Search
  • Follow NativePlanet
Share
» »ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

By Vijay

ಪಶ್ಚಿಮದ ಕಡಲ ತೀರದ ಬಳಿ ಪ್ರಶಾಂತವಾಗಿರುವ ಸುಂದರ ಸ್ಥಳವೊಂದಿದೆ. ಆ ಕ್ಷೇತ್ರವು ಇಂದು ಪ್ರಸಿದ್ಧ ಧಾರ್ಮಿಕ ಮಹತ್ವವುಳ್ಳ ಕ್ಷೇತ್ರವೆನೆಸಿದ್ದು ಸಾಕ್ಷಾತ್ ಶಿವನ ಕುಟುಂಬವೆ ಅಲ್ಲಿ ನೆಲೆಸಿದೆ. ಹೌದು, ಈ ಕ್ಷೇತ್ರದಲ್ಲಿ ಶಿವನು, ಪಾರ್ವತಿಯು, ಸುಬ್ರಹ್ಮಣ್ಯನು ಹಾಗೂ ಗಣಪತಿಯು ನೆಲೆಸಿದ್ದು ಸಾಕಷ್ಟು ಪ್ರಭಾವಶಾಲಿಯೆನಿಸಿದೆ.

ಚಕಿತಗೊಳಿಸುವ ಸೂರ್ಯದ ಸದಾಶಿವ ರುದ್ರ ದೇವಾಲಯ

ಇದನ್ನು ಅಗಸ್ತ್ಯೇಶ್ವರ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ ಹಾಗೂ ಬಹು ಹಿಂದೆ ಇಲ್ಲಿ ಅಗಸ್ತ್ಯ ಮಹಾಮುನಿಗಳು ಭೇಟಿ ನೀಡಿದ್ದು ಸ್ವತಃ ಅವರೆ ತಮ್ಮ ಕೈಯಾರೆ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಪೂಜೆಗೈದು ಶಿವನನ್ನು ಮೆಚ್ಚಿಸಿ ಒಲಿಸಿಕೊಂಡು ಇಲ್ಲಿ ನೆಲೆ ನಿಲ್ಲುವ ಹಾಗೆ ಮಾಡಿದರೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ.

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಅಗಸ್ತ್ಯೇಶ್ವರ ಶಿವಲಿಂಗ

ಇಂದು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ಈ ಕ್ಷೇತ್ರ ಸಾಕಷ್ಟು ಹೆಸರುವಾಸಿಯಾಗುತ್ತದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಈ ಪುರಾಣ ಪ್ರಸಿದ್ಧ ಕ್ಷೇತ್ರವನ್ನು ಕಿರಿಮಂಜೇಶ್ವರ ಕ್ಷೇತ್ರ ಎಂದು ಕರೆಯುತ್ತಾರೆ ಹಾಗೂ ಈ ಕ್ಷೇತ್ರವು ತನ್ನಲ್ಲಿರುವ ಶಿವನಿಗೆ ಮುಡಿಪಾದ ಅಗಸ್ತ್ಯೇಶ್ವರ ದೇವಾಲಯದಿಂದಾಗಿ ಸಾಕಷ್ಟು ಪ್ರಖ್ಯಾತಿಗಳಿಸಿದೆ.

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಅಗಸ್ತ್ಯೇಶ್ವರ ಮಂದಿರ

ದೇವಾಲಯಕ್ಕೆ ಸಂಬಂಧಿಸಿದಂತೆ ರೋಚಕ ಕಥೆಯೊಂದಿದೆ. ಅದರ ಪ್ರಕಾರವಾಗಿ, ಬಹು ಹಿಂದೆ ವಿಂಧ್ಯಾಚಲ ಪರ್ವತವು ಅಹಂಕಾರ ಹೊಂದಿ ಮೇರು ಪರ್ವತಕ್ಕಿಂತಲೂ ಹೆಚ್ಚು ಎತ್ತರಕ್ಕೆ ಬೆಳೆಯಬೇಕೆಂದು ಹಪಹಪಿಸಿತು. ಅದರ ಪ್ರಕಾರವಾಗಿ ತಾನು ಬೆಳೆದಂತೆಲ್ಲ ಈಶಾನ್ಯ ಭಾಗವು ತಗ್ಗಲು ಆರಂಭಿಸಿತು. ಇದರಿಂದ ಲೋಕ ಸಮತೋಲನದಲ್ಲಿ ಬದಲಾವಣೆಯುಂಟಾಗಿ ಎಲ್ಲೆಡೆ ಹಾಹಾಕಾರ ಉಂಟಾಯಿತು.

