ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವು ಪ್ರವಾಸಿ ದೃಷ್ಟಿಯಿಂದ ಮಹತ್ವದ ಸ್ಥಾನವನ್ನು ಪಡೆದಿದೆ. ವರ್ಷಕ್ಕೊಮ್ಮೆ ಇತರೆ ದೇಶಗಳಿಗೆ ಪ್ರವಾಸ ಹೊರಡುವ ಹಲವಾರು ವಿದೇಶಿ ಪ್ರವಾಸಿಗರಿಗೆ ಭಾರತವು ನೆಚ್ಚಿನ ಸ್ಥಳವಾಗಿದೆ. ಆದ್ದರಿಂದಲೆ ಭಾರತವು ಪ್ರತಿ ವರ್ಷವೂ ಹಲವು ಲಕ್ಷ ಸಂಖ್ಯೆಗಳಲ್ಲಿ ವಿದೇಶಿ ಪ್ರವಾಸಿಗರನ್ನು ಪಡೆಯುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಈ ರೀತಿಯ ಪ್ರವಾಸಿಗರಲ್ಲಿ ದೇಶೀಯ ಹಾಗು ವಿದೇಶಿ ಮಹಿಳಾ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿದೆ.
ಆದರೆ ಇತ್ತೀಚಿನ ಕೆಲವು ಸಮಯದಿಂದ ಭಾರತದ ಕೆಲವು ಸ್ಥಳಗಳು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಕುಖ್ಯಾತಿಯನ್ನು ಪಡೆದಿವೆ. ಹಲವಾರು ಮಹಿಳಾ ದೌರ್ಜನ್ಯಗಳು ದಾಖಲಾಗಿವೆ. ಆದ್ದರಿಂದಲೆ ಪ್ರಸ್ತುತ ಮಹಿಳಾ ಪ್ರವಾಸಿಗರು ಪ್ರವಾಸ ಹೊರಡುವ ಮುಂಚೆ ಆ ಸ್ಥಳಗಳ ಕುರಿತು ಸಮಗ್ರವಾಗಿ ತಿಳಿಕೊಳ್ಳಬೇಕಾಗಿರುವುದು ಅವರ ಸುರಕ್ಷತೆಯ ದೃಷ್ಟಿಯಿಂದ ಮಹತ್ವವಾಗಿದೆ. ಅದೇನೆ ಇರಲಿ..ಇಂದಿಗೂ ಹಲವು ಜನಪ್ರಿಯ ಪ್ರವಾಸಿ ಸ್ಥಳಗಳು ಮಹಿಳೆಯರ ಓಡಾಟ ಹಾಗು ತಂಗುವಿಕೆಯ ದೃಷ್ಟಿಯಿಂದ ಸುರಕ್ಷಿತವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹಾಗಾದರೆ ಬನ್ನಿ ಈ ಲೇಖನದ ಮೂಲಕ ಅಂತಹ ಕೆಲವು ಸ್ಥಳಗಳ ಕುರಿತು ಪರಿಚಯ ಮಾಡಿಕೊಳ್ಳೊಣ.

ನೈನಿತಾಲ್:
ಪರ್ವತಗಳ ರಾಜ್ಯ ಉತ್ತರಾಖಂಡ್ ನಲ್ಲಿ ಕಂಡುಬರುವ ನೈನಿತಾಲ್ ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ. ಹಿಮಾಲಯ ಹೊರವಲಯದ ಕುಮಾವೂನ್ ಪ್ರದೇಶದ ಬೆಟ್ಟದ ಬುಡದಲ್ಲಿ ನೆಲೆಸಿರುವ ಈ ಅಹ್ಲಾದಕರ ವಾತಾವರಣವನ್ನು ಹೊಂದಿದ್ದು ಸುಂದರವಾದ ಗಿರಿಶಿಖರಗಳು ಹಾಗು ಕೆರೆಗಳನ್ನು ಒಳಗೊಂಡಿದೆ. ಭಾರತದ ಹಳೆಯ ರಾಷ್ಟ್ರೀಯ ಉದ್ಯಾನವಾದ ಜಿಮ್ ಕಾರ್ಬೆಟ್ ನೈನಿತಾಲ್ ಬಳಿಯಲ್ಲೆ ಸ್ಥಿತವಿದೆ.
ಚಿತ್ರಕೃಪೆ: Sanjoy

