ರಜಾ ದಿನದ ಮುಂಜಾನೆಯ ಮಂಜು, ಆಗತಾನೆ ಕಣ್ಣು ಬಿಡುತ್ತಿರುವ ಸೂರ್ಯನ ಎಳೆ ಕಿರಣಗಳು, ಮುತ್ತಿನ ಹನಿಗಳಂತೆ ಪೋಣಿಸಲ್ಪಟ್ಟ ಹೂಗಿಡಗಳ ಎಲೆಗಳ ಮೇಲಿನ ನೀರಿನ ಹನಿಗಳು, ಇವೆಲ್ಲದರ ನಡುವೆ ಘಮ ಘಮ ಪರಿಮಳ ಬೀರುತ್ತಿರುವ ಬಿಸಿ ಬಿಸಿ ಕಾಫಿ...ಅಬ್ಬಾ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇಷ್ಟು ಸಾಕು. ಹೌದು ಬೆಳಂಬೆಳಿಗ್ಗೆ ಎದ್ದೊಡನೆ ನಿದ್ದೆ ಆಯಾಸವನ್ನು ಹೊಡೆದೊಡಿಸಲು, ದಿನವನ್ನು ಉತ್ಸಾಹದಿಂದ ಕಳೆಯಲು ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಟೀ ಬೇಕೇಬೇಕು. ಉತ್ಸಾಹ ಮೂಡಿಸುವ ಇಂತಹ ಕಾಫಿ, ಟೀ ಗಳನ್ನು ಬೆಳೆಯಲು ಉತ್ತಮವಾಗಿರುವ ಪರಿಸರದ ಅವಶ್ಯಕತೆಯೂ ಇದೆ.
ಭಾರತದಲ್ಲಿ ಬೆಳೆಯಲಾಗುವ ಕಾಫಿ ಮತ್ತು ಚಹಾ ಎಲೆಗಳ ಉತ್ಪಾದನೆಯ ಅರ್ಧಕ್ಕೂ ಹೆಚ್ಚು ಭಾಗವನ್ನು ದಕ್ಷಿಣ ಭಾರತದಲ್ಲೆ ಬೆಳೆಯಲಾಗುತ್ತದೆ. ಕಾಫಿ ಬೆಳೆಯಲ್ಲಿ ಮಹತ್ತರ ಕೊಡುಗೆಯನ್ನು ಕೊಡುವ ರಾಜ್ಯಗಳು ಕರ್ನಾಟಕ (53%), ಕೇರಳ(28%) ಹಾಗು ತಮಿಳುನಾಡು(11%). ಇನ್ನುಳಿದ ಭಾಗ ಅಸ್ಸಾಂ, ಒಡಿಶಾ, ತ್ರಿಪುರಾ ಹಾಗು ಆಂಧ್ರಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇನ್ನೊಂದು ಸಂಗತಿಯೆಂದರೆ ಭಾರತದಲ್ಲಿ ಬೆಳೆಯಲಾಗುವ ಕಾಫಿ ಹಾಗು ಟೀ ಗಳನ್ನು ಪ್ರಪಂಚದಲ್ಲಿ ಕಂಡುಬರುವ ಶ್ರೇಷ್ಠ ಮಟ್ಟದ ಕಾಫಿ ಚಹಾಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಲೇಖನದ ಮೂಲಕ ಕಾಫಿ ಚಹಾ ಬೆಳೆಯಲಾಗುವ ಭಾರತದ ಅತಿ ಪ್ರಮುಖ ಸ್ಥಳಗಳ ಕುರಿತು ತಿಳಿಯಿರಿ. ಅಂದ ಹಾಗೆ ಈ ಸ್ಥಳಗಳು ಪ್ರವಾಸಿ ಆಕರ್ಷಣೆಯೂ ಹೌದು.

