• Follow NativePlanet
Share
» »ಮನಃಶಾಂತಿಗೆ ವಿಶ್ವ ಶಾಂತಿಯೆಡೆಗೆ ಪಯಣ

ಮನಃಶಾಂತಿಗೆ ವಿಶ್ವ ಶಾಂತಿಯೆಡೆಗೆ ಪಯಣ

Posted By: Divya

ನಮ್ಮ ಭಾವನೆಗಳನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಬೇಕು? ಪರರಿಗೆ ತೊಂದರೆಯಾಗದಂತೆ ಹೇಗೆ ಇರಬೇಕು? ಜೀವನದ ಸಂದಿಗ್ಧ ಪರಿಸ್ಥಿತಿಯನ್ನು ನಿವಾರಿಸುವುದು ಹೇಗೆ ಎಂಬುದನ್ನು ಮಹಾಭಾರತ ಓದಿ ತಿಳಿದುಕೊಳ್ಳಬೇಕು. ಧರ್ಮನಿಷ್ಠರಾಗಿ ನಮ್ಮ ಕಾರ್ಯವನ್ನು ಹೇಗೆ ಮಾಡಬೇಕು ಎನ್ನುವ ಸಾರಾಂಶವನ್ನು ಮಹಾಭಾರತದಲ್ಲಿ ಕೂಲಂಕುಶವಾಗಿ ಹೇಳಲಾಗಿದೆ. ಇಂತಹ ವಿಚಾರವನ್ನು ಕೇವಲ ಮಹಾಭಾರತದಲ್ಲಷ್ಟೇ ಅಲ್ಲಾ ಆಶ್ರಮಕ್ಕೆ ಹೋದರೂ ಇವುಗಳ ಪರಿಚಯವಾಗುತ್ತದೆ... ಅರೇ! ಇದೇನಿದು ಅಂತೀರಾ?

ನಿಜ, ಈ ಆಶ್ರಮದಲ್ಲಿ ಜೀವನಕ್ಕೆ ಬೇಕಾದ ಪ್ರಮುಖ ಅಂಶಗಳನ್ನು ಗೋಡೆಯ ಮೇಲೆ ಬರೆಯಲಾಗಿದೆ. ಒಮ್ಮೆ ಇವುಗಳನ್ನು ನೋಡಿದರೆ ಮಹಾಭಾರತದ ಪರಿಚಯ ನಿಮಗಾಗುತ್ತದೆ, ಜೀವನವೂ ಸಾರ್ಥಕವಾಗುತ್ತದೆ. "ವಿಶ್ವ ಶಾಂತಿ ಆಶ್ರಮ'ವು ಬೆಂಗಳೂರು- ತುಮಕೂರು ಹೆದ್ದಾರಿಯಲ್ಲಿದೆ. ನೆಲಮಂಗಲ ವ್ಯಾಪ್ತಿಯಲ್ಲಿರುವ ಈ ಆಶ್ರಮ ಬೆಂಗಳೂರು ಹೃದಯ ಭಾಗದಿಂದ 25 ಕಿ.ಮೀ. ದೂರದಲ್ಲಿದೆ.

