Search
  • Follow NativePlanet
Share
» »ಕರ್ನಾಟಕದ ಪಕ್ಷಿ ಕಾಶಿ : ರಂಗನತಿಟ್ಟು

ಕರ್ನಾಟಕದ ಪಕ್ಷಿ ಕಾಶಿ : ರಂಗನತಿಟ್ಟು

By Vijay

'ಈ ಸಮಯ ಆನಂದ ಮಯ' ಎನ್ನುವ ಹಾಗೆ ನಿಜವಾಗಿಯೂ ಚಳಿಗಾಲ ಬಂತೆಂದರೆ ಅದೇನೋ ಒಂದು ರೋಮಾಂಚನದ ಅನುಭೂತಿಯು ಮನಸ್ಸಿನಲ್ಲಿ ಸೃಷ್ಟಿಗೊಳ್ಳುತ್ತದೆ. ಸಾಲು ಸಾಲಾಗಿ ಬರುವ ಹಬ್ಬಗಳು, ರಜೆಗಳು, ಹಿತಕರವಾದ ವಾತಾವರಣ ಇಲ್ಲಿಯ ವರೆಗೆ ಮನಸ್ಸಿನಾಳದಲ್ಲಿ ರಾಜನಂತೆ ಆಳುತ್ತಿರುವ ಒತ್ತಡ, ಆತಂಕಗಳಿಗೆ ಒಂದು ಬ್ರೆಕ್ ಕೊಡುವುದರಲ್ಲಿ ಸಂಶಯವಿಲ್ಲ. ಗೆಳೆಯ, ಗೆಳತಿಯರೊಂದಿಗೆ ಆಗಲಿ ಅಥವಾ ಕುಟುಂಬ ಸಮೇತವೆ ಆಗಲಿ ಪ್ರವಾಸ ಹೊರಡುವುದಕ್ಕೆಂದು ಹೇಳಿ ಮಾಡಿಸಿದ ಕಾಲವಿದು.

ಮೈನೆರೆದು ನಿಂತಿರುವ ಪ್ರಕೃತಿ, ತಾಜಾತನದ ಅನುಭವ ಕೊಡುವ ಹಸಿರು ಹಾಸಿಗೆ, ಉತ್ಸಾಹ ತುಂಬಿಸುವ ಪರಿಸರದ ಕಂಪು, ಹಕ್ಕಿಗಳ ಕಲರವ....ಇಷ್ಟು ಸಾಕು ನಮ್ಮನ್ನು ನಾವು ಮರೆಯಲು ತಾನೆ.. ಇನ್ನೇನು ಬೇಕು? ಹಾಗಾದರೆ ಭೇಟಿ ನೀಡೋಣವೆ 'ಕರ್ನಾಟಕದ ಪಕ್ಷಿ ಕಾಶಿ' ರಂಗನ ತಿಟ್ಟುಗೊಮ್ಮೆ?

ರಂಗನತಿಟ್ಟು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಬೃಹತ್ ಪಕ್ಷಿಧಾಮವಾಗಿದೆ. ಕೇವಲ 40 ಎಕರೆ ಪ್ರದೇಶದಲ್ಲಿ ಹರಡಿರುವ ಈ ಪಕ್ಷಿಧಾಮವು ದ್ವೀಪ ಸಮೂಹವಾಗಿದ್ದು ಕಾವೇರಿ ನದಿಯಲ್ಲಿ ಹಲವು ಕಿರುದ್ವೀಪಗಳನ್ನು ಹೊಂದಿದೆ. ಭಗವಾನ್ ವಿಷ್ಣುವಿನ ಅವತಾರವೆನ್ನಲಾಗುವ ಶ್ರೀ ರಂಗನಾಥ ಸ್ವಾಮಿಯಿಂದಾಗಿ ಇದು ಈ ಹೆಸರನ್ನು ಪಡೆದಿದೆ. ಪ್ರಸಿದ್ಧ ಐತಿಹಾಸಿಕ ಪಟ್ಟಣ ಶ್ರೀರಂಗಪಟ್ಟಣದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಈ ಪಕ್ಷಿ ಧಾಮವು, ಮೈಸೂರು ಉತ್ತರ ಭಾಗದಿಂದ 16 ಕಿ.ಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ. 2011-12 ರ ಸಮಯದಲ್ಲಿ ಈ ಪಕ್ಷಿಧಾಮಕ್ಕೆ ಸುಮಾರು ಮೂರು ಲಕ್ಷದಷ್ಟು ಜನ ಭೇಟಿ ನೀಡಿದ್ದರೆಂದರೆ ನೀವೆ ಊಹಿಸಿಕೊಳ್ಳಿ, ಯಾವ ರೀತಿ ಜನಪ್ರಿಯತೆಯನ್ನು ಸಾಧಿಸುತ್ತಿದೆ ಎಂದು, ಈ ಪಕ್ಷಿಧಾಮ.

