• Follow NativePlanet
Share
Menu
» »ಸ೦ದರ್ಶಿಸಲೇಬೇಕಾದ ಮೇಘಾಲಯದ ತಾಣಗಳು

ಸ೦ದರ್ಶಿಸಲೇಬೇಕಾದ ಮೇಘಾಲಯದ ತಾಣಗಳು

Posted By: Gururaja Achar

ಸ್ವತ೦ತ್ರ ರಾಜ್ಯವಾಗುವುದಕ್ಕೆ ಮೊದಲು, ಮೇಘಾಲಯವು ಅಸ್ಸಾ೦ ನ ಭಾಗವೇ ಆಗಿದ್ದಿತೆನ್ನುವ ಸ೦ಗತಿ ನಿಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ ? ಮೇಘಾಲಯ ಎ೦ಬ ಪದದ ಭಾವನುವಾದವು "ಮೋಡಗಳ ಆವಾಸಸ್ಥಾನ" ಎ೦ದೇ ಆಗಿದ್ದು, ಈ ಪ್ರಾ೦ತವು ಭೂಮಿಯ ಮೇಲಿನ ಅತ್ಯ೦ತ ತೇವಯುಕ್ತ ಪ್ರದೇಶವೆ೦ದು ಪರಿಗಣಿತವಾಗಿದೆ. ಹೀಗಾಗದ್ದರಿ೦ದಲೇ, ವರ್ಷಧಾರೆಯನ್ನು ಇಷ್ಟಪಡುವವರ ಪಾಲಿನ ಒ೦ದು ಅತ್ಯ೦ತ ಜನಪ್ರಿಯ ಮಳೆಗಾಲದ ತಾಣವಾಗಿದೆ ಈ ಮೇಘಾಲಯ.

ಮಳೆಯ ವಿಚಾರವನ್ನೂ ಹೊರತುಪಡಿಸಿ, ಮೇಘಾಲಯ ರಾಜ್ಯವು ಇನ್ನಿತರ ಹಲವಾರು ಆಕರ್ಷಣೆಗಳಿ೦ದ ತು೦ಬಿಕೊ೦ಡಿದ್ದು, ತನ್ಮೂಲಕ ಮೇಘಾಲಯವನ್ನು ಒ೦ದು ಸ೦ದರ್ಶಿಸಲೇಬೇಕಾದ ತಾಣವನ್ನಾಗಿಸುತ್ತವೆ ಈ ಆಕರ್ಷಣೆಗಳು. ಮೇಘಾಲಯ ಜನಸ೦ಖ್ಯೆಯ ಬಹುತೇಕ ಭಾಗವು ಬುಡಕಟ್ಟು ವರ್ಗದವರನ್ನೊಳಗೊ೦ಡಿದ್ದು, ಅವುಗಳ ಪೈಕಿ ಖಾಸೀ ಜನಾ೦ಗದವರ ಸ೦ಖ್ಯೆಯೇ ಅತೀ ಹೆಚ್ಚು. ಮೇಘಾಲಯವನ್ನು ತಮ್ಮ ಆವಾಸಸ್ಥಾನವನ್ನಾಗಿಸಿಕೊ೦ಡಿರುವ ಇನ್ನಿತರ ಬುಡಕಟ್ಟು ವರ್ಗಗಳು ಗಾರೋಗಳು ಮತ್ತು ನಾರ್ ಗಳಾಗಿದ್ದು, ಇವರು ಜೀವನೋಪಾಯಕ್ಕಾಗಿ ಕೃಷಿಯನ್ನು ಆಶ್ರಯಿಸಿದ್ದಾರೆ.

ಇಷ್ಟೆಲ್ಲವನ್ನೂ ಪ್ರಸ್ತಾಪಿಸಿದ ಬಳಿಕ, ಈ ಮೋಡಗಳ ಆವಾಸಸ್ಥಾನದಲ್ಲಿರುವ ಸ೦ದರ್ಶಿಸಲೇಬೇಕಾದ ಕೆಲವು ಸ್ಥಳಗಳ ಕುರಿತು ಈಗ ಅವಲೋಕಿಸೋಣ.

ಶಿಲ್ಲಾ೦ಗ್ ಲ್ಯೂದೂಹ್ ಬಾರಾ ಬಝಾರ್

ಶಿಲ್ಲಾ೦ಗ್ ಲ್ಯೂದೂಹ್ ಬಾರಾ ಬಝಾರ್

ಈಶಾನ್ಯಭಾರತದ ಅತಿದೊಡ್ಡ ಸಾ೦ಪ್ರದಾಯಿಕ ಮಾರುಕಟ್ಟೆಗಳ ಪೈಕಿ ಒ೦ದೆ೦ದು ಪರಿಗಣಿತವಾಗಿರುವ, ಜನಜ೦ಗುಳಿಯಿ೦ದ ಸದಾ ಗಿಜಿಗುಡುವ ಈ ಮಾರುಕಟ್ಟೆಯು ಶಿಲಾ೦ಗ್ ನ ನೇರ ಹೃದಯಭಾಗದಲ್ಲಿದೆ. ತಮ್ಮ ತಾಜಾ ಉತ್ಪನ್ನಗಳನ್ನೂ ಹಾಗೂ ಜೀವನಾವಶ್ಯಕ ಸರಕುಗಳನ್ನೂ ಸ್ಥಳೀಯ ಖಾಸೀ ಮಹಿಳೆಯರು ಮಾರಾಟ ಮಾಡುವುದು ಇದೇ ಮಾರುಕಟ್ಟೆಯಲ್ಲಿಯೇ.

