» »ಬೆರಗು ಗೊಳಿಸುವ ಗುಹಾಲಯಗಳು

ಬೆರಗು ಗೊಳಿಸುವ ಗುಹಾಲಯಗಳು

By: Divya

ರಾಜರ ಕಾಲದ ಶ್ರೀಮಂತಿಕೆಯನ್ನು ಬಿಂಬಿಸುವಲ್ಲಿ ಗುಹಾಲಯಗಳ ಪಾತ್ರವು ಮಹತ್ವದ್ದು. ಗುಹಾಲಯದ ಕೆತ್ತನೆ ಹಾಗೂ ಇತಿಹಾಸವು ಸುಂದರ ಪುರಾಣಗಳನ್ನು ಬಿಚ್ಚಿಡುತ್ತವೆ. ಇಂತಹ ಅಪರೂಪದ ಗುಹಾಲಯವನ್ನು ನೋಡಬೇಕೆಂದರೆ ತಮಿಳುನಾಡಿನ ಮಹಾಬಲಿಪುರಂಗೆ ಭೇಟಿನೀಡಬೇಕು. ಒಂದೇ ಪ್ರದೇಶದಲ್ಲಿ ಅನೇಕ ಗುಹಾಲಯ ಇರುವುದರಿಂದ ಇದನ್ನು ಗುಹಾಲಯಗಳ ತವರು ಎಂದು ಕರೆಯಬಹುದು.

ಇಲ್ಲಿರುವ ಗುಹಾಲಯದ ವಾಸ್ತುಶಿಲ್ಪ ಹಾಗೂ ಸೂಕ್ಷ್ಮ ಕಲಾಕೃತಿಗಳು ಮಹೇಂದ್ರ ವರ್ಮ ಹಾಗೂ ನರಸಿಂಹ ವರ್ಮರ ಕಾಲವನ್ನು ಪ್ರತಿಬಿಂಬಿಸುತ್ತವೆ. ಐತಿಹಾಸಿಕ ಸಂಶೋಧನೆಯ ಪ್ರಕಾರ ಕ್ರಿ.ಶ. 650ರಲ್ಲಿ ಆಳ್ವಿಕೆ ನಡೆಸಿದ ಮಮಲ್ಲಾನ ಕಾಲದಲ್ಲಿ ಅಸ್ತಿತ್ವ ಪಡೆದುಕೊಂಡವು ಎನ್ನಲಾಗುತ್ತದೆ. ಗುಡ್ಡ ಪ್ರದೇಶದಲ್ಲಿ ನಿಂತಿರುವ ಈ ಗುಹಾಲಯಗಳು ಪ್ರವಾಸಿಗರಿಗೆ ಮರೆಯಲಾಗದ ಸುಂದರ ಅನುಭವ ನೀಡುವವು.

ಬೆಂಗಳೂರಿನಿಂದ 349 ಕಿ.ಮೀ. ದೂರದಲ್ಲಿರುವ ಮಹಾಬಲಿಪುರಂಗೆ 6 ತಾಸುಗಳ ಪ್ರಯಾಣ ಬೆಳೆಸಬೇಕು. ಇಲ್ಲಿಯ ನಗರ ಭಾಗದಲ್ಲಿ ಉತ್ತಮ ವಸತಿ ಹಾಗೂ ಊಟದ ವ್ಯವಸ್ಥೆ ದೊರೆಯುವುದರಿಂದ ಯಾವುದೇ ತೊಂದರೆ ಉಂಟಾಗದು. ವಾರಾಂತ್ಯದ ರಜೆಯಲ್ಲಿ ಇಲ್ಲಿಗೆ ಬಂದರೆ ಕಲ್ಲಲ್ಲಿ ಅರಳಿರುವ ಹಲವಾರು ಗುಹಾಲಯಗಳನ್ನು ನೋಡಬಹುದು.

ಕೃಷ್ಣ ಗುಹಾಲಯ

ಕೃಷ್ಣ ಗುಹಾಲಯ

7ನೇ ಶತಮಾನದ ಇತಿಹಾಸವನ್ನು ಹೊಂದಿರುವ ಈ ಗುಹಾಲಯವನ್ನು ವಿಶ್ವ ಪರಂಪೆರಯ ತಾಣ ಎಂದು ಗುರುತಿಸಲಾಗಿದೆ. ಕಲ್ಲಿನಲ್ಲಿ ಅರಳಿದ ಈ ಗುಹಾಲಯದಲ್ಲಿ ಉಬ್ಬು ಕಲಾಕೃತಿಯನ್ನು ಕಾಣಬಹುದು, ಊರಿನಲ್ಲಿ ಅತಿವೃಷ್ಟಿಯಿಂದ ಪ್ರವಾಹವುಂಟಾದಾಗ ಶ್ರೀಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿ ಜನರನ್ನು ರಕ್ಷಿಸಿದನು ಎನ್ನುವ ಕಥೆಯ ಸುಂದರ ಕೆತ್ತನೆ ಇಲ್ಲಿದೆ. ಇದರೊಟ್ಟಿಗೆ ಅನೇಕ ಪುರಾಣ ಕಥೆಗಳ ಕಲಾಕೃತಿಳನ್ನು ನೋಡಬಹುದು.
PC: wikipedia.org

