ಮಹಾ ಶಿವನು ಶಿವಲಿಂಗ ಸ್ವರೂಪಿಯಾಗಿ ನೆಲೆಸುತ್ತಾನೆ. ಭಾರತದಲ್ಲಿನ ಹಿಂದೂಗಳಿಗೆ ಪುಣ್ಯ ಪವಿತ್ರವಾದ ದೇವತಾ ಸ್ವರೂಪಿ ಶಿವನು. ಶಿವನ ಮುಂದೆ ನಂದಿಯು ನೆಲೆಸಿರುತ್ತಾನೆ. ಪವಿತ್ರವಾದ ಹಬ್ಬವಾದ ಮಹಾ ಶಿವರಾತ್ರಿಯೊಂದು ಶಿವನನ್ನು ಆರಾಧಿಸುತ್ತೇವೆ. ಅಂದು ಉಪವಾಸವಿದ್ದರೆ ಮೋಕ್ಷ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ನಮ್ಮ ದೇಶದಲ್ಲಿ ಅತ್ಯಂತ ದೊಡ್ಡದಾದ ಲಿಂಗ, ಕೋಟಿಲಿಂಗ, ಪಂಚಮುಖಿ ಲಿಂಗ, ಕದಲುವ ಲಿಂಗ, ದಿನ ದಿನವೂ ದೊಡ್ಡದಾಗುತ್ತಿರುವ ಲಿಂಗ ಎಂದು ಹಲವಾರು ಲಿಂಗಗಳ ಮಹಿಮೆಯ ಬಗ್ಗೆ ನಾವು ಕೇಳಿದ್ದೇವೆ, ನೋಡಿದ್ದೇವೆ. ಆಶ್ಚರ್ಯಕರವಾದ ಸಂಗತಿಯೆನೆಂದರೆ ನದಿಯೊಳಗೆ ಸಾಹಸ್ರ ಶಿವಲಿಂಗವನ್ನು ಒಂದೇ ಸ್ಥಳದಲ್ಲಿ ನೀವು ಕೇಳಿದ್ದೀರಾ? ಇದು ನಿಜವೇ? ಎಂದು ಉದ್ಘಾರ ತೆಗೆಯುವ ಮುಂಚೆ ಹೌದು ಇದು ನಿಜ. ಕರ್ನಾಟಕದಲ್ಲಿನ ಒಂದು ಪ್ರಸಿದ್ಧವಾದ ನದಿಯೊಳಗೆ ಸಹಸ್ರ ಶಿವಲಿಂಗವನ್ನು ನೀವು ಕಾಣಬಹುದು.
ಪ್ರಸ್ತುತ ಲೇಖನದಲ್ಲಿ ನದಿಯೊಳಗಿನ ಸಹಸ್ರ ಲಿಂಗದ ಬಗ್ಗೆ ತಿಳಿಯೋಣ.

ಎಲ್ಲಿದೆ?
ಈ ಸಹಸ್ರ ದೇವಾಲಯವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸುಮಾರು 15 ಕಿ,ಮೀ ದೂರದಲ್ಲಿ ಸಹಸ್ರ ಲಿಂಗ ಕ್ಷೇತ್ರವಿದೆ. ಇಲ್ಲಿ ಸಹಸ್ರ ಶಿವಲಿಂಗವನ್ನು ಹೊಂದಿರುವ ನದಿ ಇದೆ. ಈ ಹರಿಯುವ ನದಿಯು ಶಲ್ಮಲ ನದಿಯಾಗಿದೆ. ಇಲ್ಲಿ ಹಲವಾರು ಭಕ್ತರು ಪೂಜಿಸುತ್ತಾರೆ.

ವಿಜಯನಗರ
ವಿಜಯನಗರದ ಸಾಮ್ರಾಜ್ಯದ ರಾಜ ಸದಾಶಿವ ರಾಜ ಈ ಶಿರಸಿ ಪ್ರದೇಶವನ್ನು ಆಳಿದ್ದರಿಂದ ಸಹಸ್ರ ಲಿಂಗವನ್ನು ಇತನೇ ಸ್ಥಾಪಿಸಿದ್ದಾನೆ ಎಂದು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ.

ಸದಾಶಿವ
ವಿಜಯನಗರದ ರಾಜ ಸದಾಶಿವ ಈ ಸಹಸ್ರ ಲಿಂಗವನ್ನು 1678 ರಿಂದ 1718ರ ಮಧ್ಯೆಭಾಗದಲ್ಲಿ ಸ್ಥಾಪಿಸಿದ ಕಾರಣ, ಸಂತಾನ ಹಾಗೂ ರಾಜ್ಯದ ವಾರಸುದಾರನಿಗೋಸ್ಕರ ಇಲ್ಲಿನ ಶಲ್ಮಲ ನದಿಯ ಮೇಲೆ ಶಿವಲಿಂಗವನ್ನು ಸ್ಥಾಪಿಸಿದ್ದಾನೆ ಎಂದು ಕೆಲವರ ಅಭಿಪ್ರಾಯವಾಗಿದೆ.

ಭಕ್ತರು
ಈ ನದಿಯಲ್ಲಿ ಎಲ್ಲಿ ನೋಡಿದರು ಶಿವಲಿಂಗವು ಅತ್ಯಂತ ರಮಣೀಯವಾಗಿ ಕಾಣುವುದರಿಂದ ಭಕ್ತಿಯು ಅವರಿಸುತ್ತದೆ. ಶಿವ ಭಕ್ತರಿಗೆ ಅತ್ಯಂತ ಸೂಕ್ತ ಸ್ಥಳವೆಂದರೆ ಶಿರಸಿಯಲ್ಲಿನ ಸಹಸ್ರ ಲಿಂಗ. ಇಲ್ಲಿ ಹಲವಾರು ಭಕ್ತರು ದಿನ ನಿತ್ಯ ಶಿವನ್ನು ಆರಾಧಿಸಲು ಹೋಗುತ್ತಿರುತ್ತಾರೆ.