ಚಿಕ್ಕಮಗಳೂರು:
ಭಾರತದಲ್ಲೆ ಪ್ರಪ್ರಥಮವಾಗಿ ಕಾಫಿ ಪರಿಚಯಿಸಲಾದ ಸ್ಥಳ ಎಂಬ ಹೆಗ್ಗಳಿಕೆ ಪಡೆದಿದೆ. ಚಿಕ್ಕಮಗಳೂರು. ಇದನ್ನು "ಕರ್ನಾಟಕದ ಕಾಫಿ ಭೂಮಿ" ಎಂದೂ ಕೂಡ ಕರೆಯಲಾಗುತ್ತದೆ. ಅಲ್ಲದೆ ಇದೊಂದು ಗಿರಿಧಾಮ ಪ್ರದೇಶವಾಗಿರುವುದರಿಂದ ಗಮ್ಯ ಪ್ರವಾಸಿ ತಾಣವಾಗಿಯೂ ಕಂಗೊಳಿಸುತ್ತದೆ. ಚಿಕ್ಕ ಮಗಳೂರಿನ ಆಕರ್ಷಣೆಗಳ ಕುರಿತು ತಿಳಿಯಿರಿ.
ಚಿತ್ರಕೃಪೆ: L. Shyamal

ವಯನಾಡ್:
ಕೇರಳದ ಮಲಬಾರ್ ಪ್ರದೇಶದಲ್ಲಿ ಸುಂದರವಾದ ಪಶ್ಚಿಮ ಘಟ್ಟಗಳ ಹಸಿರುಮಯ ವನಸಂಪತ್ತಿನಿಂದ ಆಕರ್ಷಿಸುವ ಮತ್ತೊಂದು ಪ್ರವಾಸಿ ಆಕರ್ಷಣೆ ವಯನಾಡ್ ಕಾಫಿ ಹಾಗು ಟಿ ಗಳನ್ನು ಬೆಳೆಯಲು ಪ್ರಶಸ್ತವಾದ ವಾತಾವರಣವನ್ನು ಹೊಂದಿದೆ. ಇದನ್ನು "ಕೇರಳದ ಕಾಫಿ ದೇಶ" ಎಂದೂ ಕೂಡ ಕರೆಯಲಾಗುತ್ತದೆ. ರೋಬಸ್ಟಾ ಹಾಗು ಅರೇಬಿಕಾ ಎಂಬ ವಿಧಗಳ ಕಾಫಿಯನ್ನು ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಚಿತ್ರಕೃಪೆ: Kmkutty

ಯೇರ್ಕಾಡ್:
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಚಿಕ್ಕ ಹಾಗು ಯುವ ಗಿರಿಧಾಮವೆ ಯೇರ್ಕಾಡ್. ಪೂರ್ವ ಘಟ್ಟಗಳ ಸುಂದರಮಯ ಕಾಡು ಪ್ರದೇಶದಿಂದ ಸುತ್ತುವರೆದಿರುವ ಈ ಪ್ರದೇಶ ಕಾಫಿಯನ್ನು ಬೆಳೆಯಲು ಅತ್ಯುತ್ತಮವಾದ ಪರಿಸರವನ್ನು ಹೊಂದಿದೆ. ಭಾರತದಲ್ಲೆ ಕಾಫಿ ಬೆಳೆಯುವ ಉತ್ತಮ ಕಾಡೆಂದು ಇದನ್ನು ಪರಿಗಣಿಸಲಾಗಿದೆ. ಯೇರ್ಕಾಡ್ ಅಲ್ಲದೆ ತಮಿಳುನಾಡಿನಲ್ಲಿ ನೀಲ್ಗಿರಿ, ಕೂಣ್ಣೂರು ಹಾಗು ಕೊಡೈಕೆನಲ್ ಗಳಲ್ಲೂ ಕಾಫಿಯನ್ನು ಬೆಳೆಯಲಾಗುತ್ತದೆ. ಇವುಗಳಲ್ಲಿ ನೀಲ್ಗಿರಿ ಜಿಲ್ಲೆಯು ಚಹಾ ತೋಟಗಳಿಂದಾಗಿಯೂ ಪ್ರಸಿದ್ಧವಾಗಿದೆ.
ಚಿತ್ರಕೃಪೆ: FCRebelo

