Search
  • Follow NativePlanet
Share
» »ಪುಷ್ಪ’ ಶೂಟಿಂಗ್ ಇಲ್ಲೆ ನಡೆದಿದ್ದು; ಈ ಸುಂದರವಾದ ಸ್ಥಳ ಹೇಗಿದೆ ಗೊತ್ತಾ?

ಪುಷ್ಪ’ ಶೂಟಿಂಗ್ ಇಲ್ಲೆ ನಡೆದಿದ್ದು; ಈ ಸುಂದರವಾದ ಸ್ಥಳ ಹೇಗಿದೆ ಗೊತ್ತಾ?

ಅಲ್ಲು ಅರ್ಜುನ್ ಮತ್ತು ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್‌ ಬಸ್ಟರ್ ಚಿತ್ರ 'ಪುಷ್ಪ: ದಿ ರೈಸ್' ಚಿತ್ರ ಅಥವಾ ಆ ಚಿತ್ರದ ಹಾಡುಗಳನ್ನು ನೋಡಿದಾಗ ಸಿನಿಮಾ ತುಂಬೆಲ್ಲಾ ಹಚ್ಚ ಹಸಿರಿನ ಕಾಡುಗಳು, ಗದ್ದೆಗಳು, ದೇವಸ್ಥಾನಗಳು, ಸುಂದರವಾದ ಹಳ್ಳಿಗಳನ್ನು ತೋರಿಸಿರುವುದನ್ನು ಗಮನಿಸಬಹುದು. ಈ ಸೊಗಸಾದ ಸ್ಥಳಗಳು ಪುಷ್ಪ ಚಿತ್ರದ ಹೈಲೆಟ್'ಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು.

ಒಟ್ಟಾರೆ ಕಲಾವಿದರ ಅಭಿನಯದ ಜೊತೆಗೆ ಶೂಟಿಂಗ್ ಸ್ಥಳಗಳು ಕೂಡ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಂತೂ ಸುಳ್ಳಲ್ಲ. ಚಿತ್ರ ನೋಡಿದ ಮೇಲೆ ಕೆಲವರಿಗೆ ಈ ಸ್ಥಳಗಳು ಅಥವಾ ಕಾಡುಗಳು ಎಲ್ಲಿರಬಹುದು ಎಂಬ ಕುತೂಹಲ ಖಂಡಿತ ಇರುತ್ತದೆ. ಹಾಗಾಗಿ ನಾವಿಂದು ಆ ಸ್ಥಳಗಳ ಬಗ್ಗೆ ಹಾಗೂ ಅದು ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ ನೋಡಿ...

ಕಾಡು, ದೇವಸ್ಥಾನದ ಹಾದಿ

ಕಾಡು, ದೇವಸ್ಥಾನದ ಹಾದಿ

ತಮಿಳುನಾಡು-ಕೇರಳ ಗಡಿಯಲ್ಲಿರುವ ಹಳ್ಳಿಗಳಲ್ಲಿ ಪುಷ್ಪ ಚಿತ್ರದ ಕೆಲವು ಕಣ್ಮನ ಸೆಳೆಯುವ ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂಬುದು ಗಮನಿಸಬೇಕಾದ ವಿಚಾರ. ಈ ಗಡಿಭಾಗದಲ್ಲಿ ನಿಮಗೆ ಸುಂದರವಾದ ಪನ್ಪೋಜಿ ಎಂಬ ಗ್ರಾಮ ಸಿಗುತ್ತದೆ. ಅಚನ್ಕೋವಿಲ್ ಕಾಡಿಗೆ ಹೋಗುವ ದಾರಿಯೂ ಇಲ್ಲೇ ಇದೆ. ಇನ್ನು ತಿರುಮಲೈ ಕೋವಿಲ್ ದೇವಸ್ಥಾನವು ಸಹ್ಯಾದ್ರಿ ಬೆಟ್ಟಗಳ ಪಕ್ಕದಲ್ಲಿರುವ ಸಣ್ಣ ಬೆಟ್ಟದ ಮೇಲೆ ಇದೆ. ಇದನ್ನು ಪಶ್ಚಿಮ ಘಟ್ಟಗಳು ಎಂದೂ ಕರೆಯುತ್ತಾರೆ. ದೇವಾಲಯವನ್ನು ತಲುಪುವ ಮೊದಲು, ಚೆಕ್ ಪೋಸ್ಟ್‌ನಂತೆ ಕಾಣುವ ಒಂದು ಸಣ್ಣ ಕಟ್ಟಡವನ್ನು ನೋಡಬಹುದು. ಸಮೀಪದಲ್ಲಿ ಕಂಡುಬರುವ ಗುಡಿಸಲುಗಳು ಹೆಚ್ಚಿನ ರಕ್ಷಣೆಗಾಗಿ ಸಾಂಪ್ರದಾಯಿಕ ಹುಲ್ಲಿನ ಛಾವಣಿಯ ಬದಲಿಗೆ ರೂಫ್ ಶೀಟ್ ಹೊಂದಿವೆ.