ಕರ್ನಾಟಕದ ಪಕ್ಷಿ ಕಾಶಿ : ರಂಗನತಿಟ್ಟು

ಸಂಕ್ಷೀಪ್ತ ಇತಿಹಾಸ

1648 ರಲ್ಲಿ ಅಂದಿನ ಮೈಸೂರಿನ ಮಹಾರಾಜರಾದ ಕಂಠೀರವ ನರಸಿಂಹರಾಜರ್ ಒಡೇಯರ್ ಅವರು ಕಾವೇರಿ ನದಿಗೆ ನಿರ್ಮಿಸಿದ್ದರೆನ್ನಲಾದ ಒಡ್ಡಿನಿಂದ ಇಂದು ಇಲ್ಲಿ ಕಿರು ದ್ವೀಪಗಳನ್ನು ಕಾಣಬಹುದು. ನಂತರ ಭಾರತದ ಹೆಮ್ಮೆಯ ಪಕ್ಷಿ ವಿಜ್ಞಾನಿ ಡಾ. ಸಲೀಂ ಅಲಿಯವರು ಈ ಕಿರುದ್ವೀಪಗಳು ಪಕ್ಷಿಗಳ ವಂಶಾಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವುದನ್ನು ಮನಗಂಡು 1940 ರಲ್ಲಿ ಮೈಸೂರಿನ ಮಹಾರಾಜರನ್ನು ಕುರಿತು ಈ ತಾಣವನ್ನು ಪಕ್ಷಿಧಾಮವನ್ನಾಗಿ ಘೋಷಿಸಬೇಕೆಂದು ಮನವೊಲಿಸಿದರು.

ಪ್ರವಾಹ ಸಮಯ

ಕೆಲವೊಮ್ಮೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿಯಾದ ಮಳೆಯಿಂದಾಗಿ ಕೆ.ಆರ್.ಎಸ್ ಆಣೆಕಟ್ಟು ಮಟ್ಟ ಮೀರಿ ಭರ್ತಿಗೊಂಡಾಗ, ಜಲಾಶಯದಿಂದ ನೀರನ್ನು ಬಿಡಲಾಗುತ್ತದೆ. ಈ ಸಂದರ್ಭದಲ್ಲಿ ರಂಗನತಿಟ್ಟುವಿನ ದ್ವೀಪಗಳಲ್ಲಿ ಅತಿವೃಷ್ಟಿಯುಂಟಾಗಿ ಈ ಸಮಯದಲ್ಲಿ ದೋಣಿ ವಿಹಾರವನ್ನು ರದ್ದುಗೊಳಿಸಲಾಗುತ್ತದೆ. ಸಾಮಾನ್ಯವಾಗಿ ದೋಣಿ ವಿಹಾರದ ಮೂಲಕ ಅಚ್ಚುಕಟ್ಟಾಗಿ ಪಕ್ಷಿ ವೀಕ್ಷಣೆಯನ್ನು ಇಲ್ಲಿ ಮಾಡಬಹುದು. ಪ್ರಸ್ತುತ, ಕಳೆದ ಕೆಲವು ದಶಕಗಳಿಂದ ಪ್ರವಾಹದಿಂದಾಗಿ ಇಲ್ಲಿನ ಕಿರು ದ್ವೀಪಗಳಲ್ಲಿ ಮೂರು ದ್ವೀಪಗಳು ಹಾನಿಗೊಳಗಾಗಿರುವುದನ್ನು ಕಾಣಬಹುದು.

