ಬಾದಾಮಿ ಅಥವಾ ವಾತಾಪಿ – ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ

ಕರ್ನಾಟಕದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಒಂದು ಪ್ರಾಚೀನ ಪಟ್ಟಣವಾಗಿದೆ.  ಈ ಪಟ್ಟಣವು ವಾತಾಪಿ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟಿದ್ದು ಇದು 6ನೇ ಶತಮಾನದಿಂದ 8ನೇ ಶತಮಾನದವರೆಗೂ ಚಾಲುಕ್ಯರ ರಾಜಧಾನಿಯಾಗಿತ್ತು.

 

ಬಾದಾಮಿ ಅಥವಾ ವಾತಾಪಿಯ ಹಿಂದಿನ ಇತಿಹಾಸ

ಬಾದಾಮಿಯು 2 ಶತಮಾನಗಳಿಗೂ ಹೆಚ್ಚು ಕಾಲ ಪೂರ್ವರ ಅಥವಾ ಮೊಟ್ಟ ಮೊದಲ ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯರ ಸಾಮ್ರಾಜ್ಯವು 6ರಿಂದ 8ನೇ ಶತಮಾನದ ವರೆಗೂ ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಹುತೇಕ ಭಾಗಗಳನ್ನು ಸುತ್ತುವರೆದಿತ್ತು. ಈ ಸಾಮ್ರಾಜ್ಯವು ಎರಡನೇ ಪುಲಿಕೇಶಿಯ ಆಳ್ವಿಕೆಯಲ್ಲಿ ಎತ್ತರಕ್ಕೆ ಬೆಳೆಯಿತು. ಚಾಲುಕ್ಯರ ನಂತರ ಬಾದಾಮಿಯೂ ತನ್ನ ಮಹತ್ವವನ್ನು ಕಳೆದುಕೊಂಡಿತು.

ಆಳವಾದ ಕಮರಿನಲ್ಲಿ ನೆಲೆಸಿರುವ ವಾತಾಪಿ ಎಂದು ಹಿಂದೆ ಕರೆಯಿಸಿಕೊಳ್ಳುತ್ತಿದ್ದ ಬಾದಾಮಿಯೂ ಹೊನ್ನಿನ ಬಣ್ಣದ ಕಲ್ಲುಬಂಡೆಗಳ ಪರ್ವತಗಳಿಂದ ಸುತ್ತುವರೆದಿದ್ದು, ದಕ್ಷಿಣ ಭಾರತದಲ್ಲಿಯೇ ಮೊಟ್ಟಮೊದಲ ಭಾರಿಗೆ ಅತ್ಯಂತ ವೈವಿಧ್ಯಮಯ ದೇವಾಲಯಗಳ ನಿರ್ಮಾಣಗಳಿಗೆ ಸಾಕ್ಷಿಯಾದ ಪಟ್ಟಣವಾಗಿದೆ.  ಬಾದಾಮಿಯೂ ಕಮರಿನ ನಡುವಿನಲ್ಲಿರುವ ಅಗಸ್ತ್ಯ ನದಿಯ ಸುತ್ತಲೂ ಇರುವ ತನ್ನ ಗುಹೆ ದೇವಾಲಯಗಳಿಗೆ ಪ್ರಸಿದ್ಧಿ ಹೊಂದಿದೆ.

ಬಾದಾಮಿಯ ಗುಹೆ ದೇವಾಲಯಗಳು

ಇಲ್ಲಿ ಒಟ್ಟು ನಾಲ್ಕು ಗುಹಾ ದೇವಾಲಯಗಳಿದ್ದು ಅವುಗಳಲ್ಲಿ ಮೂರು ಹಿಂದೂ ಮತ್ತು ಒಂದು ಜೈನರ ದೇವಾಲಯವಾಗಿದೆ.

ಮೊದಲನೇ ಗುಹೆ

ಮೊದಲನೇ ಗುಹೆ ದೇವಾಲಯವನ್ನು ಪರಮ ಶಿವನಿಗೆ ಅರ್ಪಿಸಲಾಗಿದೆ. ಇಲ್ಲಿನ ವಿಶೇಷತೆಯೆಂದರೆ 5 ಅಡಿ ಉದ್ದದ ಮತ್ತು 18 ಕೈಗಳುಳ್ಳ ನಟರಾಜನ ಮೂರ್ತಿಯು ಹಲವು ನೃತ್ಯ ಭಂಗಿ ಅಥವಾ ಮುದ್ರೆಗಳನ್ನು ಪ್ರದರ್ಶಿಸುತ್ತಿರುವುದು.  ಈ ಗುಹೆ ದೇವಾಲಯ ಮಹಿಷಾಸುರ ಮರ್ಧಿನಿಯ ಚೆಂದದ ಕೆತ್ತನೆಯನ್ನು ಹೊಂದಿದೆ.