ತಿರುಮಲೈ ಕೋವಿಲ್‌ ದೇವಸ್ಥಾನ

ತಿರುಮಲೈ ಕೋವಿಲ್‌ ದೇವಸ್ಥಾನ

ಪುಷ್ಪ ಚಿತ್ರದಲ್ಲಿನ ಜನಪ್ರಿಯ ಗೀತೆ ‘ಶ್ರೀವಲ್ಲಿ' ಹಾಡನ್ನು ಮುಖ್ಯವಾಗಿ ತಮಿಳುನಾಡಿನ ತೆಂಕಸಿ ಜಿಲ್ಲೆಯ ತಿರುಮಲೈ ಕೋವಿಲ್‌'ನಲ್ಲಿ ಚಿತ್ರೀಕರಿಸಲಾಗಿದೆ. ‘ಪುಷ್ಪ' ಚಿತ್ರದಲ್ಲಿಯೂ ದೇವಸ್ಥಾನದ ಕೆಂಪು-ಬಿಳಿ ಮೆಟ್ಟಿಲುಗಳು ಎದ್ದು ಕಾಣುತ್ತವೆ. ದೇವಾಲಯದ ಪ್ರವೇಶದ್ವಾರದ ಬಳಿ ಕೃತಕ ಸೆಟ್ ಹಾಕಲಾಗಿತ್ತು. ನಾಯಕಿ ರಶ್ಮಿಕಾ ಮಂದಣ್ಣ ಸ್ನೇಹಿತೆಯರ ಜೊತೆ ಸುತ್ತುವ ದೃಶ್ಯಗಳನ್ನು, ಅಲ್ಲು ಅರ್ಜುನ್ ಶ್ರೀವಲ್ಲಿ ಹುಕ್ ಸ್ಟೆಪ್ ಚಿತ್ರೀಕರಿಸಿರುವುದು ಇಲ್ಲಿಯೇ. ಬೆಟ್ಟದ ಮೇಲಿರುವ ದೇವಾಲಯದ ಗರ್ಭಗುಡಿಗೆ 526 ಮೆಟ್ಟಿಲುಗಳು ದಾರಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ನಡೆದು ಹೋಗಲು ಸಾಧ್ಯವಾಗದಿದ್ದರೆ ದೇವಸ್ಥಾನದವರೆಗೆ ಒಂದು ಕಿ.ಮೀ. ಪ್ರಯಾಣಿಸಲು ರೂ 50 ಪಾವತಿಸಿ ವಾಹನದಲ್ಲಿ ಪ್ರಯಾಣಿಸಬಹುದು. ಈ ರಸ್ತೆಯ ಟೋಲ್ ಶುಲ್ಕ ಬಹುಶಃ ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದೆ! ಪಾರ್ಕಿಂಗ್ ಸ್ಥಳವು ವಿಶಾಲವಾಗಿದ್ದು, ನೀವು ಆರಾಮವಾಗಿ ನಿಮ್ಮ ವಾಹನವನ್ನು ಅಲ್ಲಿ ನಿಲ್ಲಿಸಬಹುದು.

