ ಕಾಣದ ಸುಂದರ ಪಾತರಗಿತ್ತಿಗಳು ಕೂಡ ನೆಲೆಸಿವೆ.

ನೀವು ಮಾಡಬಹುದಾದುದು

ಸಾಹಸಪ್ರಿಯರಿಗೆ ಅರಣ್ಯ ಇಲಾಖೆಯು ಇಲ್ಲಿ ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಪಕ್ಷಿ ವೀಕ್ಷಣೆ, ಬೋಟಿಂಗ್ ಮುಂತಾದ ವ್ಯವಸ್ಥೆ ಕಲ್ಪಿಸಿದೆ. ಪ್ರವಾಸಿಗರು ಇಲ್ಲಿಗೆ ಬಂದಾಗ ಈ ಎಲ್ಲ ಸೌಕರ್ಯಗಳ ಸದುಪಯೋಗ ಮಾಡಿಕೊಳ್ಳಬಹುದು.

ಜೀವಮಾನದಲ್ಲೇ ಅತ್ಯಮೂಲ್ಯವಾದ ನೆನಪಿನ ಕ್ಷಣಗಳನ್ನು ಇಲ್ಲಿ ಕಳೆಯುವುದು ಭಾಗ್ಯವಂತರಿಗೆ ಮಾತ್ರ ಎನ್ನಬಹುದು. ಏಕೆಂದರೆ ಇಲ್ಲಿ ಆಗಮಿಸುವ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ಪ್ರಕೃತಿಯಲ್ಲೇ ವಿವಿಧ ಬಗೆಯ ಸಾಹಸಕ್ರೀಡೆಗಳನ್ನೂ ಕೂಡ ಆನಂದಿಸಬಹುದಾಗಿದೆ.

ಈ ಅರಣ್ಯದ ಮಧ್ಯೆಯೇ ಭದ್ರಾ ನದಿ ಹರಿಯುವುದರಿಂದ ಇಲ್ಲಿ ಪ್ರಕೃತಿ ನಿರ್ಮಿತ ಹೆಬ್ಬೇಗಿರಿ, ಗಂಗೆಗಿರಿ, ಮುಳ್ಳಯ್ಯನಗಿರಿ, ಬಾಬಾ ಬುಡನಗಿರಿ ಪ್ರವಾಸಿಗರಿಗೆ ನೋಡಬಹುದಾದ ಇಲ್ಲಿನ ಇನ್ನಿತರ ಪ್ರದೇಶಗಳು.

Please Wait while comments are loading...