ಪಂಚಾಂಗದ ಪ್ರಕಾರ ಶಾರದೀಯ ನವರಾತ್ರಿ 2024 ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯೊಂದಿಗೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಕಟ್ಟುನಿಟ್ಟಾಗಿ ಉಪವಾಸವನ್ನು ಆಚರಿಸುವುದು ಮತ್ತು ನಿಜವಾದ ಭಕ್ತಿಯಿಂದ ಪೂಜಿಸುವುದರಿಂದ ಮನೆ ಸಂತೋಷ ಮತ್ತು ಶಾಂತಿಯಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಜೀವನವು ಮಂಗಳಕರವಾಗಿರುತ್ತದೆ.
ಸನಾತನ ಧರ್ಮದಲ್ಲಿ ಶಾರದೀಯ ನವರಾತ್ರಿಗೆ ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಹಳ ಮಹತ್ವವಿದೆ. ಈ ಹಬ್ಬವನ್ನು ಸತತ 9 ಹಗಲು ರಾತ್ರಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಜನರು ವಿವಿಧ ರೀತಿಯ ಪೂಜಾ ವಿಧಿಗಳನ್ನು ಮಾಡುವ ಮೂಲಕ ದುರ್ಗಾ ದೇವಿ ಮತ್ತು ದೇವಿಯ ಒಂಬತ್ತು ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿ (ಶಾರದೀಯ ನವರಾತ್ರಿ 2024) ಪ್ರಾರಂಭವಾಗಿದೆ. ಇದು ಈ ಬಾರಿ ಅಕ್ಟೋಬರ್ 13 ರಂದು ದಸರಾದೊಂದಿಗೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ, ದುರ್ಗಾ ದೇವಿಯ ಪೂಜೆಯ ಮಾಡುವುದರ ಜೊತೆಗೆ ದೇವಾಲಯಕ್ಕೂ ಭೇಟಿ ನೀಡುವುದರಿಂದ ಭಕ್ತರ ಎಲ್ಲಾ ಆಸೆಗಳನ್ನು ನೆರವೇರುತ್ತವೆಯಂತೆ. ಹಾಗಾದರೆ ಬನ್ನಿ, ನವರಾತ್ರಿಯ ಸಮಯದಲ್ಲಿ ಯಾವ ದೇವಾಲಯಗಳಿಗೆ ಭೇಟಿ ನೀಡಬೇಕು, ವಿಶೇಷತೆಗಳೇನು ಎಂದು ತಿಳಿಯೋಣ...
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ
ಚಾಮುಂಡೇಶ್ವರಿ ದೇವಿಯನ್ನು ದುರ್ಗಾ ದೇವಿಯ ಅತ್ಯಂತ ಉಗ್ರ ರೂಪವೆಂದು ಪರಿಗಣಿಸಲಾಗಿದೆ. ಚಂಡ ಮತ್ತು ಮುಂಡ ಎಂಬ ರಾಕ್ಷಸರನ್ನು ಕೊಂದ ನಂತರ ದೇವಿಗೆ ಈ ಹೆಸರು ಬಂದಿದೆ. ಮೈಸೂರಿನಿಂದ ಸುಮಾರು 13 ಕಿ.ಮೀ ದೂರದಲ್ಲಿರುವ, ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಚಾಮುಂಡೇಶ್ವರಿ ದೇವಿಯನ್ನು ಮೈಸೂರು ರಾಜರು ಶತಮಾನಗಳಿಂದಲೂ ಪೂಜಿಸುತ್ತಿದ್ದಾರೆ. ಈ ದೇವಾಲಯವು 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಸತಿ ದೇವಿಯ ಕೂದಲು ಬಿದ್ದಿದೆ ಎಂದು ನಂಬಲಾಗಿದೆ. ಆದ್ದರಿಂದ ನವರಾತ್ರಿಯಲ್ಲಿ ಇಲ್ಲಿಗೆ ದರ್ಶನಕ್ಕೆ ಬಂದರೆ ಭಕ್ತರ ದುಃಖಗಳೆಲ್ಲವೂ ದೂರಾಗುತ್ತವೆ.