ಸುಯ್ಯನೆ ಬೀಸುವ ತಂಗಾಳಿ

ಸುಯ್ಯನೆ ಬೀಸುವ ತಂಗಾಳಿ

ತಿರುಮಲೈ ಕೋವಿಲ್‌ ದೇವಸ್ಥಾನದ ಆವರಣ ತಣ್ಣನೆಯ ತಂಗಾಳಿಯಿಂದ ಕೂಡಿರುತ್ತದೆ. ವಿಂಟೇಜ್ ಹಾರ್ನ್ ಧ್ವನಿವರ್ಧಕಗಳಿಂದ ಕೇಳಿಬರುವ ಲಯಬದ್ಧವಾದ 'ಕುಮಾರ ಸ್ತುತಿಗಳು' ವಾತಾವರಣವು ಭಕ್ತಿಯಿಂದ ತುಂಬಿ ತುಳುಕುವಂತೆ ಮಾಡುತ್ತದೆ. ಈ ದೇವಾಲಯವು 500 ವರ್ಷಗಳಷ್ಟು ಹಿಂದಿನದು. ಇಲ್ಲಿನ ಮುಖ್ಯ ದೇವರು 'ಬಾಲಮುರುಗ'. ಪಂದಳ ರಾಜನು ಈ ಪೂಜಾ ಸ್ಥಳವನ್ನು ನಿರ್ಮಿಸಲು ಮುಂದಾದನು ಎಂದು ಪುರಾಣಗಳು ಹೇಳುತ್ತವೆ. ಬೆಟ್ಟಗಳ ಮೇಲಿಂದ ಒಂದು ಕಡೆ ಪಶ್ಚಿಮ ಘಟ್ಟಗಳನ್ನು ಮತ್ತು ಇನ್ನೊಂದು ಬದಿಯಲ್ಲಿ ಕಣಿವೆಗಳನ್ನು ನೋಡಬಹುದು.

ಸುಂದರವಾದ ಬೀದಿಗಳನ್ನು ಹೊಂದಿದೆ ‘ಸುಂದರಪಾಂಡಿಯಪುರಂ’

ಸುಂದರವಾದ ಬೀದಿಗಳನ್ನು ಹೊಂದಿದೆ ‘ಸುಂದರಪಾಂಡಿಯಪುರಂ’

ತೆಂಕಸಿ ಜಿಲ್ಲೆಯ ಸುಂದರಪಾಂಡಿಯಪುರಂನಲ್ಲಿ ಕೂಡ ಅನೇಕ ಚಿತ್ರಗಳ ಚಿತ್ರೀಕರಣ ನಡೆದಿದೆ. ಇದು 'ಅಗ್ರಹಾರಗಳು' ತುಂಬಿರುವ ಒಂದು ಪ್ರಾಚೀನ ಗ್ರಾಮವಾಗಿದೆ. ಈ 'ಅಗ್ರಹಾರ'ಗಳಲ್ಲಿ ಅನೇಕ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ನಯನತಾರಾ ಅಭಿನಯದ ‘ಯಾರಡಿ ನೀ ಮೋಹಿನಿ' ಚಿತ್ರವನ್ನು ಇಲ್ಲಿಯೇ ಚಿತ್ರೀಕರಿಸಲಾಗಿತ್ತು ಎನ್ನಲಾಗಿದೆ. ‘ಅಗ್ರಹಾರ'ಗಳಲ್ಲಿರುವ ಎಲ್ಲಾ ಮನೆಗಳು ಕಟ್ಟಡದ ಹಿಂಭಾಗದಲ್ಲಿ ಸಣ್ಣ ಕೊಳಗಳನ್ನು ಹೊಂದಿವೆ. ಸುಂದರಪಾಂಡಿಯಪುರಂ ಕಲಾತ್ಮಕವಾದ ಸುಂದರವಾದ ಬೀದಿಗಳನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ. ಇಲ್ಲಿ ಪ್ರತಿ ಮನೆಗೆ ಬೇರೆ ಬೇರೆ ಬಣ್ಣಗಳಿವೆ. ಹಾಗೆಯೇ ಇಲ್ಲಿನ ಕೆಲವು ಮರಗಳಿಗೆ ಹೊಳೆಯುವ ಚೆಂದದ ಸೀರೆಗಳನ್ನು ಹೊದಿಸಿ, ಪೂಜಿಸಲಾಗುತ್ತದೆ. ಮಿನಿ ತೊಟ್ಟಿಲುಗಳನ್ನು ಸಹ ನೇತುಹಾಕಲಾಗುತ್ತದೆ. ಸುಂದರಪಾಂಡಿಯಪುರಂನಲ್ಲಿ ಹೂಬಿಡುವ ಸಮಯದಲ್ಲಿ, ಇಡೀ ಪ್ರದೇಶವು ವಿವಿಧ ರೀತಿಯ ಹೂವುಗಳಿಂದ ಆವೃತವಾಗಿರುತ್ತದೆ.