ಮೈ ಮರೆಯಿರಿ

ಈ ಧಾಮವು ತನ್ನ ಸುತ್ತ ಮುತ್ತಲೂ ಹಲವು ಬಗೆಯ ಮರಗಳು, ಶಾಂತ ಪರಿಸರ, ತಾಜಾತನದ ಅನುಭವಗಳನ್ನು ಹೊಂದಿದ್ದು, ವಿಹರಿಸುತ್ತಿರುವಾಗ ಮನಸ್ಸಿಗೆ ಮುದ ನೀಡುತ್ತದೆ. ಚಳಿಗಾಲ, ಇಲ್ಲಿ ಪಕ್ಷಿಗಳಿಗೆ ಮೀಸಲಾದ ಕಾಲ. ಸುಮಾರು 40,000 ದ ವರೆಗೂ ಪಕ್ಷಿಗಳು ಈ ಸಂದರ್ಭದಲ್ಲಿ ಇಲ್ಲಿ ಜಮಾಯಿಸುತ್ತವೆ. ನಿಮ್ಮೊಳಗಿನ ಇನ್ನೂ ಅನಾವರಣಗೊಳ್ಳದ ಛಾಯಾಗ್ರಾಹಕ ಪ್ರತಿಭೆಯನ್ನು ಹೊರ ಚಿಮ್ಮಿಸಲು ಇಲ್ಲಿನ ಪ್ರವಾಸ ಸುವರ್ಣ ಅವಕಾಶ. ವಿಶೀಷ್ಟ ಭಂಗಿಗಳಲ್ಲಿ ಪಕ್ಷಿಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿದು ಸಂತೃಪ್ತಿಯ ಭಾವನೆಯನ್ನು ನಿಮ್ಮದಾಗಿಸಿಕೊಳ್ಳಿ. ನಿಜವಾಗಿಯು ಇದು ನಿಮಗೊಂದು ಅಭೂತಪೂರ್ವ ಅನುಭೂತಿಯನ್ನು ನೀಡುವುದಲ್ಲದೆ, ಮನಸ್ಸಿನ ದುಗುಡು ದುಮ್ಮಾನುಗಳನ್ನು ಹೊಡೆದೋಡಿಸುತ್ತದೆ.

