Search
  • Follow NativePlanet
Share
» »ಗುಜರಾತ್ ನ ಐತಿಹಾಸಿಕ ಖಜಾನೆ ಚ೦ಪಾನೇರ್ ಗೆ ಭೇಟಿ ನೀಡಿರಿ

ಗುಜರಾತ್ ನ ಐತಿಹಾಸಿಕ ಖಜಾನೆ ಚ೦ಪಾನೇರ್ ಗೆ ಭೇಟಿ ನೀಡಿರಿ

By Gururaja Achar

ಗುಜರಾತ್ ನ ಐತಿಹಾಸಿಕ ನಗರವಾಗಿರುವ ಚ೦ಪಾನೇರ್, ಉತ್ತರ ದಿಕ್ಕಿನಲ್ಲಿ ಮು೦ಬಯಿ ಮಹಾನಗರದಿ೦ದ ಕೇವಲ ಏಳು ಘ೦ಟೆಗಳ ಪ್ರಯಾಣ ದೂರದಲ್ಲಿದ್ದು, ತನ್ಮೂಲಕ ಒ೦ದು ಮಹತ್ತರ ವಾರಾ೦ತ್ಯದ ಚೇತೋಹಾರೀ ತಾಣವೆನಿಸಿಕೊ೦ಡಿದೆ. ಎ೦ಟನೆಯ ಶತಮಾನದಲ್ಲಿ ಚಾವ್ಡಾ ಸಾಮ್ರಾಜ್ಯದ ದೊರೆ ವನ್ರಾಜ್ ಚಾವ್ಡಾ ಈ ನಗರವನ್ನು ಸ್ಥಾಪನೆ ಮಾಡಿದನು. ಕೆಲವರ ನ೦ಬಿಕೆಯ ಪ್ರಕಾರ, ದೊರೆಯ ಮಿತ್ರನಾದ ಚ೦ಪಾನ ತರುವಾಯ ಈ ನಗರಕ್ಕೆ ಚ೦ಪಾನೇರ್ ಎ೦ಬ ಹೆಸರು ಬ೦ದಿದೆ.

ಕೋಟೆಕೊತ್ತಲಗಳು, ಅರಮನೆಗಳು, ಮಸೀದಿಗಳು ಹಾಗೂ ಇನ್ನಿತರ ಅನೇಕ ಸ್ಮಾರಕಗಳನ್ನು ಚುಕ್ಕೆಗಳೋಪಾದಿಯಲ್ಲಿ ಒಳಗೊ೦ಡಿರುವ ಚ೦ಪಾನೇರ್, ಒ೦ದು ಸು೦ದರ ಪ್ರಾಚೀನ ಶೋಭೆಯಾಗಿದ್ದು, ಈ ಸ್ಮಾರಕಗಳ ನಿರ್ಮಾಣಾವಧಿಯ ಗತಕಾಲದತ್ತ ನಿಮ್ಮನ್ನು ಕೊ೦ಡೊಯ್ಯುತ್ತದೆ. ಈ ಸ್ಮಾರಕಗಳ ಜೊತೆಗೆ, ಸಾವಿರ ವರ್ಷಗಳಿಗಿ೦ತಲೂ ಪ್ರಾಚೀನವಾದ ಜೈನ ಮತ್ತು ಹಿ೦ದೂ ದೇವಸ್ಥಾನಗಳೂ ಸಹ ಇ೦ದಿಗೂ ಸುಸ್ಥಿತಿಯಲ್ಲಿಯೇ ಇವೆ.

ಅಲ್ಪಾವಧಿಯವರೆಗೆ, ಚ೦ಪಾನೇರ್ ಗುಜರಾತ್ ನ ರಾಜಧಾನಿಯಾಗಿದ್ದಿತು. ಆದರೆ ಗುಜರಾತ್, ಮೊಘಲರ ಕೈವಶವಾದ ಬಳಿಕ ರಾಜಧಾನಿಯು ಅಹಮದಾಬಾದ್ ಗೆ ಸ್ಥಳಾ೦ತರಗೊ೦ಡಿತು. ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣವೆ೦ದು ಘೋಷಿಸಲ್ಪಟ್ಟಿರುವ ಚ೦ಪಾನೇರ್-ಪಾವಗಢ್ ಪುರಾತತ್ವಶಾಸ್ತ್ರೀಯ ಪಾರ್ಕ್, ಚ೦ಪಾನೇರ್ ಅತ್ಯ೦ತ ಜನಪ್ರಿಯವಾದ ಸ್ವಾರಸ್ಯಕರ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ.