ತೆರಳುವುದು ಹೇಗೆ?
ಚಾಮುಂಡೇಶ್ವರಿ ದೇವಸ್ಥಾನವು ಮೈಸೂರು ಜಂಕ್ಷನ್ ರೈಲು ನಿಲ್ದಾಣದಿಂದ 13 ಕಿಲೋಮೀಟರ್ ದೂರದಲ್ಲಿದೆ. ಆಟೋ ರಿಕ್ಷಾಗಳು ಇಲ್ಲಿಂದ ಸುಲಭವಾಗಿ ಲಭ್ಯವಿದೆ. ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ಹೋಗಲು ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮೈಸೂರು ಸಿಟಿ ಬಸ್ ನಿಲ್ದಾಣದಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪ್ರತಿ 20 ನಿಮಿಷಗಳಿಗೊಮ್ಮೆ KSRTC ಬಸ್ ಸೌಲಭ್ಯಗಳು ಇವೆ.
ಹರಿದ್ವಾರದ ಮಾನಸಾ ದೇವಿ ದೇವಸ್ಥಾನ
ಮಾನಸಾ ದೇವಿ ದೇವಸ್ಥಾನವು ಉತ್ತರಾಖಂಡದ ಪವಿತ್ರ ನಗರವಾದ ಹರಿದ್ವಾರದಲ್ಲಿದೆ. ದೇವಸ್ಥಾನವು ಮಾನಸಾ ದೇವಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಮಾತೆ ಮಾನಸಾ ದೇವಿಯನ್ನು ವಿವಿಧ ಪುರಾಣಗಳಲ್ಲಿ ವಿವಿಧ ರೀತಿಯಲ್ಲಿ ವಿವರಿಸಲಾಗಿದೆ. ಮಾನಸಾ ದೇವಿಯನ್ನು ಶಂಕರನ ಮಗಳು ಎಂದು ಗುರುತಿಸಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ತಾಯಿ ಮಾನಸಾ ಜಗತ್ಕಾರು ಅವರನ್ನು ವಿವಾಹವಾದರು. ಇವರ ಮಗನ ಹೆಸರು ಆಸ್ತಿಕ್. ಮಾನಸಾ ದೇವಿಯನ್ನು ಸರ್ಪಗಳ ರಾಜ ವಾಸುಕಿಯ ಸಹೋದರಿ ಎಂದೂ ಕರೆಯುತ್ತಾರೆ. ಇಲ್ಲಿ ನಿಜವಾದ ಭಕ್ತಿಯಿಂದ ಪೂಜೆ ಮಾಡಿದರೆ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂದು ಹೇಳಲಾಗುತ್ತದೆ. ನವರಾತ್ರಿಯ ಸಮಯದಲ್ಲಿ, ಹರಿದ್ವಾರದ ಈ ದೈವಿಕ ದೇವಾಲಯದಲ್ಲಿ ಭಾರೀ ಜನಸಮೂಹ ಸೇರುತ್ತದೆ. ವಿಶೇಷವೆಂದರೆ ಭಾರತದಲ್ಲಿ ಮಾತೆ ಮಾನಸ ಇತರ ಅನೇಕ ದೇವಾಲಯಗಳಿವೆ, ಆದರೆ ಇದನ್ನು ಮುಖ್ಯವೆಂದು ಪರಿಗಣಿಸಲಾಗಿದೆ.
ತೆರಳುವುದು ಹೇಗೆ?
ಮಾನಸಾ ದೇವಿ ದೇವಸ್ಥಾನವು ಹರಿದ್ವಾರದಿಂದ 3 ಕಿಲೋಮೀಟರ್ ದೂರದಲ್ಲಿದೆ ಮತ್ತು ಕೇಬಲ್ ಕಾರ್ ಮೂಲಕ ಅಥವಾ ಕಾಲ್ನಡಿಗೆಯಲ್ಲಿಯೂ ತಲುಪಬಹುದು. ದೇವಸ್ಥಾನದವರೆಗಿನ ನಡಿಗೆಯು ಒಂದೂವರೆ ಕಿಲೋಮೀಟರ್ ಎತ್ತರದ ಚಾರಣವಾಗಿದೆ ಮತ್ತು ಸಾಕಷ್ಟು ಶ್ರಮದಾಯಕವಾಗಿದೆ. ಅದಕ್ಕಾಗಿಯೇ ಬಹಳಷ್ಟು ಜನರು ಕೇಬಲ್ ಕಾರ್ ಅನ್ನು ಬಯಸುತ್ತಾರೆ. ಪರ್ಯಾಯವಾಗಿ, ದೇವಸ್ಥಾನವನ್ನು ತಲುಪಲು ಟ್ಯಾಕ್ಸಿಗಳು ಮತ್ತು ಆಟೋ-ರಿಕ್ಷಾಗಳು ಸಹ ಆಗಾಗ್ಗೆ ಲಭ್ಯವಿವೆ.

ಮನಾಲಿಯ ಹಿಡಿಂಬಾ ದೇವಸ್ಥಾನ
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಹಿಡಿಂಬಾ ದೇವಾಲಯಕ್ಕೆ ಹಿಡಿಂಬಾ ದೇವಿಯ ಹೆಸರನ್ನು ಇಡಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹಿಡಿಂಬೆ ತನ್ನ ಸಹೋದರ ಹಿಡಿಂಬನೊಂದಿಗೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ರಾಕ್ಷಸಳಾಗಿ ಹುಟ್ಟಿದ ಹಿಡಿಂಬೆಯು ತನ್ನ ವೀರ ಸಹೋದರನನ್ನು ಸೋಲಿಸುವ ವ್ಯಕ್ತಿಯನ್ನು ಮದುವೆಯಾಗುವುದಾಗಿ ಪ್ರತಿಜ್ಞೆ ಮಾಡಿದ್ದಳು. ಭೀಮನು ಆಕೆಯ ಪ್ರತಿಜ್ಞೆಯನ್ನು ಪೂರೈಸಿದನು. ನಂತರ ಹಿಡಿಂಬೆಗೂ, ಭೀಮನಿಗೂ ಮದುವೆಯಾಯಿತು. ಈ ದೇವಾಲಯದಲ್ಲಿ ದರ್ಶನ ಪಡೆದರೆ ದೈವಿಕ ಶಕ್ತಿಗಳ ಅನುಭವವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈಡೇರದ ಆಸೆಗಳು ಈಡೇರುತ್ತವೆ ಎನ್ನಲಾಗಿದೆ.
ತೆರಳುವುದು ಹೇಗೆ?
ಈ ದೇವಾಲಯವು ಮನಾಲಿಯ ಮುಖ್ಯ ನಗರ ಕೇಂದ್ರದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿದೆ. ನೀವು ಬಸ್, ಟ್ಯಾಕ್ಸಿ ಅಥವಾ ಕಾಲ್ನಡಿಗೆಯ ಮೂಲಕ ದೇಗುಲವನ್ನು ಪ್ರವೇಶಿಸಬಹುದು.


Click it and Unblock the Notifications

















