ದಾಂಡೇಲಿ - ಹಸಿರು ಪ್ರಿಯರಿಗೆ ಒಂದು ಸಂಭ್ರಮ

ದಾಂಡೇಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ. ದಾಂಡೇಲಿ ಪಟ್ಟಣವು ಪ್ರವಾಸಿ ಸ್ಥಾನಗಳಲ್ಲಿ ಆಕರ್ಷಕ ಹಾಗು ಸಾಹಸಮಯ ತಾಣವಾಗಿದೆ.

 

ಈ ಆಕರ್ಷಕ ಪಟ್ಟಣವು ವಿದ್ಯಾಭ್ಯಾಸಕ್ಕಾಗಿ ಮತ್ತು ಔದ್ಯೋಗಿಕವಾಗಿಯೂ ರಾಜ್ಯದಲ್ಲಿ ಹೆಸರಾಗಿದೆ. ಇಲ್ಲಿರುವ ಕಾಗದ ಕಾರ್ಖಾನೆ (The West Coast Paper Mills) ದಾಂಡೇಲಿಯ ಪಟ್ಟಣವನ್ನು ಆವರಿಸಿಕೊಂಡಿದೆ. ಬಿಳಿ ನೀರಿನಲ್ಲಿ ಮಾಡುವ ಸಾಹಸ ಜಲಕ್ರೀಡೆ ರಾಫ್ಟಿಂಗ್ ಗಾಗಿ ಭಾರತದಲ್ಲೇ ದಾಂಡೇಲಿ ಪ್ರಸಿದ್ಧಿ ಹೊಂದಿದೆ.

 

ಹೆಸರಿನ ಹಿಂದಿನ ಕಥೆ

ಇಲ್ಲಿರುವ ದಟ್ಟ ದಂಡಕಾರಣ್ಯ ಇರುವುದರಿಂದ ದಾಂಡೇಲಿ ಪಟ್ಟಣವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಇನ್ನೊಂದು ನಂಬಿಕೆ ಇದೆ. ದಂಡಕನಾಯಕ ಎಂಬ ರಾಜನು ಇಲ್ಲಿರುವ ಪ್ರಕೃತಿ ಸೌಂದರ್ಯವನ್ನು ನೋಡಿ ಈ ಅರಣ್ಯಕ್ಕೆ ತನ್ನದೇ ಹೆಸರು ಇರಲಿ ಎಂದು ಇಟ್ಟನೆಂದು ನಂತರ ಕ್ರಮೇಣ ದಾಂಡೇಲಿ ಎಂದಾಯಿತು ಎಂಬುದಾಗಿ ಮತ್ತೊಂದು ಹಿನ್ನೆಲೆಯಿದೆ ಎಂದು ಸ್ಥಳೀಯರು ಹೇಳುತ್ತಾರೆ.

 

ಪ್ರವಾಸಿಗರು ಬರಲು ಕಾರಣ

ದಾಂಡೇಲಿಯು ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮವೆಂದು ಹೆಸರಾಗಿದೆ. ಅದಕ್ಕೆಂದೇ ಭಾರೀ ಸಂಖ್ಯೆಯ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. 2007 ರಲ್ಲಿ ದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.  ದಾಂಡೇಲಿ ವನ್ಯಜೀವಿಧಾಮವು ಕಾಳಿ ನದಿಯ ಉಪನದಿಗಳಾದ ಕನೇರಿ ಮತ್ತು ನಾಗಝರಿಯೊಂದಿಗೆ ದಟ್ಟವಾದ ಅರಣ್ಯದಿಂದ ಕೂಡಿದೆ.

ಈ ವನ್ಯಜೀವಿ ಧಾಮವು ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡುಕೋಡಣ, ಕರಡಿ,  ನರಿ, ಜೋಳ, ಲಂಗೂರ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಪಕ್ಷಿಗಳಿಗೆ ಆಶ್ರಯ ನೀಡಿದೆ. ಇಲ್ಲಿನ ಕಾಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳಾದ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆನಂದಿಸಬಹುದು. ಅಲ್ಲದೇ ಗುಡ್ಡಗಾಡು ಸೈಕಲ್ ಸವಾರಿ,  ಚಾರಣ, ಹಾಗೂ ಮೊಸಳೆಗಳ ಪಾರ್ಕ್, ಬೋಟಿಂಗ್, ಮೀನುಗಾರಿಕೆ, ಪಕ್ಷಿ ವೀಕ್ಷಣೆ ಈ ವನ್ಯಜೀವಿ ಧಾಮದಲ್ಲಿ ಪ್ರವಾಸಿಗರು ಆನಂದಿಸಬಹುದು.

ಪ್ರಖ್ಯಾತ ಧಾರ್ಮಿಕ ಸ್ಥಳ ಉಳವಿ, ಸೈಕ್ಸ್ ಪಾಯಿಂಟ್, ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್, ಕವಲ ಗುಹೆ ದಾಂಡೇಲಿಗೆ ಹತ್ತಿರದಲ್ಲಿರುವ ಇತರೆ ಪ್ರೇಕ್ಷಣೀಯ ಸ್ಥಳಗಳು. ಪಶ್ಚಿಮ ಘಟ್ಟಗಳ ಸರಹದ್ದಿನ ಕಾಳಿ ನದಿ ದಂಡೆಯಲ್ಲಿರುವ ದಾಂಡೇಲಿ ಪಟ್ಟಣವು ಸಮುದ್ರ ಮಟ್ಟದಿಂದ 1551 ಅಡಿಗಳಷ್ಟು ಎತ್ತರವಿದೆ. ಗೋವಾದಿಂದ 125 ಕಿ.ಮೀ. ದೂರದಲ್ಲಿರುವು ದಾಂಡೇಲಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಿಂದ ರಸ್ತೆ ಮೂಲಕ ಬರಬಹುದಾಗಿದೆ.

Please Wait while comments are loading...