ಅರಕು ಕಣಿವೆ:
ಆಂಧ್ರಪ್ರದೇಶದ ವೈಜಾಗ್ (ವಿಶಾಖಪಟ್ಟಣ) ಜಿಲ್ಲೆಯಲ್ಲಿರುವ ಅರಕು ಕಣಿವೆ ರಾಜ್ಯದ ಸುಂದರವಾದ ಏಕೈಕ ಗಿರಿಧಾಮವಾಗಿದೆ. ಈ ಪ್ರದೇಶವು ಇಲ್ಲಿನ ಬುಡಕಟ್ಟು ಜನಾಂಗದಿಂದ ಬೆಳೆಯಲಾಗುವ ಜೈವಿಕ ಕಾಫಿ ಬೆಳೆಗಾಗಿ ಹೆಚ್ಚು ಪ್ರಸಿದ್ಧವಾಗಿದೆ.
ಚಿತ್ರಕೃಪೆ: B.navez

ಅಸ್ಸಾಂ:
ದೇಶದಲ್ಲೆ ಅಸ್ಸಾಂನಲ್ಲಿ ಬೆಳೆಯಲಾಗುವ ಚಹಾ ಅತಿ ಪ್ರಸಿದ್ಧವಾಗಿದೆ. ಪ್ರಪಂಚದಲ್ಲೆ ಹೆಚ್ಚು ಚಹಾ ಉತ್ಪಾದಿಸುವ ಪ್ರದೇಶ ಇದಾಗಿದ್ದು ಬ್ರಹ್ಮಪುತ್ರ ನದಿಯ ಬಳಿಯಲ್ಲೆ ಸ್ಥಿತವಿದೆ. ಈ ಪ್ರದೇಶದ ವಿಶೀಷ್ಟ ಹವಾಗುಣವು ಒಂದು ಬಗೆಯ ಉತ್ಕೃಷ್ಟ ಮಟ್ಟದ ಸ್ವಾದವನ್ನು ಇಲ್ಲಿನ ಚಹಾ ತೋಟಗಳಿಗೆ ಪ್ರದಾನ ಮಾಡುತ್ತದೆ. ಆದ್ದರಿಂದ ಅಸ್ಸಾಂ ಟೀ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲೆ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Akarsh Simha

ದರಿಂಗ್ಬಾಡಿ:
ಒಡಿಶಾದ ಗಿರಿ ಶ್ರೇಣಿಗಳಲ್ಲಿ ಕಂಡುಬರುವ ಈ ಪುಟ್ಟ ಪ್ರದೇಶವು ರಾಜ್ಯದ ಏಕೈಕ ಗಿರಿಧಾಮವಾಗಿದೆ. ಭಾರತದ ಅತಿ ಕಿರೀಯ ಕಾಫಿ ತೋಟಗಳ ಪೈಕಿ ದರಿಂಗ್ಬಾಡಿಯು ಒಂದಾಗಿದೆ. ಎಲ್ಲೆಲ್ಲೂ ಪೈನ್ ಮರಗಳು, ವಿಶಾಲವಾಗಿ ಹರಡಿರುವ ಕಾಫಿ ತೋಟ, ಭವ್ಯ ಪರ್ವತಗಳಿಂದ ಈ ಪ್ರದೇಶವು ಕಂಗೊಳಿಸುತ್ತದೆ.
ಚಿತ್ರಕೃಪೆ: FCRebelo