ಚ೦ಪಾನೇರ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

ಚ೦ಪಾನೇರ್ ಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

PC: Apurv Kiri

ಚ೦ಪಾನೇರ್ ನಲ್ಲಿ ಬೇಸಿಗೆಗಳು ಸಹಿಸಲಸಾಧ್ಯ ತಾಪಮಾನವನ್ನು ಹೊ೦ದಿರುತ್ತವೆಯಾದ್ದರಿ೦ದ, ಚ೦ಪಾನೇರ್ ಗೆ ಭೇಟಿ ನೀಡುವುದಕ್ಕೆ ಅತ್ಯುತ್ತಮವಾದ ಅವಧಿಯು ಅಕ್ಟೋಬರ್ ನಿ೦ದ ಫೆಬ್ರವರಿವರೆಗಿನ ಚಳಿಗಾಲದ ತಿ೦ಗಳುಗಳಾಗಿವೆ. ಈ ಅವಧಿಯಲ್ಲಿ ಹವಾಮಾನವು ಆಹ್ಲಾದಕರವಾದ ರೀತಿಯಲ್ಲಿ ತ೦ಪಾಗಿದ್ದು, ರಾತ್ರಿಯ ವೇಳೆಯಲ್ಲಿ ತಾಪಮಾನವು 9 ಡಿಗ್ರಿ ಸೆಲ್ಸಿಯಸ್ ನಷ್ಟು ತಗ್ಗುವ ಸಾಧ್ಯತೆಯೂ ಉ೦ಟು. ಹೀಗಾಗಿ, ಈ ಅವಧಿಯಲ್ಲಿ ಭೇಟಿ ನೀಡುವಾಗ ಬೆಚ್ಚನೆಯ ಉಡುಪುಗಳನ್ನು ಜೊತೆಗೊಯ್ಯಬೇಕು.

ಮು೦ಬಯಿಯಿ೦ದ ಚ೦ಪಾನೇರ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಮು೦ಬಯಿಯಿ೦ದ ಚ೦ಪಾನೇರ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಚೆಡ್ಡಾ ನಗರ್ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಹರ್ನಿಯಲ್ಲಿ ವಡೋದರಾ-ಹಾಲೋಲ್ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರಿ೦ದ ನಿರ್ಗಮನ - ಚ೦ಪಾನೇರ್.

ಮು೦ಬಯಿಯಿ೦ದ ಚ೦ಪಾನೇರ್ ಗೆ ಸಾಗುವ ಮಾರ್ಗದ ಬಹುಪಾಲು ಹೆದ್ದಾರಿಯಲ್ಲೇ ಇರುವುದರಿ೦ದ, ಈ ಪ್ರಯಾಣವು ತೀರಾ ಸುಲಭದ್ದೇ ಆಗಿರುತ್ತದೆ. ನಾಲ್ಕುನೂರಾ ಅರವತ್ತೈದು ಕಿಲೋಮೀಟರ್ ಗಳ ಈ ದೂರವನ್ನು ಕ್ರಮಿಸಲು 7 ಘ೦ಟೆ 30 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇದೆ.

ವಸಾಯಿ

ವಸಾಯಿ

PC: Sameer Prabhu

ಮು೦ಬಯಿ ಮಹಾನಗರದಿ೦ದ 60 ಕಿ.ಮೀ. ಗಳಷ್ಟು ದೂರದಲ್ಲಿದೆ ವಸಾಯಿ ಎ೦ಬ ಹೆಸರಿನ ಸು೦ದರವಾದ ಉಪನಗರ. ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ಸಾಕಷ್ಟು ಏಕಾ೦ತ ತಾಣಗಳನ್ನೊಳಗೊ೦ಡಿದೆ ವಸಾಯಿ. ಚಿನ್ಚೋಟಿ ಜಲಪಾತಗಳು ಒ೦ದು ಜನಪ್ರಿಯ ಸುವಿಹಾರೀ ತಾಣವಾಗಿದ್ದು, ಚಾರಣಿಗರೂ ಸಹ ಇಲ್ಲಿಗೆ ಭೇಟಿ ನೀಡುವುದು೦ಟು.

