ಭಾರತವು ವಿಶ್ವದ ಪ್ರಮುಖ ಪ್ರವಾಸಿ ಆಕರ್ಷಣೆಯ ದೇಶಗಳ ಪೈಕಿ ಒಂದಾಗಿದೆ. ಐತಿಹಾಸಿಕ ಸ್ಮಾರಕಗಳು, ಅನನ್ಯ ದೇವಾಲಯಗಳು, ಮನಮೋಹಕ ವಾಸ್ತುಶಿಲ್ಪ ಕಲೆ, ವೈವಿಧ್ಯಮಯ ಹಾಗು ವಿಶೀಷ್ಟ ಸಂಪ್ರದಾಯ ಸಂಸ್ಕೃತಿಗಳು, ವಿವಿಧ ಭಾಷೆ ಹಾಗು ಜನಾಂಗಗಳು, ಪ್ರಕೃತಿಯ ಸಿರಿಯನ್ನು ಸಾರುವ ಹಲವು ಗಿರಿಧಾಮಗಳು, ನದಿ ಕೆರೆಗಳು, ವನ್ಯಜೀವನ ಮುಂತಾದವು ಭಾರತವನ್ನು ಒಂದು ಭವ್ಯ ಪ್ರವಾಸಿ ಆಕರ್ಷಣೆಯ ದೇಶವನ್ನಾಗಿ ಮಾಡಿರುವುದರಲ್ಲಿ ಯಾವುದೆ ಸಂಶಯವಿಲ್ಲ. ಅಷ್ಟೆ ಅಲ್ಲ, ಸ್ವಾತಂತ್ರ ಪೂರ್ವದಿಂದಲೂ ಭಾರತದಲ್ಲಿ ಸ್ವಾತಂತ್ರ್ಯಕ್ಕೊಸ್ಕರ ನಡೆದ ವಿಶೀಷ್ಟ ಹೋರಾಟದಿಂದಲೂ ಕೆಲವು ತಾಣಗಳು ಐತಿಹಾಸಿಕವಾಗಿ ಮಹತ್ವವಾಗಿದ್ದು ಇಂದಿಗೂ ಹೆಚ್ಚಾಗಿ ಭೇಟಿ ನೀಡಲ್ಪಡುತ್ತವೆ.
ಇಂತಹ ಅಗಾಧ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಭಾರತ ದೇಶಕ್ಕೆ ಐದು ದಶಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಿದ್ದಾರೆ. ಮತ್ತೊಂದು ಮುಖ್ಯ ಅಂಶವೆಂದರೆ ಈ ಸಂಖ್ಯೆಯು ಪ್ರತಿ ವರ್ಷವು ಅಧಿಕವಾಗುತ್ತಿರುವುದು. "ಅತಿಥಿ ದೇವೋ ಭವ" ಎನ್ನುವ ಸುಸಂಕೃತಿಯನ್ನು ಹೊಂದಿರುವ ಈ ನಾಡಿನಲ್ಲಿ ಪ್ರಸ್ತುತ ಕೆಲವೊಂದು ಕಡೆಗಳಲ್ಲಿ ವಿದೇಶಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. ಈ ರೀತಿಯ ಪ್ರಸಂಗಗಳು ಮತ್ತೆ ಎಲ್ಲಿಯೂ ಜರುಗದೆ ಇರಲಿ ಹಾಗು ನಮ್ಮ ಶ್ರೀಮಂತಮಯ ಅತಿಥಿ ಸತ್ಕಾರದ ರುಚಿಯು ವಿದೇಶಿಯರ ಮನದಲ್ಲಿ ಸ್ಥಿರವಾಗಿ ಮೂಡಲಿ ಎಂದು ಆಶಿಸುತ್ತ, ಭಾರತದಲ್ಲಿ ವಿದೇಶಿ ಪ್ರವಾಸಿಗರು ಭೇಟಿ ನೀಡಲು ಇಷ್ಟ ಪಡುವ ಸ್ಥಳಗಳ ಕುರಿತು ತಿಳಿಯೋಣ.

