Search
  • Follow NativePlanet
Share
» »ಶಿವಾಜಿ ಮಹಾರಾಜರು ಈಜುತ್ತಿದ್ದ ಕೊಳವಿರುವುದು ಇಲ್ಲೇ…ಈ ತ್ರಿಕೋನ ಕೋಟೆಗಿದೆ ಏಳು ಸುರಕ್ಷಿತ ದ್ವಾರಗಳು

ಶಿವಾಜಿ ಮಹಾರಾಜರು ಈಜುತ್ತಿದ್ದ ಕೊಳವಿರುವುದು ಇಲ್ಲೇ…ಈ ತ್ರಿಕೋನ ಕೋಟೆಗಿದೆ ಏಳು ಸುರಕ್ಷಿತ ದ್ವಾರಗಳು

ಶಿವನೇರಿ ಕೋಟೆಯನ್ನು ಈಗಾಗಲೇ ಕೆಲವರು ನೋಡಿದ್ದರೆ, ಮತ್ತೆ ಕೆಲವರು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಓದಿ ಖಂಡಿತ ತಿಳಿದುಕೊಂಡಿರುತ್ತೀರಿ. ಏಕೆಂದರೆ ಈ ಕೋಟೆಯು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳವಾಗಿದೆ. ಕೋಟೆಯು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ಬಳಿ ಇದೆ. ಇದೊಂದು ಪುರಾತನ ಸೇನಾ ಕೋಟೆ. ಕೋಟೆಯು ಬೆಟ್ಟದ ತುದಿಯಲ್ಲಿದೆ. ಕೋಟೆಯು ತ್ರಿಕೋನ ಕೋಟೆಯಾಗಿದ್ದು, ಏಳು ಸುರಕ್ಷಿತ ದ್ವಾರಗಳನ್ನು ಹೊಂದಿದೆ. ಕೋಟೆಯು ಎಲ್ಲಾ ಕಡೆಗಳಲ್ಲಿ ಕಡಿದಾದ ಬಂಡೆಗಳಿಂದ ಆವೃತವಾಗಿದ್ದು, ಕೋಟೆಯ ಸಂಕೀರ್ಣದಲ್ಲಿ ಅನೇಕ ನೀರಿನ ತೊಟ್ಟಿಗಳು ಮತ್ತು ಬಾವಿಗಳಿವೆ, ಇದು ಕೋಟೆಯ ನಿವಾಸಿಗಳಿಗೆ ನಿರಂತರ ನೀರು ಪೂರೈಕೆ ಮಾಡಿದೆ.

ನೀವು ಜುನ್ನಾರ್ ಪಟ್ಟಣವನ್ನು ಪ್ರವೇಶಿಸಿದ ತಕ್ಷಣ ಕೋಟೆ ಗೋಚರಿಸುತ್ತದೆ. ಕೋಟೆಯ ವಿಸ್ತೀರ್ಣದ ಬಗ್ಗೆ ಹೇಳುವುದಾದರೆ ಈಸ್ಟ್ ಇಂಡಿಯಾ ಕಂಪನಿಯ ಡಾ. ಜಾನ್ ಫ್ರಿಯರ್ 1673 ರಲ್ಲಿ ಈ ಕೋಟೆಗೆ ಭೇಟಿ ನೀಡಿದರು. ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ ಕೋಟೆಯು ಒಂದು ಸಾವಿರ ಕುಟುಂಬಗಳ ಅಗತ್ಯಗಳನ್ನು ಪೂರೈಸಲು 7 ವರ್ಷಗಳವರೆಗೆ ಸಾಕಾಗುವಷ್ಟು ಆಹಾರವನ್ನು ಸಂಗ್ರಹಿಸಬಲ್ಲದು.