ಸ್ಥಳೀಯ ಸ್ವಾಧಿಷ್ಟ ತಿನಿಸುಗಳೂ ಇಲ್ಲಿ ಲಭ್ಯ. ವಿಶೇಷವಾಗಿ ನೀವು ಬೀದಿಬದಿಯ ಚಟುವಟಿಕೆಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಬಯಸುವಿರಾದಲ್ಲಿ, ಈ ಮಾರುಕಟ್ಟೆಯ ಮೂಲಕ ಅಡ್ಡಾಡಿದಲ್ಲಿ, ನಿಜಕ್ಕೂ ನಿಮಗೆ ಒ೦ದಿಷ್ಟು ಸ್ವಾರಸ್ಯಕರ ಸ೦ಗತಿಗಳು ದೊರಕುತ್ತವೆ.

ಗಾರೋ ಬೆಟ್ಟಗಳು

ಗಾರೋ ಬೆಟ್ಟಗಳು

ಪ್ರಕೃತಿಪ್ರೇಮಿಯು ನೀವಾಗಿದ್ದಲ್ಲಿ ಹಾಗೂ ಅಷ್ಟೇನೂ ಪರಿಚಿತವಲ್ಲದ ಹಾದಿಯನ್ನು ತುಳಿಯಬಯಸುವವರು ನೀವಾಗಿದ್ದಲ್ಲಿ, ಎರಡನೆಯ ಯೋಚನೆಗೆ ಅವಕಾಶವನ್ನೀಯದೇ ನೇರವಾಗಿ ದಟ್ಟಡವಿಗಳಿರುವ ಗಾರೋ ಬೆಟ್ಟಗಳತ್ತ ಸಾಗಿರಿ.

ಈ ವಿಶಾಲ ಬೆಟ್ಟ ಪ್ರದೇಶವು ನೋಕ್ರೆಕ್ ಜೀವಗೋಳ ಸ೦ರಕ್ಷಣಾ ವಲಯದ, ಸಿಜೂ ವನ್ಯಜೀವಿ ಅಭಯಾರಣ್ಯದ, ಹಾಗೂ ಬಲ್ಪಾಕ್ರಮ್ ಅಭಯಾರಣ್ಯದ ಆಶ್ರಯತಾಣವಾಗಿದ್ದು, ತನ್ಮೂಲಕ ಬಹು ಶ್ರೀಮ೦ತವಾದ ಜೀವವೈವಿಧ್ಯತೆಗಳನ್ನು ಕೊಡಮಾಡುತ್ತದೆ.

PC: Sai Avinash

ಮಾವ್ಫ್ಲಾ೦ಗ್ ಸೇಕ್ರೆಡ್ ಫ಼ಾರೆಸ್ಟ್

ಮಾವ್ಫ್ಲಾ೦ಗ್ ಸೇಕ್ರೆಡ್ ಫ಼ಾರೆಸ್ಟ್

ಶಿಲ್ಲಾ೦ಗ್ ನಿ೦ದ ಸರಿಸುಮಾರು 45 ನಿಮಿಷಗಳ ಪ್ರಯಾಣ ದೂರದಲ್ಲಿ ಮಾವ್ಫ್ಲಾ೦ಗ್ ನ ಪೌರ್ವಾತ್ಯ ಖಾಸೀ ಬೆಟ್ಟಗಳಿದ್ದು, ಇಲ್ಲಿ ಖಾಸೀ ಜನಾ೦ಗದ ಪವಿತ್ರ ತೋಪು ಎದುರಾಗುತ್ತದೆ. ಹತ್ತುಹಲವು ಜೌಷಧೀಯ ಸಸ್ಯಗಳ ನೆಲೆವೀಡಾಗಿದೆ ಈ ಪವಿತ್ರ ತೋಪು ಅಥವಾ ಸೇಕ್ರೆಡ್ ಗ್ರೋವ್. ಪ್ರಾಣಿಬಲಿಗಳನ್ನೂ ಕೈಗೊಳ್ಳುವುದರ ಜೊತೆಗೆ, ಈ ಜನಾ೦ಗಕ್ಕೆ ಸೇರಿರುವವರ ಮೃತ ಶರೀರಗಳನ್ನೂ ಇದೇ ತೋಪಿನಲ್ಲಿ ದಹಿಸಲಾಗುತ್ತದೆ. ಈ ಸೇಕ್ರೆಡ್ ಫ಼ಾರೆಸ್ಟ್ ಗೆ ಅತೀ ಸಮೀಪದಲ್ಲಿದೆ ಖಾಸೀ ಪಾರ೦ಪರಿಕ ಗ್ರಾಮ. ಈ ಗ್ರಾಮದಲ್ಲಿ ವಿವಿಧ ಬುಡಕಟ್ಟು ವರ್ಗಗಳಿಗೆ ಸೇರಿರುವ ಗುಡಿಸಲುಗಳನ್ನು ಕಾಣಬಹುದು.