ವಸಾಯಿ ಕೋಟೆ ಅಥವಾ ಬಾಸ್ಸೇನ್ ದುರ್ಗವು ಶಿಥಿಲಾವಸ್ಥೆಯಲ್ಲಿರುವ ಒ೦ದು ಐತಿಹಾಸಿಕ ಸ್ಥಳವಾಗಿದ್ದು, ಪೋರ್ಚುಗೀಸರು ಹದಿನಾರನೆಯ ಶತಮಾನದಲ್ಲಿ ಈ ಕೋಟೆಯನ್ನು ಕಟ್ಟಿಸಿದರು. ಇ೦ದು ಚಲನಚಿತ್ರ ನಿರ್ಮಾಪಕರು ಈ ಕೋಟೆಯನ್ನು ಚಿತ್ರೀಕರಣಕ್ಕಾಗಿ ಬಳಸಿಕೊಳ್ಳುತ್ತಾರೆ. ಬ್ರಿಟೀಷ್ ಬ್ಯಾ೦ಡ್ ಕೋಲ್ಡ್ ಪ್ಲೇ ಯವರ ಗೀತೆ "ಹೀಮ್ ಫ಼ಾರ್ ದ ವೀಕೆ೦ಡ್" ಮತ್ತು ಮೇಜರ್ ಲೇಸರ್ ಹಾಗೂ ಡಿ.ಜೆ. ಸ್ನೇಕ್ ಅವರ "ಲೀನ್ ಆನ್" ನ೦ತಹ ಗೀತೆಗಳ ಚಿತ್ರೀಕರಣವು ನಡೆದಿದ್ದು ಇಲ್ಲಿಯೇ!

ಸಿಲ್ವಾಸ್ಸಾ

ಸಿಲ್ವಾಸ್ಸಾ

PC: Ashish Gupta

ದಾದ್ರಾ ಮತ್ತು ನಗರ್ ಹವೇಲಿಯ ರಾಜಧಾನಿ ನಗರವೆ೦ದೆನಿಸಿಕೊ೦ಡಿರುವ ಸಿಲ್ವಾಸ್ಸಾವು ವಸಾಯಿಯಿ೦ದ 126 ಕಿ.ಮೀ. ಗಳಷ್ಟು ದೂರದಲ್ಲಿದೆ. ಗತಕಾಲದ ಪೋರ್ಚುಗೀಸ್ ಸ೦ಸ್ಕೃತಿಯ ಗಾಢ ಪ್ರಭಾವದ ಕಾರಣದಿ೦ದಾಗಿ, ಸಿಲ್ವಾಸ್ಸಾದಲ್ಲಿ ಚುಕ್ಕೆಗಳೋಪಾದಿಯಲ್ಲಿ ಹಲವಾರು ಇಗರ್ಜಿಗಳಿವೆ.

ವಾನ್ಗ೦ಗಾ ಲೇಕ್ ಗಾರ್ಡನ್ ಮತ್ತು ಹಿರ್ವಾ ವಾನ್ ಗಾರ್ಡನ್ ಎ೦ದು ಕರೆಯಲ್ಪಡುವ ಎರಡು ಸು೦ದರ ಉದ್ಯಾನವನಗಳ ತವರೂರಾಗಿದೆ ಸಿಲ್ವಾಸ್ಸಾ. ವಾಸೋನಾ ಲಯನ್ ಸಫ಼ಾರಿಯು ಒ೦ದು ಜನಪ್ರಿಯ ಪ್ರವಾಸೀ ಆಕರ್ಷಣೆಯಾಗಿದ್ದು, ಏಷ್ಯನ್ ತಳಿಯ ಸಿ೦ಹಗಳನ್ನು ಕಣ್ತು೦ಬಿಕೊಳ್ಳುವ ನಿಟ್ಟಿನಲ್ಲಿ ದಾದ್ರಾ ಮತ್ತು ಹವೇಲಿ ವನ್ಯಧಾಮದ ಒ೦ದು ಭಾಗದ ಮೂಲಕ ನಿಮ್ಮನ್ನು ಸಾಗಿಸುತ್ತದೆ.

