ಕೆಮ್ಮಣ್ಣುಗುಂಡಿ - ರಾಜವೈಭವದ ಧಾಮ

ಕೆಮ್ಮಣ್ಣುಗುಂಡಿ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಅತ್ಯುತ್ತಮ ನಿಸರ್ಗಧಾಮ. ಈ ಗುಡ್ಡವು ಬಾಬಾ ಬುಡನ್ ಗಿರಿ ಬೆಟ್ಟಗಳ ಸಾಲನ್ನು ಸುತ್ತುವರಿದಿದೆ. ಕೆಮ್ಮಣ್ಣುಗುಂಡಿಯು ಸುಂದರ ಬೆಟ್ಟಗುಡ್ಡಗಳು, ದಟ್ಟ ಅರಣ್ಯ, ವಿಶಾಲವಾದ ಹಸಿರಿನ ಹುಲ್ಲುಹಾಸಲು, ರಮಣೀಯ ನಿಸರ್ಗ ನಿರ್ಮಿತ ಜಲಪಾತಗಳು ಪ್ರವಾಸಿಗರ ಮನ ಸೆಳೆಯುತ್ತವೆ.

 

ಮೈಸೂರಿನ ಮಹಾರಾಜಾ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ವಿಶ್ರಾಂತಿ ಧಾಮವಾಗಿದ್ದ ಕೆಮ್ಮಣ್ಣುಗುಂಡಿಯನ್ನು ಬಹಳಷ್ಟು ಅಭಿವೃದ್ಧಿ ಮಾಡಲಾಗಿದೆ. ಈ ಕಾರಣದಿಂದಲೇ ಮಹಾರಾಜರ ನೆನಪಿಗಾಗಿ ಕೆಮ್ಮಣ್ಣುಗುಂಡಿಯನ್ನು ಕೆ.ಆರ್.ಹಿಲ್ಸ್ ಎಂದು ಕರೆಯಲಾಗಿದೆ. ಕೆಮ್ಮಣ್ಣುಗುಂಡಿಗೆ ಮೈಸೂರು ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್ ಸುಸಜ್ಜಿತ ರಸ್ತೆ, ವಿಶಾಲ ಪ್ರದೇಶದಲ್ಲಿ ಸುಂದರವಾದ ಗಾರ್ಡನ್ ಸೇರಿದಂತೆ ಮತ್ತಿತರ ಐಷಾರಾಮಿ ವಿಶ್ರಾಂತಿಗೆ ಅವಶ್ಯವಿರುವ ಎಲ್ಲ ಅಭಿವೃದ್ಧಿಗಳನ್ನು ಮಾಡಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಕಳೆಯಲು ಕೆಮ್ಮಣ್ಣನಗುಂಡಿಗೆ ಬರುತ್ತಿದ್ದ ಮಹಾರಾಜರು ಕೆಮ್ಮಣ್ಣುಗುಂಡಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದರು.

ನಂತರದ ದಿನಗಳಲ್ಲಿ ಮೈಸೂರು ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರು ಕರ್ನಾಟಕ ಸರಕಾರಕ್ಕೆ ಕೆಮ್ಮಣ್ಣುಗುಂಡಿಯ ಉಸ್ತುವಾರಿಯನ್ನು ಬಿಟ್ಟು ಕೊಟ್ಟರು. ಈ ಸುಂದರ ನಿಸರ್ಗಧಾಮವನ್ನು ಈಗ ಕರ್ನಾಟಕ ಸರಕಾರದ ತೋಟಗಾರಿಕಾ ಇಲಾಖೆಯು ಮೇಲಸ್ತುವಾರಿ ನೋಡಿಕೊಳ್ಳುತ್ತಿದ್ದೆ.

 

ಏನೇನು ಮಾಡಬಹುದು?

ಕೆಮ್ಮಣ್ಣುಗುಂಡಿಯಲ್ಲಿನ ಅತ್ಯಂತ ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ಒಂದೇ ದಿನದಲ್ಲಿ ಪ್ರವಾಸಿಗರು ನೋಡಲು ಆಗುವುದಿಲ್ಲ.ಏರಲು ಕಷ್ಟವಾಗಿರುವ ಝಡ್ ಪಾಯಿಂಟ್ ನ್ನು ಕೇವಲ ಚಾರಣದ ಮೂಲಕವೇ ಹತ್ತಬೇಕಾಗುತ್ತದೆ. ಸುಮಾರು 30 ನಿಮಿಷಗಳ ಪ್ರಯಾಣ ಝಡ್ ಪಾಯಿಂಟ್ ಶಿಖರ ಮುಟ್ಟಲು ಬೇಕಾಗುತ್ತದೆ. ಈ ಶಿಖರದಿಂದ ಸುತ್ತಲಿನ ನಯನ ಮನೋಹರ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಅಲ್ಲದೇ ಇಲ್ಲಿಂದ ಪ್ರಕೃತಿ ನಿರ್ಮಿತ ಶಾಂತಿ ಫಾಲ್ಸ್ ನ್ನು ಕೂಡ ನೋಡಬಹುದಾಗಿದೆ.

ಶಾಂತಿ ಫಾಲ್ಸ್ ಹತ್ತಿರದಲ್ಲಿ ಇರುವ ಮತ್ತೊಂದು ಸುಂದರ ಜಲಪಾತ ಹೆಬ್ಬೆ ಫಾಲ್ಸ್ ಕೂಡ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಕಲ್ಲತ್ತಗಿರಿ ಗುಡ್ಡದ ಬಳಿ ಇರುವ ಕಲ್ಲತ್ತಿ ಫಾಲ್ಸ್ ಕಲ್ಲತ್ತಗಿರಿ ಫಾಲ್ಸ್  ಎಂದೇ ಪ್ರಸಿದ್ಧವಾಗಿದೆ. ಸುಮಾರು 120 ಮೀಟರ್ ಎತ್ತರದಿಂದ ಬೀಳುವ ನೀರಿನ ಆರ್ಭಟ ಪ್ರವಾಸಿಗರಿಗೆ ಮನದುಂಬಿಸುತ್ತದೆ.ಇಲ್ಲಿರುವ ದೇವಸ್ಥಾನ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದ್ದು ಎಂಬುದು ಐತಿಹಾಸಿಕ ಹಿನ್ನೆಲೆಯಿದೆ.

ಮುಳ್ಳಯ್ಯನಗಿರಿ ಬೆಟ್ಟ ಮತ್ತು ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಕೆಮ್ಮಣ್ಣಗುಂಡಿಯ ಹತ್ತಿರದಲ್ಲಿರುವ ಇತರ ಪ್ರೇಕ್ಷಣೀಯ ಸ್ಥಳಗಳು. ಕರ್ನಾಟಕ ರಾಜ್ಯದ ಹತ್ತಿರದ ಪಟ್ಟಣಗಳ ಪ್ರವಾಸಿಗರು ವಾರಾಂತ್ಯ ಕಳೆಯಲು ಇಲ್ಲಿ ಬರುತ್ತಾರೆ. ಅಲ್ಲದೇ ಇಲ್ಲಿ ಸಾಹಸಕ್ರೀಡೆಗಳನ್ನು ಮಾಡಬಯಸುವ ಪ್ರವಾಸಿಗರಿಗೂ ಇಲ್ಲಿ ಸಾಕಷ್ಟು ಅನುಕೂಲತೆಗಳಿವೆ.

Please Wait while comments are loading...