Search
  • Follow NativePlanet
Share
» »ಬಾಗಲಕೋಟೆ ಬಣ್ಣಿಸುವ ಭವ್ಯ ತಾಣಗಳು

ಬಾಗಲಕೋಟೆ ಬಣ್ಣಿಸುವ ಭವ್ಯ ತಾಣಗಳು

ಚಾಲುಕ್ಯರ ಕಾಲದ ಶ್ರೀಮಂತ ನಗರ ಎಂದು ಪ್ರಸಿದ್ಧಿ ಪಡೆದ ನಾಡು ಬಾಗಲಕೋಟೆ. ಸುಂದರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ನಾಡು ಇಂದು ವ್ಯಾಪರ, ವಾಣಿಜ್ಯ, ಶಿಕ್ಷಣ, ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಪ್ರಮುಖ ಕೇಂದ್ರವಾಗಿ ನಿಂತಿದೆ.

By Divya

ಚಾಲುಕ್ಯರ ಕಾಲದ ಶ್ರೀಮಂತ ನಗರ ಎಂದು ಪ್ರಸಿದ್ಧಿ ಪಡೆದ ನಾಡು ಬಾಗಲಕೋಟೆ. ಶಿಲಾಶಾನಗಳ ಪ್ರಕಾರ ಮೊದಲು ಬಾಗಡಿಗೆ ಎಂದು ಕರೆಯಲಾಗುತ್ತಿತ್ತು. ಲಂಕಾಧಿಪತಿ ರಾವಣನು ಈ ಪ್ರದೇಶದಲ್ಲಿ ಆಳುತ್ತಿದ್ದ. ಅವನು ಈ ನಗರವನ್ನು ಸಂಗೀತಗಾರರಿಗೆ ಕೊಡುಗೆಯಾಗಿ ನೀಡಿದ ಎಂದು ಇತಿಹಾಸ ಹೇಳುತ್ತದೆ. ಸುಂದರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ನಾಡು ಇಂದು ವ್ಯಾಪರ, ವಾಣಿಜ್ಯ, ಶಿಕ್ಷಣ, ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಪ್ರಮುಖ ಕೇಂದ್ರವಾಗಿ ನಿಂತಿದೆ.

ಬೆಂಗಳೂರಿನಿಂದ 410 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ವಾರದ ರಜೆ ಅಥವಾ ದೀರ್ಘಕಾಲದ ರಜೆಯಲ್ಲೂ ಪ್ರವಾಸ ಕೈಗೊಳ್ಳಬಹುದು. ಉತ್ತಮವಾದ ಸಾರಿಗೆ ವ್ಯವಸ್ಥೆ ಹೊಂದಿರುವ ಈ ಪ್ರದೇಶದಲ್ಲಿ ಗುಣಮಟ್ಟದ ವಸತಿ ಸೌಲಭ್ಯವನ್ನು ಹೊಂದಬಹುದು. ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಈ ಊರಿನಲ್ಲಿ ನೋಡಲೇ ಬೇಕಾದ ಸ್ಥಳಗಳು ಹೀಗಿವೆ...

ಐಹೊಳೆ

ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ ಬೆಂಗಳೂರಿನಿಂದ 483 ಕಿ.ಮೀ. ದೂರದಲ್ಲಿದೆ. ಮಲಪ್ರಭಾ ನದಿಯ ದಡದಲ್ಲಿರುವ ಈ ತಾಣ ಚಾಲುಕ್ಯರ ಶ್ರೀಮಂತ ವಾಸ್ತುಶಿಲ್ಪಗಳಿಂದ ಕೂಡಿದೆ. ಇಲ್ಲಿ ಸುಮಾರು 120 ದೇವಾಲಯ ಹಾಗೂ 4 ಗುಹಾಲಯ ಇರುವುದನ್ನು ಕಾಣಬಹುದು. ಪ್ರತಿಯೊಂದು ದೇಗುಲವು ವಿಭಿನ್ನ ವಾಸ್ತುಶಿಲ್ಪವನ್ನು ಹೊಂದಿದೆ. ಇವೆಲ್ಲವೂ ಸ್ಥಳೀಯ ಪ್ರದೇಶದಲ್ಲಿ ಸಿಗುವ ಕೆಂಪು ಮರುಳು ಶಿಲೆಯಲ್ಲಿಯೇ ನಿರ್ಮಾಣಗೊಂಡಿವೆ. ಅನೇಕ ದೇವಾಲಯಗಳು ಮುಸ್ಲಿಂ ದಾಳಿಯಿಂದ, ನಿಧಿ ಆಸೆಗಾಗಿ ಹಾಗೂ ವಾತಾವರಣದ ವಿಕೋಪಗಳಿಂದಾಗಿ ಅವನತಿ ಕಂಡಿವೆ.
PC: wikipedia.org

