Search
  • Follow NativePlanet
Share
» »ಕೈಲಾಸ ಪರ್ವತ ಯಾತ್ರೆ ಮಾಡುವಿರಾ?

ಕೈಲಾಸ ಪರ್ವತ ಯಾತ್ರೆ ಮಾಡುವಿರಾ?

By Vijay

ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಸುಂದರವಾದ ಹಿಮಚ್ಛಾದಿತ ಪರ್ವತ ಇದಾಗಿದೆ. ರಾಜ್ಯದ ಕಿನ್ನೌರ್ ಜಿಲ್ಲೆಯಲ್ಲಿರುವ ಈ ಕೈಲಾಸ ಪರ್ವತವನ್ನು ಕಿನ್ನೌರ್ ಕೈಲಾಸ ಪರ್ವತ ಎಂದೆ ಕರೆಯುತ್ತಾರೆ ಹಾಗೂ ಇದು ಅದ್ಭುತವಾದ ದೃಶ್ಯಾವಳಿಗಳಿಂದ ಕೂಡಿದ್ದು ಛಾಯಾಗ್ರಾಹಕರಿಗೆ ನೆಚ್ಚಿನ ಪರ್ವತವಾಗಿ ಗಮನ ಸೆಳೆಯುತ್ತದೆ.

ಒಮ್ಮೊಮ್ಮೆ ಬಹುತೇಕರು ಮೌಂಟ್ ಕೈಲಾಸ ಪರ್ವತವೆಂದೆ ಇದನ್ನು ತಿಳಿಯುತ್ತಾರೆ. ಆದರೆ ಅದು ಸತ್ಯವಲ್ಲ. ಮೌಂಟ್ ಕೈಲಾಸ ಅಥವಾ ಕೈಲಾಸ ಪರ್ವತವು ಪ್ರಸ್ತುತ ಟಿಬೆಟ್ ದೇಶದಲ್ಲಿ ಕಂಡುಬರುತ್ತದೆ. ಇದು ಭಾರತಕ್ಕೆ ಸಂಬಂಧಿಸಿದಂತೆ ಕೈಲಾಸ ಪರ್ವತ ಎಂದು ಕರೆಯಬಹುದು. ಆದಾಗ್ಯೂ ಇದು ನಿರ್ದಿಷ್ಟವಾಗಿ ಕಿನ್ನೌರ್ ನಲ್ಲಿರುವುದರಿಂದ ಇದನ್ನು ಕಿನ್ನೌರ್ ಕೈಲಾಸ ಪರ್ವತ ಎಂದು ಕರೆಯುತ್ತಾರೆ.

ಕೈಲಾಸ ಪರ್ವತ ಯಾತ್ರೆ ಮಾಡುವಿರಾ?

ಚಿತ್ರಕೃಪೆ: snotch

ಕಿನ್ನೌರ್ ಕೈಲಾಸ ಪರ್ವತವು ಹಿಂದುಗಳಿಗಲ್ಲದೆ ಬೌದ್ಧರಿಗೂ ಸಹ ಬಲು ಪವಿತ್ರವಾದ ಪರ್ವತವಾಗಿದೆ. ಇದರ ಎತ್ತರ 6050 ಮೀ. ಗಳಷ್ಟಂದರೆ ನೀವೆ ಒಮ್ಮೆ ಊಹಿಸಿ ನೋಡಿ ಎಷ್ಟೊಂದು ಅಗಾಧವಾಗಿ ಭೂಮಿಯಿಂದ ಮೇಲೆದ್ದು ನಿಂತಿರಬಹುದಾದ ಪರ್ವತ ಇದೆಂದು! ಜೊರ್ಕಂಡೆನ್ ಕಿನ್ನೌರ್ ಕೈಲಾಸ ಪರ್ವತಗಳಲ್ಲಿರುವ ಅತಿ ಎತ್ತರದ ಶಿಖರ.