ಎರಡನೇ ಗುಹೆ

ಈ ಗುಹೆಯನ್ನು ಸ್ವಾಮಿ ವಿಷ್ಣುವಿಗೆ ಅರ್ಪಿಸಲಾಗಿದೆ. ಈ ಗುಹೆಯ ಪೂರ್ವ ಮತ್ತು ಪಶ್ಚಿಮ ಗೋಡೆಗಳಲ್ಲಿ ಭೂವರಹ ಮಾತು ತ್ರಿವಿಕ್ರಮರ ಆಕೃತಿಗಳನ್ನು ಕಾಣಬಹುದು.  ಈ ಗುಹೆಯ ಛಾವಣಿಯನ್ನು ಬ್ರಹ್ಮ, ಶಿವ, ವಿಷ್ಣು , ಅನಂತಶಯನ ಹಾಗೂ ಅಷ್ಟದಿಕ್ಪಾಲಕರ ಆಕೃತಿಗಳಿಂದ ಚಿತ್ರಿಸಲಾಗಿದೆ.

ಮೂರನೇ ಗುಹೆ

ಬಾದಾಮಿಯಲ್ಲಿನ ಮೂರನೇ ಗುಹೆಯನ್ನು  ಆ ಕಾಲದ ಗುಹೆ ದೇವಾಲಯಗಳ ವಾಸ್ತುಶಿಲ್ಪದ ಮತ್ತು ಕೆತ್ತನೆಯ ಅಚ್ಚರಿಯಂದೇ ಹೇಳಬಹುದು. ಇದರಲ್ಲಿ ಅನೇಕ ಹಿಂದೂ ದೇವತೆಗಳ ಕೆತ್ತನೆಗಳಿದ್ದು ಈ ದೇವಾಲಯವು ಕ್ರಿ.ಶ. 578ರಲ್ಲಿ ನಿರ್ಮಿಸಲಾಗಿರಬಹುದು ಎಂದು ಸೂಚಿಸುವ ಒಂದು ಶಾಸನವು ಇಲ್ಲಿದೆ.

ನಾಲ್ಕನೇ ಗುಹೆ

ಈ ನಾಲ್ಕನೇ ಗುಹೆಯು ಜೈನರ ದೇವಾಲಯವಾಗಿದೆ.  ಇಲ್ಲಿರುವುದು ಇಬ್ಬರು ಜೈನ ಮಹಾಗುರುಗಳಾದ ಮಹಾವೀರ ಮತ್ತು ಪಾರ್ಶ್ವನಾಥರದು.  ಇಲ್ಲಿನ ಕನ್ನದಲ್ಲಿರುವ ಶಾಸನದ ಪ್ರಕಾರ ಈ ದೇವಾಲಯವು 12ನೇ ಶತಮಾನಕ್ಕೆ ಸೇರಿದೆ.

ಈ ಗುಹೆ ದೇವಾಲಯಗಳ ಹೊರತು ಪಡಿಸಿದರೆ ಬೆಟ್ಟದ ಉತ್ತರ ಭಾಗದಲ್ಲಿ ಮೂರು ಶಿವನ ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲಿ ಮಳೆಗತ್ತಿ ಶಿವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿರುವ ಇತರೆ ಪ್ರಸಿದ್ಧ ದೇವಾಲಯಗಳೆಂದರೆ ಭೂತನಾಥ ದೇವಾಲಯ, ದತ್ತಾತ್ರೇಯ ದೇವಾಲಯ ಮತ್ತು ಮಲ್ಲಿಕಾರ್ಜುನ ದೇವಾಲಯಗಳು. ಬಾದಾಮಿಯಲ್ಲಿ ಒಂದು ಕೋಟೆಯೂ ಇದ್ದು ಅದು ಅನೇಕ ದೇವಾಲಯಗಳಿಗೆ ನೆಲೆಯಾಗುವುದಲ್ಲದೆ ಸಾಹಸಕ್ಕೂ ಪ್ರಸಿದ್ಧವಾಗಿದೆ. ಇಲ್ಲಿ ಪ್ರವಾಸಿಗರು ಬೆಟ್ಟ ಹತ್ತುವ ಸುಖವನ್ನು ಅನುಭವಿಸಬಹುದು.

ಬಾದಾಮಿಯೂ ಅದು ನೆಲೆಸಿರುವ ಕಲ್ಲುಬಂಡೆಗಳ ಕಮರಿನಿಂದಾ ಹಿಡಿದು ಪುರಾತನ ಗುಹೆ ದೇವಾಲಯ ಮತ್ತು ಕೋಟೆಗಳನ್ನು ಒಳಗೊಂಡು ಅತ್ಯಂತ ಮನಸೂರೆಗೊಳಿಸುವಂತಹ ಸ್ಥಳವೆನಿಸಿದೆ.

Please Wait while comments are loading...