Vishwa Shanthi Ashram

20 ಎಕರೆ ವಿಸ್ತೀರ್ಣದಲ್ಲಿರುವ ಆಶ್ರಮದ ಸುತ್ತಲು ಹಸಿರು ಸಿರಿಯ ಉದ್ಯಾನವನ, ಅಷ್ಟಲಕ್ಷ್ಮಿ ಹಾಗೂ ಗಾಯಿತ್ರಿ ದೇವಿಯ ಮಂದಿರವಿದೆ. ಪ್ರವೇಶ ದ್ವಾರದಲ್ಲಿ ಭವ್ಯವಾದ ವಿಜಯ ವಿಠ್ಠಲ ಪ್ರತಿಮೆ ಸ್ವಾಗತಿಸುತ್ತದೆ. ಒಳಭಾಗದಲ್ಲಿ ಧ್ಯಾನ ಮಂದಿರ, ಮಂದಿರದ ಗೋಡೆಯ ಮೇಲೆ ಭಗವದ್ಗೀತೆಯ ಬೋಧನೆಗಳನ್ನು ಬರೆಯಲಾಗಿದೆ. ಎತ್ತರವಾದ ವಿಶ್ವರೂಪ ದರ್ಶನದ ಮೂರ್ತಿಯು ಎಲ್ಲರ ಕಣ್ಮನ ಸೆಳೆಯುತ್ತದೆ. ಮಕ್ಕಳಿಗಾಗಿ ಪುಟಾಣಿಗಳ ಉದ್ಯಾನವೂ ಇಲ್ಲಿದೆ.

Vishwa Shanthi Ashram

ಸಂಸ್ಕೃತ, ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಭಗವದ್ಗೀತೆಯ ಸಾರಾಂಶವಿದೆ. ನೂರಾರು ಮಂದಿ ಒಮ್ಮೆಲೇ ಕುಳಿತು ಧ್ಯಾನ ಮಾಡುವಷ್ಟು ವಿಶಾಲವಾದ ಸ್ಥಳಾವಕಾಶ ಇರುವುದು ಈ ಆಶ್ರಮದ ವಿಶೇಷ. ಮಹಾಭಾರತದ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯ ಉಪದೇಶ ಮಾಡುತ್ತಿರುವ ಸನ್ನಿವೇಶದ ಪ್ರತಿಮೆಯು ನಯನಮನೋಹರವಾಗಿದೆ. ಮಂದಿರದ ಒಳಗೆ ಕೂರ್ಮ, ವರಹ, ನರಸಿಂಹ, ವಾಮನ, ಪರಷುರಾಮ, ಶ್ರೀರಾಮ, ಶ್ರೀಕೃಷ್ಣ, ಬಲರಾಮ ಹಾಗೂ ಕಲ್ಕಿಯ ಅವತಾರದ ಮುಖಗಳನ್ನು ಹೊಂದಿರುವ ವಿಶ್ವ ರೂಪದ ಮೂರ್ತಿಯು ಮನಸ್ಸಿಗೆ ನಿರಾಳ ಅನುಭವ ನೀಡುತ್ತದೆ.

Vishwa Shanthi Ashram

ಸುತ್ತಲು ಇರುವ ಹಸಿರು ಸಿರಿ ಹಾಗೂ ಶಾಂತವಾದ ವಾತಾವರಣ ವಾರದ ರಜೆಯ ಆಕರ್ಷಣೆಗೆ ಒಂದು ವಿಶೇಷ ಸ್ಥಳ. ಇದು ಸಂತ ಕೇಶವದಾಸರ ಕನಸಿನ ಕೂಸು. ದೈವ ಭಕ್ತರಾದ ಇವರು 50 ಧಾರ್ಮಿಕ ಪುಸ್ತಕಗಳನ್ನು ಬರೆದು, 6000 ಕೀರ್ತನೆಗಳ ಸಂಯೋಜನೆ ಮಾಡಿದ್ದಾರೆ. ಸರ್ವಧರ್ಮವನ್ನು ಸಮಾನವಾಗಿ ಕಾಣುವ ಇವರು ಧಾರ್ಮಿಕ ಕೆಲಸ ಕಾರ್ಯಗಳಿಗೆ ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದಾರೆ. ಈ ಆಶ್ರಮದ ಪ್ರವೇಶಕ್ಕೆ ಯಾವುದೇ ಶುಲ್ಕವಿಲ್ಲ. ಪ್ರವಾಸಿಗರು ಯಾವುದೇ ಗೊಂದಲವಿಲ್ಲದೆ ಆರಾಮವಾಗಿ ಇಲ್ಲಿಗೆ ಬರಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