ಕಲ್ಪಾ ಎಂಬಲ್ಲಿರುವ ಒಂದು ಬಂಗಲೆಯಿಂದ ಈ ಅತ್ಯದ್ಭುತ ಶಿಖರದ ಬಲು ರಮಣೀಯ ನೋಟವನ್ನು ಆಸ್ವಾದಿಸಬಹುದಾಗಿದ್ದು ಇದು ಪ್ರವಾಸಿ ಆಕರ್ಷಣೆಯಾಗಿದೆ ಹೆಸರುವಾಸಿಯಾಗಿದೆ. ಕಿನ್ನೌರ್ ಕೈಲಾಸ ಪರ್ವತಕ್ಕೆ ಟ್ರೆಕ್ ಮಾಡಬಹುದಾಗಿದ್ದು ಆ ಟ್ರೆಕ್ಕು ಅತ್ಯಂತ ಕಠಿಣ ಟ್ರೆಕ್ಕುಗಳಲ್ಲೊಂದಾಗಿದೆ. ಸಾಕಷ್ಟು ಸದೃಢ ಆರೋಗ್ಯ, ಮಾನಸಿಕ ಸ್ಥೈರ್ಯ ಹಾಗೂ ಗಟ್ಟಿ ಗುಂಡಿಗೆಯಿರುವವರಿಗೆ ಮಾತ್ರ ಈ ಟ್ರೆಕ್ ಸಾಧ್ಯ.

ಕೈಲಾಸ ಪರ್ವತ ಯಾತ್ರೆ ಮಾಡುವಿರಾ?

ಕಿನ್ನಔರ್ ಕೈಲಾಸ ಶಿವಲಿಂಗ ಪರ್ವತ, ಚಿತ್ರಕೃಪೆ: Sumita Roy Dutta

ಕಿನ್ನೌರ್ ಕೈಲಾಸ ಟ್ರೆಕ್ ನಲ್ಲಿ ಶಿವಲಿಂಗಂ ಎಂಬ ಸ್ಥಳದವರೆಗೂ ತಲುಪಬಹುದಾಗಿದೆ. ಇದೊಂದು ಅತ್ಯಂತ ಕಠಿಣ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಈ ಧಾರ್ಮಿಕ ಯಾತ್ರೆಯು ಅಧಿಕೃತವಾಗಿ ಕಿನ್ನೌರ್ ಕೈಲಾಸ ಪರಿಕ್ರಮಾ ಎಂದು ಕರೆಯಲ್ಪಡುತ್ತದೆ. ಇನ್ನೊಂದು ಟ್ರೆಕ್, ಥಂಗಿಯಿಂದ ಪ್ರಾರಂಭವಾಗುತ್ತದೆ ಹಾಗೂ ಚರಂಗ್ ಲಾ ಪಾಸ್ ಮೂಲಕ ಹಾದು ಹೋಗುತ್ತ ಕೊನೆಗೆ ಚಿತ್ಕುಲ್ ಹಳ್ಳಿಗೆ ಕರೆದೊಯ್ಯುತ್ತದೆ.

ಭಾರತದ ಗಡಿಯಲ್ಲಿರುವ ಕೊನೆಯ ಹಳ್ಳಿಯೆ ಚಿತ್ಕುಲ್. ಈ ಚಾರಣಕ್ಕೆ ಏನಿಲ್ಲವೆಂದರೆ ಆರು ದಿನಗಳಷ್ಟು ಸಮಯ ಬೇಕಾಗಬಹುದು ಹಾಗೂ ಇದರ ದೂರ ಸುಮಾರು 60 ಕಿ.ಮೀ ಗಳಷ್ಟು. ನೆನಪಿರಲಿ ಇದು ಚಾರಣ ನಿಮ್ಮ ಮನೋಬಲ, ಆತ್ಮಸ್ಥೈರ್ಯ, ನಂಬಿಕೆ, ತಾಳ್ಮೆ ಹಾಗೂ ಆರೋಗ್ಯವನ್ನು ಕ್ಷಣ ಕ್ಷಣಕ್ಕೂ ಪ್ರೀಕ್ಷಿಸುವ ಚಾರಣವಾಗಿದೆ.

ಕೈಲಾಸ ಪರ್ವತ ಯಾತ್ರೆ ಮಾಡುವಿರಾ?