ಮನಾಲಿ:
ಹಿಮಾಲಯದ ಪ್ರಶಾಂತ ಪರ್ವತಗಳ ಮಧ್ಯದಲ್ಲಿ ನೆಲೆಸಿರುವ ಮನಾಲಿ ಒಂದು ಪುಟ್ಟದಾದ ಸುಂದರ ಗಿರಿಧಾಮವಾಗಿದ್ದು ಮಹಿಳಾ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1950 ಮೀಟರ್ ಎತ್ತರದಲ್ಲಿರುವ ಈ ಗಿರಿ ಶಿಖರ ಮನಾಲಿಯು ಹಿಮಾಚಲ ಪ್ರದೇಶ ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಹೊಂದಿರುವ ತಾಣವೂ ಆಗಿದೆ. ರಾಜ್ಯದ ರಾಜಧಾನಿ ಶಿಮ್ಲಾದಿಂದ 250 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ಕುಲ್ಲು ಜಿಲ್ಲೆಯ ಒಂದು ಭಾಗ.

ಪಣಜಿ:
ಗೋವಾದ ರಾಜಧಾನಿ ಪಣಜಿಯು ವಿರಾಮದ ಸಮಯವನ್ನು ಕಳೆಯಲು ಒಂದು ಉತ್ಕೃಷ್ಟ ತಾಣವಾಗಿದೆ. ಉತ್ತರ ಗೋವಾ, ದಕ್ಷಿಣ ಗೋವಾ ಎಂಬ ಎರಡು ಜಿಲ್ಲೆಗಳಿರುವ ಗೋವಾದಲ್ಲಿ, ಉತ್ತರ ಗೋವಾದ ಪಣಜಿ, ಮಾಪುಸಾ, ಬಿಚೋಲಿಮ್ ಮತ್ತು ಪೊಂಡಾಗಳೆಂಬ ನಾಲ್ಕು ಉಪ ವಿಭಾಗಗಳಿವೆ. ಇಲ್ಲಿ ಕಂಡುಬರುವ ಎಲ್ಲ ಕಡಲ ತಡಿಗಳ ಪೈಕಿ ಕಲಂಗುಟ್ ಕಡಲ ತೀರವು ಉಲ್ಲಾಸಮಯವಾಗಿದ್ದು, ರಾತ್ರಿ ಔತಣಕೂಟಗಳ ಆದರ್ಶ ಸ್ಥಳವಾಗಿದೆ.
ಚಿತ್ರಕೃಪೆ: Aaron C

ಜೈಸಲ್ಮೇರ್:
"ಬಂಗಾರದ ನಗರಿ" ಜೈಸಲ್ಮೇರ್ ತನ್ನಲ್ಲಿರುವ ಕೋಟೆಗಳು, ರಾಜಾರಮನೆಗಳಿಗೆ ಹೆಸರುವಾಸಿಯಾಗಿದೆ. ರಾಜಸ್ಥಾನದಲ್ಲಿರುವ ಜೈಸಲ್ಮೇರ್ ಪಟ್ಟಣವು ಮರಭೂಮಿಗಳ ರತ್ನವಾಗಿದ್ದು, ಮರಳುಗಾಡಿನ ಉತ್ಸವ, ಒಂಟೆ ಸಫಾರಿಯಂತಹ ಹಲವು ಆಕರ್ಷಣೆಗಳನ್ನು ಇಲ್ಲಿ ಸವಿಯಬಹುದು. ಪ್ರವಾಸ ಬರುವಮಹಿಳೆಯರ ಭದ್ರತೆಯ ದೃಷ್ಟಿಯಿಂದಲೂ ಸಹ ಈ ಪ್ರದೇಶ ಉತ್ತಮವಾಗಿದೆ.
ಚಿತ್ರಕೃಪೆ: Flicka

