ಯಾವುದೆ ಒಬ್ಬ ಮನುಷ್ಯನು ಸುಲಲಿತತವಾಗಿ ಕುಟುಂಬವನ್ನು ನಿರ್ವಹಿಸಬೇಕೆಂದರೆ ವ್ಯವಸ್ಥಿತವಾಗಿ ಸಾಮಾನು ಸರಂಜಾಮುಗಳನ್ನು ಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ಕುಟುಂಬವೆಂದರೆ ಕೇಳಬೇಕೆ? ಸಣ್ಣ ಬೆಂಕಿ ಪೊಟ್ಟಣದಿಂದ ಹಿಡಿದು ಬೃಹತ್ತಾದ ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಸಾಮಾನುಗಳನ್ನು ಕೊಳ್ಳಬೇಕಾಗುತ್ತದೆ. ಒಂದೊಮ್ಮೆ ನಿರ್ದಿಷ್ಟವಾದ ಸರಕುಗಳನ್ನು ಕೊಳ್ಳಲು ನಿರ್ದಿಷ್ಟವಾದ ಅಂಗಡಿಗಳಿಗೆ ಮಾತ್ರ ಹೋಗುವ ಅನಿವಾರ್ಯವಿತ್ತು. ಕಿರಾಣಿ ಸಾಮಾನುಗಳನ್ನು ಕೊಳ್ಳಲು ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿದರೆ, ತರಕಾರಿಗಳನ್ನು ಕೊಳ್ಳಲು ತರಕಾರಿ ಮಳಿಗೆಗಳಿಗೆ ನುಗ್ಗಬೇಕಾಗಿತ್ತು. ಇದರಿಂದ ಸಾಕಷ್ಟು ಸಮಯವೂ ವ್ಯರ್ಥವಾಗುತ್ತಿತ್ತು.
ಆದರೆ ಇಂದು ಮಹಾನಗರಗಳಲ್ಲಿ ಹೆಚ್ಚುತ್ತಿರುವ ಜನಸಂದಣಿ, ಕೆಲಸದೊತ್ತಡಗಳ ಪರಿಣಾಮವಾಗಿ ಸಮಯವು ಅತ್ಯಂತ ಮಹತ್ವವನ್ನು ಪಡೆದಿದೆ. ಇಂತಹ ಅಮೂಲ್ಯ ಸಮಯವನ್ನು ವ್ಯರ್ಥಗೊಳ್ಳದ ಹಾಗೆ ಒಂದೆ ಸೂರಿನಡಿ ಎಲ್ಲ ಬಗೆಯ ಸಾಮಾನುಗಳು ದೊರೆಯುವ ಹಾಗೆ ಮಾಡಿದರೆ ಹೇಗೆ? ಇಂತಹ ಒಂದು ಧ್ಯೇಯದಿಂದಲೆ ಉಗಮವಾದ ಹೊಸ ಕಾನ್ಸೆಪ್ಟ್ಟೆ ಶಾಪಿಂಗ್ ಮಾಲ್. ಹೌದು.. ಮಹಾನಗರಗಳಲ್ಲಿ ವಾಸಿಸುವ ಜನರಿಗೆ ಈ ಮಾಲ್ ಗಳು ಒಂದು ವರದಾನವಾಗಿ ರೂಪಗೊಂಡಿವೆ. ವಾರದ ದಿನಗಳಲ್ಲಿ ದುಡಿದು ದುಡಿದು ಪ್ರೆಷರ್ ಕುಕ್ಕರ್ ನಂತಾಗುವ ಮನುಷ್ಯನಿಗೆ ವಾರಾಂತ್ಯದ ರಜಾ ಸಮಯದಲ್ಲಿ ಈ ಮಾಲ್ ಗಳು ಕೇವಲ ಒತ್ತಡ ನಿವಾರಣೆಯ ಸಾಧನವಾಗದೆ ಒಂದು ವಾರಕ್ಕೆ ಬೇಕಾಗುವಷ್ಟು ಸಾಮಾನು ಸರಂಜಾಮುಗಳನ್ನು ಖರೀದಿಸಬಹುದಾದ ಮಾಧ್ಯಮವಾಗಿಯೂ ಪರಿಣಮಿಸಿದೆ.
ಅಲ್ಲದೆ, ಹಾಗೆ ಸುಮ್ಮನೆ ಒಂದು ದಿನ ಈ ಮಾಲ್ ಗಳಲ್ಲಿ ಸುತ್ತಾಡುತ್ತ ವಿಂಡೋವ್ ಶಾಪಿಂಗ್ ಮಾಡುವುದೂ ಕೂಡ ಒಂದು ಬಗೆಯ ಮೋಜು ಹಾಗು ಆನಂದವನ್ನುಂಟು ಮಾಡುವ ಚಟುವಟಿಕೆ. ಬನ್ನಿ ಹಾಗಾದರೆ ನಾವೂ ಕೂಡ ಈ ಚಿತ್ರಗಳ ಮೂಲಕ ಭಾರತದಲ್ಲಿನ ಕೆಲವು ಬೃಹತ್ತಾದ ಶಾಪಿಂಗ್ ಮಾಲ್‍ಗಳ ಸ್ಲೈಡ್ ಶಾಪಿಂಗ್ ಮಾಡೋಣ. ನೀವು ಈ ಪ್ರದೇಶಗಳಿಗೆ ಹೋದಾಗ ಈ ಮಾಲ್ ಗಳಿಗೆ ಭೇಟಿ ನೀಡಲು ಮರೆಯದಿರಿ.