ಅರುಲ್ಮಿಗು ವಿಶ್ವನಾಥರ್ ದೇವಾಲಯ

ಅರುಲ್ಮಿಗು ವಿಶ್ವನಾಥರ್ ದೇವಾಲಯ

ಅರುಲ್ಮಿಗು ವಿಶ್ವನಾಥರ್ ದೇವಾಲಯವು ಶಿವನಿಗೆ ಅರ್ಪಿತವಾಗಿರುವ ತೆಂಕಶಿಯಲ್ಲಿನ ಪ್ರಮುಖ ಪೂಜಾ ಸ್ಥಳವಾಗಿದೆ. ಕಲ್ಲಿನಿಂದ ನಿರ್ಮಿಸಲಾದ ಈ ದೇವಾಲಯವು ಪ್ರಕೃತಿಯೊಂದಿಗೆ ಬೆರೆತುಹೋಗಿದೆ. ಹೊರಗೆ ಸೂರ್ಯನಿಂದ ಪ್ರಜ್ವಲಿಸುವಾಗಲೂ ದೇವಾಲಯದ ಒಳಭಾಗವು ತಂಗಾಳಿಯಿಂದ ಕೂಡಿರುತ್ತದೆ. ದೇವಾಲಯದಲ್ಲಿರುವ ಶಿಲ್ಪಗಳು ಮೇರುಕೃತಿಗಳಾಗಿದ್ದು, ನಿಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯಬಹುದು. ಗೋಡೆಗಳ ಮೇಲೆ ಕೆತ್ತಿರುವ ‘ವಟ್ಟೆಝುತ್ತು' ಪ್ರಾಚೀನ ಲಿಪಿಯನ್ನು ನೋಡಿದರೆ ಗತಕಾಲದತ್ತ ತೆರಳುವುದು ಖಂಡಿತ.

ತೆಂಕಸಿ ಕೇವಲ ಪ್ರಕೃತಿ ಪ್ರಿಯರಿಗೆ ಮಾತ್ರವಲ್ಲ, ಆಹಾರ ಪ್ರಿಯರಿಗೂ ಫೇವರಿಟ್. ಏಕೆಂದರೆ ಇಲ್ಲಿನ ಕೆಲವು ಹೋಟೆಲ್ ಗಳಲ್ಲಿ ಲಭ್ಯವಿರುವ ಚಿಕನ್ ಬಿರಿಯಾನಿ , ಪರೋಟಾ ಮತ್ತು ಪೆಪ್ಪರ್ ಚಿಕನ್ ಅನ್ನು ಬಾಯಿಗಿಡುತ್ತಿದ್ದಂತೆ ಕರಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X