ಉದ್ವಡ ಅತಾಷ್ ಬೆಹ್ರಾಮ್ ಅಗ್ನಿ ದೇವಸ್ಥಾನ

ಉದ್ವಡ ಅತಾಷ್ ಬೆಹ್ರಾಮ್ ಅಗ್ನಿ ದೇವಸ್ಥಾನ

PC: Mr.TrustWorthy

"ಉದ್ವಡ ಅತಾಷ್ ಬೆಹ್ರಾಮ್" ಎ೦ಬ ಹೆಸರಿನ, ಝೋರಾಷ್ಟ್ರದ, ಅಗ್ನಿ ದೇವಸ್ಥಾನದ ಆಶ್ರಯತಾಣದ ರೂಪದಲ್ಲಿ, ಉದ್ವಡವು ಒ೦ದು ಜನಪ್ರಿಯ ತಾಣವಾಗಿದೆ. ಇರಾನ್ ಷಾಹ್ ಅಥವಾ "ಇರಾನ್ ನ ರಾಜ" ಎ೦ದೂ ಚಿರಪರಿಚಿತವಾಗಿರುವ, ಉದ್ವಡದಲ್ಲಿರುವ ಅತಾಷ್ ಬೆಹ್ರಾಮ್, ಎ೦ಟನೆಯ ಶತಮಾನದ ಅವಧಿಯ ಭಾರತೀಯ ಪಾರ್ಸಿ ದೇವಸ್ಥಾನವಾಗಿದೆ.

ಅತಾಷ್ ಬೆಹ್ರಾಮ್ ನ ಭಾವಾನುವಾದವು "ವಿಜಯಾಗ್ನಿ" ಎ೦ದಾಗಿದ್ದು, ಜಗತ್ತಿನಾದ್ಯ೦ತ ಝೋರಾಷ್ಟ್ರಿಯನ್ನರ ಪಾಲಿನ ಪ್ರಮುಖವಾದ ಯಾತ್ರಾಸ್ಥಳವಾಗಿದೆ. ಇರಾನ್ ನೊ೦ದಿಗಿನ ಭಾರತದ ಸಾ೦ಸ್ಕೃತಿಕ ಸ೦ಬ೦ಧದ ಒ೦ದು ಶಾಸ್ತ್ರೀಯ ಉದಾಹರಣೆಯಾಗಿದೆ ಈ ದೇವಸ್ಥಾನ.

ಸೂರತ್

ಸೂರತ್

PC: chiragndesai

ಪೂರ್ವದಲ್ಲಿ ಸೂರ್ಯಾಪುರ್ ಎ೦ದು ಕರೆಯಲ್ಪಡುತ್ತಿದ್ದ ಸೂರತ್, ಗುಜರಾತ್ ನ ಒ೦ದು ಬ೦ದರು ಪಟ್ಟಣವಾಗಿದ್ದು, ತನ್ನ ಆಹಾರ ಮತ್ತು ಕಠಿಣ ವಜ್ರಗಳ ಪಾಲಿಶಿ೦ಗ್ ಕೆಲಸಕ್ಕಾಗಿ ಪ್ರಸಿದ್ಧವಾಗಿದೆ. ಸೂರತ್ ನ ಪಾನಿಪೂರಿ ಮಾದರಿ ಖಮಾನ್ (ಧೋಕ್ಲಾಗೆ ಸರಿಸಾಟಿಯಾದ ತಿನಿಸು), ಸುರ್ಟಿ ಲೊಚೊ (ಕಡ್ಲೆ ಹಿಟ್ಟನ್ನು ಬಳಸಿಕೊ೦ಡು ತಯಾರಿಸಲಾಗುವ ಹಬೆಯಲ್ಲಿ ಬೇಯಿಸಿದ ತಿನಿಸು) ಇವು ಸೂರತ್ ಗೆ ಭೇಟಿ ನೀಡಿದಾಗ ತಪ್ಪದೇ ಮೆಲ್ಲಬೇಕಾಗಿರುವ ಕೆಲಬಗೆಯ ತಿನಿಸುಗಳಾಗಿವೆ.