ಮಹಾಬಲೇಶ್ವರ:
ಭಾರತದಲ್ಲಿ ಕಂಡುಬರುವ ನಿತ್ಯಹರಿದ್ವರ್ಣದ ಕಾಡುಗಳ ಪೈಕಿ ಒಂದಾಗಿರುವ ಮಹಾಬಲೇಶ್ವರ ಗಿರಿಧಾಮವು ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಪಶ್ಚಿಮ ಘಟ್ಟಗಳ ಸುಂದರ ನಿಸರ್ಗ ಸೌಂದರ್ಯದಲ್ಲಿ ನೆಲೆಸಿದೆ. ಇದು ನೆಚ್ಚಿನ ರಜಾ ತಾಣವಾಗಿರುವುದು ಅಲ್ಲದೆ ನವ ದಂಪತಿಗಳಿಗೆ ಆದರ್ಶಮಯ ಮಧುಚಂದ್ರ ತಾಣವಾಗಿಯೂ ಪ್ರಸಿದ್ಧವಾಗಿದೆ. ಈ ಸ್ಥಳದ ಕುರಿತು ಹೆಚ್ಚಿಗೆ ತಿಳಿಯಿರಿ.
ಚಿತ್ರಕೃಪೆ: Tropicana

ಕೊಡಗು:
ಕರ್ನಾಟಕ ರಾಜ್ಯದ ಅತ್ಯುತ್ತಮ ಪ್ರವಾಸಿ ಸ್ಥಳವಾದ ಕೊಡಗು ಒಂದು ಮೋಡಿ ಮಾಡುವ ನಾಡು. ಇತ್ತೀಚಿಗಷ್ಟೆ ಭಾರತದ ಉತ್ತಮ ಪ್ರವಾಸಿ ಸ್ಥಳಗಳ ಪೈಕಿ ಮಂಚೂಣಿಯಲ್ಲಿರುವ ಪಶ್ಚಿಮ ಘಟ್ಟದ ಸುಂದರ ಪರಿಸರದಲ್ಲಿ ನೆಲೆಸಿರುವ ಕೊಡಗು ಮಹಿಳಾ ಪ್ರವಾಸಿಗರ ಭದ್ರತೆಯ ದೃಷ್ಟಿಯಿಂದ ಉತ್ತಮ ಸ್ಥಳವಾಗಿದ್ದು ಹಲವು ಅದ್ಭುತ ಆಕರ್ಷಣೆಗಳನ್ನು ಈ ತಾಣದ ಸುತ್ತಮುತ್ತ ನೋಡಬಹುದು. ಇಲ್ಲಿನ ಆಕರ್ಷಣೆಗಳ ಕುರಿತು ತಿಳಿಯಿರಿ.
ಚಿತ್ರಕೃಪೆ: Philanthropist 1

ಮುನ್ನಾರ್:
ಎತ್ತರ ಪ್ರದೇಶದಲ್ಲಿರುವ ಸುಗಂಧಭರಿತ ಚಹಾ ತೋಟಗಳು, ಹಿತಕರವಾದ ವಾತಾವರಣ, ಪರಿಸರದಲ್ಲಿ ತಾಜಾತನದ ಅನುಭವ ಇವೆಲ್ಲವುಗಳನ್ನು ಸೇರಿಸಿ ಒಂದೆಡೆ ಪಸರಿಸಲಾಗಿರುವ ಗಿರಿಧಾಮವೆ ಮುನ್ನಾರ್. ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಸುಂದರ ಗಿರಿಧಾಮಗಳ ಪೈಕಿ ಒಂದಾಗಿರುವ ಮುನ್ನಾರ್ ಗಿರಿಶಿಖರಗಳು, ಕಣಿವೆಗಳು ಹಾಗು ಸುಂದರವಾದ ಕೆರೆಗಳಿಂದಾಗಿ ಜನಪ್ರಿಯವಾಗಿದೆ.
ಚಿತ್ರಕೃಪೆ: Bimal K C

