Search
  • Follow NativePlanet
Share
» »ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!

ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!

By Vijay

ಹಿಂದುಗಳಲ್ಲಿ ಪುಣ್ಯ ಸಂಪಾದಿಸುವುದೆಂದರೆ ದೇವರಿಗೆ ಮತ್ತಷ್ಟು ಹತ್ತಿರವಾದಂತೆಂದು ಹೇಳಲಾಗುತ್ತದೆ. ಅದರಂತೆ ಪುಣ್ಯ ಸಂಪಾದಿಸಲೂ ಸಹ ಹಲವಾರು ಮಾರ್ಗಗಳಿವೆ. ಸಾಮಾನ್ಯವಾಗಿ ನಂಬುವಂತೆ ಹಿರಿಯರಿಗೆ ಗೌರವಾದರಗಳನ್ನು ನೀಡುವುದರ ಮೂಲಕ, ಮತ್ತೊಬ್ಬರಿಗೆ ಸಹಾಯ ಮಾಡುವುದರ ಮೂಲಕ, ಹಸಿದವರಿಗೆ ಆಹಾರ ನೀಡುವುದರ ಮೂಲಕ ಪುಣ್ಯ ಸಂಪಾದಿಸಬಹುದು.

ಅದರಂತೆ ಕೆಲವು ವಿಶೇಷ ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿಯಿಂದ ದೇವರನ್ನು ನೆನೆಯುವುದರ ಮುಲಕವೂ ಪುಣ್ಯ ಸಿಗುತ್ತದೆ ಎಂದು ಹಲವಾರು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿರುವುದನ್ನು ಗಮನಿಸಬಹುದು. ಅಷ್ಟಕ್ಕೂ ಪುಣ್ಯದಿಂದಾಗುವ ಲಾಭವಾದರೂ ಏನು? ಎಂದೆನೆಸಿರಬೇಕಲ್ಲವೆ. ಪುಣ್ಯವು ನಾವು ಗಳಿಸಿದ ಧಾರ್ಮಿಕ ಸಂಪತ್ತಾಗಿದ್ದು ನಮ್ಮೊಡನೆಯೆ ಬರುವ ಒಂದೆ ಒಂದು ವಸ್ತುವಾಗಿದೆ.

ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!

ಚಿತ್ರಕೃಪೆ: Adityamadhav83

ಅಲ್ಲದೆ, ಪುಣ್ಯಗಳಿಕೆಯಿಂದ ದೇವರ ಕೃಪೆಗೆ ಪಾತ್ರರಾಗಿ ಜೀವನ್ಮರಣಗಳ ಚಕ್ರದಿಂದ ಶಾಶ್ವತವಾಗಿ ಬಿಡುಗಡೆಗೊಂಡು ಪರಮಶಿವನಲ್ಲಿ ಸದಾ ಒಂದಾಗಿರುವುದಾಗಿದೆ. ಇದೆಲ್ಲವು ಸಾಕಷ್ಟು ಪುಣ್ಯಗಳಿಸಿರುವಾಗ ಮಾತ್ರ ಲಭಿಸುತ್ತವೆ ಎಂಬ ನಂಬಿಕೆಯಿದೆ. ಹಾಗಾದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ಸ್ಥಳವೊಂದು ಪುಣ್ಯ ಸಂಪಾದಿಸಲು ಹೇಳಿ ಮಾಡಿಸಿದ ಸ್ಥಳ. ಆದರೆ ಇಲ್ಲಿಗೆ ಭೇಟಿ ನೀಡಿದ ಮಾತ್ರಕ್ಕೆ ನಿಮಗೆ ಪುಣ್ಯ ಲಭಿಸುತ್ತದೆಂದಲ್ಲ.