ಫಿನಿಕ್ಸ್ ಮಾರ್ಕೇಟ್ ಸಿಟಿ, ಮುಂಬೈ
ಭಾರತದಲ್ಲೆ ಬೃಹತ್ತಾದ ಈ ಶಾಪಿಂಗ್ ಮಾಲ್ ಮುಂಬೈನ ಕುರ್ಲಾ ಪ್ರದೇಶದಲ್ಲಿದ್ದು 4,000,000 ಚ.ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಎಲ್ಲ ಬಗೆಯ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ಹೊಂದಿರುವ ಈ ಶಾಪಿಂಗ್ ಮಾಲ್ ಉದ್ಘಾಟನೆಗೊಂಡಿದ್ದು 2011 ರಲ್ಲಿ.

ಲುಲು ಅಂತಾರಾಷ್ಟ್ರೀಯ ಶಾಪಿಂಗ್ ಮಾಲ್, ಕೊಚ್ಚಿ
2013 ರಲ್ಲಿ ಉದ್ಘಾಟನೆಗೊಂಡ ಕೇರಳದ ಕೊಚ್ಚಿಯಲ್ಲಿರುವ ಈ ಶಾಪಿಂಗ್ ಮಾಲ್ ಇ.ಎಂ.ಕೆ.ಇ ಸಮೂಹದಿಂದ ಸ್ಥಾಪನೆಗೊಂಡು ನಿರ್ವಹಿಸಲ್ಪಡುತ್ತಿದೆ. 17 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಮಾಲ್ ಸುಮಾರು 3,900,000 ಚ.ಅಡಿಗಳಷ್ಟು ವಿಶಾಲವಾದ ನೆಲೆ ಪ್ರದೇಶವನ್ನು ಹೊಂದಿದೆ.

ಫಿನಿಕ್ಸ್ ಮಾರ್ಕೇಟ್ ಸಿಟಿ, ಬೆಂಗಳೂರು
2,810,000 ಚ.ಅಡಿಗಳಷ್ಟು ವಿಶಾಲವಾಗಿರುವ ಈ ಶಾಪಿಂಗ್ ಮಾಲ್ ಬೆಂಗಳೂರಿನ ಮಹದೇವಪುರದ ವ್ಹೈಟ್ ಫೀಲ್ಡ್ ಮುಖ್ಯ ರಸ್ತೆಯಲ್ಲಿ ನೆಲೆಸಿದೆ. ಹಲವು ಸ್ತರಗಳಲ್ಲಿ ನಿರ್ಮಾಣಗೊಂಡಿರುವ ಈ ಆಧುನಿಕ್ ಮಾಲ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಹೊಂದಿದ್ದು ಬೆಂಗಳೂರಿಗರಿಗೆ ಒಂದು ಉತ್ತಮ ವಿಕೆಂಡ್ ತಾಣವಾಗಿದೆ.

ಫಿನಿಕ್ಸ್ ಮಾರ್ಕೇಟ್ ಸಿಟಿ, ಚೆನ್ನೈ
ಚೆನ್ನೈ ಮಹಾನಗರದ ವೇಳಚೆರಿ ಪ್ರದೇಶದಲ್ಲಿ ಫಿನಿಕ್ಸ್ ಮಾರ್ಕೆಟ್ ಸಿಟಿಯ ಮತ್ತೊಂದು ಶಾಖೆಯಿದೆ. 2012 ರಲ್ಲಿ ಪ್ರಾರಂಭಗೊಂಡ ಈ ಶಾಪಿಂಗ್ ಮಾಲ್ 2,400,000 ಅಡಿಗಳಷ್ಟು ವಿಶಾಲವಾಗಿ ಹರಡಿದೆ.