ಕೊಡೈಕೆನಲ್:
"ಗಿರಿಧಾಮಗಳ ರಾಜಕುಮಾರಿ" ಎಂತಲೂ ಸಂಬೋಧಿಸಲ್ಪಡುವ ಕೊಡೈಕೆನಲ್ ಒಂದು ಸುಂದರವಾದ ಪ್ರವಾಸಿ ಸ್ಥಳವಾಗಿದೆ. "ಕಾಡಿನ ಉಡುಗೊರೆ" ಎಂಬ ಅರ್ಥ ನೀಡುವ ಈ ಊರಿನ ಹೆಸರು ನಿಜವಾಗಿಯೂ ಹಾಗೆ ಕಂಗೋಳಿಸುತ್ತದೆ. ಔಪಚಾರಿಕತೆಗೆ ಹೆಸರಾಗಿರುವ ಈ ಸ್ಥಳವು ಮಹಿಳಾ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ.
ಚಿತ್ರಕೃಪೆ: Wikitom2

ದಿವೀಯಾಗರ್:
ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಶ್ರೀವರ್ಧನ ತಾಲೂಕಿನಲ್ಲಿದೆ ಈ ಸುಂದರ ಕಡಲ ತೀರದ ನಗರ. ಪಕ್ಕದ ಶ್ರೀವರ್ಧನ ಹಾಗು ಹರಿಹರೇಶ್ವರ ಪ್ರದೇಶದ ವಾಸಿಗಳಿಗೆ ದಿವೀಯಾಗರ್ ಒಂದು ಜನಪ್ರಿಯವಾದ ಪ್ರವಾಸಿ ಆಕರ್ಷಣೆಯಾಗಿದೆ. ಅಲ್ಲದೆ ಈ ಕಡಲ ತೀರದಲ್ಲಿ ಸಮುದ್ರ ಆಮೆಗಳು ಮೊಟ್ಟ್ಯಿಡುತ್ತವೆ ಹಾಗು ಬಳಿಯಲ್ಲಿರುವ ಹರಿಹರೇಶ್ವರದಲ್ಲಿ ಡಾಲ್ಫಿನ್ ಮೀನುಗಳನ್ನೂ ಸಹ ಕಾಣಬಹುದು.
ಚಿತ್ರಕೃಪೆ: Pankaj Dhande

ಊಟಿ:
ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ. ದಕ್ಷಿಣ ಭಾರತದ ಅತಿ ಹೆಚ್ಚು ಪ್ರವಾಸಿಗರು ಈ ಪಟ್ಟಣಕ್ಕೆ ಭೇಟಿಕೊಡುತ್ತಿರುತ್ತಾರೆ. ಈ ಪಟ್ಟಣವು ತಮಿಳು ನಾಡು ರಾಜ್ಯದ ನೀಲಗಿರಿ ಜಿಲ್ಲೆಯಲ್ಲಿ ನೆಲೆಗೊಂಡಿದೆ.
ಚಿತ್ರಕೃಪೆ: Ghost Particle

ಪಾಂಡಿಚೆರಿ:
ದಕ್ಷಿಣ ಭಾರತದ ಒಂದು ಉತ್ತಮ ಪ್ರವಾಸಿ ಸ್ಥಳವಾಗಿರುವ ಪಾಂಡಿಚೆರಿಯು ದೇಶದ ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದಾಗಿದೆ. ವಸಾಹತುಶಾಹಿ ಕಟ್ಟಡಗಳು, ದೇವಾಲಯಗಳು, ಚರ್ಚುಗಳು ಹಾಗು ಕಡಲ ತೀರಗಳಿಂದಾಗಿ ಈ ಸ್ಥಳವು ಹೆಚ್ಚು ಜನಪ್ರಿಯವಾಗಿದೆ.
ಚಿತ್ರಕೃಪೆ: Aviad2001