1674 ರಲ್ಲಿ ಶಿವಾಜಿ ಮಹಾರಾಜರ ವಶಕ್ಕೆ

ಶಿವನೇರಿ ಕೋಟೆಯ ಇತಿಹಾಸವು 6 ನೇ ಶತಮಾನದಷ್ಟು ಹಿಂದಿನದು. ಕೋಟೆಯನ್ನು ಮೌರ್ಯರು, ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಯಾದವರು ಆಳಿದರು. 13 ನೇ ಶತಮಾನದಲ್ಲಿ ಕೋಟೆಯು ದೆಹಲಿ ಸುಲ್ತಾನರ ನಿಯಂತ್ರಣಕ್ಕೆ ಬಂದಿತು. 1430 ರಲ್ಲಿ, ಕೋಟೆಯನ್ನು ಬಿಜಾಪುರದ ಆದಿಲ್ ಶಾಹಿ ರಾಜವಂಶದವರು ವಶಪಡಿಸಿಕೊಂಡರು. 1630 ರಲ್ಲಿ ಮೊಘಲ್ ಸಾಮ್ರಾಜ್ಯವು ಕೋಟೆಯನ್ನು ವಶಪಡಿಸಿಕೊಂಡಿತು. ಕೊನೆಗೆ ಈ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರು 1674 ರಲ್ಲಿ ವಶಪಡಿಸಿಕೊಂಡರು.

shivnerifort pune

ಕೋಟೆಯಲ್ಲಿ ಏನೇನಿದೆ?

ಈ ಕೋಟೆಯು ಮರಾಠರ ಹೆಮ್ಮೆ ಮತ್ತು ವಿದೇಶಿ ಆಳ್ವಿಕೆಯ ವಿರುದ್ಧದ ಸಂಕೇತವಾಗಿದೆ. ಇಲ್ಲಿ ನೀವು ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳವನ್ನು ನೋಡಬಹುದು. ಶಿವಾಜಿ ಮಹಾರಾಜರು ಹುಟ್ಟಿದ ಚಿಕ್ಕ ಕೋಣೆಯಲ್ಲಿ ಅವರ ಮತ್ತು ಅವರ ತಾಯಿ ಜೀಜಾಬಾಯಿ ಅವರ ಪ್ರತಿಮೆಗಳನ್ನು ಅಲಂಕರಿಸಲಾಗಿದೆ. ಕೋಟೆಯಲ್ಲಿ ಬಾದಾಮಿ ಕೊಳವನ್ನು ನೋಡಬಹುದು. ಶಿವಾಜಿ ಮಹಾರಾಜರು ಬಾಲ್ಯದಲ್ಲಿ ಈ ಕೊಳದಲ್ಲಿ ಈಜುತ್ತಿದ್ದರು ಎಂದು ಹೇಳಲಾಗುತ್ತದೆ. ಕೋಟೆಗೆ ಬಂದಾಗ ನೀವು ಶಿವಾ ದೇವಿ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಶಿವಾಜಿಯ ತಾಯಿ ಜೀಜಾಬಾಯಿ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂದು ನಂಬಲಾಗಿದೆ. ಈ ಕೋಟೆಯಲ್ಲಿ ಗಲ್ಲಿಗೇರಿಸುವ ಸ್ಥಳವೂ ಇದೆ. ಇಲ್ಲಿಯೇ ಕೈದಿಗಳನ್ನು ಗಲ್ಲಿಗೇರಿಸಲಾಗುತ್ತಿತ್ತು. ಇದು ಕೋಟೆಯ ಅಂಚಿನಲ್ಲಿ ನೆಲೆಗೊಂಡಿದ್ದು, ಕೆಳಗಿನ ಕಣಿವೆಯು ಗೋಚರಿಸುತ್ತದೆ.

ಭೇಟಿ ನೀಡುವ ಸಮಯ

ಶಿವನೇರಿ ಕೋಟೆಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್. ಈ ತಿಂಗಳುಗಳಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ ಮತ್ತು ಕಡಿಮೆ ಮಳೆ ಇರುತ್ತದೆ.

shivnerifort best visit time

ಶಿವನೇರಿ ಕೋಟೆಯನ್ನು ತಲುಪುವುದು ಹೇಗೆ?