ಮಹಿಷಾಸುರಮರ್ಧಿನಿ ಗುಹಾಲಯ

ಮಹಿಷಾಸುರಮರ್ಧಿನಿ ಗುಹಾಲಯ

ಮಹಾಬಲಿಪುರಂನ ಗುಡ್ಡ ಪ್ರದೇಶದಲ್ಲಿರುವ ಈ ಗುಹಾಲಯವು 7ನೇ ಶತಮಾನಕ್ಕೆ ಸೇರಿದ್ದು. ಈ ಗುಹಾಲಯದ ಸಮೀಪ ಒಂದು ಲೈಟ್ ಹೌಸ್ ಸಹ ಇದೆ. ಪುರಾಣದ ಪ್ರಕಾರ ಮಹಿಷಾಸುರನ್ನು ಸಂಹರಿಸಿದ ಕಥೆಯನ್ನು ಒಳಗೊಂಡಿದೆ. ಇಲ್ಲಿ ದುರ್ಗಾ ದೇವಿಯು ಹುಲಿಯ ಮೇಲೆ ಕುಳಿತು, ಹಲವಾರು ಕೈಗಳಲ್ಲಿ ಆಯುಧಗಳನ್ನು ಹಿಡಿದಿರುವ ಕೆತ್ತನೆಯನ್ನು ನೋಡಬಹುದು.
PC: wikipedia.org

ವರಹಾ ಗುಹಾಲಯ

ವರಹಾ ಗುಹಾಲಯ

ಮಹಾಬಲಿಪುರಂ ನಿಂದ 4 ಕಿ.ಮೀ. ದೂರದಲ್ಲಿರುವ ಈ ದೇವಾಲಯವು 7ನೇಶತಮಾನಕ್ಕೆ ಸೇರಿದ್ದು. ವಿಶ್ವ ಪರಂಪರೆಯ ತಾಣ ಎಂದು ಗುರುತಿಸಲಾದ ಈ ಗುಹಾಲಯ ಸುಂದರ ಕಲಾಕೃತಿಯನ್ನು ಒಳಗೊಂಡಿದೆ. ವಿಷ್ಣುವಿಗೆ ಮೀಸಲಾದ ಈ ಗುಹಾಲಯ ವರಹ ಅವತಾರವನ್ನು ಹೇಳುತ್ತದೆ. ಇದು 14 ಅಡಿ ಅಗಲ ಹಾಗೂ 11.5 ಅಡಿ ಎತ್ತರವನ್ನು ಹೊಂದಿದೆ. ಭವ್ಯವಾದ ವಾಸ್ತುಶಿಲ್ಪವನ್ನು ಹೊಂದಿದ್ದು, ದೇಗುಲದ ಮುಖವು ಪಶ್ಚಿಮ ಭಾಗದಲ್ಲಿರುವುದು ವಿಶೇಷ.
PC: wikipedia.org

ಕೊಟಿಕಲ್ ಗುಹಾಲಯ

ಕೊಟಿಕಲ್ ಗುಹಾಲಯ

ದುರ್ಗಾ ದೇವಿಗೆ ಮೀಸಲಾದ ಈ ಗುಹಾಲಯದ ಮಹಾದ್ವಾರವು ಪಶ್ಚಿಮ ಮುಖವಾಗಿದೆ. ಕಲ್ಲಲ್ಲಿ ಕೆತ್ತಿರುವ ಈ ಗುಹಾಲಯಕ್ಕೆ ಪ್ರಮುಖವಾಗಿ ಎರಡು ಕಂಬಗಳು ಆಧಾರವಾಗಿ ನಿಂತಿವೆ. ಉಳಿದ ಕಂಬಗಳು ವಿಶೇಷ ಕೆತ್ತನೆಗೆ ಆಕರ್ಷಕವಾಗಿವೆ. ಗುಹೆಯ ಪ್ರಧಾನ ಕೊಠಡಿಯು 8ಅಡಿ ಉದ್ದ ಹಾಗೂ 8ಅಡಿ ಅಗಲವನ್ನು ಹೊಂದಿದೆ. ಮನೋಹರ ವಾತಾವರಣವು ಇದರ ಇನ್ನೊಂದು ಪ್ರಮುಖ ಆಕರ್ಷಣೆ.