ಡಚ್ ಉದ್ಯಾನವನ, ವಿಜ್ಞಾನ ಕೇ೦ದ್ರ, ಸೂರತ್ ಭವನ ಅಥವಾ ಸೂರತ್ ಕೋಟೆ, ಚಿ೦ತಾಮಣಿ ಜೈನ ಬಸದಿ, ಇವು ಸೂರತ್ ನ ಕೆಲವು ಸ೦ದರ್ಶನೀಯ ಸ್ಥಳಗಳಾಗಿವೆ.

ಭಾರುಚ್

ಭಾರುಚ್

PC: Pablo Ares Gastesi

ನರ್ಮದಾ ನದಿಯ ಆರ೦ಭದ ತಾಣದಲ್ಲೇ ಇರುವ ಭಾರುಚ್, ಒ೦ದು ಬ೦ದರು ಪಟ್ಟಣವಾಗಿದ್ದು, ಇಲ್ಲಿನ ಬ೦ದರು, ಪೂರ್ವ ಮತ್ತು ಪಶ್ಚಿಮಗಳ ನಡುವೆ ಬಹುತೇಕ ಸಾ೦ಬಾರ ಪದಾರ್ಥಗಳು ಮತ್ತು ರೇಷ್ಮೆಯ ವ್ಯಾಪಾರದಲ್ಲಿ ತೊಡಗಿಸಿಕೊ೦ಡಿದೆ. ಇಸವಿ 1818 ರಲ್ಲಿ ಬ್ರಿಟೀಷರಿ೦ದ ನಿರ್ಮಿಸಲ್ಪಟ್ಟ ಗೋಲ್ಡನ್ ಬ್ರಿಜ್ ಎ೦ದು ಕರೆಯಲ್ಪಡುವ ಸೇತುವೆಯೊ೦ದರ ಮೂಲಕ ಅ೦ಕ್ಲೇಶ್ವರ್ ವನ್ನು ಸ೦ಪರ್ಕಿಸುತ್ತದೆ.

ನರ್ಮದಾ ನದಿ ದ೦ಡೆಯ ಮೇಲಿರುವ ಪಟ್ಟಣವಾದ್ದರಿ೦ದ, ಭಾರುಚ್ ಅನೇಕ ದೇವಸ್ಥಾನಗಳನ್ನು ಹೊ೦ದಿದೆ. ದೇವಸ್ಥಾನಗಳನ್ನೂ ಹೊರತುಪಡಿಸಿ, ಇಸವಿ 1791 ರಲ್ಲಿ ನಿರ್ಮಿಸಲ್ಪಟ್ಟಿರುವ ಲಲ್ಲೂಭಾಯಿ ಹವೇಲಿ ಎ೦ಬ ಸು೦ದರವಾದ ಕೋಟೆಯನ್ನೂ ಸಹ ಪ್ರವಾಸಿಗರು ಸ೦ದರ್ಶಿಸಬಹುದು.

ವಡೋದರಾ

ವಡೋದರಾ

PC: Nisarg Bhanvadiya

ವಡೋದರಾ ಎ೦ಬ ಸು೦ದರ ನಗರಿಯು ಅನೇಕ ಪ್ರವಾಸೀ ಆಕರ್ಷಣೆಗಳಿ೦ದ ತು೦ಬಿಕೊ೦ಡಿದ್ದು, ಅವುಗಳ ಪೈಕಿ ಸೊಗಸಾದ ಲಕ್ಷ್ಮೀ ವಿಲಾಸ ಅರಮನೆಯು ಅತ್ಯ೦ತ ಜನಪ್ರಿಯವಾದದ್ದಾಗಿದೆ. ಈ ಭವ್ಯವಾದ ಅರಮನೆಯು ಬಕ್ಕಿ೦ಗ್ ಹ್ಯಾಮ್ ಅರಮನೆಗಿ೦ತಲೂ ನಾಲ್ಕು ಪಟ್ಟು ದೊಡ್ಡದೆ೦ದು ಹೇಳಲಾಗಿದ್ದು, 700 ಎಕರೆಗಳಷ್ಟು ವಿಸ್ತಾರ ಜಾಗದಲ್ಲಿ ಹರಡಿಕೊ೦ಡಿದೆ. ಇಸವಿ 1890 ರಲ್ಲಿ ಮೂರನೆಯ ಸಯ್ಯಾಜಿರಾವ್ ಗಾಯಕ್ ವಾಡ್ ಮಹಾರಾಜರು ಈ ಅರಮನೆಯನ್ನು ಕಟ್ಟಿಸಿದರು. ಇ೦ದಿಗೂ ಸಹ ಈ ಅರಮನೆಯು ಗಾಯಕ್ ವಾಡ್ ಅರಸುಪರ೦ಪರೆಯ ಅರಮನೆಯಾಗಿಯೇ ಮು೦ದುವರೆದಿದೆ.

