ಸ-ಇ-ಮಿಕ ಉದ್ಯಾನವನ ಚಿರಾಪುಂಜಿಯಲ್ಲಿರುವ ಒಂದು ಅತ್ಯದ್ಭುತವಾದ ಉದ್ಯಾನವನವಾಗಿದೆ. ಇದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮನೋರಂಜನೆಯ ಜೊತೆಗೆ ಶಿಕ್ಷಣವನ್ನು ಸಹ ಒದಗಿಸುತ್ತದೆ. ವಾಲಿಬಾಲ್ ಮೈದಾನ, ಸ್ಕೇಟಿಂಗ್ ರಿಂಗ್, ಬ್ಯಾಡ್ಮಿಂಟನ್ ಅಂಗಣ ಮತ್ತು ಉಯ್ಯಾಲೆ,ಜಾರುಬಂಡಿಗಳನ್ನು ಹೊಂದಿರುವ ಆಟದ ಮೈದಾನಗಳು ಇಲ್ಲಿವೆ. ಮಕ್ಕಳು ಬೇಸಿಗೆಯ ಬಿಸಿಲಿನ ದಿನಗಳಲ್ಲಿ ಆಡಿ ನಲಿಯಲು ಒಂದು ಪುಟ್ಟ ಈಜುಕೊಳವನ್ನು ಸಹ ಇಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಉದ್ಯಾನವನದಲ್ಲಿ ಸಾಂಪ್ರದಾಯಿಕ ಖಾಸಿ ಗುಡಿಸಲುಗಳ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿರುವ ವಸತಿಗಳಲ್ಲಿ ನಾವು ಉಳಿದುಕೊಳ್ಳಬಹುದು. ತಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಇಲ್ಲಿಗೆ ವಿಹಾರಕ್ಕೆ ಬರುವವರು, ತಮ್ಮವರಿಗೆ ತಾವೇ ಕೈಯಾರೆ ಅಡುಗೆ ಮಾಡಿ ಬಡಿಸಲು ಬೇಕಾಗುವ ಉಪಕರಣಗಳನ್ನು ನೀಡುವ ಪಿಕ್ನಿಕ್ ಹಟ್ಸ್ ಇಲ್ಲಿವೆ. ಅಲ್ಲದೆ ನಗರದ ಗೌಜು ಗದ್ದಲದಿಂದ ದೂರವಾಗಿ ತಮ್ಮ ಕಚೇರಿಯ ಸಭೆ ಅಥವಾ ಸಮಾವೇಶವನ್ನು ನಡೆಸಲು ಕಾನ್ಫರೆನ್ಸ್ ಹಾಲ್ ಸಹ ಇಲ್ಲಿ ದೊರೆಯುತ್ತದೆ.
ಶಿಲ್ಲಾಂಗ್ನಿಂದ ಬಸ್ ಅಥವಾ ಕ್ಯಾಬ್ ಮೂಲಕ ಸುಲಭವಾಗಿ ಸ-ಇ-ಮಿಕ ಉದ್ಯಾನವನಕ್ಕೆ ತೆರಳಬಹುದು. ಹೋಗುವ ಹಾದಿಯಲ್ಲಿ ಮಂತ್ರ ಮುಗ್ಧಗೊಳಿಸುವಂತಹ ಹಚ್ಚ ಹಸಿರಿನ ಬೆಟ್ಟಗುಡ್ಡಗಳ ಸೌಂದರ್ಯವನ್ನು ಸವಿಯಬಹುದು.