ಕರ್ನಾಟಕದ ಪಕ್ಷಿ ಕಾಶಿ : ರಂಗನತಿಟ್ಟು

ಮಾರ್ಗದರ್ಶಕರುಳ್ಳ ದೋಣಿ ಪ್ರಯಾಣವು ದಿನದ ಸಮಯದಲ್ಲಿ ಇಲ್ಲಿ ಲಭ್ಯವಿರುತ್ತದೆ. ಕೇವಲ ಪಕ್ಷಿಗಳು ಮಾತ್ರವಲ್ಲದೆ ಈ ಪರಿಸರದಲ್ಲಿ ಕಂಡು ಬರುವ ಇತರೆ ಜೀವಿಗಳಾದ ಮೊಸಳೆ, ಬಾನೆಟ್ ಮಂಗ, ಹಾರುವ ನರಿ (ಫ್ಲೈಯಿಂಗ್ ಫಾಕ್ಸ್), ಭಾರತೀಯ ಬೂಧು ಬಣ್ಣದ ಮುಂಗುಸಿ, ಮಾನಿಟರ್ ಲಿಜಾರ್ಡ್ ನಂತಹ ಹತ್ತು ಹಲವು ಜೀವಿಗಳನ್ನು ನೋಡುತ್ತ ಆನಂದಿಸುತ್ತ ಕಾಲ ಕಳೆಯಬಹುದು. ನೈಜ ಪರಿಸರದಲ್ಲಿ ಜೀವಿಗಳ ಚಲನ ವಲನ ಕುರಿತು ಪುಸ್ತಕದ ಬದನೆಕಾಯಿಗಿಂತಲೂ ನೈಜವಾಗಿ ತಿಳಿದುಕೊಳ್ಳಲು ಮಕ್ಕಳಿಗೆ ಇದೊಂದು ಜ್ಞಾನಯುಕ್ತ ಮನರಂಜನೆಯಾಗಿದೆ. ಅಷ್ಟೆ ಅಲ್ಲ, ಆಧುನಿಕ ಜೀವನ ಶೈಲಿಯಲ್ಲಿ ಕಳೆದು ಹೋಗಿರುವ ನಮಗೆ ಪ್ರಕೃತಿಯೊಡನಿರುವ ಅವಿನಾಭಾವ ಸಂಬಂಧವನ್ನು ಪುನರ್ ವಿಮರ್ಶಿಸುವುದಕ್ಕೆ ಈ ತರಹದ ಪ್ರವಾಸ ಅತ್ಯಂತ ಸಹಕಾರಿಯಾಗುತ್ತದೆ.

ವೀಕ್ಷಿಸಬಹುದಾದ ಪಕ್ಷಿಗಳು

ಪ್ರವಾಸದ ಆದರ್ಶ ಸಮಯದಲ್ಲಿ ಅಂದರೆ ಚಳಿಗಾಲದಲ್ಲಿ ಇಲ್ಲಿ ಕಂಡು ಬರುವ ಪಕ್ಷಿಗಳೆಂದರೆ, ಪೈಂಟೆಡ್ ಸ್ಟಾರ್ಕ್, ಏಷಿಯನ್ ಒಪನ್ ಬಿಲ್ ಸ್ಟಾರ್ಕ್, ಸ್ಪೂನ್ ಬಿಲ್, ವೂಲ್ಲಿ ನೆಕ್ಡ್ ಸ್ಟಾರ್ಕ್, ವ್ಹಿಸ್ಟ್ಲಿಂಗ್ ಡಕ್, ಇಮ್ಡಿಯನ್ ಶ್ಯಾಗ್, ಸ್ಟಾರ್ಕ್ ಬಿಲ್ಡ್ ಕಿಂಗ್ ಫಿಶರ್. ಇವುಗಳಲ್ಲದೆ ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಕಂಡುಬರುವ ಪಕ್ಷಿಗಳೆಂದರೆ ಎಗ್ರೆಟ್ಸ್, ಕೊರ್ಮೊರಾಂಟ್ಸ್, ಒರಿಯಂಟಲ್ ಡಾರ್ಟರ್ ಮತ್ತು ಹೆರಾನ್‍ಗಳು. ಗ್ರೇಟ್ ಸ್ಟೋನ್ ಪ್ಲೊವರ್ ಮತ್ತು ರಿವರ್ ಟರ್ನ್‍ಗಳು ಕೂಡ ಇಲ್ಲಿ ಕಂಡುಬರುತ್ತವೆ.