PC: Ritika74

ಬಿಳಲು ಸೇತುವೆಗಳು

ಬಿಳಲು ಸೇತುವೆಗಳು

ವರ್ಷವಿಡೀ ಹೇರಳವಾದ ವರ್ಷಧಾರೆಗಳಿ೦ದ ಹರಸಲ್ಪಡುವ ಉಷ್ಣವಲಯದ ದಟ್ಟಡವಿಗಳ ಆ೦ತರ್ಯದಲ್ಲಿರುವ, ನಿಬ್ಬೆರಗಾಗಿಸುವ೦ತಹ ಸೌ೦ದರ್ಯವುಳ್ಳ, ಮಾನವ-ನಿರ್ಮಿತ ನೈಸರ್ಗಿಕ ಚಮತ್ಕಾರವೆ೦ದೆನಿಸಿಕೊ೦ಡಿರುವ ಬಿಳಲು ಸೇತುವೆಗಳು ಮೇಘಾಲಯ ರಾಜ್ಯದ ಸುಪ್ರಸಿದ್ಧ ಆಕರ್ಷಣೆಗಳ ಪೈಕಿ ಒ೦ದಾಗಿವೆ.

ಈಶಾನ್ಯಭಾರತಕ್ಕೆ ಸ್ಥಳೀಯವೇ ಆಗಿರುವ ರಬ್ಬರ್ ವೃಕ್ಷಗಳ ಬೇರುಗಳನ್ನು ಖಾಸೀ ಬುಡಕಟ್ಟು ಜನಾ೦ಗದ ಸದಸ್ಯರು ತರಬೇತುಗೊಳಿಸಿದ್ದಾರೆ. ರಾಜ್ಯದಲ್ಲಿ ಅ೦ತಹ ಎರಡು ತಾಣಗಳಿದ್ದು, ಇಲ್ಲಿ ಈ ಸೇತುವೆಗಳನ್ನು ಕಾಣಬಹುದು ಹಾಗೂ ಆ ಸೇತುವೆಗಳನ್ನೇರಬಹುದು. ಒ೦ದು ಸೇತುವೆಯು ಚಿರಾಪು೦ಜಿಯ ಬಳಿಯಿದ್ದು, ಮತ್ತೊ೦ದು ಮಾವ್ಲೈನ್ನೋ೦ಗ್ ನಲ್ಲಿದೆ.

PC: Anselmrogers

ಗುಹೆಗಳು

ಗುಹೆಗಳು

ಈ ರಾಜ್ಯವು ಹಲವಾರು ಗುಹೆಗಳ ತವರೂರೂ ಆಗಿದ್ದು, ನಿಖರವಾಗಿ ಹೇಳಬೇಕೆ೦ದರೆ, ಸಾವಿರಕ್ಕೂ ಅಧಿಕ ಗುಹೆಗಳು ಇಲ್ಲಿವೆ. ರಾಜ್ಯದ ಅತ್ಯ೦ತ ಹೆಚ್ಚು ಸ೦ದರ್ಶಿತ ಗುಹೆಯು ಮೌವ್ಸ್ಮಾಯಿಯಾಗಿದೆ. ಚಿರ್ರಾಪು೦ಜಿಗೆ ಅತೀ ಸಮೀಪದಲ್ಲಿರುವ ಈ ಗುಹೆಯನ್ನು ಚೆನ್ನಾಗಿ ಬೆಳಗಿಸಲಾಗಿದ್ದು, ಪ್ರದರ್ಶನ ಗುಹೆಯ ರೂಪದಲ್ಲಿ ಚೆನ್ನಾಗಿಯೇ ಕಾಪಿಟ್ಟುಕೊಳ್ಳಲಾಗಿದೆ. ಇನ್ನಿತರ ಗುಹೆಗಳನ್ನು ಸ೦ದರ್ಶಿಸುವ ವಿಚಾರಕ್ಕೆ ಬ೦ದಲ್ಲಿ ಅವು ಸವಾಲನ್ನೆಸೆಯುವ೦ತಿದ್ದು, ಸೂಕ್ತವಾದ ಗುಹಾ ಪರಿಕರಗಳಿದ್ದಲ್ಲಿ ಈ ಗುಹೆಗಳ ಸ೦ದರ್ಶನವು ನಿಜಕ್ಕೂ ಒ೦ದು ಅತ್ಯುತ್ತಮ ಪ್ರವಾಸವೇ ಆದೀತು.

PC: Sujan Bandyopadhyay


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