ಗೋವಾ:
ವಿದೇಶಿ ಪ್ರವಾಸಿಗರು ಭಾರತದಲ್ಲಿ ಸಮಯ ಕಳೆಯಲು ಅತಿ ಇಷ್ಟ ಪಡುವ ಸ್ಥಳವೆಂದರೆ, ಪಾರ್ಟಿಗಳಿಗಾಗಿ ಪ್ರಸಿದ್ಧವಾಗಿರುವ ಗೋವಾ. ಹಲವು ಮನಮೋಹಕ ಕಡಲ ತೀರಗಳನ್ನು ಹೊಂದಿರುವ ಗೋವಾದಲ್ಲಿ ಹಲವು ರೋಮಾಂಚನಕಾರಿ ಜಲಕ್ರೀಡೆಗಳ ಆನಂದವನ್ನು ಸವಿಯಬಹುದು. ಅಷ್ಟೆ ಅಲ್ಲ, ಇಲ್ಲಿ ಜರುಗುವ ತೆರೆದ ಅಂಗಳ ಪಾರ್ಟಿಗಳು, ಪಬ್ ಗಳಲ್ಲಿ ಆಯೋಜನೆಗೊಳ್ಳುವ ಪಾರ್ಟಿಗಳು, ಪಾರ್ಟಿ ಪ್ರಿಯ ವಿದೇಶಿ ಪ್ರವಾಸಿಗರಿಗೆ ಒಂದು ಅಮೋಘವಾದ ಅನುಭವವನ್ನು ನೀಡುತ್ತದೆ. ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಲ್ಲದ್ದಿದ್ದುದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
ಚಿತ್ರಕೃಪೆ: Andy Weisner

ಮೈಸೂರು ಅರಮನೆ:
1912 ರಲ್ಲಿ ವಡೇಯರ್ ಸಾಮ್ರಾಜ್ಯದ ಆಡಳಿತದಲ್ಲಿ ನಿರ್ಮಿಸಲ್ಪಟ್ಟ ಈ ಅದ್ಭುತ ಅರಮನೆಯು ಅಂದಿನ ಕಾಲದ ಅತಿ ಸೊಗಸಾದ ವಾಸ್ತುಶಿಲ್ಪ ಕಲೆ ಹಾಗು ತಾಂತ್ರಿಕ ನೈಪುಣ್ಯತೆಗೆ ಒಂದು ಅತ್ತ್ಯುತ್ತಮ ಉದಾಹರಣೆಯಾಗಿದ್ದು ವಿದೇಶಿ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಅಂಬಾ ವಿಲಾಸ ಅರಮನೆ ಎಂತಲೂ ಕರೆಯಲ್ಪಡುವ ಈ ಭವ್ಯ ಅರಮನೆಯು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಮೈಸೂರು ನಗರದ ಪ್ರಮುಖ ಹೆಗ್ಗುರುತಾಗಿದೆ ಹಾಗು ವಿದೇಶಿ ಪ್ರವಾಸಿಗರು ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಆದರ್ಶಪ್ರಾಯ ಅರಮನೆಯಾಗಿದೆ.
ಚಿತ್ರಕೃಪೆ: Jim Ankan Deka

ಅಕ್ಷರಧಾಮ ದೇವಾಲಯ:
ದೇಶದ ರಾಜಧಾನಿ ದೆಹಲಿ ಯಲ್ಲಿರುವ ಸ್ವಾಮಿ ನಾರಾಯಣ ಅಕ್ಷರಧಾಮ ದೇವಾಲಯವು ಭಾರತದಲ್ಲಿ ವಿದೇಶಿ ಪ್ರವಾಸಿಗರು ಭೇಟಿ ನೀಡುವ ಮತ್ತೊಂದು ಸೊಗಸಾದ ದೇವಾಲಯವಾಗಿದೆ. ದೆಹಲಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಶೇಕಡ 70 ರಷ್ಟು ಪ್ರವಾಸಿಗರನ್ನು ಈ ಭವ್ಯ ದೇವಾಲಯವು ಆಕರ್ಷಿಸುತ್ತದೆ. ಈ ದೇವಾಲಯದ ಮುಖ್ಯ ಸ್ಮಾರಕವು 141 ಅಡಿ ಎತ್ತರ, 316 ಅಡಿ ಅಗಲ, 356 ಅಡಿಗಳಷ್ಟು ಉದ್ದವಾಗಿದೆ. ದೆಹಲಿಯ ಅಮೋಘ ಚಿತ್ರಗಳು.
ಚಿತ್ರಕೃಪೆ: Swaminarayan Sanstha