ವೈಜಾಗ್:
ವೈಜಾಗ್ ಅಥವಾ ವಿಶಾಖಾಪಟ್ಟಣವನ್ನು "ಹಣೆಬರಹದ ನಗರ (ಸಿಟಿ ಆಫ್ ಡೆಸ್ಟಿನಿ)" ಹಾಗು "ಪೂರ್ವ ಕರಾವಳಿಗಳ ಗೋವಾ" ಎಂದು ಸಂಬೋಧಿಸಲಾಗಿದೆ. ಇಲ್ಲಿನ ಬೆಟ್ಟಗುಡ್ಡಗಳು, ಸುಂದರ ಭೂದೃಶ್ಯಾವಳಿಗಳು ಇದನ್ನು ಒಂದು ಗಮ್ಯ ಪ್ರವಾಸಿ ಸ್ಥಾನವನ್ನಾಗಿ ಮಾಡಿದೆ. ಭಾರತೀಯ ಸೇನೆಯ ಪೂರ್ವ ಭಾಗದ ನೌಕಾದಳದ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಪಟ್ಟಣದಲ್ಲಿ ಕರಾವಳಿ ಭದ್ರತಾಪಡೆಯ ಹಲವು ಕಚೇರಿಗಳನ್ನು ಕಾಣಬಹುದು.
ಚಿತ್ರಕೃಪೆ: Sekharyeeti

ದಾರ್ಜೀಲಿಂಗ್:
ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಂಡುಬರುವ ಮಹಾಭಾರತ ಪರ್ವತ ಶ್ರೇಣಿ ಅಥವಾ ಲೆಸ್ಸರ್ ಹಿಮಾಲಯದಲ್ಲಿ ಸ್ಥಿತವಿರುವ ದಾರ್ಜೀಲಿಂಗ್ ಎಂಬ ಮುದ್ದಾದ ಪುಟಾಣಿ ಪ್ರದೇಶದಲ್ಲಿ ಸುವಾಸನೆಯುಕ್ತ ಬಿಸಿ ಬಿಸಿ ಚಹಾ ಕುಡಿದರೆ...ಸಾಕು ಒಂದೆ ಒಂದು ಕ್ಷಣದಲ್ಲಿ ನಿಮ್ಮ ಮನದ ಎಲ್ಲ ಒತ್ತಡಗಳು ಮಂಗಮಾಯ! ಹೇಗೆ ಅಂತಿರಾ? ಹೌದು ಇಲ್ಲಿ ಬೆಳೆಯಲಾಗುವ ಚಹಾ ಗಿಡಗಳ ಮಹಿಮೆಯೆ ಹಾಗೆ. ಅಷ್ಟೆ ಅಲ್ಲ ಈ ಗಿರಿಧಾಮದಲ್ಲಿ ಕೂ ಎಂದು ಕೂಗುತ್ತ, ಚುಕು ಬುಕು ಎಂದು ಚಲಿಸುವ ದಾರ್ಜೀಲಿಂಗ್ ಹಿಮಾಲಯನ್ ರೈಲು ಸಹ ಒಂದು ವಿನೂತನವಾದ ಆನಂದಮಯ ಅನುಭವವನ್ನು ಕರುಣಿಸುತ್ತದೆ. ಈ ಸ್ಥಳದ ಕುರಿತು ಹೆಚ್ಚು ತಿಳಿಯಿರಿ.
ಚಿತ್ರಕೃಪೆ: Judith

ಪುರಿ:
ನಾಲ್ಕು ಪವಿತ್ರ ಧಾಮಗಳಲ್ಲಿ ಒಂದಾಗಿರುವ ಒಡಿಶಾ ರಾಜ್ಯದಲ್ಲಿರುವ ಪುರಿಯನ್ನು ಜಗನ್ನಾಥ ಪುರಿ ಎಂತಲೂ ಕೂಡ ಕರೆಯಲಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ನೆಲೆಸಿರುವ ಈ ಕಡಲ ನಗರಿಯಲ್ಲಿ ಈಜಾಡಬಹುದಾದ ಹಲವು ಉತ್ತಮ ಕಡಲ ತೀರಗಳನ್ನು ಕಾಣಬಹುದು. ಇಲ್ಲಿನ ಕಡಲ ತೀರಗಳು ಸುಂದರವಾದ ಸೂರ್ಯೋದಯ ಹಾಗು ಸೂರ್ಯಾಸ್ತದ ನೋಟಗಳಿಗೂ ಕೂಡ ಪ್ರಸಿದ್ಧವಾಗಿವೆ.
ಚಿತ್ರಕೃಪೆ: Lovedimpy


Click it and Unblock the Notifications




