ಬಾದಾಮಿ

ಬಾದಾಮಿ

ಐಹೊಳೆಯಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಬಾದಾಮಿ ಚಾಲುಕ್ಯರ ಕಾಲದ ರಾಜಧಾನಿಯಾಗಿತ್ತು. ಇದನ್ನು ವಾತಾಪಿ ಎಂತಲೂ ಕರೆಯುತ್ತಾರೆ. ಇದನ್ನು ಗುಡ್ಡಬದಿಯನ್ನು ಕೊರೆದು ನಿರ್ಮಿಸಿದ ಗುಹಾಲಯ ಎಂದು ಗುರುತಿಸಲಾಗಿದೆ. ಈ ಗುಹಾಲಯದ ಬುಡದಲ್ಲಿ ಒಂದು ಕೆರೆ ಇರುವುದನ್ನು ಗಮನಿಸಬಹುದು. ಹತ್ತಿರದಲ್ಲೇ ಪಲ್ಲವ ನರಸಿಂಹ ವರ್ಮನ ಜಯಶಾಸನವಿದೆ.
PC: wikipedia.org

ಬನಶಂಕರಿ

ಬನಶಂಕರಿ

ಈ ದೇವಾಲಯವು ಬಾದಾಮಿಯಿಂದ 5 ಕಿ.ಮೀ. ದೂರದಲ್ಲಿದೆ. ಬನಶಂಕರಿ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಇದು ಕರ್ನಾಕದಲ್ಲಿರುವ ಅತ್ಯಂತ ಹಳೆಯ ದೇಗುಲ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ದೇಗುಲದ ಮುಂಭಾಗದಲ್ಲಿ ಹರಿದ್ರ ತೀರ್ಥ ಇರುವುದನ್ನು ನೋಡಬಹುದು. ಪುಷ್ಯ ಮಾಸದಲ್ಲಿ ಈ ದೇಗುಲಕ್ಕೆ ಬಂದರೆ ವಿಶೇಷ ಆರಾಧನೆಗಳನ್ನು ಕಣ್ತುಂಬಿಸಿಕೊಳ್ಳಬಹುದು.
PC: wikipedia.org

ಕೂಡಲ ಸಂಗಮ

ಕೂಡಲ ಸಂಗಮ

ಬಾಗಲಕೋಟೆಯಿಂದ 40 ಕಿ.ಮೀ. ವ್ಯಾಪ್ತಿಯಲ್ಲಿದೆ. ಕೃಷ್ಣ ಹಾಗೂ ಘಟಪ್ರಭಾ ನದಿಗಳು ಸಂಗಮವಾಗುವ ಸ್ಥಳ. ಇದು ಕರ್ನಾಟಕದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಇದೂ ಒಂದು. ಬಸವಣ್ಣನವರ ಐಕ್ಯ ಸ್ಥಳವಾದ ಇದು ಲಿಂಗಾಯತ ಪಂಗಡದವರ ಪ್ರಮುಖ ಪುಣ್ಯ ಕ್ಷೇತ್ರ.
PC: wikimedia.org