ಕಿನ್ನೌರ್ ಕೈಲಾಸ ಜೊರ್ಕಂಡೆನ್, ಚಿತ್ರಕೃಪೆ: Goutam1962

ಮಾರ್ಗದಲ್ಲಿ ಯಾವುದೆ ದೂರವಾಣಿ ಸಂಪರ್ಕವಿಲ್ಲ, ಹೋಟೆಲುಗಳಿಲ್ಲ. ಕೇವಲ ಕೊರೆಯುವ ಗಾಳಿ, ರುದ್ರ ರಮಣೀಯ ಪ್ರಪಾತಗಳು, ಕಣಿವೆಗಳು, ಪರ್ವತಗಳು, ಮೊನಚಾದ ಉಬ್ಬು ತೆಗ್ಗುಗಳು ನಿಮ್ಮನ್ನು ಸ್ವಾಗತಿಸುತ್ತವೆ. ನಿಮ್ಮ ಬಳಿ ಸರಿಯಾದ ದಿಕ್ಸೂಚಿ, ನಕಾಶೆ ಹಾಗೂ ಮಾರ್ಗದರ್ಶಿಯಿಲ್ಲದಿದ್ದರೆ ಖಂಡಿತವಾಗಿಯೂ ನೀವು ಕಳೆದುಕೊಳ್ಳಬಹುದು. ಹಾಗಾಗಿ ಸಾಕಷ್ಟು ಎಚ್ಚರಿಕೆಯಿಂದ ಈ ಚಾರಣ ಕೈಗೊಳ್ಳಬೇಕು.

ಆದರೆ ಈ ಒಂದು ಚಾರಣವು ನಿಮ್ಮ ಜೀವನದಲ್ಲೆ ಒಂದು ಸುಂದರ ನೆನಪಾಗಿ ಉಳಿಯುವುದರಲ್ಲಿ ಸಂಶಯವಿಲ್ಲ. ಕೇವಲ ನೂರಾರು ಸಂಖ್ಯೆಯಲ್ಲಷ್ಟೆ ಈ ಚಾರಣ ಮಾಡಿರುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಉಳಿಯುತ್ತದೆ. ಅಲ್ಲದೆ ಜಗತ್ತಿನ ಬಹುತೇಕ ಪ್ರವಾಸಿಗರು ಬಹುಶಃ ಎಂದಿಗೂ ನೋಡಲಾಗದಂತಹ ಅದ್ಭುತ ಪ್ರದೇಶಗಳನ್ನು ನೀವು ನೋಡುತ್ತೀರಿ.

ಕೈಲಾಸ ಪರ್ವತ ಯಾತ್ರೆ ಮಾಡುವಿರಾ?

ಕಿನ್ನೌರ್ ಕೈಲಾಸ ಪರ್ವತದ ಉಪಗೃಹ ಚಿತ್ರ, ಚಿತ್ರಕೃಪೆ: SwissMoomin

ಇದು ಕಠಿಣ ಚಾರಣವಾದರೆ ಕಿನ್ನೌರ್ ಕೈಲಾಸ ಪರಿಕ್ರಮಾ ಟಾಂಗ್ ಲಿಂಗ್ ಹಳ್ಳಿಯಿಂದ ಪ್ರಾರಂಭವಾಗಿ ಶಿವಲಿಂಗಂವರೆಗೆ ಚಾಚಿದೆ. ಇದು ಅಷ್ಟೊಂದು ಕಠಿಣವಾಗಿಲ್ಲ ಹಾಗೂ ಕೇವಲ ಎಂಟರಿಂದ ಹತ್ತು ಕಿ.ಮೀ ಪಥವನ್ನು ಹೊಂದಿದೆ. ಶಿವಲಿಂಗಂ ಪರ್ವತ ಏರುವುದಕ್ಕೂ ಮುಂಚೆ ಒಂದು ರಾತ್ರಿ ಗುಹೆಯಲ್ಲಿ ಕಳೆಯಬೇಕಾಗುತ್ತದೆ.

ಸಾವಿನೊಂದಿಗೆ ಸರಸವಾಡುವವರಿಗೆ ಮಾತ್ರ ಈ ಚಾರಣಗಳು!

ಈ ರೀತಿಯ ಚಾರಣಗಳನ್ನು ಸಾಕಷ್ಟು ಪ್ರವಾಸಿ ಸಂಸ್ಥೆಗಳು ಇಂದು ಆಯೋಜಿಸುತ್ತವೆ. ಮುಂಚಿತವಾಗಿ ನಿಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಅವರು ನೀಡುವ ಮಾರ್ಗದರ್ಶನದಂತೆ ಕಿನ್ನಔರ್ ಪ್ರವಾಸ ಮಾಡಿ ನೀವು ರೋಮಾಂಚಕತೆಯ ಅನುಭವವನ್ನು ಆಅಸ್ವಾದಿಸಬಹುದು. ಮಾರ್ಚ್ ನಿಂದ ಅಕ್ಟೋಬರ್ ಕಿನ್ನೌರಿಗೆ ಭೇಟಿ ನೀಡಲು ಪ್ರಶಸ್ತ ಸಮಯ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more