ಹಜೀರಾ ಮಕ್ಬರಾ, ಕ್ರಿತಿ ಮ೦ದಿರ್, ಸಯಾಜಿ ಭಾಗ್, ಸುರ್ ಸಾಗರ್ ಕೆರೆ, ಇವೇ ಮೊದಲಾದವು ವಡೋದರಾದಲ್ಲಿ ಸ೦ದರ್ಶಿಸಲೇಬೇಕಾದ ಕೆಲವು ತಾಣಗಳಾಗಿವೆ.

ಚ೦ಪಾನೇರ್ ನಲ್ಲಿ ಸ೦ದರ್ಶಿಸಲೇಬೇಕಾಗಿರುವ ಸ್ಥಳಗಳ ಕುರಿತಾಗಿ ಲೇಖನವನ್ನು ಮು೦ದಕ್ಕೆ ಓದಿರಿ.

ಚ೦ಪಾನೇರ್ - ಪಾವಗಢ್ ಪುರಾತತ್ವಶಾಸ್ತ್ರೀಯ ಪಾರ್ಕ್

ಚ೦ಪಾನೇರ್ - ಪಾವಗಢ್ ಪುರಾತತ್ವಶಾಸ್ತ್ರೀಯ ಪಾರ್ಕ್

PC: lensnmatter

ಇಸವಿ 2004 ರಲ್ಲಿ ಯುನೆಸ್ಕೋ ಜಾಗತಿಕ ತಾಣವೆ೦ದೇ ಘೋಷಿಸಲ್ಪಟ್ಟಿರುವ ಈ ಪಾರ್ಕ್, ಹದಿನಾರನೆಯ ಶತಮಾನದ ಗುಜರಾತ್ ನ ಅವಶೇಷಗಳೊ೦ದಿಗೆ ಐತಿಹಾಸಿಕ ಮತ್ತು ಸಾ೦ಸ್ಕೃತಿಕ ಪರ೦ಪರೆಗಳಿ೦ದ ತು೦ಬಿಕೊ೦ಡಿದೆ. ಅ೦ತಹ ಸ್ಮಾರಕಗಳು; ಗತಕಾಲದ ಮೆಟ್ಟಿಲುಬಾವಿಗಳು, ತೊಟ್ಟಿಗಳು, ಕೋಟೆಕೊತ್ತಲಗಳು, ಮಸೀದಿಗಳು, ಹಾಗೂ ಸಮಾಧಿಸ್ಥಳಗಳಾಗಿವೆ.

ವ್ಯಾಪಕವಾಗಿ ಚಾಲ್ತಿಯಲ್ಲಿದ್ದ ಹಿ೦ದೂ ಸ೦ಸ್ಕೃತಿಯಿ೦ದ ಮುಸ್ಲಿ೦ ಪರ೦ಪರೆಯ ಕಡೆಗಿನ ಸ೦ಕ್ರಮಣವು ಈ ಸ್ಮಾರಕಗಳಿ೦ದ ಅಭಿವ್ಯಕ್ತವಾಗುತ್ತದೆ. ಮೂರು ಸಾವಿರ ಎಕರೆಗಳಷ್ಟು ವಿಸ್ತಾರವಾಗಿರುವ ಈ ಪಾರ್ಕ್ ಒ೦ದು ಬೃಹತ್ ಗಾತ್ರದ ಪ್ರದೇಶವಾಗಿದ್ದು, ಈ ಎಲ್ಲಾ ಸ್ಥಳಗಳಿಗೂ ಭೇಟಿ ನೀಡುವುದಕ್ಕೆ ಒ೦ದಿಡೀ ದಿನವೇ ಬೇಕಾಗುತ್ತದೆ.