ಯಾವುದೆ ರೀತಿಯ ಫಲಾಪೇಕ್ಷೆಗಳಿಲ್ಲದೆ ಇಲ್ಲಿಗೆ ಭೇಟಿ ನೀಡಿ ಶಿವನನ್ನು ದರ್ಶಿಸಿದರೆ ನಿಮಗೆ ಪುಣ್ಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಸ್ಥಳ ಯಾವುದು? ಇದು ಇರುವುದಾದರೂ ಎಲ್ಲಿ ಎಂಬ ಕುತೂಹಲ ಉಂಟಾಗಿರಬೇಕಲ್ಲವೆ. ಹಾಗಿದ್ದಲ್ಲಿ ಮುಂದೆ ಓದಿ. ಈ ಸ್ಥಳದ ಕುರಿತು ಮಾಹಿತಿಯನ್ನು ಸ್ಫುಟವಾಗಿ ನೀಡಲಾಗಿದೆ.

ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!

ಚಿತ್ರಕೃಪೆ: Adityamadhav83

ಯಾವ ಸ್ಥಳ?

ಈ ಸ್ಥಳವೆ ಪುಣ್ಯಗಿರಿ ಹಾಗೂ ಇಲ್ಲಿರುವ ಶಿವನ ದೇವಾಲಯವೆ ಪುಣ್ಯಗಿರಿ ದೇವಾಲಯ. ಪೂರ್ವಘಟ್ಟಗಳ ನಯನಮನೋಹರ ಬೆಟ್ಟವಾದ ಪುಣ್ಯಗಿರಿ ಹೆಸರಿನ ಬೆಟ್ಟದಲ್ಲಿದೆ ಈ ದೇವಾಲಯ. ಶಿವನಿಗೆ ಮುಡಿಪಾದ ಪುಣ್ಯಗಿರಿ ದೇವಾಲಯದಲ್ಲಿ ಉಮಾ ಕೋಟಿಲಿಂಗೇಶ್ವರಸ್ವಾಮಿಯನ್ನು ಆರಾಧಿಸಲಾಗುತ್ತದೆ. ತೀರಿ ಹೋದವರ ಅಸ್ಥಿಗಳ ವಿಸರ್ಜನೆಗೆ ಬಲು ಹೆಸರುವಾಸಿಯಾದ ಸ್ಥಳ ಇದಾಗಿದೆ.

ತೀರಿ ಹೋದವರ ಅಸ್ಥಿಗಳನ್ನೇನಾದರೂ ಈ ಸ್ಥಳದಲ್ಲಿ ಶಿವನ ನಾಮ ಜಪಿಸುತ್ತ ವಿಸರ್ಜಿಸಿದರೆ ತೀರಿದವರಿಗೆ ಪುಣ್ಯ ಪ್ರಾಪ್ತಿಯಾಗಿ, ಶಿವನ ಕೃಪೆ ಉಂಟಾಗಿ, ಹುಟ್ಟು-ಸಾವುಗಳ ಬಂಧನದಿಂದ ಮುಕ್ತಿ ಪಡೆದು ಮೋಕ್ಷ ಹೊಂದುತ್ತಾರೆ ಎಂಬ ನಂಬಿಕೆಯಿದೆ. ಮಹಾಶಿವರಾತ್ರಿಯನ್ನು ಮೂರು ದಿನಗಳ ಕಾಲ ಅದ್ದೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!

ದೇವಾಲಯಕ್ಕೆ ಪ್ರವೇಶ, ಚಿತ್ರಕೃಪೆ: Adityamadhav83

ವಿಶೇಷತೆ

ಈ ದೇವಾಲಯದಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗದ ಅಡಿಯಿಂದ ನೀರಿನ ಮುಲವೊಂದು ರೂಪಗೊಳುತ್ತದೆ. ಇದೆ ಮುಂದೆ ಚಿನ್ನಪುತ್ತುರಧಾರಾ ಎಂಬ ಜಲಪಾತವಾಗಿ ಗಮನಸೆಳೆಯುತ್ತದೆ. ಹಾಗಾಗಿ ಈ ಶಿವಲಿಂಗವು ಸದಾ ನೀರಿನಿಂದ ಆವೃತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇಲ್ಲಿಂದ ಹರಿಯುವ ನೀರು ಗುಹೆಯೊಂದರ ಮೂಲಕ ಸಾಗುವಾಗ ಅಲ್ಲಿ ಪ್ರತ್ಯೇಕವಾಗಿರುವ ಮೂರು ಲಿಂಗಗಳ ಮೇಲೆ ಸದಾ ನೀರಿನ ಅಭಿಷೇಕ ಮಾಡುತ್ತಲೆ ಸಾಗುತ್ತಿರುವುದನ್ನು ಕಾಣಬಹುದು. ಅವುಗಳನ್ನು ತ್ರಿಮೂರ್ತಿ ಎಂದು ಕರೆಯುತ್ತಾರೆ.