ಜನರು, ಪ್ರಾಣಿ-ಪಕ್ಷಿಗಳು ಕಷ್ಟಪಡಲಾರಂಭಿಸಿ ಶಿವನಿಗೆ ಮೊರೆ ಹೋದರು. ಅದಕ್ಕೆ ಶಿವನು ದಕ್ಷಿಣದಲ್ಲಿ ಭಾರ ಹೆಚ್ಚು ಮಾಡುವಂತೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆಯೆಂದು ಅದಕ್ಕಾಗಿ ಕುಂಭ ಸಂಭವರಾದ, ಅಗಾಧ ತಪ ಶಕ್ತಿಯ ಭಾರ ಹೊಂದಿದ ಅಗಸ್ತ್ಯ ಮುನಿಗಳಿಗೆ ದಕ್ಷಿಣಕ್ಕೆ ತೆರಳಲು ಸೂಚಿಸಿದನು.

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಬಾಲಗಣಪತಿ

ಶಿವನ ಸಾನಿಧ್ಯದಿಂದ ದೂರವಾಗುವುದಕ್ಕೆ ಮನಸಿಲ್ಲದ ಅಗಸ್ತ್ಯರು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಇದನ್ನರಿತ ಶಿವನು ಅಗಸ್ತ್ಯ ಮುನಿಗಳಿಗೆ ಮೊದಲು ಕರ್ತವ್ಯ ಪ್ರಧಾನವಾಗಿದೆಯೆಂದೂ ಹಾಗೂ ತಮಗೆ ಬೇಕಾದಾಗ ಪ್ರಾರ್ಥಿಸಿದರೆ ಪಾರ್ವತಿ ಸಮೇತನಾಗಿ ದರ್ಶನ ನೀಡುತ್ತೇನೆಂದು ಅಗಸ್ತ್ಯರಿಗೆ ಮಾತನ್ನು ನೀಡಿ ಅವರನ್ನು ದಕ್ಷಿಣದೆಡೆ ಕಳುಹಿಸಿದನು.

ಹೀಗೆ ದಕ್ಷಿಣಕ್ಕೆ ಬಂದ ಅಗಸ್ತ್ಯರು ಗೋಕರ್ಣಕ್ಕೆ ಭೇಟಿ ನೀಡಿ ಅಲ್ಲಿ ಮಹಾಬಲೇಶ್ವರನನ್ನು ಪೂಜಿಸಿ ಮತ್ತೆ ದಕ್ಷಿಣಾಭಿಮುಖವಾಗಿ ಸಂಚರಿಸುತ್ತ ಪ್ರಸ್ತುತ ಸಮುದ್ರ ತೀರದಲ್ಲಿರುವ ಕ್ಷೇತ್ರಕ್ಕೆ ಬಂದರು ಹಾಗೂ ಸಹಜ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸತೊಡಗಿದರು. ಪ್ರತಿದಿನ ಶುಚಿರ್ಭೂತರಾಗಲು ಕೊಳವೊಂದನ್ನು ನಿರ್ಮಿಸಿದರು. ಅದೆ ಇಂದು ಸಿದ್ಧಿ ತೀರ್ಥವಾಗಿದೆ.

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ವಿಶಾಲಾಕ್ಷಮ್ಮ

ಅವರು ಕೆರೆಯೊಂದನ್ನು ನಿರ್ಮಿಸಿದರು ಹಾಗೂ ನೀರಿನ ಮುಲವು ಇಂದು ಅಗಸ್ತ್ಯ ತೀರ್ಥ ಎಂದು ಕರೆಯಲ್ಪಡುತ್ತದೆ. ಅವರು ಮೊದಲ ಬಾರಿಗೆ ಇಲ್ಲಿಗೆ ಬಂದಾಗ ತಮ್ಮ ಕಮಂಡಲವಿಟ್ಟ ಜಾಗದಲ್ಲಿ ನೀರು ಜಿನುಗತೊಡಗಿತು ಹಾಗೂ ಮುಂದೆ ಅದು ಕಮಂಡಲ ತೀರ್ಥವಾಗಿ ಪ್ರಸಿದ್ಧವಾಯಿತು.

ಈ ರೀತಿಯಾಗಿ ಹಲವು ತೀರ್ಥಗಳನ್ನು ನಿರ್ಮಿಸಿದ ಅಗಸ್ತ್ಯರು ನಿತ್ಯವೂ ಪರಿಶುದ್ಧ ಮನಸ್ಸಿನಿಂದ ಶಿವನನ್ನು ಪೂಜಿಸ ತೊಡಗಿದರು. ಕ್ರಮೇಣವಾಗಿ ಅವರ ತಪ ಶಕ್ತಿಯ ಭಾರದಿಂದ ಭೂಮಿಯಲ್ಲಿ ಸಮತೋಲನ ಉಂಟಾಗಿ ತಗ್ಗಿದ್ದ ಈಶಾನ್ಯ ಭಾಗವು ಸಾಕಷ್ಟು ಎತ್ತರಕ್ಕೆ ಬೆಳೆಯಿತು. ಶಿವನು ಇದರಿಂದ ಪ್ರಸನ್ನನಾಗಿ ಅವರಿಗೆ ದರ್ಶನ ನೀಡಿದನು.