ಹುಲಿ ಗುಹಾಲಯ

ಹುಲಿ ಗುಹಾಲಯ

ಹೆಸರು ಹೇಳುವಂತೆ ಗುಹಾಲಯವು ಹುಲಿ ಮಲಗಿಕೊಂಡು ಗರ್ಜಿಸುತ್ತಿರುವ ಆಕಾರದಲ್ಲಿದೆ. 8ನೇ ಶತಮಾನದ ಈ ಗುಹೆಯ ಮಹಾದ್ವಾರವು ಆಗ್ನೇಯ ದಿಕ್ಕಿಗಿದೆ. ಹುಲಿಯ ಮುಖದ ಕೆತ್ತನೆಗಳಿಂದಲೇ ಆವರಿಸಿಕೊಂಡಿರುವ ಈ ಗುಹೆಗೆ ಹುಲಿಯ ಆಕೃತಿಯನ್ನು ಹೊಂದಿರುವ ಎರಡು ಆಧಾರ ಕಂಬಗಳಿರುವುದನ್ನು ಕಾಣಬಹುದು.
PC: wikipedia.org

ಅತಿರನಚಂದಾ ಗುಹಾಲಯ

ಅತಿರನಚಂದಾ ಗುಹಾಲಯ

ಈ ಗುಹೆಯ ಮಹಾದ್ವಾರವು ಪೂರ್ವ ದಿಕ್ಕಿನಲ್ಲಿದೆ. ಮಹಾಬಲಿಪುರಂ ನಿಂದ 4 ಕಿ.ಮೀ. ದೂರದಲ್ಲಿದೆ. ಮಹೇಂದ್ರವರ್ಮನ ಕಾಲದ ವಾಸ್ತುಶಿಲ್ಪವನ್ನು ಒಂಗೊಂಡಿರುವ ಈ ಗುಹಾಲಯದಲ್ಲಿ 3 ಕೊಠಡಿಗಳಿವೆ. ಪ್ರತಿಯೊಂದರಲ್ಲೂ ಇರುವ ಆಕರ್ಷಕ ಕೆತ್ತನೆ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪಂಚಪಾಂಡವ ಗುಹಾಲಯ

ಪಂಚಪಾಂಡವ ಗುಹಾಲಯ

ಮಹಾ ಭಾರತದ ಕಥೆಯನ್ನು ಹೇಳುವ ಈ ದೇಗುಲ ಪೂರ್ವ ಮುಖವಾಗಿದೆ. ಅರ್ಜುನನು ತಪಸ್ಸು ಗೈದ ಸ್ಥಳ ಇದು ಎಂದು ಹೇಳಲಾಗುತ್ತದೆ. ಅಪೂರ್ಣಗೊಂಡ ಈ ಗುಹೆ 50 ಅಡಿ ಉದ್ದವನ್ನು ಹೊಂದಿದೆ. ಸುತ್ತಲು ಬೃಹದಾಕಾರದ ಬಂಡೆಗಳಿಂದ ಕೂಡಿದ್ದು, ಬೃಹದಾಕಾರದ ಗುಹಾಲಯ ಎನ್ನುವ ಹಿರಿಮೆಯನ್ನು ಪಡೆದುಕೊಂಡಿದೆ.
PC: wikipedia.org

ತ್ರಿಮೂರ್ತಿ ಗುಹಾಲಯ

ತ್ರಿಮೂರ್ತಿ ಗುಹಾಲಯ

8ನೇ ಶತಮಾನದ ಇತಿಹಾಸ ಹೊಂದಿರುವ ಈ ಗುಹಾಲಯ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರಿಗೆ ಮೀಸಲಾಗಿದೆ. ತ್ರಿಮೂರ್ತಿಗಳ ಕೆತ್ತನೆಯನ್ನು ಈ ಗುಹಾಲಯದಲ್ಲಿ ಕಾಣಬಹುದು. ತ್ರಿಮೂರ್ತಿಗಳ ಪ್ರತಿಯೊಂದು ಗುಹಾಲಯಕ್ಕೂ ದ್ವಾರ ಪಾಲಕರು ನಿಂತಿರುವ ಕೆತ್ತನೆಗಳಿವೆ.
PC: flickr.com

Please Wait while comments are loading...