ಪಟ್ಟದಕಲ್ಲು

ಪಟ್ಟದಕಲ್ಲು

ಮಲಪ್ರಭಾ ನದಿ ದಂಡೆಯ ಮೇಲೆ ಇರುವ ಈ ತಾಣ ಬಾದಾಮಿಯಿಂದ 22 ಕಿ.ಮೀ. ದೂರದಲ್ಲಿದೆ. ಚಾಲುಕ್ಯರ ಕಾಲದ 7-8 ನೇ ಶತಮಾನದಲ್ಲಿ ಅನೇಕ ದೇವಾಲಯಗಳನ್ನು ಇಲ್ಲಿ ನಿರ್ಮಿಸಿದ್ದರು. ಒಟ್ಟು 9 ದೇವಾಲಯಗಳು, ಒಂದು ಜೈನ ಬಸದಿ ಇರುವುದನ್ನು ಕಾಣಬಹುದು. ಎಲ್ಲಕ್ಕಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಕ್ರಿ.ಶ. 740ರಲ್ಲಿ ಮಹಾರಾಣಿ ಲೋಕಮಹಾದೇವಿ ನಿರ್ಮಿಸಿದ ವಿರೂಪಾಕ್ಷ ದೇವಾಲಯ. ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇಗುಲ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.
PC: wikimedia.org

ಆಲಮಟ್ಟಿ ಅಣೆಕಟ್ಟು

ಆಲಮಟ್ಟಿ ಅಣೆಕಟ್ಟು

ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟು ನೀರಾವರಿ ಹಾಗೂ ವಿದ್ಯುತ್ ಯೋಜನೆಯ ಉದ್ದೇಶವನ್ನು ಹೊಂದಿದೆ. ಇಲ್ಲಿ ಸುಮಾರು 290 ಮೆಗಾ ವ್ಯಾಟ್ ವಿದ್ಯುತ್ ಉತ್ಪತ್ತಿಮಾಡಲಾಗುತ್ತದೆ. ಅಣೆಕಟ್ಟಿನ ಪ್ರದೇಶದಲ್ಲಿ ಏಳು ತಾರಸಿ ಉದ್ಯಾನವನವನ್ನು ನಿರ್ಮಿಸಲಾಗಿದೆ. ಇಲ್ಲಿ ದೋಣಿ ವಿಹಾರ, ಸಂಗೀತ ಕಾರಂಜಿ ಹಾಗೂ ಹಳ್ಳಿಯ ಜೀವನವನ್ನು ಪ್ರತಿನಿಧಿಸುವ ಅನೇಕ ವಿಗ್ರಹಗಳನ್ನು ನೋಡಬಹುದು.
PC: wikipedia.org

ಚಿಂಕಾರ ವನ್ಯಧಾಮ

ಚಿಂಕಾರ ವನ್ಯಧಾಮ

200 ಸ್ಕ್ವೇರ್ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವನ್ಯಧಾಮ ಪ್ರವಾಸಿಗರಿಗೊಂದು ಆಕರ್ಷಕ ತಾಣ. ಇದು ಕರ್ನಾಟಕದ 25ನೇ ವನ್ಯಧಾಮ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ಕಾಣಬಹುದು. ಇದು ಮಕ್ಕಳಿಗೆ ಹೆಚ್ಚು ಆಕರ್ಷಿಸುವುದು.
PC: wikipedia.org

ಮಹಾಕೂಟ

ಮಹಾಕೂಟ

ಬಾದಾಮಿಯಿಂದ 15 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಚಾಲುಕ್ಯರ ದೊರೆ ಮಂಗಳೇಶನು ತನ್ನ ವಿಜಯದ ನೆನಪಿಗಾಗಿ ಈ ದೇಗುಲವನ್ನು ನಿರ್ಮಿಸಿದ್ದ ಎನ್ನಲಾಗುತ್ತದೆ. ಇದಕ್ಕೆ ಅನೇಕ ಶಿವಾಲಯಗಳ ಸಮುಚ್ಚಯವಾಗಿರುವುದರಿಂದ ಮಹಾಕೂಟ ಎಂಬ ಹೆಸರು ಬಂದಿದೆ. ಇಲ್ಲಿರುವ ಮಹಾಕೂಟೇಶ್ವರ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ಮುಂಭಾಗದಲ್ಲಿರುವ ಸಂಗಮೇಶ್ವರ ದೇಗುಲವು ನಾಗರ ಶೈಲಿಯಲ್ಲಿದೆ ಎನ್ನಲಾಗುತ್ತದೆ.
PC: wikipedia.org

Read more about: bagalkot
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X