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಅಗಸ್ತ್ಯ ತೀರ್ಥ

ಶಿವನ ದರ್ಶನದಿಂದ ಪುಳಕಿತರಾದ ಅಗಸ್ತ್ಯರು ಸಂತಸದ ಭಾಷ್ಪಗಳನ್ನು ಸುರುಸಿದರು. ಶಿವನು ಅವರ ಈ ಶೃದ್ಧೆಗೆ ತಲೆದೂಗುತ್ತ ಮುಂದೆ ಈ ಕ್ಷೇತ್ರವು ಅಗಸ್ತ್ಯ ಕ್ಷೇತ್ರವೆಂತಲೂ, ನೀವು ಪೂಜಿಸಿದ ಈ ಶಿವಲಿಂಗವು ಅಗಸ್ತ್ಯೇಶ್ವರ ಶಿವಲಿಂಗ ವೆಂತಲೂ ಹಾಗೂ ಪಾರ್ವತಿ, ಸುಬ್ರಹ್ಮಣ್ಯ ಮತ್ತು ಗಣಪತಿ ನೆಲೆಸಿರುವ ಪುಣ್ಯ ಕ್ಷೇತ್ರವಾಗಿಯೂ ಹೆಸರುವಾಸಿಯಾಗಲಿದೆ ಎಂದು ಆಶೀರ್ವದಿಸಿದನು.

ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!

ಸಿದ್ಧಿ ತೀರ್ಥ

ಅಲ್ಲದೆ ಈ ಅಗಸ್ತ್ಯೇಶ್ವರ ಶಿವಲಿಂಗವನ್ನು ಯಾರು ಪೂಜಿಸುತ್ತಾರೊ ಅವರ ಸಕಲ ಪಾಪಗಳು ನಿವಾರಣೆಯಾಗಿ ಸನ್ಮಂಗಳ ಉಂಟಾಗುತ್ತದೆಂದೂ ಹಾಗೂ ಪಾರ್ವತಿಯ ಅವತಾರವಾದ ವಿಶಾಲಾಕ್ಷಿ ಅಮ್ಮ, ಸುಬ್ರಹ್ಮಣ್ಯ್ ಹಾಗೂ ಬಾಲಗಣಪನನ್ನು ಯಾರು ಭಕ್ತಿಯಿಂದ ನೆನೆಯುತ್ತಾರೊ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆಂದು ಹರಸಿದನು.

ಮಧ್ವಾಚಾರ್ಯರು ಜನಿಸಿದ ಉಡುಪಿಯ ಪಾಜಕ ಕ್ಷೇತ್ರ

ಹೀಗೆ ಈ ಅಗಸ್ತ್ಯ ಕ್ಷೇತ್ರವು ಸಾಕಷ್ಟು ಪಾವಿತ್ರ್ಯತೆ ಪಡೆಯಿತು ಹಾಗೂ ಇದರ ಕ್ಷೇತ್ರ ಮಹಿಮೆಯನ್ನು ಸ್ಕಂದ ಪುರಾಣದಲ್ಲಿಯೂ ಸಹ ವರ್ಣಿಸಲಾಗಿರುವುದನ್ನು ಕಾಣಬಹುದು. ಅರಬ್ಬಿ ಸಮುದ್ರದ ತೀರದಲ್ಲಿ ನೆಲೆಸಿರುವ ಕಿರಿಮಂಜೇಶ್ವರವು ಕರಾವಳಿ ಗ್ರಾಮವಾಗಿದ್ದು ಜಿಲ್ಲಾ ಕೇಂದ್ರವಾದ ಉಡುಪಿಯಿಂದ 57 ಕಿ.ಮೀ ಹಾಗೂ ಕುಂದಾಪುರದಿಂದ 19 ಕಿ.ಮೀ ಗಳಷ್ಟು ದೂರದಲ್ಲಿದೆ. ಕುಂದಾಪುರದಿಂದ ಬಸ್ಸುಗಳು ದೊರೆಯುತ್ತವೆ.

ಕಿರಿಮಂಜೇಶ್ವರದ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ನವನಿರ್ಮಾಣ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಗಳು ಈ ಕ್ಷೇತ್ರವನ್ನು ಲೋಕ ಕಲ್ಯಾಣಕ್ಕಾಗಿ ಇನ್ನಷ್ಟು ಅಭಿವೃದ್ಧಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದು ಅವರ ಈ ಪ್ರಾಮಾಣಿಕ ಕೆಲಸದಲ್ಲಿ ನೀವೂ ಸಹ ಭಾಗಿಯಾಗಿ ನಿಮ್ಮ ತನು,ಮನ ಹಾಗೂ ಧನಗಳಿಂದ ಸಹಾಯ ಮಾಡಬಹುದಾಗಿದೆ.

ದೇವಸ್ಥಾನದ ವಿಳಾಸ

ಜೀರ್ಣೋದ್ಧಾರ ಸಮಿತಿ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಕಿರಿಮಂಜೇಶ್ವರ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ- 576253

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X