ಆಮೇರ್ ಕೋಟೆ:
ಆಂಬರ್ ಕೋಟೆ ಎಂತಲೂ ಉಚ್ಛರಿಸಲ್ಪಡುವ ಈ ಪ್ರಖ್ಯಾತ ಕೋಟೆಯು ವಿದೇಶಿ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದ್ದು ರಾಜಸ್ಥಾನದ ರಾಜಧಾನಿ ಜೈಪುರ್ ನಗರದಿಂದ ಕೇವಲ 11 ಕಿ.ಮೀ ದೂರದಲ್ಲಿ ನೆಲೆಸಿದೆ. ಜೈಪುರ್ ನಗರದ ಅತಿ ಪ್ರಮುಖ ಆಕರ್ಷಣೆಗಳ ಪೈಕಿ ಇದೂ ಒಂದು. ಅತ್ಯದ್ಭುತ ವಾಸ್ತುಶಿಲ್ಪ ಕಲೆಗೆ ಹೆಸರಾದ ಈ ಕೋಟೆಯ ಭೇಟಿಯು ಮನಕೆ ಮುದ ನೀಡುತ್ತದೆ.
ಚಿತ್ರಕೃಪೆ: vsvinaykumar

ತಾಜ್ ಮಹಲ್:
ಜಗತ್ತಿನ ಏಳು ಅದ್ಭುತಗಳ ಪೈಕಿ ಒಂದಾಗಿರುವ ತಾಜ್ ಮಹಲ್ ಸ್ಮಾರಕವು ವಿದೇಶಿಯರು ಭೇಟಿ ನೀಡಲು ಬಯಸುವ ಅತ್ಯಂತ ಪ್ರಖ್ಯಾತ ಸ್ಥಳವಾಗಿದೆ. ಶಾಹ ಜಹಾನ್ ನಿಂದ ತನ್ನ ಪ್ರಿಯತಮೆ ಮಮತಾಜ್‍ಳಿಗೋಸ್ಕರ 1653 ರಲ್ಲಿ ನಿರ್ಮಿಸಲ್ಪಟ್ಟ ಈ ಭವ್ಯ ಪ್ರೇಮ ಸ್ಮಾರಕವು ಆಗ್ರಾ ಪಟ್ಟಣದಲ್ಲಿದ್ದು ದೇಶದ ರಾಜಧಾನಿ ದೆಹಲಿಯಿಂದ 200 ಕಿ.ಮೀ ದೂರದಲ್ಲಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ಬಸ್ಸು, ಟ್ಯಾಕ್ಸಿ ಮೂಲಕ ಸುಲಭವಾಗಿ ತೆರಳಬಹುದು.
ಚಿತ್ರಕೃಪೆ: Muhammad Mahdi Karim

ಅಜಂತಾ ಎಲ್ಲೋರಾ:
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಅಜಂತಾ-ಎಲ್ಲೋರಾ ಗುಹೆಗಳು ವಿದೇಶಿಯರು ಭೇಟಿ ನೀಡುವ ಆಸಕ್ತಿಕರ ಗುಹೆಗಳಾಗಿವೆ. ಇದೊಂದು ಗುಹೆಗಳ ಸಮೂಹವಾಗಿದ್ದು ಇವುಗಳ ಮೇಲೆ ಕೆತ್ತಲಾಗಿರುವ ಅಭೂತಪೂರ್ವ ಶಿಲ್ಪ ಕಲೆಯು ಐದನೇಯ ಶತಮಾನದ್ದಾಗಿದೆ. ಇದರಲ್ಲಿ ಕಂಡುಬರುವ ವರ್ಣಕಲೆಯು ಅತ್ಯಂತ ಅಮೋಘವಾಗಿದ್ದು ಜಗತ್ತಿನಲ್ಲೆ ಹೆಸರುವಾಸಿಯಾಗಿದೆ. ಇದರ ಮಹತ್ವತೆಯನ್ನು ಮನಗಂಡು ಉನೆಸ್ಕೊ ಇದಕ್ಕೆ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ನೀಡಿದೆ.
ಚಿತ್ರಕೃಪೆ: Soman