ಶಿವನೇರಿ ಕೋಟೆಯು ಪುಣೆಯಿಂದ ಸುಮಾರು 101 ಕಿಲೋಮೀಟರ್ ದೂರದಲ್ಲಿದೆ. ರಾಜ್ಯ ಸಾರಿಗೆ, ರೈಲ್ವೇ ಅಥವಾ ವಾಯುಮಾರ್ಗಗಳ ಮೂಲಕ ಪುಣೆಯನ್ನು ತಲುಪಬಹುದು. ನಂತರ ಶಿವನೇರಿ ಕೋಟೆಯ ತಳದಲ್ಲಿರುವ ಜುನ್ನಾರ್ ತಲುಪಲು ಕ್ಯಾಬ್ ತೆಗೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಪುಣೆಯಲ್ಲಿ ಇಂಟರ್‌ಸಿಟಿ/ಬಾಡಿಗೆ ಕ್ಯಾಬ್‌ಗಳು ಸುಲಭವಾಗಿ ಲಭ್ಯವಿವೆ. ಆದರೆ ಜುನ್ನಾರ್ ತಲುಪಲು ಬಸ್ ಅಥವಾ ಸ್ವಂತ ವಾಹನ ಚಾಲನೆ ಮಾಡಿಕೊಂಡು ತೆರಳಬಹುದು.

ವಿಮಾನ: ಪುಣೆ ವಿಮಾನ ನಿಲ್ದಾಣದಿಂದ ಶಿವನೇರಿ ಸುಮಾರು 94 ಕಿಲೋಮೀಟರ್ ದೂರದಲ್ಲಿದೆ.

ರೈಲ್ವೆ/ಬಸ್ಸು: ರೈಲು ಅಥವಾ ರಾಜ್ಯ ಸಾರಿಗೆ ಬಸ್‌ಗಳ ಮೂಲಕ ಪುಣೆಗೆ ತಲುಪುವವರು ಪುಣೆ ರೈಲ್ವೆ ಜಂಕ್ಷನ್ ಅಥವಾ ಪುಣೆ ಬಸ್ ನಿಲ್ದಾಣದಲ್ಲಿ ಇಳಿಯಬೇಕು. ಈ ಎರಡೂ ನಿಲ್ದಾಣಗಳು ಕಿಲೋಮೀಟರ್ ದೂರದಲ್ಲಿವೆ. ಆದ್ದರಿಂದ, ಪ್ರಯಾಣಿಕರು ಶಿವನೇರಿ ತಲುಪಲು ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣದಿಂದ ಸರಿಸುಮಾರು 96 ಕಿಲೋಮೀಟರ್ ದೂರವನ್ನು ಪ್ರಯಾಣಿಸಬೇಕಾಗುತ್ತದೆ.

ಏಳು ಬಾಗಿಲುಗಳ ಮೂಲಕ ಮಾರ್ಗ

ಶಿವನೇರಿ ಕೋಟೆಗೆ ಹೋಗುವ ಎರಡೂ ಮುಖ್ಯ ರಸ್ತೆಗಳು ಜುನ್ನಾರ್ ಪಟ್ಟಣದ ಮೂಲಕ ಮಾತ್ರ ಹೋಗುತ್ತವೆ. ಕೋಟೆಯ ಮಾರ್ಗದಲ್ಲಿ ಸಾಗುವಾಗ ಏಳು ಬಾಗಿಲುಗಳು ಎದುರಾಗುತ್ತವೆ. ಇವುಗಳನ್ನು ಮಹಾದರ್ ಬಾಗಿಲು, ಪಿರ್ ಬಾಗಿಲು, ಪರ್ವಂಗಿ (ಅನುಮತಿ) ಬಾಗಿಲು, ಹಾಥಿ (ಆನೆ) ಬಾಗಿಲು, ಸಿಪಾಯಿ (ಸೈನಿಕ) ಬಾಗಿಲು, ಫಾಟಕ್ (ಗೇಟ್) ಬಾಗಿಲು ಮತ್ತು ಕುಲಬ್ಕರ್ ಬಾಗಿಲು ಎಂದು ಕರೆಯಲಾಗುತ್ತದೆ.

More News

Read more about: maharashtra fort pune
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+