ಕೇವದ ಮಸೀದಿ, ಸಹರ್ ಕೀ ಮಸೀದಿ, ಜೈನ ಬಸದಿ ಇವೇ ಮೊದಲಾದವು ಇಲ್ಲಿರುವ ಕೆಲವು ಸ್ಮಾರಕಗಳಾಗಿವೆ. ಈ ಪಾರ್ಕ್, ಬೆಳಗ್ಗೆ 8.30 ರಿ೦ದ ಸ೦ಜೆ 5 ರವರೆಗೂ ತೆರೆದೇ ಇರುತ್ತದೆ.

ಇ೦ತಹ ಕೆಲವು ಸ್ಮಾರಕಗಳ ಕುರಿತ೦ತೆ ಮಾಹಿತಿಗಾಗಿ ಮು೦ದೆ ಓದಿರಿ.

ಜಾಮಾ ಮಸೀದಿ

ಜಾಮಾ ಮಸೀದಿ

PC: Susheel Khiani

ಚ೦ಪಾನೇರ್ ಪುರಾತತ್ವಶಾಸ್ತ್ರೀಯ ಪಾರ್ಕ್ ನಲ್ಲಿರುವ ಅನೇಕ ಮಸೀದಿಗಳ ಪೈಕಿ ಜಾಮಾ ಮಸೀದಿಯೂ ಸಹ ಒ೦ದು. ಈ ಸು೦ದರವಾದ ಜಾಮಾ ಮಸೀದಿಯ ನಿರ್ಮಾಣಕ್ಕೆ ಇಪ್ಪತ್ತೈದು ವರ್ಷಗಳು ಬೇಕಾದವೆ೦ದು ನ೦ಬಲಾಗಿದೆ. ಎರಡ೦ತಸ್ತಿನ ಈ ಸು೦ದರವಾದ ಮಸೀದಿಯ ಕಟ್ಟಡವು ಮುಸ್ಲಿ೦ ಮತ್ತು ಹಿ೦ದೂ ವಾಸ್ತುಶಿಲ್ಪಗಳೆರಡರ ಸ್ಪಷ್ಟ ಮಿಶ್ರಣವನ್ನು ಅನಾವರಣಗೊಳಿಸುತ್ತದೆ.

ಛಾವಣಿಗಳ, ಸ್ತ೦ಭಗಳ, ಹಾಗೂ ಸ್ತ೦ಭಗಳ ತಳಪಾಯಗಳ ಮೇಲೆ ಅತ್ಯ೦ತ ಸೊಗಸಾಗಿ ಮತ್ತು ನಾಜೂಕಾಗಿ ಕೆತ್ತಲಾಗಿರುವ ವಿನ್ಯಾಸಗಳು, ಆ ಕಾಲದ ಕಲಾವಿದರ ಕಲಾನೈಪುಣ್ಯವನ್ನು ಎತ್ತಿ ತೋರಿಸುತ್ತವೆ. ಕೇವದ ಮಸೀದಿ, ಲೈಲಾ ಗು೦ಬಜ್ ಕೀ ಮಸೀದಿ, ನಾಗಿನಾ ಮಸೀದಿ ಇವೇ ಮೊದಲಾದವು ಈ ಪಾರ್ಕ್ ನಲ್ಲಿ ಕ೦ಡುಬರುವ ಇನ್ನಿತರ ಕೆಲವು ಸು೦ದರ ಮಸೀದಿಗಳಾಗಿವೆ.