ಖಜುರಾಹೊ : ಮನಸೂರೆಗೊಳ್ಳುವ ಶಿಲ್ಪಕಲೆ:
ಮಧ್ಯ ಪ್ರದೇಶದ ಬುಂದೇಲ್‍ಖಂಡ್ ವಲಯದಲ್ಲಿರುವ ವಿಂದ್ಯಾ ಪರ್ವತಗಳ ಹಿನ್ನಲೆಯಲ್ಲಿ, ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವುವಂತೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯೇ ಖಜುರಾಹೊ. ಇಲ್ಲಿರುವ ಅನುಪಮವಾದ ಖಜುರಾಹೊ ದೇವಾಲಯದಿಂದಾಗಿ ಈ ಊರು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ತನ್ನ ಅಸ್ತಿತ್ವವನ್ನು ಕಂಡು ಕೊಂಡಿದೆ. ಖಜುರಾಹೊದಲ್ಲಿ ಪ್ರವಾಸೋದ್ಯಮವು ಇಲ್ಲಿರುವ ಅನುಪಮವಾದ ದೇವಾಲಯಗಳಿಂದಾಗಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯಗಳು ತಮ್ಮಲ್ಲಿರುವ ಪ್ರತ್ಯೇಕವಾದ ಮಿಥುನ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಖಜುರಾಹೊವಿನ ರತಿ ಸಂಗಮದ ಚಿತ್ರಗಳು.

ಉದೈಪುರ್: ಸರೋವರಗಳ ನಗರಿ
"ಸರೋವರಗಳ ನಗರ" ಎಂದೆ ಖ್ಯಾತವಾಗಿರುವ ರಾಜಸ್ಥಾನ ರಾಜ್ಯದ ಉದೈಪುರ್ ವಿದೇಶಿ ಪ್ರವಾಸಿಗರು ಭೇಟಿ ನೀಡುವ ಇನ್ನೊಂದು ತಾಣವಾಗಿದೆ. ಸಿಟಿ ಪ್ಯಾಲೇಸ್, ಲೇಕ್ ಪ್ಯಾಲೇಸ್, ಜಗಮಂದಿರ್ ಮೊದಲಾದ ಭವ್ಯ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದ್ದು, ಪ್ರತಿಷ್ಠಿತ ಉದ್ಯಮಿಗಳು, ರಾಜಕಾರಣಿಗಳು ಹಾಗು ಚಿತ್ರತಾರೆಗಳೂ ಇಲ್ಲಿ ಹಲವಾರು ಮದುವೆಯಂತಹ ಸಮಾರಂಭಗಳನ್ನು ಆಯೋಜಿಸುತ್ತಿರುತ್ತಾರೆ. ಉದೈಪುರ್ ಚಿತ್ರಗಳು.
ಚಿತ್ರಕೃಪೆ: commons.wikimedia

ಗಾಂಧಿ ಸ್ಮೃತಿ:
ವಿದೇಶಿ ಪ್ರವಾಸಿಗರು ದೆಹಲಿಯಲ್ಲಿದ್ದಾಗ ಹೋಗಬಯಸುವ ಮತ್ತೊಂದು ಆಕರ್ಷಣೆಯೆಂದರೆ ತೀಸ್ ಜನವರಿ ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿಗೆ ಸಮರ್ಪಿತವಾದ ಗಾಂಧಿ ಸ್ಮೃತಿ. ಇದೆ ಸ್ಥಳದಲ್ಲಿ ಮಹಾತ್ಮಾ ಗಾಂಧಿಯವರು ತಾವು ಹತ್ಯೆಗೊಳ್ಳಲ್ಪಡುವ ಮುಂಚಿನ 144 ದಿನಗಳನ್ನು ಕಳೆದಿದ್ದರು. ಅಗಸ್ಟ್ 15, 1973 ರಂದು ಈ ಸ್ಮಾರಕ ಸ್ಥಳವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಯಿತು.
ಚಿತ್ರಕೃಪೆ: Poco a poco