ಈ ಪಕ್ಷಿಧಾಮಕ್ಕೆ ಅತಿ ಹತ್ತಿರದಲ್ಲಿರುವ ಪಟ್ಟಣಗಳಾದ ಶ್ರೀರಂಗಪಟ್ಟಣ ಹಾಗು ಮೈಸೂರುಗಳಲ್ಲಿ ಹಲವಾರು ಹೋಟೆಲುಗಳು ಲಭ್ಯವಿದ್ದು, ನಿಮ್ಮ ಸಾಮರ್ಥ್ಯಾನುಸಾರ ಯಾವುದಾದರೂ ಹೋಟೆಲಿನಲ್ಲಿ ತಂಗಿ, ಈ ಧಾಮಕ್ಕೆ ದಿನದ ಪ್ರವಾಸವನ್ನು ನಿರಾಯಾಸವಾಗಿ ಕೈಗೊಳ್ಳಬಹುದು. ಆದರೆ ಸಂಪೂರ್ಣ ಪ್ರವಾಸದ ರೂಪು ರೇಶೆಗಳನ್ನು ಮೊದಲೆ ಸಿದ್ಧ ಪಡಿಸಿಕೊಂಡರೆ ನಿಮ್ಮ ಪ್ರವಾಸ ಅತ್ಯಂತ ಸುಲಭ ಹಾಗು ಆನಂದಮಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ!

ಕರ್ನಾಟಕದ ಪಕ್ಷಿ ಕಾಶಿ : ರಂಗನತಿಟ್ಟು

ತಲುಪುವುದು ಹೇಗೆ

ರಂಗನತಿಟ್ಟು ಪಕ್ಷಿಧಾಮವು ಶ್ರೀರಂಗಪಟ್ಟಣದಿಂದ 3 ಕಿ.ಮೀ ಹಾಗು ಮೈಸೂರಿನಿಂದ 16 ಕಿ.ಮೀ ಗಳಷ್ಟು ಮಾತ್ರವೆ ದೂರ. ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ನಿರಂತರವಾಗಿ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಹೊರಡುತ್ತಿರುತ್ತವೆ. ಅಲ್ಲದೆ ಬೆಂಗಳೂರಿನಿಂದ ಮೈಸೂರಿಗೆ ರೈಲು ಹಾಗು ರಸ್ತೆಯ ಮುಖಾಂತರ ಉತ್ತಮ ಸಂಪರ್ಕವಿದೆ. ಹಾಗಾಗಿ ಬೆಂಗಳೂರು ಹಾಗು ಮೈಸೂರಿನಿಂದ ಈ ಪಕ್ಷಿಧಾಮಕ್ಕೆ ನಿರಾಯಾಸವಗಿ ತಲುಪಬಹುದು. ಇಷ್ಟವಿದ್ದಲ್ಲಿ ಖಾಸಗಿ ಟ್ಯಾಕ್ಸಿಗಳನ್ನು ಕೂಡ ಬಾಡಿಗೆಗೆ ಪಡೆದು ಕುಟುಂಬ ಸಮೇತ ಈ ಪಕ್ಷಿಧಾಮದ ಪ್ರವಾಸ ಯೋಜನೆ ಹಾಕಿಕೊಳ್ಳಬಹುದು.

ರಂಗನತಿಟ್ಟು ಪಕ್ಷಿಧಾಮದ ಸಮಯ:

ಬೆಳಿಗ್ಗೆ 9 ರಿಂದ ಸಾಯಂಕಾಲ 6 ರ ವರೆಗೆ.

ರಂಗನತಿಟ್ಟು ಪಕ್ಷಿಧಾಮ ಪ್ರವೇಶ ಶುಲ್ಕ:

ಭಾರತೀಯರಿಗೆ: ರೂ. 50

ವಿದೇಶಿಯರಿಗೆ: ರೂ. 200

ರಂಗನತಿಟ್ಟು ಪಕ್ಷಿಧಾಮ ವಾಹನ ನಿಲುಗಡೆ ಶುಲ್ಕ:

ದ್ವಿಚಕ್ರ ವಾಹನ: ರೂ. 20

ನಾಲ್ಕು ಚಕ್ರ ವಾಹನ: ರೂ. 30

ಹಾಗಿದ್ದರೆ ಇನ್ನೇಕೆ ತಡ? ಇಂದೆ ಪ್ರವಾಸ ಯೋಜನೆಯನ್ನು ಮಾಡಿಕೊಳ್ಳಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X