ಈ ಸ್ಥಳಕ್ಕೆ ಭೇಟಿ ನೀಡುವ ಭಕ್ತಾದಿಗಳು ಮೊದಲು ಈ ತ್ರಿಮೂರ್ತಿ ದರ್ಶನ ಮಾಡಿ ಆ ನೀರಿನಲ್ಲಿ ಮಿಂದು ನಂತರ ಉಮಾ ಕೋಟೆಲಿಂಗೇಶ್ವರನ ಸನ್ನಿಧಿಗೆ ಭೇಟಿ ನೀಡುತ್ತಾರೆ. ಹೀಗೆ ಮಾಡುವುದರಿಂದ ಅವರಿಗಂಟಿರಬಹುದ್ದದ ಎಲ್ಲ ಪಾಪ ಕರ್ಮಗಳು ನೀರಿನೊಂದಿಗೆ ತೊಳೆದು ಹೋಗುತ್ತವೆ ಎನ್ನುವ ಅಚಲವಾದ ನಂಬಿಕೆಯಿದೆ. ದ್ವಾಪರ ಯುಗದಲ್ಲಿ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ಈ ಸ್ಥಲದಲ್ಲಿ ಕೆಲ ಕಾಲ ತಂಗಿದ್ದರೆಂಬ ಪ್ರತೀತಿಯಿದೆ.

ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!

ದೇವಾಲಯಕ್ಕೆ ಕರೆದೊಯ್ಯುವ ಮೆಟ್ಟಿಲುಗಳು, ಚಿತ್ರಕೃಪೆ: Adityamadhav83

ಎಲ್ಲಿದೆ?

ಇನ್ನೊಂದು ವಿಶೇಷವೆಂದರೆ ಇದು ಅದ್ಭುತವಾಗಿ ಹಸಿರಿನಿಂದ ಕೂಡಿದ ಪ್ರದೇಶವಾಗಿದ್ದು ನಿಸರ್ಗಪ್ರಿಯ ಪ್ರವಾಸಿಗರಿಗೂ ಸಹ ಬಲು ನೆಚ್ಚಿನ ಸ್ಥಳವಾಗಿ ಆಕರ್ಷಿಸಬಲ್ಲುದು. ವೈಜಾಗ್ ಅಥವಾ ವಿಶಾಖಾಪಟ್ಟಣಂಗೆ ಹತ್ತಿರದಲ್ಲಿರುವ ಈ ಸ್ಥಳವು ವಾರಾಂತ್ಯದ ಭೇಟಿಗೂ ಸಹ ಅಚ್ಚುಮೆಚ್ಚಿನ ತಾಣವಾಗಿ ಗಮನಸೆಳೆದಿರುವುದರಲ್ಲಿ ಯಾವುದೆ ಸಂಶಯವಿಲ್ಲ.

ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಶೃಂಗವರಪುಕೋಟದಿಂದ (ಎಸ್.ಕೋಟಾ) ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿ ಪುಣ್ಯಗಿರಿಯಿದೆ. ಇದು ವಿಜಯನಗರಂ ನಗರದಿಂದ 25 ಕಿ.ಮೀ ಹಾಗೂ ವೈಜಾಗ್ ಅಥವಾ ವಿಶಾಖಾಪಟ್ಟಣಂನಿಂದ 70 ಕಿ.ಮೀ ಗಳಷ್ಟು ದೂರದಲ್ಲಿದೆ. ವೈಜಾಗ್ ನಿಂದ ವಿಜಯನಗರಂಗೆ ರೈಲು ಲಭ್ಯವಿದ್ದು ಅಲ್ಲಿಂದ ಬಾಡಿಗೆ ಕಾರಿನ ಮೂಲಕ ಪುಣ್ಯಗಿರಿಗೆ ಸುಲಭವಾಗಿ ತಲುಪಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more