ಗೋಲ್ಕೊಂಡಾ ಕೋಟೆ:
ಆಂಧ್ರದ ಹೈದರಾಬಾದ್ ನ ಪಶ್ಚಿಮಕ್ಕೆ 11 ಕಿ.ಮೀ ದೂರದಲ್ಲಿ ನೆಲೆಸಿದೆ ಈ ಪ್ರಖ್ಯಾತ ಕೋಟೆ. ಈ ಒಂದು ಪ್ರದೇಶವು ಜಗತ್ಪ್ರಸಿದ್ಧ ವಜ್ರದ ಗಣಿಗಳಿಗೆ ವಿಶ್ವಪ್ರಖ್ಯಾತವಾಗಿದೆ. 300 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ನಿರ್ಮಿಸಲ್ಪಟ್ಟ ಈ ಕೋಟೆಯು ಐತಿಹಾಸಿಕವಾಗಿ ಮಹತ್ವವುಳ್ಳದ್ದಾಗಿದ್ದು, ಅದ್ಭುತವಾದ ವಾಸ್ತು ಶಿಲ್ಪಕಲೆಗೆ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Shantanu86

ಹಂಪಿ:
ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ. 14 ರಿಂದ 16 ನೆಯ ಶತಮಾನದವರೆಗೆ ಕರ್ನಾಟಕವನ್ನಾಳಿದ ವಿಜಯನಗರ ಸಾಮ್ರಾಜ್ಯದ ಅತಿ ವೈಭವಯುತ ರಾಜಧಾನಿಯಾಗಿದ್ದ ಹಂಪಿ ನಗರವು ಪ್ರಖ್ಯಾತ ವಿಟ್ಠಲ ಮಂದಿರ, ವಿರೂಪಾಕ್ಷ ದೇವಾಲಯ, ಹಜಾರ ರಾಮನ ದೇವಾಲಯ, ಸಾಸಿವೆಕಾಳು ಗಣೇಶ, ಪಟ್ಟಾಭಿರಾಮನ ದೇವಾಲಯ, ಕಲ್ಲಿನ ರಥ, ಗಜಶಾಲೆ, ಮೆಟ್ಟಿಲು ಬಾವಿ, ಅಂತಃಪುರ, ಕಮಲದ ಅರಮನೆಗಳಂತಹ ಅತ್ಯಂತ ಕಲಾತ್ಮಕವಾದ ಸ್ಮಾರಕಗಳನ್ನು ಒಳಗೊಂಡಿದೆ.
ಹಂಪಿಯ ಕುರಿತು ಲೇಖನ ಓದಿ
ಚಿತ್ರಕೃಪೆ: Ilya

ಜೈಸಲ್ಮೇರ್ ಕೋಟೆ:
"ಬಂಗಾರದ ನಗರ" ಎಂಬ ಖ್ಯಾತಿ ಪಡೆದ ಜೈಸಲ್ಮೇರ್ ಪಟ್ಟಣವು ರಾಜಸ್ಥಾನ ರಾಜ್ಯದಲ್ಲಿದ್ದು, ರಾಜಧಾನಿ ಜೈಪುರ್ ನಿಂದ 575 ಕಿ.ಮೀ ದೂರದಲ್ಲಿದೆ. ಗ್ರೇಟ್ ಇಂಡಿಯನ್ ಡಸರ್ಟ್ ಅಥವಾ ಥಾರ್ ಮರಭೂಮಿಯ ಹೃದಯಭಾಗವಾಗಿರುವ ಈ ಪಟ್ಟಣವು ತನ್ನಲ್ಲಿರುವ ಕೋಟೆಯಿಂದಾಗಿ ವಿದೇಶಿ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿನ ಮರಳು ದಿಬ್ಬಗಳ ಮೇಲಿನ ಒಂಟೆ ಸವರಿಯು ಒಂದು ರೋಮಾಂಚಕ ಅನುಭೂತಿಯನ್ನು ಕರುಣಿಸುತ್ತದೆ. ಈ ರೀತಿಯ ಒಂಟೆ ಸವಾರಿ ಸೌಲಭ್ಯ ಒದಗಿಸುವ ಸೇವಾಕೇಂದ್ರಗಳು ಬಹು ಸಂಖ್ಯೆಯಲ್ಲಿದ್ದು ಶುಲ್ಕವು ವಿವಿಧ ರೀತಿಯಲ್ಲಿರುತ್ತವೆ.
ಚಿತ್ರಕೃಪೆ: Adrian Sulc