ಆಧ್ಯಾತ್ಮಿಕ ಕ್ಷೇತ್ರ
ಸಹಸ್ರ ಲಿಂಗ ಈ ನದಿಯಲ್ಲಿರುವುದರಿಂದ ಈ ಸುಂದರ ನದಿಯು ಒಂದು ಆಧ್ಯಾತ್ಮಿಕವಾದ ತಾಣವಾಗಿ ಪ್ರಖ್ಯಾತಿ ಪಡೆದ ಕ್ಷೇತ್ರವಾಗಿದೆ. ಇಂಥಹ ಸುಂದರವಾದ ವಾತಾವರಣದಲ್ಲಿ ಶಿವ ನಾಮ ಸ್ಮರಣೆ ಅತ್ಯಂತ ಭಕ್ತಿದಾಯಕವಾಗಿರುತ್ತದೆ.

ಸೂಕ್ತವಾದ ಸಮಯ
ಸುಂದರ ಸಹಸ್ರ ಲಿಂಗಗಳು ಮಳೆಗಾಲದಲ್ಲಿ ಅಷ್ಟು ಗೋಚಾರವಾಗುವುದಿಲ್ಲ. ಹಾಗಾಗಿ ಡಿಸೆಂಬರ್‍ನಿಂದ ಏಪ್ರಿಲ್ ತಿಂಗಳ ಮಧ್ಯೆ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಇಲ್ಲಿನ ಸಹಸ್ರ ಲಿಂಗಗಳು ಕಾಣುತ್ತವೆ.

ಶಿವರಾತ್ರಿ
ಮಹಾಶಿವರಾತ್ರಿಯ ದಿನ ಭಕ್ತರು ಈ ನದಿಯಲ್ಲಿರುವ ಸಹಸ್ರ ಲಿಂಗವನ್ನು ಸಂಭ್ರಮ, ಸಡಗರದಿಂದ ಆರಾಧಿಸುತ್ತಾರೆ. ಮಹಾ ಶಿವರಾತ್ರಿಯ ದಿನದಂದೂ ಶಿವನು ಈ ಲಿಂಗಗಳಲ್ಲಿ ನೆಲೆಸಿರುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ. ಕೇವಲ ಸ್ಥಳೀಯರೇ ಅಲ್ಲದೇ ದೇಶದಲ್ಲಿನ ಮೂಲೆ ಮೂಲೆಗಳಿಂದಲೂ ಭಕ್ತರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ.

ನಂದಿ
ಇಲ್ಲಿನ ವಿಶೇಷವೆನೆಂದರೆ ಪ್ರತಿ ಶಿವಲಿಂಗದ ಎದುರು ಮಹಾನಂದಿಯು ನೆಲೆಸಿರುತ್ತಾನೆ. ಇಲ್ಲಿ ಸಹಸ್ರ ಲಿಂಗವಿದ್ದು ಪ್ರತಿಯೊಂದು ಲಿಂಗಗಳ ಎದುರು ಕೂಡ ನಂದಿಯು ನೆಲೆಸಿರುವುದು ಮತ್ತಷ್ಟು ಸೊಬಗು ನೀಡಿದೆ.

ಕಾಂಬೊಡಿಯಾ
ಶಿರಸಿಯಲ್ಲಿನ ಸಹಸ್ರಲಿಂಗದಂತೆ ಕಾಂಬೊಡಿಯಾದಲ್ಲಿಯೂ ಕೂಡ 1000 ಶಿವಲಿಂಗವನ್ನು ಕಾಣಬಹುದಾಗಿದೆ. ಇಲ್ಲಿ ಶಿವ, ಬ್ರಹ್ಮ, ವಿಷ್ಣು, ರಾಮ, ಲಕ್ಷ್ಮಿ ಮತ್ತು ಹನುಮಂತನ ಕೆತ್ತನೆಯ ವಿಗ್ರಹಗಳಿವೆ. 12 ನೇ ಶತಮಾನದಲ್ಲಿ ಆಳಿದ ಸೂರ್ಯವರ್ಮನ್ ಹಾಗೂ ಉದಯಾಧಿತ್ಯ ವರ್ಮನ್ ರಾಜರು ಶಿಲ್ಪಗಳು ಹಾಗೂ ಶಿವಲಿಂಗವನ್ನು ಸ್ಥಾಪಿಸಿದರು ಎನ್ನಲಾಗಿದೆ.

ಅದ್ಭುತ ಹಿಂದೂ ಮತ ಆಧ್ಯಾತ್ಮಿಕ ಸ್ಥಳ
ಈ 2 ಪ್ರದೇಶಗಳನ್ನು ಅದ್ಭುತ ಹಿಂದೂ ಮತ ಆಧ್ಯಾತ್ಮಿಕ ಸ್ಥಳ ಎಂದು ಬಣ್ಣಿಸಲಾಗಿದೆ.

ಸಮೀಪದ ಸ್ಥಳಗಳು
ಇಲ್ಲಿ ಮಾರಿಕಾಂಬ ದೇವಾಲಯ, ಬನವಾಸಿ ದೇವಾಲಯ, ಉಂಚಳ್ಳಿ ಜಲಪಾತ, ಶ್ರೀ ಕ್ಷೇತ್ರ ಮಂಜುಗುಣಿ ಇನ್ನೂ ಹಲವು.


Click it and Unblock the Notifications
