ಕೊಡಗು:
ಕೊಡಗಿನಲ್ಲಿನ ಕಾಫಿ ತೋಟದಲ್ಲಿನ ಪ್ರವಾಸವು ಒಂದು ಅವಿಸ್ಮರಣೀಯವಾದ ಅನುಭವ. ಇಲ್ಲಿನ ಕಾಫಿ ತೋಟಗಳ ಮಾಲಿಕರೊಂದಿಗೆ ತೋಟದಲ್ಲಿ ಸುತ್ತಾಡುತ್ತ ಕಾಫಿಯನ್ನು ಬೆಳೆಯುವುದರಿಂದ ಹಿಡಿದು ಅದನ್ನು ಮಾರುವ ಬಗೆಯವರೆಗಿನ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ಶತಮಾನಗಳಷ್ಟು ಹಳೆಯದಾದ ಎತ್ತರದ ಪ್ರದೇಶಗಳಲ್ಲಿ ನೆಲೆಸಿರುವ ಕಾಫಿ ತೋಟಗಳಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಬಿಸಿ ಬಿಸಿ ಕಾಫಿ ಸ್ವಾದವನ್ನು ಹೀರುತ್ತ ನಮ್ಮನ್ನ ನಾವು ಮರೆಯುವಂತೆ ಮಾಡುತ್ತದೆ ಈ ತೋಟಗಳು. ಗಮನದಲ್ಲಿಡಬೇಕಾದ ಒಂದು ವಿಷಯವೆಂದರೆ ಕಾಫಿ ತೋಟಗಳಿಗೆ ಭೇಟಿ ನೀಡಲು ರಿಸಾರ್ಟುಗಳ ಅಥವಾ ನುರಿತ ಮಾರ್ಗದರ್ಶಿಗಳ ಸಹಾಯ ಪಡೆಯಬೇಕು. ಕೊಡಗಿನ ಸುಮಧುರ ಆಕರ್ಷಣೆಗಳು.
ಚಿತ್ರಕೃಪೆ: Dcrjsr

ಮುನ್ನಾರ್:
ಕೇರಳದ ಕೌಂಟಿ ಎಂಬ ಖ್ಯಾತಿಯ ಮುನ್ನಾರ್ ಗಿರಿಧಾಮವು ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿರುವುದು ಅಲ್ಲದೆ ಸುಮಧುರವಾದ ಚಹಾ ತೋಟಗಳಿಂದಾಗಿಯೂ ಕಂಗೊಳಿಸುತ್ತದೆ. ಈ ಪ್ರದೇಶದಲ್ಲಿ ಕಾಲಿಟ್ಟಾಗ ಸಾಕು ಪರಿಸರದಲ್ಲಿನ ಚಹಾ ಸುವಾಸನೆಯ ಕಂಪು ನಿಮ್ಮನ್ನು ಮತ್ತಷ್ಟು ಪುಳಕಿತರನ್ನಾಗಿಸುತ್ತದೆ.
ಚಿತ್ರಕೃಪೆ: Kerala Tourism

ನೀಲ್ಗಿರಿ:
ನೀಲ್ಗಿರಿ ತಮಿಳನಾಡಿನಲ್ಲಿರುವ ಒಂದು ಜಿಲ್ಲೆಯಾಗಿದ್ದು ಇದರ ಅಗಾಧವಾದ ಗಿರಿ ಶ್ರೇಣಿ ಕರ್ನಾಟಕ ಹಾಗು ಕೇರಳದಲ್ಲೂ ಚಾಚಿದೆ. ನೀಲ ವರ್ಣದ ಗಿರಿ ಪರ್ವತಗಳಿಂದ ಪ್ರಶಾಂತವಾಗಿ ಕಾಣುವ ಈ ಗಿರಿಧಾಮವು ತನ್ನಲ್ಲಿರುವ ಚಹಾ ತೋಟಗಳಿಂದಾಗಿಯೂ ಪ್ರಸಿದ್ಧವಾಗಿದೆ.
ಚಿತ್ರಕೃಪೆ: Rightee

ದಾರ್ಜೀಲಿಂಗ್:
ದಾರ್ಜೀಲಿಂಗ್ ಪಶ್ಚಿಮ ಬಂಗಾಳ ರಾಜ್ಯದ ಒಂದು ಸುಂದರ ಗಿರಿಧಾಮವಾಗಿದೆ. ಮಹಾಭಾರತ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಈ ಗಿರಿಧಾಮ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿರುವುದು ಅಲ್ಲದೆ ಕಪ್ಪು ಚಹಾ ಬೆಳೆಗೆ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Kristian Frisk


Click it and Unblock the Notifications



