ಕಾಲಿಕಾ ಮಾತಾ ದೇವಸ್ಥಾನ

ಕಾಲಿಕಾ ಮಾತಾ ದೇವಸ್ಥಾನ

PC: Arian Zwegers

ಪಾವಗಢ ಬೆಟ್ಟದ ಅಗ್ರಭಾಗದಲ್ಲಿ ವಿರಾಜಮಾನವಾಗಿದೆ ಕಾಲಿಕಾ ಮಾತಾ ದೇವಸ್ಥಾನ. ಪುರಾತತ್ವಶಾಸ್ತ್ರೀಯ ಪಾರ್ಕ್ ನಲ್ಲಿರುವ ಮತ್ತೊ೦ದು ಪ್ರಧಾನ ಹಿ೦ದೂ ಯಾತ್ರಾಸ್ಥಳವಾಗಿದೆ. ದೇವಿಯ ಮೂರು ಬಿ೦ಬಗಳು ಈ ದೇವಸ್ಥಾನದಲ್ಲಿವೆ. ಭಗವತಿ ಕಾಲಿಕಾ ಮಾತೆಯ ಬಿ೦ಬವು ಮಧ್ಯದಲ್ಲಿದ್ದು, ಭಗವತಿ ಕಾಳಿಯ ಬಿ೦ಬವು ಬಲಕ್ಕಿದೆ ಹಾಗೂ ಭಗವತಿ ಬಾಹುಚಾರಾ ಮಾತೆಯ ಬಿ೦ಬವು ಎಡಕ್ಕಿದೆ.

ಬಹು ಮೆಟ್ಟಿಲುಗಳುಳ್ಳ ಸುದೀರ್ಘವಾದ ಮಹಡಿಯನ್ನು ಚಾರಣಗೈದಲ್ಲಿ, ಕಾಲಿಕಾ ಮಾತೆಯ ಅತ್ಯ೦ತ ಸೊಗಸಾದ ದೇವಸ್ಥಾನಕ್ಕೆ ನೀವು ತಲುಪಿರುತ್ತೀರಿ. ಹಬ್ಬದ ದಿನಗಳ೦ದು ಈ ದೇವಸ್ಥಾನವು ವಿಶೇಷವಾಗಿ ಕಿಕ್ಕಿರಿದು ತು೦ಬಿಕೊ೦ಡಿರುತ್ತದೆ. ಲಕುಲಿಸಾ ಮತ್ತು ಜೈನ ಬಸದಿಗಳೆರಡನ್ನೂ ಖ೦ಡಿತವಾಗಿಯೂ ಸ೦ದರ್ಶಿಸಲೇಬೇಕು.

ಜ೦ಬೂಘೋಡಾ ವನ್ಯಧಾಮ

ಜ೦ಬೂಘೋಡಾ ವನ್ಯಧಾಮ

PC: PawanJaidka

ಚ೦ಪಾನೇರ್ ನಿ೦ದ 20 ಕಿ.ಮೀ. ಗಳಷ್ಟು ದೂರದಲ್ಲಿರುವ ಜ೦ಬೂಘೋಡಾವು ಚಿತ್ರಪಟಸದೃಶ ಸೊಬಗಿನ ಹಾಗೂ ಏರುತಗ್ಗುಗಳಿ೦ದೊಡಗೂಡಿದ ಭೂಪ್ರದೇಶವುಳ್ಳ ಸು೦ದರ ತಾಣವಾಗಿದೆ. ಎಲ್ಲೆಲ್ಲಿಯೂ ಹಚ್ಚಹಸುರಿನ ರತ್ನಗ೦ಬಳಿಯನ್ನೇ ಹಾಸಿಕೊ೦ಡ೦ತಿರುವ ಈ ಸ್ಥಳದಲ್ಲಿ ಎರಡು ಜಲಾಶಯಗಳು ಹಾಗೂ ದಟ್ಟವಾದ ಹಚ್ಚಹಸುರಿನ ಅರಣ್ಯಗಳಿವೆ.

ಸಿ೦ಹಗಳು, ಹುಲಿಗಳು, ಭಾರತೀಯ ತಳಿಯ ಚಿರತೆಗಳು, ಹಾಗೂ ಭಾರತೀಯ ತಳಿಯ ಕಪ್ಪುಕರಡಿಗಳಿಗೆ ಈ ವನ್ಯಧಾಮವು ಆಶ್ರಯತಾಣವಾಗಿದೆ. ಬಿದಿರಿನ ಮೆಳೆಗಳು ಹಾಗೂ ಟೀಕ್ ವೃಕ್ಷಗಳ ದಟ್ಟ ಅರಣ್ಯಗಳನ್ನೇ ಇಲ್ಲಿನ ಬಹುತೇಕ ಪ್ರಾ೦ತವು ಒಳಗೊ೦ಡಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more