ಕುತುಬ್ ಮೀನಾರ್:
ಭಾರತದ ಅತಿ ಎತ್ತರದ ಮೀನಾರ್ ಅಥವಾ ಗೋಪುರವಾಗಿರುವ ಈ ಸ್ಮಾರಕವು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆಯನ್ನು ಪಡೆದಿದ್ದು ದೆಹಲಿಯಲ್ಲಿ ನೆಲೆಸಿದೆ. ಮಾರ್ಬಲ್ ಹಾಗು ಸ್ಯಾಂಡ್‍ಸ್ಟೋನ್ ಬಳಸಿ ನಿರ್ಮಿಸಲಾದ 73 ಮೀ. ಎತ್ತರದ ಈ ಮೀನಾರ್ ಅಡಿಯಲ್ಲಿ 14.3 ಮೀ. ವ್ಯಾಸವನ್ನು ಹೊಂದಿದ್ದು, ಕ್ರಮೇಣವಾಗಿ ಕ್ಷಿಣಿಸುತ್ತಿರುವ ಮಾದರಿಯಲ್ಲಿ ನಿರ್ಮಿಸಲಾಗಿದ್ದು ತುದಿಯಲ್ಲಿ 2.7 ಮೀ ವ್ಯಾಸವನ್ನು ಹೊಂದಿದೆ.
ದೆಹಲಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಈ ಆಕರ್ಷಣೆಗೆ ಭೇಟಿ ನೀಡುವುದು ಖಂಡಿತ.
ಚಿತ್ರಕೃಪೆ: Krupasindhu Muduli

ಬೃಹದೇಶ್ವರ ದೇವಾಲಯ:
ವಿದೇಶಿ ಪ್ರವಾಸಿಗರು ಭೇಟಿ ನೀಡುವ ದಕ್ಷಿಣ ಭಾರತದ ವಿಶ್ವ ವಿಖ್ಯಾತ ಬೃಹದೇಶ್ವರ ದೇವಾಲಯವು ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿದೆ. ಪೆರುವುಡುಯಾರ್ ದೇವಾಲಯ ಎಂತಲೂ ಕರೆಯಲ್ಪಡುವ ಈ ದೇವಾಲಯವು ಯುನೆಸ್ಕೊ ಮಾನ್ಯತೆಯನ್ನು ಪಡೆದಿದ್ದು, ಅಸ್ತಿತ್ವದಲ್ಲಿರುವ ಚೋಳರ ಅದ್ಭುತ ದೇವಾಲಯಗಳ ಪೈಕಿ ಈ ದೇವಸ್ಥಾನವು ಅಗ್ರಗಣ್ಯವಾಗಿದೆ. ಭಾರತದಲ್ಲಿ ಕಂಡುಬರುವ ಅತ್ಯದ್ಭುತ ವಾಸ್ತುಶಿಲ್ಪಕಲೆಯ ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ಭಾರತದಲ್ಲಿರುವ ಅತಿ ದೊಡ್ಡ ದೇವಾಲಯಗಳ ಪೈಕಿಯೂ ಒಂದಾಗಿದೆ.
ಚಿತ್ರಕೃಪೆ: Abhikanil

ಕೇರಳ:
ಕೇರಳ ರಾಜ್ಯದ ಪ್ರಾಕೃತಿಕ ಸೌಂದರ್ಯವು ವಿದೇಶಿ ಪ್ರವಾಸಿಗರ ಮನವನ್ನು ಕದಿಯುವಲ್ಲಿ ಸಫಲವಾಗಿದ್ದು ಕೊಚ್ಚಿ, ಕೋವಲಂ ಮತ್ತು ಮುನ್ನಾರ್ ತಾಣಗಳು ಅನೇಕ ವಿದೇಶಿ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಹಿನ್ನೀರಿನಲ್ಲಿ ಕೃತಕ ಮನೆಯಿರುವ ದೋಣಿಗಳಲ್ಲಿನ ಪಯಣ ಒಂದು ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಹಚ್ಚ ಹಸಿರಾದ ಭೂಮಿ, ಕಾಫಿ, ಸಾಂಬಾರು ಪದಾರ್ಥಗಳ ಸುವಾಸನೆ ಪಸರಿಸಿದ ವಾತಾವರಣ ತಾಜಾ ಅನುಭವವನ್ನು ಒದಗಿಸುತ್ತದೆ.
ಕೇರಳದ ಸುಂದರ ಚಿತ್ರಗಳು


Click it and Unblock the Notifications



