ಮಂತ್ರಿ ಸ್ಕ್ವೇರ್ ಮಾಲ್, ಬೆಂಗಳೂರು
ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿರುವ ಮಂತ್ರಿ ಸ್ಕ್ವೇರ್ ಮಾಲ್ ಬೆಂಗಳೂರಿನ ದೊಡ್ಡ ಶಾಪಿಂಗ್ ಮಾಲ್ ಗಳ ಪೈಕಿ ಒಂದಾಗಿದೆ. ಸುಸಜ್ಜಿತ ಕಟ್ಟಡ, ಸೂಪರ್ ಮಾರ್ಕೆಟ್, ಸಿನೆಮಾ ಥಿಯೇಟರ್ ಗಳನ್ನು ಒಳಗೊಂಡಿರುವ ಈ ಮಾಲ್ ವಾರಾಂತ್ಯದ ಸಮಯದಲ್ಲಿ ಹೆಚ್ಚು ಜನದಟ್ಟಣೆಯನ್ನು ಕಾಣುತ್ತದೆ.

ಎಕ್ಸ್ ಪ್ರೆಸ್ ಅವೆನ್ಯೂ, ಚೆನ್ನೈ
ಎಕ್ಸ್ ಪ್ರೆಸ್ ಅವೆನ್ಯೂ ಚೆನ್ನೈನಲ್ಲಿರುವ ಮತ್ತೊಂದು ಅಮೋಘವಾದ ಶಾಪಿಂಗ್ ಮಾಲ್. ದಕ್ಷಿಣ ಭಾರತದಲ್ಲಿ ಅತಿ ವಿಶಾಲವಾದ ಆಟದ ಪ್ರದೇಶವನ್ನು ಹೊಂದಿರುವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮಾಲ್ ಚೆನ್ನೈನ ರಾಯಪೆಟ್ಟಾ ಪ್ರದೇಶದಲ್ಲಿದೆ. 2009 ರಲ್ಲಿ ಪ್ರಾರಂಭವಾದ ಈ ಮಾಲ್ 1,500,000 ಚ.ಅಡಿಗಳಷ್ಟು ವಿಶಾಲವಾಗಿ ಹರಡಿದೆ.

ದಿ ಗ್ರೇಟ್ ಇಂಡಿಯನ್ ಪ್ಲೇಸ್, ನೊಯ್ಡಾ
ನೊಯ್ಡಾದ ಸೆಕ್ಟರ್ 38-A ನಲ್ಲಿ ನೆಲೆಸಿರುವ ಈ ಬೃಹತ್ ಶಾಪಿಂಗ್ ಮಾಲ್ ಭಾರತದಲ್ಲಿರುವ ದೊಡ್ಡ ಮಾಲ್‍ಗಳ ಪೈಕಿ ಒಂದಾಗಿದೆ.

ಡಿ.ಬಿ ಸಿಟಿ ಮಾಲ್ ಭೋಪಾಲ್
ಭಾರತದ ಮೊದಲ ಐದು ಉನ್ನತ ಮಾಲ್‍ಗಳಲ್ಲಿ ಒಂದಾಗಿರುವ ಡಿ.ಬಿ ಸಿಟಿ ಮಾಲ್ ಭೋಪಾಲಿನ ಮೊದಲ ಐಷಾರಾಮಿ ಮಾಲ್ ಆಗಿದೆ. 1,350,000 ಚ.ಅಡಿಗಳಷ್ಟು ವಿಶಾಲವಾಗಿರುವ ಈ ಮಾಲ್ ಇರುವುದು ಭೋಪಾಲಿನ ಅರೇರಾ ಹಿಲ್ಸ್ ನ ಎಂ.ಪಿ ನಗರದಲ್ಲಿ.

ಸಿಲೆಕ್ಟ್ ಸಿಟಿ ವಾಕ್, ಸಾಕೇತ್
ನವದೆಹಲಿಯ ಸಾಕೇತಿನಲ್ಲಿರುವ ಸಿಲೆಕ್ಟ್ ಸಿಟಿ ವಾಕ್ ಒಂದು ಅದ್ಭುತವಾದ ಪರಿಸರ ಸ್ನೇಹಿ ಶಾಪಿಂಗ್ ಮಾಲ್ ಎಂದೆ ಹೇಳಬಹುದು. 1,300,000 ಚ.ಅಡಿಗಳಷ್ಟು ವಿಶಾಲವಾಗಿ ಹರಡಿರುವ ಈ ಮಾಲ್ ಅಕ್ಟೋಬರ್ 2007 ರಲ್ಲಿ ಸಾರ್ವಜನಿಕರಿಗೆ ಪ್ರಾರಂಭವಾಯಿತು.


Click it and Unblock the Notifications


















